ಪ್ರಧಾನ ಮಂತ್ರಿಯವರ ಕಛೇರಿ

ಭಾರತದ ಪ್ರಧಾನ ಮಂತ್ರಿಗಳ ಉಕ್ರೇನ್ ಭೇಟಿ ಕುರಿತಂತೆ ಭಾರತ – ಯುಕ್ರೇನ್ ಜಂಟಿ ಹೇಳಿಕೆ

Posted On: 23 AUG 2024 6:41PM by PIB Bengaluru

ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಆಹ್ವಾನದ ಮೇರೆಗೆ 2024ರ ಆಗಸ್ಟ್ 23 ರಂದು ಉಕ್ರೇನ್ ಗೆ ಭೇಟಿ ನೀಡಿದರು. 1992 ರಲ್ಲಿ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧಗಳು ಆರಂಭವಾದ ಬಳಿಕ ಭಾರತದ ಪ್ರಧಾನಮಂತ್ರಿಯೊಬ್ಬರ ಮೊದಲ ಭೇಟಿ ಇದಾಗಿದೆ. 
 
ರಾಜಕೀಯ ಸಂಬಂಧಗಳು

ಭವಿಷ್ಯದಲ್ಲಿ ಸಮಗ್ರ ಪಾಲುದಾರಿಕೆಯನ್ನು ತಂತ್ರಗಾರಿಕಾ ಪಾಲುಗಾರಿಕೆಗೆ ವಿಸ್ತರಿಸಲು ದ್ವಿಪಕ್ಷೀಯ ಸಂಬಂಧಗಳ ಬಲವರ್ಧನೆಗೆ ಕಾರ್ಯನಿರ್ವಹಿಸಲು ಉಭಯ ನಾಯಕರು ಪರಸ್ಪರ ಆಸಕ್ತಿ ತೋರಿದರು. ಎರಡೂ ದೇಶಗಳ ನಡುವಿನ ಪರಸ್ಪರ ನಂಬಿಕೆ, ಗೌರವ ಮತ್ತು ಮುಕ್ತತೆ ಆಧಾರದ ಮೇಲೆ ಜನರ ಅನುಕೂಲಕ್ಕಾಗಿ ದ್ವಿಪಕ್ಷೀಯ ಬಾಂಧವ್ಯಗಳನ್ನು ಇನ್ನಷ್ಟು ವೃದ್ಧಿಸಲು ಉಭಯ ನಾಯಕರು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. 

ಕಳೆದ ಮೂರು ದಶಕಗಳಲ್ಲಿ ಸ್ಥಿರವಾಗಿ ಮತ್ತು ಸಕಾರಾತ್ಮಕವಾಗಿ ಸದೃಢಗೊಂಡಿರುವ ದ್ವಿಪಕ್ಷೀಯ ಬಾಂಧವ್ಯದ ಪಥವನ್ನು ನಾಯಕರು ಇದೇ ವೇಳೆ ಪರಿಶೀಲಿಸಿದರು.  ಪರಸ್ಪರ ಅರ್ಥೈಸಿಕೊಳ್ಳುವಿಕೆ, ನಂಬಿಕೆ ಮತ್ತು ಸಹಕಾರವನ್ನು ಹೆಚ್ಚಿಸುವಲ್ಲಿ ಜಿ7 ಶೃಂಗಸಭೆಯ ನೇಪಥ್ಯದಲ್ಲಿ ಜೂನ್ 2024 ರಲ್ಲಿ ಅಪುಲಿಯಾದಲ್ಲಿ ಮತ್ತು ಮೇ 2023 ರಲ್ಲಿ ಹಿರೋಷಿಮಾದಲ್ಲಿ ತಮ್ಮ ಸಭೆಗಳು,  ಮಾರ್ಚ್ 2024 ರಲ್ಲಿ ಉಕ್ರೇನ್ನ ವಿದೇಶಾಂಗ ವ್ಯವಹಾರಗಳ ಸಚಿವರ ನವದೆಹಲಿ ಭೇಟಿ,  ಭಾರತದ ವಿದೇಶಾಂಗ ಸಚಿವರು ಮತ್ತು ಉಕ್ರೇನ್ನ ವಿದೇಶಾಂಗ ವ್ಯವಹಾರಗಳ ಸಚಿವರ ನಡುವೆ ಹಾಗೂ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರು ಮತ್ತು ಉಕ್ರೇನ್ ಅಧ್ಯಕ್ಷರ ಕಚೇರಿಯ ಮುಖ್ಯಸ್ಥರ ನಡುವೆ ನಡೆದ ವಿವಿಧ ಸಂವಾದಗಳು ಮತ್ತು ದೂರವಾಣಿ ಮಾತುಕತೆಗಳು, ಜುಲೈ 2023 ರಲ್ಲಿ ಕೈವ್‌ನಲ್ಲಿ ನಡೆದ ವಿದೇಶಾಂಗ ಕಚೇರಿಯ 9 ನೇ ಸುತ್ತಿನ ಸಮಾಲೋಚನೆಗಳು ಹೀಗೆ ವಿವಿಧ ಹಂತಗಳಲ್ಲಿ ಭಾರತ ಮತ್ತು ಉಕ್ರೇನ್ ನಡುವಿನ ವ್ಯವಹಾರಗಳನ್ನು ಶ್ಲಾಘಿಸಿದರು. 

ವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆ 2024 ಮತ್ತು ರೈಸಿನಾ ಡೈಲಾಗ್ 2024 ರಲ್ಲಿ ಉಕ್ರೇನಿಯನ್ ಅಧಿಕೃತ ನಿಯೋಗಗಳ ಭಾಗವಹಿಸುವಿಕೆಗೆ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಗ್ರ, ನ್ಯಾಯೋಚಿತ ಮತ್ತು ಶಾಶ್ವತ ಶಾಂತಿ ಖಾತ್ರಿಪಡಿಸುವುದು

ವಿಶ್ವ ಸಂಸ್ಥೆ ಚಾರ್ಟರ್ ನ ಗಡಿ ರಕ್ಷಣೆ ಮತ್ತು ರಾಷ್ಟ್ರಗಳ ಸಾರ್ವಭೌಮತ್ವ ಸೇರಿದಂತೆ ಅಂತರಾಷ್ಟ್ರೀಯ ಕಾನೂನಿನ ತತ್ವಗಳನ್ನು ಎತ್ತಿಹಿಡಿಯುವಲ್ಲಿ ಹೆಚ್ಚಿನ ಸಹಕಾರಕ್ಕೆ ಸಿದ್ಧವಿರುವುದಾಗಿ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಝೆಲೆನ್ಸ್ಕಿ ಪುನರುಚ್ಚರಿಸಿದರು. ಈ ನಿಟ್ಟಿನಲ್ಲಿ ನಿಕಟ ದ್ವಿಪಕ್ಷೀಯ ಮಾತುಕತೆಯ ಅಗತ್ಯತೆಗೆ ಉಭಯರು ಪರಸ್ಪರ ಒಪ್ಪಿಕೊಂಡರು.

ಜೂನ್ 2024 ರಲ್ಲಿ ಸ್ವಿಟ್ಜರ್ಲೆಂಡ್ನ ಬರ್ಗೆನ್‌ಸ್ಟಾಕ್‌ನಲ್ಲಿ ನಡೆದ ಉಕ್ರೇನ್‌ನಲ್ಲಿ ಶಾಂತಿ ಕುರಿತ ಶೃಂಗಸಭೆಯಲ್ಲಿ ಭಾರತವು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಶಾಂತಿ ಪರಿಹಾರದ ತನ್ನ ತಾತ್ವಿಕ ನಿಲುವಿನ ಆಧಾರದ ಮೇಲೆ ಪಾಲ್ಗೊಂಡಿತ್ತು ಎಂದು ದೇಶ ಪುನರುಚ್ಚರಿಸಿದೆ.

ಭಾರತದ ಇಂತಹ ಭಾಗವಹಿಸುವಿಕೆಯನ್ನು ಉಕ್ರೇನ್ ಸ್ವಾಗತಿಸಿದೆ ಮತ್ತು ಮುಂದಿನ ಶಾಂತಿ ಶೃಂಗಸಭೆಯಲ್ಲಿ ಉನ್ನತ ಮಟ್ಟದ ಭಾರತೀಯ ಪಾಲ್ಗೊಳ್ಳುವಿಕೆಯ ಬಗ್ಗೆ ಬೆಳಕು ಚೆಲ್ಲಿದೆ.

ಉಕ್ರೇನ್‌ನಲ್ಲಿ ನಡೆದ ಶಾಂತಿಯ ಶೃಂಗಸಭೆಯಲ್ಲಿ ಅಂಗೀಕರಿಸಲಾದ ಶಾಂತಿ ಚೌಕಟ್ಟಿನ ಮೇಲಿನ ಜಂಟಿ ಹೇಳಿಕೆಯು ರಾಜತಾಂತ್ರಿಕತೆ ಮತ್ತು ಅಂತಾರಾಷ್ಟ್ರೀಯ ಕಾನೂನಿನ ಆಧಾರದ ಮೇಲೆ ಕೇವಲ ಶಾಂತಿಯನ್ನು ಉತ್ತೇಜಿಸಲು ಹೆಚ್ಚಿನ ಪ್ರಯತ್ನಗಳಿಗೆ ಆಧಾರವಾಗಲಿದೆ ಎಂದು ಉಕ್ರೇನ್ ಅಭಿಪ್ರಾಯಪಟ್ಟಿದೆ. 

