ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್‌ನ ಅಮ್ರೇಲಿಯಲ್ಲಿ 4,900 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು


ಈ ಯೋಜನೆಗಳು ಜನರ ಜೀವನ ಸೌಕರ್ಯವನ್ನು ಗಮನಾರ್ಹವಾಗಿ ಸುಧಾರಿಸುತ್ತವೆ, ಈ ಪ್ರದೇಶದ ಬೆಳವಣಿಗೆ ವೇಗಗೊಳಿಸುತ್ತದೆ: ಪ್ರಧಾನಮಂತ್ರಿ

Posted On: 28 OCT 2024 7:45PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್‌ನ ಅಮ್ರೇಲಿಯಲ್ಲಿಂದು 4,900 ಕೋಟಿ ರೂಪಾಯಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು. ಇಂದಿನ ಅಭಿವೃದ್ಧಿ ಯೋಜನೆಗಳು ರೈಲು, ರಸ್ತೆ, ಜಲ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳನ್ನು ಒಳಗೊಂಡಿವೆ. ರಾಜ್ಯದ ಅಮ್ರೇಲಿ, ಜಾಮ್‌ನಗರ, ಮೊರ್ಬಿ, ದೈವಭೂಮಿ ದ್ವಾರಕಾ, ಜುನಾಗಢ್, ಪೋರಬಂದರ್, ಕಚ್ ಮತ್ತು ಬೊಟಾಡ್ ಜಿಲ್ಲೆಗಳ ನಾಗರಿಕರಿಗೆ ಪ್ರಯೋಜನ ನೀಡುತ್ತವೆ.

ನಂತರ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಧನ ತ್ರಯೋದಶಿ ಮತ್ತು ದೀಪಾವಳಿ ಹಬ್ಬದ ಉತ್ಸಾಹ ಪ್ರಸ್ತಾಪಿಸಿ, ಈ ಹಬ್ಬಗಳು ಸಂಸ್ಕೃತಿಯನ್ನು ಆಚರಿಸುತ್ತವೆ, ಆದರೆ ಅಭಿವೃದ್ಧಿಯಲ್ಲಿ ನಡೆಯುತ್ತಿರುವ ಪ್ರಗತಿಯು ಅಷ್ಟೇ ಮಹತ್ವದ್ದಾಗಿದೆ. ಗುಜರಾತ್‌ನಾದ್ಯಂತ ಹಲವಾರು ಪ್ರಮುಖ ಯೋಜನೆಗಳು ಜಾರಿಯಾಗುತ್ತಿವೆ ಎಂದರು. ನಂತರ ಅವರು ವಡೋದರಾಕ್ಕೆ ಭೇಟಿ ನೀಡಿ, ಅಲ್ಲಿ ಭಾರತೀಯ ವಾಯುಪಡೆಗಾಗಿ ಭಾರತದಲ್ಲಿ ತಯಾರಿಸಿದ ವಿಮಾನಗಳ  ತಯಾರಿಕೆಗೆ ಮೀಸಲಾಗಿರುವ ಭಾರತದ ಮೊದಲ ಕಾರ್ಖಾನೆಯನ್ನು ಉದ್ಘಾಟಿಸಿದರು. ಇಂದು ಮುಂಜಾನೆ ಅಮ್ರೇಲಿಯಲ್ಲಿ ಭಾರತ್ ಮಾತಾ ಸರೋವರ ಉದ್ಘಾಟನೆಯನ್ನು ಪ್ರಸ್ತಾಪಿಸಿದ ಪ್ರಧಾನಿ, ನೀರು, ರಸ್ತೆಗಳು ಮತ್ತು ರೈಲ್ವೆಗೆ ಸಂಬಂಧಿಸಿದ ಹಲವಾರು ದೊಡ್ಡ ಯೋಜನೆಗಳನ್ನು ಇಲ್ಲಿ ಉದ್ಘಾಟಿಸಲಾಗಿದೆ ಮತ್ತು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ ಯೋಜನೆಗಳು ಸೌರಾಷ್ಟ್ರ ಮತ್ತು ಕಚ್‌ ಜನರ ಜೀವನವನ್ನು ಸುಗಮಗೊಳಿಸುತ್ತದೆ, ಪ್ರಾದೇಶಿಕ ಅಭಿವೃದ್ಧಿಯನ್ನು ವೇಗಗೊಳಿಸುತ್ತದೆ, ಸ್ಥಳೀಯ ರೈತರನ್ನು ಶ್ರೀಮಂತಗೊಳಿಸುತ್ತದೆ, ಯುವಕರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಹಾಗಾಗಿ, ಇಂದಿನ ಅಭಿವೃದ್ಧಿ ಯೋಜನೆಗಳಿಗೆ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಸೌರಾಷ್ಟ್ರದ ಅಮ್ರೇಲಿ ಭೂಮಿ ಭಾರತಕ್ಕೆ ಅನೇಕ ರತ್ನಗಳನ್ನು ನೀಡಿದೆ. ಅಮ್ರೇಲಿ ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಮತ್ತು ರಾಜಕೀಯವಾಗಿ ಎಲ್ಲ ರೀತಿಯಲ್ಲೂ ಭವ್ಯವಾದ ಗತಕಾಲವನ್ನು ಹೊಂದಿದೆ.  ಅಮ್ರೇಲಿಯು ಶ್ರೀ ಯೋಗಿಜಿ ಮಹಾರಾಜ್ ಮತ್ತು ಭೋಜ ಭಗತ್ ಮತ್ತು ಜಾನಪದ ಗಾಯಕ ಮತ್ತು ಕವಿ ದೂಲಭಯ್ಯ ಕಾಗ್ ಅವರ ಕರ್ಮಭೂಮಿಯಾಗಿದೆ. ಕವಿ ಕಲಾಪಿ, ವಿಶ್ವವಿಖ್ಯಾತ ಜಾದೂಗಾರ ಕೆ ಲಾಲ್ ಮತ್ತು ಆಧುನಿಕ ಕಾವ್ಯದ ರಮೇಶ್ ಪರೇಖ್ ಅವರಂತಹ ಕವಿಗಳು, ಅಮ್ರೇಲಿಯು ಗುಜರಾತ್‌ಗೆ ಮೊದಲ ಮುಖ್ಯಮಂತ್ರಿ ಶ್ರೀ ಜೀವರಾಜ್ ಮೆಹ್ತಾ ಅವರನ್ನು ಸಹ ನೀಡಿದೆ. ಅಮ್ರೇಲಿಯ ಮಕ್ಕಳು ಸಮಾಜಕ್ಕೆ ದೊಡ್ಡ ಕೊಡುಗೆಗಳನ್ನು ನೀಡುವ ಮೂಲಕ ವ್ಯಾಪಾರ ಜಗತ್ತಿನಲ್ಲಿ ದೊಡ್ಡ ಹೆಸರು ಗಳಿಸಿದ್ದಾರೆ. ಗುಜರಾತ್ ಸರ್ಕಾರದ ಜಲ ಸಂರಕ್ಷಣೆಗೆ ಸಂಬಂಧಿಸಿದ 80/20 ಯೋಜನೆಗಳೊಂದಿಗೆ ಸಂಬಂಧ ಹೊಂದಿದ್ದ ಧೋಲ್ಕಯ್ಯ ಕುಟುಂಬದಿಂದ ಈ ಸಂಪ್ರದಾಯವನ್ನು ಬಲಪಡಿಸಲಾಗಿದೆ. ಕಳೆದ ಎರಡೂವರೆ ದಶಕಗಳ ನಿರಂತರ ಪ್ರಯತ್ನಗಳಿಂದಾಗಿ ಬದಲಾವಣೆಗಳು ಸ್ಪಷ್ಟವಾಗಿವೆ ಎಂದೂ ಪ್ರಧಾನ ಮಂತ್ರಿ ತಿಳಿಸಿದರು.

