ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
azadi ka amrit mahotsav

ಸುಶ್ರೀ ಶೋಭಾ ಕರಂದ್ಲಾಜೆ ಅವರ ಅಧ್ಯಕ್ಷತೆಯಲ್ಲಿ ಕಾರ್ಮಿಕ ಸುಧಾರಣೆ ಮತ್ತು ಉದ್ಯೋಗ ಕುರಿತ 2ನೇ ಪ್ರಾದೇಶಿಕ ಸಭೆ


ಕಾರ್ಮಿಕರಿಗೆ ಕಲ್ಯಾಣ ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸಲು ಮತ್ತು ಗುಣಮಟ್ಟದ ಉದ್ಯೋಗಗಳ ಸೃಷ್ಟಿಯಲ್ಲಿ ಉದ್ಯೋಗದಾತರಿಗೆ ಅನುಕೂಲ ಕಲ್ಪಿಸಲು ಸರ್ಕಾರ ಬದ್ಧವಾಗಿದೆ

Posted On: 06 SEP 2024 5:54PM by PIB Bengaluru

ಸುಶ್ರೀ ಶೋಭಾ ಕರಂದ್ಲಾಜೆ ಅವರು ಇಂದು ಚಂಡೀಗಢದಲ್ಲಿ ಕಾರ್ಮಿಕ ಸುಧಾರಣೆಗಳು ಮತ್ತು ಉದ್ಯೋಗದ ಎರಡನೇ ಪ್ರಾದೇಶಿಕ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉತ್ತರದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಪಂಜಾಬ್ , ಹಿಮಾಚಲ ಪ್ರದೇಶ , ಲಡಾಖ್ , ಚಂಡೀಗಢ ಮತ್ತು ರಾಜಸ್ಥಾನಗಳೊಂದಿಗೆ ಸಭೆ ನಡೆಸಲಾಯಿತು. ಸಹಕಾರಿ ಒಕ್ಕೂಟವನ್ನು ಬಲಪಡಿಸುವ ಉದ್ದೇಶದಿಂದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಆರು ಪ್ರಾದೇಶಿಕ ಸಭೆಗಳ ಮೂಲಕ ನಡೆಸುತ್ತಿರುವ ರಾಷ್ಟ್ರವ್ಯಾಪಿ ಸಮಾಲೋಚನೆಗಳ ಸರಣಿಯಲ್ಲಿ ಇದು ಎರಡನೇ ಸಭೆಯಾಗಿದೆ.

ತಮ್ಮ ಪ್ರಾರಂಭಿಕ ಭಾಷಣದಲ್ಲಿ, ಸುಶ್ರೀ ಶೋಭಾ ಕಾರಂದ್ಲಾಜೆ ಅವರು 2047 ರ ವೇಳೆಗೆ ಭಾರತವನ್ನು ವಿಶ್ವದ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡಲು ಕಾರ್ಮಿಕ ಸುಧಾರಣೆಗಳ ನಿರ್ಣಾಯಕ ಅಗತ್ಯವನ್ನು ಪ್ರತಿಪಾದಿಸಿದರು. ನಮ್ಮ ರಾಷ್ಟ್ರವು ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟಿಕೊಂಡು ಅಸ್ತಿತ್ವದಲ್ಲಿರುವ ಕಾರ್ಮಿಕ ಕಾನೂನುಗಳಲ್ಲಿನ ವಸಾಹತುಶಾಹಿ ಪರಂಪರೆಯನ್ನು ಮೀರಬೇಕು ಎಂದು ಹೇಳಿದರು. ಆದ್ದರಿಂದ, ಭಾರತ ಸರ್ಕಾರವು 29 ಕಾರ್ಮಿಕ ಕಾನೂನುಗಳನ್ನು 04 ಕಾರ್ಮಿಕ ಸಂಹಿತೆಗಳಾಗಿ ಆಧುನೀಕರಿಸಿದೆ, ಸರಳೀಕರಿಸಿದೆ ಮತ್ತು ಸಮನ್ವಯಗೊಳಿಸಿದೆ ಎಂದು ಅವರು ಹೇಳಿದರು. 

