ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಹಾರಾಷ್ಟ್ರದಲ್ಲಿ 11,200 ಕೋಟಿ ರೂ. ಮೊತ್ತದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ದೇಶಕ್ಕೆ ಸಮರ್ಪಿಸಿದ ಪ್ರಧಾನ ಮಂತ್ರಿ


ಪುಣೆ ಮೆಟ್ರೋ ಜಿಲ್ಲಾ ನ್ಯಾಯಾಲಯ- ಸ್ವರ್ಗೇಟ್‌ ವಿಭಾಗ ಉದ್ಘಾಟನೆ

ಬಿಡ್ಕಿನ್ ಕೈಗಾರಿಕಾ ಪ್ರದೇಶ ರಾಷ್ಟ್ರಕ್ಕೆ ಸಮರ್ಪಣೆ

ಸೊಲ್ಲಾಪುರ ವಿಮಾನ ನಿಲ್ದಾಣ ಉದ್ಘಾಟನೆ

ಭಿದೇವಾಡದಲ್ಲಿ ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆ ಸ್ಮರಣಾರ್ಥ ಪ್ರಥಮ ಬಾಲಕಿಯರ ಶಾಲೆ ನಿರ್ಮಾಣಕ್ಕೆ ಶಂಕುಸ್ಥಾಪನೆ

"ಮಹಾರಾಷ್ಟ್ರದಲ್ಲಿ ವಿವಿಧ ಯೋಜನೆಗಳ ಅನಾವರಣ; ಇವು ನಗರಾಭಿವೃದ್ಧಿಗೆ ಉತ್ತೇಜನ ನೀಡುವ ಜತೆಗೆ ಜನರಿಗೆ 'ಸುಲಭವಾಗಿ ನಡೆಸಲು' ಅನುವು ಮಾಡಿಕೊಡಲಿದೆ"

"ನಾವು ಪುಣೆ ನಗರದಲ್ಲಿ ಜೀವನ ಸೌಕರ್ಯ ಹೆಚ್ಚಿಸುವ ನಮ್ಮ ಕನಸಿನ ದಿಕ್ಕಿನಲ್ಲಿ ವೇಗವಾಗಿ ಸಾಗುತ್ತಿದ್ದೇವೆ"

ಸೋಲಾಪುರಕ್ಕೆ ನೇರ ವಿಮಾನ ಸಂಪರ್ಕ ಕಲ್ಪಿಸಲು ವಿಮಾನ ನಿಲ್ದಾಣ ಮೇಲ್ದರ್ಜೆಗೇರಿಸುವ ಕಾರ್ಯ ಪೂರ್ಣಗೊಂಡಿದೆ.

"ಭಾರತ ಆಧುನಿಕವಾಗಿರಬೇಕು, ಭಾರತವನ್ನು ಆಧುನಿಕಗೊಳಿಸಬೇಕು, ಆದರೆ ಅದು ನಮ್ಮ ಮೂಲಭೂತ ಮೌಲ್ಯಗಳನ್ನು ಆಧರಿಸಿರಬೇಕು"

"ಸಾವಿತ್ರಿಬಾಯಿ ಫುಲೆಯಂತಹ ಮಹಾನ್ ವ್ಯಕ್ತಿಗಳು ಹೆಣ್ಣು ಮಕ್ಕಳಿಗೆ ಮುಚ್ಚಿದ ಶಿಕ್ಷಣದ ಬಾಗಿಲುಗಳನ್ನು ತೆರೆದರು"

Posted On: 29 SEP 2024 2:31PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಮಹಾರಾಷ್ಟ್ರದಲ್ಲಿ 11,200 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ದೇಶಕ್ಕೆ ಸಮರ್ಪಿಸಿದರು.

ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ, 2 ದಿನಗಳ ಹಿಂದೆ ಪ್ರತಿಕೂಲ ಹವಾಮಾನದಿಂದಾಗಿ ಪುಣೆಯಲ್ಲಿ ತಮ್ಮ ಕಾರ್ಯಕ್ರಮ ರದ್ದುಗೊಳಿಸಿದ್ದನ್ನು ನೆನಪಿಸಿದರು. ಇಂದಿನ ವರ್ಚುವಲ್ ಕಾರ್ಯಕ್ರಮದಲ್ಲಿ ತಂತ್ರಜ್ಞಾನಕ್ಕೆ ಮನ್ನಣೆ ನೀಡಲಾಗಿದೆ. ಮಹಾನ್ ವ್ಯಕ್ತಿಗಳ ಸ್ಫೂರ್ತಿಯ ಭೂಮಿ ಮಹಾರಾಷ್ಟ್ರದ ಅಭಿವೃದ್ಧಿಯ ಹೊಸ ಅಧ್ಯಾಯಕ್ಕೆ ಸಾಕ್ಷಿಯಾಗಿದೆ. ಜಿಲ್ಲಾ ನ್ಯಾಯಾಲಯದಿಂದ ಸ್ವರ್ಗೇಟ್‌ವರೆಗೆ  ಪುಣೆ ಮೆಟ್ರೋ ವಿಭಾಗದ ಉದ್ಘಾಟನೆ ಮತ್ತು ಪುಣೆ ಮೆಟ್ರೋ ಹಂತ-1ರಲ್ಲಿ ಸ್ವರ್ಗೇಟ್-ಕಟ್ರಾಜ್ ಮಾರ್ಗ ವಿಸ್ತರಣೆಗೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಭಿದೇವಾಡದಲ್ಲಿ ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆ ಸ್ಮರಣಾರ್ಥ ಪ್ರಥಮ ಬಾಲಕಿಯರ ಶಾಲೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಪುಣೆಯಲ್ಲಿ ವಾಸಿಸುವ ಜನರ ಸೌಕರ್ಯ ಹೆಚ್ಚಿಸುವ ನಿಟ್ಟಿನಲ್ಲಿ ತ್ವರಿತ ಪ್ರಗತಿಯಾಗಿದೆ ಎಂದು ಪ್ರಧಾನಿ ತೃಪ್ತಿ ವ್ಯಕ್ತಪಡಿಸಿದರು.

"ಭಗವಾನ್ ವಿಠ್ಠಲನ ಭಕ್ತರು ಇಂದು ವಿಶೇಷ ಉಡುಗೊರೆ ಸ್ವೀಕರಿಸಿದ್ದಾರೆ", ನಗರಕ್ಕೆ ನೇರ ವಿಮಾನ ಸಂಪರ್ಕ ಸ್ಥಾಪಿಸಲು ಸೋಲಾಪುರ ವಿಮಾನ ನಿಲ್ದಾಣದ ಉದ್ಘಾಟನೆ ನೆರವೇರಿಸಲಾಗಿದೆ. ಟರ್ಮಿನಲ್ ಸಾಮರ್ಥ್ಯ ಹೆಚ್ಚಿದ್ದು, ಈಗಿರುವ ವಿಮಾನ ನಿಲ್ದಾಣ ಮೇಲ್ದರ್ಜೆಗೇರಿಸುವ ಕಾಮಗಾರಿ ಪೂರ್ಣಗೊಂಡ ಬಳಿಕ ಪ್ರಯಾಣಿಕರಿಗೆ ಹೊಸ ಸೇವೆಗಳು ಹಾಗೂ ಸೌಲಭ್ಯಗಳು ಸಿಗಲಿವೆ. ಈ ಮೂಲಕ ಭಗವಾನ್ ವಿಠ್ಠಲ ಭಕ್ತರಿಗೆ ಅನುಕೂಲವಾಗಿದೆ. ಈ ವಿಮಾನ ನಿಲ್ದಾಣವು ಉದ್ಯಮಗಳು, ಕೈಗಾರಿಕೆಗಳು ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ. ಇಂದಿನ ಅಭಿವೃದ್ಧಿ ಯೋಜನೆಗಳಿಗಾಗಿ ಮಹಾರಾಷ್ಟ್ರದ ಜನರನ್ನು ಪ್ರಧಾನಿ ಅಭಿನಂದಿಸಿದರು.

