ಉಪರಾಷ್ಟ್ರಪತಿಗಳ ಕಾರ್ಯಾಲಯ
ಸಾಂವಿಧಾನಿಕ ಸ್ಥಾನದಲ್ಲಿರುವವರು ರಾಷ್ಟ್ರದ ಶತ್ರುಗಳ ಕೈ ಜೋಡಿಸುವುದಕ್ಕಿಂತ ಖಂಡನೀಯ, ಹೇಯ ಮತ್ತು ಅಸಹನೀಯವಾದುದು ಮತ್ತಾವುದೂ ಇಲ್ಲ ಎಂದು ಉಪರಾಷ್ಟ್ರಪತಿಗಳು ಒತ್ತಿ ಹೇಳಿದರು
ಉನ್ನತ ಸ್ಥಾನದಲ್ಲಿರುವ ಕೆಲವರಿಗೆ ರಾಷ್ಟ್ರೀಯ ಹಿತಾಸಕ್ತಿಯ ಕಲ್ಪನೆಯೇ ಇಲ್ಲದಿರುವುದು ಬಹಳ ನೋವಿನ ಸಂಗತಿ
ನಾವು ನಿಜವಾದ ಭಾರತೀಯರಾಗಿದ್ದರೆ, ನಾವು ಎಂದಿಗೂ ರಾಷ್ಟ್ರದ ಶತ್ರುಗಳ ಪರವಾಗಿ ನಿಲ್ಲುವುದಿಲ್ಲ ಎಂದು ಉಪರಾಷ್ಟ್ರಪತಿಗಳು ಹೇಳಿದರು.
ರಾಷ್ಟ್ರೀಯತೆಯು ಕುಟುಂಬ, ಸ್ವಹಿತಾಸಕ್ತಿ ಮತ್ತು ನಮ್ಮ ರಾಜಕೀಯಕ್ಕಿಂತ ಸರ್ವೋಚ್ಚವಾಗಿರಬೇಕು ಎಂದು ಉಪಾಧ್ಯಕ್ಷರು ಒತ್ತಿ ಹೇಳಿದರು.
ಕೆಲವರು ದೇಶದ ಹೊರಗಿನಿಂದ ನಮ್ಮ ಭ್ರಾತೃತ್ವವನ್ನು ನಾಶ ಮಾಡಲು ಬಯಸುತ್ತಿದ್ದಾರೆ- ಉಪರಾಷ್ಟ್ರಪತಿಗಳು
ನವದೆಹಲಿಯ ಸಂಸತ್ ಭವನದಲ್ಲಿ ಇಂದು ಉಪರಾಷ್ಟ್ರಪತಿಗಳು ರಾಜ್ಯಸಭಾ ಇಂಟರ್ನ್‌ಶಿಪ್ ಕಾರ್ಯಕ್ರಮದ ಮೂರನೇ ಬ್ಯಾಚ್‌ನ ಅಭ್ಯರ್ಥಿಗಳೊಂದಿಗೆ ಸಂವಾದ ನಡೆಸಿದರು
Posted On:
12 SEP 2024 6:57PM by PIB Bengaluru
ಇಂದು ಪ್ರಮುಖ ಸ್ಥಾನದಲ್ಲಿರುವ ಕೆಲವರಿಗೆ ಭಾರತದ ಸಂವಿಧಾನದ ಬಗ್ಗೆ ನಿರ್ಲಕ್ಷ್ಯವಿದೆ ಎಂದು ಉಪರಾಷ್ಟ್ರಪತಿಗಳಾದ ಶ್ರೀ ಜಗದೀಪ್ ಧನಕರ್ ಅವರು ನೋವಿನಿಂದ ನುಡಿದರು. “ಅವರಿಗೆ ಭಾರತದ ಮತ್ತು ನಮ್ಮ ರಾಷ್ಟ್ರೀಯ ಹಿತಾಸಕ್ತಿಯ ಕಲ್ಪನೆಯೇ ಇಲ್ಲ. ಈ ದೇಶವು 5,000 ವರ್ಷಗಳ ನಾಗರಿಕತೆಯ ದೀರ್ಘ ಇತಿಹಾಸ ಹೊಂದಿದೆ ಎಂದು ಅವರಿಗೆ ಇನ್ನೂ ಅರ್ಥವಾಗುತ್ತಿಲ್ಲ" ಎಂದು ಅವರು ವಿಷಾದಿಸಿದರು.
