ವಾರ್ತಾ ಮತ್ತು ಪ್ರಸಾರ ಸಚಿವಾಲಯ
iffi banner
0 3

ಐ.ಎಫ್.ಎಫ್.ಐ. 2024 ರಲ್ಲಿ ಸಿಲ್ವರ್ ಪೀಕಾಕ್ ಪ್ರಶಸ್ತಿಗಾಗಿ ಐದು ಅಂತಾರಾಷ್ಟ್ರೀಯ ಮತ್ತು ಇಬ್ಬರು ಭಾರತೀಯ ಚೊಚ್ಚಲ ನಿರ್ದೇಶಕರ ಸ್ಪರ್ಧೆ


ಹೊಸ  ಧ್ವನಿಗಳು, ದಿಟ್ಟ ದೃಷ್ಟಿ: 55ನೇ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಉದಯೋನ್ಮುಖ ಪ್ರತಿಭೆಯ ಪ್ರದರ್ಶನ

55ನೇ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಿರ್ದೇಶಕರ ಅತ್ಯುತ್ತಮ ಚೊಚ್ಚಲ ಚಲನಚಿತ್ರ ಪ್ರಶಸ್ತಿಕ್ಕಾಗಿ ಸ್ಪರ್ಧೆಯಲ್ಲಿರುವ ಆಯ್ದ ಐದು ಅಂತಾರಾಷ್ಟ್ರೀಯ ಮತ್ತು ಎರಡು ಭಾರತೀಯ ಚಲನಚಿತ್ರಗಳನ್ನು ಪ್ರದರ್ಶಿಸಿ ಪ್ರಪಂಚದಾದ್ಯಂತದ ನಿರ್ದೇಶಕರು ತಮ್ಮ ಚೊಚ್ಚಲ ಚಿತ್ರ ನಿರ್ಮಾಣದಲ್ಲಿ ಅಸಾಮಾನ್ಯ ಚಿತ್ರಗಳನ್ನು ರಚಿಸಿರುವುದನ್ನು ಆಚರಿಸಲಾಗುತ್ತದೆ. ವಿಜೇತರಿಗೆ ಪ್ರತಿಷ್ಠಿತ ಬೆಳ್ಳಿ ನವಿಲು, 10 ಲಕ್ಷ ರೂಪಾಯಿ ನಗದು ಬಹುಮಾನ ಮತ್ತು ಪ್ರಶಂಸಾಪತ್ರವನ್ನು ನೀಡಲಾಗುತ್ತದೆ. 

ಸಿಂಗಾಪುರದ ನಿರ್ದೇಶಕ ಮತ್ತು ಚಿತ್ರಕಥೆಗಾರ ಆಂಥೋನಿ ಚೆನ್, ಅಮೆರಿಕನ್-ಬ್ರಿಟಿಷ್ ಚಲನಚಿತ್ರ ನಿರ್ಮಾಪಕಿ ಎಲಿಜಬೆತ್ ಕಾರ್ಲ್ಸನ್, ಸ್ಪ್ಯಾನಿಷ್ ಚಲನಚಿತ್ರ ನಿರ್ಮಾಪಕ ಫ್ರಾನ್ ಬೋರ್ಜಿಯಾ ಮತ್ತು ಆಸ್ಟ್ರೇಲಿಯಾದ ಸಂಕಲನಕಾರ ಜಿಲ್ ಬಿಲ್ಕಾಕ್ ಸೇರಿದಂತೆ ಭಾರತೀಯ ಚಲನಚಿತ್ರ ನಿರ್ಮಾಪಕ ಅಶುತೋಷ್ ಗೋವಾರಿಕರ್ ನೇತೃತ್ವದ ತೀರ್ಪುಗಾರರ ಸಮಿತಿಯು ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡುತ್ತದೆ.
ಪ್ರತಿ ವರ್ಷದಂತೆ, ಈ ವರ್ಷದ ಆಯ್ಕೆಯೂ ಸಹ, ಮೊದಲ ಬಾರಿಗೆ ಚಲನಚಿತ್ರ ನಿರ್ಮಾಪಕರ ಅತ್ಯುತ್ತಮ ಕೆಲಸವನ್ನು ಪ್ರದರ್ಶಿಸುತ್ತದೆ ಮತ್ತು ಮುಂದಿನ ಪೀಳಿಗೆಯ ಚಲನಚಿತ್ರ ನಿರ್ಮಾಪಕರು ತೆರೆಯ ಮೇಲೆ ಏನನ್ನು ರೂಪಿಸುತ್ತಿದ್ದಾರೆ ಎಂಬುದನ್ನು ಉದಾಹರಿಸುತ್ತದೆ.

ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದ ಚಲನಚಿತ್ರಗಳ ಪಟ್ಟಿ ಇಲ್ಲಿದೆ:

1. ಬೆತಾನಿಯಾ

ನಿರ್ದೇಶಕ: ಮಾರ್ಸೆಲೊ ಬೊಟ್ಟಾ

ಇದು ಬ್ರೆಜಿಲಿಯನ್ ಚಲನಚಿತ್ರ ನಿರ್ಮಾಪಕ ಮತ್ತು ಕಥೆಗಾರ ಮಾರ್ಸೆಲೊ ಬೊಟ್ಟಾ ಅವರ ಚೊಚ್ಚಲ ಚಲನಚಿತ್ರ ವಾಗಿದೆ. ಚಿತ್ರವು ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2024ರಲ್ಲಿ ಪ್ರಥಮ ಪ್ರದರ್ಶನ ಕಂಡಿತು.

ಈ ಚಲನಚಿತ್ರವು ಬ್ರೆಜಿಲ್ನ ಪೂರ್ವಜರ ಪರಂಪರೆಯನ್ನು ಪರಿಸರ ವಿಜ್ಞಾನ, ಸಮುದಾಯ ಜೀವನ ಮತ್ತು ಸಲಿಂಗಪ್ರೇಮದಂತ ಸಂಕೀರ್ಣ ವಿಷಯಗಳೊಂದಿಗೆ ಹೆಣೆಯುತ್ತದೆ. ಈ ಚಿತ್ರವು ಸಮುದಾಯದ ನಾಯಕಿ ಮಾರಿಯಾ ಡೊ ಸೆಲ್ಸೊ ಅವರ ಜೀವನದಿಂದ ಪ್ರೇರಿತವಾಗಿದೆ, ಅವರು ದಿಬ್ಬಗಳಲ್ಲಿ ಗೂಡುಕಟ್ಟಿದ ತನ್ನ ದೂರದಲ್ಲಿರುವ ಒಂಟಿ ಹಳ್ಳಿಗೆ ವಿದ್ಯುತ್ಛಕ್ತಿಯ ಸಂಪರ್ಕವನ್ನು ತರಲು ದಶಕಗಳ ಕಾಲ ಹೋರಾಡಿದರು.

2. ಬೌಂಡ್ ಇನ್ ಹೆವೆನ್

ನಿರ್ದೇಶಕರು: ಹುವೋ ಕ್ಸಿನ್

ಇದು ಹೆಸರಾಂತ ಚೀನೀ ಚಿತ್ರಕಥೆ ಬರಹಗಾರ ಹುವೋ ಕ್ಸಿನ್ ಅವರ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ. ಚಲನಚಿತ್ರವು ಸ್ಯಾನ್ ಸೆಬಾಸ್ಟಿಯನ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ 2024ರಲ್ಲಿ ಜ್ಯೂರಿ ಪ್ರಶಸ್ತಿ - ಅತ್ಯುತ್ತಮ ಛಾಯಾಗ್ರಹಣ, ಫಿಪ್ರೆಸ್ಕಿ ಪ್ರಶಸ್ತಿಯನ್ನು ಗೆದ್ದಿದೆ.

ಇದು ಹಿಂಸಾಚಾರ, ಮರಣ ಮತ್ತು ರಕ್ತಸಂಬಂಧದ ಬಗ್ಗೆ ಒಂದು ಪ್ರಕಾರದ ಪ್ರಣಯ ಅಪರಾಧದ ಸಿನಿಮಾ ಆಗಿದೆ. ಹಿಂಸಾಚಾರದಲ್ಲಿ ಸಿಲುಕಿದ ಮಹಿಳೆ, ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಪುರುಷ, ಅನಿರೀಕ್ಷಿತ ಮುಖಾಮುಖಿಯ ನಂತರ ಎರಡು ಏಕಾಂಗಿ ಮನಗಳು ಬಿಗಿಯಾಗಿ ಹೆಣೆದುಕೊಂಡಿರುವ ಮೇಲೆ ಚಿತ್ರಿತವಾಗಿದೆ.

