ಉಕ್ಕು ಸಚಿವಾಲಯ
ಉಕ್ಕು ಸಚಿವಾಲಯದಿಂದ ಹೊಸದಿಲ್ಲಿಯಲ್ಲಿ 'ಗ್ರೀನಿಂಗ್ ಸ್ಟೀಲ್: ಪಾಥ್ ವೇ ಟು ಸಸ್ಟೈನಬಿಲಿಟಿ' ಕಾರ್ಯಕ್ರಮ ಆಯೋಜನೆ
"ಭಾರತದಲ್ಲಿ ಉಕ್ಕು ವಲಯದ ಹಸಿರೀಕರಣ: ಮಾರ್ಗಸೂಚಿ ಮತ್ತು ಕ್ರಿಯಾ ಯೋಜನೆ" ಕುರಿತ ವರದಿ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆಗಳ ಸಚಿವರಾದ ಶ್ರೀ ಎಚ್.ಡಿ. ಕುಮಾರಸ್ವಾಮಿ ಅವರಿಂದ ಬಿಡುಗಡೆ
Posted On:
10 SEP 2024 5:57PM by PIB Bengaluru
ಉಕ್ಕು ಸಚಿವಾಲಯವು ಇಂದು ಹೊಸದಿಲ್ಲಿಯ ಇಂಡಿಯಾ ಇಂಟರ್ನ್ಯಾಷನಲ್ ಸೆಂಟರ್ನ ಸಿ.ಡಿ.ದೇಶಮುಖ್ ಸಭಾಂಗಣದಲ್ಲಿ “ ಉಕ್ಕಿನ ಹಸಿರೀಕರಣ: ಸುಸ್ಥಿರತೆಯ ಹಾದಿ' ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ವಿವಿಧ ಸಚಿವಾಲಯಗಳು, ಸಿಪಿಎಸ್ಇಗಳು, ಚಿಂತಕರು, ಶೈಕ್ಷಣಿಕ ತಜ್ಞರು, ಸಂಸ್ಥೆಗಳು ಮತ್ತು ಉಕ್ಕು ಉದ್ಯಮದ ಪ್ರಮುಖ ಭಾಗೀದಾರರು ಭಾಗವಹಿಸಿದ್ದರು. ಮುಖ್ಯ ಅತಿಥಿಗಳಾದ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆಗಳ ಸಚಿವರಾದ ಶ್ರೀ ಎಚ್.ಡಿ. ಕುಮಾರಸ್ವಾಮಿ ಅವರು "ಭಾರತದಲ್ಲಿ ಉಕ್ಕು ವಲಯದ ಹಸಿರೀಕರಣ: ಮಾರ್ಗಸೂಚಿ ಮತ್ತು ಕ್ರಿಯಾ ಯೋಜನೆ" ಎಂಬ ವರದಿಯನ್ನು ಬಿಡುಗಡೆ ಮಾಡಿದರು.
ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆಗಳ ಸಚಿವರು ಬಿಡುಗಡೆ ಮಾಡಿದ "ಭಾರತದಲ್ಲಿ ಉಕ್ಕು ವಲಯದ ಹಸಿರೀಕರಣ : ಮಾರ್ಗಸೂಚಿ ಮತ್ತು ಕ್ರಿಯಾ ಯೋಜನೆ" ವರದಿಯು ಈ ಕಾರ್ಯಕ್ರಮದ ಪ್ರಮುಖ ಅಂಶವಾಗಿತ್ತು. ಉಕ್ಕು ಸಚಿವಾಲಯವು ರಚಿಸಿದ 14 ಕಾರ್ಯಪಡೆಗಳ ಶಿಫಾರಸುಗಳ ಆಧಾರದ ಮೇಲೆ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಇದು ಭಾರತೀಯ ಉಕ್ಕು ವಲಯವನ್ನು ಡಿಕಾರ್ಬನೈಸ್ ಮಾಡುವ ಸಮಗ್ರ ಕಾರ್ಯತಂತ್ರವನ್ನು ಒಳಗೊಂಡಿದೆ.
