ಹಣಕಾಸು ಸಚಿವಾಲಯ
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ನವದೆಹಲಿಯಲ್ಲಿ AIIB ನಿರ್ದೇಶಕರ ಮಂಡಳಿಯೊಂದಿಗೆ ಸಭೆ ನಡೆಸಿದರು
Posted On:
11 NOV 2024 7:58PM by PIB Bengaluru
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು, ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ (AIIB)ನಿಯೋಗದೊಂದಿಗೆ ಇಂದು ನವದೆಹಲಿಯಲ್ಲಿ ಸಭೆ ನಡೆಸಿದರು. ಈ ನಿಯೋಗದಲ್ಲಿ 9 ವಿಭಿನ್ನ ಕ್ಷೇತ್ರಗಳಿಂದ ಎಐಐಬಿ ನಿರ್ದೇಶಕರ ಮಂಡಳಿಯ 11 ಅಧಿಕಾರಿಗಳು, AIIB ಆಡಳಿತ ಮಂಡಳಿಯ ಹಿರಿಯ ಪ್ರತಿನಿಧಿಗಳು ಮತ್ತು ಮಂಡಳಿ ಗುಂಪಿನ ಭೇಟಿಗಾಗಿ ಭಾರತಕ್ಕೆ ಆಗಮಿಸಿರುವ AIIB ಸಿಬ್ಬಂದಿ ಭಾಗವಹಿಸಿದ್ದರು.
ಎಐಐಬಿ ಮಂಡಳಿಯ ಭಾರತ ಭೇಟಿಯ ಪ್ರಮುಖ ಉದ್ದೇಶವೆಂದರೆ ನಿರ್ದೇಶಕರ ಮಂಡಳಿಗೆ ಅದರ ಸದಸ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಮತ್ತು ಯೋಜಿತ ಹೂಡಿಕೆಗಳ ಬಗ್ಗೆ ಸಮಗ್ರ ಒಳನೋಟವನ್ನು ಒದಗಿಸುವುದು ಮತ್ತು ಸರ್ಕಾರ, ಖಾಸಗಿ ವಲಯ ಮತ್ತು ಇತರ ಪಾಲುದಾರರೊಂದಿಗೆ ಸಂವಹನ ನಡೆಸಲು ಅವಕಾಶ ಕಲ್ಪಿಸುವುದಾಗಿದೆ.
ಕಳೆದ ಒಂಬತ್ತು ವರ್ಷಗಳಲ್ಲಿ ಎ. ಐ. ಐ. ಬಿ. ಯ ಗಮನಾರ್ಹ ಬೆಳವಣಿಗೆಯನ್ನು ಶ್ಲಾಘಿಸಿದ ಕೇಂದ್ರ ಹಣಕಾಸು ಸಚಿವರು, ಭಾರತದ ಬಲವಾದ ಸ್ಥೂಲ ಆರ್ಥಿಕ ಮೂಲಭೂತ ಅಂಶಗಳನ್ನು ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಶಕ್ತಿಯನ್ನು ಸೃಷ್ಟಿಸುವಲ್ಲಿ ಮತ್ತು ಬಳಸಿಕೊಳ್ಳುವಲ್ಲಿ ಭಾರತ ತೋರಿರುವ ನಾಯಕತ್ವವನ್ನು ಒತ್ತಿ ಹೇಳಿದರು.
ಎಐಐಬಿ ಮಂಡಳಿಯ ಗವರ್ನರ್ ಕೂಡ ಆಗಿರುವ ಕೇಂದ್ರ ಹಣಕಾಸು ಸಚಿವರು, ಎಐಐಬಿಯು ಹವಾಮಾನ ಹೊಂದಾಣಿಕೆ ಮತ್ತು ಸ್ಥಿತಿಸ್ಥಾಪಕತ್ವ, ಮೂಲಸೌಕರ್ಯ ಅಭಿವೃದ್ಧಿ, ಇಂಧನ ಭದ್ರತೆ, ನಗರ ಅಭಿವೃದ್ಧಿ ಮುಂತಾದ ಆದ್ಯತಾ ಕ್ಷೇತ್ರಗಳಲ್ಲಿ ತನ್ನ ಹೂಡಿಕೆಯನ್ನು ವಿಸ್ತರಿಸಬೇಕು ಹಾಗೂ ಭಾರತದ ಮುಂದಿನ ಪೀಳಿಗೆಯ ಸುಧಾರಣೆಗಳಿಗೆ ಬೆಂಬಲ ನೀಡಬೇಕು ಎಂದು ತಿಳಿಸಿದರು. ಎಐಐಬಿಯ ಯೋಜನಾ ವಿನ್ಯಾಸ ಮತ್ತು ಅನುಷ್ಠಾನದಲ್ಲಿ ಹಣಕಾಸು ಮತ್ತು ಬಜೆಟ್ ಪ್ಲಸ್ ಅಂಶಗಳನ್ನು ನಿರಂತರವಾಗಿ ಸಂಯೋಜಿಸುವ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು.
