ಹಣಕಾಸು ಸಚಿವಾಲಯ
azadi ka amrit mahotsav

ಉತ್ತರಾಖಂಡದಲ್ಲಿ ನೀರು ಸರಬರಾಜು, ನೈರ್ಮಲ್ಯ, ನಗರ ಸಂಚಾರ ಮತ್ತು ಇತರ ನಗರ ಸೇವೆಗಳನ್ನು ಉನ್ನತೀಕರಿಸಲು ಭಾರತ ಸರ್ಕಾರ ಮತ್ತು ಎಡಿಬಿ $200 ದಶಲಕ್ಷ ಸಾಲಕ್ಕೆ ಸಹಿ

Posted On: 06 NOV 2024 3:44PM by PIB Bengaluru

ಉತ್ತರಾಖಂಡ್ ರಾಜ್ಯದಲ್ಲಿ ನೀರು ಸರಬರಾಜು, ನೈರ್ಮಲ್ಯ, ನಗರ ಸಂಚಾರ ಮತ್ತು ಇತರ ನಗರ ಸೇವೆಗಳ ಉನ್ನತೀಕರಣಕ್ಕೆ ನೆರವು ನೀಡಲು ಭಾರತ ಸರ್ಕಾರ ಮತ್ತು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ) ಇಂದು 200 ದಶಲಕ್ಷ ಡಾಲರ್ ಮೊತ್ತದ ಸಾಲಕ್ಕೆ ಸಹಿ ಹಾಕಿವೆ.

ಉತ್ತರಾಖಂಡ್ ವಾಸಯೋಗ್ಯ ಸುಧಾರಣಾ ಯೋಜನೆಗಾಗಿ ಸಾಲ ಒಪ್ಪಂದಕ್ಕೆ ಸಹಿ ಮಾಡಿದವರು ಭಾರತ ಸರ್ಕಾರದ  ಹಣಕಾಸು ಸಚಿವಾಲಯದಡಿಯ ಆರ್ಥಿಕ ವ್ಯವಹಾರಗಳ ಇಲಾಖೆಯ ಜಂಟಿ ಕಾರ್ಯದರ್ಶಿಯಾದ  ಜೂಹಿ ಮುಖರ್ಜಿ ಮತ್ತು ಎಡಿಬಿಯ ಭಾರತ ನಿವಾಸಿ ಮಿಷನ್‌ನ ದೇಶದ ನಿರ್ದೇಶಕರಾದ  ಮಿಯೋ ಓಕಾ.

ಈ ಯೋಜನೆಯು ಭಾರತ ಸರ್ಕಾರದ ನಗರಾಭಿವೃದ್ಧಿ ಕಾರ್ಯಸೂಚಿಯೊಂದಿಗೆ ಹಾಗೂ ನಗರಗಳಲ್ಲಿ ವಾಸಯೋಗ್ಯ ವಾತಾವರಣ ಸುಧಾರಿಸುವ ಜೊತೆಗೆ ಸುಸ್ಥಿರತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ನಗರ ಸೇವೆಗಳನ್ನು ವೃದ್ಧಿಸುವ ಉತ್ತರಾಖಂಡ ಸರ್ಕಾರದ ಉಪಕ್ರಮಗಳೊಂದಿಗೆ ಹೊಂದಿಕೆಯಾಗುತ್ತದೆ ಎಂದು ಮುಖರ್ಜಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಯೋಜನೆಯು ಉತ್ತರಾಖಂಡದ ಜನರಿಗೆ ಸುರಕ್ಷತೆ ಮತ್ತು ಆರೋಗ್ಯವನ್ನು ಖಾತರಿಪಡಿಸುವ, ಪ್ರವಾಹ ಮತ್ತು ಭೂಕುಸಿತಗಳಂತಹ ಹವಾಮಾನ ಮತ್ತು ನೈಸರ್ಗಿಕ ಅಪಾಯಗಳನ್ನು‌ ಎದುರಿಸಬಲ್ಲ ನಗರ ಮೂಲಸೌಕರ್ಯವನ್ನು ರೂಪಿಸುವ ಗುರಿಯನ್ನು ಹೊಂದಿದೆ" ಎಂದು ಮಿಯೋ ಹೇಳಿದ್ದಾರೆ.  "ಇದು ಯೋಜನಾ ನಿರ್ವಹಣೆ, ಹವಾಮಾನ ಮತ್ತು ವಿಪತ್ತು-ನಿರೋಧಕ ಯೋಜನೆ, ಸ್ವಂತ ಆದಾಯ ಮೂಲ ಸೃಜನೆ ಮತ್ತು ಲಿಂಗ ಸಮಾನತೆಗಳಲ್ಲಿ ರಾಜ್ಯ ಏಜೆನ್ಸಿಗಳ ಸಾಮರ್ಥ್ಯವನ್ನು ಸಹ ರೂಪಿಸಲಿದೆ."

