ನಾಗರೀಕ ವಿಮಾನಯಾನ ಸಚಿವಾಲಯ

ನಾಗರಿಕ ವಿಮಾನಯಾನ ಕುರಿತ ದೆಹಲಿ ಘೋಷಣೆಯನ್ನು ಅಂಗೀಕರಿಸುವುದಾಗಿ ಪ್ರಧಾನ ಮಂತ್ರಿ ಘೋಷಿಸಿದರು


ನಾಗರಿಕ ವಿಮಾನಯಾನದ ಕುರಿತ 2ನೇ ಏಷ್ಯಾ ಪೆಸಿಫಿಕ್ ಸಚಿವರ ಸಮ್ಮೇಳನ ದೆಹಲಿ ಘೋಷಣೆಯನ್ನು ಅಂಗೀಕರಿಸಿದೆ

ಭಾರತದಲ್ಲಿ 15% ಪೈಲಟ್ಗಳು ಮಹಿಳೆಯರಾಗಿದ್ದಾರೆ, ಇದು ಜಾಗತಿಕ ಸರಾಸರಿ 5% ಗಿಂತ ಹೆಚ್ಚು: ಪಿಎಂ

ನಿರ್ದಿಷ್ಟ ಸಮುದಾಯಕ್ಕೆ ಸೀಮಿತವಾಗಿದ್ದ ಭಾರತದ ವಿಮಾನಯಾನವೂ ಈಗ ಎಲ್ಲರಿಗೂ ಸೇರಿದ ವಿಮಾನಯಾನವಾಗಿದೆ: ಪಿಎಂ 

ಅಂತಾರಾಷ್ಟ್ರೀಯ ಬೌದ್ಧ ಸರ್ಕ್ಯೂಟ್ ರಚನೆಯ ಬಗ್ಗೆ ಪ್ರಧಾನ ಮಂತ್ರಿ ಚರ್ಚಿಸಿದರು

ನಾಗರಿಕ ವಿಮಾನಯಾನ ವಲಯದ ಮೂಲಕ, ಜನರು, ಸಂಸ್ಕೃತಿ ಮತ್ತು ಸಮೃದ್ಧಿಯನ್ನು ಸಂಪರ್ಕಿಸುವುದರ ಮೇಲೆ ಗಮನ ಹರಿಸಲಾಗಿದೆ: ಪಿಎಂ

Posted On: 12 SEP 2024 8:49PM by PIB Bengaluru

ದೆಹಲಿ ಘೋಷಣೆಯನ್ನು ಅಂಗೀಕರಿಸುವುದರೊಂದಿಗೆ ನಾಗರಿಕ ವಿಮಾನಯಾನದ 2 ನೇ ಏಷ್ಯಾ ಪೆಸಿಫಿಕ್ ಮಂತ್ರಿ ಸಮ್ಮೇಳನವು ಇಂದು ಮುಕ್ತಾಯಗೊಂಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೆಹಲಿ ಘೋಷಣೆಯನ್ನು ಸರ್ವಾನುಮತದಿಂದ ಅಂಗೀಕರಿಸುವ ಮೂಲಕ ಎರಡು ದಿನಗಳ ಸಮ್ಮೇಳನ ಕೊನೆಗೊಂಡಿತು.

ಈ ಎರಡು ದಿನಗಳ ಸಮ್ಮೇಳನದಲ್ಲಿ 29 ದೇಶಗಳ ಪ್ರತಿನಿಧಿಗಳು, ಮಂತ್ರಿಗಳು ಮತ್ತು ನೀತಿನಿರ್ಧಾರಕರು ಹಾಗೂ ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ICAO) ಸೇರಿದಂತೆ 8 ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ICAO ತನ್ನ 80 ವರ್ಷಗಳ ಕಾರ್ಯಾಚರಣೆಯನ್ನು ಈ ಸಮ್ಮೇಳನದ ಭಾಗವಾಗಿ ಆಚರಿಸಿತು. ಭಾರತ ಸರ್ಕಾರದ ನಾಗರಿಕ ವಿಮಾನಯಾನ ಸಚಿವಾಲಯವು, ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ICAO) ಸಹಯೋಗದಲ್ಲಿ, 2024ರ ಸೆಪ್ಟೆಂಬರ್ 11ರಿಂದ 12ರವರೆಗೆ ನವದೆಹಲಿಯ ಭಾರತ್ ಮಂಟಪದಲ್ಲಿ ಈ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿತು. ಈ ಉನ್ನತ ಮಟ್ಟದ ಸಭೆಯಲ್ಲಿ ಸಚಿವರು, ನಾಗರಿಕ ವಿಮಾನಯಾನ ಪ್ರಾಧಿಕಾರದ ಮುಖ್ಯಸ್ಥರು ಮತ್ತು ಪ್ರಮುಖ ಪಾಲುದಾರರು ಭಾಗವಹಿಸಿದ್ದರು.  ಅವರು ಪ್ರಸ್ತುತ ಸವಾಲುಗಳನ್ನು ಪರಿಹರಿಸಲು ಮತ್ತು ಈ ಪ್ರದೇಶದಲ್ಲಿ ಇನ್ನಷ್ಟು ಅವಕಾಶಗಳನ್ನು ತೆರೆಯಲು ಚರ್ಚಿಸಿದರು.