ಕೇಂದ್ರ ಸಚಿವರು, ಅಸಂಘಟಿತ ಕಾರ್ಮಿಕರು ಮತ್ತು ಅವರ ಅವಲಂಬಿತರಿಗೆ ಸಂಘಟಿತ ಕಾರ್ಮಿಕರಿಗೆ ಸಮಾನವಾಗಿ "ಜನನದಿಂದ ಮರಣದವರೆಗೆ" ಸಮಗ್ರ ಸಾಮಾಜಿಕ ರಕ್ಷಣೆ ಒದಗಿಸುವ ಮಾನ್ಯ ಪ್ರಧಾನ ಮಂತ್ರಿಯವರ ದೃಷ್ಟಿಕೋನವನ್ನು ಹೈಲೈಟ್ ಮಾಡಿದರು. ಇದರಲ್ಲಿ ಇ-ಶ್ರಮ್ ಪೋರ್ಟಲ್ ಮೂಲಕ ಒದಗಿಸುವುದೂ ಸೇರಿದೆ. ಈ ಸಂದರ್ಭದಲ್ಲಿ, ದೇಶದ ಎಲ್ಲಾ ಜಿಲ್ಲೆಗಳಲ್ಲಿ ನೌಕರರ ರಾಜ್ಯ ವಿಮಾ ನಿಗಮದ (ESIC) ಸೇವೆಗಳು ಮತ್ತು ಪ್ರಯೋಜನಗಳನ್ನು ಬಲಪಡಿಸಲು ಮತ್ತು ವಿಸ್ತರಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಕಾರ್ಯನಿರ್ವಹಿಸಲು ಭಾರತ ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದರು. ಸಾಮಾಜಿಕ ರಕ್ಷಣೆ ಮತ್ತು ಕಲ್ಯಾಣ ಯೋಜನೆಗಳ ವಿಷಯದಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳ ಅತ್ಯುತ್ತಮ ಅಭ್ಯಾಸಗಳನ್ನು ಸಂಹಿತೆಗಳಿಗೆ ಅನುಗುಣವಾಗಿ ಮುಂದುವರಿಸಬೇಕು ಮತ್ತು ಬಲಪಡಿಸಬೇಕು ಎಂದು ಅವರು ಎಂದು  ತಿಳಿಸಿದರು.

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಯದರ್ಶಿ ಶ್ರೀಮತಿ ಸುಮಿತಾ ದಾವ್ರಾ ಅವರು, ನಡೆಯುತ್ತಿರುವ ಕಾರ್ಮಿಕ ಸುಧಾರಣೆಗಳನ್ನು ಅನುಷ್ಠಾನಗೊಳಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರದ ಪ್ರಯತ್ನಗಳಲ್ಲಿ ಹೆಚ್ಚಿನ ಸಮನ್ವಯದ ಅಗತ್ಯವನ್ನು ಒತ್ತಿಹೇಳುವ ಮೂಲಕ ಸಭೆಯ ಸಂದರ್ಭವನ್ನು ನಿರ್ಧರಿಸಿದರು. ಕಾರ್ಮಿಕ ಸಂಹಿತೆಗಳ ನಿರಂತರ ಜಾರಿಗೊಳಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ತಮ್ಮ ಕರಡು ನಿಯಮಗಳಲ್ಲಿನ ಅಂತರಗಳು ಮತ್ತು ವ್ಯತ್ಯಾಸಗಳನ್ನು ಕೇಂದ್ರ ನಿಯಮಗಳೊಂದಿಗೆ ಸಾಮರಸ್ಯಗೊಳಿಸುವ ಮತ್ತು ಹೊಂದಾಣಿಕೆ ಮಾಡುವ ಮೂಲಕ ಸರಿಪಡಿಸುವ ಅಗತ್ಯವನ್ನು ಅವರು ಪ್ರತಿಪಾದಿಸಿದರು. ಏಕೆಂದರೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಏಕರೂಪದ ನಿಯಂತ್ರಕ ಚೌಕಟ್ಟು ಕೈಗಾರಿಕೆಗಳ ಅಭಿವೃದ್ಧಿ ಮತ್ತು ಕಾರ್ಮಿಕರ ಕಲ್ಯಾಣಕ್ಕೆ ಅತ್ಯಗತ್ಯವಾಗಿದೆ.

