ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಬಿಹಾರದಲ್ಲಿ ಆರೋಗ್ಯ ಮೂಲಸೌಕರ್ಯಕ್ಕೆ ಪ್ರಮುಖ ಉತ್ತೇಜನ ನೀಡುವ ದರ್ಭಾಂಗ್ ನ ಎಐಐಎಂಎಸ್ ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಶಂಕುಸ್ಥಾಪನೆ
ದರ್ಭಾಂಗದ ಎಐಐಎಂಎಸ್ ಶಂಕುಸ್ಥಾಪನೆಯು ಬಿಹಾರದ ಆರೋಗ್ಯ ವಲಯಕ್ಕೆ ಮಹತ್ವದ ಉತ್ತೇಜನ ನೀಡಲಿದೆ. ಬಿಹಾರದ ಮಿಥಿಲಾ, ಕೋಶಿ ಮತ್ತು ತಿರ್ಹಟ್ ವಲಯಗಳ ಜನರಿಗೆ ಆರೋಗ್ಯ ಸೇವೆ ಒದಗಿಸುವ ಜೊತೆಗೆ ಪಶ್ಚಿಮ ಬಂಗಾಳ ಮತ್ತು ಹತ್ತಿರದ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಸಹ ಅನುಕೂಲವಾಗಲಿದೆ: ಪ್ರಧಾನಮಂತ್ರಿ
ಸಮಗ್ರ ಆರೋಗ್ಯ ರಕ್ಷಣೆಗೆ ಐದು ಆಯಾಮದ ವಿಧಾನಕ್ಕೆ ಸರ್ಕಾರದ ಬದ್ಧತೆ
ಯೋಗ, ಆಯುರ್ವೇದ ಹಾಗೂ ಸ್ವಚ್ಛ ಭಾರತ್ ಮತ್ತು ಫಿಟ್ ಇಂಡಿಯಾದಂತಹ ಉಪಕ್ರಮಗಳ ಮೂಲಕ ಆರೋಗ್ಯಕರ ಜೀವನಶೈಲಿ ಉತ್ತೇಜಿಸುವ ಸರ್ಕಾರದ ಆದ್ಯತೆಯ ಸಂಕೇತ
ಆಯುಷ್ಮಾನ್ ಭಾರತ್ ಯೋಜನೆಯಿಂದಾಗಿ ಅನೇಕ ಬಡ ಕುಟುಂಬಗಳಿಗೆ ಆರ್ಥಿಕ ಹೊರೆ ಕಡಿಮೆಯಾಗಿದ್ದು, ಲಕ್ಷಾಂತರ ಕುಟುಂಬಗಳಿಂದ ಸುಮಾರು ₹1.25 ಲಕ್ಷ ಕೋಟಿ ಉಳಿತಾಯವಾಗಿದೆ: ಪ್ರಧಾನಮಂತ್ರಿ
"ಕಳೆದ 10 ವರ್ಷಗಳಲ್ಲಿ, 1 ಲಕ್ಷ ಹೊಸ ವೈದ್ಯಕೀಯ ಸೀಟುಗಳನ್ನು ಸೇರ್ಪಡೆ ಮಾಡಲಾಗಿದ್ದು, ಮುಂದಿನ ಐದು ವರ್ಷಗಳಲ್ಲಿ ಇನ್ನೂ 75,000 ಸೀಟುಗಳನ್ನು ಹೆಚ್ಚಿಸುವ ಯೋಜನೆ ಇದೆ"
"ಮುಜಾಫರ್‌ಪುರದಲ್ಲಿ ನೂತನ ಕ್ಯಾನ್ಸರ್ ಚಿಕಿತ್ಸಾ ಕೇಂದ್ರವನ್ನು ನಿರ್ಮಿಸಲಾಗುತ್ತಿದೆ; ಇದು ಬಿಹಾರದಲ್ಲಿ ಕ್ಯಾನ್ಸರ್ ರೋಗಿಗಳಿಗೆ ಸಮಗ್ರ ಆರೈಕೆಯನ್ನು ಒದಗಿಸಲಿದ್ದು, ಅವರು ದೆಹಲಿ ಅಥವಾ ಮುಂಬೈನಂತಹ ನಗರಗಳಿಗೆ ಪ್ರಯಾಣಿಸುವ ಅಗತ್ಯವಿರುವುದಿಲ್ಲ "
Posted On:
13 NOV 2024 3:12PM by PIB Bengaluru
ಬಿಹಾರದ ತೃತೀಯ ಹಂತದ ಆರೋಗ್ಯ ರಕ್ಷಣಾ ಮೂಲಸೌಕರ್ಯ ಮತ್ತು ಸೇವೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬಿಹಾರದ ದರ್ಭಾಂಗಾದಲ್ಲಿ ಎಐಐಎಂಎಸ್ ಗೆ ಶಂಕುಸ್ಥಾಪನೆ ನೆರವೇರಿಸಿದರು. ಪಾಟ್ನಾದ ಎಐಐಎಂಎಸ್ ನಂತರ ದರ್ಭಾಂಗದ ವೈದ್ಯಕೀಯ ಸಂಸ್ಥೆ ಬಿಹಾರದ ಎರಡನೇ ಎಐಐಎಂಎಸ್ ಆಗಲಿದೆ.