ಉಕ್ರೇನ್ ಗೆ ಮಾನವೀಯ ನೆಲೆಯಲ್ಲಿ ಆಹಾರ ಉಪಕ್ರಮ ಸೇರಿದಂತೆ ಜಾಗತಿಕ ಆಹಾರ ಭದ್ರತೆಯನ್ನು ಖಾತರಿಪಡಿಸಲು ಕೈಗೊಂಡ ಹಲವು ಪ್ರಯತ್ನಗಳನ್ನು ನಾಯಕರು ಶ್ಲಾಘಿಸಿದರು. ಜಾಗತಿಕ ಮಾರುಕಟ್ಟೆಗಳಿಗೆ, ವಿಶೇಷವಾಗಿ ಏಷ್ಯಾ ಮತ್ತು ಆಫ್ರಿಕಾದಲ್ಲಿ ಕೃಷಿ ಉತ್ಪನ್ನಗಳ ನಿರಂತರ ಮತ್ತು ಅಡೆತಡೆಯಿಲ್ಲದ ಪೂರೈಕೆಯ ಪ್ರಾಮುಖ್ಯತೆಯ ಬಗ್ಗೆ ಒತ್ತಿ ಹೇಳಲಾಯಿತು.

ಶೀಘ್ರ ಶಾಂತಿ ಸ್ಥಾಪನೆಗೆ ಕೊಡುಗೆ ನೀಡಬಲ್ಲ ಮತ್ತು ವ್ಯಾಪಾಕವಾಗಿ ಸ್ವೀಕಾರಾರ್ಹವಾದ ನವೀನ ಪರಿಹಾರಗಳನ್ನು ಕಂಡುಕೊಳ್ಳಲು ಎಲ್ಲಾ ಸಂಬಂಧಿತರ ನಡುವೆ ಪ್ರಾಮಾಣಿಕ ಮತ್ತು ಪ್ರಾಯೋಗಿಕ ಕಾರ್ಯನಿರ್ವಹಣೆಯ ಅಗತ್ಯವನ್ನು ಪ್ರಧಾನಿ ಮೋದಿ ಪುನರುಚ್ಚರಿಸಿದರು. ಶೀಘ್ರ ಶಾಂತಿ ಮರುಸ್ಥಾಪನೆಗೆ ಎಲ್ಲ ರೀತಿಯಲ್ಲಿ ಸಾಧ್ಯವಿರುವ ಕೊಡುಗೆ ನೀಡಲು ಭಾರತ ಬಯಸುತ್ತದೆ ಎಂದು ಅವರು ಪುನರುಚ್ಚರಿಸಿದರು. 

ಆರ್ಥಿಕ, ವೈಜ್ಞಾನಿಕ ಮತ್ತು ತಾಂತ್ರಿಕ ಸಹಕಾರ

ಎರಡೂ ರಾಷ್ಟ್ರಗಳಿಂದ ವ್ಯಾಪಾರ ಮತ್ತು ಉದ್ಯಮದ ಹೆಚ್ಚಿನ ಒಳಗೊಳ್ಳುವಿಕೆಯ ಜೊತೆಗೆ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಕೈಗಾರಿಕೆ, ಉತ್ಪಾದನೆ, ಹಸಿರು ಇಂಧನ ಮುಂತಾದ ಕ್ಷೇತ್ರಗಳಲ್ಲಿ ಬಲವಾದ ಪಾಲುದಾರಿಕೆಯನ್ನು ಅನ್ವೇಷಿಸುವುದರ ಹೊರತಾಗಿ ವ್ಯಾಪಾರ ಮತ್ತು ವಾಣಿಜ್ಯ, ಕೃಷಿ, ಔಷಧ, ರಕ್ಷಣೆ, ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ, ಸಂಸ್ಕೃತಿಯಂತಹ ಕ್ಷೇತ್ರಗಳಲ್ಲಿ ಸಹಕಾರ ವರ್ಧನೆ ಕುರಿತು ನಾಯಕರು ಚರ್ಚಿಸಿದರು.

ಉಭಯ ದೇಶಗಳ ನಡುವೆ ಭವಿಷ್ಯಾಧಾರಿತ ಮತ್ತು ಸದೃಢ ಆರ್ಥಿಕ ಪಾಲುದಾರಿಕೆಯನ್ನು ಸುಗಮಗೊಳಿಸಲು ವ್ಯಾಪಾರ, ಆರ್ಥಿಕತೆ, ವೈಜ್ಞಾನಿಕ, ತಾಂತ್ರಿಕ, ಕೈಗಾರಿಕಾ ಮತ್ತು ಸಾಂಸ್ಕೃತಿಕ ಸಹಕಾರ (ಐಜಿಸಿ) ಕುರಿತಾದ ಭಾರತ-ಉಕ್ರೇನ್ ಅಂತರ ಸರ್ಕಾರಿ ಆಯೋಗದ ಮಹತ್ವದ ಬಗ್ಗೆ ನಾಯಕರು ಒತ್ತಿ ಹೇಳಿದರು.