ಕಾರ್ಮಿಕ ಸುಧಾರಣೆಗಳು, ಇ-ಶ್ರಮ್, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು (BoCW), ಉದ್ಯೋಗ ಸೃಷ್ಟಿ ಮತ್ತು ಉದ್ಯೋಗ ಸಂಬಂಧಿತ ಪ್ರೋತ್ಸಾಹಕಗಳು (ELI) ಮೇಲೆ ಗಮನ ಕೇಂದ್ರೀಕರಿಸಿ ಪ್ರಮುಖ ವಿಷಯಗಳ ಕುರಿತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳೊಂದಿಗೆ ಸಮೃದ್ಧಿಕರವಾದ ಅಂತರ್ದೃಷ್ಟಿಗಳು ಮತ್ತು ಆಲೋಚನೆಗಳ ವಿನಿಮಯ ನಡೆಯಿತು.

ಇ-ಶ್ರಮ್ ಪೋರ್ಟಲ್ನ ಬಗ್ಗೆಯೂ ಚರ್ಚೆ ನಡೆಸಲಾಯಿತು ಮತ್ತು ಪ್ರಾರಂಭವಾದ ಮೂರು ವರ್ಷಗಳ ಅಲ್ಪಾವಧಿಯಲ್ಲಿಯೇ 30 ಕೋಟಿಗೂ ಹೆಚ್ಚು ಅಸಂಘಟಿತ ಕಾರ್ಮಿಕರು ಪೋರ್ಟಲ್ನಲ್ಲಿ ನೋಂದಾಯಿಸಿಕೊಂಡಿರುವುದನ್ನು ಗಮನಕ್ಕೆ ತರಲಾಯಿತು. ಇತ್ತೀಚಿನ ಕೇಂದ್ರ ಬಜೆಟ್ 2024-25ರ ಘೋಷಣೆಯಂತೆ ಇ-ಶ್ರಮ್ ಪೋರ್ಟಲ್ ಅನ್ನು "ಏಕೈಕ ಪರಿಹಾರ" ಎಂದು ಬಲಪಡಿಸುವ ಮೂಲಕ ಕೌಶಲ್ಯ ಅಭಿವೃದ್ಧಿ, ಉದ್ಯೋಗ ಹೊಂದಾಣಿಕೆ, ಪಿಂಚಣಿ, ವಸತಿ, ಆರೋಗ್ಯ, ಹಣಕಾಸು ನೆರವು, ಜೀವ ಮತ್ತು ಅಪಘಾತ ವಿಮೆ ಹಾಗೂ ವೈದ್ಯಕೀಯ ವಿಮೆ ಸಂಬಂಧಿತ ಕೇಂದ್ರ ಸಾಮಾಜಿಕ ರಕ್ಷಣೆ ಮತ್ತು ಕಲ್ಯಾಣ ಯೋಜನೆಗಳನ್ನು ಸುಲಭವಾಗಿ ಪಡೆಯಲು ಅನುವು ಮಾಡಿಕೊಡುವ ದೃಷ್ಟಿಯಿಂದ ಅಂತಹ ಕಾರ್ಮಿಕರ ಸಮಯಬದ್ಧ ನೋಂದಣಿಯ ಮಹತ್ವವನ್ನು ಪುನರುಚ್ಚರಿಸಲಾಯಿತು. ಈ ದಿಕ್ಕಿನಲ್ಲಿ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಯದರ್ಶಿಯವರು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು ಇ-ಶ್ರಮ್ ಪೋರ್ಟಲ್ನೊಂದಿಗೆ ದ್ವಿಮುಖ ಸಮನ್ವಯವನ್ನು ವೇಗಗೊಳಿಸಲು ಒತ್ತಾಯಿಸಿದರು.
ಇತ್ತೀಚೆಗೆ ಪ್ರಾರಂಭಿಸಲಾದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ (BoCW) ನಿರ್ವಹಣಾ ಮಾಹಿತಿ ವ್ಯವಸ್ಥೆ (MIS) ಪೋರ್ಟಲ್ ನ ಪ್ರಯೋಜನಗಳ ಬಗ್ಗೆ ಮಾತನಾಡುತ್ತಾ, ಶ್ರೀಮತಿ ದಾವ್ರಾ ಅವರು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು ಈ  ಪೋರ್ಟಲ್  ನಲ್ಲಿ ನೋಂದಾಯಿಸಿಕೊಳ್ಳಲು ಮತ್ತು ನಿಧಿ ಬಳಕೆ ಹಾಗೂ ವಿವಿಧ ಕೇಂದ್ರ ಮತ್ತು ರಾಜ್ಯ ಕಲ್ಯಾಣ ಯೋಜನೆಗಳಡಿ ನೋಂದಾಯಿಸಲ್ಪಟ್ಟ ಕಾರ್ಮಿಕರ  ಮಾಹಿತಿಯ ಅಳವಡಿಕೆ  ಸೇರಿದಂತೆ  ತಮ್ಮ ವಿವರಗಳನ್ನು ನವೀಕರಿಸಲು ಒತ್ತಾಯಿಸಿದರು. ಈ ಪೋರ್ಟಲ್ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಅಂತಹ ಕಾರ್ಮಿಕರಿಗಾಗಿ ಹೆಚ್ಚು ಪರಿಣಾಮಕಾರಿ  ಕಲ್ಯಾಣ ನೀತಿಗಳನ್ನು ರೂಪಿಸಲು ಮಾಹಿತಿ-ಆಧಾರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ವಿಕಸಿತ ಭಾರತ @ 2047 ರ ಗೌರವಾನ್ವಿತ ಪ್ರಧಾನ ಮಂತ್ರಿಯವರ ದೃಷ್ಟಿಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಉದ್ಯೋಗ ಸೃಷ್ಟಿ ಮತ್ತು ಉದ್ಯೋಗಾವಕಾಶವನ್ನು ಸುಧಾರಿಸುವುದು ಭಾರತ ಸರ್ಕಾರದ ಪ್ರಮುಖ ಆದ್ಯತೆಗಳಾಗಿವೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಯದರ್ಶಿ ಹೇಳಿದರು.  ಅಲ್ಲದೆ ಪ್ರಕಟಣೆ ಸೇರಿದಂತೆ ಭಾರತ ಸರ್ಕಾರವು ಈ ದಿಕ್ಕಿನಲ್ಲಿ ಕೈಗೊಂಡ ವಿವಿಧ ಕಾರ್ಯಕ್ರಮಗಳನ್ನು ಹೈಲೈಟ್ ಮಾಡಿದರು. ಇತ್ತೀಚಿನ  ಕೇಂದ್ರ ಬಜೆಟ್  2024-25ರಲ್ಲಿ ಘೋಷಿಸಲಾದ ಉದ್ಯೋಗ ಸಂಬಂಧಿತ ಪ್ರೋತ್ಸಾಹಕ (ELI) ಯೋಜನೆಗಳನ್ನು ಸಹ ಇದು ಒಳಗೊಂಡಿದೆ.
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಯದರ್ಶಿ ಕೂಡ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ ಕೇಂದ್ರ ಸರ್ಕಾರದ ನಿರೀಕ್ಷೆಗಳನ್ನು ವಿವರಿಸಿದರು, ಅವುಗಳು ಈ  ಕೆಳಗಿನಂತಿವೆ :-