"ಇಂದು ಮಹಾರಾಷ್ಟ್ರಕ್ಕೆ ಹೊಸ ಸಂಕಲ್ಪ, ನಿರ್ಣಯಗಳೊಂದಿಗೆ ಬಹುದೊಡ್ಡ ಗುರಿಗಳ ಅಗತ್ಯವಿದೆ". ಪುಣೆಯಂತಹ ನಗರಗಳನ್ನು ಪ್ರಗತಿ ಮತ್ತು ನಗರಾಭಿವೃದ್ಧಿಯ ಕೇಂದ್ರವನ್ನಾಗಿ ಮಾಡುವ ಅಗತ್ಯವಿದೆ. ಪುಣೆಯ ಪ್ರಗತಿ ಮತ್ತು ಹೆಚ್ಚುತ್ತಿರುವ ಜನಸಂಖ್ಯೆಯ ಒತ್ತಡ ಕುರಿತು ಮಾತನಾಡಿದ ಪ್ರಧಾನಿ, ಅಭಿವೃದ್ಧಿ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಲು ಈಗಲೇ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಈ ಗುರಿ ಸಾಧಿಸಲು, ಪ್ರಸ್ತುತ ರಾಜ್ಯ ಸರ್ಕಾರವು ಪುಣೆಯ ಸಾರ್ವಜನಿಕ ಸಾರಿಗೆಯನ್ನು ಆಧುನೀಕರಿಸುವ ವಿಧಾನದೊಂದಿಗೆ ಕೆಲಸ ಮಾಡುತ್ತಿದೆ. ನಗರವನ್ನು ವಿಸ್ತರಿಸಿದಂತೆ ಸಂಪರ್ಕಕ್ಕೂ ಉತ್ತೇಜನ ನೀಡುತ್ತಿದೆ ಎಂದು ಪ್ರಧಾನಿ ಹೇಳಿದರು.

ಪುಣೆ ಮೆಟ್ರೋ ಕುರಿತ ಚರ್ಚೆಗಳು 2008ರಲ್ಲೇ ಪ್ರಾರಂಭವಾದವು. ಆದರೆ 2016ರಲ್ಲಿ ಸರ್ಕಾರವು ತ್ವರಿತ ನಿರ್ಧಾರಗಳನ್ನು ತೆಗೆದುಕೊಂಡಾಗಲೇ ಅದಕ್ಕೆ ಭದ್ರ ಅಡಿಪಾಯ ಹಾಕಲಾಯಿತು. ಇದರ ಫಲವಾಗಿ ಇಂದು ಪುಣೆಯಲ್ಲಿ ಮೆಟ್ರೋ ವೇಗ ಪಡೆಯುತ್ತಿದೆ ಮತ್ತು ವಿಸ್ತರಿಸುತ್ತಿದೆ. ಇಂದಿನ ಯೋಜನೆಗಳನ್ನು ಉಲ್ಲೇಖಿಸಿದ ಶ್ರೀ ಮೋದಿ, ಒಂದು ಕಡೆ ಪುಣೆ ಮೆಟ್ರೋದ ಜಿಲ್ಲಾ ನ್ಯಾಯಾಲಯ-ಸ್ವರ್ಗಗೇಟ್‌ ಮೆಟ್ರೋ ವಿಭಾಗ ಉದ್ಘಾಟಿಸಲಾಗಿದೆ, ಇನ್ನೊಂದು ಕಡೆ ಸ್ವರ್ಗೇಟ್‌ನಿಂದ ಕಟ್ರಾಜ್ ಮಾರ್ಗಕ್ಕೆ ಶಿಲಾನ್ಯಾಸ ಮಾಡಲಾಗಿದೆ. ಈ ವರ್ಷದ ಮಾರ್ಚ್‌ನಲ್ಲಿ ರೂಬಿ ಹಾಲ್ ಕ್ಲಿನಿಕ್‌ನಿಂದ ರಾಮವಾಡಿಗೆ ಮೆಟ್ರೋ ಸೇವೆ ಉದ್ಘಾಟಿಸಿದ್ದನ್ನು ಅವರು ಸ್ಮರಿಸಿದರು. 2016ರಿಂದ ಇಲ್ಲಿಯವರೆಗೆ ಪುಣೆ ಮೆಟ್ರೋದ ವಿಸ್ತರಣೆಗಾಗಿ ಮಾಡಿದ ಕೆಲಸವನ್ನು ಪ್ರಧಾನಿ ಶ್ಲಾಘಿಸಿದರು. ಏಕೆಂದರೆ ತ್ವರಿತ ನಿರ್ಧಾರದೊಂದಿಗೆ ಎಲ್ಲಾ ಅಡೆತಡೆಗಳನ್ನು ತೆಗೆದುಹಾಕಲಾಯಿತು. ಹಿಂದಿನ ಸರ್ಕಾರವು 8 ವರ್ಷಗಳಲ್ಲಿ ಒಂದೇ ಒಂದು ಮೆಟ್ರೋ ಪಿಲ್ಲರ್ ನಿರ್ಮಿಸಲು ಸಾಧ್ಯವಾಗದಿದ್ದಾಗ, ಪ್ರಸ್ತುತ ಸರ್ಕಾರವು ಪುಣೆಯಲ್ಲಿ ಆಧುನಿಕ ಮೆಟ್ರೋ ಜಾಲ ಸಿದ್ಧಪಡಿಸಿದೆ ಎಂದರು.

