ಆಯುಷ್
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಧನ್ವಂತರಿ ಜಯಂತಿ ಮತ್ತು 9ನೇ ಆಯುರ್ವೇದ ದಿನದ ಸಂದರ್ಭದಲ್ಲಿ ಆಯುಷ್ ಸಚಿವಾಲಯದ ಅನೇಕ ಯೋಜನೆಗಳಿಗೆ ಚಾಲನೆ ನೀಡಿದರು
ದೆಹಲಿಯಲ್ಲಿ ಭಾರತದ ಮೊದಲ ಅಖಿಲ ಭಾರತ ಆಯುರ್ವೇದ ಸಂಸ್ಥೆಯ ಎರಡನೇ ಹಂತವನ್ನು ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ಮೋದಿ; ಯೋಜನೆಯ ಒಟ್ಟು ವೆಚ್ಚ ₹274.58 ಕೋಟಿ
ನಾಗರಿಕರಲ್ಲಿ ಆರೋಗ್ಯ ಜಾಗೃತಿಯನ್ನು ಉತ್ತೇಜಿಸಲು "ದೇಶ್ ಕಾ ಪ್ರಕೃತಿ ಪರೀಕ್ಷಣ ಅಭಿಯಾನ್" ಎಂಬ ರಾಷ್ಟ್ರವ್ಯಾಪಿ ಅಭಿಯಾನಕ್ಕೆ ಪ್ರಧಾನಮಂತ್ರಿ ಚಾಲನೆ
ಪ್ರಧಾನಮಂತ್ರಿಯವರು ಆಯುಷ್ ನಲ್ಲಿ 4 ಉತ್ಕೃಷ್ಟತಾ ಕೇಂದ್ರಗಳನ್ನು ಉದ್ಘಾಟಿಸಿದರು
ಒಡಿಶಾ ಮತ್ತು ಛತ್ತೀಸ್‌ಗಢದಲ್ಲಿ 2 ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಸ್ಥೆಗಳಿಗೆ ಪ್ರಧಾನಿಯವರು ಶಂಕುಸ್ಥಾಪನೆ ನೆರವೇರಿಸಿದರು
ಆಯುರ್ವೇದದ ಜ್ಞಾನವನ್ನು ಆಧುನಿಕ ಔಷಧದೊಂದಿಗೆ ಸಂಯೋಜಿಸುವ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಹೊಸ ಅಧ್ಯಾಯದ ಆರಂಭಕ್ಕೆ ದೇಶ ಸಾಕ್ಷಿಯಾಗಿದೆ: ಶ್ರೀ ನರೇಂದ್ರ ಮೋದಿ
ಆರೋಗ್ಯ ಕ್ಷೇತ್ರದಲ್ಲಿ ಆಯುರ್ವೇದದ ಜಾಗತಿಕ ಪ್ರಾಮುಖ್ಯತೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಪ್ರಯತ್ನಗಳು ಗಣನೀಯವಾಗಿ ಕೊಡುಗೆ ನೀಡಿವೆ: ಶ್ರೀ ಪ್ರತಾಪರಾವ್ ಜಾಧವ್, ರಾಜ್ಯ ಸಚಿವರು (ಸ್ವತಂತ್ರ ಪ್ರಭಾರ) ಆಯುಷ್
Posted On:
29 OCT 2024 8:31PM by PIB Bengaluru