ಈ ವರದಿಯು ಭಾರತದ ಉಕ್ಕು ವಲಯದಲ್ಲಿ ಇಂಗಾಲದ ಹೊರಸೂಸುವಿಕೆಯ ವಿವಿಧ ಅಂಶಗಳನ್ನು ಪ್ರಸ್ತಾಪಿಸಿದೆ. ಇದು ಈ ಕೆಳಗಿನ ಅಂಶಗಳ ಮೇಲೆ ಕೇಂದ್ರೀಕರಿಸಿದೆ:
• ಪ್ರಸ್ತುತ ಸ್ಥಿತಿ ಮತ್ತು ಸವಾಲುಗಳು: ಭಾರತದಲ್ಲಿ ಉಕ್ಕು ಕ್ಷೇತ್ರದ ಅವಲೋಕನ, ಅದರ ಇಂಗಾಲದ ಹೆಜ್ಜೆಗುರುತು ಮತ್ತು ಡಿಕಾರ್ಬನೈಸೇಶನ್ ನಲ್ಲಿ ಎದುರಿಸುತ್ತಿರುವ ಸವಾಲುಗಳು.
• ಉದ್ಯಮದೊಳಗೆ ಡಿಕಾರ್ಬನೈಸೇಶನ್ ನ ಪ್ರಮುಖ ಉಪಕ್ರಮಗಳು: ಇಂಧನ ದಕ್ಷತೆ, ನವೀಕರಿಸಬಹುದಾದ ಇಂಧನ, ವಸ್ತು ದಕ್ಷತೆ, ಪ್ರಕ್ರಿಯೆ ಪರಿವರ್ತನೆ, ಸಿಸಿಯುಎಸ್, ಹಸಿರು ಹೈಡ್ರೋಜನ್ ಮತ್ತು ಬಯೋಚಾರ್ ಬಳಕೆ.
• ತಾಂತ್ರಿಕ ಆವಿಷ್ಕಾರಗಳು: ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುವ ತಂತ್ರಜ್ಞಾನ ಮತ್ತು ಪದ್ಧತಿಗಳಲ್ಲಿ/ಅಭ್ಯಾಸಗಳಲ್ಲಿ ಇತ್ತೀಚಿನ ಪ್ರಗತಿಗಳು.
• ನೀತಿ ಚೌಕಟ್ಟುಗಳು: ಅಸ್ತಿತ್ವದಲ್ಲಿರುವ ನೀತಿಗಳ ಪರಿಶೀಲನೆ ಮತ್ತು ಡಿಕಾರ್ಬನೈಸೇಶನ್ ಬೆಂಬಲಿಸಲು ನೀತಿ ವರ್ಧನೆಗಳ ಬಗ್ಗೆ ಚರ್ಚೆ.
• ಭವಿಷ್ಯದ ದೃಷ್ಟಿಕೋನ: ಸುಸ್ಥಿರ ಉಕ್ಕು ಉದ್ಯಮದ ಚಿಂತನೆ/ದೃಷ್ಟಿಕೋನ ಮತ್ತು ಈ ಗುರಿಗಳನ್ನು ಸಾಧಿಸುವಲ್ಲಿ ವಿವಿಧ ಭಾಗೀದಾರರ/ ಮಧ್ಯಸ್ಥಗಾರರ ಪಾತ್ರ.
• ಮಾರ್ಗಸೂಚಿ ಮತ್ತು ಕ್ರಿಯಾ ಯೋಜನೆ: ಸರ್ಕಾರ ಮತ್ತು ಉದ್ಯಮದ ಪ್ರಮುಖ ಪಾಲುದಾರರಿಂದ ಅಗತ್ಯವಿರುವ ಕಾರ್ಯತಂತ್ರಗಳು ಮತ್ತು ಮಧ್ಯಪ್ರವೇಶಗಳು .