ಮಾರ್ಚ್ 2024 ರಲ್ಲಿ ಉಕ್ರೇನ್ನ ವಿದೇಶಾಂಗ ವ್ಯವಹಾರಗಳ ಸಚಿವರ ಭಾರತ ಭೇಟಿಯ  ಸಂದರ್ಭದಲ್ಲಿ ನಡೆದ ಐಜಿಸಿ ಪರಿಶೀಲನಾ ಸಭೆಯ ಬಗ್ಗೆ ಮತ್ತು 2024 ರಲ್ಲಿ ಪರಸ್ಪರ ಅನುಕೂಲಕರ ಸಮಯ ಐಜಿಸಿಯ 7ನೇ ಸಭೆಯನ್ನು ಮುಂಚಿತವಾಗಿ ನಡೆಸುವ ಉದ್ದೇಶದಿಂದ ಜಂಟಿ ಕಾರ್ಯನಿರ್ವಹಣಾ ಗುಂಪುಗಳ ಸಭೆಗಳನ್ನು ನಡೆಸುವ ಪ್ರಯತ್ನಗಳನ್ನು ಎರಡೂ ದೇಶಗಳ ನಾಯಕರು ಶ್ಲಾಘಿಸಿದರು. ಐಜಿಸಿಯ ಸಹ-ಅಧ್ಯಕ್ಷರು/ಮುಖ್ಯಸ್ಥರಾಗಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರಾದ ಡಾ. ಎಸ್. ಜೈಶಂಕರ್ ಅವರ ನೇಮಕವನ್ನು ಉಕ್ರೇನ್ ಸ್ವಾಗತಿಸಿದೆ.

ಯುದ್ಧ ನಡೆಯುತ್ತಿರುವ ಕಾರಣದಿಂದಾಗಿ 2022 ರಿಂದ ಸರಕುಗಳ ವಾರ್ಷಿಕ ದ್ವಿಪಕ್ಷೀಯ ವ್ಯಾಪಾರದಲ್ಲಿ ಗಣನೀಯ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ, ದ್ವಿಪಕ್ಷೀಯ ವ್ಯಾಪಾರವನ್ನು ಮತ್ತು ಆರ್ಥಿಕ ಸಂಬಂಧಗಳನ್ನು ಯುದ್ಧ ಪೂರ್ವದಲ್ಲಿದ್ದಂತೆ ಪುನಃಸ್ಥಾಪಿಸಲು ಮತ್ತು ಅವುಗಳನ್ನು ಇನ್ನಷ್ಟು ಆಳವಾಗಿಸಲು ಸಾಧ್ಯವಿರುವ ಎಲ್ಲ ಮಾರ್ಗಗಳನ್ನು ಅನ್ವೇಷಿಸಲು ಐಜಿಸಿಯ ಸಹ-ಅಧ್ಯಕ್ಷರಿಗೆ ಉಭಯ ನಾಯಕರು ನಿರ್ದೇಶನ ನೀಡಿದರು. 

ಭಾರತ ಮತ್ತು ಉಕ್ರೇನ್ ನಡುವಿನ ಹೆಚ್ಚಿನ ವ್ಯಾಪಾರ ಮತ್ತು ವಾಣಿಜ್ಯಕ್ಕೆ ಯಾವುದೇ ಅಡೆತಡೆಗಳನ್ನು ತೆಗೆದುಹಾಕುವುದರ ಜೊತೆಗೆ ಪರಸ್ಪರ ಆರ್ಥಿಕ ಚಟುವಟಿಕೆಗಳು ಮತ್ತು ಹೂಡಿಕೆಗಳಿಗಾಗಿ ಸುಲಲಿತ ವ್ಯವಹಾರ ವೃದ್ಧಿಸುವ ಅಗತ್ಯದ ಬಗ್ಗೆ ನಾಯಕರು ಒತ್ತಿ ಹೇಳಿದರು. ಜಂಟಿ ಯೋಜನೆಗಳು, ಸಹಯೋಗಗಳು ಮತ್ತು ಉದ್ಯಮಗಳನ್ನು ಅನ್ವೇಷಿಸಲು ಅಧಿಕೃತ ಮತ್ತು ವ್ಯಾಪಾರ ಮಟ್ಟದಲ್ಲಿ ಹೆಚ್ಚಿನ ಒಪ್ಪಂದಗಳಿಗೆ ಉಭಯ ದೇಶಗಳು ಪ್ರೋತ್ಸಾಹ ನೀಡಿವೆ.