ಬಿಹಾರದ ರಾಜ್ಯಪಾಲರಾದ ಶ್ರೀ ರಾಜೇಂದ್ರ ಅರ್ಲೇಕರ್, ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್, ಉಪ ಮುಖ್ಯಮಂತ್ರಿಗಳಾದ ಶ್ರೀ ಸಾಮ್ರಾಟ್ ಚೌಧರಿ ಮತ್ತು ಶ್ರೀ ವಿಜಯ್ ಕುಮಾರ್, ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕಾ ಸಚಿವ ಶ್ರೀ ಚಿರಾಗ್ ಪಾಸ್ವಾನ್; ಸಿನ್ಹಾ, ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರಾದ ಶ್ರೀ ನಿತ್ಯಾನಂದ ರೈ ಮತ್ತು ಬಿಹಾರದ ಆರೋಗ್ಯ ಸಚಿವರಾದ ಶ್ರೀ ಮಂಗಲ್ ಪಾಂಡೆ ಮತ್ತಿತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, “ ದರ್ಭಾಂಗದ ಎಐಐಎಂಎಸ್ ಶಂಕುಸ್ಥಾಪನೆಯು ಬಿಹಾರದ ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಉತ್ತೇಜನವನ್ನು ನೀಡಲಿದೆ. ಬಿಹಾರದ ಮಿಥಿಲಾ, ಕೋಶಿ ಮತ್ತು ತಿರ್ಹಟ್ ವಲಯಗಳಿಗೆ ಆರೋಗ್ಯ ಸೇವೆ ನೀಡುವುದರ ಜೊತೆಗೆ, ಪಶ್ಚಿಮ ಬಂಗಾಳ ಮತ್ತು ಹತ್ತಿರದ ಪ್ರದೇಶಗಳಲ್ಲಿ ವಾಸಿಸುವ ಜನರಿಗೂ ಸಹ ಈ ಯೋಜನೆಯಿಂದ ಅನುಕೂಲವಾಗಲಿದೆ. ನೇಪಾಳದಿಂದ ಬರುವ ರೋಗಿಗಳು ಸಹ ಎಐಐಎಂಎಸ್ ದರ್ಭಾಂಗದಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗಲಿದೆ" ಎಂದು ಹೇಳಿದರು.
