ಪ್ರಧಾನ ಮಂತ್ರಿಯವರ ಕಛೇರಿ
"ಕಾರ್ಯತಂತ್ರ ಸಹಭಾಗಿತ್ವದ ಸ್ಥಾಪನೆ" ಕುರಿತು ಭಾರತ-ಪೋಲೆಂಡ್ ಜಂಟಿ ಹೇಳಿಕೆ
Posted On:
22 AUG 2024 8:21PM by PIB Bengaluru
ಪೋಲೆಂಡ್ ಪ್ರಧಾನ ಮಂತ್ರಿ ಗೌರವಾನ್ವಿತ ಶ್ರೀ ಡೊನಾಲ್ಡ್ ಟಸ್ಕ್ ಅವರ ಆಹ್ವಾನದ ಮೇರೆಗೆ, ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024 ಆಗಸ್ಟ್ 21-22ರಂದು ಪೋಲೆಂಡ್‌ಗೆ ಅಧಿಕೃತ ಭೇಟಿ ನೀಡಿದರು. ಎರಡೂ ರಾಷ್ಟ್ರಗಳು ರಾಜತಾಂತ್ರಿಕ ಸಂಬಂಧಗಳ 70ನೇ ವಾರ್ಷಿಕೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲೇ ಪ್ರಧಾನಿ ಮೋದಿ ಅವರು ಈ ಐತಿಹಾಸಿಕ ಭೇಟಿ ನೀಡಿದ್ದಾರೆ.
ಉಭಯ ರಾಷ್ಟ್ರಗಳ ದೀರ್ಘಕಾಲೀನ ಬಾಂಧವ್ಯವನ್ನು ಗುರುತಿಸಿ, ಎರಡೂ ದೇಶಗಳು ಮತ್ತು ಜನರ ನಡುವಿನ ಆಳವಾಗಿ ಬೇರೂರಿರುವ ಸ್ನೇಹ ಸಂಬಂಧಗಳನ್ನು ಪುನರುಚ್ಚರಿಸುವುದು ಮತ್ತು ಸಂಬಂಧಗಳ ಸಂಪೂರ್ಣ ಸಾಮರ್ಥ್ಯ ಅರಿತುಕೊಳ್ಳುವ ಬದ್ಧತೆಯ ಅಡಿ, ಉಭಯ ನಾಯಕರು ಭಾರತ-ಪೋಲೆಂಡ್ ದ್ವಿಪಕ್ಷೀಯ ಸಂಬಂಧಗಳನ್ನು "ಕಾರ್ಯತಂತ್ರ ಪಾಲುದಾರಿಕೆ" ಹಂತಕ್ಕೆ ಏರಿಸಲು ನಿರ್ಧರಿಸಿದರು.
ಪ್ರಜಾಪ್ರಭುತ್ವ, ಸ್ವಾತಂತ್ರ್ಯ ಮತ್ತು ನಿಯಮಾಧಾರಿತ ಅಂತಾರಾಷ್ಟ್ರೀಯ ಆದೇಶ ಕ್ರಮದ ಹಂಚಿತ ಮೌಲ್ಯಗಳು, ಐತಿಹಾಸಿಕ ಸಂಬಂಧಗಳ ಜತೆಗೆ ಬೆಳೆಯುತ್ತಿರುವ ದ್ವಿಪಕ್ಷೀಯ ಪಾಲುದಾರಿಕೆಯು ಕೇಂದ್ರ ಬಿಂದುವಾಗಿದೆ. ಅಲ್ಲದೆ, ಹೆಚ್ಚಿನ ಸ್ಥಿರ, ಸಮೃದ್ಧ ಮತ್ತು ಸುಸ್ಥಿರ ಜಗತ್ತಿಗೆ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಸಹಕಾರವನ್ನು ಆಳಗೊಳಿಸುವ ತಮ್ಮ ಬದ್ಧತೆಯನ್ನು ಅವರು ಪುನರುಚ್ಚರಿಸಿದರು.