ದೇಶದ ಹೊರಗೆ ಹೋದಾಗ ಪ್ರತಿಯೊಬ್ಬ ಭಾರತೀಯನೂ ಈ ರಾಷ್ಟ್ರದ ರಾಯಭಾರಿಯಾಗಬೇಕು ಎಂದು ಹೇಳಿದ ಉಪರಾಷ್ಟ್ರಪತಿಗಳು, “ಸಾಂವಿಧಾನಿಕ ಸ್ಥಾನವನ್ನು ಹೊಂದಿರುವವರು ಅದರ ವಿರುದ್ಧವಾಗಿ ವರ್ತಿಸುತ್ತಿರುವುದು ಎಷ್ಟೊಂದು ನೋವಿನ ಸಂಗತಿ! ನೀವು ರಾಷ್ಟ್ರದ ಶತ್ರುಗಳ ಭಾಗವಾಗುವುದಕ್ಕಿಂತ ಹೆಚ್ಚು ಖಂಡನೀಯ, ಹೇಯ ಮತ್ತು ಅಸಹನೀಯವಾದುದು ಮತ್ತೊಂದಿಲ್ಲ, ಎಂದು ಅವರು ನೋವಿನಿಂದ ನುಡಿದರು.
ರಾಜ್ಯಸಭಾ ಇಂಟರ್ನ್‌ಶಿಪ್ ಕಾರ್ಯಕ್ರಮದ ಮೂರನೇ ಬ್ಯಾಚ್‌ನಲ್ಲಿ ಭಾಗವಹಿಸಿದವರನ್ನು ಉದ್ದೇಶಿಸಿ ಸಂಸತ್ ಭವನದಲ್ಲಿ ಇಂದು ಮಾತನಾಡಿದ ಉಪರಾಷ್ಟ್ರಪತಿಗಳು, “ಸಂವಿಧಾನ ಸಭೆಯ ಸದಸ್ಯರ ಮೂರು ವರ್ಷಗಳ ಕಠಿಣ ಶ್ರಮದ ಫಲವಾಗಿ ನಮಗೆ ಸಂವಿಧಾನ ದೊರಕಿದೆ. ಸಂವಿಧಾನ ರೂಪಿಸುವ ಪ್ರಕ್ರಿಯೆಯಲ್ಲಿ ಅವರು 18 ಕ್ಕೂ ಹೆಚ್ಚು ಅಧಿವೇಶನಗಳನ್ನು ಯಾವುದೇ ಅಡ್ಡಿಯಿಲ್ಲದೆ, ಗೊಂದಲವಿಲ್ಲದೆ, ಘೋಷಣೆಗಳಿಲ್ಲದೆ ಪೂರ್ಣಗೊಳಿಸಿದ್ದಾರೆ ಎಂಬುದನ್ನು ನಾವ್ಯಾರೂ ಮರೆಯುವಂತಿಲ್ಲ," ಎಂದು ಅವರು ಹೇಳಿದರು.
ಸಂವಿಧಾನವು ಚರ್ಚೆ, ಸಂವಾದ, ಮತ್ತು ಸಮಾಲೋಚನೆಯ ಕಾರ್ಯವಿಧಾನದ ಭಾಗವಾಗಿ ಮೂಡಿ ಬಂದಿದೆ ಎಂದು ಅವರು ಒತ್ತಿ ಹೇಳಿದರು. "ಸಂವಿಧಾನ ಕೃರ್ತಗಳ ಮುಂದಿದ್ದ ಸವಾಲುಗಳು ಹಿಮಾಲಯದೆತ್ತರಕಿದ್ದರೂ, ಸಮಸ್ಯೆಗಳು ವಿಭಜನೆಕಾರಿಯಾಗಿದ್ದರೂ ಅವರು ಅದ್ಯಾವುದನ್ನೂ ಲೆಕ್ಕಿಸದೆ ಕೆಲಸ ಮಾಡಿದರು. ಆದರೆ ಈಗ ಕೆಲವರು ನಮ್ಮ ರಾಷ್ಟ್ರವನ್ನು ವಿಭಜಿಸಲು ಬಯಸುತ್ತಿದ್ದಾರೆ. ಇದು ಅತಿರೇಕದ ಅಜ್ಞಾನ!” ಎಂದು ಅವರು ಹೇಳಿದರು.