ಭಾರತದ ಜನಸಂಖ್ಯೆಯ ಬಹುಪಾಲು ಜನರು ಬಡವರು ಮತ್ತು ಮಧ್ಯಮ ವರ್ಗದವರಿದ್ದು, ಅವರು ಅನಾರೋಗ್ಯದಿಂದ ಹೆಚ್ಚು ಬಾಧಿತರಾಗಿದ್ದು, ಆಗಾಗ್ಗೆ ವೈದ್ಯಕೀಯ ಚಿಕಿತ್ಸೆಗಾಗಿ ಅಪಾರ ಮೊತ್ತವನ್ನು ವ್ಯಯಿಸಬೇಕಾಗುತ್ತದೆ ಎಂದು ಹೇಳಿದ ಪ್ರಧಾನಮಂತ್ರಿಗಳು ಕುಟುಂಬದ ಸದಸ್ಯರು ಅನಾರೋಗ್ಯಕ್ಕೆ ಒಳಗಾದಾಗ ಕುಟುಂಬವು ಅಪಾರ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಆ ಕುಟುಂಬದ ಕಷ್ಟಕಾರ್ಪಣ್ಯಗಳನ್ನು ವಿವರಿಸಿದರು. ಗತಕಾಲದ ಬಗ್ಗೆ ಪ್ರಸ್ತಾಪಿಸಿದ ಅವರು, ದೇಶದ ಆರೋಗ್ಯ ಮೂಲಸೌಕರ್ಯವು ತೀರಾ ಕಳಪೆಯಾಗಿತ್ತು. ಆಸ್ಪತ್ರೆಗಳು, ವೈದ್ಯರು ಮತ್ತು ರೋಗನಿನಾದ(ಡಯಾಗ್ನೋಸ್ಟಿಕ್ಸ್) ಅಥವಾ ಸಂಶೋಧನಾ ಕೇಂದ್ರಗಳ ಕೊರತೆ ಇತ್ತು, ಜೊತೆಗೆ ಔಷಧ ವೆಚ್ಚ ಕೂಡ ಹೆಚ್ಚಾಗಿತ್ತು ಎಂದು ಹೇಳಿದರು. ಈ ಆರೋಗ್ಯ ರಕ್ಷಣೆ ಸವಾಲುಗಳಿಂದಾಗಿ ವಿಶೇಷವಾಗಿ ದುರ್ಬಲವರ್ಗದವರಿಗೆ ತೊಂದರೆಯಾಗಿತ್ತು, ಈ ಸವಾಲುಗಳಿಂದಾಗಿ ರಾಷ್ಟ್ರದ ಪ್ರಗತಿಯು ಕುಂಠಿತಗೊಂಡಿದೆ ಎಂದು ಅವರು ಒತ್ತಿ ಹೇಳಿದರು. ಇದರ ಪರಿಣಾಮವಾಗಿ, ಈ ಸಮಸ್ಯೆಗಳನ್ನು ಪರಿಹರಿಸಲು ಮನಸ್ಥಿತಿ ಮತ್ತು ವಿಧಾನದಲ್ಲಿ ಬದಲಾವಣೆ ಕಂಡುಬಂದಿದೆ ಎಂದು ಅವರು ಹೇಳಿದರು. ಐದು ಪ್ರಮುಖ ವಲಯಗಳಿಗೆ ಆದ್ಯತೆ ನೀಡಿ ಆರೋಗ್ಯ ಕ್ಷೇತ್ರಕ್ಕೆ ಸಮಗ್ರ ವಿಧಾನವನ್ನು ಅಳವಡಿಸಿಕೊಳ್ಳುವತ್ತ ಈ ಬದಲಾವಣೆಯ ಅಗತ್ಯತೆಯನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು. "ಮೊದಲ ಆದ್ಯತೆಯು ತಡೆಗಟ್ಟುವಿಕೆ, ನಂತರ ರೋಗಗಳ ನಿಖರವಾದ ನಿನಾದ/ಪತ್ತೆ, ಮೂರನೆಯದು ನಾಗರಿಕರಿಗೆ ಕೈಗೆಟುಕುವ ಅಥವಾ ಉಚಿತ ಆರೋಗ್ಯ ಸೇವೆ ಮತ್ತು ಔಷಧಗಳ ಒದಗಿಸುವಿಕೆ, ನಾಲ್ಕನೆಯದು ವೈದ್ಯರ ಕೊರತೆಯನ್ನು ಪರಿಹರಿಸುತ್ತಾ ಸಣ್ಣ ಪಟ್ಟಣಗಳಲ್ಲಿ ಆರೋಗ್ಯ ಸೇವೆಯನ್ನು ಸುಧಾರಿಸುವುದು ಮತ್ತು ಅಂತಿಮವಾಗಿ, ಐದನೆಯದು ಆರೋಗ್ಯ ಸೇವೆಯನ್ನು ಉತ್ತಮಗೊಳಿಸಲು ತಂತ್ರಜ್ಞಾನದ ಸಮರ್ಥ ಬಳಕೆ” ಎಂದು ಅವರು ವಿವರಿಸಿದ್ದಾರೆ.