ದ್ವಿಪಕ್ಷೀಯ ರಾಜಕೀಯ ಸಂವಾದ ಮತ್ತು ಮಾತುಕತೆ ಬಲಪಡಿಸಲು ಮತ್ತು ಪರಸ್ಪರ ಪ್ರಯೋಜನಕಾರಿ ಉಪಕ್ರಮಗಳನ್ನು ಅಭಿವೃದ್ಧಿಪಡಿಸಲು ನಿಯಮಿತ ಉನ್ನತ ಮಟ್ಟದ ಸಂಪರ್ಕಗಳನ್ನು ಕಾಪಾಡಿಕೊಳ್ಳುವ ಅಗತ್ಯಕ್ಕೆ ಇಬ್ಬರೂ ನಾಯಕರು ಒತ್ತು ನೀಡಿದರು.
ದ್ವಿಪಕ್ಷೀಯ ಆರ್ಥಿಕ ಸಂಬಂಧಗಳನ್ನು ಮತ್ತಷ್ಟು ತೀವ್ರಗೊಳಿಸಲು, ವ್ಯಾಪಾರ ಮತ್ತು ಹೂಡಿಕೆ ಉತ್ತೇಜಿಸಲು, ಸಹಕಾರದ ಹೊಸ ಪರಸ್ಪರ ಲಾಭದಾಯಕ ಕ್ಷೇತ್ರಗಳನ್ನು ಅನ್ವೇಷಿಸಲು ನಾಯಕರು ಒಪ್ಪಿಕೊಂಡರು. ಈ ನಿಟ್ಟಿನಲ್ಲಿ, ಆರ್ಥಿಕ ಸಹಕಾರಕ್ಕಾಗಿ ಜಂಟಿ ಆಯೋಗವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಅವರು ಒಪ್ಪಿಕೊಂಡರು. ದ್ವಿಪಕ್ಷೀಯ ವ್ಯಾಪಾರ ಸಮತೋಲನಗೊಳಿಸಲು ಮತ್ತು ವ್ಯಾಪಾರ ವ್ಯಾಪ್ತಿ ವಿಸ್ತರಿಸಲು ಪ್ರಯತ್ನಿಸಬೇಕು ಎಂದು ನಾಯಕರು ಒಪ್ಪಿಕೊಂಡರು.
ತಂತ್ರಜ್ಞಾನ, ಕೃಷಿ, ಸಂಪರ್ಕ, ಗಣಿಗಾರಿಕೆ, ಇಂಧನ ಮತ್ತು ಪರಿಸರ ಕ್ಷೇತ್ರಗಳಲ್ಲಿ ಆರ್ಥಿಕ ಸಹಕಾರ ವಿಸ್ತರಿಸುವ ಪ್ರಾಮುಖ್ಯತೆಯನ್ನು ಇಬ್ಬರೂ ನಾಯಕರು ಒಪ್ಪಿಕೊಂಡರು.
ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ಡಿಜಿಟಲೀಕರಣದ ನಿರ್ಣಾಯಕ ಪಾತ್ರವನ್ನು ಅಂಗೀಕರಿಸಿದ ನಾಯಕರು, ಎರಡೂ ದೇಶಗಳ ನಡುವೆ ಸ್ಥಿರತೆ ಮತ್ತು ವಿಶ್ವಾಸ ಹೆಚ್ಚಿಸಲು ಸೈಬರ್ ಭದ್ರತೆ ಸೇರಿದಂತೆ ಈ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರ ಹೆಚ್ಚಿಸಲು ಇಬ್ಬರೂ ಸಮ್ಮತಿ ಸೂಚಿಸಿದರು.