• ಉದ್ಯೋಗದ ಡೇಟಾವನ್ನು ಸಂಗ್ರಹಿಸುವುದು  ಮತ್ತು ಗುಣಮಟ್ಟದ ಉದ್ಯೋಗಗಳನ್ನು ಸೃಷ್ಟಿಸಲು ಕೇಂದ್ರೀಕೃತ ವಿಧಾನವನ್ನು ಅಳವಡಿಸಿಕೊಳ್ಳುವುದು;
• ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಂದ ಲೇಬರ್ ಕೋಡ್ ಅಡಿಯಲ್ಲಿ ನಿಯಮಗಳನ್ನು ರೂಪಿಸಲು ಸಂಘಟಿತ ವಿಧಾನವನ್ನು ಬಲಪಡಿಸುವುದು .
• NCS ಪೋರ್ಟಲ್ನಲ್ಲಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯಕ್ಕೆ (MOL&E) ಉದ್ಯೋಗದ ರಿಟರ್ನ್ಸ್ ಮತ್ತು ಉದ್ಯೋಗ-ಮೇಳದ ವಿವರಗಳನ್ನು ಸಮಯೋಚಿತ ಮತ್ತು ನಿಯಮಿತವಾಗಿ ಸಲ್ಲಿಸುವುದು.
•   ಇ-ಲೇಬರ್ ಪೋರ್ಟಲ್ನೊಂದಿಗೆ ಸಮಯೋಚಿತ ದ್ವಿಮುಖ ಏಕೀಕರಣ;
•  BOC ಕಾರ್ಮಿಕರ ದತ್ತಾಂಶದ ಪರಿಶೀಲನೆ ಮತ್ತು BOC ಕಾರ್ಮಿಕರಿಗೆ ಸಂಬಂಧಿಸಿದ BOC ಕಾರ್ಮಿಕರ ಕಲ್ಯಾಣ ಸೆಸ್ ನಿಧಿಯ ಮೂಲಕ ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳ ವ್ಯಾಪ್ತಿಯ ವರ್ಧನೆ