ಮಹಾರಾಷ್ಟ್ರದ ಪ್ರಗತಿ ಖಾತ್ರಿಪಡಿಸುವಲ್ಲಿ ಅಭಿವೃದ್ಧಿ-ಚಾಲಿತ ಆಡಳಿತದ ಪ್ರಾಮುಖ್ಯತೆಯನ್ನು ಪ್ರಸ್ತಾಪಿಸಿದ ಶ್ರೀ ಮೋದಿ, ಈ ನಿರಂತರತೆಯ ಮಧ್ಯೆ ಬರುವ ಯಾವುದೇ ಅಡ್ಡಿಯು ರಾಜ್ಯದ ಗಮನಾರ್ಹ ನಷ್ಟಕ್ಕೆ ಕಾರಣವಾಗುತ್ತದೆ. ಮೆಟ್ರೋ ಉಪಕ್ರಮಗಳಿಂದ ಹಿಡಿದು ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಮತ್ತು ರೈತರಿಗೆ ನಿರ್ಣಾಯಕ ನೀರಾವರಿ ಯೋಜನೆಗಳ ತನಕ ಹಲವಾರು ಸ್ಥಗಿತಗೊಂಡ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದು ಡಬಲ್ ಎಂಜಿನ್ ಸರ್ಕಾರದ ಕ್ರಮವಾಗಿದೆ.