ಎರಡು ದೇಶಗಳು ಮತ್ತು ಆಯಾ ಪ್ರದೇಶಗಳ ನಡುವಿನ ಸಂಪರ್ಕದ ಮಹತ್ವಕ್ಕೆ ಒತ್ತು ನೀಡಿದ ಉಭಯ ನಾಯಕರು, ಉಭಯ ದೇಶಗಳ ನಡುವೆ ನೇರ ವಿಮಾನ ಸಂಪರ್ಕ ಆರಂಭವನ್ನು ಸ್ವಾಗತಿಸಿದರು. ಎರಡೂ ದೇಶಗಳ ಹೊಸ ಸ್ಥಳಗಳಿಗೆ ನೇರ ವಿಮಾನ ಸಂಪರ್ಕ ಮತ್ತಷ್ಟು ಹೆಚ್ಚಿಸುವ ಅಗತ್ಯವಿದೆ. ಜತೆಗೆ, ಕಡಲ ಸಹಕಾರ ಬಲಪಡಿಸುವ ಪ್ರಾಮುಖ್ಯತೆ ಮತ್ತು ಮೂಲಸೌಕರ್ಯ ಕಾರಿಡಾರ್‌ಗಳ ಹಕ್ಕುಸ್ವಾಮ್ಯ ಅಗತ್ಯತೆಗೆ ಒತ್ತು ನೀಡಿದರು.
ವಿಶ್ವದ ಎರಡು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಾದ ಐರೋಪ್ಯ ಒಕ್ಕೂಟ ಮತ್ತು ಭಾರತವು ಬಹು-ಧ್ರುವ ಜಗತ್ತಿನಲ್ಲಿ ಭದ್ರತೆ, ಸಮೃದ್ಧಿ ಮತ್ತು ಸುಸ್ಥಿರ ಅಭಿವೃದ್ಧಿ ಖಾತ್ರಿಪಡಿಸುವಲ್ಲಿ ಸಾಮಾನ್ಯ ಆಸಕ್ತಿಯನ್ನು ಹೊಂದಿವೆ. ಭಾರತ-ಇಯು ಕಾರ್ಯತಂತ್ರ ಸಹಭಾಗಿತ್ವವನ್ನು ಗಾಢವಾಗಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಇದು ಎರಡೂ ಕಡೆಗಳಿಗೆ ಪ್ರಯೋಜನ ನೀಡುತ್ತದೆ, ಆದರೆ ಜಾಗತಿಕವಾಗಿ ದೂರಗಾಮಿ ಸಕಾರಾತ್ಮಕ ಪ್ರಭಾವ ಬೀರುತ್ತದೆ ಎಂದರು.
ವಿಶ್ವಸಂಸ್ಥೆಯ ಸನ್ನದಿನೊಂದಿಗೆ ಶಾಂತಿ ಮತ್ತು ನಿಯಮಾಧಾರಿತ ಅಂತಾರಾಷ್ಟ್ರೀಯ ಆದೇಶ ಕ್ರಮಗಳ ಪಾಲನೆಯ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದರು. ವಿಶ್ವದ ವಿವಿಧ ಪ್ರದೇಶಗಳಲ್ಲಿ ಗಂಭೀರ ಸಂಘರ್ಷಗಳು ಮತ್ತು ಉದ್ವಿಗ್ನತೆಗಳ ಸಂದರ್ಭದಲ್ಲಿ ಅದರ ಬಹು ಆಯಾಮಗಳಲ್ಲಿ ಭದ್ರತಾ ಕ್ಷೇತ್ರದಲ್ಲಿ ಸಹಕಾರ ಹೊಂದುವುದು ಅತ್ಯಗತ್ಯ ಎಂದು ಒಪ್ಪಿಕೊಂಡರು. ನಿಯಮಾಧಾರಿತ ಅಂತಾರಾಷ್ಟ್ರೀಯ ಆದೇಶ ಕ್ರಮದ ಗೌರವ ಉತ್ತೇಜಿಸಲು ಮತ್ತು ಜಾಗತಿಕ ಶಾಂತಿ, ಸ್ಥಿರತೆ ಮತ್ತು ಭದ್ರತೆ ಕಾಪಾಡಿಕೊಳ್ಳಲು ಬಹುಪಕ್ಷೀಯ ವೇದಿಕೆಗಳಲ್ಲಿ ಸಹಭಾಗಿತ್ವ ಹೆಚ್ಚಿಸಲು ಅವರು ನಿರ್ಧರಿಸಿದರು.