ಧನ್ವಂತರಿ ಜಯಂತಿ ಹಾಗೂ 9ನೇ ಆಯುರ್ವೇದ ದಿನಾಚರಣೆಯ ಸುಸಂದರ್ಭದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ನವದೆಹಲಿಯ ಅಖಿಲ ಭಾರತ ಆಯುರ್ವೇದ ಸಂಸ್ಥೆಯಲ್ಲಿ (ಎಐಐಎ) ಸುಮಾರು ₹12,850 ಕೋಟಿ ಮೊತ್ತದ ಹಲವಾರು ಆರೋಗ್ಯ ಕ್ಷೇತ್ರದ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ ಮಾಡಿದರು. ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಜೆ.ಪಿ. ನಡ್ಡಾ, ಕೇಂದ್ರ ಕಾರ್ಮಿಕ, ಉದ್ಯೋಗ, ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ, ಆಯುಷ್ ಇಲಾಖೆಯ ಕಾರ್ಯದರ್ಶಿ ವೈದ್ಯ ರಾಜೇಶ್ ಕೋಟೇಚಾ, ಆಯುಷ್ ಸಲಹೆಗಾರರಾದ ಡಾ. ಮನೋಜ್ ನೇಸರಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಆಯುಷ್ ಸಚಿವಾಲಯದ ಅಡಿಯಲ್ಲಿ ಆರಂಭಿಸಲಾದ ಯೋಜನೆಗಳ ಪೈಕಿ, ಪ್ರಧಾನಮಂತ್ರಿಗಳು ಭಾರತದ ಮೊದಲ ಅಖಿಲ ಭಾರತ ಆಯುರ್ವೇದ ಸಂಸ್ಥೆಯ ಎರಡನೇ ಹಂತವನ್ನು ಉದ್ಘಾಟಿಸಿದರು. ₹258.73 ಕೋಟಿಗಳ ಒಟ್ಟು ವೆಚ್ಚದ ಈ ಮಹತ್ವಪೂರ್ಣ ಯೋಜನೆಯಲ್ಲಿ 150 ಹಾಸಿಗೆಗಳ ಪಂಚಕರ್ಮ ಆಸ್ಪತ್ರೆ, ಔಷಧಿ ತಯಾರಿಕೆಗಾಗಿ ಆಯುರ್ವೇದಿಕ್ ಔಷಧಾಲಯ, ಕ್ರೀಡಾ ವೈದ್ಯಕೀಯ ಘಟಕ, ಕೇಂದ್ರೀಯ ಗ್ರಂಥಾಲಯ, ಮಾಹಿತಿ ತಂತ್ರಜ್ಞಾನ ಮತ್ತು ಸ್ಟಾರ್ಟ್-ಅಪ್ ಕೇಂದ್ರ, 500 ಆಸನಗಳ ಸಭಾಂಗಣ, ಹಾಗೂ ಸಾಮಾನ್ಯ ಮತ್ತು ಅಂತಾರಾಷ್ಟ್ರೀಯ ಅತಿಥಿಗಳಿಗಾಗಿ ಅತಿಥಿ ಗೃಹಗಳು ಸೇರಿವೆ.
ಭಾರತೀಯ ಆರೋಗ್ಯ ಮತ್ತು ಯೋಗಕ್ಷೇಮ ಪರಿಹಾರಗಳಲ್ಲಿ, ವಿಶೇಷವಾಗಿ ಯೋಗದಲ್ಲಿ ಅಂತಾರಾಷ್ಟ್ರೀಯ ಸಮುದಾಯದ ಹೆಚ್ಚುತ್ತಿರುವ ಆಸಕ್ತಿಯನ್ನು ಬಳಸಿಕೊಳ್ಳಲು ಮತ್ತು ಈ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಲು, ಪ್ರಧಾನಮಂತ್ರಿಗಳು ಇತರ ಪ್ರಮುಖ ಯೋಜನೆಗಳೊಂದಿಗೆ ಖೋರ್ಡಾ (ಒಡಿಶಾ) ಮತ್ತು ರಾಯಪುರ (ಛತ್ತೀಸ್ ಗಢ)ದಲ್ಲಿ ಎರಡು ಕೇಂದ್ರೀಯ ಯೋಗ ಮತ್ತು ನೈಸರ್ಗಿಕ ಚಿಕಿತ್ಸಾ ಸಂಶೋಧನಾ ಸಂಸ್ಥೆಗಳ (CRIYNs) ಶಂಕುಸ್ಥಾಪನೆ ನೆರವೇರಿಸಿದರು. ಇದರೊಂದಿಗೆ, ಪ್ರಧಾನಮಂತ್ರಿಗಳು ಆರೋಗ್ಯ ಸಂಶೋಧನೆ ಮತ್ತು ನಾವೀನ್ಯತೆಯ ನಿರ್ದಿಷ್ಟ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡ ನಾಲ್ಕು ಆಯುಷ್ ಉತ್ಕೃಷ್ಟತಾ ಕೇಂದ್ರಗಳನ್ನು (CoEs)ಉದ್ಘಾಟಿಸಿದರು: ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಮಧುಮೇಹ ಮತ್ತು ಚಯಾಪಚಯ ಅಸ್ವಸ್ಥತೆಗಳಿಗಾಗಿ ಉತ್ಕೃಷ್ಟತಾ ಕೇಂದ್ರ - ಪೂರ್ವ ಮಧುಮೇಹ ಮತ್ತು ಮಧುಮೇಹ ಸಂಶೋಧನೆ ಹಾಗೂ ಆಯುರ್ವೇದಿಕ್ ಔಷಧ ಮಾನ್ಯತೆಯ ಮೇಲೆ ಕೇಂದ್ರೀಕೃತವಾಗಿದೆ; ಐಐಟಿ ದೆಹಲಿಯಲ್ಲಿ ಸುಸ್ಥಿರ ಆಯುಷ್ ಗಾಗಿ ಪ್ರಗತಿ ಕೇಂದ್ರವು ಸ್ಥಾಪನೆಗೊಂಡಿದ್ದು, ಇದು ಆಧುನಿಕ ತಂತ್ರಜ್ಞಾನ ಪರಿಹಾರಗಳ ಅಭಿವೃದ್ಧಿ, ಸ್ಟಾರ್ಟ್-ಅಪ್ ಗಳಿಗೆ ಬೆಂಬಲ ಹಾಗೂ ರಸೌಷಧಿಗಳಿಗೆ ನಿವ್ವಳ-ಶೂನ್ಯ ಸಮರ್ಥನೀಯ ಪರಿಹಾರಗಳನ್ನು ರಚಿಸಲು ಸಮರ್ಪಿಸಲಾಗಿದೆ; CDRI ಲಕ್ನೋದಲ್ಲಿ ಆಯುರ್ವೇದದ ಮೂಲಭೂತ ಮತ್ತು ಅನುವರ್ತಿತ ಸಂಶೋಧನೆಗಾಗಿ ಪ್ರಗತಿ ಕೇಂದ್ರವು ಸ್ಥಾಪನೆಯಾಗಿದ್ದು, ಇದು ಅಶ್ವಗಂಧದಂತಹ ಆಯುರ್ವೇದ ಸಸ್ಯಶಾಸ್ತ್ರಗಳಲ್ಲಿ ಸುಧಾರಿತ ಸಂಶೋಧನೆಯ ಮೇಲೆ ಕೇಂದ್ರೀಕರಿಸಿದೆ; ನವದೆಹಲಿಯ JNU ನಲ್ಲಿರುವ ಆಯುರ್ವೇದ ಮತ್ತು ಸಿಸ್ಟಮ್ಸ್ ಮೆಡಿಸಿನ್‌ನ ಶ್ರೇಷ್ಠತೆಯ ಕೇಂದ್ರವು ಸಿಸ್ಟಮ್ಸ್ ಮೆಡಿಸಿನ್ ಅನ್ನು ಬಳಸಿಕೊಂಡು ಸಂಧಿವಾತಕ್ಕೆ ಆಯುರ್ವೇದ ಚಿಕಿತ್ಸೆಗಳ ಆಣ್ವಿಕ ಕಾರ್ಯವಿಧಾನಗಳನ್ನು ಸಂಶೋಧಿಸುವ ಗುರಿಯನ್ನು ಹೊಂದಿದೆ.