ಪ್ರಧಾನ ಮಂತ್ರಿ ಅವರು ನೀರಿನ ಪ್ರಾಮುಖ್ಯತೆಗೆ ಒತ್ತು ನೀಡಿದರು, ವಿಶೇಷವಾಗಿ ಗುಜರಾತ್ ಮತ್ತು ಸೌರಾಷ್ಟ್ರದ ಜನರು ನೀರಿನ ಸವಾಲುಗಳನ್ನು ದೀರ್ಘಕಾಲ ಎದುರಿಸುತ್ತಿದ್ದಾರೆ. ನೀರಿನ ಕೊರತೆಯಿಂದಾಗಿ ಸೌರಾಷ್ಟ್ರವು ವಲಸೆಗೆ ಹೆಸರುವಾಸಿಯಾಗಿತ್ತು. ಆದರೆ ಇಂದು, ಪರಿಸ್ಥಿತಿ ಬದಲಾಗಿದೆ. ಈಗ, ನರ್ಮದಾ ನೀರು ಹಳ್ಳಿಗಳನ್ನು ತಲುಪುತ್ತಿದೆ” ಎಂದು ಜಲಸಂಚಯ ಮತ್ತು ಸೌನಿ ಯೋಜನೆಯಂತಹ ಸರ್ಕಾರದ ಉಪಕ್ರಮಗಳನ್ನು ಶ್ಲಾಘಿಸಿದರು, ಇದು ಅಂತರ್ಜಲ ಮಟ್ಟವನ್ನು ಗಣನೀಯವಾಗಿ ಹೆಚ್ಚಿಸಿದೆ. ನದಿಯ ಆಳ ಮತ್ತು ಚೆಕ್ ಡ್ಯಾಂಗಳ ನಿರ್ಮಾಣದಿಂದ ಪ್ರವಾಹದ ಸಮಸ್ಯೆಯನ್ನು ತಗ್ಗಿಸಬಹುದು ಮತ್ತು ಮಳೆನೀರನ್ನು ಪರಿಣಾಮಕಾರಿಯಾಗಿ ಸಂಗ್ರಹಿಸಬಹುದು. ಲಕ್ಷಾಂತರ ಜನರಿಗೆ ಅನುಕೂಲವಾಗುವಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಗಳನ್ನು ಸಹ ಪರಿಹರಿಸಲಾಗುವುದು ಎಂದು ಹೇಳಿದರು.

ಪ್ರತಿ ಮನೆ ಮತ್ತು ಜಮೀನಿಗೆ ನೀರು ತಲುಪುವುದನ್ನು ಖಾತ್ರಿಪಡಿಸುವಲ್ಲಿ ಕಳೆದ 2  ದಶಕಗಳಲ್ಲಿ ಗುಜರಾತ್‌ನ ಗಮನಾರ್ಹ ಪ್ರಗತಿ ಪ್ರಸ್ತಾಪಿಸಿದ ಪ್ರಧಾನಮಂತ್ರಿ, ಇದು ಇಡೀ ರಾಷ್ಟ್ರಕ್ಕೆ ಮಾದರಿಯಾಗಿದೆ. ಮೂಲೆ ಮೂಲೆಗೂ ನೀರು ಕೊಡುವ ನಿಟ್ಟಿನಲ್ಲಿ ರಾಜ್ಯದ ನಿರಂತರ ಪ್ರಯತ್ನ ನಡೆಯುತ್ತಿದ್ದು, ಇಂದಿನ ಯೋಜನೆಗಳಿಂದ ಈ ಭಾಗದ ಲಕ್ಷಾಂತರ ಜನರಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂದರು. ನವ್ದಾ-ಚಾವಂದ್ ಬಲ್ಕ್ ಪೈಪ್‌ಲೈನ್ ಯೋಜನೆಯು ಸುಮಾರು 1,300 ಹಳ್ಳಿಗಳು ಮತ್ತು ಅಮ್ರೇಲಿ, ಬೊಟಾಡ್, ಜುನಾಗಢ್, ರಾಜ್‌ಕೋಟ್ ಮತ್ತು ಪೋರಬಂದರ್ ಜಿಲ್ಲೆಗಳ ಮೇಲೆ ಪರಿಣಾಮ ಬೀರುವ 35ಕ್ಕೂ ಹೆಚ್ಚು ನಗರಗಳಿಗೆ ಪ್ರಯೋಜನ ನೀಡುತ್ತದೆ. ಈ ಉಪಕ್ರಮವು ಈ ಪ್ರದೇಶಗಳಿಗೆ ಪ್ರತಿದಿನ ಹೆಚ್ಚುವರಿ 30 ಕೋಟಿ ಲೀಟರ್ ನೀರು ಪೂರೈಸುತ್ತದೆ. ಪಾಸ್ವಿ ಗ್ರೂಪ್ ಸೌರಾಷ್ಟ್ರ ಪ್ರಾದೇಶಿಕ ನೀರು ಸರಬರಾಜು ಯೋಜನೆಯ 2ನೇ ಹಂತದ ಯೋಜನೆಯ ಶಂಕುಸ್ಥಾಪನೆ ಉಲ್ಲೇಖಿಸಿದ ಪ್ರಧಾನಮಂತ್ರಿ, ತಲಜಾ, ಮಹುವ ಮತ್ತು ಪಲಿತಾನಾ ತಾಲೂಕುಗಳ ನೀರಿನ ಅಗತ್ಯತೆಗಳನ್ನು ಪರಿಹರಿಸುವುದಾಗಿ ಹೇಳಿದರು. ಒಮ್ಮೆ ಪೂರ್ಣಗೊಂಡ ನಂತರ ಸುಮಾರು 100 ಹಳ್ಳಿಗಳು ಈ ಯೋಜನೆಯಿಂದ ನೇರವಾಗಿ ಪ್ರಯೋಜನ ಪಡೆಯುತ್ತವೆ ಎಂದರು.