ಆಗಿನ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅಧಿಕಾರಾವಧಿಯಲ್ಲಿ ಪರಿಕಲ್ಪನೆಯಾದ ಔರಿಕ್ ಸಿಟಿಯ ಪ್ರಮುಖ ಅಂಶವಾದ ಬಿಡ್ಕಿನ್ ಕೈಗಾರಿಕಾ ಪ್ರದೇಶ ಕುರಿತು ಪ್ರಧಾನ ಮಂತ್ರಿ ಮಾತನಾಡಿದರು. ದೆಹಲಿ-ಮುಂಬೈ ಕೈಗಾರಿಕಾ ಕಾರಿಡಾರ್‌ನಲ್ಲಿರುವ ಯೋಜನೆಯು ಅಡೆತಡೆಗಳನ್ನು ಎದುರಿಸಿತು, ಆದರೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಡಬಲ್ ಎಂಜಿನ್ ಸರ್ಕಾರದ ನೇತೃತ್ವದಲ್ಲಿ ಪುನಶ್ಚೇತನಗೊಂಡಿತು. ಬಿಡ್ಕಿನ್ ಕೈಗಾರಿಕಾ ಪ್ರದೇಶವನ್ನು ರಾಷ್ಟ್ರಕ್ಕೆ ಸಮರ್ಪಿಸಿರುವುದಾಗಿ ಶ್ರೀ ಮೋದಿ ಘೋಷಿಸಿದರು. ಈ ಪ್ರದೇಶಕ್ಕೆ ಗಮನಾರ್ಹ ಹೂಡಿಕೆಗಳು ಮತ್ತು ಉದ್ಯೋಗಾವಕಾಶ ತರುವ ಸಾಮರ್ಥ್ಯವಿದೆ. 8,000 ಎಕರೆ ಪ್ರದೇಶದಲ್ಲಿ ಬಿಡ್ಕಿನ್ ಕೈಗಾರಿಕಾ ಪ್ರದೇಶದ ಅಭಿವೃದ್ಧಿಯೊಂದಿಗೆ ಮಹಾರಾಷ್ಟ್ರಕ್ಕೆ ಸಾವಿರಾರು ಕೋಟಿ ರೂ. ಬಂಡವಾಳ ಹರಿದು ಬರಲಿದ್ದು, ಸಾವಿರಾರು ಯುವಕರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಹೂಡಿಕೆಯ ಮೂಲಕ ಉದ್ಯೋಗ ಸೃಷ್ಟಿಸುವ ಮಂತ್ರವು ಇಂದು ಮಹಾರಾಷ್ಟ್ರದ ಯುವಜನತೆಯ ಪ್ರಮುಖ ಶಕ್ತಿಯಾಗುತ್ತಿದೆ. ಆಧುನೀಕರಣವು ದೇಶದ ಮೂಲ ಮೌಲ್ಯಗಳನ್ನು ಆಧರಿಸಿರಬೇಕು ಎಂದು ಪುನರುಚ್ಚರಿಸಿದ ಶ್ರೀ ಮೋದಿ, ಭಾರತವು ತನ್ನ ಶ್ರೀಮಂತ ಪರಂಪರೆ ಮುಂದುವರೆಸಿಕೊಂಡು ಆಧುನೀಕವಾಗುತ್ತಿದೆ ಮತ್ತು ಅಭಿವೃದ್ಧಿ ಹೊಂದುತ್ತಿದೆ. ಭವಿಷ್ಯಕ್ಕೆ ಸಿದ್ಧವಾಗಿರುವ ಮೂಲಸೌಕರ್ಯ ಮತ್ತು ಅಭಿವೃದ್ಧಿಯ ಲಾಭಗಳು ಪ್ರತಿ ವರ್ಗವನ್ನು ತಲುಪುವುದು ಮಹಾರಾಷ್ಟ್ರಕ್ಕೆ ಸಮಾನವಾಗಿ ಮುಖ್ಯವಾಗಿದೆ. ಸಮಾಜದ ಪ್ರತಿಯೊಂದು ವರ್ಗವು ದೇಶದ ಅಭಿವೃದ್ಧಿಯಲ್ಲಿ ಭಾಗವಹಿಸಿದಾಗ ಅದು ನಿಜವಾಗಬಹುದು ಎಂದರು.

