ರಕ್ಷಣಾ ಸಚಿವಾಲಯ
ದಕ್ಷಿಣ ನೌಕಾ ಕಮಾಂಡಿಗೆ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ ಭೇಟಿ
Posted On:
27 AUG 2024 5:54PM by PIB Bengaluru
ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ ಮತ್ತು ನೌಕಾ ಕಲ್ಯಾಣ ಹಾಗು ಸ್ವಾಸ್ಥ್ಯ ಸಂಘದ (ಎನ್ ಡಬ್ಲ್ಯೂಡಬ್ಲ್ಯೂಎ) ಅಧ್ಯಕ್ಷೆ ಶ್ರೀಮತಿ ಶಶಿ ತ್ರಿಪಾಠಿ ಅವರು 24ರ ಆಗಸ್ಟ್ 26 ರಂದು ಕೊಚ್ಚಿಯ ದಕ್ಷಿಣ ನೌಕಾ ಕಮಾಂಡ್ (ಎಸ್.ಎನ್. ಸಿ) ಗೆ ತಮ್ಮ ಮೊದಲ ಭೇಟಿಗಾಗಿ ಆಗಮಿಸಿದರು.
ಅವರು ಆಗಮಿಸುತ್ತಿದ್ದಂತೆ ನೌಕಾ ಪಡೆ ಮುಖ್ಯಸ್ಥರಿಗೆ (ಸಿ.ಎನ್.ಎಸ್.) ಐಎನ್ಎಸ್ ಗರುಡದಲ್ಲಿ ಗೌರವ ರಕ್ಷೆ (ಗಾರ್ಡ್ ಆಫ್ ಹಾನರ್) ನೀಡಲಾಯಿತು. ಭೇಟಿಯ ಸಮಯದಲ್ಲಿ, ಸಿಎನ್ಎಸ್ ಅವರು ದಕ್ಷಿಣ ನೌಕಾ ಕಮಾಂಡಿನ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ವೈಸ್ ಅಡ್ಮಿರಲ್ ವಿ ಶ್ರೀನಿವಾಸ್ ಅವರೊಂದಿಗೆ ಸಂವಾದ ನಡೆಸಿದರು ಮತ್ತು ಕಮಾಂಡ್ ನ ವಿವಿಧ ತರಬೇತಿ, ಕಾರ್ಯಾಚರಣೆ, ಮೂಲಸೌಕರ್ಯ ಮತ್ತು ಆಡಳಿತಾತ್ಮಕ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಪಡೆದರು. ಭಾರತೀಯ ನೌಕಾಪಡೆಯ ತರಬೇತಿ ಕಮಾಂಡ್ ಆಗಿರುವುದರಿಂದ, ತರಬೇತಿ ಕಾರ್ಯಚಟುವಟಿಕೆಗಳ ಸಮಗ್ರ ಅವಲೋಕನ, ಜೊತೆಗೆ ವಿವಿಧ ತರಬೇತಿ ಸೌಲಭ್ಯಗಳು ಮತ್ತು ಆಧುನೀಕರಣ ಯೋಜನೆಗಳನ್ನು ಸಹ ಪ್ರಸ್ತುತಪಡಿಸಲಾಯಿತು. ಇತ್ತೀಚಿನ ವಯನಾಡ್ ಭೂಕುಸಿತದ ನಂತರ ವಿಪತ್ತು ಪರಿಹಾರ ಕಾರ್ಯಾಚರಣೆಗಳು ಮತ್ತು ಒದಗಿಸಲಾದ ಸಹಾಯದ ಬಗ್ಗೆ ಅವರಿಗೆ ವಿವರಿಸಲಾಯಿತು. ಸಿಎನ್ಎಸ್ ವಿವಿಧ ವಿಷಯಗಳಲ್ಲಿ ಆಗಿರುವ ಪ್ರಗತಿಯನ್ನು ಗಮನಿಸಿದರು ಮತ್ತು ಕಮಾಂಡಿನ ಪ್ರಯತ್ನಗಳನ್ನು ಶ್ಲಾಘಿಸಿದರು.