ಡಿಜಿಟಲ್ ಪರಿವರ್ತನೆಯಲ್ಲಿ ಭಾರತದ ಅನುಭವವು, ಅಂತರ್ಗತ ಬೆಳವಣಿಗೆಗಾಗಿ ಡಿಜಿಟಲ್ ಪರಿಹಾರಗಳನ್ನು ಬಳಸಿಕೊಳ್ಳಲು ಆಸಕ್ತಿ ತೋರುವ ಇತರ ದೇಶಗಳಿಗೆ ಮಾದರಿಯಾಗಿ ಮಾರ್ಗದರ್ಶನ ನೀಡಬಲ್ಲದು ಎಂದು ಶ್ರೀಮತಿ ಸೀತಾರಾಮನ್ ಅವರು ಪ್ರತಿಪಾದಿಸಿದರು. ವಿಶೇಷವಾಗಿ, ಅನೇಕ ದುರ್ಬಲ ಆರ್ಥಿಕತೆಗಳಿಗೆ ಮಾರ್ಗದರ್ಶಿಯಾಗಬಲ್ಲ ವಿಪತ್ತು ನಿರ್ವಹಣೆಯಲ್ಲಿ ಭಾರತದ ಸಮೃದ್ಧ ಅನುಭವದ ಬಗ್ಗೆಯೂ ವಿಶೇಷವಾಗಿ ಪ್ರಸ್ತಾಪಿಸಿದರು.
ವಿವಿಧ ಕ್ಷೇತ್ರಗಳಲ್ಲಿನ ಅತ್ಯುತ್ತಮ ಕಾರ್ಯವಿಧಾನಗಳ ವಿಷಯದಲ್ಲಿ ಭಾರತವು ಬಹಳಷ್ಟನ್ನು ನೀಡಬಲ್ಲದು ಎಂಬುದನ್ನು ಕೇಂದ್ರ ಹಣಕಾಸು ಸಚಿವರು ದೃಢವಾಗಿ ಪ್ರತಿಪಾದಿಸಿದರು. ಇದರ ಜೊತೆಗೆ, ಭಾರತದಿಂದ ಇದೇ ರೀತಿಯ ಪರಿಸ್ಥಿತಿಯಲ್ಲಿರುವ ಇತರ ದೇಶಗಳಿಗೆ ಜ್ಞಾನ ಮತ್ತು ತಂತ್ರಜ್ಞಾನ ವರ್ಗಾವಣೆಯನ್ನು ಸುಗಮಗೊಳಿಸಲು ಎಐಐಬಿ ಒಂದು ಸುವ್ಯವಸ್ಥಿತ ಸಾಂಸ್ಥಿಕ ಕಾರ್ಯವಿಧಾನವನ್ನು ರೂಪಿಸಬೇಕೆಂದು ಒತ್ತಾಯಿಸಿದರು.
ಎಐಐಬಿ ನವೀನ ಹಣಕಾಸು ಸಾಧನಗಳು ಮತ್ತು ಮಾದರಿಗಳನ್ನು ಒದಗಿಸಲು ಶ್ರಮಿಸಬೇಕು ಮತ್ತು ಖಾಸಗಿ ಬಂಡವಾಳ ಕ್ರೋಢೀಕರಣಕ್ಕಾಗಿ ತನ್ನ ಪ್ರಯತ್ನಗಳನ್ನು ಹೆಚ್ಚಿಸಬೇಕು ಎಂದು ಶ್ರೀಮತಿ ಸೀತಾರಾಮನ್ ಸಲಹೆ ನೀಡಿದರು ಮತ್ತು ಈ ನಿಟ್ಟಿನಲ್ಲಿ ಭಾರತದ ಸಂಪೂರ್ಣ ಬೆಂಬಲ ಮತ್ತು ಸಹಕಾರದ ಬಗ್ಗೆ ಎಐಐಬಿಗೆ ಭರವಸೆ ನೀಡಿದರು. ಜೊತೆಗೆ, ನವೀನ ಹಣಕಾಸು ಮಾದರಿಗಳು ಮತ್ತು ತಂತ್ರಜ್ಞಾನಗಳ ಪ್ರಾಯೋಗಿಕ ಅನುಷ್ಠಾನಕ್ಕಾಗಿ ಭಾರತವು ಎಐಐಬಿಗೆ ಒಂದು ಪರೀಕ್ಷಾ ವೇದಿಕೆಯಾಗಿ (ಸ್ಯಾಂಡ್ ಬಾಕ್ಸ್) ಕಾರ್ಯನಿರ್ವಹಿಸಬಹುದು ಎಂದು ಅವರು ಹೇಳಿದರು.
