ರಾಷ್ಟ್ರಪತಿಗಳ ಕಾರ್ಯಾಲಯ
ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಡಾ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ 10ನೇ ಘಟಿಕೋತ್ಸವದಲ್ಲಿ ಭಾರತದ ರಾಷ್ಟ್ರಪತಿಗಳು ಭಾಗವಹಿಸಿದರು
Posted On:
30 SEP 2024 7:50PM by PIB Bengaluru
ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಸೆಪ್ಟೆಂಬರ್ 30, 2024) ನವದೆಹಲಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಡಾ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ 10 ನೇ ಘಟಿಕೋತ್ಸವದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಗಳು, ವೈದ್ಯರು ನೀಡುವ ಔಷಧಿ ಅಥವಾ ಸಲಹೆಯ ಜೊತೆಗೆ ಅವರ ನಡವಳಿಕೆಯಲ್ಲಿ ಗುಣಪಡಿಸುವ ಸ್ಪರ್ಶ ಇರಬೇಕು ಎನ್ನುವುದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು. ಅನೇಕ ಬಾರಿ ರೋಗಿಗಳ ಕುಟುಂಬದ ಸದಸ್ಯರು ಆಘಾತಕ್ಕೆ ಒಳಗಾಗಿರುತ್ತಾರೆ ಎಂದು ಅವರು ಹೇಳಿದರು. ವೈದ್ಯರು ಅವರಿಗೆ ಧೈರ್ಯ ತುಂಬಬೇಕು, ಅವರೊಂದಿಗೆ ಸಹಾನುಭೂತಿ ತೋರಿಸಬೇಕು. ಕಠಿಣ ಸಂದರ್ಭಗಳಲ್ಲಿಯೂ ಸಹ ಸಹಾನುಭೂತಿಯಿಂದಿರಲು ಅವರು ವೈದ್ಯರಿಗೆ ಸಲಹೆ ನೀಡಿದರು. ಸೂಕ್ಷ್ಮತೆ ಮತ್ತು ಸಹಾನುಭೂತಿಯಂತಹ ಮೌಲ್ಯಗಳು ನಮ್ಮ ಕಾರ್ಯಶೈಲಿಯನ್ನು ಸುಧಾರಿಸುತ್ತದೆ ಎಂದು ಅವರು ಹೇಳಿದರು.
ಅನೇಕ ಸಂದರ್ಭಗಳಲ್ಲಿ, ರೋಗಿಗಳ ಕುಟುಂಬದ ಸದಸ್ಯರು ಕೋಪದ ಭರದಲ್ಲಿ ಆರೋಗ್ಯ ವೃತ್ತಿಪರರೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ ಎಂದು ರಾಷ್ಟ್ರಪತಿಗಳು ಹೇಳಿದರು. ಅದು ತಪ್ಪು ಮತ್ತು ಅತ್ಯಂತ ಖಂಡನೀಯ. ರೋಗಿಯ ಜೀವವನ್ನು ಉಳಿಸಲು ವೈದ್ಯರು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎಂಬುದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು. ಆದರೆ, ಯಾವುದೇ ಅಹಿತಕರ ಘಟನೆ ನಡೆದರೆ, ಅದಕ್ಕಾಗಿ ವೈದ್ಯರು ಅಥವಾ ಆಸ್ಪತ್ರೆ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಬಾರದು. ಯಾವ ವೈದ್ಯರೂ ರೋಗಿಗಳಿಗೆ ತೊಂದರೆ ಕೊಡುವ ಆಲೋಚನೆ ಮಾಡುವುದಿಲ್ಲ. ಆದರೆ, ಕೆಲವೊಮ್ಮೆ ಎಲ್ಲಾ ಪರಿಹಾರಗಳು ವಿಜ್ಞಾನದಲ್ಲಿಯೂ ಲಭ್ಯವಿಲ್ಲ. ಜೀವನ ಮತ್ತು ಸಾವಿನೊಂದಿಗೆ ನಿಕಟವಾಗಿ ವ್ಯವಹರಿಸುವ ವೈದ್ಯರು ಸಾಮಾನ್ಯವಾಗಿ ಇದನ್ನು ಅರ್ಥಮಾಡಿಕೊಂಡಿರುತ್ತಾರೆ. ಜೀವನ ಮತ್ತು ಸಾವಿಗೆ ಸಂಬಂಧಿಸಿದ ಕಾರಣಗಳು ಯಾವಾಗಲೂ ವೈದ್ಯರಿಗೆ ಸಹ ಅರ್ಥವಾಗುವುದಿಲ್ಲ ಎಂದು ರೋಗಿಗಳು, ಅವರ ಕುಟುಂಬಗಳು ಮತ್ತು ಜನರು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಮಾನವ ದೇಹಕ್ಕೆ ಸಂಬಂಧಿಸಿದ ಅನೇಕ ರಹಸ್ಯಗಳನ್ನು ಪರಿಹರಿಸಲು ವೈದ್ಯಕೀಯ ವಿಜ್ಞಾನಕ್ಕೆ ಇನ್ನೂ ಸಾಧ್ಯವಾಗಿಲ್ಲ. ರೋಗಿಗಳಿಗೆ ಚಿಕಿತ್ಸೆ ನೀಡುವಾಗ, ವೈದ್ಯರು ಸಾಮಾನ್ಯವಾಗಿ ಬಹಳ ಕಷ್ಟಕರವಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅವರು ತುಂಬಾ ಒತ್ತಡದ ವಾತಾವರಣದಲ್ಲಿ ಕೆಲಸ ಮಾಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಅವರು ಕೆಲವೊಮ್ಮೆ ಅಸಹನೆಯಿಂದ ಇರುವಂತೆ ಕಾಣಿಸಿಕೊಳ್ಳಬಹುದು. ಹಾಗೆಂದು, ಅವರು ತಮ್ಮ ರೋಗಿಗಳ ವಿಷಯದಲ್ಲಿ ಗಂಭೀರವಾಗಿಲ್ಲ ಎಂದು ಇದರ ಅರ್ಥವಲ್ಲ.