ಕೃಷಿ ಕ್ಷೇತ್ರದಲ್ಲಿ ಉಭಯ ದೇಶಗಳ ನಡುವಿನ ಸದೃಢ ಸಂಬಂಧಗಳನ್ನು ಹಾಗೂ ಪ್ರಮಾಣೀಕರಣ ಪ್ರಕ್ರಿಯೆಗಳು ಮತ್ತು ಮಾನದಂಡಗಳ ಸಮನ್ವಯತೆ ಸೇರಿದಂತೆ ಪೂರಕ ಕ್ಷೇತ್ರಗಳಲ್ಲಿನ ಸಾಮರ್ಥ್ಯದ ಆಧಾರದ ಮೇಲೆ ದ್ವಿಪಕ್ಷೀಯ ಸಂವಹನ ಮತ್ತು ಮಾರುಕಟ್ಟೆ ಪ್ರವೇಶವನ್ನು ಹೆಚ್ಚಿಸುವ ಉತ್ಸುಕತೆಯನ್ನು  ನಾಯಕರು ನೆನಪು ಮಾಡಿಕೊಂಡರು.

ಔಷಧೀಯ ಉತ್ಪನ್ನಗಳಲ್ಲಿನ ಸಹಕಾರವು ಪಾಲುದಾರಿಕೆಯ ಪ್ರಬಲ ಸ್ತಂಭಗಳಲ್ಲಿ ಒಂದಾಗಿದೆ ಎಂದು ಗುರುತಿಸಿದ ನಾಯಕರು, ಪರೀಕ್ಷೆ, ತಪಾಸಣೆ ಮತ್ತು ನೋಂದಣಿ ಕಾರ್ಯವಿಧಾನಗಳು ಸೇರಿದಂತೆ ಹೂಡಿಕೆಗಳು ಮತ್ತು ಜಂಟಿ ಉದ್ಯಮಗಳಿಗೆ ಮಾರುಕಟ್ಟೆ ಪ್ರವೇಶಾವಕಾಶ ಒದಗಿಸುವ ಬದ್ಧತೆಯನ್ನು ಪುನರುಚ್ಚರಿಸಿದರು. ಉತ್ತಮ ಅಭ್ಯಾಸಗಳ ಜ್ಞಾನ ಹಂಚಿಕೆ ಮತ್ತು ತರಬೇತಿ ಸೇರಿದಂತೆ ಔಷಧ ವಲಯದಲ್ಲಿ ಸಹಕಾರವನ್ನು ವಿಸ್ತರಿಸುವ ಬಯಕೆಯನ್ನು ಎರಡೂ ದೇಶಗಳ ನಾಯಕರು ವ್ಯಕ್ತಪಡಿಸಿದ್ದಾರೆ. ಭಾರತದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಉಕ್ರೇನ್ ನ ಔಷಧಗಳು ಮತ್ತು ಔಷಧ ನಿಯಂತ್ರಣ ಕುರಿತು ಆಡಳಿತ ಸೇವೆಯ ನಡುವೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿರುವುದು, ಆಗಸ್ಟ್ 2024 ರಲ್ಲಿ ವರ್ಚುಯಲ್ ಮಾದರಿಯಲ್ಲಿ ನಡೆದ ಔಷಧ ಸಹಕಾರ ಕುರಿತಂತೆ ಭಾರತೀಯ-ಉಕ್ರೇನಿಯನ್ ಜಂಟಿ ಕಾರ್ಯ ಗುಂಪಿನ 3 ನೇ ಸಭೆಯನ್ನು ಅವರುಗಳು ಸ್ವಾಗತಿಸಿದರು. ಭಾರತವು ವೆಚ್ಚ ಪರಿಣಾಮಕಾರಿ ಮತ್ತು ಗುಣಮಟ್ಟದ ಔಷಧಗಳನ್ನು ಪೂರೈಸುವ ಬಗ್ಗೆ ನೀಡಿರುವ ಭರವಸೆಗೆ ಉಕ್ರೇನ್ ಮೆಚ್ಚುಗೆ ವ್ಯಕ್ತಪಡಿಸಿದೆ. 

ಶೈಕ್ಷಣಿಕ ಪದವಿಗಳು ಮತ್ತು ಬಿರುದುಗಳು, ಶೈಕ್ಷಣಿಕ ದಾಖಲೆಗಳ ಪರಸ್ಪರ ಮನ್ನಣೆ, ಹೂಡಿಕೆಗಳ ಸಂರಕ್ಷಣೆ ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳ ಕಾನೂನು ಚೌಕಟ್ಟನ್ನು ವಿಸ್ತರಿಸಲು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಲು ಎರಡೂ ದೇಶಗಳು ಸಮ್ಮತಿಸಿವೆ. 