ಇಂದಿನ ನೀರಿನ ಯೋಜನೆಗಳು ಸಾರ್ವಜನಿಕ ಸಹಭಾಗಿತ್ವದೊಂದಿಗೆ ಸರ್ಕಾರ ಮತ್ತು ಸಮಾಜದ ಸಹಭಾಗಿತ್ವದ ಶಕ್ತಿಯನ್ನು ಉದಾಹರಿಸುತ್ತವೆ. ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 75 ಅಮೃತ ಸರೋವರಗಳನ್ನು ನಿರ್ಮಿಸುವ ಮೂಲಕ ಭಾರತದ 75ನೇ ವರ್ಷದ ಸ್ವಾತಂತ್ರ್ಯವನ್ನು ಜಲ ಸಂರಕ್ಷಣೆಯ ಉಪಕ್ರಮಗಳೊಂದಿಗೆ ಜೋಡಿಸುವ ಪ್ರಯತ್ನ ಯಶಸ್ಸು ಕಂಡಿದೆ. ಭವಿಷ್ಯದ ಪೀಳಿಗೆಗೆ ಪರಂಪರೆಯನ್ನು ಬಿಟ್ಟುಹೋಗುವ ಹಳ್ಳಿಗಳಾದ್ಯಂತ ನಿರ್ಮಿಸಲಾದ 60,000 ಅಮೃತ ಸರೋವರಗಳ ಬಗ್ಗೆ ಶ್ರೀ ಮೋದಿ ಸಂತೋಷ ವ್ಯಕ್ತಪಡಿಸಿದರು. ಶ್ರೀ ಸಿ ಆರ್ ಪಾಟೀಲ್ ಅವರ ನೇತೃತ್ವದಲ್ಲಿ ವೇಗ ಪಡೆಯುತ್ತಿರುವ ಕ್ಯಾಚ್ ದಿ ರೈನ್ ಅಭಿಯಾನವನ್ನು ಶ್ಲಾಘಿಸಿದರು. ಸಮುದಾಯದ ಸಹಭಾಗಿತ್ವದ ಮೂಲಕ ಸಾವಿರಾರು ರೀಚಾರ್ಜ್ ಕೊಳವೆಬಾವಿಗಳನ್ನು ನಿರ್ಮಿಸುವುದರೊಂದಿಗೆ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಬಿಹಾರದಂತಹ ರಾಜ್ಯಗಳಲ್ಲಿ ಅಭಿಯಾನವು ಗಮನಾರ್ಹ ಪ್ರಗತಿ ಸಾಧಿಸಲಾಗುತ್ತಿದೆ. ತಮ್ಮ ಪೂರ್ವಜರ ಹಳ್ಳಿಗಳಲ್ಲಿ ರೀಚಾರ್ಜ್ ಕೊಳವೆಬಾವಿಗಳನ್ನು ನಿರ್ಮಿಸಲು ಮುಂದೆ ಬರುತ್ತಿರುವ ಜನರ ಉತ್ಸಾಹವನ್ನು ಒಪ್ಪಿಕೊಂಡರು. ಈ ಉಪಕ್ರಮವು ಹಳ್ಳಿಗಳು ಮತ್ತು ಹೊಲಗಳಲ್ಲಿ ಸ್ಥಳೀಯ ನೀರಿನ ಧಾರಣೆಯನ್ನು ಖಚಿತಪಡಿಸುತ್ತಿದೆ.  ಜಲ ಸಂರಕ್ಷಣೆಯ ಮೂಲಕ ಕೃಷಿ ಮತ್ತು ಜಾನುವಾರುಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ನೂರಾರು ಯೋಜನೆಗಳು ಇಂದು ಆರಂಭಗೊಂಡಿವೆ ಎಂದರು.