ಭಾರತೀಯ ಸಂವಿಧಾನದ ಪೀಠಿಕೆಯ ಮಹತ್ವವನ್ನು ಎತ್ತಿ ತೋರಿಸುತ್ತಾ, ಉಪರಾಷ್ಟ್ರಪತಿಯವರು, “ಭಾರತದ ಜನರು ನಮ್ಮ ಸಂವಿಧಾನದ ಚಿಲುಮೆಗಳು. ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ತತ್ವಗಳನ್ನು ಎತ್ತಿ ಹಿಡಿಯಲು ನಾವು ಈ ಸಂವಿಧಾನವನ್ನು ರೂಪಿಸಿಕೊಂಡಿದ್ದೇವೆ. ಹೀಗಿರುವಾಗ ಯಾರೋ ಒಬ್ಬರು ಅಸ್ತಿತ್ವದಲ್ಲಿಲ್ಲದ ಪರಿಸ್ಥಿತಿಯನ್ನು ಊಹಿಸಿಕೊಂಡು ಈ ದೇಶದ ಹೊರಗೆ ನಿಂತುಕೊಂಡು ನಮ್ಮ ಭ್ರಾತೃತ್ವವನ್ನು ತುಂಡರಿಸಲು ಬಯಸುತ್ತಾರೆ ಎಂದರೆ ನಮಗೆ ಏನನ್ನಿಸಬೇಡ ಎಂಬುದನ್ನು ಸುಮ್ಮನೆ ಊಹಿಸಿಕೊಳ್ಳಿ.
ಮೀಸಲಾತಿ ಕುರಿತು ಮಾತನಾಡಿದ ಉಪರಾಷ್ಟ್ರಪತಿಗಳು, ಮೀಸಲಾತಿ ನಮ್ಮ ಸಂವಿಧಾನದಲ್ಲಿ ದೃಢವಾದ ಕ್ರಿಯೆಯ ಮೂಲಕ ಅಡಕವಾಗಿದೆ. ಇದು ನಮ್ಮ ಸಂವಿಧಾನದ ರೋಮಾಂಚಕ ಅಂಶವಾಗಿದೆ. ಕೆಲವರು ಹೊರಗಿನ ದೇಶಕ್ಕೆ ಹೋಗಿ ಇದರ ಮಹತ್ವವನ್ನು ಕಡಿಮೆ ಮಾಡುತ್ತಿದ್ದಾರೆ.
ಇಂತಹ ವಿಭಜನೆಯ ಪ್ರಯತ್ನಗಳನ್ನು ತಟಸ್ಥಗೊಳಿಸಲು ದೇಶದ ಯುವಕರು ಮತ್ತು ಸಾಮಾನ್ಯ ನಾಗರಿಕರು ಒಟ್ಟಾಗಿ ಕೆಲಸ ಮಾಡುವಂತೆ ಮನವಿ ಮಾಡಿದ ಉಪರಾಷ್ಟ್ರಪತಿಗಳು, “ದೇಶದಲ್ಲಿ ಅಶಾಂತಿಯನ್ನು ಸೃಷ್ಟಿಸಲು ಮತ್ತು ವಿಭಜನೆಯನ್ನು ತರಲು ಬಯಸುವ ಭಾರತದ ಶತ್ರುಗಳಿಂದ ಪ್ರೇರೇಪಿಸಲ್ಪಟ್ಟ ಕೆಲವು ಶಕ್ತಿಗಳನ್ನು ದೇಶದ ಯುವ ಮನಸ್ಸುಗಳು ಮತ್ತು ನಾಗರಿಕರು ಒಟ್ಟಾಗಿ ತಟಸ್ಥಗೊಳಿಸಬೇಕಾದ ಅವಶ್ಯಕತೆ ಇದೆ ಎಂದು ಅವರು ಹೇಳಿದರು.
“ನಾವು ನಿಜವಾದ ಭಾರತೀಯರಾಗಿದ್ದರೆ ಮತ್ತು ನಮಗೆ ನಮ್ಮ ರಾಷ್ಟ್ರದ ಬಗ್ಗೆ ನಂಬಿಕೆ ಇದ್ದರೆ, ನಾವು ಎಂದಿಗೂ ರಾಷ್ಟ್ರದ ಶತ್ರುಗಳ ಪರವಾಗಿ ನಿಲ್ಲುವುದಿಲ್ಲ. ನಾವೆಲ್ಲರೂ ರಾಷ್ಟ್ರದ ಬೆನ್ನೆಲುಬಾಗಿ ನಿಲ್ಲುತ್ತೇವೆ," ಎಂದು ಅವರು ಒತ್ತಿ ಹೇಳಿದರು.
ರಾಷ್ಟ್ರದ ಸ್ವಾತಂತ್ರ್ಯವನ್ನು ಭದ್ರಪಡಿಸುವಲ್ಲಿ ಮತ್ತು ರಕ್ಷಿಸುವಲ್ಲಿ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದ ಕುರಿತು ಒತ್ತಿ ಹೇಳಿದ ಉಪರಾಷ್ಟ್ರಪತಿಗಳು , “ನಮ್ಮ ಸಹೋದರ, ಸಹೋದರಿಯರು ಇದಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಹಲವಾರು ತಾಯಂದಿರು ತಮ್ಮ ಮಕ್ಕಳನ್ನು ಕಳೆದುಕೊಂಡಿದ್ದಾರೆ, ಹೆಂಡತಿಯರು ತಮ್ಮ ಗಂಡರನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ನಾವು ನಮ್ಮ ರಾಷ್ಟ್ರೀಯತೆಯನ್ನು ಅಪಹಾಸ್ಯ ಮಾಡುವಂತಿಲ್ಲ”.