ನಮ್ಮ ದೇಶ ಮಹಿಳಾ ಸಬಲೀಕರಣದಲ್ಲಿ ಮುನ್ನಡೆಯುತ್ತಿದೆ ಎಂದು ರಾಷ್ಟ್ರಪತಿಗಳು ಹೇಳಿದರು. ವೈದ್ಯಕೀಯ ಕ್ಷೇತ್ರದಲ್ಲಿ ಮಹಿಳಾ ರೋಗಿಗಳ ಸಮಸ್ಯೆಗಳ ನಿಟ್ಟಿನಲ್ಲಿ ಇರುವ ಕಡಿಮೆ ಸಂಶೋಧನೆಯ ಬಗ್ಗೆ ಅವರು ಎತ್ತಿ ತೋರಿಸಿದರು. ವೈದ್ಯಕೀಯ ಸಮುದಾಯಕ್ಕೆ ಸಂಬಂಧಿಸಿದ ಎಲ್ಲರೂ, ವಿಶೇಷವಾಗಿ ಸಂಶೋಧಕರು, ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಂಶೋಧನೆ ಕೈಗೊಳ್ಳಲು ಅವರು ಒತ್ತಾಯಿಸಿದರು. ಇದರಿಂದ ರೋಗಗಳ ಬಗ್ಗೆ ನಮ್ಮ ತಿಳುವಳಿಕೆ ಹೆಚ್ಚುತ್ತದೆ ಮತ್ತು ಸಾರ್ವಜನಿಕ ಆರೋಗ್ಯ ಸುಧಾರಿಸುತ್ತದೆ ಎಂದು ಅವರು ಹೇಳಿದರು.
ಇಂದು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಆಗುತ್ತಿವೆ. ಟೆಲಿಮೆಡಿಸಿನ್ ಬಳಕೆಯು ದೂರದ ಪ್ರದೇಶಗಳಲ್ಲಿ ಗುಣಮಟ್ಟದ ಆರೋಗ್ಯ ಸೇವೆಗಳ ವ್ಯಾಪ್ತಿಯನ್ನು ಹೆಚ್ಚಿಸಿದೆ. ರೋಗಗಳನ್ನು ಪತ್ತೆಹಚ್ಚಲು ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲು ಕೃತಕ ಬುದ್ಧಿಮತ್ತೆಯ ಬಳಕೆಯ ಬಗ್ಗೆ ಯೋಚಿಸಲಾಗುತ್ತಿದೆ. ಕಲಿಯುವ ಉತ್ಸಾಹವನ್ನು ಕಾಪಾಡಿಕೊಂಡೇ ಇರಲು ಅವರು ವೈದ್ಯರಿಗೆ ಸಲಹೆ ನೀಡಿದರು. ಹೊಸ ಸಂಶೋಧನಾ ಪ್ರಬಂಧಗಳನ್ನು ಓದುತ್ತಾ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು. ಇದರಿಂದ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದು ರಾಷ್ಟ್ರಪತಿಗಳು ಹೇಳಿದರು.
ರಾಷ್ಟ್ರಪತಿಗಳ ಪೂರ್ಣ ಭಾಷಣಕ್ಕಾಗಿ ಇಲ್ಲಿ ಕ್ಲಿಕ್ ಮಾಡಿರಿ
*****
(Release ID: 2060613)
Visitor Counter : 21