3. ಬ್ರಿಂಗ್ ದೆಮ್ ಡೌನ್

ನಿರ್ದೇಶಕರು: ಕ್ರಿಸ್ಟೋಫರ್ ಆಂಡ್ರ್ಯೂಸ್

ಯುಕೆ-ಮೂಲದ ಚಿತ್ರಕಥೆಗಾರ ಮತ್ತು ಚಲನಚಿತ್ರ ನಿರ್ಮಾಪಕ ಕ್ರಿಸ್ಟೋಫರ್ ಆಂಡ್ರ್ಯೂಸ್ ಅವರ ಮೊದಲ ಚಲನಚಿತ್ರವು  ಗ್ರಾಮೀಣ ಐರ್ಲೆಂಡ್ನಲ್ಲಿ ನಡೆದ ಥ್ರಿಲ್ಲರ್- ಕಥೆಯಾಗಿದೆ. ಬ್ಯಾರಿ ಕಿಯೋಘನ್, ಕ್ರಿಸ್ಟೋಫರ್ ಅಬ್ಬೋಟ್, ಪಾಲ್ ರೆಡಿ ಮತ್ತು ಕಾಲ್ಮ್ ಮೀನಿ ನಟಿಸಿದ ಚಲನಚಿತ್ರವು ಟೊರೊಂಟೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮ ಪ್ರದರ್ಶನ ಕಂಡಿತು.

ಚಲನಚಿತ್ರವು ಐರಿಶ್ ಕುರುಬ ಕುಟುಂಬದ ಆಂತರಿಕ ಕಲಹ, ಕುಟುಂಬದೊಳಗಿನ ಹಗೆತನ, ಇನ್ನೊಬ್ಬ ರೈತನೊಂದಿಗಿನ ಪೈಪೋಟಿಯಂತಹ ಹಲವಾರು ರಂಗಗಳಿಂದ  ಯುದ್ಧ ಮಾಡುವಂತೆ ತಳ್ಳುತ್ತದೆ. ಈ ಪ್ರಕ್ರಿಯೆಯಲ್ಲಿ, ಇದು ಐರ್ಲೆಂಡ್ ನ ಸಾಂಸ್ಕೃತಿಕ ವರ್ಣಪಟಲದ ಮೂಲಕ ಪಿತೃತ್ವ, ಪರಂಪರೆ ಮತ್ತು ಪೀಳಿಗೆಯ ಆಘಾತ ಚಕ್ರವನ್ನು ಎತ್ತಿ ತೋರಿಸುತ್ತದೆ.

4. ಫೆಮಿಲಿಯರ್ ಟಚ್ 

ನಿರ್ದೇಶಕರು: ಸಾರಾ ಫ್ರೈಡ್ಲ್ಯಾಂಡ್

ಅಮೇರಿಕನ್ ಚಲನಚಿತ್ರ ನಿರ್ಮಾಪಕಿ, ಚಿತ್ರಕಥೆಗಾರ್ತಿ ಮತ್ತು ನೃತ್ಯ ಸಂಯೋಜಕಿ ಸಾರಾ ಫ್ರೈಡ್ಲ್ಯಾಂಡ್ ಅವರ ನಿರ್ದೇಶನದ ಚೊಚ್ಚಲ ಚಿತ್ರವು ವೆನಿಸ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಲುಯಿಗಿ ಡಿ ಲಾರೆಂಟಿಸ್ ಪ್ರಶಸ್ತಿ: ಅತ್ಯುತ್ತಮ ಚೊಚ್ಚಲ ಚಲನಚಿತ್ರ, ವೆನಿಸ್ ಹೊರೈಜನ್ಸ್ ಪ್ರಶಸ್ತಿ: ಅತ್ಯುತ್ತಮ ನಟಿ ಮತ್ತು ವೆನಿಸ್ ಹೊರೈಜನ್ಸ್ ಪ್ರಶಸ್ತಿ: ಅತ್ಯುತ್ತಮ ನಿರ್ದೇಶಕ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದೆ.

ಫೆಮಿಲಿಯರ್ ಟಚ್ ಚಿತ್ರವು ಬಾಲ್ಯದಿಂದ ವಯಸ್ಕರಾಗುವವರೆಗಿನ ಕಥೆ ಹೊಂದಿದ್ದು. ಇದು ಎಂಬತ್ತರ ವಯಸ್ಸಿನ  ಮಹಿಳೆಯ ಸ್ವತಂತ್ರ ಜೀವನದಿಂದ ಅವಲಂಭಿತ ಜೀವನಕ್ಕೆ ಪರಿವರ್ತನೆ ಮತ್ತು ಅವಳ ಬದಲಾಗುತ್ತಿರುವ ಸ್ಮರಣೆ, ವಯಸ್ಸಿನ ಗುರುತು ಮತ್ತು ಬಯಕೆಯೊಂದಿಗೆ ತನ್ನ ಮತ್ತು ತನ್ನ ಆರೈಕೆ ಮಾಡುವವರೊಂದಿಗಿನ ಸಂಘರ್ಷದ ಸಂಬಂಧಗಳನ್ನು ಹೇಳುತ್ತದೆ.