ಈ ಯೋಜನೆಯು ರಾಜ್ಯದ ಆರ್ಥಿಕ ಕೇಂದ್ರವಾದ ಹಲ್ದ್ವಾನಿಯಲ್ಲಿ ಸಾರಿಗೆ, ನಗರ ಸಂಚಾರ, ಒಳಚರಂಡಿ, ಪ್ರವಾಹ ನಿರ್ವಹಣೆ ಮತ್ತು ಒಟ್ಟಾರೆ ಸಾರ್ವಜನಿಕ ಸೇವೆಗಳನ್ನು ವೃದ್ಧಿಸಲಿದೆ.  ಹೆಚ್ಚುವರಿಯಾಗಿ, ಇದು ನಾಲ್ಕು ನಗರಗಳಾದ - ಚಂಪಾವತ್, ಕಿಚ್ಚಾ, ಕೋಟ್‌ದ್ವಾರ್ ಮತ್ತು ವಿಕಾಸ್ ನಗರದಲ್ಲಿ - ಸಮರ್ಥ ಮತ್ತು ಹವಾಮಾನ-ಸ್ಥಿತಿಸ್ಥಾಪಕ ನೀರು ಸರಬರಾಜು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಮೂಲಕ ನೀರಿನ ಪೂರೈಕೆಯನ್ನು ಸುಧಾರಿಸಲಿದೆ.

ಹಲ್ದ್ವಾನಿಯಲ್ಲಿ, ಯೋಜನೆಯಡಿ 16 ಕಿಮೀ ಎಲ್ಲಾ ಹವಾಮಾನಗಳಿಗೂ‌ ಹೊಂದಿಕೆಯಾಗುವ ರಸ್ತೆಗಳನ್ನು ಅಭಿವೃದ್ಧಿಪಡಿಸಲಿದೆ, ಚತುರ ಸಂಚಾರ ನಿರ್ವಹಣಾ ವ್ಯವಸ್ಥೆಯನ್ನು ಸ್ಥಾಪಿಸಿದೆ, ಸಂಕುಚಿತ ನೈಸರ್ಗಿಕ ಅನಿಲ ಬಸ್‌ಗಳನ್ನು ನಿಯೋಜಿಸಲಿದೆ ಮತ್ತು ಪ್ರಾಯೋಗಿಕವಾಗಿ ಎಲೆಕ್ಟ್ರಿಕ್ ಬಸ್‌ ಸೇವೆ ನೀಡಲಿದೆ.  ವಿಪತ್ತುಗಳ ವಿರುದ್ಧ ನಗರವನ್ನು ಸನ್ನದ್ಧಗೊಳಿಸಲು, ಯೋಜನೆಯಡಿ ಪ್ರವಾಹ ನಿರ್ವಹಣೆಯನ್ನು ಸುಧಾರಿಸಲು ಮತ್ತು ಶೀಘ್ರ ಮುನ್ನೆಚ್ಚರಿಕಾ ವ್ಯವಸ್ಥೆಯನ್ನು ಅಳವಡಿಸಲು 36 ಕಿಮೀ ಮಳೆನೀರು ಗುಂಡಿ ಮತ್ತು ರಸ್ತೆಬದಿಯ ಚರಂಡಿಗಳನ್ನು ನಿರ್ಮಿಸಲಾಗುತ್ತದೆ.  ಸಾರ್ವಜನಿಕ ಸೇವಾ ವ್ಯವಸ್ಥೆಯನ್ನು ಸುಧಾರಿಸಲು ಹಸಿರು ಪ್ರಮಾಣೀಕೃತ ಆಡಳಿತ ಸಂಕೀರ್ಣ ಮತ್ತು ಬಸ್ ಟರ್ಮಿನಲ್ ಅನ್ನು ನಿರ್ಮಿಸಲಾಗುವುದು.