ಪ್ರಧಾನಮಂತ್ರಿಗಳು "ದೇಶ್ ಕಾ ಪ್ರಕೃತಿ ಪರೀಕ್ಷಣ್ ಅಭಿಯಾನ" ಎಂಬ ರಾಷ್ಟ್ರವ್ಯಾಪಿ ಅಭಿಯಾನವನ್ನು ಆರಂಭಿಸಿದರು. ಈ ಅಭಿಯಾನವು ಆರೋಗ್ಯ ಜಾಗೃತಿಯನ್ನು ಪ್ರೋತ್ಸಾಹಿಸುವುದರ ಜೊತೆಗೆ ದೈನಂದಿನ ಜೀವನದಲ್ಲಿ ಸಮಗ್ರ ಯೋಗಕ್ಷೇಮದ ಮಹತ್ವವನ್ನು ಸಾರುತ್ತದೆ. ಆಯುಷ್ ಸಚಿವಾಲಯದ ಕೇಂದ್ರ ಸ್ವತಂತ್ರ ಸಚಿವರಾದ ಶ್ರೀ ಪ್ರತಾಪರಾವ್ ಜಾಧವ್ ರವರ ನೇತೃತ್ವದಲ್ಲಿ, 4,70,000 ಸಮರ್ಪಿತ ಸ್ವಯಂಸೇವಕರ ಸಹಯೋಗದೊಂದಿಗೆ ನಡೆಯಲಿರುವ ಈ ಅಭಿಯಾನವು ನಾಗರಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಪ್ರಯತ್ನಗಳಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತರಲು ಉದ್ದೇಶಿಸಿದೆ. ಅಲ್ಲದೆ, ಈ ಅಭಿಯಾನವು ಹಲವಾರು ಗಿನ್ನೆಸ್ ವಿಶ್ವ ದಾಖಲೆಗಳನ್ನು ನಿರ್ಮಿಸಲು ಪ್ರಯತ್ನಿಸಲಿದೆ.
ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಗಳು, ಕಳೆದ ದಶಕದಲ್ಲಿ, ಆಯುರ್ವೇದದ ಜ್ಞಾನವನ್ನು ಆಧುನಿಕ ಔಷಧದೊಂದಿಗೆ ಸಂಯೋಜಿಸುವ ಮೂಲಕ ದೇಶವು ಆರೋಗ್ಯ ಕ್ಷೇತ್ರದಲ್ಲಿ ಹೊಸ ಅಧ್ಯಾಯದ ಆರಂಭಕ್ಕೆ ಸಾಕ್ಷಿಯಾಗಿದೆ ಎಂದು ಒತ್ತಿ ಹೇಳಿದರು. ಅಖಿಲ ಭಾರತ ಆಯುರ್ವೇದ ಸಂಸ್ಥೆಯು ಈ ಹೊಸ ಅಧ್ಯಾಯದ ಕೇಂದ್ರಬಿಂದುವಾಗಿದೆ ಎಂದು ಅವರು ಹೇಳಿದರು. ಏಳು ವರ್ಷಗಳ ಹಿಂದೆ, ಆಯುರ್ವೇದ ದಿನದಂದು, ಸಂಸ್ಥೆಯ ಮೊದಲ ಹಂತವನ್ನು ದೇಶಕ್ಕೆ ಸಮರ್ಪಿಸುವ ಸೌಭಾಗ್ಯ ತಮಗೆ ದೊರೆತಿತ್ತು ಮತ್ತು ಇಂದು ಭಗವಾನ್ ಧನ್ವಂತರಿ ಅವರ ಆಶೀರ್ವಾದದಿಂದ ಎರಡನೇ ಹಂತವನ್ನು ಉದ್ಘಾಟಿಸುತ್ತಿದ್ದೇನೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.