ಸಮಾಜದ ಪರಿವರ್ತನೆಯಲ್ಲಿ ಮಹಿಳಾ ನಾಯಕತ್ವದ ಪ್ರಮುಖ ಪಾತ್ರ ಪ್ರಸ್ತಾಪಿಸಿದ ಪ್ರಧಾನಮಂತ್ರಿ, ಮಹಾರಾಷ್ಟ್ರದ ಮಹಿಳಾ ಸಬಲೀಕರಣದ ಪರಂಪರೆಗೆ ಗೌರವ ಸಲ್ಲಿಸಿದರು. ವಿಶೇಷವಾಗಿ ಮೊದಲ ಬಾಲಕಿಯರ ಶಾಲೆ ತೆರೆಯುವ ಮೂಲಕ ಮಹಿಳಾ ಶಿಕ್ಷಣಕ್ಕಾಗಿ ಚಳುವಳಿ ಪ್ರಾರಂಭಿಸಿದ ಸಾವಿತ್ರಿಬಾಯಿ ಫುಲೆ ಅವರ ಪ್ರಯತ್ನಗಳು. ಕೌಶಲ್ಯಾಭಿವೃದ್ಧಿ ಕೇಂದ್ರ, ಗ್ರಂಥಾಲಯ ಮತ್ತು ಇತರೆ ಅಗತ್ಯ ಸೌಲಭ್ಯಗಳನ್ನು ಒಳಗೊಂಡಿರುವ ಸಾವಿತ್ರಿಬಾಯಿ ಫುಲೆ ಸ್ಮರಣಾರ್ಥ ಶಾಲೆ ಕಟ್ಟಲು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ ಸ್ಮಾರಕವು ಸಮಾಜ ಸುಧಾರಣಾ ಆಂದೋಲನಕ್ಕೆ ಶಾಶ್ವತ ಗೌರವ ಮತ್ತು ಭವಿಷ್ಯದ ಪೀಳಿಗೆಗೆ ಸ್ಫೂರ್ತಿಯಾಗಲಿದೆ ಎಂದು ಶ್ರೀ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಮಹಿಳೆಯರು ಎದುರಿಸುತ್ತಿರುವ ಅಗಾಧವಾದ ಸವಾಲುಗಳನ್ನು ಪ್ರಸ್ತಾಪಿಸಿದ ಪ್ರಧಾನಿ, ವಿಶೇಷವಾಗಿ ಮಹಿಳೆಯರಿಗೆ ಶಿಕ್ಷಣದ ಬಾಗಿಲುಗಳನ್ನು ತೆರೆದಿದ್ದಕ್ಕಾಗಿ ಸಾವಿತ್ರಿಬಾಯಿ ಫುಲೆಯಂತಹ ದಾರ್ಶನಿಕರನ್ನು ಶ್ಲಾಘಿಸಿದರು. ಸ್ವಾತಂತ್ರ್ಯ ಪಡೆದರೂ, ದೇಶವು ಹಿಂದಿನ ಮನಸ್ಥಿತಿಯನ್ನು ಸಂಪೂರ್ಣವಾಗಿ ತೊಡೆದುಹಾಕಲು ಹೆಣಗಾಡುತ್ತಿದೆ. ಅನೇಕ ಕ್ಷೇತ್ರಗಳಲ್ಲಿ ಮಹಿಳೆಯರ ಪ್ರವೇಶವನ್ನು ನಿರ್ಬಂಧಿಸಿದ ಹಿಂದಿನ ಸರ್ಕಾರಗಳಿಂದಾಗಿ, ಶಾಲೆಗಳಲ್ಲಿ ಶೌಚಾಲಯದಂತಹ ಮೂಲಸೌಕರ್ಯಗಳ ಕೊರತೆಯು ಹೆಚ್ಚಿನ ಹೆಣ್ಣು ಮಕ್ಕಳು ಶಿಕ್ಷಣ ಬಿಡಲು ಕಾರಣವಾಗುತ್ತಿತ್ತು. ಪ್ರಸ್ತುತ ಸರ್ಕಾರವು ಸೈನಿಕ ಶಾಲೆಗಳಲ್ಲಿ ಮಹಿಳೆಯರ ಪ್ರವೇಶ ಮತ್ತು ಸಶಸ್ತ್ರ ಪಡೆಗಳಲ್ಲಿ ಮಹಿಳೆಯರ ಪಾತ್ರಗಳು ಸೇರಿದಂತೆ ಹಳತಾದ ವ್ಯವಸ್ಥೆಗಳನ್ನು ಮಾರ್ಪಡಿಸಿದೆ. ಗರ್ಭಿಣಿಯರು ತಮ್ಮ ಕೆಲಸ ತೊರೆಯಬೇಕಾದ ಸಮಸ್ಯೆ ಪರಿಹರಿಸಿದೆ. ಸ್ವಚ್ಛ ಭಾರತ ಅಭಿಯಾನದ ಮಹತ್ವದ ಪರಿಣಾಮ ಮತ್ತು ಬಯಲು ಶೌಚ ಸಂಕಷ್ಟದಿಂದ ಮುಕ್ತರಾದ ಹೆಣ್ಣು ಮಕ್ಕಳು ಮತ್ತು ಮಹಿಳೆಯರು ಇದರ ದೊಡ್ಡ ಫಲಾನುಭವಿಗಳು ಎಂದು ಹೇಳಿದರು. ಶಾಲಾ ನೈರ್ಮಲ್ಯ ಸುಧಾರಣೆಗಳು ಬಾಲಕಿಯರ ಶಾಲೆ ಬಿಡುವ ಪ್ರಮಾಣವನ್ನು ಕಡಿಮೆ ಮಾಡಿದೆ. ಮಹಿಳೆಯರ ಸುರಕ್ಷತೆಗಾಗಿ ಕಟ್ಟುನಿಟ್ಟಾದ ಕಾನೂನುಗಳನ್ನು ಮತ್ತು ಭಾರತದ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಮಹಿಳೆಯರ ನಾಯಕತ್ವವನ್ನು ಖಾತ್ರಿಪಡಿಸುವ ನಾರಿ ಶಕ್ತಿ ವಂದನ್ ಅಧಿನಿಯಮ್ ಜಾರಿಗೆ ತರಲಾಗಿದೆ. "ನಮ್ಮ ಹೆಣ್ಣುಮಕ್ಕಳಿಗೆ ಪ್ರತಿಯೊಂದು ಕ್ಷೇತ್ರದ ಬಾಗಿಲು ತೆರೆದಾಗ ಮಾತ್ರ ದೇಶಕ್ಕೆ ಪ್ರಗತಿಯ ನಿಜವಾದ ಬಾಗಿಲುಗಳು ತೆರೆದುಕೊಳ್ಳುತ್ತವೆ", ಸಾವಿತ್ರಿಬಾಯಿ ಫುಲೆ ಸ್ಮಾರಕವು ಈ ನಿರ್ಣಯಗಳಿಗೆ ಮತ್ತು ಮಹಿಳಾ ಸಬಲೀಕರಣದ ಅಭಿಯಾನಕ್ಕೆ ಮತ್ತಷ್ಟು ಶಕ್ತಿ ನೀಡುತ್ತದೆ ಎಂದು ಶ್ರೀ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ರಾಷ್ಟ್ರವನ್ನು ಅಭಿವೃದ್ಧಿಯತ್ತ ಮುನ್ನಡೆಸುವಲ್ಲಿ ಮಹಾರಾಷ್ಟ್ರ ಪ್ರಮುಖ ಪಾತ್ರ ವಹಿಸಲಿದೆ ಎಂಬ ತಮ್ಮ ನಂಬಿಕೆಯನ್ನು ಪುನರುಚ್ಚರಿಸಿದ ಪ್ರಧಾನಿ, "ನಾವು ಒಟ್ಟಾಗಿ 'ವಿಕಸಿತ ಮಹಾರಾಷ್ಟ್ರ, ವಿಕಸಿತ ಭಾರತ"ದ ಗುರಿ ಸಾಧಿಸುತ್ತೇವೆ ಎಂದು ಹೇಳಿ, ತಮ್ಮ ಭಾಷಣ ಮುಕ್ತಾಗೊಳಿಸಿದರು.