ವೈಜ್ಞಾನಿಕ ಮತ್ತು ತಾಂತ್ರಿಕ ಸಹಕಾರದ ಕುರಿತ ಭಾರತ ಮತ್ತು ಉಕ್ರೇನ್ ನಡುವಿನ ಒಪ್ಪಂದದ ಯಶಸ್ವಿ ಅನುಷ್ಠಾನ, ವೈಜ್ಞಾನಿಕ ಮತ್ತು ತಾಂತ್ರಿಕ ಸಹಕಾರಕ್ಕಾಗಿನ ಭಾರತೀಯ-ಉಕ್ರೇನಿಯನ್ ಜಂಟಿ ಕಾರ್ಯಪಡೆಯ ಪರಿಣಾಮಕಾರಿ ಕಾರ್ಯನಿರ್ವಹಣೆ ಹಾಗೂ ದ್ವಿಪಕ್ಷೀಯ ಸಂಶೋಧನಾ ಯೋಜನೆಗಳನ್ನು ಪೂರ್ಣಗೊಳಿಸಿರುವುದನ್ನು ಗಮನಿಸಿ, ಐಸಿಟಿ, ಕೃತಕಬುದ್ಧಿಮತ್ತೆ, ಮಷಿನ್ ಲರ್ನಿಂಗ್, ಕ್ಲೌಡ್ ಸರ್ವೀಸ್, ಜೈವಿಕ ತಂತ್ರಜ್ಞಾನ, ಹೊಸ ವಸ್ತುಗಳು, ಹಸಿರು ಶಕ್ತಿ ಮತ್ತು ಭೂ ವಿಜ್ಞಾನಗಳಂತಹ ಕ್ಷೇತ್ರಗಳಲ್ಲಿ ನಿಯಮಿತ ವಿನಿಮಯಗಳು ಮತ್ತು ಕಾರ್ಯಕ್ರಮಗಳನ್ನು ನಡೆಸಲು ಎರಡೂ ದೇಶಗಳು ಪ್ರೋತ್ಸಾಹಿಸಿವೆ. 2024 ರ ಜೂನ್ 20 ರಂದು ನಡೆದ ವೈಜ್ಞಾನಿಕ ಮತ್ತು ತಾಂತ್ರಿಕ ಸಹಕಾರ ಕುರಿತ ಜಂಟಿ ಕಾರ್ಯನಿರ್ವಹಣಾ ಸಮೂಹದ 8 ನೇ ಸಭೆಯನ್ನು ಉಭಯ ದೇಶಗಳು ಸ್ವಾಗತಿಸಿವೆ. 

ರಕ್ಷಣಾ ಸಹಕಾರ

ಭಾರತ ಮತ್ತು ಉಕ್ರೇನ್ ನಡುವಿನ ರಕ್ಷಣಾ ಸಹಕಾರದ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತಾ ಎರಡೂ ದೇಶಗಳ ನಾಯಕರು, ಹೊರಹೊಮ್ಮುತ್ತಿರುವ ವಲಯಗಳಲ್ಲಿ ಭಾರತದಲ್ಲಿ ತಯಾರಿಕೆ ಮತ್ತು ಸಹಕಾರಕ್ಕಾಗಿ ಜಂಟಿ ಸಹಯೋಗಗಳು ಮತ್ತು ಸಹಭಾಗಿತ್ವದೊಂದಿಗೆ ಎರಡೂ ದೇಶಗಳಲ್ಲಿನ ರಕ್ಷಣಾ ಘಟಕಗಳ ನಡುವೆ ಇನ್ನಷ್ಟು ಆಳವಾದ ಬಾಂಧವ್ಯವನ್ನು ಬೆಸೆಯಲು ಕಾರ್ಯನಿರ್ವಹಿಸಲು ತಮ್ಮ ಸಮ್ಮತಿ ನೀಡಿದರು. 2012 ರ ರಕ್ಷಣಾ ಸಹಕಾರ ಒಪ್ಪಂದದ ಅಡಿಯಲ್ಲಿ ಸ್ಥಾಪಿಸಲಾದ ಮಿಲಿಟರಿ-ತಾಂತ್ರಿಕ ಸಹಕಾರ ಕುರಿತಾದ ಭಾರತೀಯ-ಉಕ್ರೇನಿಯನ್ ಜಂಟಿ ಕಾರ್ಯನಿರ್ವಹಣಾ ಸಮೂಹದ 2 ನೇ ಸಭೆಯನ್ನು ಮುಂದಿನ ದಿನಗಳಲ್ಲಿ ಭಾರತದಲ್ಲಿ ನಡೆಸಲು ತೀರ್ಮಾನಿಸಲಾಯಿತು.