ಸಭೆಯ ಸಮಯದಲ್ಲಿ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಚರ್ಚಿಸಲಾಗುತ್ತಿರುವ ಪ್ರಮುಖ ಕಾರ್ಮಿಕ ಮತ್ತು ಉದ್ಯೋಗ ವಿಷಯಗಳಿಗೆ ಸಂಬಂಧಿಸಿದಂತೆ ತಮ್ಮ ಉತ್ತಮ ಗೈಡ್ ಲೈನ್ಸ್, ಅಭಿಪ್ರಾಯಗಳು, ಸಲಹೆಗಳು ಮತ್ತು ಕಾಳಜಿಗಳನ್ನು ಹಂಚಿಕೊಂಡರು. ಇವುಗಳನ್ನು ಸಚಿವಾಲಯವು ಸೂಕ್ತವಾಗಿ ಗಮನಕ್ಕೆ ತೆಗೆದುಕೊಂಡಿತು ಮತ್ತು ಸ್ಪಷ್ಟನೆ ನೀಡಿತು. ಕಾರ್ಮಿಕ ಸುಧಾರಣೆಗಳನ್ನು ಮುಂದುವರೆಸಲು ನಿರ್ಣಾಯಕ ಬೆಂಬಲವನ್ನು ನೀಡುವ ಭಾರತ ಸರ್ಕಾರದ ಕ್ರಮವನ್ನು ಅವರು ಶ್ಲಾಘಿಸಿದರು. ವಿವಿಧ ಕಲ್ಯಾಣ ಯೋಜನೆಗಳ ಅರ್ಹ ಫಲಾನುಭವಿಗಳನ್ನು ಹೆಚ್ಚು ದಕ್ಷತೆಯಿಂದ ಮತ್ತು ವೇಗವಾಗಿ ಗುರುತಿಸಲು ಇ-ಶ್ರಮ್ನಲ್ಲಿ ನೋಂದಾಯಿಸಲ್ಪಟ್ಟ ಕಾರ್ಮಿಕರ ಮಾಹಿತಿಯನ್ನು ಜಿಲ್ಲಾ ಮಟ್ಟದಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಹಂಚಿಕೊಳ್ಳಬಹುದು ಎಂದು ರಾಜ್ಯಗಳು ಸೂಚಿಸಿದವು. 

ಮುಖ್ಯ ಕಾರ್ಮಿಕ ಆಯುಕ್ತ (ಕೇಂದ್ರ) ಡಾ. ಓಂಕಾರ್ ಶರ್ಮಾ ಅವರು ಉತ್ಸಾಹದಿಂದ ಭಾಗವಹಿಸಿದ್ದಕ್ಕಾಗಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳಿಗೆ ಧನ್ಯವಾದ ಅರ್ಪಿಸಿದರು ಮತ್ತು ಅವರ ಪ್ರಯತ್ನಗಳನ್ನು ತೀವ್ರಗೊಳಿಸಲು ಭಾರತ ಸರ್ಕಾರದ ಸಂಪೂರ್ಣ ಬೆಂಬಲದ ಭರವಸೆ ನೀಡಿದರು. ಸಭೆಯನ್ನು ಯಶಸ್ವಿಯಾಗಿ ನಡೆಸಲು ಚಂಡೀಗಢ ಆಡಳಿತದ ಸಹಕಾರವನ್ನು ಅವರು ಶ್ಲಾಘಿಸಿದರು. ಸಭೆಯ ಯಶಸ್ವಿ ಆಯೋಜನೆಗೆ ಅನುಕೂಲ ಮಾಡಿಕೊಟ್ಟ ಚಂಡೀಗಢ ಆಡಳಿತಕ್ಕೆ ಅವರು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗಿನ ಪ್ರಾದೇಶಿಕ ಸಮಾಲೋಚನೆಗಳ ಈ ಸರಣಿಯ ಮುಂದಿನ ಸಭೆಯು ಮುಂದಿನ ವಾರ ಪಶ್ಚಿಮ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗಾಗಿ ರಾಜಕೋಟ್ ನಲ್ಲಿ ನಡೆಯಲಿದೆ.

 

*****




(Release ID: 2052758) Visitor Counter : 24