ಈಗ ಹೆಚ್ಚಿನ ನೀರಿನ ಲಭ್ಯತೆಯಿಂದಾಗಿ ಕೃಷಿ ಸುಲಭವಾಗಿದೆ ಮತ್ತು ನರ್ಮದಾ ನೀರಿನಿಂದ ಅಮ್ರೇಲಿಯಲ್ಲಿ ಈಗ 3 ಹಂಗಾಮಿನ ಕೃಷಿ ಸಾಧ್ಯವಾಗಿದೆ. "ಇಂದು ಅಮ್ರೇಲಿ ಜಿಲ್ಲೆ ಕೃಷಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ". ಹತ್ತಿ, ಶೇಂಗಾ, ಎಳ್ಳು, ರಾಗಿ ಮುಂತಾದ ಬೆಳೆಗಳ ಕೃಷಿಗೆ ಉತ್ತೇಜನ ಸಿಗುತ್ತಿದೆ. ಅಮ್ರೇಲಿಯ ಹೆಮ್ಮೆಯ ಕೇಸರ್ ಮಾವಿಗೆ ಜಿಐ ಟ್ಯಾಗ್ ದೊರೆತಿದೆ. ಜಿಐ ಟ್ಯಾಗ್ ಸ್ಟೇಟಸ್ ಎಂದರೆ ಅಮ್ರೇಲಿಯ ಗುರುತು ಕೇಸರ್ ಮಾವಿನಕಾಯಿಯೊಂದಿಗೆ ಸಂಬಂಧಿಸಿದೆ. ಅದು ಜಗತ್ತಿನಲ್ಲಿ ಎಲ್ಲಿ ಮಾರಾಟವಾಗಲಿ. ಅಮ್ರೇಲಿ ನೈಸರ್ಗಿಕ ಕೃಷಿಯ ಪ್ರಮುಖ ಕೇಂದ್ರವಾಗಿ ವೇಗವಾಗಿ ಹೊರಹೊಮ್ಮುತ್ತಿದೆ. ದೇಶದ ಮೊದಲ ನೈಸರ್ಗಿಕ ಕೃಷಿ ವಿಶ್ವವಿದ್ಯಾಲಯವನ್ನು ಹಾಲೋಲ್‌ನಲ್ಲಿ ನಿರ್ಮಿಸಲಾಗುತ್ತಿದೆ. ಈ ವಿಶ್ವವಿದ್ಯಾಲಯದ ಅಡಿ, ಅಮ್ರೇಲಿಯು ಗುಜರಾತ್‌ನ ಮೊದಲ ನೈಸರ್ಗಿಕ ಕೃಷಿ ಕಾಲೇಜು ಹೊಂದಿದಂತಾಗಿದೆ. ಹೆಚ್ಚು ಹೆಚ್ಚು ರೈತರು ಪಶುಸಂಗೋಪನೆಯಲ್ಲಿ ತೊಡಗಿಸಿಕೊಳ್ಳಲು ಮತ್ತು ನೈಸರ್ಗಿಕ ಕೃಷಿಯಿಂದ ಪ್ರಯೋಜನ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಈ ಪ್ರಯತ್ನವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅಮ್ರೇಲಿಯ ಡೇರಿ ಉದ್ಯಮವು ಅಗಾಧವಾಗಿ ಬೆಳೆದಿದೆ. ಸರ್ಕಾರ ಮತ್ತು ಸಹಕಾರಿ ಸಂಘಗಳ ಜಂಟಿ ಪ್ರಯತ್ನದಿಂದ ಮಾತ್ರ ಇದು ಸಾಧ್ಯವಾಗಿದೆ. 2007ರಲ್ಲಿ 25 ಗ್ರಾಮಗಳ ಸರ್ಕಾರಿ ಸಮಿತಿಗಳು ಅದರೊಂದಿಗೆ ಸಂಬಂಧ ಹೊಂದಿದ್ದಾಗ ಅಮರ್ ಡೇರಿ ಪ್ರಾರಂಭವಾಯಿತು. "ಇಂದು 700ಕ್ಕೂ ಹೆಚ್ಚು ಸಹಕಾರಿ ಸಂಘಗಳು ಅಮರ್ ಡೇರಿಯೊಂದಿಗೆ ಸಂಬಂಧ ಹೊಂದಿದ್ದು, ಪ್ರತಿದಿನ ಸುಮಾರು 1.25 ಲಕ್ಷ ಲೀಟರ್ ಹಾಲು ಸಂಗ್ರಹಿಸಲಾಗುತ್ತಿದೆ" ಎಂದು ಹೇಳಿದರು.

ಸಿಹಿ ಉತ್ಪಾದನೆಯಲ್ಲಿ ಅಮ್ರೇಲಿ ಕ್ರಾಂತಿ ಮಾಡಿದೆ. ಜೇನು ಉತ್ಪಾದನೆಯು ರೈತರಿಗೆ ಹೆಚ್ಚುವರಿ ಆದಾಯ ಮೂಲವನ್ನು ನೀಡಿದೆ. ಅಮ್ರೇಲಿಯ ನೂರಾರು ರೈತರು ಜೇನುಸಾಕಣೆಯಲ್ಲಿ ತರಬೇತಿ ಪಡೆದ ನಂತರ ಜೇನುತುಪ್ಪಕ್ಕೆ ಸಂಬಂಧಿಸಿದ ವ್ಯವಹಾರಗಳನ್ನು ಪ್ರಾರಂಭಿಸಿದ್ದಾರೆ ಎಂದರು.

ಪ್ರತಿ ಕುಟುಂಬಕ್ಕೆ ವಾರ್ಷಿಕ 25,000-30,000 ರೂ.ವರೆಗೆ ಉಳಿತಾಯ ಖಚಿತಪಡಿಸಿಕೊಳ್ಳಲು ವಿದ್ಯುತ್ ಬಿಲ್‌ ತೊಡೆದುಹಾಕಿ, ವಿದ್ಯುತ್‌ನಿಂದ ಆದಾಯ ಉತ್ಪಾದಿಸುವ ಪ್ರಧಾನ ಮಂತ್ರಿ ಸೂರ್ಯ ಗರ್ ಯೋಜನೆ ಕುರಿತು ಮಾತನಾಡಿದ ಪ್ರಧಾನಿ, ಗುಜರಾತ್‌ನಾದ್ಯಂತ ಸುಮಾರು 200,000 ಸೌರಫಲಕಗಳನ್ನು ಕೆಲವೇ ಕೆಲವು ಮನೆಗಳಲ್ಲಿ ಸ್ಥಾಪಿಸಲಾಗಿದೆ. ನೂರಾರು ಮನೆಗಳಲ್ಲಿ ಸೌರಫಲಕಗಳನ್ನು ಅಳವಡಿಸಿರುವ ದುಧಾಲ ಗ್ರಾಮವು ಉದಾಹರಣೆಯಾಗಿದ್ದು, ಅಮ್ರೇಲಿ ಜಿಲ್ಲೆ ಸೌರಶಕ್ತಿಯಲ್ಲಿ ವೇಗವಾಗಿ ಮುನ್ನಡೆಯುತ್ತಿದೆ. ಇದರ ಪರಿಣಾಮವಾಗಿ ಗ್ರಾಮವು ತಿಂಗಳಿಗೆ ಸುಮಾರು 75,000 ರೂಪಾಯಿ ವಿದ್ಯುತ್ ಬಿಲ್‌ ಉಳಿಸುತ್ತಿದೆ. ಪ್ರತಿ ಮನೆಗೆ ವಾರ್ಷಿಕ 4,000 ರೂ. ಉಳಿತಾಯವಾಗುತ್ತಿದೆ. "ದುಧಾಲಾ ಶೀಘ್ರವೇ ಅಮ್ರೇಲಿಯ ಮೊದಲ ಸೌರ ಗ್ರಾಮವಾಗುತ್ತಿದೆ" ಎಂದರು.