ಯೋಗ, ಆಯುರ್ವೇದ, ಪೋಷಣೆ ಮತ್ತು ಫಿಟ್ ಇಂಡಿಯಾ ಆಂದೋಲನವನ್ನು ಉತ್ತೇಜಿಸುವಲ್ಲಿ ಸರ್ಕಾರದ ಆದ್ಯತೆಯನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು. ಜಂಕ್ ಫುಡ್ ಸೇವನೆಯಂತಹ ಅನಾರೋಗ್ಯಕರ ಆಹಾರ ಅಭ್ಯಾಸಗಳು ಮತ್ತು ಕಳಪೆ ಜೀವನಶೈಲಿಯು ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೆ ಪ್ರಮುಖ ಕಾರಣವಾಗಿವೆ ಎಂದು ಅವರು ಹೇಳಿದರು. ಈ ಸವಾಲುಗಳನ್ನು ಎದುರಿಸಲು ಸ್ವಚ್ಛ ಭಾರತ್ ಉಪಕ್ರಮದ ಮೂಲಕ ಪ್ರತಿ ಮನೆಯಲ್ಲೂ ಶೌಚಾಲಯ ಮತ್ತು ನಲ್ಲಿ ನೀರು ಸಂಪರ್ಕಗಳಂತಹ ಸರ್ಕಾರದ ಪ್ರಯತ್ನಗಳನ್ನು ಪ್ರಧಾನಮಂತ್ರಿ ಸವಿಸ್ತಾರವಾಗಿ ತಿಳಿಸಿ, ಇವೆಲ್ಲವೂ ಸ್ವಚ್ಛತೆಯನ್ನು ಉತ್ತೇಜಿಸುವ ಮತ್ತು ರೋಗಗಳ ಹರಡುವಿಕೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿವೆ ಎಂದರು.
ರೋಗಗಳು ಮೊದಲೇ ಪತ್ತೆಯಾದರೆ ಅವುಗಳ ತೀವ್ರತೆ ಕಡಿಮೆ ಇರಲಿದೆ. ಆದರೆ ರೋಗ ಪತ್ತೆಯ ಹೆಚ್ಚಿನ ವೆಚ್ಚದಿಂದಾಗಿ ಜನರು ಸಕಾಲಿಕ ವೈದ್ಯಕೀಯ ಆರೈಕೆಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ ಪ್ರಧಾನಮಂತ್ರಿ ಇದನ್ನು ಪರಿಹರಿಸಲು, ದೇಶಾದ್ಯಂತ 1.5 ಲಕ್ಷಕ್ಕೂ ಹೆಚ್ಚು ಆಯುಷ್ಮಾನ್ ಆರೋಗ್ಯ ಮಂದಿರಗಳನ್ನು ತೆರೆಯಲಾಗಿದೆ ಎಂದರು. ಇದರಿಂದ ರೋಗಗಳ ಆರಂಭಿಕ ಪತ್ತೆ ಸಾಧ್ಯವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಆಯುಷ್ಮಾನ್ ಭಾರತ್ ಯೋಜನೆಯಡಿ 4 ಕೋಟಿಗೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಹೇಳಿದ ಅವರು, ಈ ಯೋಜನೆ ಇಲ್ಲದೇ ಇದ್ದಿದ್ದರೆ, ಅನೇಕ ರೋಗಿಗಳು ವೈದ್ಯಕೀಯ ವೆಚ್ಚವನ್ನು ಭರಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ತಿಳಿಸಿದರು. ಆಯುಷ್ಮಾನ್ ಭಾರತ್ ಯೋಜನೆಯು ಅನೇಕ ಬಡ ಕುಟುಂಬಗಳಿಗೆ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿದೆ, ಲಕ್ಷಾಂತರ ಕುಟುಂಬಗಳಿಂದ ಸುಮಾರು ₹1.25 ಲಕ್ಷ ಕೋಟಿ ಉಳಿತಾಯವಾಗಿದೆ ಎಂದು ಪ್ರಧಾನಮಂತ್ರಿ ಅಂಕಿಅಂಶ ನೀಡಿದರು.
