ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಜೈಪುರದ ಬಿರ್ಲಾ ಆಡಿಟೋರಿಯಂನಲ್ಲಿ ಸಿಎ ಸದಸ್ಯರ ಅಂತಾರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಅಧಿವೇಶನದಲ್ಲಿ ಉಪರಾಷ್ಟ್ರಪತಿಯವರ ಭಾಷಣ

Posted On: 15 OCT 2024 3:07PM by PIB Bengaluru

ನಿಮ್ಮೆಲ್ಲರಿಗೂ ಶುಭೋದಯ,

ನಿಮ್ಮ ಬಂಧುಬಳಗದೊಂದಿಗೆ ನನಗೆ ದೀರ್ಘಕಾಲದ ಒಡನಾಟವಿದೆ. ನಾನು ನಿಮ್ಮಲ್ಲಿ ಒಬ್ಬನಾಗಿದ್ದೇನೆ. 

ನಿಮ್ಮೆಲ್ಲರ ನಡುವೆ ಇರಲು ನಾನು ಅತ್ಯಂತ ಸಂತೋಷಪಡುತ್ತೇನೆ. ಈ ರಾಷ್ಟ್ರದ ಭವಿಷ್ಯವನ್ನು ರೂಪಿಸಲು ನಿಯೋಜಿತವಾಗಿರುವ ಇಂತಹ ಶಕ್ತಿಶಾಲಿ ಗುಂಪನ್ನು ಉದ್ದೇಶಿಸಿ ಮಾತನಾಡುವುದನ್ನು ನಾನು ದೊಡ್ಡ ಸೌಭಾಗ್ಯ ಮತ್ತು ಗೌರವವೆಂದು ಪರಿಗಣಿಸುತ್ತೇನೆ.

ಗೌರವಾನ್ವಿತ ಗಣ್ಯರೇ, ಸನ್ಮಾನ್ಯ ಸದಸ್ಯರೇ ಮತ್ತು ಇಲ್ಲಿ ಉಪಸ್ಥಿತರಿರುವ ಎಲ್ಲರೇ,
ಉದ್ಘಾಟನಾ ಅಧಿವೇಶನದಲ್ಲಿ ಭಾಗವಹಿಸುವುದು ಮತ್ತು ನಿಮ್ಮೊಂದಿಗೆ ಸಂಪರ್ಕ ಹೊಂದುವುದು ರಾಷ್ಟ್ರದ ಆರ್ಥಿಕತೆಯೊಂದಿಗೆ, ರಾಷ್ಟ್ರದ ಉದ್ಯಮದೊಂದಿಗೆ, ರಾಷ್ಟ್ರದ ವ್ಯಾಪಾರದೊಂದಿಗೆ, ರಾಷ್ಟ್ರದ ವಾಣಿಜ್ಯದೊಂದಿಗೆ, ರಾಷ್ಟ್ರದ ವೃತ್ತಿಪರರೊಂದಿಗೆ, ಮತ್ತು ಪ್ರಮುಖರಾದ ಯಾರೇ ಆಗಲಿ ಎಲ್ಲರೊಂದಿಗೆ ಸಂಪರ್ಕ ಹೊಂದಿದಂತೆ. ಈ ಅಪರೂಪದ ಅವಕಾಶಕ್ಕಾಗಿ ನಿಮಗೆ ಧನ್ಯವಾದಗಳು.

ಚಾರ್ಟರ್ಡ್ ಅಕೌಂಟೆಂಟ್ ಗಳು ಅನಾಮಧೇಯ ನಾಯಕರಾಗಿದ್ದರೂ, ಈಗ ಅವರ ಉಪಸ್ಥಿತಿಯನ್ನು ಅನುಭವಿಸಲಾಗುತ್ತಿದೆ.  ಹಿಂದೆ ಅನಾಮಧೇಯವಾಗಿದ್ದ ಕಥೆಗಳು ಈಗ ಹೆಚ್ಚು ಹೆಚ್ಚು ಗಟ್ಟಿಯಾಗಿ, ದೇಶದ ಒಳಿತಿಗಾಗಿ ನಮ್ಮ ಕಿವಿಗಳಲ್ಲಿ ಪ್ರಬಲವಾಗಿ ಧ್ವನಿಸುತ್ತಿವೆ. ನಮ್ಮ ಅಭಿವೃದ್ಧಿ ಪಥದಲ್ಲಿ ಪಾಲುದಾರರನ್ನು ನೀವು ಇನ್ನಷ್ಟು ಪ್ರಸ್ತುತಗೊಳಿಸಿ, ಹೊಣೆಗಾರರನ್ನಾಗಿಸುತ್ತೀರಿ. ಕ್ಷಿಪ್ರ ಜಾಗತೀಕರಣದ ಯುಗದಲ್ಲಿ ಆರ್ಥಿಕ ಸಂಪರ್ಕ ಅತ್ಯಗತ್ಯ. ನಿಮ್ಮ ತರಬೇತಿ , ನಿಮ್ಮ ಜ್ಞಾನ ಮತ್ತು ಅನುಭವದ ಮೂಲಕ, ನೀವು ನಿಜವಾದ ಸೇತುವೆಯಾಗಿದ್ದೀರಿ, ಹಣಕಾಸಿನ ಸಮಗ್ರತೆಯ ಜಾಗರೂಕ ಕಾವಲುಗಾರರು ಮತ್ತು ಸಂರಕ್ಷಕರಾಗಿದ್ದೀರಿ.

ಆ ಪುಸ್ತಕವನ್ನು ನನಗೆ ಕೊಟ್ಟಾಗ, ನಾನು ಏನು ಬರೆದಿದ್ದೆನೋ, ಅದನ್ನು ಬಹಿರಂಗಪಡಿಸುತ್ತೇನೆ, ನೀವು ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಸಂಕೇತ ಮತ್ತು ಈ ಪಾರದರ್ಶಕತೆಯು ಕೇವಲ ಒಂದು ಕಾನೂನುಬದ್ಧ ಅವಶ್ಯಕತೆ ಅಥವಾ ಒಂದು ವಿಧಿಪೂರ್ವಕ ಸಂಪ್ರದಾಯವಲ್ಲ. ಇದು ಸದೃಢವಾದ ಹಣಕಾಸು ಸಲಹೆ ಮತ್ತು ಸ್ಟ್ರಾಟೆಜಿಕ್ ದೃಷ್ಟಿಕೋನವನ್ನು ಒದಗಿಸುವ ಮೂಲಕ ನಮ್ಮ ಹಣಕಾಸು ವ್ಯವಸ್ಥೆಗಳಲ್ಲಿನ ವಿಶ್ವಾಸದ ಅಡಿಪಾಯವಾಗಿದೆ. ನನಗೆ ಗೊತ್ತು , ಯುವ ಉದ್ಯಮಿಗಳನ್ನು ಬೆಂಬಲಿಸುವ ಮೂಲಕ ನೀವು ಮಾತ್ರ ಇದನ್ನು ಮಾಡಲು ಸಮರ್ಥರು. ತಿಳುವಳಿಕೆಯುಳ್ಳ ಮತ್ತು ಕೆಲವೊಮ್ಮೆ ನವೀನ ನಿರ್ಧಾರಗಳನ್ನು ಮಾಡುವ ಮೂಲಕ ನೀವು ವ್ಯವಹಾರವನ್ನು ಸುಗಮಗೊಳಿಸುತ್ತೀರಿ, ನೀವು ಜನರಲ್ಲಿ ಭವಿಷ್ಯದ ದೃಷ್ಟಿಯನ್ನು ಹುಟ್ಟುಹಾಕುತ್ತೀರಿ, ಇದರಿಂದಾಗಿ ಬೆಳವಣಿಗೆ ಮತ್ತು ನಾವೀನ್ಯತೆಯನ್ನು ವೇಗಗೊಳಿಸುತ್ತೀರಿ, ಇವೆರಡೂ ಉತ್ತಮ ಆಡಳಿತದ ಆಧಾರಸ್ತಂಭಗಳಾಗಿವೆ. 

ಭಾರತದ ಗಮನಾರ್ಹ ಆರ್ಥಿಕ ಪ್ರಯಾಣವು ಜಾಗತಿಕ ಮಟ್ಟದಲ್ಲಿ ಪ್ರಭಾವವನ್ನು ಬೀರಿದೆ. ನಾವು ಅಸಾಧಾರಣ ಆರ್ಥಿಕ ಬೆಳವಣಿಗೆಯನ್ನು ಸಾಧಿಸಿದ್ದೇವೆ ಮತ್ತು ರಾಷ್ಟ್ರವನ್ನು ಐದನೇ ಅತಿದೊಡ್ಡ ಜಾಗತಿಕ ಆರ್ಥಿಕತೆಯನ್ನಾಗಿ ಮಾಡಿದೆ. ಜರ್ಮನಿ ಮತ್ತು ಜಪಾನ್ಗಿಂತ ಮುಂದೆ ಮೂರನೇ ಸ್ಥಾನಕ್ಕೆ ಬರುವ ದಾರಿಯಲ್ಲಿದೆ. ಆದರೆ ನಮ್ಮ ಗುರಿ ಬಹಳ ಭಿನ್ನವಾಗಿದೆ.  ಪ್ರಧಾನಮಂತ್ರಿಯವರು ತಮ್ಮ ದೃಷ್ಟಿಕೋನವನ್ನು ಬಿಚ್ಚಿಟ್ಟಿದ್ದಾರೆ. ಆ ದೃಷ್ಟಿಕೋನವೆಂದರೆ, ನಾವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು. ಅಭಿವೃದ್ಧಿ ಹೊಂದಿದ ರಾಷ್ಟ್ರ ಎಂದರೇನು ಎಂಬುದನ್ನು ಇಲ್ಲಿರುವ ಈ ವರ್ಗದ ಜನರಿಗಿಂತ ಚೆನ್ನಾಗಿ ಯಾರೂ ತಿಳಿದಿಲ್ಲ.