ಸೌರಾಷ್ಟ್ರವು ಹಲವಾರು ಪವಿತ್ರ ತಾಣಗಳು ಮತ್ತು ನಂಬಿಕೆಯ ಸ್ಥಳಗಳನ್ನು ಹೊಂದಿರುವ ಪ್ರವಾಸೋದ್ಯಮದ ಮಹತ್ವದ ಕೇಂದ್ರವಾಗಿದೆ. ಸರ್ದಾರ್ ಸರೋವರ ಅಣೆಕಟ್ಟಿನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಕಳೆದ ವರ್ಷ ಸರ್ದಾರ್ ಪಟೇಲ್ ಅವರ ವಿಶ್ವದ ಅತಿ ಎತ್ತರದ ಪ್ರತಿಮೆ ನೋಡಲು 50 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಬಂದಿದ್ದರು. ಸರ್ದಾರ್ ಸಾಹೇಬರ ಜಯಂತಿಗೆ 2 ದಿನ ಇರುವಾಗ, ಸ್ಥಳಕ್ಕೆ ಭೇಟಿ ನೀಡಿ ರಾಷ್ಟ್ರೀಯ ಏಕತಾ ಮೆರವಣಿಗೆ ವೀಕ್ಷಿಸಿ, ಅವರು ಮಾತನಾಡಿದರು.

ಮುಂದಿನ ದಿನಗಳಲ್ಲಿ ಕೆರ್ಲಿ ರೀಚಾರ್ಜ್ ಜಲಾಶಯವು ಪರಿಸರ ಪ್ರವಾಸೋದ್ಯಮದ ಪ್ರಮುಖ ಕೇಂದ್ರವಾಗಲಿದೆ, ಇದರಿಂದ ಸಾಹಸ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ಸಿಗಲಿದೆ. ಇದು ಕೆರ್ಲಿ ಪಕ್ಷಿಧಾಮಕ್ಕೆ ವಿಶ್ವದಲ್ಲೇ ಹೊಸ ಗುರುತು ನೀಡುತ್ತದೆ ಎಂದರು.

ಗುಜರಾತಿನ ಸುದೀರ್ಘ ಕರಾವಳಿಯನ್ನು ಪ್ರಸ್ತಾಪಿಸಿದ ಮೋದಿ, ಪರಂಪರೆಯ ಸಂರಕ್ಷಣೆಯ ಜತೆಗೆ ಅಭಿವೃದ್ಧಿಯು ಸರ್ಕಾರದ ಆದ್ಯತೆಯಾಗಿದೆ. ಆದ್ದರಿಂದ, ಮೀನುಗಾರಿಕೆ ಮತ್ತು ಬಂದರುಗಳಿಗೆ ಸಂಬಂಧಿಸಿದ ಶತಮಾನಗಳ ಹಳೆಯ ಪರಂಪರೆಯನ್ನು ಪುನರುಜ್ಜೀವನಗೊಳಿಸಲಾಗುತ್ತಿದೆ. ಲೋಥಾಲ್‌ನಲ್ಲಿ ರಾಷ್ಟ್ರೀಯ ಕಡಲ ಪರಂಪರೆಯ ಸಂಕೀರ್ಣದ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಈ ಕ್ರಮವು ಭಾರತದ ಭವ್ಯವಾದ ಕಡಲ ಪರಂಪರೆಯನ್ನು ದೇಶ ಮತ್ತು ಜಗತ್ತಿಗೆ ಪರಿಚಯಿಸುತ್ತದೆ ಮತ್ತು ಪ್ರೇರೇಪಿಸುತ್ತದೆ ಎಂದು ಹೇಳಿದರು.

"ಸಮುದ್ರದ ನೀಲಿ ನೀರು ನೀಲಿ ಕ್ರಾಂತಿಗೆ ಉತ್ತೇಜನ ನೀಡಬೇಕೆಂಬುದು ನಮ್ಮ ಪ್ರಯತ್ನವಾಗಿದೆ". ಬಂದರು ನೇತೃತ್ವದ ಅಭಿವೃದ್ಧಿಯು ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಬಲಪಡಿಸಬೇಕು. ಜಾಫ್ರಾಬಾದ್, ಶಿಯಾಳಬೆಟ್‌ನಲ್ಲಿ ಮೀನುಗಾರರಿಗೆ ಉತ್ತಮ ಮೂಲಸೌಕರ್ಯಗಳನ್ನು ವಿಸ್ತರಿಸಲಾಗುತ್ತಿದೆ. ಅಮ್ರೇಲಿಯ ಪಿಪಾವಾವ್ ಬಂದರಿನ ಆಧುನೀಕರಣವು ಇಂದು ಸಾವಿರಾರು ಜನರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ, 10 ಲಕ್ಷಕ್ಕೂ ಹೆಚ್ಚು ಕಂಟೈನರ್‌ಗಳು ಮತ್ತು ಸಾವಿರಾರು ವಾಹನಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಪಿಪಾವಾವ್ ಬಂದರಿನ ಸಂಪರ್ಕವನ್ನು ಮತ್ತು ಗುಜರಾತ್‌ನಲ್ಲಿರುವ ಅಂತಹ ಪ್ರತಿಯೊಂದು ಬಂದರನ್ನು ದೇಶದ ಇತರ ಭಾಗಗಳೊಂದಿಗೆ ಆಧುನೀಕರಿಸುವ ಸರ್ಕಾರದ ಪ್ರಯತ್ನ ಸಾಗಿದೆ ಎಂದರು.