ರಕ್ಷಣಾ ವಲಯದಲ್ಲಿ ಸಹಕಾರ ಬಲಪಡಿಸುವ ಮತ್ತು ಗಾಢವಾಗಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ, ರಕ್ಷಣಾ ಸಹಕಾರಕ್ಕಾಗಿ ಜಂಟಿ ಕಾರ್ಯನಿರತ ಗುಂಪು ಸೇರಿದಂತೆ ಅಸ್ತಿತ್ವದಲ್ಲಿರುವ ದ್ವಿಪಕ್ಷೀಯ ಕಾರ್ಯವಿಧಾನಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ನಾಯಕರು ಒಪ್ಪಿಕೊಂಡರು.
ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದ ಭಯಾನಕ ಮತ್ತು ದುರಂತ ಮಾನವೀಯ ಪರಿಣಾಮಗಳ ಬಗ್ಗೆ ಉಭಯ ನಾಯಕರು ತೀವ್ರ ಕಳವಳ ವ್ಯಕ್ತಪಡಿಸಿದರು. ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆ ಗೌರವಿಸುವುದು ಸೇರಿದಂತೆ ವಿಶ್ವಸಂಸ್ಥೆ ಸನ್ನದಿನ(ಯುಎನ್ ಚಾರ್ಟರ್) ಉದ್ದೇಶಗಳು ಮತ್ತು ತತ್ವಗಳಿಗೆ ಅನುಗುಣವಾಗಿ ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಸಮಗ್ರ, ನ್ಯಾಯಯುತ ಮತ್ತು ಶಾಶ್ವತವಾದ ಶಾಂತಿ ಕಾಪಾಡುವ ಅಗತ್ಯವಿದೆ. ಜಾಗತಿಕ ಆಹಾರ ಮತ್ತು ಇಂಧನ ಭದ್ರತೆಗೆ ಸಂಬಂಧಿಸಿದಂತೆ ಉಕ್ರೇನ್ ಯುದ್ಧದ ನಕಾರಾತ್ಮಕ ಪರಿಣಾಮಗಳನ್ನು ಗಮನಿಸಿದ ಅವರು, ವಿಶೇಷವಾಗಿ ಜಾಗತಿಕ ದಕ್ಷಿಣಕ್ಕೆ ವ್ಯತಿರಿಕ್ತ ಪರಿಣಾಮಗಳನ್ನು ಸೃಷ್ಟಿಸಿದೆ. ಈ ಯುದ್ಧದ ಸಂದರ್ಭದಲ್ಲಿ, ಪರಮಾಣು ಶಸ್ತ್ರಾಸ್ತ್ರಗಳ ಬಳಕೆ ಅಥವಾ ಬಳಕೆಯ ಬೆದರಿಕೆ ಸ್ವೀಕಾರಾರ್ಹವಲ್ಲ ಎಂಬ ಅಭಿಪ್ರಾಯ ಹಂಚಿಕೊಂಡರು. ಅಂತಾರಾಷ್ಟ್ರೀಯ ಕಾನೂನು ಎತ್ತಿಹಿಡಿಯುವ ಪ್ರಾಮುಖ್ಯತೆ ಇದೆ. ವಿಶ್ವಸಂಸ್ಥೆಯ ನಾಗರೀಕ ಸನ್ನದಿಗೆ(ಯುಎನ್ ಚಾರ್ಟರ್) ಅನುಗುಣವಾಗಿ, ಎಲ್ಲಾ ದೇಶಗಳು ಯಾವುದೇ ದೇಶದ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವ ಅಥವಾ ರಾಜಕೀಯ ಸ್ವಾತಂತ್ರ್ಯದ ವಿರುದ್ಧ ಬಲದ ಬೆದರಿಕೆ ಅಥವಾ ಬಳಕೆಯಿಂದ ದೂರವಿರಬೇಕು ಎಂದು ಪುನರುಚ್ಚರಿಸಿದರು.