ಈ ಸವಾಲು ಕಷ್ಟಕರವಾಗಿದ್ದರೂ ಸಾಧ್ಯವಾಗುವಂತಹುದು, ನಮ್ಮ ಮಾನವ ಸಂಪನ್ಮೂಲದಲ್ಲಿನ ಪರಿಣತಿಯನ್ನು ನೋಡಿದರೆ. ನಾವು ನಮ್ಮ ತಲಾ ಆದಾಯವನ್ನು ಎಂಟು ಪಟ್ಟು ಹೆಚ್ಚಿಸುವ ಮೂಲಕ ಈ ಪಯಣವನ್ನು ಕೈಗೊಳ್ಳಬೇಕಾಗುತ್ತದೆ. ನಾವು ಖಂಡಿತವಾಗಿಯೂ ಎದುರಿಸುವ ಸವಾಲು ಇದು.

ಏಕೆಂದರೆ ಇಡೀ ದೇಶದಲ್ಲಿ ಒಂದು ಬಹಳ ದೊಡ್ಡ ಯಜ್ಞ ನಡೆಯುತ್ತಿದೆ. ಆ ಯಜ್ಞವು ವಿಕಸಿತ ಭಾರತಕ್ಕಾಗಿ. ಅದರ ಗುರಿಯು 2047 ರಲ್ಲಿ ಭಾರತವು ವಿಕಸಿತವಾಗುವುದು. ಆ ಯಜ್ಞದಲ್ಲಿ ಪ್ರತಿಯೊಬ್ಬರ ಆಹುತಿಯ ಅಗತ್ಯವಿದೆ, ನನ್ನ ಮನಸ್ಸಿನಲ್ಲಿ ಯಾವುದೇ ಸಂದೇಹವಿಲ್ಲ ಯಾರಾದರೂ ಪೂರ್ಣ ಆಹುತಿ ನೀಡುವುದಾದರೆ, ಅದನ್ನು ನಿಮ್ಮ ಸಮುದಾಯವೇ ನೀಡುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ವಿಶ್ವಬ್ಯಾಂಕ್ ನ ಈಸ್ ಆಫ್ ಡೂಯಿಂಗ್ ಬಿಸಿನೆಸ್ ಶ್ರೇಯಾಂಕದಲ್ಲಿ ನಾವು ಗಮನಾರ್ಹ ಪ್ರಗತಿ ಸಾಧಿಸಿದ್ದೇವೆ. ಇದು ವಿವಿಧ ಪಾಲುದಾರರ ಜಂಟಿ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ. ಅವರಲ್ಲಿ ಪ್ರಮುಖರು ಚಾರ್ಟರ್ಡ್ ಅಕೌಂಟೆಂಟ್ ಗಳು ಎಂಬುದು ಕೂಡ ಗಮನಾರ್ಹ.

ಪ್ರಿಯ ಸ್ನೇಹಿತರೇ, 5,000 ವರ್ಷಗಳ ನಾಗರಿಕ ನೈತಿಕತೆಯನ್ನು ಹೊಂದಿರುವ ವಿಶ್ವದಲ್ಲಿ ನಾವು ಒಂದೇ ದೇಶವಾಗಿದ್ದೇವೆ. ನೈತಿಕತೆಯು ನಮ್ಮ ರಕ್ತದಲ್ಲಿದೆ, ನೈತಿಕತೆಯು ನಮ್ಮ ಡಿಎನ್ಎ ಆಗಿದೆ ಮತ್ತು ಲೆಕ್ಕಪತ್ರ ಮತ್ತು ಆಡಿಟ್ನಲ್ಲಿ ನೈತಿಕತೆಯು ವಿಶ್ವಾಸದ ಮೂಲಾಧಾರವಾಗಿದೆ ಎಂದು ನನಗಿಂತ ಹೆಚ್ಚಾಗಿ ನಿಮಗೆ ತಿಳಿದಿದೆ ಮತ್ತು ನೈತಿಕ ಅಭ್ಯಾಸಗಳ ಬಗ್ಗೆ ಅಚಲವಾದ ಬದ್ಧತೆಯನ್ನು ಬೇಡುತ್ತದೆ. ಇದರಲ್ಲಿ ಯಾವುದೇ ಮಾಪನಾಂಕ ಇರುವುದಿಲ್ಲ, ಇದು ಶೇಕಡಾ 100 ರಷ್ಟಿರಬೇಕು. ಇದು ಒಂದು ಆಯ್ಕೆಯಲ್ಲ, ಇದೊಂದೇ ಮಾರ್ಗ.

ಈ ಡಿಜಿಟಲ್ ಯುಗದಲ್ಲಿ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) , ಬ್ಲಾಕ್ಚೈನ್ , ಮೆಷಿನ್ ಲರ್ನಿಂಗ್ (ML) , ಡೇಟಾ ಅನಾಲಿಟಿಕ್ಸ್ ಮತ್ತು ನಾವು ಪರಿವರ್ತಕ ತಂತ್ರಜ್ಞಾನಗಳು ಎಂದು ಕರೆಯುವ ಇತರ ತಂತ್ರಜ್ಞಾನಗಳಿಂದ ಸೂಚಿಸಲ್ಪಟ್ಟಂತೆ, ಲೆಕ್ಕಪತ್ರ ಮತ್ತು ಆಡಿಟ್ನ ಕ್ಷೇತ್ರವು ವೇಗವಾಗಿ ವಿಕಸನಗೊಳ್ಳುತ್ತಿದೆ.  ಈ ಪ್ರಮುಖ ಅಂಶದತ್ತ ಗಮನ ಹರಿಸುತ್ತಿರುವ ಅಗ್ರ ರಾಷ್ಟ್ರಗಳಲ್ಲಿ ಭಾರತವೂ ಇದೆ ಎಂದು ತಿಳಿದರೆ ನಿಮಗೆ ಸಂತೋಷವಾಗುತ್ತದೆ.

ನಿನ್ನೆಯಷ್ಟೇ, ಭಾರತೀಯ ರಿಸರ್ವ್ ಬ್ಯಾಂಕ್ನ ಗವರ್ನರ್ ಇಲ್ಲಿ ಸೂಚಿಸಲಾದ ವಿಷಯದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ನಾವು ಕೃತಕ ಬುದ್ಧಿಮತ್ತೆಯ ಸೆರೆಯಾಳುಗಳಾಗುವ ಬದಲು ಅದನ್ನು ನಮ್ಮ ಹತೋಟಿಯಲ್ಲಿಟ್ಟುಕೊಳ್ಳಬೇಕು. ಕೃತಕ ಬುದ್ಧಿಮತ್ತೆ ಮತ್ತು ಅದರ ಪ್ರಕಾರಗಳು ಸವಾಲುಗಳು ಮತ್ತು ಅವಕಾಶಗಳಾಗಿವೆ. ನಾವು ಈ ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸಬೇಕು. ಈ ದಿಕ್ಕಿನಲ್ಲಿ ಸಂಸ್ಥೆಯು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ.

ಅಂತಾರಾಷ್ಟ್ರೀಯ ಹಣಕಾಸು ವರದಿ ಮಾನದಂಡಗಳೊಂದಿಗೆ ಭಾರತೀಯ ಲೆಕ್ಕಪತ್ರ ಮಾನದಂಡಗಳ ಸಮನ್ವಯವು ಒಂದು ಪ್ರಮುಖ ಹಂತವಾಗಿದೆ , ಇದಕ್ಕಾಗಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ.  ಚಾರ್ಟರ್ಡ್ ಅಕೌಂಟೆಂಟ್ಗಳು ಕೇವಲ ಅಂಕಿಗಳಲ್ಲ. ನಾನು ವಕೀಲನಾಗಿದ್ದಾಗ ಒಂದು ಸಂದರ್ಭವನ್ನು ನೆನಪಿಸಿಕೊಳ್ಳುತ್ತೇನೆ. ಆಗ ಜನರು ತಮಾಷೆಯಾಗಿ "ಚಾರ್ಟರ್ಡ್ ಅಕೌಂಟೆನ್ಸಿಯಲ್ಲಿ ಪಾಸಾಗುವುದು ಕಷ್ಟ ಮತ್ತು ವಕೀಲಿಯಲ್ಲಿ ಫೇಲಾಗುವುದು ಕಷ್ಟ." ಎಂದು ಹೇಳುತ್ತಿದ್ದರು.  ಈಗ ಪರಿಸ್ಥಿತಿ ಬಹಳಷ್ಟು ಬದಲಾಗಿದೆ ಮತ್ತು ಕಾನೂನು ಶಿಕ್ಷಣವೂ ನಿಮ್ಮಂತೆಯೇ ಬಹಳ ವೃತ್ತಿಪರವಾಗಿ ಬೆಳೆದಿದೆ. ನಾನು ನನ್ನ ಕಾಲದ ಬಗ್ಗೆ ಮಾತನಾಡುತ್ತಿದ್ದೇನೆ. ಚಾರ್ಟರ್ಡ್ ಅಕೌಂಟೆಂಟ್ ಗಳು ಕೇವಲ ಅಂಕಿಗಳನ್ನು ನಿರ್ವಹಿಸುವವರು ಅಥವಾ ಅನುಸರಣಾ ಅಧಿಕಾರಿಗಳಲ್ಲ. ನಿಮ್ಮ ಕೆಲಸ ಯಾಂತ್ರಿಕವಲ್ಲ, ನಿಮ್ಮ ಕೆಲಸ ಭಾವನಾತ್ಮಕವೂ ಆಗಿದೆ ಎಂದು ನಾನು ಹೇಳಬಯಸುತ್ತೇನೆ. ಏಕೆಂದರೆ ನಮ್ಮ ದೇಶದಲ್ಲಿ ಕೈಗಾರಿಕಾ ಮನೆತನಗಳು ಸಾಮಾನ್ಯವಾಗಿ ಪಾಲುದಾರಿಕೆ ಅಥವಾ ಕುಟುಂಬ ನಿರ್ವಹಣೆಯ ಮಾದರಿಯನ್ನು ಹೊಂದಿವೆ ಎಂದು ನಾವು ಬಲ್ಲೆವು. ನಾನು ಪ್ಯಾರಿಸ್ನಲ್ಲಿರುವ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಲಯದ ಸದಸ್ಯನಾಗಿದ್ದಾಗ ಯಾರೋ ನನಗೆ ಹೇಳಿದ್ದರು, "ಭಾರತವು ಕಾರ್ಪೊರೇಟ್ ಗಳ ವಿಶಿಷ್ಟ ಪರಿಕಲ್ಪನೆಯನ್ನು ಹೊಂದಿದೆ, ಅದೇ ಕುಟುಂಬ ಕಾರ್ಪೊರೇಟ್ ಗಳು." ಇದನ್ನು ಸಾಮರಸ್ಯದಿಂದ ಇರಿಸುವುದು, ಇದು ಕಾರ್ಯನಿರತವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು, ಇದು ವಿಘಟನೆಯ ಹಾದಿಗೆ ಹೋಗದಂತೆ ನೋಡಿಕೊಳ್ಳುವುದು ನಿಮ್ಮ ಮುಂದಿರುವ ಸವಾಲಾಗಿದೆ. ಈ ವಿಷಯ ನನಗಿಂತ ನಿಮಗೆ ಚೆನ್ನಾಗಿ ತಿಳಿದಿದೆ ಎಂದು ನನಗೆ ಖಚಿತವಾಗಿ ಗೊತ್ತು.