ಬಡವರಿಗೆ ಪಕ್ಕಾ ಮನೆಗಳು, ವಿದ್ಯುತ್, ರಸ್ತೆಗಳು, ರೈಲ್ವೆ, ವಿಮಾನ ನಿಲ್ದಾಣಗಳು ಮತ್ತು ಗ್ಯಾಸ್ ಪೈಪ್‌ಲೈನ್‌ಗಳಂತಹ ಮೂಲಸೌಕರ್ಯಗಳು ವಿಕಸಿತ ಭಾರತ ನಿರ್ಮಾಣಕ್ಕೆ ಅತ್ಯಗತ್ಯ. 3ನೇ ಅವಧಿಯಲ್ಲಿ ಸರ್ಕಾರವು ಮೂಲಸೌಕರ್ಯ ಅಭಿವೃದ್ಧಿಗೆ ತ್ವರಿತವಾಗಿ ಕೆಲಸ ಮಾಡುತ್ತಿದೆ. ಸೌರಾಷ್ಟ್ರದಲ್ಲಿ ಸುಧಾರಿತ ಮೂಲಸೌಕರ್ಯ ಸಂಪರ್ಕದ ಪ್ರಯೋಜನಗಳು ಕೈಗಾರಿಕಾ ಬೆಳವಣಿಗೆಯನ್ನು ಗಣನೀಯವಾಗಿ ಹೆಚ್ಚಿಸಿವೆ. "ರೋ-ರೋ ಫೆರ್ರಿ ಸೇವೆಯ ಪ್ರಾರಂಭವು ಸೌರಾಷ್ಟ್ರ ಮತ್ತು ಸೂರತ್ ನಡುವಿನ ಸಂಪರ್ಕವನ್ನು ಸರಳಗೊಳಿಸಿದೆ. ಇತ್ತೀಚಿನ ವರ್ಷಗಳಲ್ಲಿ 7 ಲಕ್ಷಕ್ಕೂ ಹೆಚ್ಚು ಜನರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. 1 ಲಕ್ಷಕ್ಕೂ ಹೆಚ್ಚು ಕಾರುಗಳು ಮತ್ತು 75,000ಕ್ಕೂ ಹೆಚ್ಚು ಟ್ರಕ್‌ಗಳು ಮತ್ತು ಬಸ್‌ಗಳನ್ನು ಸಾಗಿಸಲಾಗಿದೆ, ಇದು ಸಮಯ ಮತ್ತು ಹಣವನ್ನು ಉಳಿಸುತ್ತದೆ” ಎಂದರು.

ಜಾಮ್‌ನಗರದಿಂದ ಅಮೃತಸರ-ಭಟಿಂಡಾದವರೆಗೆ ಆರ್ಥಿಕ ಕಾರಿಡಾರ್ ನಿರ್ಮಾಣದ ತ್ವರಿತ ಪ್ರಗತಿ ಆಗುತ್ತಿದೆ. “ಈ ಯೋಜನೆಯು ಗುಜರಾತ್‌ನಿಂದ ಪಂಜಾಬ್‌ವರೆಗಿನ ಎಲ್ಲಾ ರಾಜ್ಯಗಳಿಗೆ ಪ್ರಯೋಜನ ನೀಡುತ್ತದೆ. ಇಂದಿನ ಉದ್ಘಾಟನೆಗಳು ಮತ್ತು ರಸ್ತೆ ಯೋಜನೆಗಳ ಶಂಕುಸ್ಥಾಪನೆಯು ಜಾಮ್‌ನಗರ ಮತ್ತು ಮೋರ್ಬಿಯಂತಹ ಪ್ರಮುಖ ಕೈಗಾರಿಕಾ ಕೇಂದ್ರಗಳಿಗೆ ಸಂಪರ್ಕ ಸುಧಾರಿಸುತ್ತದೆ, ಸಿಮೆಂಟ್ ಕಾರ್ಖಾನೆಗಳಿಗೆ ಪ್ರವೇಶ ಹೆಚ್ಚಿಸುತ್ತದೆ, ಸೋಮನಾಥ ಮತ್ತು ದ್ವಾರಕಾಗೆ ಸುಲಭವಾದ ತೀರ್ಥಯಾತ್ರೆಗಳನ್ನು ಸುಗಮಗೊಳಿಸುತ್ತದೆ. ಕಚ್‌ನಲ್ಲಿ ರೈಲ್ವೆ ಸಂಪರ್ಕ ವಿಸ್ತರಣೆಯು ಸೌರಾಷ್ಟ್ರ ಮತ್ತು ಕಚ್‌ನಲ್ಲಿ ಪ್ರವಾಸೋದ್ಯಮ ಮತ್ತು ಕೈಗಾರಿಕೀಕರಣವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದರು.