5. ಟು ಎ ಲ್ಯಾಂಡ್ ಅನ್ನೋನ್

ನಿರ್ದೇಶಕರು: ಮಹ್ದಿ ಫ್ಲೀಫೆಲ್

ಇದು ಚಲನಚಿತ್ರ ನಿರ್ಮಾಪಕ ಮತ್ತು ದೃಶ್ಯ ಕಲಾವಿದ ಮಹ್ದಿ ಫ್ಲೀಫೆಲ್ ಅವರ ಮೊದಲ ಚಲನಚಿತ್ರವಾಗಿದ್ದು, ಇದು ಕಾನ್ ಚಲನಚಿತ್ರೋತ್ಸವ 2024ರಲ್ಲಿ ಪ್ರಥಮ ಪ್ರದರ್ಶನಗೊಂಡಿತು. ಮಹ್ದಿ ಫ್ಲೀಫೆಲ್, ಅವರ ಕೃತಿಗಳಲ್ಲಿ ಸಾಮಾಜಿಕ ನ್ಯಾಯ ಮತ್ತು ನಿರಾಶ್ರಿತರ ವಿಷಯಗಳನ್ನು ವಿಶ್ಲೇಷಿಸುವಲ್ಲಿ ಹೆಸರಾಗಿದ್ದಾರೆ.

ಇದು ಎರಡು ಸ್ಥಳಾಂತರಗೊಂಡ, ನಿರಾಶ್ರಿತ ಸೋದರಸಂಬಂಧಿಗಳ ಬಗ್ಗೆ ತನ್ಮೂಲಕ ಉತ್ತಮ ಜೀವನವನ್ನು ಹುಡುಕುತ್ತಿರುವ ವೇಗದ ನಿರೂಪಣೆಯ, ಥ್ರಿಲ್ಲರ್ ಚಲನಚಿತ್ರವಾಗಿದೆ.

6. ಜಿಪ್ಸಿ

ನಿರ್ದೇಶಕ: ಶಶಿ ಚಂದ್ರಕಾಂತ ಖಂಡಾರೆ

ಮರಾಠಿ ಚಲನಚಿತ್ರ ನಿರ್ಮಾಪಕ ಶಶಿ ಚಂದ್ರಕಾಂತ್ ಖಂಡಾರೆ ಅವರ ಚೊಚ್ಚಲ ಚಲನಚಿತ್ರ.

ಸ್ಥಳಾಂತರ, ಕೊರತೆ ಮತ್ತು ಹಸಿವಿನ ವಿಷಯಗಳನ್ನು ಪರಿಶೀಲಿಸುವ ಕಟುವಾಸ್ತವದ ಚಲನಚಿತ್ರ. ಅಲೆಮಾರಿ ಕುಟುಂಬವೊಂದು ಅಲೆಯುತ್ತಲೇ ದಿನಗಳನ್ನು ಕಳೆಯುತ್ತದೆ. ಗರ್ಭಿಣಿ ತಾಯಿ ನಿರಂತರವಾಗಿ ತಿರುಗಾಡಬೇಕಾದರೂ ವಿಶ್ರಾಂತಿ ಪಡೆಯಲು ಹೆಣಗಾಡುತ್ತಾಳೆ. ದಿನವೂ ಭಿಕ್ಷಾಟನೆ ಮಾಡಿ ಕೆಟ್ಟ, ಹಳಸಿದ ಆಹಾರವನ್ನು ತಿನ್ನಬೇಕಾದ ಪುಟ್ಟ ಬಾಲಕ 'ಜೋತ್ಯಾ' ತಾಜಾ ಬಿಸಿ ಆಹಾರದ ಪರಿಮಳಕ್ಕೆ ಮಾರುಹೋಗುತ್ತಾನೆ. ಅದೇ ವಸ್ತುವಿನ ಪರಿಮಳದ ಆಕರ್ಷಣೆಯು ಅವನ ಜೀವನವನ್ನು ಬದಲಾಯಿಸುವ ಅವಕಾಶವನ್ನು ಒದಗಿಸಿದಾಗ ಕಥೆಯು ತಿರುವು ಪಡೆಯುತ್ತದೆ.

7. 35 ಚಿನ್ನ ಕಥಾ ಕಾದು
ನಿರ್ದೇಶಕ: ಎಮಾನಿ ವಿ ಎಸ್ ನಂದ ಕಿಶೋರ್

ತೆಲುಗು ಕಾಲ್ಪನಿಕ ಬರಹಗಾರ ಮತ್ತು ಚಲನಚಿತ್ರ ನಿರ್ಮಾಪಕ ಎಮಾನಿ ವಿ ಎಸ್ ನಂದ ಕಿಶೋರ್ ಅವರ ಚೊಚ್ಚಲ ವೈಶಿಷ್ಟ್ಯ.