ಭಯೋತ್ಪಾದನೆಯ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳಲ್ಲಿ ನಿಸ್ಸಂದಿಗ್ಧವಾಗಿ ಖಂಡಿಸಬೇಕು. ಯಾವುದೇ ದೇಶವು ಭಯೋತ್ಪಾದಕ ಕೃತ್ಯಗಳಿಗೆ ಹಣಕಾಸು, ಯೋಜನೆ, ಬೆಂಬಲ ಅಥವಾ ಕೃತ್ಯ ಎಸಗುವವರಿಗೆ ಸುರಕ್ಷಿತ ಆಶ್ರಯ ನೀಡಬಾರದು. ವಿಶ್ವಸಂಸ್ಥೆ ಭದ್ರತಾ ಮಂಡಳಿ, ವಿಶ್ವಸಂಸ್ಥೆ ಸಾಮಾನ್ಯ ಸಭೆ ಮತ್ತು ವಿಶ್ವಸಂಸ್ಥೆ ಜಾಗತಿಕ ಭಯೋತ್ಪಾದನಾ ನಿಗ್ರಹ ಕಾರ್ಯತಂತ್ರದ ಅನುಷ್ಠಾನ ಸಂಬಂಧಿತ ನಿರ್ಣಯಗಳ ದೃಢವಾದ ಅನುಷ್ಠಾನ ಅಗತ್ಯವಿದೆ. ಅಂತಾರಾಷ್ಟ್ರೀಯ ಭಯೋತ್ಪಾದನೆಯ ಸಮಗ್ರ ಒಪ್ಪಂದ(ಸಿಸಿಐಟಿ)ದ ತುರ್ತು ಅಳವಡಿಕೆ ಆಗಬೇಕು ಎಂದು ಇಬ್ಬರೂ ನಾಯಕರು ಒತ್ತು ನೀಡಿದರು.
ಸಾಗರ ಕಾನೂನಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಒಡಂಬಡಿಕೆ(ಯುಎನ್ ಸಿಎಲ್ಒಎಸ್)ಯಲ್ಲಿ ಪ್ರತಿಬಿಂಬಿತವಾಗಿರುವ ಅಂತಾರಾಷ್ಟ್ರೀಯ ಸಾಗರ ಕಾನೂನಿಗೆ ಅನುಸಾರವಾಗಿ ಇಂಡೋ-ಪೆಸಿಫಿಕ್ ವಲಯದಲ್ಲಿ ಮುಕ್ತ, ತೆರೆದ ಮತ್ತು ನಿಯಮ-ಆಧಾರಿತ ಮಾರ್ಗಸೂಚಿಗಳ ಅನುಸರಣೆಯೊಂದಿಗೆ, ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ಸಂಚಾರ(ನ್ಯಾವಿಗೇಷನ್) ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಗೌರವಿಸಿ, ಪ್ರಯೋಜನ ಪಡೆಯುವ ತಮ್ಮ ಬದ್ಧತೆಯನ್ನು ಎರಡೂ ಕಡೆಯವರು ಪುನರುಚ್ಚರಿಸಿದರು. ಅಲ್ಲದೆ, ಕಡಲ ಭದ್ರತೆ ಮತ್ತು ಅಂತಾರಾಷ್ಟ್ರೀಯ ಶಾಂತಿ ಮತ್ತು ಸ್ಥಿರತೆ ಕಾಪಾಡಲು ಇಬ್ಬರೂ ನಾಯಕರು ಒಪ್ಪಿಕೊಂಡರು.
ಹವಾಮಾನ ಬದಲಾವಣೆಯಿಂದ ಉಂಟಾದ ಮಹತ್ವದ ಸವಾಲುಗಳನ್ನು ಗುರುತಿಸಿದ ಇಬ್ಬರೂ ನಾಯಕರು, ಹವಾಮಾನ ಕ್ರಿಯೆ ಉಪಕ್ರಮಗಳಲ್ಲಿ ಸಹಕಾರ ಹೊಂದುವ ಪ್ರಾಮುಖ್ಯತೆಯನ್ನು ಒಪ್ಪಿಕೊಂಡರು. ಪೋಲೆಂಡ್‌ನ ಇಂಟರ್‌ನ್ಯಾಶನಲ್ ಸೋಲಾರ್ ಅಲೈಯನ್ಸ್(ಐಎಸ್ಎ) ಮತ್ತು ಪ್ರಕೃತಿ ವಿಕೋಪ ಸ್ಪಂದನಾ ಮೂಲಸೌಕರ್ಯ ಮೈತ್ರಿಕೂಟ(ಸಿಡಿಆರ್ ಐ) ಸದಸ್ಯತ್ವ ಹೊಂದುವಂತೆ ಭಾರತವು ಪೋಲೆಂಡ್ ಅನ್ನು ಪ್ರೋತ್ಸಾಹಿಸಿತು.
