ಸಂಪುಟ
ಚಂದ್ರನ ಅಂಗಳಕ್ಕೆ ಮತ್ತೆ ಹೋಗಲಿದೆ ಭಾರತ: ಈ ಬಾರಿ ಚಂದ್ರನಂಗಳಕ್ಕೆ ಇಳಿದ ನಂತರ ಭುವಿಗೆ ಹಿಂತಿರುಗಲಿದೆ
ಚಂದ್ರಯಾನ-1, 2 ಮತ್ತು 3ರ ಸರಣಿಯಲ್ಲಿ ಚಂದ್ರಯಾನ-4 ಮಿಷನ್‌ಗೆ ಸಂಪುಟ ಅನುಮೋದನೆ
ಚಂದ್ರಯಾನ-3 ಯಶಸ್ವಿ ನಂತರದ ಚಂದ್ರಯಾನ-4 ಮಿಷನ್; ಇದು ತಂತ್ರಜ್ಞಾನಗಳನ್ನು ಪ್ರದರ್ಶಿಸುವ ಮತ್ತು ಮಾದರಿಗಳೊಂದಿಗೆ ಭೂಮಿಗೆ ಹಿಂತಿರುಗುವ ಕಾರ್ಯಾಚರಣೆಯಾಗಿದೆ
Posted On:
18 SEP 2024 3:13PM by PIB Bengaluru
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಚಂದ್ರಯಾನ-4 ಮಿಷನ್|ಗೆ ಅನುಮೋದನೆ ನೀಡಿದೆ. ಚಂದ್ರಯಾನ-4 ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಮತ್ತು ಪ್ರದರ್ಶಿಸುವ ಬಾಹ್ಯಾಕಾಶ ಕಾರ್ಯಾಚರಣೆಯಾಗಿದೆ. ಈ ಕಾರ್ಯಾಚರಣೆಯಲ್ಲಿ ಚಂದ್ರನ ಅಂಗಳಕ್ಕೆ ಯಶಸ್ವಿಯಾಗಿ ಇಳಿದ ನಂತರ, ಅಲ್ಲಿನ ಮಾದರಿಗಳನ್ನು ಸಂಗ್ರಹಿಸಿ ಭೂಮಿಗೆ ಮರಳಿದ ನಂತರ, ಚಂದ್ರನ ಮಾದರಿಗಳ ವಿಶ್ಲೇಷಣೆ ನಡೆಸಲಿದೆ. ಚಂದ್ರಯಾನ-4 ಮಿಷನ್ ಅಂತಿಮವಾಗಿ ಚಂದ್ರನ ಮೇಲೆ ಭಾರತೀಯ ತಂಡ ಇಳಿಯುವುದು(ಲ್ಯಾಂಡಿಂಗ್-2040ರ ವೇಳೆಗೆ ಯೋಜಿಸಲಾಗಿದೆ) ಮತ್ತು ಸುರಕ್ಷಿತವಾಗಿ ಭೂಮಿಗೆ ಮರಳಲು ಅಗತ್ಯವಾದ ಮೂಲ ತಂತ್ರಜ್ಞಾನ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲಿದೆ. ನೌಕೆಯ ಸುರಕ್ಷಿತ ಚಲನೆ/ನಿಲುಗಡೆ(ಡಾಕಿಂಗ್/ಅನ್‌ಡಾಕಿಂಗ್), ಲ್ಯಾಂಡಿಂಗ್, ಸುರಕ್ಷಿತವಾಗಿ ಭೂಮಿಗೆ ಮರಳಲು ಮತ್ತು ಚಂದ್ರನ ಮಾದರಿ ಸಂಗ್ರಹಣೆ ಮತ್ತು ಅವುಗಳ ವಿಶ್ಲೇಷಣೆ ನಡೆಸಲು ಅಗತ್ಯವಿರುವ ಮೂಲ ತಂತ್ರಜ್ಞಾನಗಳನ್ನು ಚಂದ್ರಯಾನ-4ರಲ್ಲಿ ಪ್ರದರ್ಶಿಸಲಾಗುತ್ತದೆ.