ಕಥೆಯು ತಿರುಪತಿ ದೇವಸ್ಥಾನದ ಸಮೀಪವಿರುವ ಒಂದು ಸಾಧಾರಣ ಮನೆಯಲ್ಲಿ ನಡೆಯುತ್ತದೆ, ಅಲ್ಲಿ 28 ವರ್ಷದ ಗೃಹಿಣಿ ಸರಸ್ವತಿ ಮತ್ತು ಅವರ ಪತಿ ಪ್ರಸಾದ್, ಬಸ್ ಕಂಡಕ್ಟರ್, ತಮ್ಮ ಇಬ್ಬರು ಪುತ್ರರೊಂದಿಗೆ ವಾಸಿಸುತ್ತಿದ್ದಾರೆ. 16 ನೇ ವಯಸ್ಸಿನಲ್ಲಿ, ಸರಸ್ವತಿ ಪ್ರಸಾದ್ ಮೇಲಿನ ಪ್ರೀತಿಯಿಂದಾಗಿ ಶಿಕ್ಷಣಕ್ಕಿಂತ ಮದುವೆಯನ್ನು ಆರಿಸಿಕೊಳ್ಳುತ್ತಾರೆ. ಆಕೆಯ ಮಗ ಅರುಣ್ (10) ಗಣಿತ ಕಲಿಯಲು  ಕಷ್ಟಪಡುತ್ತಿರುವಾಗ ಔಪಚಾರಿಕ ಶಾಲಾ ಶಿಕ್ಷಣದ ಕೊರತೆಯು ಸವಾಲಾಗುತ್ತದೆ. ತನ್ನ ಮಗನಿಗೆ ಸಹಾಯ ಮಾಡಲು ನಿರ್ಧರಿಸಿದ ಸರಸ್ವತಿ ಗಣಿತವನ್ನು ಸ್ವತಃ ಕಲಿಯಲು ಪ್ರಾರಂಭಿಸುತ್ತಾರೆ. ಅವರ ಪ್ರಯಾಣವು ಪರಿಶ್ರಮದ ಸಾಮರ್ಥ್ಯ, ಕುಟುಂಬದ ಬೆಂಬಲ ಮತ್ತು ಪ್ರತಿಕೂಲತೆಯನ್ನು ನಿವಾರಿಸುವಲ್ಲಿ ಸಮುದಾಯದ ಮಧ್ಯಸ್ಥಿಕೆಯ ಶಕ್ತಿಯ ಬಗ್ಗೆ ಒತ್ತಿಹೇಳುತ್ತದೆ.

ಹೊಸ ಧ್ವನಿಗಳು, ಹೊಸ ದೃಷ್ಟಿಕೋನಗಳು ಮತ್ತು ದಿಟ್ಟ ದೃಷ್ಟಿಯೊಂದಿಗೆ, ಈ ಚೊಚ್ಚಲ ನಿರ್ದೇಶಕರು ವಿಶೇಷವಾಗಿ ಐ.ಎಫ್.ಎಫ್.ಐ. ಪ್ರತಿನಿಧಿಗಳಿಗಾಗಿ, ಹೇಳಬೇಕಾದ ಮತ್ತು ಕೇಳಬೇಕಾದ ಕಥೆಗಳನ್ನು ತರುತ್ತಾರೆ. 55ನೇ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಉದಯೋನ್ಮುಖ ಪ್ರತಿಭೆಗಳ ಪ್ರದರ್ಶನವು ನಿಮಗಾಗಿ ಕಾಯುತ್ತಿದೆ. ಈ ಉದಯೋನ್ಮುಖ ಚಲನಚಿತ್ರ ನಿರ್ಮಾಪಕರು ಮತ್ತು ಸಿನಿಮಾದ ಅಪರಿಮಿತ ಸಾಮರ್ಥ್ಯಕ್ಕಾಗಿ ನಾವು ಹುರಿದುಂಬಿಸುವಾಗ ಉತ್ಸವದ ಆಚರಣೆಯಲ್ಲಿ ನಮ್ಮೊಂದಿಗೆ ಸೇರಿಕೊಳ್ಳಿ.
 
55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ನವೆಂಬರ್ 20 ರಿಂದ 28, 2024 ರವರೆಗೆ ಗೋವಾದ ಪಣಜಿಯಲ್ಲಿ ನಡೆಯಲಿದೆ.

 

*****

iffi reel

(Release ID: 2073805) Visitor Counter : 19