ಹೆಚ್ಚಿನ ಸಂದರ್ಭಗಳಲ್ಲಿ ಇದು ತೆರೆಮರೆಯ ಕೆಲಸವಾಗಿರುತ್ತದೆ. ಬಲಿಷ್ಠ, ಪಾರದರ್ಶಕ ಮತ್ತು ಚೈತನ್ಯಶೀಲ ಆರ್ಥಿಕತೆಯನ್ನು ನಿರ್ಮಿಸುವಲ್ಲಿ ಇದು ನಿರ್ಣಾಯಕ ಪಾತ್ರ ವಹಿಸುತ್ತದೆ. ಈಗ, ನಮಗೆ ಸವಾಲು ಬಹಳ ಭಿನ್ನವಾಗಿದೆ ಏಕೆಂದರೆ ನಾವು ಹಿಂದೆಂದೂ ಇಲ್ಲದಷ್ಟು ಬೆಳವಣಿಗೆಯಲ್ಲಿದ್ದೇವೆ.  ನಮ್ಮ ಬೆಳವಣಿಗೆಯನ್ನು ತಡೆಯಲು ಸಾಧ್ಯವಿಲ್ಲ. ನಮ್ಮ ಬೆಳವಣಿಗೆಯು ಕ್ರಮೇಣ ಹೆಚ್ಚುತ್ತಿರುವ ಹಾದಿಯಲ್ಲಿದೆ ಮತ್ತು ಆರ್ಥಿಕತೆಯು ಇಂತಹ ಪರಿಸ್ಥಿತಿಯಲ್ಲಿರುವಾಗ, ನೀವು ಹೆಚ್ಚು ಎಚ್ಚರಿಕೆಯಿಂದಿರಬೇಕು. ಇದನ್ನು ನಿಮ್ಮ ಸಂಸ್ಥೆಯಿಂದ ಮಾತ್ರ ಮಾಡಲು ಸಾಧ್ಯ.

ಮೊದಲನೆಯದಾಗಿ, ನಾನು ಒತ್ತಾಯಿಸುವುದೇನೆಂದರೆ, ಸಾಮೂಹಿಕ, ರಾಷ್ಟ್ರೀಯ ದೃಷ್ಟಿಕೋನವೇ ಆರ್ಥಿಕ ಸಮೃದ್ಧಿಯ ಮೂಲಾಧಾರವಾಗಿದೆ. ಇದರಲ್ಲಿ ನೀವೆಲ್ಲರೂ ಮುಖ್ಯವಾಗಿ ಆಸಕ್ತರಾಗಿದ್ದೀರಿ ಎಂದು ನಾನು ಭಾವಿಸುತ್ತೇನೆ, ಏಕೆಂದರೆ ಇದಕ್ಕೆ ಹೆಚ್ಚಿನ ವಿವರಣೆ ಅಗತ್ಯವಿಲ್ಲ. ನಾವು ಪಿರಮಿಡ್ ಆಕಾರದಲ್ಲಿರಲು ಸಾಧ್ಯವಿಲ್ಲ, ನಾವು ಪ್ರಸ್ಥಭೂಮಿಯಾಗಿರಬೇಕು, ಅದೇ ನಮ್ಮ ಸಂಸ್ಕೃತಿ. ನಾವು ಎಲ್ಲರನ್ನೂ ನಮ್ಮೊಂದಿಗೆ ಕರೆದುಕೊಂಡು ಹೋಗುತ್ತೇವೆ. ಅದಕ್ಕಾಗಿಯೇ G20 ನಲ್ಲಿ ನಾವು ಈ ಧ್ಯೇಯವಾಕ್ಯವನ್ನು ನೀಡಿದೆವು: ಒಂದು ಜಗತ್ತು, ಒಂದು ಕುಟುಂಬ, ಒಂದು ಭವಿಷ್ಯ - 'ವಸುಧೈವ ಕುಟುಂಬಕಂ'.

ನಮ್ಮ ರಾಷ್ಟ್ರೀಯ ಸಂವಾದದಲ್ಲಿ ಈ ರಾಷ್ಟ್ರೀಯ ದೃಷ್ಟಿಕೋನದ ಬಗ್ಗೆ ಹೆಚ್ಚಿನ ಚರ್ಚೆಯ ಅಗತ್ಯವಿದೆ. ಏಕೆಂದರೆ ಇಂದು, ಹಿಂದೆಂದಿಗಿಂತಲೂ ಹೆಚ್ಚಾಗಿ, ನಮ್ಮ ನಾಗರಿಕರು ರಾಷ್ಟ್ರೀಯವಾದಿಗಳಾಗಿರುವ ಅಗತ್ಯವಿದೆ. ಈ ದೇಶದಲ್ಲಿ, ರಾಷ್ಟ್ರೀಯ ಹಿತಾಸಕ್ತಿಗಿಂತ ಮುಂಚೆ ಪಕ್ಷಪಾತದ ಹಿತಾಸಕ್ತಿ, ವೈಯಕ್ತಿಕ ಹಿತಾಸಕ್ತಿ, ನಂಬಿಕೆಯ ಹಿತಾಸಕ್ತಿ, ಸ್ವಹಿತಾಸಕ್ತಿಗಳಿರುತ್ತವೆ ಎಂದು ನಾವು ಹೇಗೆ ಊಹಿಸಬಹುದು? ಇದನ್ನು ನಾವು ಸಾಕಷ್ಟು ಸಲ ನೋಡುತ್ತೇವೆ. ನೀವು ಈ ದಿಕ್ಕಿನಲ್ಲಿ ಯಶಸ್ವಿಯಾಗಿ ದೊಡ್ಡ ಮುಂದಾಳತ್ವವನ್ನು ವಹಿಸಬಹುದು. ಅನೇಕ ಸವಾಲುಗಳನ್ನು ಎದುರಿಸಿದ ನಂತರ, ನಾವು ಬಹಳ ದೂರ ಬಂದಿದ್ದೇವೆ. ಕೆಲವೇ ಪೀಳಿಗೆಗಳಲ್ಲಿ, ಹಡಗಿನಿಂದ ಆಹಾರ ಪಡೆಯುವ ದೇಶದಿಂದ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯಾಗಿ ಬೆಳೆದಿದ್ದೇವೆ. ಈ ಏಳಿಗೆಯೊಂದಿಗೆ, ಆಂತರಿಕ ಮತ್ತು ಬಾಹ್ಯ ಸವಾಲುಗಳು ಬೆಳೆಯುತ್ತವೆ.

ನಾನು 1989ರಲ್ಲಿ ಸಂಸತ್ತಿಗೆ ಆಯ್ಕೆಯಾಗಿದ್ದೆ ಮತ್ತು ಆಗಿನ ಪರಿಸ್ಥಿತಿ ನನಗೆ ತಿಳಿದಿದೆ. ನೀವೆಲ್ಲರೂ ಕಾಳಜಿ ವಹಿಸುವ ನಮ್ಮ ವಿದೇಶಿ ವಿನಿಮಯ ಮೀಸಲು ಸುಮಾರು 1 ಬಿಲಿಯನ್ ಅಮೇರಿಕನ್ ಡಾಲರ್ಗಳಷ್ಟಿತ್ತು. ಚಿನ್ನದ ಹಕ್ಕಿ ಎಂದೇ ಕರೆಯಲಾಗುವ ದೇಶದ ಚಿನ್ನವನ್ನು ಸ್ವಿಟ್ಜರ್ಲೆಂಡ್ ನ ಎರಡು ಬ್ಯಾಂಕ್ ಗಳಲ್ಲಿ ಅಡಮಾನ ಇಡಬೇಕಿತ್ತು. ನಮ್ಮ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಲು ಅದನ್ನು ವಿಮಾನದ ಮೂಲಕ ಸಾಗಿಸಲಾಯಿತು. ಆದರೆ ಈಗ ಎಂತಹ ಹೆಮ್ಮೆಯ ಕ್ಷಣ! ನಮ್ಮ ವಿದೇಶಿ ವಿನಿಮಯ ಮೀಸಲು 700 ಬಿಲಿಯನ್ ಡಾಲರ್ಗಳಿಗಿಂತ ಹೆಚ್ಚಾಗಿದೆ. ಇದು ಒಂದು ದೊಡ್ಡ ಸಾಧನೆ.