ದೇಶದ ಆರೋಗ್ಯ ರಕ್ಷಣೆಯಲ್ಲಿ ಈಗಾಗಲೇ 7.5 ಲಕ್ಷ ನೋಂದಾಯಿತ ಆಯುಷ್ ವೈದ್ಯರು ತಮ್ಮ ಕೊಡುಗೆ ನೀಡುತ್ತಿದ್ದಾರೆ ಎಂದು ಪ್ರಧಾನಮಂತ್ರಿಗಳು ತಿಳಿಸಿದರು. ಈ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದ ಅವರು, ಭಾರತದಲ್ಲಿ ವೈದ್ಯಕೀಯ ಮತ್ತು ಯೋಗಕ್ಷೇಮ ಪ್ರವಾಸೋದ್ಯಮಕ್ಕೆ (ಮೆಡಿಕಲ್ ಮತ್ತು ವೆಲ್‌ನೆಸ್ ಟೂರಿಸಂ) ಹೆಚ್ಚುತ್ತಿರುವ ಬೇಡಿಕೆಯ ಬಗ್ಗೆ ಪ್ರಸ್ತಾಪಿಸಿದರು. ಭಾರತದಲ್ಲಿ ಮತ್ತು ವಿದೇಶಗಳಲ್ಲಿ ತಡೆಗಟ್ಟುವ ಹೃದಯ ವೈದ್ಯಶಾಸ್ತ್ರ (ಪ್ರಿವೆಂಟಿವ್ ಕಾರ್ಡಿಯಾಲಜಿ), ಆಯುರ್ವೇದಿಕ್ ಮೂಳೆ ಚಿಕಿತ್ಸೆ (ಆಯುರ್ವೇದಿಕ್ ಆರ್ಥೋಪೆಡಿಕ್ಸ್), ಮತ್ತು ಆಯುರ್ವೇದಿಕ್ ಪುನರ್ವಸತಿ ಕೇಂದ್ರಗಳಂತಹ ವಿಸ್ತರಿಸುತ್ತಿರುವ ಕ್ಷೇತ್ರಗಳಿಗಾಗಿ ಯುವಕರು ಮತ್ತು ಆಯುಷ್ ವೈದ್ಯರು ಸಿದ್ಧರಾಗಬೇಕಿದೆ ಎಂದು ಅವರು ಹೇಳಿದರು. ಅಲ್ಲದೆ "ಆಯುಷ್ ವೈದ್ಯರಿಗೆ ಅಪಾರ ಅವಕಾಶಗಳು ಸೃಷ್ಟಿಯಾಗುತ್ತಿವೆ" ಎಂದು ಅವರು ತಿಳಿಸಿದರು.
ಅಶ್ವಗಂಧ, ಅರಿಶಿನ ಮತ್ತು ಕರಿಮೆಣಸಿನಂತಹ ಸಾಂಪ್ರದಾಯಿಕ ಔಷಧೀಯ ಗಿಡಮೂಲಿಕೆಗಳನ್ನು ಹೆಚ್ಚಿನ ಪರಿಣಾಮದ ವೈಜ್ಞಾನಿಕ ಅಧ್ಯಯನಗಳ ಮೂಲಕ ಮೌಲ್ಯೀಕರಿಸುವ ಮಹತ್ವವನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಒತ್ತಿ ಹೇಳಿದರು. "ನಮ್ಮ ಸಾಂಪ್ರದಾಯಿಕ ಆರೋಗ್ಯ ವ್ಯವಸ್ಥೆಗಳ ಪ್ರಯೋಗಾಲಯ ದೃಢೀಕರಣವು ಈ ಔಷಧೀಯ ಸಸ್ಯಗಳ ಮೌಲ್ಯವನ್ನು ಹೆಚ್ಚಿಸುವುದಷ್ಟೇ ಅಲ್ಲದೆ, ಗಣನೀಯ ಮಾರುಕಟ್ಟೆಯನ್ನೂ ಸೃಷ್ಟಿಸುತ್ತದೆ" ಎಂದು ಅವರು ಹೇಳಿದರು. ಅಶ್ವಗಂಧಕ್ಕೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನಿಸಿದರು, ಇದು ಈ ದಶಕದ ಅಂತ್ಯದ ವೇಳೆಗೆ 2.5 ಶತಕೋಟಿ ಡಾಲರ್ ತಲುಪುವ ನಿರೀಕ್ಷೆಯಿದೆ.