ಭಾರತದ ಜಿ 20 ಅಧ್ಯಕ್ಷತೆಯಲ್ಲಿ ಸ್ಥಾಪಿಸಲಾದ ಸ್ವತಂತ್ರ ತಜ್ಞರ ಗುಂಪಿನ ಶಿಫಾರಸುಗಳಿಗೆ ಅನುಗುಣವಾಗಿ MDBಗಳನ್ನು ಬಲಪಡಿಸುವ ಮತ್ತು ಸುಧಾರಿಸುವ ಕಾರ್ಯದಲ್ಲಿ ಭಾಗವಹಿಸುವುದನ್ನು ಮುಂದುವರಿಸಲು ಕೇಂದ್ರ ಹಣಕಾಸು ಸಚಿವರು AIIBಯನ್ನು ಪ್ರೋತ್ಸಾಹಿಸಿದರು. ಇದರಲ್ಲಿ MDBಗಳು ಹೆಚ್ಚಿನ ಪರಿಣಾಮ ಮತ್ತು ಪ್ರಮಾಣಕ್ಕಾಗಿ ಒಂದು ವ್ಯವಸ್ಥೆಯಾಗಿ ಒಟ್ಟಾಗಿ ಕೆಲಸ ಮಾಡಲು ಕರೆ ನೀಡಲಾಗಿದೆ.
ಸಮಕಾಲೀನ ಸವಾಲುಗಳನ್ನು ಎದುರಿಸಲು ಎಂಡಿಬಿಗಳು 'ಉದ್ದೇಶಕ್ಕೆ ಯೋಗ್ಯವಾಗಿವೆ' ಎಂದು ಖಚಿತಪಡಿಸಿಕೊಳ್ಳಲು ಭಾರತವು ಎಂಡಿಬಿಗಳಲ್ಲಿನ ಆಡಳಿತ ಸುಧಾರಣೆಗಳಿಗೆ ಬದ್ಧವಾಗಿದೆ ಎಂದು ಶ್ರೀಮತಿ ಸೀತಾರಾಮನ್ ಹೇಳಿದರು. ಅದೇ ಸಮಯದಲ್ಲಿ ಎಲ್ಲಾ ಸದಸ್ಯರ ಅಗತ್ಯಗಳಿಗೆ, ವಿಶೇಷವಾಗಿ ಕಡಿಮೆ ಆದಾಯದ ದೇಶ ((LIC)ಗಳ ಅಗತ್ಯಗಳಿಗೆ ಸ್ಪಂದಿಸುತ್ತದೆ ಎಂದು ಹೇಳಿದರು.
ಸಭೆಗೂ ಮುನ್ನ, ನಿಯೋಗವು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ADB) AIIB ಮತ್ತು ನ್ಯೂ ಡೆವಲಪ್ ಮೆಂಟ್ ಬ್ಯಾಂಕ್ (NDB) ನಿಂದ ಹಣಕಾಸು ಒದಗಿಸುತ್ತಿರುವ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (RRTS) ಯೋಜನೆಗೆ ಭೇಟಿ ನೀಡಿತು. ನಿಯೋಗವು ಬೆಂಗಳೂರಿನ ಇತರ ಯೋಜನಾ ಸ್ಥಳಗಳಿಗೆ ಭೇಟಿ ನೀಡಲಿದೆ ಮತ್ತು ಪ್ರಮುಖ ತಂತ್ರಜ್ಞಾನ ಕ್ಷೇತ್ರದ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಲಿದೆ. ಸಹಯೋಗ ಮತ್ತು ಹೂಡಿಕೆಗೆ ಹೆಚ್ಚಿನ ಅವಕಾಶಗಳನ್ನು ಅನ್ವೇಷಿಸುವಾಗ ಭಾರತದ ಅಭಿವೃದ್ಧಿ ಆದ್ಯತೆಗಳು, ಹೂಡಿಕೆಯ ಭೂದೃಶ್ಯ ಮತ್ತು ಕಾರ್ಯಾಚರಣೆಯ ಸವಾಲುಗಳ ಮೇಲೆ ಕೇಂದ್ರೀಕರಿಸುವ ಮಾಹಿತಿ ಮತ್ತು ಅನುಭವಗಳ ದೃಢವಾದ ವಿನಿಮಯಕ್ಕೆ ಅನುಕೂಲವಾಗುವಂತೆ ಭಾರತದ ಇತರ ಬಹುಪಕ್ಷೀಯ ಮತ್ತು ದ್ವಿಪಕ್ಷೀಯ ಏಜೆನ್ಸಿಗಳು ಮತ್ತು ಯೋಜನಾ ಅನುಷ್ಠಾನ ಏಜೆನ್ಸಿಗಳೊಂದಿಗೆ ದುಂಡು ಮೇಜಿನ ಚರ್ಚೆಯಲ್ಲಿ ನಿಯೋಗವು ಭಾಗವಹಿಸಿತು.
*****
(Release ID: 2072650)
Visitor Counter : 19