ಆದ್ದರಿಂದ, ನಾನು ಪ್ರಸ್ತಾಪಿಸಬೇಕಾದ ಅತಿದೊಡ್ಡ ಸವಾಲು ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಸವಾಲಾಗಿದೆ. ಈ ಸವಾಲು ಅಪಾಯಕಾರಿ ಮಟ್ಟವನ್ನು ತಲುಪಿದೆ, ಇದು ಭಯಾನಕವಾಗಿ ಕಳವಳಕಾರಿಯಾಗಿದೆ. ಅದೇನೆಂದರೆ, ನಮ್ಮ ಸಾಮಾಜಿಕ ಸಾಮರಸ್ಯವನ್ನು ಕದಡಲು ವಿವಿಧ ಸಂವಾದಗಳು ಮತ್ತು ಪ್ರಯತ್ನಗಳು ನಡೆಯುತ್ತಿವೆ. ಆದುದರಿಂದ ಜಾತಿ, ಮತ , ವರ್ಣ , ಸಂಸ್ಕೃತಿ , ನಂಬಿಕೆಯ ಪಂಗಡಗಳಿಂದ ನರಳದೇ ರಾಷ್ಟ್ರೀಯತೆಯ ನೆಲೆಗಟ್ಟಿನಲ್ಲಿ ಯೋಚಿಸುವ ಸಮಾಜವನ್ನು ಕಟ್ಟಲು ನಾವೆಲ್ಲರೂ ಉತ್ಸಾಹದಿಂದ ಕೆಲಸ ಮಾಡಬೇಕಾಗಿದೆ .

ನಾವೆಲ್ಲರೂ ಇದನ್ನು ಗ್ರಹಿಸುತ್ತಿದ್ದೇವೆ, ನಾನು ಈ ದೃಶ್ಯವನ್ನು ವಿವರಿಸುತ್ತೇನೆ. ಬಹುಸಂಖ್ಯಾತರಾಗಿ ನಾವು ಎಲ್ಲರನ್ನೂ ಒಳಗೊಳ್ಳುವವರು, ಬಹುಸಂಖ್ಯಾತರಾಗಿ ನಾವು ಸಹಿಷ್ಣುಗಳು, ಬಹುಸಂಖ್ಯಾತರಾಗಿ ನಾವು ಸಮಾಧಾನಕಾರಕ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತೇವೆ. ಆದರೆ ನಮಗೆ ವಿರುದ್ಧವಾಗಿ ಗೋಡೆಯ ಮೇಲೆ ಬರೆದಿರುವಂತೆ ಮತ್ತೊಂದು ರೀತಿಯ ಬಹುಸಂಖ್ಯಾತರಿದ್ದಾರೆ - ಅವರು ಕ್ರೂರರು, ನಿರ್ದಯರು, ತಮ್ಮ ಕಾರ್ಯನಿರ್ವಹಣೆಯಲ್ಲಿ ಉದಾಸೀನರು, ಇತರರ ಎಲ್ಲಾ ಮೌಲ್ಯಗಳನ್ನು ತುಳಿದುಹಾಕುವುದರಲ್ಲಿ ನಂಬಿಕೆ ಇಟ್ಟವರು.

ಸ್ನೇಹಿತರೇ, ನೀವು ಈ ಮಹಾನ್ ನಾಗರಿಕ ರಾಷ್ಟ್ರ ಭಾರತದ ನಾಗರಿಕರಾಗಿ ಯೋಚಿಸಿದಾಗ, ಮಾನವಕುಲದ ಆರನೇ ಒಂದು ಭಾಗಕ್ಕೆ ನೆಲೆಯಾಗಿರುವ ಮತ್ತು ಅಸಾಧಾರಣ ಮಾನವ ಪ್ರತಿಭೆಗೆ ಹೆಸರುವಾಸಿಯಾದ ಸ್ಥಳವಾಗಿ ಜಗತ್ತಿನಲ್ಲಿ ಗುರುತಿಸಲ್ಪಟ್ಟಿರುವ ದೇಶದ ಬಗ್ಗೆ ಯೋಚಿಸುವಾಗ, ನಾವು ಸೀಮಿತ ಸಂಕುಚಿತ ವಿಭಜನೆಗಳನ್ನು ಬಿಡಬೇಕಾಗುತ್ತದೆ. ರಾಷ್ಟ್ರೀಯವಾದಿ ದೃಷ್ಟಿಕೋನ ಹೊಂದಿರುವ ಜನರು ವೈವಿಧ್ಯತೆಯನ್ನು ಅಳವಡಿಸಿಕೊಳ್ಳಲು ಯಾವುದೇ ತೊಂದರೆಯಾಗುವುದಿಲ್ಲ , ಅವರ ಧರ್ಮವನ್ನು ಲೆಕ್ಕಿಸದೆ ಈ ದೇಶದ ಭವ್ಯವಾದ ಗತಕಾಲವನ್ನು ಆಚರಿಸುತ್ತಾರೆ , ಏಕೆಂದರೆ ಇದು ನಮ್ಮ ಸಾಮಾನ್ಯ ಸಾಂಸ್ಕೃತಿಕ ಪರಂಪರೆಯಾಗಿದೆ. ನಮ್ಮ ಸಾಂಸ್ಕೃತಿಕ ಪರಂಪರೆಯ ಮೇಲೆ ದಾಳಿ ನಡೆಸಲಾಗುತ್ತಿದೆ. ಅದನ್ನು ನಮ್ಮ ದೌರ್ಬಲ್ಯವೆಂದು ತೋರಿಸಲು ಪ್ರಯತ್ನಿಸಲಾಗುತ್ತಿದೆ, ಅದರ ಅಡಿಯಲ್ಲಿ ದೇಶವನ್ನು ನಾಶಮಾಡುವ ಯೋಜನೆ ರೂಪಿಸಲಾಗಿದೆ. ಅಂತಹ ಶಕ್ತಿಗಳ ವಿರುದ್ಧ ವೈಚಾರಿಕ ಮತ್ತು ಮಾನಸಿಕ ಪ್ರತಿಕ್ರಿಯೆ ಇರಬೇಕು.

ನನ್ನ ಎದುರಿಗಿರುವ ಜನರೇ ಈ ಸಂಪೂರ್ಣ ಸಂಭಾಷಣೆಯ ಕೇಂದ್ರಬಿಂದು . ಅಂತಹ ಏಕತೆ ಮತ್ತು ಸಾಮರಸ್ಯವು ಆರ್ಥಿಕ ಸಮೃದ್ಧಿಯ ಆಧಾರವಾಗಿದೆ. ನಾವು ವೇಗವಾಗಿ ಬೆಳೆಯುತ್ತಿದ್ದೇವೆ , ಮೂಲಸೌಕರ್ಯದಲ್ಲಿನ ನಮ್ಮ ಬೆಳವಣಿಗೆಯ ಪ್ರಯಾಣವು ಜಗತ್ತನ್ನು ಬೆರಗುಗೊಳಿಸಿದೆ. ಜಾಗತಿಕ ಸಂಸ್ಥೆಗಳು , ಐಎಂಎಫ್ , ವಿಶ್ವಬ್ಯಾಂಕ್ , ಭಾರತವನ್ನು ಅನೇಕ ಕಾರಣಗಳಿಗಾಗಿ ವಿಶೇಷವಾಗಿ ಡಿಜಿಟಲೀಕರಣಕ್ಕಾಗಿ ಹೊಗಳುತ್ತಿವೆ. ಆದರೆ ಸಾಮಾಜಿಕ ಏಕತೆ ಮುರಿದಾಗ, ರಾಷ್ಟ್ರೀಯತೆಯ ಉತ್ಸಾಹವು ಕಳೆದುಹೋದಾಗ, ದೇಶದ ಒಳಗೆ ಮತ್ತು ಹೊರಗೆ ದೇಶವಿರೋಧಿ ಶಕ್ತಿಗಳು ಸೃಷ್ಟಿಯಾದಾಗ ಈ ಆರ್ಥಿಕ ಬೆಳವಣಿಗೆ ದುರ್ಬಲವಾಗುತ್ತದೆ. ನಾವು ಇದರ ಬಗ್ಗೆ ಎಚ್ಚರದಿಂದಿರಬೇಕು.

ನಮ್ಮ ಸಮಾಜವು ಶತಮಾನಗಳಿಂದ ಸವಾಲುಗಳನ್ನು ಎದುರಿಸುತ್ತಿರುವವರು, ಅಂಚಿನಲ್ಲಿರುವವರು, ದುರ್ಬಲರು ಮತ್ತು ಅಶಕ್ತರಿಗೆ ಕೈಹಿಡಿಯುವುದಕ್ಕಾಗಿ ಹೆಸರುವಾಸಿಯಾಗಿದೆ. ಅನೇಕ ಸರ್ಕಾರಿ ಯೋಜನೆಗಳು ಒಂದು ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಿವೆ ಎಂಬುದನ್ನು ಗಮನಿಸುವುದು ಸಂತೋಷದ ವಿಷಯವಾಗಿದೆ, ಇಲ್ಲಿ ಈಗ ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯವನ್ನು ಬಳಸಿಕೊಳ್ಳಬಹುದು, ಕನಸುಗಳನ್ನು ನನಸಾಗಿಸಬಹುದು ಮತ್ತು ಆಕಾಂಕ್ಷೆಗಳನ್ನು ಈಡೇರಿಸಬಹುದು. ಆದರೆ ಇದರಲ್ಲಿ ನಿಮ್ಮ ಪಾತ್ರವೂ ಅಪಾರವಾಗಿದೆ, ಮತ್ತು ನೀವು ಇದುವರೆಗೆ ಮಾಡಿದ ಎಲ್ಲದರಂತೆಯೇ, ಇದನ್ನೂ ಸಹ ನೀವು ನಿಭಾಯಿಸುತ್ತೀರಿ ಎಂದು ನನಗೆ ಖಾತ್ರಿಯಿದೆ.