ಸ್ಮಾರ್ಟ್ ವಾಟರ್ ಮೀಟರ್‌ಗಳು, 26 ಕೊಳವೆಬಾವಿಗಳು, ಹೊಸ ಜಲಾಶಯಗಳು ಮತ್ತು ದಿನವೊಂದರಲ್ಲಿ 3.5 ದಶಲಕ್ಷ-ಲೀಟರ್ ನೀರನ್ನು ಸಂಸ್ಕರಿಸುವ ಘಟಕದೊಂದಿಗೆ 1,024 ಕಿಮೀ ಹವಾಮಾನ ಸ್ಥಿತಿಸ್ಥಾಪಕ ಅಂದರೆ ಎಲ್ಲಾ ಬಗೆಯ ಹವಾಮಾನಗಳಿಗೂ ಹೊಂದಿಕೆಯಾಗುವ ಪೈಪ್‌ಲೈನ್‌ಗಳನ್ನು ನಿರ್ಮಿಸುವ ಮೂಲಕ ಇತರ ನಾಲ್ಕು ನಗರಗಳಲ್ಲಿ ಜಲ ಸೇವೆಯನ್ನು ಶೇಕಡ 100 ರಷ್ಟು‌ ಒದಗಿಸುವ  ಗುರಿಯನ್ನು ಯೋಜನೆ ಹೊಂದಿದೆ. ಒಳಚರಂಡಿ ಸಂಸ್ಕರಣಾ ಸೌಲಭ್ಯಗಳಿಂದ ವಿಕಾಸ್ ನಗರದಲ್ಲಿ ನೈರ್ಮಲ್ಯ  ಸುಧಾರಿಸಲಿದ್ದು ಸುಮಾರು 2,000 ಮನೆಗಳಿಗೆ ಅನುಕೂಲವಾಗಲಿದೆ.

ಈ ಯೋಜನೆಯು ಮಹಿಳೆಯರಿಗೆ ಜೀವನೋಪಾಯದ ಕೌಶಲ್ಯ ತರಬೇತಿಯಂತಹ ಉಪಕ್ರಮಗಳನ್ನು ಪರಿಚಯಿಸುತ್ತದೆ, ಉದಾಹರಣೆಗೆ ಬಸ್ ಗಳ ಚಾಲನಾ ತರಬೇತಿ, ಬಸ್ ಟಿಕೆಟಿಂಗ್, ಎಲೆಕ್ಟ್ರಿಕ್ ಚಾರ್ಜಿಂಗ್ ಕೇಂದ್ರಗಳ ಕಾರ್ಯಾಚರಣೆ ಇತ್ಯಾದಿ. ನೀರು ಸರಬರಾಜು ವ್ಯವಸ್ಥೆಗಳ ಮೇಲ್ವಿಚಾರಣೆಗೆ ಮಹಿಳೆಯರಿಗೆ ಅವಕಾಶ ನೀಡಿದಲ್ಲಿ, ಈ ಯೋಜನೆಯು ದುರ್ಬಲ ಕುಟುಂಬಗಳ ಮಹಿಳೆಯರೂ ಸೇರಿದಂತೆ ಮಹಿಳೆಯರು ನೀರು ಸರಬರಾಜು ಮತ್ತು ನೈರ್ಮಲ್ಯ ಸೇವೆಗಳನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಯುರೋಪಿಯನ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ ಸಮಾನಾಂತರ ಆಧಾರದ ಮೇಲೆ $191 ದಶಲಕ್ಷದಷ್ಟು ಮೊತ್ತವನ್ನು ಯೋಜನೆಗೆ ಸಹ-ಸಾಲವಾಗಿ ನೀಡುತ್ತಿದೆ.

 

*****


(Release ID: 2071785) Visitor Counter : 18


Read this release in: English , Urdu , Hindi , Tamil , Telugu