ಮಹಾರಾಷ್ಟ್ರ ರಾಜ್ಯಪಾಲ ಶ್ರೀ ಸಿ ಪಿ ರಾಧಾಕೃಷ್ಣನ್, ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ಏಕನಾಥ್ ಶಿಂಧೆ, ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಗಳಾದ ಶ್ರೀ ದೇವೇಂದ್ರ ಫಡ್ನವಿಸ್ ಮತ್ತು ಶ್ರೀ ಅಜಿತ್ ಪವಾರ್ ಮತ್ತು ಇತರೆ ಗಣ್ಯರು ಉಪಸ್ಥಿತರಿದ್ದರು.

ಹಿನ್ನೆಲೆ

ಪ್ರಧಾನ ಮಂತ್ರಿ ಅವರು ಪುಣೆ ಮೆಟ್ರೋ ಜಿಲ್ಲಾ ನ್ಯಾಯಾಲಯ-ಸ್ವರ್ಗೇಟ್‌ ವಿಭಾಗವನ್ನು ಉದ್ಘಾಟಿಸಿದರು, ಇದು ಪುಣೆ ಮೆಟ್ರೋ ರೈಲು ಯೋಜನೆ(ಹಂತ-1) ಪೂರ್ಣಗೊಳಿಸುತ್ತದೆ. ಜಿಲ್ಲಾ ನ್ಯಾಯಾಲಯದಿಂದ ಸ್ವರ್ಗೇಟ್ ನಡುವಿನ ಭೂಗತ ಮಾರ್ಗದ ವೆಚ್ಚ ಸುಮಾರು 1,810 ಕೋಟಿ ರೂ. ಆಗಿದೆ. ಇದಲ್ಲದೆ, ಸುಮಾರು 2,955 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಿರುವ ಪುಣೆ ಮೆಟ್ರೋ ಹಂತ-1ರ ಸ್ವರ್ಗೇಟ್-ಕಟ್ರಾಜ್ ವಿಸ್ತರಣೆಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು. ಸುಮಾರು 5.46 ಕಿಮೀ ಉದ್ದದ ಈ ದಕ್ಷಿಣ ಭಾಗದ ವಿಸ್ತರಣೆಯು ಮಾರ್ಕೆಟ್ ಯಾರ್ಡ್, ಪದ್ಮಾವತಿ ಮತ್ತು ಕಾಟ್ರಾಜ್ ಎಂಬ 3 ನಿಲ್ದಾಣಗಳೊಂದಿಗೆ ಸಂಪೂರ್ಣ  ಭೂಗತ ಮಾರ್ಗವಾಗಿದೆ.