"ಭಾರತವು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವಂತೆ, ವಿಶ್ವದಲ್ಲಿ ಭಾರತದ ಹೆಮ್ಮೆಯು ನಿರಂತರವಾಗಿ ಹೆಚ್ಚುತ್ತಿದೆ". ಇಂದು ಜಗತ್ತು ಭಾರತವನ್ನು ಹೊಸ ದೃಷ್ಟಿಕೋನದಿಂದ ನೋಡುತ್ತಿದೆ, ಭಾರತದ ಸಾಮರ್ಥ್ಯವನ್ನು ಗುರುತಿಸುತ್ತಿದೆ, ಭಾರತವನ್ನು ಗಂಭೀರವಾಗಿ ಆಲಿಸುತ್ತಿದೆ. ಈ ದಿನಗಳಲ್ಲಿ ಎಲ್ಲರೂ ಭಾರತದ ಸಾಧ್ಯತೆಗಳನ್ನು ಚರ್ಚಿಸುತ್ತಿದ್ದಾರೆ. ಅದರಲ್ಲಿ ಗುಜರಾತ್ ದೊಡ್ಡ ಪಾತ್ರ ಹೊಂದಿದೆ. ಪ್ರತಿ ನಗರ ಮತ್ತು ಹಳ್ಳಿಗಳಲ್ಲಿ ಭಾರತ ಹೊಂದಿರುವ ಸಾಮರ್ಥ್ಯವನ್ನು ಗುಜರಾತ್ ಜಗತ್ತಿಗೆ ತೋರಿಸಿದೆ. ರಷ್ಯಾದಲ್ಲಿ ನಡೆದ ಬ್ರಿಕ್ಸ್ ಸಮ್ಮೇಳನಕ್ಕೆ ತಮ್ಮ ಇತ್ತೀಚಿನ ಭೇಟಿ ಪ್ರಸ್ತಾಪಿಸಿದ ಮೋದಿ, ಪ್ರತಿಯೊಬ್ಬರೂ ಭಾರತದಲ್ಲಿ ಸಂಪರ್ಕ ಸಾಧಿಸಲು ಮತ್ತು ಹೂಡಿಕೆ ಮಾಡಲು ಬಯಸುತ್ತಾರೆ. ಜರ್ಮನಿಯ ಚಾನ್ಸೆಲರ್ ಅವರ ಇತ್ತೀಚಿನ ಭೇಟಿ ಮತ್ತು ಅವರೊಂದಿಗೆ ಅನೇಕ ಒಪ್ಪಂದಗಳಿಗೆ ಸಹಿ ಹಾಕಿದ ಬಗ್ಗೆಯೂ ಪ್ರಧಾನಿ ಪ್ರಸ್ತಾಪಿಸಿದರು. ಜರ್ಮನಿಯು ವಾರ್ಷಿಕ ವೀಸಾ ಕೋಟಾವನ್ನು ಹಿಂದಿನ 20 ಸಾವಿರಕ್ಕೆ ಹೋಲಿಸಿದರೆ ಪ್ರಸ್ತುತ 90 ಸಾವಿರಕ್ಕೆ ಹೆಚ್ಚಿಸಿದೆ, ಇದು ಭಾರತೀಯ ಯುವಕರಿಗೆ ಪ್ರಯೋಜನ ನೀಡುತ್ತದೆ.  ಇಂದಿನ ಸ್ಪೇನ್ ಅಧ್ಯಕ್ಷರ ಗುಜರಾತ್ ಭೇಟಿ ಮತ್ತು ವಡೋದರಾದಲ್ಲಿ ಸಾರಿಗೆ ವಿಮಾನ ತಯಾರಿಕಾ ಕಾರ್ಖಾನೆಯ ರೂಪದಲ್ಲಿ ಸ್ಪೇನ್‌ನ ಬೃಹತ್ ಹೂಡಿಕೆ ಮಾಡಲಾಗಿದೆ. ಇದು ಗುಜರಾತ್‌ನಲ್ಲಿ ಸಾವಿರಾರು ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಗಾತ್ರದ ಕೈರಿಕೆಗಳಿಗೆ ಉತ್ತೇಜನ ನೀಡುವ ಜತೆಗೆ ವಿಮಾನ ತಯಾರಿಕೆಗೆ ಸಂಪೂರ್ಣ ಪರಿಸರ ವ್ಯವಸ್ಥೆಯ ಅಭಿವೃದ್ಧಿಯೊಂದಿಗೆ ಲಕ್ಷಗಟ್ಟಲೆ ಹೊಸ ಉದ್ಯೋಗಾವಕಾಶಗಳ ಸೃಷ್ಟಿಗೆ ಕಾರಣವಾಗುತ್ತದೆ ಎಂದರು.

“ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್ ಅಭಿವೃದ್ಧಿಯಿಂದ ದೇಶ ಅಭಿವೃದ್ಧಿಯಾಗುತ್ತದೆ ಎಂದು ಹೇಳುತ್ತಿದ್ದೆ. ಒಂದು ವಿಕಸಿತ ಗುಜರಾತ್ ವಿಕಸಿತ ಇಂಡಿಯಾದ ಹಾದಿಯನ್ನು ಬಲಪಡಿಸುತ್ತದೆ” ಎಂದು ಅವರು ಇಂದಿನ ಅಭಿವೃದ್ಧಿ ಯೋಜನೆಗಳಿಗಾಗಿ ಪ್ರತಿಯೊಬ್ಬರನ್ನು ಅಭಿನಂದಿಸಿ, ತಮ್ಮ ಭಾಷಣ ಮುಕ್ತಾಯಗೊಳಿಸಿದರು.

ಗುಜರಾತಿನ ರಾಜ್ಯಪಾಲ ಶ್ರೀ ಆಚಾರ್ಯ ದೇವವ್ರತ್, ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್, ಕೇಂದ್ರ ಜಲಶಕ್ತಿ ಸಚಿವ ಶ್ರೀ ಸಿ ಆರ್ ಪಾಟೀಲ್ ಮತ್ತು ಸಂಸತ್ ಸದಸ್ಯರಾದ ಶ್ರೀ ಪರಶೋತ್ತಮ್ ರೂಪಾಲಾ ಮತ್ತು  ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಪ್ರಧಾನಮಂತ್ರಿ ಅವರು ಅಮ್ರೇಲಿಯ ದುಧಾಲಾದಲ್ಲಿ ಭಾರತ್ ಮಾತಾ ಸರೋವರ ಉದ್ಘಾಟಿಸಿದರು. ಸಾರ್ವಜನಿಕ-ಖಾಸಗಿ ಸಹಭಾಗಿತ್ವ(ಪಿಪಿಪಿ) ಮಾದರಿಯಡಿ, ಗುಜರಾತ್ ಸರ್ಕಾರ ಮತ್ತು ಧೋಲ್ಕಯ್ಯ ಫೌಂಡೇಶನ್ ನಡುವಿನ ಸಹಭಾಗಿತ್ವದ ಮೂಲಕ ಈ ಯೋಜನೆ ಅಭಿವೃದ್ಧಿಪಡಿಸಲಾಗಿದೆ. ಧೋಲ್ಕಯ್ಯ ಫೌಂಡೇಶನ್ ಚೆಕ್ ಡ್ಯಾಂ ಅನ್ನು ಸುಧಾರಿಸಿದೆ, ಇದು ಮೂಲತಃ ಅಣೆಕಟ್ಟು 4.5 ಕೋಟಿ ಲೀಟರ್ ನೀರು ಶೇಖರಿಸುತ್ತದೆ. ಆದರೆ ಅದನ್ನು ಆಳವಾಗಿ, ಅಗಲಗೊಳಿಸಿ ಮತ್ತು ಬಲಪಡಿಸಿದ ನಂತರ, ಸಾಮರ್ಥ್ಯವು 24.5 ಕೋಟಿ ಲೀಟರ್‌ಗೆ ಹೆಚ್ಚಿದೆ. ಈ ಸುಧಾರಣೆಯು ಹತ್ತಿರದ ಬಾವಿಗಳು ಮತ್ತು ಬೋರ್‌ಗಳಲ್ಲಿ ನೀರಿನ ಮಟ್ಟ ಹೆಚ್ಚಿಸಿದೆ, ಇದು ಉತ್ತಮ ನೀರಾವರಿ ಒದಗಿಸುವ ಮೂಲಕ ಸ್ಥಳೀಯ ಹಳ್ಳಿಗಳು ಮತ್ತು ರೈತರಿಗೆ ಸಹಾಯ ಮಾಡುತ್ತದೆ.