70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತ ಚಿಕಿತ್ಸೆ ನೀಡುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ ಪ್ರಧಾನಿ, ಕುಟುಂಬದ ಆದಾಯವನ್ನು ಲೆಕ್ಕಿಸದೆ ಹಿರಿಯ ನಾಗರಿಕರಿಗೆ ಉಚಿತ ಚಿಕಿತ್ಸೆ ನೀಡುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ ಮತ್ತು ಎಲ್ಲಾ ಫಲಾನುಭವಿಗಳಿಗೂ ಶೀಘ್ರದಲ್ಲೇ ಆಯುಷ್ಮಾನ್ ವಯ ವಂದನಾ ಕಾರ್ಡ್ ಸಿಗಲಿದೆ ಎಂದು ಘೋಷಿಸಿದರು. ಜನೌಷಧಿ ಕೇಂದ್ರಗಳ ಮೂಲಕ ಕೈಗೆಟಕುವ ದರದಲ್ಲಿ ಔಷಧಗಳು ದೊರೆಯುತ್ತಿವೆ ಎಂದೂ ಅವರು ಪ್ರಸ್ತಾಪಿಸಿದರು.
ಸಣ್ಣ ಪಟ್ಟಣಗಳಲ್ಲಿ ಆರೋಗ್ಯ ಸೇವೆಯನ್ನು ಸುಧಾರಿಸುವತ್ತ ಗಮನಹರಿಸಿಬೇಕಾಗಿದೆ, ಭಾರತಕ್ಕೆ ಸ್ವಾತಂತ್ರ್ಯ ಬಂದು 60 ವರ್ಷಗಳ ಕಳೆದರೂ ದೇಶದಲ್ಲಿ ಕೇವಲ ಒಂದೇ ಒಂದು ಎಎಐಎಂಎಸ್ ಆಸ್ಪತ್ರೆ ಇತ್ತು. ಪ್ರಸ್ತುತ ಸರ್ಕಾರವು ಆರೋಗ್ಯ ರಕ್ಷಣೆಯ ಅಗತ್ಯತೆಗಳನ್ನು ಪೂರೈಸುವ ಜೊತೆಗೆ ಭಾರತದಾದ್ಯಂತ ಹೊಸ ಎಐಐಎಂಎಸ್ ಸಂಸ್ಥೆಗಳನ್ನು ಸ್ಥಾಪಿಸಿದ್ದು ಈಗ ದೇಶದಲ್ಲಿ 24 ಸಂಸ್ಥೆಗಳಿವೆ ಎಂದು ಹೇಳಿದರು. ಕಳೆದ ದಶಕದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ ದ್ವಿಗುಣಗೊಂಡಿದೆ, ಇದರಿಂದಾಗಿ ವೈದ್ಯರ ಸಂಖ್ಯೆಯೂ ಹೆಚ್ಚಾಗಿದೆ ಎಂದು ಅವರು ಸಭಿಕರಿಗೆ ತಿಳಿಸಿದರು. ದರ್ಭಾಂಗ್ ನ ಏಮ್ಸ್ ಬಿಹಾರ ಮತ್ತು ಇಡೀ ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಅನೇಕ ಹೊಸ ವೈದ್ಯರನ್ನು ನೀಡಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ಕರ್ಪುರಿ ಠಾಕೂರ್ ಅವರ ದೂರದೃಷ್ಟಿಗೆ ಗೌರವ ಸೂಚಕವಾಗಿ ಹಿಂದಿ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಉನ್ನತ ಶಿಕ್ಷಣದ ಉತ್ತೇಜನದ ಬಗ್ಗೆ ಪ್ರಧಾನಿ ಪ್ರಸ್ತಾಪಿಸಿದರು. ಕಳೆದ 10 ವರ್ಷಗಳಲ್ಲಿ 1 ಲಕ್ಷ ಹೊಸ ವೈದ್ಯಕೀಯ ಸೀಟುಗಳನ್ನು ಸೇರ್ಪಡೆ ಮಾಡಲಾಗಿದ್ದು, ಮುಂದಿನ ಐದು ವರ್ಷಗಳಲ್ಲಿ ಇನ್ನೂ 75,000 ಸೀಟುಗಳನ್ನು ಸೇರಿಸುವ ಯೋಜನೆ ಇದೆ ಎಂದು ಅವರು ತಿಳಿಸಿದರು. ಅಲ್ಲದೇ, ಹಿಂದಿ ಮತ್ತು ಇತರ ಪ್ರಾದೇಶಿಕ ಭಾಷೆಗಳಲ್ಲಿ ವೈದ್ಯಕೀಯ ಅಧ್ಯಯನದ ಆಯ್ಕೆಗಳನ್ನು ಲಭ್ಯಗೊಳಿಸಲಾಗಿದೆ ಎಂದು ಅವರು ಹೇಳಿದರು.