ಸರ್ಕಾರದ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮದ ಅಡಿ, ವಿಸ್ತಾರವಾದ 7,855 ಎಕರೆ ಭೂಮಿ ಒಳಗೊಂಡಿರುವ ಪರಿವರ್ತನೀಯ ಯೋಜನೆಯಾದ ಬಿಡ್ಕಿನ್ ಕೈಗಾರಿಕಾ ಪ್ರದೇಶವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಿಂದ ದಕ್ಷಿಣಕ್ಕೆ 20 ಕಿಮೀ ದೂರದಲ್ಲಿದೆ. ದೆಹಲಿ ಮುಂಬೈ ಕೈಗಾರಿಕಾ ಕಾರಿಡಾರ್ ಅಡಿ, ಅಭಿವೃದ್ಧಿಪಡಿಸಲಾದ ಈ ಯೋಜನೆಯು ಮರಾಠವಾಡ ಪ್ರದೇಶದಲ್ಲಿ ರೋಮಾಂಚಕ ಆರ್ಥಿಕ ಕೇಂದ್ರವಾಗುವ ಅಪಾರ ಸಾಮರ್ಥ್ಯ ಹೊಂದಿದೆ. ಕೇಂದ್ರ ಸರ್ಕಾರವು 3 ಹಂತಗಳಲ್ಲಿ ಅಭಿವೃದ್ಧಿಗಾಗಿ ಒಟ್ಟಾರೆ 6,400 ಕೋಟಿ ರೂಪಾಯಿ ಒಟ್ಟಾರೆ ಯೋಜನಾ ವೆಚ್ಚದೊಂದಿಗೆ ಈ ಯೋಜನೆ ಅನುಮೋದಿಸಿದೆ.

ಪ್ರಧಾನಿ ಅವರು ಸೋಲಾಪುರ ವಿಮಾನ ನಿಲ್ದಾಣ ಉದ್ಘಾಟಿಸಿದರು, ಇದು ಸಂಪರ್ಕವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ. ಪ್ರವಾಸಿಗರು, ವ್ಯಾಪಾರ ಪ್ರಯಾಣಿಕರು ಮತ್ತು ಹೂಡಿಕೆದಾರರು ಸೋಲಾಪುರವನ್ನು ಹೆಚ್ಚು ಸುಲಭವಾಗಿ ಪ್ರವೇಶಿಸುವಂತೆ ಮಾಡುತ್ತದೆ. ಸೊಲ್ಲಾಪುರದ ಅಸ್ತಿತ್ವದಲ್ಲಿರುವ ಟರ್ಮಿನಲ್ ಕಟ್ಟಡವನ್ನು ವಾರ್ಷಿಕವಾಗಿ ಸುಮಾರು 4.1 ಲಕ್ಷ ಪ್ರಯಾಣಿಕರಿಗೆ ಸೇವೆ ಸಲ್ಲಿಸುವಂತೆ ನವೀಕರಿಸಲಾಗಿದೆ. ಇದಲ್ಲದೆ, ಪ್ರಧಾನಿ ಅವರು ಭಿಡೆವಾಡದಲ್ಲಿ ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆ ಸ್ಮರಣಾರ್ಥ ಮೊದಲ ಬಾಲಕಿಯರ ಶಾಲೆ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

 

 

*****

 

 


(Release ID: 2060153) Visitor Counter : 26