ಯಾರಿಗೂ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುವ ಹಕ್ಕಿಲ್ಲ. ಇದು ಸಾರ್ವತ್ರಿಕ ಸತ್ಯ. ಹಿಂದೆ ಕೆಲವರು ತಾವು ಕಾನೂನಿಗಿಂತ ಮೇಲಿನವರು, ವಿಶೇಷ ಸವಲತ್ತುಳ್ಳವರು ಎಂದು ಭಾವಿಸುತ್ತಿದ್ದರು. ಕಾನೂನು ಅವರಿಗೇನೂ ಮಾಡಲಾರದು, ಕಾನೂನಿನ ಕೈ ಅವರನ್ನು ಮುಟ್ಟಲಾರದು ಎಂಬ ಪರಿಸ್ಥಿತಿಯಲ್ಲಿ ದೊಡ್ಡ ಬದಲಾವಣೆ ಬಂದಿದೆ. ಆದರೂ ಬದಲಾವಣೆ ಬಂದಿದ್ದರೂ ಇಂದು ನಾವು ನೋಡುತ್ತಿರುವುದೇನೆಂದರೆ, ಜವಾಬ್ದಾರಿಯುತ ವ್ಯಕ್ತಿಗಳು, ಸಂವಿಧಾನಾತ್ಮಕ ಹುದ್ದೆಗಳಲ್ಲಿ ಕುಳಿತವರು ಕಾನೂನಿನ ಪರವಾಗಿಲ್ಲ, ದೇಶದ ಪರವಾಗಿಲ್ಲ, ಏನೇನೋ ಮಾತನಾಡುತ್ತಾರೆ. ಅವರು ಹೀಗೆ ಸುಮ್ಮನೆ ಮಾತನಾಡುವುದಿಲ್ಲ. ಇದು ಭಾರತ ವಿರೋಧಿ ಶಕ್ತಿಗಳಿಂದ ಚೆನ್ನಾಗಿ ರೂಪಿಸಲ್ಪಟ್ಟ ಒಂದು ದುರುದ್ದೇಶಪೂರಿತ ಯೋಜನೆಯಾಗಿ ಹೊರಹೊಮ್ಮುತ್ತಿದೆ.

ಹಾಗಾದರೆ ನೀವು ಇಷ್ಟೆಲ್ಲಾ ಮಾಡುತ್ತಿರುವುದು ಮತ್ತು ಅದರ ಫಲಿತಾಂಶಗಳನ್ನು ಇಂದು ಪ್ರತಿಯೊಬ್ಬ ಭಾರತೀಯನು ಸಂತೋಷದಿಂದ ಅನುಭವಿಸುತ್ತಿರುವುದನ್ನು ನಾಶಮಾಡಲು ಕೆಲವರು ಯೋಜನೆ ಹಾಕುತ್ತಿದ್ದಾರೆ. ನಮ್ಮ ಪ್ರಗತಿಯನ್ನು ಅವರು ಸಹಿಸಲಾರದೆ ಇದ್ದಾರೆ. ನಾವು ರಾಜಕೀಯ ಅಧಿಕಾರಕ್ಕಾಗಿ ಹುಚ್ಚರಾಗುವಂತಿಲ್ಲ, ರಾಜಕೀಯ ಅಧಿಕಾರವು ಜನರಿಂದ ಹುಟ್ಟಿಕೊಳ್ಳಬೇಕು. ಅದು ಪವಿತ್ರಗೊಳಿಸಲ್ಪಟ್ಟ ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಮೂಲಕ ಜನತೆ ಮಾಡಬೇಕು. 

ನಾನು ನಿಮಗೆ ವಿಶೇಷವಾಗಿ ಒಂದು ಮನವಿ ಮಾಡುತ್ತೇನೆ, ಏಕೆಂದರೆ ಅದು ನೀವು ಮಾತ್ರ ನಿಭಾಯಿಸಬಲ್ಲ ಜವಾಬ್ದಾರಿಯಾಗಿದೆ, ಅದೇ ಆರ್ಥಿಕ ರಾಷ್ಟ್ರೀಯತೆ. ಪ್ರತಿ ವರ್ಷವೂ ಶತಕೋಟಿ ಡಾಲರ್ ಗಳಷ್ಟು ವಿದೇಶಿ ವಿನಿಮಯವನ್ನು ಅನಗತ್ಯ ಆಮದುಗಳಿಗಾಗಿ ಖರ್ಚು ಮಾಡಲಾಗುತ್ತಿದೆ - ಶರ್ಟ್ಗಳು , ಪ್ಯಾಂಟ್ಗಳು , ಬೂಟುಗಳು , ಕಾರ್ಪೆಟ್ಗಳು , ಪೀಠೋಪಕರಣಗಳು , ಗಾಳಿಪಟಗಳು , ದೀಪಗಳು , ಆಟಿಕೆಗಳು ಮತ್ತುಇನ್ನೂ ಏನೇನೋ. ನಾವು ಮೂರು ವಿಷಯಗಳನ್ನು ಮಾಡುತ್ತಿದ್ದೇವೆ:

ನಾವು ನಮ್ಮ ಜನರಿಗೆ ಕೆಲಸವನ್ನು ನಿರಾಕರಿಸುತ್ತಿದ್ದೇವೆ, ನಮ್ಮ ವಿದೇಶಿ ವಿನಿಮಯವನ್ನು ಬಸಿದುಕೊಳ್ಳುತ್ತಿದ್ದೇವೆ ಮತ್ತು ಉದ್ಯಮಶೀಲತೆಯನ್ನು ಮೊಂಡುಗೊಳಿಸುತ್ತಿದ್ದೇವೆ. ಈಗ ತಪ್ಪಿಸಬಹುದಾದ ವಸ್ತುಗಳ ಆಮದನ್ನು ಯಾರು ಮಾಡುತ್ತಿದ್ದಾರೆ? ರಾಷ್ಟ್ರೀಯ ಹಿತಾಸಕ್ತಿಗಿಂತ ತಮ್ಮ ಹಣಕಾಸಿನ ಲಾಭವನ್ನು ಬಯಸುವವರು.

ನಾನು ನಿಮಗೆ ಮನವಿ ಮಾಡುತ್ತೇನೆ, ಯಾವುದೇ ಹಣಕಾಸಿನ ಲಾಭ, ಅದು ಎಷ್ಟೇ ಪ್ರಮಾಣದ್ದಾಗಿರಲಿ, ತಪ್ಪಿಸಬಹುದಾದ ಆಮದುಗಳಿಗೆ ಸಮರ್ಥನೆಯಾಗಲಾರದು. ನಿಮ್ಮ ಸಹೋದ್ಯೋಗಿಗಳು ಇದರಲ್ಲಿ ದೊಡ್ಡ ಪಾತ್ರ ವಹಿಸಬಹುದು, ಇದು ರಾಷ್ಟ್ರಕ್ಕೆ ಒಂದು ಮಹತ್ತರ ಸೇವೆಯಾಗಿರುತ್ತದೆ.

ಎರಡನೆಯದಾಗಿ, ಕಚ್ಚಾ ವಸ್ತುಗಳು ದೇಶದಿಂದ ಹೊರಕ್ಕೆ ರಫ್ತಾಗುವುದನ್ನು ನಿಮಗಿಂತ ಚೆನ್ನಾಗಿ ಯಾರೂ ತಿಳಿದಿಲ್ಲ. ಉದಾಹರಣೆಗೆ, ಕಬ್ಬಿಣದ ಅದಿರು ಪಾರಾದೀಪ್ ಬಂದರಿಗೆ ಹೋಗುತ್ತದೆ. ನಾವು ಅದಕ್ಕೆ ಮೌಲ್ಯ ಸೇರಿಸಲು ಸಮರ್ಥರಲ್ಲ ಎಂದು ನಾವು ಜಗತ್ತಿಗೆ ಘೋಷಿಸುತ್ತಿದ್ದೇವೆ. ನಮ್ಮ ಕಚ್ಚಾ ವಸ್ತುಗಳು ಮೌಲ್ಯವರ್ಧನೆ ಇಲ್ಲದೆ ಈ ದೇಶದ ದಡಗಳನ್ನು ದಾಟಿ ಹೋಗಬೇಕೇಕೆ? ನಾವು ಮೌಲ್ಯವರ್ಧನೆ ಮಾಡಿದರೆ, ನಾವು ಖಂಡಿತವಾಗಿಯೂ ಉದ್ಯೋಗ ಸೃಷ್ಟಿಸುತ್ತೇವೆ, ಉದ್ಯಮಶೀಲತೆ ಅರಳುತ್ತದೆ. ನಿಮಗೆ ಇದರಲ್ಲಿ ದೊಡ್ಡ ಪಾತ್ರವಿದೆ, ನಿಮಗಿಂತ ಹೆಚ್ಚಾಗಿ ಈ ಪಾತ್ರವನ್ನು ಯಾರೂ ನಿರ್ವಹಿಸಲಾರರು. ಏಕೆಂದರೆ ನೀವು ಉದ್ಯಮಿಗಳ ಕೈ ಹಿಡಿಯಬೇಕು - ನಿಮ್ಮ ಆರಾಮದಾಯಕ ಕೊಠಡಿಗಳಲ್ಲಿ ನೀವು ಮಾಡುತ್ತಿರುವುದಕ್ಕಿಂತ ಹೆಚ್ಚು ಮಾಡಬಹುದು ಎಂದು. ರಾಷ್ಟ್ರದ ಕಲ್ಯಾಣಕ್ಕೆ ಕೊಡುಗೆ ನೀಡುವ ಮೂಲಕ ನೀವು ಅಂತಿಮ ತೃಪ್ತಿಯನ್ನು ಪಡೆಯುತ್ತೀರಿ. ನೀವು ಅದರ ಬಗ್ಗೆ ಯೋಚಿಸುತ್ತೀರಿ ಮತ್ತು ಕೆಲಸ ಮಾಡುತ್ತೀರಿ ಎಂದು ನನಗೆ ನಂಬಿಕೆ ಇದೆ.

ಸ್ನೇಹಿತರೇ, ನೈಸರ್ಗಿಕ ಸಂಪನ್ಮೂಲಗಳ ಸಮರ್ಪಕ ಬಳಕೆಯ ಬಗ್ಗೆ ನಿಮಗೆ ತಿಳಿದಿದೆ, ನೀವು ಅದನ್ನು ನಿಯಂತ್ರಿಸಬೇಕು. ನಮ್ಮ ಆರ್ಥಿಕ ಸಾಮರ್ಥ್ಯ, ನಮ್ಮ ಹಣಕಾಸಿನ ಶಕ್ತಿಯು ಒಬ್ಬ ವ್ಯಕ್ತಿ ನೈಸರ್ಗಿಕ ಸಂಪನ್ಮೂಲಗಳನ್ನು ಹೇಗೆ ಬಳಸಬೇಕೆಂಬುದನ್ನು ನಿರ್ಧರಿಸುವ ಅಂಶವಾಗಬಾರದು. ಅವರು ವಿಶ್ವಾಸಾರ್ಹರು. ನಾವು ಅದರ ಮೇಲೆ ಗಮನ ಹರಿಸೋಣ.