ಇನ್ನು ಕ್ಯಾನ್ಸರ್ ಆರೈಕೆಯ ಬಗ್ಗೆ ಮಾತನಾಡುತ್ತಾ ಪ್ರಧಾನಮಂತ್ರಿಯವರು, ರೋಗದ ವಿರುದ್ಧ ಹೋರಾಡಲು ಸರ್ಕಾರದ ಪ್ರಯತ್ನಗಳನ್ನು ಒತ್ತಿ ಹೇಳಿದರು. ಮುಜಾಫರ್‌ಪುರದಲ್ಲಿ ಹೊಸ ಕ್ಯಾನ್ಸರ್ ಚಿಕಿತ್ಸಾ ಕೇಂದ್ರವನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದ ಅವರು, ಇದು ಬಿಹಾರದ ಕ್ಯಾನ್ಸರ್ ರೋಗಿಗಳಿಗೆ ಸಮಗ್ರ ಆರೈಕೆಯನ್ನು ಒದಗಿಸುವುದಲ್ಲದೇ ದೆಹಲಿ ಅಥವಾ ಮುಂಬೈನಂತಹ ನಗರಗಳಿಗೆ ಪ್ರಯಾಣ ಮಾಡಬೇಕಾದ ಅಗತ್ಯವನ್ನು ತೊಡೆದು ಹಾಕುತ್ತದೆ ಎಂದು ಹೇಳಿದರು. ವಾರಣಾಸಿಯಲ್ಲಿ ಇತ್ತೀಚೆಗೆ ಉದ್ಘಾಟನೆಯಾದ ಶಂಕರ ಕಣ್ಣಿನ ಆಸ್ಪತ್ರೆಯಿಂದ ಪ್ರೇರಿತರಾಗಿ ಕಂಚಿ ಕಾಮಕೋಟಿ ಶ್ರೀ ಶಂಕರಾಚಾರ್ಯ ಅವರಿಗೆ ಬಿಹಾರದಲ್ಲಿ ಹೊಸ ಕಣ್ಣಿನ ಆಸ್ಪತ್ರೆಯನ್ನು ತೆರೆಯಲು ಮನವಿ ಮಾಡಿದ್ದು, ಈ ಕಣ್ಣಿನ ಆಸ್ಪತ್ರೆಯ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅವರು ಘೋಷಿಸಿದರು..
ಈ ಸಂದರ್ಭದಲ್ಲಿ ಮಾತಾನಾಡಿದ ಶ್ರೀ ನಿತೀಶ್ ಕುಮಾರ್, ಎಐಐಎಂಎಸ್ ದರ್ಭಾಂಗವು ಕೇವಲ ದರ್ಭಾಂಗಾದಲ್ಲಿ ಮಾತ್ರವಲ್ಲದೆ ಇಡೀ ಪ್ರದೇಶದಲ್ಲಿ ಆರೋಗ್ಯ ರಕ್ಷಣೆಯನ್ನು ಸುಧಾರಿಸಲಿದೆ ಎಂದು ಹೇಳಿದರು. ಅಲ್ಲದೇ ಈ ಪ್ರದೇಶದಲ್ಲಿ ಇತರ ಸಾಮಾಜಿಕ-ಆರ್ಥಿಕ ಬೆಳವಣಿಗೆಗಳನ್ನು ಉತ್ತೇಜಿಸಲಿದೆ ಎಂದು ಅಭಿಪ್ರಾಯಪಟ್ಟರು.