ಇದಲ್ಲದೆ, ಪ್ರಧಾನಿ ಅವರು ಗುಜರಾತ್‌ನ ಅಮ್ರೇಲಿಯಲ್ಲಿ ಸುಮಾರು 4,900 ಕೋಟಿ ರೂಪಾಯಿ ಮೊತ್ತದ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಈ ಯೋಜನೆಗಳು ರಾಜ್ಯದ ಅಮ್ರೇಲಿ, ಜಾಮ್‌ನಗರ, ಮೊರ್ಬಿ, ದೇವಭೂಮಿ ದ್ವಾರಕಾ, ಜುನಾಗಢ್, ಪೋರಬಂದರ್, ಕಚ್ಛ್ ಮತ್ತು ಬೊಟಾಡ್ ಜಿಲ್ಲೆಗಳ ನಾಗರಿಕರಿಗೆ ಪ್ರಯೋಜನ ನೀಡುತ್ತವೆ.

2,800 ಕೋಟಿ ರೂ.ಗೂ ಅಧಿಕ ಮೊತ್ತದ ವಿವಿಧ ರಸ್ತೆ ಯೋಜನೆಗಳಿಗೆ ಪ್ರಧಾನಿ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಯೋಜನೆಗಳು ಎನ್ಎಚ್ 151, ಎನ್ಎಚ್ 151ಎ ಮತ್ತು ಎನ್ಎಚ್51 ಮತ್ತು ಜುನಾಗಢ್ ಬೈಪಾಸ್‌ನ ವಿವಿಧ ವಿಭಾಗಗಳ ಚತುಷ್ಪಥ ಒಳಗೊಂಡಿವೆ. ಜಾಮ್‌ನಗರ ಜಿಲ್ಲೆಯ ಧ್ರೋಲ್ ಬೈಪಾಸ್‌ನಿಂದ ಮೊರ್ಬಿ ಜಿಲ್ಲೆಯ ಅಮ್ರಾನ್‌ವರೆಗಿನ ಉಳಿದ ಭಾಗದ ಚತುಷ್ಪಥ ಯೋಜನೆಗೆ ಶಂಕುಸ್ಥಾಪನೆ ನಡೆಯಲಿದೆ.

ಸುಮಾರು 1,100 ಕೋಟಿ ರೂಪಾಯಿ ವೆಚ್ಚದಲ್ಲಿ ಪೂರ್ಣಗೊಂಡಿರುವ ಭುಜ್-ನಲಿಯಾ ರೈಲ್ ಗೇಜ್ ಪರಿವರ್ತನೆ ಯೋಜನೆಯನ್ನು ಪ್ರಧಾನ ಮಂತ್ರಿ ದೇಶಕ್ಕೆ ಸಮರ್ಪಿಸಿದರು. ಈ ವಿಸ್ತಾರವಾದ ಯೋಜನೆಯು 24 ಪ್ರಮುಖ ಸೇತುವೆಗಳು, 254 ಚಿಕ್ಕ ಸೇತುವೆಗಳು, 3 ರಸ್ತೆ ಮೇಲ್ಸೇತುವೆಗಳು ಮತ್ತು 30 ರಸ್ತೆ ಕೆಳಸೇತುವೆಗಳನ್ನು ಒಳಗೊಂಡಿದೆ. ಕಚ್ ಜಿಲ್ಲೆಯ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.

ಅಮ್ರೇಲಿ ಜಿಲ್ಲೆಯಿಂದ ನೀರು ಸರಬರಾಜು ಇಲಾಖೆಯ 700 ಕೋಟಿ ರೂ.ಗೂ ಅಧಿಕ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ನವ್ಡಾದಿಂದ ಚಾವಂದ್ ಬಲ್ಕ್ ಪೈಪ್‌ಲೈನ್ ಉದ್ಘಾಟನೆ ಮಾಡಲಾಗಿದ್ದು, ಇದು ಬೊಟಾಡ್, ಅಮ್ರೇಲಿ, ಜುನಾಗಢ್, ರಾಜ್‌ಕೋಟ್ ಮತ್ತು ಪೋರಬಂದರ್ ಜಿಲ್ಲೆಗಳ 36 ನಗರಗಳು ಮತ್ತು 1,298 ಹಳ್ಳಿಗಳಲ್ಲಿ ಸುಮಾರು 67 ಲಕ್ಷ ಫಲಾನುಭವಿಗಳಿಗೆ ಹೆಚ್ಚುವರಿ 28 ಕೋಟಿ ಲೀಟರ್ ನೀರು ಒದಗಿಸುತ್ತದೆ. ಭಾವನಗರ ಜಿಲ್ಲೆಯಲ್ಲಿ ಪಸವಿ ಗ್ರೂಪ್ ವರ್ಧಿತ ನೀರು ಸರಬರಾಜು ಯೋಜನೆ ಹಂತ 2ಕ್ಕೆ  ಶಿಲಾನ್ಯಾಸ ನೆರವೇರಿಸಲಾಗುವುದು, ಇದು ಭಾವನಗರ ಜಿಲ್ಲೆಯ ಮಹುವ, ತಲಜಾ ಮತ್ತು ಪಾಲಿಟಾನಾ ತಾಲೂಕಿನ 95 ಹಳ್ಳಿಗಳಿಗೆ ಪ್ರಯೋಜನ ನೀಡುತ್ತದೆ.

ಪೋರಬಂದರ್ ಜಿಲ್ಲೆಯ ಮೊಕರ್ಸಾಗರ್‌ನಲ್ಲಿರುವ ಕಾರ್ಲಿ ರೀಚಾರ್ಜ್ ಜಲಾಶಯವನ್ನು ವಿಶ್ವದರ್ಜೆಯ ಸುಸ್ಥಿರ ಪರಿಸರ ಪ್ರವಾಸೋದ್ಯಮ ತಾಣವನ್ನಾಗಿ ಪರಿವರ್ತಿಸುವುದನ್ನು ಒಳಗೊಂಡಿರುವ ಪ್ರವಾಸೋದ್ಯಮ-ಸಂಬಂಧಿತ ಅಭಿವೃದ್ಧಿ ಉಪಕ್ರಮಗಳಿಗೆ ಪ್ರಧಾನ ಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಿದರು.

 

 

*****

 




(Release ID: 2069216) Visitor Counter : 8