ಸ್ನೇಹಿತರೇ, ಈ ಸಂಸ್ಥೆಯು ಜಾಗತಿಕ ಮಾನದಂಡಗಳಿಗೆ ಸಮಾನವಾಗಿದೆ ಮತ್ತು ಕೆಲವು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ ಎಂಬುದನ್ನು ನೋಡಿ ನಾನು ಸಂತೋಷಪಡುತ್ತೇನೆ. ಬದಲಾವಣೆಯ ಬಗ್ಗೆ ಮಾತನಾಡುವುದಾದರೆ, ನಾವು ESG ಆಡಿಟ್ ಗಳಿಗಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ನಮ್ಮ ವೃತ್ತಿಗೆ ಒಂದು ಗಣನೀಯ ಅವಕಾಶವಾಗಿ ಸ್ವೀಕರಿಸಬೇಕು. ಪಾಲುದಾರರು ಹೆಚ್ಚುಹೆಚ್ಚು ಪರಿಸರ ಸುಸ್ಥಿರತೆಗೆ ಆದ್ಯತೆ ನೀಡುತ್ತಿರುವುದರಿಂದ, ಲೆಕ್ಕಪರಿಶೋಧಕರು ಕಂಪನಿಯ ESG ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಬಹುದು ಮತ್ತು ನಿಯಮಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಬಹುದು.

ಇದರ ಬಗ್ಗೆ ನನಗೆ ಯಾವುದೇ ಸಂದೇಹವಿಲ್ಲ, ಮತ್ತು ಎಲ್ಲರೂ ಒಪ್ಪುತ್ತಾರೆ. ಭೂಮಿಯ ಹೊರತಾಗಿ ವಾಸಿಸಲು ಬೇರೆ ಯಾವುದೇ ಗ್ರಹವಿಲ್ಲ. ನಾವು ಅದನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕಾಗಿದೆ. ನಾವು ಅದಕ್ಕೆ ಸಾಕಷ್ಟು ಹಾನಿ ಮಾಡಿದ್ದೇವೆ.

ನಾವೀನ್ಯತೆ ಮತ್ತು ಸಂಶೋಧನೆಯ ಮೂಲಕ ಸುಸ್ಥಿರ ಆರ್ಥಿಕತೆಯನ್ನು ಸೃಷ್ಟಿಸಲು ದೊಡ್ಡ ಸಾಮರ್ಥ್ಯವನ್ನು ಹೊಂದಿರುವ ಜನರ ಮುಂದೆ ನಾನು ಇದ್ದೇನೆ. ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ತೊಡಗಿರುವ ಕಾರಣ ಜಾಗತಿಕ ಆರ್ಥಿಕತೆಗಳು ಏಳಿಗೆ ಕಂಡಿವೆ.

CSR ಸ್ಪೂರ್ತಿದಾಯಕ ದಿಕ್ಕಿನಲ್ಲಿ ಸಾಗಬೇಕು. ಜಗತ್ತಿನಲ್ಲಿ ಇಡೀ ದೇಶಕ್ಕೆ ಹೆಚ್ಚಿನ ಗೌರವವನ್ನು ತರುವಂತಹ ಸಂಶೋಧನೆಗಳನ್ನು ನೀವು ಉತ್ತೇಜಿಸಬೇಕು. ಸಂಶೋಧನೆ ಮತ್ತು ನಾವೀನ್ಯತೆಗಳಲ್ಲಿ ನಾವು ಇತರರಿಗಿಂತ ಮುಂದಿರುವಾಗ , ಅದು ನಮ್ಮ ನಡವಳಿಕೆಯ ದಕ್ಷತೆಯನ್ನು ಮುಂದಕ್ಕೆ ಕೊಂಡೊಯ್ಯುತ್ತದೆ. ಈ ಸಮ್ಮೇಳನಕ್ಕೆ ಸಂಘಟಕರು ಬಹಳ ಬುದ್ಧಿವಂತಿಕೆಯಿಂದ ಮತ್ತು ಚಿಂತನಶೀಲವಾಗಿ ಥೀಮ್ ನೀಡಿದ್ದರಿಂದ  ನಾನು ಇಷ್ಟೆಲ್ಲ ಹೇಳಿದ್ದೇನೆ 

'ವೃತ್ತಿಯ ಸಂಶ್ಲೇಷಣೆ ' ಬೇಕು. ನಾವು ಸೌಹಾರ್ದತೆಯಿಂದ ಬಾಳಬೇಕು, ಜೊತೆಯಾಗಿ ಬಾಳಬೇಕು. ನಾವು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ನಾವೆಲ್ಲರೂ ಪಾಲುದಾರರಾಗಿದ್ದೇವೆ ಏಕೆಂದರೆ ನಾವು ಈಜಬೇಕು ಅಥವಾ ಒಟ್ಟಿಗೆ ಮುಳುಗಬೇಕು

ಚಾರ್ಟರ್ಡ್ ಅಕೌಂಟೆಂಟ್ ಗಳು ದೊಡ್ಡ ಬದಲಾವಣೆಯ ಹೃದಯಭಾಗದಲ್ಲಿದ್ದಾರೆ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ನೀವು ನಂಬಿರುವ ಬದಲಾವಣೆಯನ್ನು ನೀವು ತರಬಹುದು. ಯಾವುದೇ ಕಾನೂನು ಉಲ್ಲಂಘನೆಯಾಗುವುದಿಲ್ಲ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ಚಾರ್ಟರ್ಡ್ ಅಕೌಂಟೆಂಟ್ ಬೇರೆ ರೀತಿಯಲ್ಲಿ ನೋಡದ ಹೊರತು ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ದುರ್ಬಲಗೊಳಿಸಲಾಗುವುದಿಲ್ಲ. ನಿರ್ವಹಣೆ ಮತ್ತು ಷೇರುದಾರರ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಿ. ಪಾಲುದಾರರ ನಂಬಿಕೆ ನಿಮ್ಮ ಕೈಯಲ್ಲಿದೆ  . ಇದು ನಿಮ್ಮ ಆದೇಶ , ನಿಮ್ಮ ನೇಮಕಾತಿ , ನಿರ್ವಹಣೆಯು ನೈತಿಕತೆಗೆ ಹತ್ತಿರದಲ್ಲಿದೆ ಎಂದು ನೋಡುವುದು, ಅತ್ಯುತ್ತಮವಾದ ಬಳಕೆ ಮತ್ತು ಷೇರುದಾರರಿಗೆ ಉತ್ತಮವಾದದ್ದನ್ನು ತಲುಪಿಸುವುದು ನಿಮ್ಮ ಕರ್ತವ್ಯವಾಗಿದೆ.

ಭ್ರಷ್ಟಾಚಾರದ ವಿರುದ್ಧ ಹೋರಾಡುವಲ್ಲಿ , ಅಕ್ರಮಗಳನ್ನು ಬಹಿರಂಗಪಡಿಸುವಲ್ಲಿ ಮತ್ತು ಕಾರ್ಪೊರೇಟ್ ವಂಚನೆಗಳನ್ನು ಪತ್ತೆಹಚ್ಚುವಲ್ಲಿ ನಿಮ್ಮ ಪಾತ್ರವು ಯಾವುದೇ ತನಿಖಾ ಸಂಸ್ಥೆಗಿಂತ ಬಹಳ ಹೆಚ್ಚಿನದು. ಅವರು ಅದನ್ನು ಕಲಿಯಬೇಕಾಗಿದೆ, ನೀವು ಅದನ್ನು ಅಷ್ಟು ನಿರಾಯಾಸವಾಗಿ ತಿಳಿದಿರುವಿರಿ ಎಂದರೆ ನೀವು ನೀರಿಗೆ ಇಳಿಯುವ ಬಾತುಕೋಳಿಯಂತಿದ್ದೀರಿ. ತನಿಖಾ ಸಂಸ್ಥೆಗಳು ಕಲಿಯಬೇಕಾಗಿದೆ, ಅವರು ನಿಮ್ಮ ಮೂಲಕ ಕಲಿಯುತ್ತಾರೆ ಎಂಬುದು ನಾವು ಗಮನ ಹರಿಸಬೇಕಾದ ವಿಷಯವಾಗಿದೆ.

ತೆರಿಗೆ ವಂಚನೆ ಮತ್ತು ಆರ್ಥಿಕ ವಂಚನೆಗಳು, ಅವು ಕೆಲವರಿಗೆ ಸಹಾಯ ಮಾಡಬಹುದು, ಈ ದಿನಗಳಲ್ಲಿ ಅವು ಯಾರಿಗೂ ಸಹಾಯ ಮಾಡುವುದಿಲ್ಲ. ವಂಚನೆ , ಭ್ರಷ್ಟಾಚಾರ, ಕುತಂತ್ರಗಳ ಮೂಲಕ ಹಣ ಗಳಿಸಲು ಬಯಸುವ ಇಂಥವರಿಗೆ ತಕ್ಕ ಪಾಠ ಕಲಿಸಲು ಕಾನೂನಿನ ಉದ್ದನೆಯ ತೋಳು ದೇಶಸೇವೆ ಮಾಡಲು ಬಹಳ ಉತ್ಸಾಹದಿಂದ ಕೆಲಸ ಮಾಡುತ್ತಿದೆ. ನೀವು ರಕ್ಷಕ ಮತ್ತು ಕಾವಲುಗಾರ , ಆದ್ದರಿಂದ ನೀವು ಈ ಕರ್ತವ್ಯದಿಂದ ಒಂದು ಕ್ಷಣವೂ ಮುಕ್ತರಾಗಲು ಸಾಧ್ಯವಿಲ್ಲ ಇದು ಕಾನೂನಿನಿಂದ ಹೊರಹೊಮ್ಮುವ ನಿಮ್ಮ ಕರ್ತವ್ಯವಲ್ಲ , ಇದು ಈ ದೇಶದ ಪ್ರಜೆಯಾಗಿ ನಿಮ್ಮ ಕರ್ತವ್ಯ.  ಆದ್ದರಿಂದ ದಯವಿಟ್ಟು ಈ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಿ.