ಸಮ್ಮೇಳನವು ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿ ವಿಮಾನಯಾನ ಕ್ಷೇತ್ರದ ಭವಿಷ್ಯವನ್ನು ರೂಪಿಸುವ ಬಗ್ಗೆ ಉತ್ಸಾಹಭರಿತ ಚರ್ಚೆಗಳು ಮತ್ತು ಪ್ರಸ್ತುತಿಗಳಿಗೆ ಸಾಕ್ಷಿಯಾಯಿತು. ಈ ಸಮ್ಮೇಳನದ ಪ್ರಮುಖ ಸಾಧನೆಯೆಂದರೆ ದೆಹಲಿ ಘೋಷಣೆಯ ಅಧಿಕೃತ ಅಂಗೀಕಾರ.  ಇದು ಪ್ರಾದೇಶಿಕ ಸಹಕಾರವನ್ನು ಮತ್ತಷ್ಟು ಬಲಪಡಿಸಲು, ಹೊಸ ಸವಾಲುಗಳನ್ನು ಎದುರಿಸಲು ಮತ್ತು ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಸುಸ್ಥಿರ ಬೆಳವಣಿಗೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಸಮಗ್ರ ಚೌಕಟ್ಟಾಗಿದೆ.

ಪ್ರಧಾನಮಂತ್ರಿಯವರು ಏಷ್ಯಾ-ಪೆಸಿಫಿಕ್ ಪ್ರದೇಶದ ನಾಗರಿಕ ವಿಮಾನಯಾನ ಕ್ಷೇತ್ರದ ಹಿರಿಯ ನಾಯಕರೊಂದಿಗೆ ಭಾರತದ ತಂತ್ರಜ್ಞಾನ ಮತ್ತು ಮೂಲಸೌಕರ್ಯ ಅಭಿವೃದ್ಧಿಗಳನ್ನು ಹಂಚಿಕೊಂಡರು. ಪ್ರಾಥಮಿಕವಾಗಿ ಮಹಿಳೆಯರಿಗೆ ಹೆಚ್ಚು ಅವಕಾಶ ಸಿಗುವಂತೆ ಈ ಕ್ಷೇತ್ರವನ್ನು ಮಾಡಬೇಕೆಂದು  ಹೇಳಿದರು. ಅಲ್ಲದೆ ಅವರು, “ಭಾರತದಲ್ಲಿ 15% ಪೈಲಟ್ಗಳು ಮಹಿಳೆಯರಾಗಿದ್ದು, ಇದು ವಿಶ್ವದ ಸರಾಸರಿಯಾದ 5%ಗಿಂತ ಹೆಚ್ಚು. ಈ ಸಂಖ್ಯೆಯನ್ನು ಹೆಚ್ಚಿಸಲು ನಾವು ಸಲಹೆ ನೀಡಿದ್ದೇವೆ,” ಎಂದು ಹೇಳಿದರು.

ಕಳೆದ ಹತ್ತು ವರ್ಷಗಳಲ್ಲಿ ಭಾರತದಲ್ಲಿ ವಾಯುಯಾನ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಗಳ ಬಗ್ಗೆಯೂ ಮಾತನಾಡಿದ ಪ್ರಧಾನಿ, ಭಾರತವು ವಿಮಾನಯಾನವನ್ನು ಕೇವಲ ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ಸೀಮಿತವಾಗಿರಿಸಿತ್ತು, ಆದರೆ ಈಗ ಇದು ಎಲ್ಲರಿಗೂ ಲಭ್ಯವಿರುವಂತಹ ಸ್ಥಿತಿಗೆ ಬದಲಾಗಿದೆ ಎಂದು ಹೇಳಿದರು. ನಾಗರಿಕ ವಿಮಾನಯಾನ ಕ್ಷೇತ್ರದ ಪ್ರಮುಖ ಪಾತ್ರವನ್ನು ಎತ್ತಿ ಹಿಡಿದ ಅವರು, ಈ ಕ್ಷೇತ್ರದ ಮೂಲಕ ಜನರು, ಸಂಸ್ಕೃತಿ ಮತ್ತು ಸಮೃದ್ಧಿಯನ್ನು ಸಂಪರ್ಕಿಸುವತ್ತ ಗಮನ ಹರಿಸಲಾಗಿದೆ ಎಂದು ಹೇಳಿದರು