ಸಾಂಸ್ಕೃತಿಕ ಮತ್ತು ಜನರ ನಡುವಿನ ಸಂಬಂಧಗಳು

ಭಾರತ ಮತ್ತು ಉಕ್ರೇನ್ ನಡುವೆ ಸ್ನೇಹ ಬಾಂಧವ್ಯ ಬೆಸೆಯುವಲ್ಲಿ ಸಾಂಸ್ಕೃತಿಕ ಮೇಳೈಸುವಿಕೆಗಳು ಮತ್ತು ಜನರಿಂದ ಜನರ ನಡುವಿನ ಸಂಬಂಧಗಳ ಪ್ರಮುಖ ಪಾತ್ರವನ್ನು ಗುರುತಿಸಿ, ಸಾಂಸ್ಕೃತಿಕ ಸಹಕಾರದ ದ್ವಿಪಕ್ಷೀಯ ಕಾರ್ಯಕ್ರಮ ನಡೆಸುವ ಮತ್ತು ಹಬ್ಬಗಳನ್ನು ಆಚರಿಸುವ ತೀರ್ಮಾನವನ್ನು ಎರಡೂ ದೇಶಗಳು ಸ್ವಾಗತಿಸಿವೆ. ಭಾರತೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ ಕಾರ್ಯಕ್ರಮ ಮತ್ತು ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿಯ ಸಾಮಾನ್ಯ ಸಾಂಸ್ಕೃತಿಕ ಶಿಷ್ಯವೇತನ ಯೋಜನೆಯಡಿಯಲ್ಲಿ ನೀಡಲಾಗುವ ಶಿಷ್ಯವೇತನ ಸೇರಿದಂತೆ ಜನರ ನಡುವಿನ ಮತ್ತು ಸಾಂಸ್ಕೃತಿಕ ವಿನಿಮಯವನ್ನು ಉಳಿಸಿಕೊಳ್ಳುವ ಮತ್ತು ಇನ್ನಷ್ಟು ವಿಸ್ತರಿಸುವ ಅಗತ್ಯದ ಬಗ್ಗೆ ಉಭಯ ನಾಯಕರು ಒತ್ತಿ ಹೇಳಿದರು.

ಎರಡೂ ದೇಶಗಳ ನಾಗರಿಕರ ಶೈಕ್ಷಣಿಕ ಅಗತ್ಯಗಳನ್ನು ಪೂರೈಸಲು ಉನ್ನತ ಶಿಕ್ಷಣ ಸಂಸ್ಥೆಗಳ ಶಾಖೆಗಳನ್ನು ಪರಸ್ಪರ ತೆರೆಯುವ ಸಾಧ್ಯತೆಯನ್ನು ಅನ್ವೇಷಿಸಲು ಉಭಯ ನಾಯಕರು ಸಮ್ಮತಿಸಿದ್ದಾರೆ.

ಉಭಯ ದೇಶಗಳ ನಡುವಿನ ಸೌಹಾರ್ದ ಸಂಬಂಧಗಳು ಮತ್ತು ಜನರ-ಜನರ ಸಂಪರ್ಕಗಳ ಉತ್ತೇಜನಕ್ಕೆ ಉಕ್ರೇನ್‌ನಲ್ಲಿರುವ ಭಾರತೀಯ ಸಮುದಾಯದ ಕೊಡುಗೆಯನ್ನು ನಾಯಕರು ಪ್ರಶಂಸಿಸಿದರು. 

2022 ರ ಆರಂಭಿಕ ತಿಂಗಳುಗಳಲ್ಲಿ ಉಕ್ರೇನ್‌ನಿಂದ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಮತ್ತು ಉಕ್ರೇನ್ ನಲ್ಲಿದ್ದ ಭಾರತೀಯ ನಾಗರಿಕರು ಮತ್ತು ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಾತ್ರಿಪಡಿಸಲು ಉಕ್ರೇನ್ ನೀಡಿದ ಸಹಕಾರಕ್ಕೆ ಭಾರತ ತನ್ನ ಕೃತಜ್ಞತೆಯನ್ನು ಪುನರುಚ್ಚರಿಸಿದೆ. ಭಾರತೀಯ ಪ್ರಜೆಗಳು ಮತ್ತು ವಿದ್ಯಾರ್ಥಿಗಳಿಗೆ ಸುಲಭವಾಗಿ ವೀಸಾ ಮತ್ತು ನೋಂದಣಿ ಸೌಲಭ್ಯ ದೊರೆಯಲು ಉಕ್ರೇನ್ ನಿರಂತರ ಸಹಕಾರ ನೀಡುವಂತೆ ಭಾರತ ಕೋರಿದೆ. 

ಉಕ್ರೇನ್‌ಗೆ ನೀಡಿದ ಮಾನವೀಯ ನೆರವಿಗಾಗಿ ಉಕ್ರೇನ್ ಭಾರತಕ್ಕೆ ಕೃತಜ್ಞತೆ ಸಲ್ಲಿಸಿದೆ ಹಾಗೂ  ಭಾರತದ ಅನುದಾನದೊಂದಿಗೆ ಪರಸ್ಪರ ಒಪ್ಪಿದ ಯೋಜನೆಗಳಿಗೆ ವೇಗ ನೀಡಲು ಭಾರತ ಮತ್ತು ಉಕ್ರೇನ್ ನಡುವಿನ ಹೆಚ್ಚಿನ ಪ್ರಭಾವದ ಸಮುದಾಯ ಅಭಿವೃದ್ಧಿ ಯೋಜನೆಗಳ ತಿಳುವಳಿಕೆ ಒಪ್ಪಂದದ ತೀರ್ಮಾನವನ್ನು ಸ್ವಾಗತಿಸಿದೆ.