ಸಿಎನ್ಎಸ್ ಅವರು ಕೊಚ್ಚಿಯ ನೌಕಾ ನೆಲೆಯಲ್ಲಿ ನವೀಕರಿಸಿದ ಕಮಾಂಡ್ ಕ್ರೀಡಾಂಗಣವನ್ನು ಉದ್ಘಾಟಿಸಿದರು, ಇದು ಆಧುನಿಕ ಕ್ರೀಡಾ ಮೂಲಸೌಕರ್ಯಗಳನ್ನು ಹೊಂದಿದೆ ಮತ್ತು ಅತ್ಯಾಧುನಿಕ ಸೌಲಭ್ಯಗಳನ್ನು ವೈವಿಧ್ಯಮಯ ಸೌಲಭ್ಯಗಳೊಂದಿಗೆ ಸಂಯೋಜಿಸುತ್ತದೆ. ಈ ಕ್ರೀಡಾಂಗಣವು ಅಂತಾರಾಷ್ಟ್ರೀಯ ಗುಣಮಟ್ಟದ ಎಂಟು ಪಥದ ಸಿಂಥೆಟಿಕ್ ಟ್ರ್ಯಾಕ್, ಕೇಂದ್ರ ಫುಟ್ಬಾಲ್ ಮೈದಾನ ಮತ್ತು ವಿವಿಧ ಅಥ್ಲೆಟಿಕ್ಸ್ ಸೌಲಭ್ಯಗಳನ್ನು ಹೊಂದಿದ್ದು, ಇದು ಕ್ರೀಡೆ ಮತ್ತು ಆಟಗಳ ತಾಣವಾಗಿದೆ. ಸಿಎನ್ಎಸ್ ಅವರು ನೌಕಾಪಡೆಯ ಫುಟ್ಬಾಲ್ ಮತ್ತು ವಾಲಿಬಾಲ್ ತಂಡಗಳೊಂದಿಗೆ ಸಂವಾದ ನಡೆಸಿದರು ಮತ್ತು ಈ ವರ್ಷ ಅಂತರ-ಸೇವಾ ಟ್ರೋಫಿಗಳನ್ನು ಗೆದ್ದಿದ್ದಕ್ಕಾಗಿ ತಂಡಗಳನ್ನು ಅಭಿನಂದಿಸಿದರು. ಮತ್ತೊಂದು ಕಾರ್ಯಕ್ರಮದಲ್ಲಿ, ಸಿಎನ್ಎಸ್ ಅವರು ನೌಕಾ ಹಡಗು ದುರಸ್ತಿ ಯಾರ್ಡ್ (ಕೊಚ್ಚಿ) ನಲ್ಲಿ ಹೊಸ ಯಾರ್ಡ್ ಯುಟಿಲಿಟಿ ಕಾಂಪ್ಲೆಕ್ಸ್ ಉದ್ಘಾಟಿಸಿದರು. ಈ ತಾಂತ್ರಿಕ ಮೂಲಸೌಕರ್ಯ ವ್ಯವಸ್ಥೆಯು ಯಾರ್ಡ್ ನ ದೊಡ್ಡ ಪ್ರಮಾಣದ ಚರ ಸ್ವತ್ತುಗಳು ಮತ್ತು ವಿಶೇಷ ಯುಟಿಲಿಟಿ ವಾಹನಗಳಿಗೆ ನಿರ್ವಹಣೆ ಹಾಗು ಸೇವೆಯನ್ನು ಒದಗಿಸುತ್ತದೆ.
ಇದಲ್ಲದೆ, ಸಿಎನ್ಎಸ್ ಅವರು ಎಸ್ಎನ್ಸಿಯ ಅಧಿಕಾರಿಗಳು, ನಾವಿಕರು, ತರಬೇತಿದಾರರು ಮತ್ತು ರಕ್ಷಣಾ ನಾಗರಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮತ್ತು ಅವರ ದೃಷ್ಟಿ/ಚಿಂತನೆ ಹಾಗು ನಿರೀಕ್ಷೆಗಳನ್ನು ಹಂಚಿಕೊಳ್ಳಲಿದ್ದಾರೆ. ಅವರು ಸಂವಹನ ಮತ್ತು ಎಲೆಕ್ಟ್ರಾನಿಕ್ ಯುದ್ಧ ತಜ್ಞರಾಗಿ ಪದವಿ ಪಡೆದ ತಮ್ಮ ಹಿಂದಿನ ವಿದ್ಯಾಸಂಸ್ಥೆ ಸಿಗ್ನಲ್ ಶಾಲೆಗೆ ಭೇಟಿ ನೀಡಲಿದ್ದಾರೆ.
884Q.jpg)

*****
(Release ID: 2049287)