ಎಐಐಎಂಎಸ್ ದರ್ಭಾಂಗದ ಹಿನ್ನೆಲೆ :
ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (ಪಿಎಂಎಸ್ಎಸ್ವೈ) ಅಡಿಯಲ್ಲಿ, ಇಲ್ಲಿಯವರೆಗೆ, 22 ಅಖಿಲ ಭಾರತ ವೈದ್ಯಕೀಯ ಮಹಾವಿದ್ಯಾಲಯ (ಎಐಐಎಂಎಸ್) ಗಳಿಗೆ ಅನುಮೋದನೆ ನೀಡಲಾಗಿದೆ. ಈ ಪೈಕಿ ಬಿಹಾರ ರಾಜ್ಯಕ್ಕೆ ಎರಡು ಎಐಐಎಂಎಸ್ ಗಳನ್ನು ಅನುಮೋದಿಸಲಾಗಿದೆ: ಒಂದು ಪಾಟ್ನಾದಲ್ಲಿ ಮತ್ತು ಇನ್ನೊಂದು ದರ್ಭಾಂಗಾದಲ್ಲಿ. ದರ್ಭಾಂಗದಲ್ಲಿ ಎಐಐಎಂಎಸ್ ಸ್ಥಾಪನೆಗೆ ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಭೂಮಿ ಪೂಜೆ ನೆರವೇರಿಸಿದರು.
ದರ್ಭಾಂಗದ ಎಕ್ಮಿ-ಶೋಭನ್ ಬೈಪಾಸ್‌ನಲ್ಲಿರುವ 187 ಎಕರೆ ಪ್ರದೇಶದಲ್ಲಿ ರೂ 1264 ವೆಚ್ಚದಲ್ಲಿ ಎಐಐಎಂಎಸ್ ದರ್ಭಾಂಗವನ್ನು ಸ್ಥಾಪಿಸಲಾಗುತ್ತಿದೆ. ಇದು 750 ಹಾಸಿಗೆಗಳ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆ/ಆಯುಷ್ ಬ್ಲಾಕ್, 125 ಆಸನಗಳ ವೈದ್ಯಕೀಯ ಕಾಲೇಜು, 60 ಸೀಟುಗಳ ನರ್ಸಿಂಗ್ ಕಾಲೇಜು, ರೋಗಿಗಳು ಮತ್ತು ಅವರ ಪರಿಚಾರಕರಿಗೆ ರಾತ್ರಿ ಆಶ್ರಯ, ವೈದ್ಯರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ವಸತಿ ಸೌಲಭ್ಯಗಳು ಮೊದಲಾದ ಸೌಲಭ್ಯಗಳನ್ನು ಹೊಂದಿದೆ.
ಎಐಐಎಂಎಸ್ ದರ್ಭಾಂಗವು ಸಮೀಪದ ಜಿಲ್ಲೆಗಳಾದ ಮುಜಾಫರ್‌ಪುರ, ಸಮಸ್ತಿಪುರ್, ಸೀತಾಮಧಿ, ಮಧುಬನಿ, ಸಹರ್ಸಾ, ಪೂರ್ಣಿಯಾ, ಖಗಾಡಿಯಾ, ಕತಿಹಾರ್ ಮೊದಲಾದೆಡೆ ವಾಸಿಸುವ ಜನರಿಗೆ ಸೇರಿದಂತೆ ಬಿಹಾರದ ಜನರು ಹಾಗೂ ಪಶ್ಚಿಮ ಬಂಗಾಳ ಮತ್ತು ಪೂರ್ವ ಉತ್ತರ ಪ್ರದೇಶದ ಹತ್ತಿರದ ಜಿಲ್ಲೆಗಳ ಜನರಿಗೆ ಕೈಗೆಟುಕುವ ದರದಲ್ಲಿ ವಿಶ್ವ ದರ್ಜೆಯ ತೃತೀಯ ಹಂತದ ಆರೋಗ್ಯ ಸೇವೆಯನ್ನು ಒದಗಿಸಲಿದೆ. ಸ್ವಸ್ಥ್ ಭಾರತ್, ಸಮೃದ್ಧ್ ಭಾರತ್ ಧ್ಯೇಯವನ್ನು ಸಾಧಿಸುವಲ್ಲಿ ಎಐಐಎಂಎಸ್ ದರ್ಭಾಂಗ್ ಗಣನೀಯ ಕೊಡುಗೆ ನೀಡಲಿದೆ.
*****
(Release ID: 2073243)
Visitor Counter : 6