ಉಕ್ರೇನ್ನ ಪುನರ್ನಿರ್ಮಾಣ ಮತ್ತು ಚೇತರಿಕೆಯಲ್ಲಿ ಸೂಕ್ತ ರೀತಿಯಲ್ಲಿ ಭಾರತೀಯ ಕಂಪನಿಗಳ ಒಳಗೊಳ್ಳುವಿಕೆಯ ಸಾಧ್ಯತೆಯನ್ನು ಅನ್ವೇಷಿಸಲು ಎರಡೂ ದೇಶಗಳು ಒಪ್ಪಿಕೊಂಡಿವೆ.

ಉಭಯ ನಾಯಕರು ಒಕ್ಕೊರಲಿನಿಂದ ಭಯೋತ್ಪಾದನೆಯನ್ನು ಖಂಡಿಸಿದರು. ಅಂತರರಾಷ್ಟ್ರೀಯ ಕಾನೂನು ಮತ್ತು ಯುಎನ್ ಚಾರ್ಟರ್ ಆಧಾರದ ಮೇಲೆ ಈ ವಲಯದಲ್ಲಿ ಸಹಕಾರ ವೃದ್ಧಿಯ ಪ್ರಾಮುಖ್ಯತೆಯನ್ನು ಮನಗಂಡ ಅವರು ಎಲ್ಲಾ ವಿಧದ ಭಯೋತ್ಪಾದನೆ ಮತ್ತು ಉಗ್ರವಾದದ ವಿರುದ್ಧ ರಾಜಿಯಿಲ್ಲದ ಹೋರಾಟಕ್ಕೆ ಕರೆ ನೀಡಿದರು.

ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯ ಸಮಸ್ಯೆಗಳನ್ನು ಎದುರಿಸಲು ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಸಮರ್ಥವಾಗಿ ಎದುರಿಸಲು ಹಾಗೂ ಸಮಕಾಲೀನ ಜಾಗತಿಕ ವಾಸ್ತವಗಳನ್ನು ಪ್ರತಿಬಿಂಬಿಸಲು ವಿಶ್ವ ಸಂಸ್ಥೆ ಭದ್ರತಾ ಮಂಡಳಿಯಲ್ಲಿ ಸಮಗ್ರ ಸುಧಾರಣೆಗೆ ಎರಡೂ ದೇಶಗಳು ಕರೆ ನೀಡಿವೆ.  ಸುಧಾರಿತ ಮತ್ತು ವಿಸ್ತರಿತ ವಿಶ್ವ ಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತದ ಶಾಶ್ವತ ಸದಸ್ಯತ್ವಕ್ಕೆ ಉಕ್ರೇನ್ ತನ್ನ ಬೆಂಬಲವನ್ನು ಪುನರುಚ್ಚರಿಸಿದೆ.

ಅಂತಾರಾಷ್ಟ್ರೀಯ ಸೌರ ಮೈತ್ರಿ (ಐಎಸ್ಎ) ಗೆ ಉಕ್ರೇನ್ ಸೇರ್ಪಡೆಯನ್ನು ಭಾರತ ಎದುರು ನೋಡುತ್ತಿದೆ. 

ದ್ವಿಪಕ್ಷೀಯ ಬಾಂಧವ್ಯದ ಎಲ್ಲಾ ವಿಷಯಗಳ ಕುರಿತು ನಾಯಕರ ಸಮಗ್ರ ಚರ್ಚೆಗಳು ಹಾಗೂ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಅಭಿಪ್ರಾಯ ವಿನಿಮಯಗಳು ಭಾರತ-ಉಕ್ರೇನ್ ನಡುವಿನ ಪರಸ್ಪರ ಅರ್ಥೈಸುವಿಕೆ ಮತ್ತು ಆಳವಾದ ಬಾಂಧವ್ಯವನ್ನು ಪ್ರತಿಬಿಂಬಿಸುತ್ತದೆ.

ಉಕ್ರೇನ್ ಭೇಟಿಯ ಸಂದರ್ಭದಲ್ಲಿ ತಮಗೆ ಮತ್ತು ತಮ್ಮೊಂದಿಗಿನ ನಿಯೋಗಕ್ಕೆ ನೀಡಿದ ಆತ್ಮೀಯ ಆತಿಥ್ಯಕ್ಕಾಗಿ ಅಧ್ಯಕ್ಷ ಝೆಲೆನ್ಸ್ಕಿ ಅವರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಧನ್ಯವಾದ ತಿಳಿಸಿ ಪರಸ್ಪರ ಅನುಕೂಲಕರ ಸಮಯದಲ್ಲಿ ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದರು.

 

*****



(Release ID: 2048564) Visitor Counter : 7