2035ರ ವೇಳೆಗೆ ಭಾರತೀಯ ಬಾಹ್ಯಾಕಾಶ ನಿಲ್ದಾಣ(ಭಾರತೀಯ ಅಂತರಿಕ್ಷ ನಿಲ್ದಾಣ) ಮತ್ತು 2040ರ ವೇಳೆಗೆ ಚಂದ್ರನ ಅಂಗಳಕ್ಕೆ ಭಾರತೀಯ ತಂಡ ಇಳಿಯಲು ಭಾರತ ಸರ್ಕಾರವು, ಅಮೃತ ಕಾಲದ ಸಮಯದಲ್ಲಿ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ವಿಸ್ತೃತ ಮುನ್ನೋಟ ಅಥವಾ ದೂರದೃಷ್ಟಿಯನ್ನು ವಿವರಿಸಿದೆ. ಈ ದೂರದೃಷ್ಟಿ ಸಾಕಾರಗೊಳಿಸಲು, ಗಗನಯಾನ ಮತ್ತು ಚಂದ್ರಯಾನ ಅನುಸರಣಾ ಕಾರ್ಯಾಚರಣೆಗಳ ಸರಣಿ ಹಾಗೂ ಸಂಯೋಜಿತ ಬಾಹ್ಯಾಕಾಶ ಸಾರಿಗೆ ಮತ್ತು ಮೂಲಸೌಕರ್ಯ ಸಾಮರ್ಥ್ಯಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಚಂದ್ರನ ಮೇಲ್ಮೈಯಲ್ಲಿ ಚಂದ್ರಯಾನ-3 ಲ್ಯಾಂಡರ್‌ನ ಸುರಕ್ಷಿತವಾಗಿ ಮತ್ತು ಮೃದುವಾಗಿ ಇಳಿದ ಯಶಸ್ವಿ ಪ್ರದರ್ಶನವು ಪ್ರಮುಖ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದೆ, ಜತೆಗೆ, ಕೆಲವೇ ಇತರ ರಾಷ್ಟ್ರಗಳು ಹೊಂದಿರುವ ತಂತ್ರಜ್ಞಾನ ಸಾಮರ್ಥ್ಯಗಳನ್ನು ಪ್ರದರ್ಶಿಸಿದೆ. ಚಂದ್ರನ ಮಾದರಿಗಳನ್ನು ಸಂಗ್ರಹಿಸಿ ಸುರಕ್ಷಿತವಾಗಿ ಭೂಮಿಗೆ ಹಿಂದಿರುಗಿದ ಸಾಮರ್ಥ್ಯ ಪ್ರದರ್ಶನವೇ ಯಶಸ್ವಿ ಲ್ಯಾಂಡಿಂಗ್ ಕಾರ್ಯಾಚರಣೆಯಾಗಿದೆ.
ಬಾಹ್ಯಾಕಾಶ ನೌಕೆ ಮತ್ತು ಉಡಾವಣೆ ಅಭಿವೃದ್ಧಿಯ ಜವಾಬ್ದಾರಿಯನ್ನು ಇಸ್ರೋ ವಹಿಸಿಕೊಳ್ಳಲಿದೆ. ಇಸ್ರೋದಲ್ಲಿ ಚಾಲ್ತಿಯಲ್ಲಿರುವ ಸ್ಥಾಪಿತ ಅಭ್ಯಾಸಗಳ ಮೂಲಕ ಯೋಜನೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲಾಗುತ್ತದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತದೆ. ಉದ್ಯಮ ಮತ್ತು ಶೈಕ್ಷಣಿಕ ವಲಯದ ಭಾಗವಹಿಸುವಿಕೆಯೊಂದಿಗೆ ಅನುಮೋದನೆ ನೀಡಿದ 36 ತಿಂಗಳೊಳಗೆ ಚಂದ್ರಯಾನ ಕಾರ್ಯಾಚರಣೆ(ಮಿಷನ್) ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಎಲ್ಲಾ ನಿರ್ಣಾಯಕ ತಂತ್ರಜ್ಞಾನಗಳನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ. ಮಿಷನ್‌ನ ಸಾಕ್ಷಾತ್ಕಾರವು ವಿವಿಧ ಕೈಗಾರಿಕೆಗಳ ಮೂಲಕ ಆಗಲಿದೆ. ಆರ್ಥಿಕತೆಯ ಇತರ ಕ್ಷೇತ್ರಗಳಿಗೆ ಹೆಚ್ಚಿನ ಉದ್ಯೋಗದ ಸಾಮರ್ಥ್ಯ ಮತ್ತು ತಂತ್ರಜ್ಞಾನ ವಾಣಿಜ್ಯೀಕರಣ ಆಗುತ್ತದೆ ಎಂದು ಊಹಿಸಲಾಗಿದೆ.