ನಮ್ಮಂತಹ ದೇಶದಲ್ಲಿ ನೈತಿಕತೆಗೆ ಧಕ್ಕೆ ಬರುವುದಿಲ್ಲ. ಮನೆಯೊಳಗೆ ನೋಡಿ, ಹಿರಿಯರು ಮೊದಲು ಯಾವುದೇ ತಪ್ಪು ಕೆಲಸ ನಡೆಯಲು ಬಿಡುತ್ತಿರಲಿಲ್ಲ, ಇದ್ದಕ್ಕಿದ್ದಂತೆ ಮನೆಯೊಳಗೆ ಹೆಚ್ಚಿನ ಸಮೃದ್ಧಿ ಬಂದಿತು. ಅವರು ಕೇಳುತ್ತಿದ್ದರು ಹೇಗೆ ಬಂದಿತು ಎಂದು? ಈಗ ಆ ಹಿರಿಯರ ಕೆಲಸವನ್ನು ನೀವುಗಳೇ ಮಾಡುತ್ತೀರಿ ಎಂದು ನನಗೆ ಖಾತ್ರಿ ಇದೆ.

ಸ್ನೇಹಿತರೇ,  ನಾನು ಈ ಅವಕಾಶವನ್ನು ಬಳಸಿಕೊಳ್ಳುತ್ತೇನೆ ಏಕೆಂದರೆ ನಾನು ನಿಮ್ಮನ್ನು ಚಾರ್ಟರ್ಡ್ ಅಕೌಂಟೆಂಟ್ಗಿಂತ ಹೆಚ್ಚು ಪರಿಗಣಿಸುತ್ತೇನೆ. ನಾನು ನಿಮ್ಮನ್ನು ಈ ಮಹಾನ್ ರಾಷ್ಟ್ರದ ಅತ್ಯಂತ ಜವಾಬ್ದಾರಿಯುತ ನಾಗರಿಕ ಎಂದು ಪರಿಗಣಿಸುತ್ತೇನೆ. ಭಾರತವು ಸ್ಥಿರ ಜಾಗತಿಕ ಶಕ್ತಿಯಾಗಿದೆ. ಈ ಶಕ್ತಿ ಹೊರಹೊಮ್ಮಬೇಕು , ಈ ಶತಮಾನ ಭಾರತದ್ದಾಗಬೇಕು ಮತ್ತು ಅದು ಮಾನವೀಯತೆಗೆ ಒಳ್ಳೆಯದು , ಇದು ಭೂಮಿಯ ಮೇಲೆ ಶಾಂತಿ ಮತ್ತು ಸಾಮರಸ್ಯಕ್ಕೆ ಕೊಡುಗೆ ನೀಡುತ್ತದೆ. ಆದ್ದರಿಂದ, ನಮ್ಮ ದೇಶದಲ್ಲಿ ನಡೆಯುತ್ತಿರುವ ಜನಸಂಖ್ಯಾ ಏರಿಳಿತಗಳ ಅಪಾಯಗಳನ್ನು ನಾವು ನಿರ್ಲಕ್ಷಿಸುವುದು ತೀವ್ರವಾದ ರಾಷ್ಟ್ರೀಯ ಅಪರಾಧವಾಗುತ್ತದೆ. ಸಾವಯವ, ನೈಸರ್ಗಿಕ ಜನಸಂಖ್ಯಾ ಬದಲಾವಣೆ ಎಂದಿಗೂ ಕಳವಳಕಾರಿಯಲ್ಲ. ಆದರೆ ಒಂದು ಉದ್ದೇಶವನ್ನು ಸಾಧಿಸಲು ತಂತ್ರಾತ್ಮಕ ರೀತಿಯಲ್ಲಿ ತರಲಾದ ಜನಸಂಖ್ಯಾ ಬದಲಾವಣೆಯು ಭಯಾನಕ ದೃಶ್ಯವನ್ನು ನೀಡುತ್ತದೆ.

ಕಳೆದ ಕೆಲವು ದಶಕಗಳಲ್ಲಿ ಈ ಆತಂಕಕಾರಿ ಬೆಳವಣಿಗೆಯ ವಿಶ್ಲೇಷಣೆಯು ಕಣ್ಣು ತೆರೆಸುವಂತಹದ್ದಾಗಿದೆ. ಯಾವುದೇ ರಾಜ್ಯವನ್ನು ತೆಗೆದುಕೊಳ್ಳಿ, ಜನಸಂಖ್ಯಾ ಬದಲಾವಣೆಯು ಒಂದು ಮಾದರಿಯನ್ನು ಹೊಂದಿರುವುದನ್ನು ನೀವು ಕಾಣುತ್ತೀರಿ. ಆ ಮಾದರಿಯು ನಮ್ಮ ಮೌಲ್ಯಗಳಿಗೆ, ನಮ್ಮ ನಾಗರಿಕ ನೈತಿಕತೆಗೆ, ನಮ್ಮ ಪ್ರಜಾಪ್ರಭುತ್ವಕ್ಕೆ ಸವಾಲನ್ನು ಒಡ್ಡುತ್ತದೆ.ಆತಂಕಕಾರಿಯಾಗಿ ಕಾಡುತ್ತಿರುವ ಈ ಸವಾಲನ್ನು ವ್ಯವಸ್ಥಿತ ರೀತಿಯಲ್ಲಿ ಎದುರಿಸದಿದ್ದರೆ, ಇದು ಅಸ್ತಿತ್ವದ ಸವಾಲಾಗಿ ಪರಿಣಮಿಸುತ್ತದೆ. ಇದು ವಿಶ್ವದಲ್ಲಿ ಸಂಭವಿಸಿದೆ. ಈ ಜನಸಂಖ್ಯಾ ಅವ್ಯವಸ್ಥೆ, ಜನಸಂಖ್ಯಾ ಭೂಕಂಪದಿಂದಾಗಿ ತಮ್ಮ ಗುರುತನ್ನು 100% ಕಳೆದುಕೊಂಡ ದೇಶಗಳ ಹೆಸರನ್ನು ನಾನು ಹೇಳಬೇಕಾಗಿಲ್ಲ. ಜನಸಂಖ್ಯಾ ಅವ್ಯವಸ್ಥೆಯ ಪರಿಣಾಮಗಳು ಪರಮಾಣು ಬಾಂಬ್ ಗಿಂತ ಕಡಿಮೆ ತೀವ್ರವಾದುದಲ್ಲ. ನೆನಪಿರಲಿ, ಚಾರ್ಟರ್ಡ್ ಅಕೌಂಟೆಂಟ್ಗಳಾಗಿರುವ ಯುವಕ-ಯುವತಿಯರೇ, ನನ್ನದು ಮಿತವಾದಿ ಹೇಳಿಕೆ. ನೀವು ಜಾಗತಿಕ ಸನ್ನಿವೇಶವನ್ನು ನೋಡುತ್ತೀರಿ ಮತ್ತು ಮಾನವ ಹಕ್ಕುಗಳು , ಮಾನವ ಮೌಲ್ಯಗಳ ನಷ್ಟದ ವಿನಾಶಕಾರಿ ಪರಿಣಾಮಗಳನ್ನು ನೀವು ಕಾಣಬಹುದು . ಇದಕ್ಕೆ ಪ್ರಜಾಪ್ರಭುತ್ವವೇ ಕೊನೆಯ ಆಯ್ಕೆ.

ಕೆಲವು ದೇಶಗಳಲ್ಲಿ, ಅಭಿವೃದ್ಧಿ ಹೊಂದಿದ ಜಗತ್ತು ಕೂಡ ಇದರ ಪ್ರಭಾವವನ್ನು ಅನುಭವಿಸುತ್ತಿದೆ. ಆದರೆ ನಮ್ಮ ದೇಶದಲ್ಲಿ, ಈ ಕ್ರೂರ ಸಮಸ್ಯೆಯನ್ನು ಎದುರಿಸಲು ನಾವು ಪ್ರಯತ್ನಿಸಿದಾಗ, ಬೇರೆ ಮಟ್ಟದಲ್ಲಿ ಮಾತನಾಡುವ ಧ್ವನಿಗಳಿವೆ. ಇದು ಇನ್ನು ಮುಂದೆ ಸಂಭವಿಸದಂತೆ ಖಚಿತಪಡಿಸಿಕೊಳ್ಳಲು ನಮ್ಮಲ್ಲಿ ಪ್ರತಿಯೊಬ್ಬರೂ 24x7 ಎಚ್ಚರದಿಂದಿರಬೇಕು. ದಾರಿ ತಪ್ಪಿದರೆ ಸರಿ ದಾರಿಯಲ್ಲಿ ಹೋಗುವುದಿಲ್ಲ ಎಂಬ ಮಾತಿದೆ. ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ತಕ್ಷಣವೇ ನಿಲ್ಲಿಸಿ ನಂತರ ಯು-ಟರ್ನ್ ತೆಗೆದುಕೊಳ್ಳುವ ಬಗ್ಗೆ ಯೋಚಿಸಿ. ಯು-ಟರ್ನ್ ತೆಗೆದುಕೊಳ್ಳಲು ನೀವು ಹೆಚ್ಚು ವಿಳಂಬ ಮಾಡಿದರೆ , ನಿಮ್ಮ ಸಮಸ್ಯೆಗಳು ಹೆಚ್ಚಾಗುತ್ತವೆ.