ಇಂತಹ ನಿರ್ಣಾಯಕ ವಿಷಯಗಳಲ್ಲಿ ನಾಗರಿಕರು ಮೌನವಾಗಿರಾದಂತೆ ಎಚ್ಚರಿಸಿದ ಶ್ರೀ ಧನಕರ್ ಅವರು, “ನಾವು ಮೌನವಾಗಿರುವ ಮೂಲಕ ಇಂತಹ ದುಷ್ಕೃತ್ಯಗಳ ಭಾಗವಾಗುತ್ತಿದ್ದೇವೆ. ನಿಮ್ಮಲ್ಲಿ ಪ್ರತಿಯೊಬ್ಬರೂ ಮಾತನಾಡಬೇಕು. ರಾಷ್ಟ್ರೀಯತೆಯ ಬಗೆಗಿನ ನಮ್ಮ ಸಮರ್ಪಣೆಯನ್ನು ನಾವು ಯಾವುದೇ ರೀತಿಯಲ್ಲಿ ಕುಗ್ಗಿಸಲು ಬಿಡಬಾರದು. ನಮ್ಮ ಕುಟುಂಬ, ಸ್ವಹಿತಾಸಕ್ತಿ ಮತ್ತು ರಾಜಕೀಯಕ್ಕಿಂತ ನಮಗೆ ರಾಷ್ಟ್ರೀಯತೆ ಸರ್ವೋಚ್ಚವೆಂಬ ಸಂಕಲ್ಪ ನಮ್ಮದಾಗಬೇಕು, ”ಎಂದು ಅವರು ಹೇಳಿದರು.
''ರಾಜಕೀಯ ಪಕ್ಷಗಳು ಕಾನೂನು ಮತ್ತು ಸಂವಿಧಾನದ ವ್ಯಾಪ್ತಿಯಲ್ಲಿ ರಾಜಕೀಯ ಮಾಡಬಹುದು. ಅವರು ಅದನ್ನು ಹೇಗೆ ಮಾಡುತ್ತಾರೆ ಎಂಬುದು ನನಗೆ ಸಂಬಂಧಿಸಿದ ವಿಷಯವಲ್ಲ. ಅವರು ಸರ್ಕಾರವನ್ನು ಟೀಕಿಸಬಹುದು. ಆದರೆ ಅವರು ಶತ್ರುಗಳ ಸಹಯೋಗದೊಂದಿಗೆ ರಾಷ್ಟ್ರವನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ," ಎಂದು ಅವರು ಹೇಳಿದರು.
ರಾಜ್ಯಸಭಾ ಇಂಟರ್ನ್‌ಶಿಪ್ ಕಾರ್ಯಕ್ರಮದ ಮೂಲ ಉದ್ದೇಶವು ಭಾರತೀಯ ಸಂಸತ್ತಿನೊಂದಿಗೆ ನಿಮ್ಮನ್ನು ಸಂಪರ್ಕಿಸುವ ಜ್ವಾಲೆಯನ್ನು ಹೊತ್ತಿಸುವುದು, ಆ ಮೂಲಕ ನಿಮ್ಮಲ್ಲಿ ರಾಷ್ಟ್ರೀಯತೆ ಬೆಳೆಸುವುದು ಎಂದು ಶ್ರೀ ಧನಕರ್ ಹೇಳಿದರು. “ದೇಶ ಎಲ್ಲಕ್ಕಿಂತ ಮೊದಲು ಎಂಬುದನ್ನು ಪ್ರತಿಪಾದಿಸುವ ಯೋಧರು ನೀವು. ನಿಮ್ಮ ಸ್ವಹಿತಾಸಕ್ತಿಗಿಂತ ದೇಶದ ಹಿತಾಸಕ್ತಿಗೆ ಪ್ರಾಮುಖ್ಯ ಕೊಡುವವರು ನೀವು, ” ಎಂದು ಅವರು ಹೇಳಿದರು.
ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಶ್ರೀ ಪಿ.ಸಿ. ಮೋದಿ, ಕಾರ್ಯದರ್ಶಿ ಶ್ರೀ ರಜಿತ್ ಪುನ್ಹಾನಿ, ಹೆಚ್ಚುವರಿ ಕಾರ್ಯದರ್ಶಿ ಡಾ.ವಂದನಾ ಕುಮಾರ್ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
*****
(Release ID: 2054431)
Visitor Counter : 72