ಉಕ್ಕು ಸಚಿವಾಲಯವು ತನ್ನ ರಾಷ್ಟ್ರೀಯವಾಗಿ ನಿರ್ಧರಿಸಿದ ಬದ್ಧತೆಗಳಲ್ಲಿ (ಎನ್ ಡಿ ಸಿ) ವಿವರಿಸಿದಂತೆ ನಿವ್ವಳ ಶೂನ್ಯ ಹೊರಸೂಸುವಿಕೆಯನ್ನು ಸಾಧಿಸುವ ಭಾರತದ ಗುರಿಗೆ ಅನುಗುಣವಾಗಿ, ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ವರದಿಯಲ್ಲಿ ರೂಪಿಸಲಾದ ಕಾರ್ಯತಂತ್ರಗಳು ಮತ್ತು ಕ್ರಿಯಾ ಯೋಜನೆಯನ್ನು ಅಳವಡಿಸಿಕೊಳ್ಳಲು ಬದ್ಧವಾಗಿದೆ. ಈ ವರದಿಯು ಕಡಿಮೆ ಇಂಗಾಲದ ಭವಿಷ್ಯದತ್ತ ಭಾರತೀಯ ಉಕ್ಕು ಉದ್ಯಮದ ಪರಿವರ್ತನೆಯನ್ನು ರೂಪಿಸುವಲ್ಲಿ ಮತ್ತು ಮಾರ್ಗದರ್ಶನ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಉಕ್ಕು ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ವಿನೋದ್ ಕೆ. ತ್ರಿಪಾಠಿ ಅವರ ಪರಿಚಯಾತ್ಮಕ ಭಾಷಣದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು, ನಂತರ ಉಕ್ಕು ಸಚಿವಾಲಯದ ನಿರ್ದೇಶಕಿ ಶ್ರೀಮತಿ ನೇಹಾ ವರ್ಮಾ ಅವರು ವರದಿಯ ಪ್ರಸ್ತುತಿಯನ್ನು ನೀಡಿದರು.
ಉಕ್ಕು ಸಚಿವಾಲಯದ ಮಾಜಿ ಕಾರ್ಯದರ್ಶಿ ಶ್ರೀ ಸಂಜಯ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ "ನಾಯಕತ್ವ ಮತ್ತು ನಾವೀನ್ಯತೆ: ಹಸಿರು ಉಕ್ಕಿನ ಪರಿವರ್ತನೆಯ ಚಾಲಕ ಶಕ್ತಿ” ಎಂಬ ತಾಂತ್ರಿಕ ಅಧಿವೇಶನವು ನಡೆಯಿತು. ಈ ಅಧಿವೇಶನವು ಸುಸ್ಥಿರ ಉಕ್ಕು ಉತ್ಪಾದನೆಯನ್ನು ಕೈಗೊಳ್ಳುವಲ್ಲಿ ದೂರದೃಷ್ಟಿಯ ನಾಯಕತ್ವ ಮತ್ತು ನಾವೀನ್ಯತೆಯ ನಿರ್ಣಾಯಕ ಪಾತ್ರವನ್ನು ಅನ್ವೇಷಿಸಿತು. ನೀತಿ ಆಯೋಗದ ಯೋಜನಾ ನಿರ್ದೇಶಕ ಡಾ.ಅಂಶು ಭಾರದ್ವಾಜ್, ಎನ್ಜಿಎಚ್ಎಂನ ಮಿಷನ್ ನಿರ್ದೇಶಕ ಅಭಯ್ ಬಕ್ರೆ, ಎಸ್ಎಐಎಲ್ನ (ಸೈಲ್) ತಾಂತ್ರಿಕ ನಿರ್ದೇಶಕ ಅರವಿಂದ್ ಕೆ.ಸಿಂಗ್, ಟಾಟಾ ಸ್ಟೀಲಿನ ಸಿಎಸ್ಒ ಡಾ.ಸೌರಭ್ ಕುಂಡು, ಜೆಎಸ್ಡಬ್ಲ್ಯೂನ ಸಿಎಸ್ಒ ಪ್ರಬೋಧ ತಂಡದಲ್ಲಿದ್ದರು. ಗೋಷ್ಠಿಯನ್ನು ಸಿಇಇಡಬ್ಲ್ಯೂ ನಿರ್ದೇಶಕ ಶ್ರೀ ಧ್ರುವ ಪುರ್ಕಾಯಸ್ಥ ನಿರ್ವಹಿಸಿದರು.
ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಸವಾಲುಗಳ ಬಗ್ಗೆ ಉಕ್ಕು ಕಾರ್ಯದರ್ಶಿ ಚರ್ಚಿಸಿದರು ಮತ್ತು ಉಕ್ಕು ವಲಯದಲ್ಲಿ ಸುಸ್ಥಿರ, ಕಡಿಮೆ ಇಂಗಾಲದ ಅಭಿವೃದ್ಧಿಯ ಅಗತ್ಯವು ಇನ್ನು ಮುಂದೆ ಆಯ್ಕೆಯಲ್ಲ ಬದಲು ಅಗತ್ಯವಾಗಿದೆ ಎಂದು ಒತ್ತಿ ಹೇಳಿದರು. ಇದು ಪರಿಸರಕ್ಕೆ ಮಾತ್ರವಲ್ಲ, ನಮ್ಮ ಉದ್ಯಮ ಮತ್ತು ನಮ್ಮ ರಾಷ್ಟ್ರದ ಭವಿಷ್ಯಕ್ಕೂ ಅನಿವಾರ್ಯವಾಗಿದೆ ಎಂದರು. ಉಕ್ಕು ವಲಯದ ಡಿಕಾರ್ಬನೈಸೇಶನ್ಗಾಗಿ ಈ ಸಮಸ್ಯೆಗಳನ್ನು ನಿಭಾಯಿಸಲು ಅವರು ಮಾರ್ಗದರ್ಶನ ಮತ್ತು ಸಲಹೆಗಳನ್ನು ನೀಡಿದರು.
ಇದೇ ಸಂದರ್ಭದಲ್ಲಿ ಕಾರ್ಯಪಡೆಗಳ ಅಧ್ಯಕ್ಷರನ್ನು ಗೌರವಾನ್ವಿತ ಉಕ್ಕು ಮತ್ತು ಬೃಹತ್ ಕೈಗಾರಿಕೆಗಳ ಸಚಿವರು ಸನ್ಮಾನಿಸಿದರು. ಉಕ್ಕು ಸಚಿವಾಲಯದ ನಿರ್ದೇಶಕಿ ಶ್ರೀಮತಿ ನೇಹಾ ವರ್ಮಾ ಅವರ ಧನ್ಯವಾದಗಳೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಭಾರತೀಯ ಉಕ್ಕು ಉದ್ಯಮಕ್ಕೆ ಸುಸ್ಥಿರ ಭವಿಷ್ಯವನ್ನು ಒದಗಿಸುವ ಮತ್ತು ರಾಷ್ಟ್ರೀಯವಾಗಿ ನಿರ್ಧರಿಸಿದ ಬದ್ಧತೆಗಳ (ಎನ್ ಡಿ ಸಿ) ಭಾಗವಾಗಿ ನಿವ್ವಳ ಶೂನ್ಯ ಹೊರಸೂಸುವಿಕೆಯನ್ನು ಸಾಧಿಸಲು ಕೊಡುಗೆ ನೀಡುವ ಗುರಿಯೊಂದಿಗೆ ವರದಿಯಲ್ಲಿ ವಿವರಿಸಿದ ಕಾರ್ಯತಂತ್ರಗಳನ್ನು ಕಾರ್ಯಗತಗೊಳಿಸಲು ಉಕ್ಕು ಸಚಿವಾಲಯ ಬದ್ಧವಾಗಿದೆ.
*****
(Release ID: 2053567)
Visitor Counter : 58