ನಮ್ಮ ಸಂಸ್ಕೃತಿಯನ್ನು ನೋಡಿ, ನಮ್ಮ ಒಳಗೊಳ್ಳುವಿಕೆ ಮತ್ತು ವೈವಿಧ್ಯತೆಯಲ್ಲಿ ಏಕತೆ ಎಂಬುದು ಸಕಾರಾತ್ಮಕ, ಧನಾತ್ಮಕ ಸಾಮಾಜಿಕ ವ್ಯವಸ್ಥೆಯ ಮುಖಗಳಾಗಿವೆ, ಬಹಳ ಸಮಾಧಾನಕರವಾಗಿದೆ. ನಾವು ಎಲ್ಲರಿಗಾಗಿ ತೆರೆದ ಬಾಹುಗಳೊಂದಿಗೆ ಇದ್ದೇವೆ ಮತ್ತು ಏನಾಗುತ್ತಿದೆ? ಈ ಜನಸಂಖ್ಯಾ ಸ್ಥಳಾಂತರಗಳಿಂದ, ಜಾತಿ ಮತ್ತು ಅಂತಹ ವಿಷಯಗಳ ನೆಲೆಯಲ್ಲಿ ದುಷ್ಟ ಉದ್ದೇಶದ ಒಡಕುಗಳಿಂದ ಇದು ಅಲುಗಾಡಿಸಲ್ಪಡುತ್ತಿದೆ ಮತ್ತು ತೀವ್ರವಾಗಿ ಬಾಧಿತವಾಗುತ್ತಿದೆ.

ನಾನು ಸ್ವಲ್ಪ ವಿಸ್ತಾರವಾಗಿ ಹೇಳುತ್ತೇನೆ, ಕೆಲವು ಪ್ರದೇಶಗಳಲ್ಲಿ ಚುನಾವಣೆಗಳಿಗೆ ಬಂದಾಗ ಜನಸಂಖ್ಯಾ ಬದಲಾವಣೆಯು ಪ್ರಜಾಪ್ರಭುತ್ವದಲ್ಲಿ ರಾಜಕೀಯ ಅಭೇದ್ಯತೆಯ ಕೋಟೆಯಾಗಿ ಬದಲಾಗುತ್ತಿದೆ. ದೇಶದಲ್ಲಿ ಈ ಬದಲಾವಣೆಯನ್ನು ನಾವು ನೋಡಿದ್ದೇವೆ, ಜನಸಂಖ್ಯೆಯ ಬದಲಾವಣೆಯಿಂದಾಗಿ ಈ ಪ್ರದೇಶವು ರಾಜಕೀಯ ಭದ್ರಕೋಟೆಯಾಗಿ ಮಾರ್ಪಟ್ಟಿದೆ. ಪ್ರಜಾಪ್ರಭುತ್ವಕ್ಕೆ ಯಾವುದೇ ಅರ್ಥವಿಲ್ಲ, ಚುನಾವಣೆಗಳಿಗೆ ಯಾವುದೇ ಅರ್ಥವಿಲ್ಲ. ಯಾರು ಚುನಾಯಿತರಾಗುತ್ತಾರೆ ಎಂಬುದು ಪೂರ್ವನಿರ್ಧರಿತ ತೀರ್ಮಾನವಾಗಿದೆ ಮತ್ತು ದುರದೃಷ್ಟವಶಾತ್ ನಮ್ಮ ದೇಶದಲ್ಲಿ ಈ ಕ್ಷೇತ್ರವು ಹೆಚ್ಚುತ್ತಿದೆ ಸ್ನೇಹಿತರೇ. ಈ ಅಪಾಯದ ಬಗ್ಗೆ ನಾವು ಜಾಗೃತರಾಗಿರಬೇಕು. 5000 ವರ್ಷಗಳ ನೈತಿಕತೆಯನ್ನು ಹೊಂದಿರುವ ಈ ನಾಗರಿಕತೆ, ಅದರ ಸಾರ, ಅದರ ಶ್ರೇಷ್ಠತೆ, ಅದರ ಆಧ್ಯಾತ್ಮಿಕತೆ, ಅದರ ಧಾರ್ಮಿಕತೆಯನ್ನು ನಮ್ಮ ಕಣ್ಣೆದುರಿಗೆ ನಾಶವಾಗಲು ಬಿಡಲು ಸಾಧ್ಯವಿಲ್ಲ ಎಂಬುದನ್ನು ನಮ್ಮ ಭವಿಷ್ಯದ ಪೀಳಿಗೆಗೆ ನಾವು ಸಾಬೀತುಪಡಿಸಬೇಕು. ಆದ್ದರಿಂದ, ದಯವಿಟ್ಟು ಇದರ ಬಗ್ಗೆ ಯೋಚಿಸಿ.

ಇದು ಅನಿಯಂತ್ರಿತ ಪ್ರವೃತ್ತಿ ಎಂದು ನಾನು ಹೇಳಲು ಬಯಸುತ್ತೇನೆ ,  ಈ ಪ್ರವೃತ್ತಿಯನ್ನು ನಾವು ಬುದ್ಧಿವಂತರು ಎಂದು ಪರಿಗಣಿಸುವ ಜನರಿಂದ ಪ್ರಚಾರ ಮಾಡಲಾಗುತ್ತಿದೆ. ರಾಜಕೀಯದಲ್ಲಿರುವ ಕೆಲವರು ಮರುದಿನದ ವೃತ್ತಪತ್ರಿಕೆಯ ಶೀರ್ಷಿಕೆಗಾಗಿ ಅಥವಾ ಕೆಲವು ಕಿರು ಸ್ವಾರ್ಥ ಪಕ್ಷಪಾತದ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳಲು ರಾಷ್ಟ್ರ ಹಿತಾಸಕ್ತಿಯನ್ನು ತ್ಯಾಗ ಮಾಡಲು ಯಾವುದೇ ಹಿಂಜರಿಕೆ ಹೊಂದಿಲ್ಲ.

ಸ್ನೇಹಿತರೇ, ನಮ್ಮ ನಾಡಿನ ನೈಸರ್ಗಿಕ ಸ್ವರೂಪವನ್ನು ಬದಲಿಸುವ ಈ ಎಲ್ಲ ದುರ್ಭರ ಪ್ರಯತ್ನಗಳನ್ನು, ನಮ್ಮ ಸಾಂಸ್ಕೃತಿಕ ಬೇರುಗಳನ್ನು ಮತ್ತು ಮೌಲ್ಯಗಳನ್ನು ಉಳಿಸಿಕೊಳ್ಳಲು ಸೂಕ್ತ ಕ್ರಮಗಳ ಮೂಲಕ ತಡೆಯಬೇಕು ಎಂಬ ನನ್ನ ಅಭಿಪ್ರಾಯವನ್ನು ನೀವೆಲ್ಲರೂ ಒಪ್ಪುತ್ತೀರಿ ಎಂಬುದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ. ನಾವು ಸುತ್ತಮುತ್ತ ನೋಡಿದಾಗ, ಕೆಲವರು ಕೇವಲ ಅರಾಜಕತೆಯ ಪ್ರತಿಪಾದಕರಾಗಿ ಮಾತ್ರ ಕಾಣಿಸಿಕೊಳ್ಳುತ್ತಾರೆ. ಅವರು ಇದನ್ನು ಒಂದು ಯೋಜಿತ ವಿನ್ಯಾಸವನ್ನಾಗಿ, ಒಂದು ತಂತ್ರವನ್ನಾಗಿ ಬಳಸುತ್ತಾರೆ. ಅವರು ಒಂದು ನಿರ್ದಿಷ್ಟ ಸಂವಾದವನ್ನು ರೂಪಿಸುತ್ತಾರೆ. ಆ ಸಂವಾದಕ್ಕೆ ಹೆಚ್ಚಿನ ಬೆಂಬಲ ನೀಡಲಾಗುತ್ತದೆ. ಇದೆಲ್ಲವೂ ಯಾವುದೇ ನಿಯಂತ್ರಣವಿಲ್ಲದೆ ನಡೆಯುತ್ತಿದೆ.

ನಾನು ನಿಮ್ಮಲ್ಲಿ ವಿನಂತಿಸುತ್ತೇನೆ, ನಾವೆಲ್ಲರೂ ಈ ವಿಷಯದ ಬಗ್ಗೆ ಎಚ್ಚರವಹಿಸಬೇಕಾದ ಕಾಲ ಇದು. ಭಾರತದ 5 ಟ್ರಿಲಿಯನ್ ಆರ್ಥಿಕತೆಯ ಗುರಿಯನ್ನು ನಾವು ಸಮೀಪಿಸುತ್ತಿದ್ದೇವೆ. ಮುಂದೆ ಇನ್ನೂ ಹೆಚ್ಚಿನ ಸಾಧನೆಗಳಿವೆ - ಇದೇ ನಮ್ಮ ಮುಂದಿನ ಹೆಜ್ಜೆ.

ಬದಲಾವಣೆಯನ್ನು ತರುವ ಸಾಮರ್ಥ್ಯವುಳ್ಳ ನಿಮ್ಮಂತಹವರೊಂದಿಗೆ ನನ್ನ ಅಭಿಪ್ರಾಯವನ್ನು ಹಂಚಿಕೊಳ್ಳದಿದ್ದರೆ ತಪ್ಪಾಗುತ್ತದೆ ಎಂದು ಭಾವಿಸಿದೆ. ಬದಲಾವಣೆಯೊಂದೇ ಜೀವನದ ಶಾಶ್ವತ ಸತ್ಯ. ಆದರೆ ನಾವು ಅನಿವಾರ್ಯ ಬದಲಾವಣೆಗೆ ಒಳಗಾಗಬಾರದು, ಬದಲಿಗೆ ನಾವೇ ಆ ಬದಲಾವಣೆಯ ಶಿಲ್ಪಿಗಳಾಗಬೇಕು, ನಾವೇ ಆ ಬದಲಾವಣೆಯ ರೂವಾರಿಗಳಾಗಬೇಕು.

ನಾವು ನಂಬುವಂತಹ ಬದಲಾವಣೆಯನ್ನು ಸಾಧಿಸೋಣ. ನಮ್ಮ ಸನಾತನ ಮೌಲ್ಯಗಳಿಗೆ ಹೊಂದಿಕೊಳ್ಳುವ ಬದಲಾವಣೆಯನ್ನು ಸಾಧಿಸಲು ಪ್ರಯತ್ನಿಸೋಣ. ನಿಮ್ಮ ಅಮೂಲ್ಯ ಸಮಯಕ್ಕಾಗಿ ನಾನು ಅತ್ಯಂತ ಕೃತಜ್ಞನಾಗಿದ್ದೇನೆ.

ಧನ್ಯವಾದಗಳು.

 

*****


(Release ID: 2065254) Visitor Counter : 48