ಪ್ರಧಾನಮಂತ್ರಿಯವರು, ನಾವು ಏಷ್ಯಾದಾದ್ಯಂತ ಬುದ್ಧ ಭಗವಾನನಿಗೆ ಸಂಬಂಧಿಸಿದ ಎಲ್ಲಾ ಪವಿತ್ರ ಸ್ಥಳಗಳನ್ನು ಸಂಪರ್ಕಿಸಿ 'ಅಂತಾರಾಷ್ಟ್ರೀಯ ಬೌದ್ಧ ಸರ್ಕ್ಯೂಟ್' ಅನ್ನು ರಚಿಸಿದರೆ, ಅದು ನಾಗರಿಕ ವಿಮಾನಯಾನ ಕ್ಷೇತ್ರಕ್ಕೆ, ಪ್ರಯಾಣಿಕರಿಗೆ, ಸಂಬಂಧಿತ ದೇಶಗಳಿಗೆ ಮತ್ತು ಅವುಗಳ ಆರ್ಥಿಕತೆಗಳಿಗೂ ಲಾಭದಾಯಕವಾಗುತ್ತದೆ ಎಂದು ಹೇಳಿದರು. 

ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರು ತಮ್ಮ ಸ್ವಾಗತ ಭಾಷಣದಲ್ಲಿ, "ಮಾನ್ಯ ಪ್ರಧಾನ ಮಂತ್ರಿಯವರ ಸಮಾವೇಶ ಮತ್ತು ಸುಸ್ಥಿರತೆಯ ಬದ್ಧತೆಯು ' ಏಕ್ ಪೆಡ್ ಮಾ ಕೆ ನಾಮ್ ' ಅಭಿಯಾನ ಮತ್ತು ICAO ನ 80 ವರ್ಷಗಳನ್ನು ಸ್ಮರಿಸಲು 80 ಸಾವಿರ ಸಸಿಗಳನ್ನು ನೆಡುವಂತಹ ಯೋಜನೆಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಅವರ  ದೂರದೃಷ್ಟಿಯ ನಾಯಕತ್ವದಲ್ಲಿ, 2047 ರ ವೇಳೆಗೆ 350-400 ವಿಮಾನ ನಿಲ್ದಾಣಗಳನ್ನು ಹೊಂದುವ ಗುರಿಯನ್ನು ಭಾರತ ಸಾಧಿಸಲಿದೆ. ಇದರಿಂದಾಗಿ ಭಾರತವು ಜಾಗತಿಕ ವಿಮಾನಯಾನ ಕ್ಷೇತ್ರದಲ್ಲಿ ಪ್ರಮುಖ ಆಟಗಾರನಾಗಲಿದೆ.ಇಂದು, ಭಾರತವು ಸಹಯೋಗದ ಪ್ರಯತ್ನಗಳನ್ನು ಕೇವಲ ಬೆಂಬಲಿಸುವುದಷ್ಟೇ ಅಲ್ಲದೆ ನೇತೃತ್ವವನ್ನೂ ವಹಿಸುತ್ತಿದೆ. ಇದು COVID-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಸ್ಪಷ್ಟವಾಯಿತು. ಏಷ್ಯಾ ಮತ್ತು ಪೆಸಿಫಿಕ್ ದೇಶಗಳಿಗೆ ಲಸಿಕೆಗಳನ್ನು ತಲುಪಿಸುವ ಮೂಲಕ, ಭಾರತವು 'ಒಂದು ಜಗತ್ತು, ಒಂದು ಗ್ರಹ, ಒಂದು ಭವಿಷ್ಯ, ಒಂದು ಕುಟುಂಬ' ಎಂಬ ತನ್ನ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿದೆ" ಎಂದು ಹೇಳಿದರು.

ಐಸಿಎಒ (ICAO) ಅಧ್ಯಕ್ಷ ಶ್ರೀ ಸಾಲ್ವಟೋರ್ ಅವರು ತಮ್ಮ ಭಾಷಣದಲ್ಲಿ, "ನಮ್ಮ ಪ್ರಾಥಮಿಕ ಗಮನವು ಉನ್ನತ ಮಟ್ಟದ ಸುರಕ್ಷತೆ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳುವುದು. ನಾವು ವಾಯುಯಾನದ ಈ ಮೂಲಭೂತ ಅಂಶಗಳನ್ನು ವರ್ಧಿಸುವತ್ತ ಗಮನಹರಿಸುವುದನ್ನು ಮುಂದುವರಿಸಬೇಕು. ಅತ್ಯಂತ ಸಕಾರಾತ್ಮಕ ಅಂಕಿಅಂಶಗಳನ್ನು ಪರಿಗಣಿಸುವಾಗ ನಾವು ಸಂತೃಪ್ತರಾಗಲು ಅವಕಾಶ ನೀಡಬಾರದು" ಎಂದು ಹೇಳಿದರು

ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಶೇ. ಮುರಳೀಧರ್ ಮೊಹೋಲ್ ಅವರು ಸಮ್ಮೇಳನದಲ್ಲಿ ಭಾಗವಹಿಸಿ, "ವಿಮಾನಯಾನ ಸುರಕ್ಷತೆಯಿಂದ ವಾಯು ನಿರ್ದೇಶನದವರೆಗೆ ಮತ್ತು ಭದ್ರತೆಯಿಂದ ಹಸಿರು ವಿಮಾನಯಾನದವರೆಗಿನ ವಿಮಾನಯಾನದ ಪ್ರಮುಖ ಅಂಶಗಳ ಕುರಿತು ಚರ್ಚೆಗಳಲ್ಲಿ ಭಾಗವಹಿಸುವುದು ಸಂತೋಷ ತಂದಿದೆ " ಎಂದು ಹೇಳಿದರು.

ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಶ್ರೀ ವುಮ್ಲುನ್ ಮಾಂಗ್ ವುಲ್ನಮ್ಅವರು, ಉನ್ನತ ನಾಗರಿಕ ವಿಮಾನಯಾನ ನಾಯಕರಿಂದ ಹಿಡಿದು ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ಸ್ಟಾರ್ಟಪ್ಗಳವರೆಗೆ ಎಲ್ಲಾ ಪಾಲುದಾರರೊಂದಿಗೆ ಸಹಯೋಗದ ವಿಧಾನವು ಮಾತ್ರ ದೃಢವಾದ ಭವಿಷ್ಯದ ಮಾರ್ಗವನ್ನು ಸ್ಥಾಪಿಸಬಹುದು "ಎಂದು  ಹೇಳಿದರು.

ಸಮ್ಮೇಳನದ ಎರಡನೇ ದಿನವು ಹಲವಾರು ಪ್ರಮುಖ ಅಂಶಗಳನ್ನು ಒಳಗೊಂಡಿತ್ತು. ಇದರಲ್ಲಿ ಪೆಸಿಫಿಕ್ ಸಣ್ಣ ದ್ವೀಪ ರಾಷ್ಟ್ರಗಳ ಸಂಪರ್ಕ ಕಚೇರಿಯ ಸ್ಥಾಪನೆಯ ಕುರಿತು ICAO ನೀಡಿದ ಪ್ರಸ್ತುತಿ ಸೇರಿದೆ. ಈ ಕಚೇರಿಯು ವಿಮಾನಯಾನ ಸವಾಲುಗಳನ್ನು ಎದುರಿಸುವಲ್ಲಿ ಚಿಕ್ಕ ರಾಷ್ಟ್ರಗಳಿಗೆ ಬೆಂಬಲ ನೀಡುವ ಗುರಿಯನ್ನು ಹೊಂದಿದೆ. ನಾಗರಿಕ ವಿಮಾನಯಾನದ ಕುರಿತ ಏಷ್ಯಾ ಪೆಸಿಫಿಕ್ ಸಚಿವರ ಘೋಷಣೆಯ (ದೆಹಲಿ ಘೋಷಣೆ) ಕರಡನ್ನು ಮಂಡಿಸಲಾಯಿತು ಮತ್ತು ಚರ್ಚಿಸಲಾಯಿತು. ನಂತರ ಸಚಿವರ ಸಮಾಲೋಚನೆಯ ಬಳಿಕ ಅದನ್ನು ಅಧಿಕೃತವಾಗಿ ಅಂಗೀಕರಿಸಲಾಯಿತು. ಜೊತೆಗೆ, ICAO ಮತ್ತು ಶಿಕಾಗೋ ಒಪ್ಪಂದದ 80ನೇ ವಾರ್ಷಿಕೋತ್ಸವವನ್ನು ಆಚರಿಸಲು ಒಂದು ಸಮಾರಂಭವನ್ನು ಏರ್ಪಡಿಸಲಾಗಿತ್ತು. ಇದು ಕಳೆದ ಎಂಟು ದಶಕಗಳಲ್ಲಿ ಅಂತರರಾಷ್ಟ್ರೀಯ ವಿಮಾನಯಾನ ಮಾನದಂಡಗಳನ್ನು ರೂಪಿಸುವಲ್ಲಿ ಸಂಸ್ಥೆಯ ಪಾತ್ರವನ್ನು ಮತ್ತಷ್ಟು ಎತ್ತಿ ತೋರಿಸಿತು.

 

*****



(Release ID: 2054433) Visitor Counter : 13


Read this release in: English , Urdu , Hindi , Tamil , Telugu