ಆಯುಷ್ ನ ಯಶಸ್ಸು ಆರೋಗ್ಯ ವಲಯವನ್ನು ಮಾತ್ರವಲ್ಲದೆ ಆರ್ಥಿಕತೆಯನ್ನೂ ಪರಿವರ್ತಿಸುತ್ತಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಆಯುಷ್ ಉತ್ಪಾದನಾ ವಲಯವು 2014 ರಲ್ಲಿ 3 ಬಿಲಿಯನ್ ಯುಎಸ್ ಡಾಲರ್ ನಿಂದ ಇಂದು ಸುಮಾರು 24 ಬಿಲಿಯನ್ ಯುಎಸ್ ಡಾಲರ್ ಗೆ ಏರಿದೆ. ಇದು ಕೇವಲ 10 ವರ್ಷಗಳಲ್ಲಿ 8 ಪಟ್ಟು ಹೆಚ್ಚಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಆಯುಷ್ ಸಚಿವರು (ಸ್ವತಂತ್ರ ಉಸ್ತುವಾರಿ) ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವರಾದ ಶ್ರೀ ಪ್ರತಾಪರಾವ್ ಜಾಧವ್ ಅವರು, "ಆಯುರ್ವೇದದ ಸಾರವು 'ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯಾಃ' ಎಂಬ ತತ್ವದಲ್ಲಿ ಬೇರೂರಿದೆ. ಆಯುಷ್ ಕುರಿತು ಇತ್ತೀಚೆಗೆ ನಡೆಸಿದ ಸಮೀಕ್ಷೆಯು ಗ್ರಾಮೀಣ ಜನಸಂಖ್ಯೆಯ ಸುಮಾರು ಶೇಕಡಾ 95 ಮತ್ತು ನಗರ ಜನಸಂಖ್ಯೆಯ ಶೇಕಡಾ 96ರಷ್ಟು ಜನರು ಆಯುಷ್ ಬಗ್ಗೆ ತಿಳುವಳಿಕೆ ಹೊಂದಿರುವುದನ್ನು ತೋರಿಸಿದೆ. ಈ ಫಲಿತಾಂಶಗಳು ಅತ್ಯಂತ ಪ್ರೋತ್ಸಾಹದಾಯಕವಾಗಿವೆ, ಮತ್ತು ಈ ಜಾಗೃತಿ ಮುಂದುವರಿಯುತ್ತದೆ ಎಂಬ ಭರವಸೆ ನನಗಿದೆ. ಪ್ರಧಾನಮಂತ್ರಿಯವರೇ, ಇಂದು 150ಕ್ಕೂ ಹೆಚ್ಚು ದೇಶಗಳಲ್ಲಿ ಆಯುರ್ವೇದ ದಿನವನ್ನು ಆಚರಿಸಲಾಗುತ್ತಿದೆ ಎಂಬುದನ್ನು ತಿಳಿದು ನಿಮಗೆ ಸಂತೋಷವಾಗುತ್ತದೆ" ಎಂದರು. ಪ್ರಧಾನ ಮಂತ್ರಿಯವರ ಪ್ರಯತ್ನಗಳು ಆರೋಗ್ಯದಲ್ಲಿ ಆಯುರ್ವೇದದ ಜಾಗತಿಕ ಪ್ರಾಮುಖ್ಯತೆಗೆ ಗಮನಾರ್ಹ ಕೊಡುಗೆ ನೀಡಿವೆ ಮತ್ತು 2014 ರಿಂದ ಅವರ ಆದರ್ಶಪ್ರಾಯ ನಾಯಕತ್ವದಲ್ಲಿ ಆಯುರ್ವೇದವು ಹೊಸ ಎತ್ತರವನ್ನು ತಲುಪಿದೆ ಎಂದು ಆಯುಷ್ ಸಚಿವರು ಹೇಳಿದರು.
"ಆಯುರ್ವೇದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ವೃತ್ತಿಪರರ ಸಹಯೋಗದೊಂದಿಗೆ, ನಾವು 'ದೇಶ್ ಕಾ ಪ್ರಕೃತಿ ಪರೀಕ್ಷಣ್' ಎಂಬ ರಾಷ್ಟ್ರವ್ಯಾಪಿ ಅಭಿಯಾನವನ್ನು ಆರಂಭಿಸುತ್ತಿದ್ದೇವೆ ಎಂದು ಕೇಂದ್ರ ಆಯುಷ್ ಖಾತೆ ರಾಜ್ಯ ಸಚಿವರು ಹೇಳಿದರು. ಈ ಅಭಿಯಾನದ ಮೂಲಕ, ಆಯುರ್ವೇದದ ತತ್ವಗಳ ಆಧಾರದಲ್ಲಿ, ಪ್ರತಿಯೊಬ್ಬರಿಗೂ ಆದರ್ಶ ಜೀವನಶೈಲಿಯನ್ನು ವಿನ್ಯಾಸಗೊಳಿಸಬಹುದು ಮತ್ತು ರೋಗಗಳು ಕಾಣಿಸಿಕೊಳ್ಳುವ ಮೊದಲೇ ಅವುಗಳನ್ನು ತಡೆಯಲು ಅಪಾಯ ವಿಶ್ಲೇಷಣೆಯನ್ನು ನಡೆಸಬಹುದು. ಈ ದಿಕ್ಕಿನಲ್ಲಿ, ಸಕಾರಾತ್ಮಕ ದೃಷ್ಟಿಕೋನವು ನಮ್ಮ ಆರೋಗ್ಯ ಕ್ಷೇತ್ರವನ್ನು ಮರುವ್ಯಾಖ್ಯಾನಿಸಬಹುದು" ಎಂದು ಹೇಳಿದರು.