ತಂತ್ರಜ್ಞಾನ ಪ್ರದರ್ಶನದ ಮಿಷನ್ "ಚಂದ್ರಯಾನ-4"ಕ್ಕೆ ಒಟ್ಟು 2104.06 ಕೋಟಿ ರೂ. ನಿಧಿಯ ಅವಶ್ಯಕತೆ ಇದೆ. ಬಾಹ್ಯಾಕಾಶ ನೌಕೆಯ ಅಭಿವೃದ್ಧಿ ಮತ್ತು ಸಿದ್ಧಿಯ ವೆಚ್ಚವು ಇದರಲ್ಲಿ ಸೇರಿದೆ. ಅಲ್ಲದೆ, ಎಲ್ ವಿ ಎಂ3 ಮಾದರಿಯ 2 ಉಡಾವಣಾ ವಾಹಕಗಳು, ಬಾಹ್ಯ ಡೀಪ್ ಸ್ಪೇಸ್ ನೆಟ್|ವರ್ಕ್ ಸಪೋರ್ಟ್ ಮತ್ತು ವಿನ್ಯಾಸ ಮೌಲ್ಯೀಕರಣಕ್ಕಾಗಿ ವಿಶೇಷ ಪರೀಕ್ಷೆಗಳು, ಅಂತಿಮವಾಗಿ ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡಿಂಗ್ ಮತ್ತು ಸಂಗ್ರಹಿಸಿದ ಮಾದರಿಯೊಂದಿಗೆ ಭೂಮಿಗೆ ಸುರಕ್ಷಿತವಾಗಿ ಮರಳುವ ಕಾರ್ಯಾಚರಣೆ ವೆಚ್ಚವೂ ಇದರಲ್ಲಿ ಸೇರಿದೆ.
ಚಂದ್ರನ ಅಂಗಳದಲ್ಲಿ ಇಳಿಯುವ ಮಾನವಸಹಿತ ಕಾರ್ಯಾಚರಣೆಗಳು, ಚಂದ್ರನ ಮಾದರಿಯೊಂದಿಗೆ ಸುರಕ್ಷಿತವಾಗಿ ಹಿಂತಿರುಗುವಿಕೆ ಮತ್ತು ಚಂದ್ರನ ಮಾದರಿಗಳ ವೈಜ್ಞಾನಿಕ ವಿಶ್ಲೇಷಣೆಗಾಗಿ ಅಭಿವೃದ್ಧಿಪಡಿಸುವ ನಿರ್ಣಾಯಕವಾದ ತಳಹದಿಯ ಅಥವಾ ಮೂಲ ಅಥವಾ ಸ್ಥಾಪಿತ ತಂತ್ರಜ್ಞಾನಗಳಲ್ಲಿ ಭಾರತವು ಸ್ವಾವಲಂಬಿಯಾಗಲು ಈ “ಮೂನ್ ಮಿಷನ್” ಅನುವು ಮಾಡಿಕೊಡುತ್ತದೆ. ತಂತ್ರಜ್ಞಾನ ಸಿದ್ಧಿ ಅಥವಾ ಸಾಕ್ಷಾತ್ಕಾರದ ಕಡೆಗೆ ಸಾಗಲು ಭಾರತೀಯ ಉದ್ಯಮದ ಗಮನಾರ್ಹ ಒಳಗೊಳ್ಳುವಿಕೆ ಇರುತ್ತದೆ. ಚಂದ್ರಯಾನ-4 ವಿಜ್ಞಾನ ಸಭೆಗಳು, ಕಾರ್ಯಾಗಾರಗಳ ಮೂಲಕ ಭಾರತೀಯ ಶಿಕ್ಷಣವನ್ನು ಸಂಯೋಜಿಸುವ ಯೋಜನೆ ಈಗಾಗಲೇ ಜಾರಿಯಲ್ಲಿದೆ. ಈ ಮಿಷನ್, ರಾಷ್ಟ್ರೀಯ ಸ್ವತ್ತುಗಳಾಗಿರುವ ಚಂದ್ರನ ಮಾದರಿಗಳ ಪರಾಮರ್ಶೆ ಮತ್ತು ವಿಶ್ಲೇಷಣೆಗಾಗಿ ಸೌಲಭ್ಯಗಳ ಸ್ಥಾಪನೆಯನ್ನು ಖಚಿತಪಡಿಸುತ್ತದೆ
*****
(Release ID: 2056367)
Visitor Counter : 65
Read this release in:
Odia
,
Tamil
,
English
,
Urdu
,
Marathi
,
Nepali
,
Hindi
,
Bengali
,
Manipuri
,
Assamese
,
Punjabi
,
Gujarati
,
Telugu
,
Malayalam