ಎಐಐಎ (AIIA)ಯ ಎರಡನೇ ಹಂತವನ್ನು ಉದ್ಘಾಟಿಸಿದ್ದಕ್ಕಾಗಿ ಪ್ರಧಾನಮಂತ್ರಿಯವರಿಗೆ ಧನ್ಯವಾದ ಅರ್ಪಿಸುತ್ತಾ, ಎಐಐಎ ನಿರ್ದೇಶಕರಾದ ಪ್ರೊ. (ಡಾ.) ತನುಜಾ ನೇಸರಿ ಅವರು, "ಆರೋಗ್ಯದ ದೇವತೆಯಾದ ಭಗವಾನ್ ಧನ್ವಂತರಿಯನ್ನು ಆರಾಧಿಸುವ ಈ ಶುಭ ಧನ್ವಂತರಿ ಜಯಂತಿಯ ದಿನದಂದು, ನಾವು ಅತ್ಯಂತ ದೊಡ್ಡ ಸಂಪತ್ತಾದ ಆರೋಗ್ಯಕ್ಕಾಗಿ ಆಶೀರ್ವಾದವನ್ನು ಬೇಡುತ್ತೇವೆ. ಇದಕ್ಕಾಗಿಯೇ ನಾವು ಧನ್ವಂತರಿ ದಿನವನ್ನು ಆಯುರ್ವೇದ ದಿನವನ್ನಾಗಿ ಆಚರಿಸುತ್ತೇವೆ - ಆರೋಗ್ಯ ಮತ್ತು ಸಂತೋಷ ಎರಡನ್ನೂ ತರುವ ಭಗವಾನ್ ಧನ್ವಂತರಿಯ ದಿವ್ಯ ಆಶೀರ್ವಾದವಾಗಿ ಆಯುರ್ವೇದವನ್ನು ಗುರುತಿಸುತ್ತೇವೆ. ಇಂದು, 4.5 ಎಕರೆ ವಿಸ್ತೀರ್ಣದಲ್ಲಿ ಹರಡಿರುವ ಮತ್ತು ಆಧುನಿಕ ಸೌಲಭ್ಯಗಳಿಂದ ಕೂಡಿರುವ ನಮ್ಮ ಸಂಸ್ಥೆಯ ಎರಡನೇ ಹಂತವನ್ನು ನಮ್ಮ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಉದ್ಘಾಟಿಸಿದ್ದು ಅಖಿಲ ಭಾರತ ಆಯುರ್ವೇದ ಸಂಸ್ಥೆಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಈ ಹಂತವು ₹275 ಕೋಟಿ ಹೂಡಿಕೆಯನ್ನು ಒಳಗೊಂಡಿದೆ" ಎಂದು ಹೇಳಿದರು.
ಅಖಿಲ ಭಾರತ ಆಯುರ್ವೇದ ಸಂಸ್ಥೆಯು (AIIA) 9ನೇ ಆಯುರ್ವೇದ ದಿನಾಚರಣೆಯ ನೋಡಲ್ ಏಜೆನ್ಸಿಯಾಗಿ ಆಯ್ಕೆಯಾಗಿದೆ. ಆಯುಷ್ ಸಚಿವಾಲಯದ ಅಡಿಯಲ್ಲಿ, AIIA ಈ ಕಾರ್ಯಕ್ರಮವನ್ನು ಆಚರಿಸಲು ಮ್ಯಾರಥಾನ್, ಸೆಲ್ಫಿ ಪಾಯಿಂಟ್ ಗಳು, ವೆಬಿನಾರ್ ಗಳು ಮತ್ತು ಆರೋಗ್ಯ ಶಿಬಿರಗಳು ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿತು.
*****
(Release ID: 2069928)
Visitor Counter : 16