ಸಂಸದೀಯ ಸಂಪರ್ಕಗಳ ಪಾತ್ರ ಶ್ಲಾಘಿಸಿದ ನಾಯಕರು, ತಮ್ಮ ಶಾಸನ ಸಭೆಗಳ ನಡುವಿನ ವಿನಿಮಯ ಮತ್ತು ಸಹಕಾರ ವಿಸ್ತರಿಸುವುದರಿಂದ ದ್ವಿಪಕ್ಷೀಯ ಸಂಬಂಧಗಳು ಮತ್ತು ಪರಸ್ಪರ ತಿಳುವಳಿಕೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ಒಪ್ಪಿಕೊಂಡರು.
ಜನರಿಂದ ಜನರು ಹೊಂದಿರುವ ವಿಶೇಷ ದೀರ್ಘಕಾಲೀನ ಸಂಬಂಧಗಳನ್ನು ಗಮನಿಸಿದ ಪ್ರಧಾನಿ ಮೋದಿ, ಅವುಗಳನ್ನು ಮತ್ತಷ್ಟು ಬಲಪಡಿಸಲು ಒಪ್ಪಿಕೊಂಡರು. ಸಂಸ್ಕೃತಿ, ಶಿಕ್ಷಣ, ವಿಜ್ಞಾನ, ಸಂಶೋಧನೆ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸಲು ಅವರು ಒಪ್ಪಿಕೊಂಡರು. ಶೈಕ್ಷಣಿಕ ಸಂಸ್ಥೆಗಳ ನಡುವೆ ಭವಿಷ್ಯದ-ಆಧಾರಿತ ಪಾಲುದಾರಿಕೆಗಳನ್ನು ಸ್ಥಾಪಿಸಲು ಹೆಚ್ಚುವರಿ ಕ್ರಮಗಳನ್ನು ಉತ್ತೇಜಿಸುವ ಮತ್ತು ಪ್ರೋತ್ಸಾಹಿಸುವ ಪ್ರಯತ್ನಗಳನ್ನು ಅವರು ಸ್ವಾಗತಿಸಿದರು.
ಆರ್ಥಿಕ ಮತ್ತು ವ್ಯಾಪಾರ ಅವಕಾಶಗಳನ್ನು ಚಾಲನೆ ಮಾಡುವಲ್ಲಿ ಮತ್ತು ಎರಡೂ ದೇಶಗಳ ಜನರ ನಡುವಿನ ತಿಳಿವಳಿಕೆ ಹೆಚ್ಚಿಸುವಲ್ಲಿ ಪ್ರವಾಸೋದ್ಯಮದ ಪಾತ್ರವನ್ನು ಉಭಯ ನಾಯಕರು ಒಪ್ಪಿಕೊಂಡರು.
ಕಾರ್ಯತಂತ್ರದ ಸಹಭಾಗಿತ್ವ ಕಾರ್ಯಗತಗೊಳಿಸಲು, ಎರಡೂ ಕಡೆಯವರು 2024-2028ರ ನಡುವಿನ 5 ವರ್ಷಗಳ ಜಂಟಿ ಕ್ರಿಯಾಯೋಜನೆ ರೂಪಿಸಲು ಒಪ್ಪಿಕೊಂಡರು.
ನನಗೆ ಮತ್ತು ನನ್ನ ನಿಯೋಗಕ್ಕೆ ನೀಡಿದ ಗೌರವಪೂರ್ಣ ಆತಿಥ್ಯಕ್ಕಾಗಿ ಪ್ರಧಾನಿ ಟಸ್ಕ್ ಮತ್ತು ಪೋಲೆಂಡ್ ಜನತೆಗೆ ಪ್ರಧಾನಿ ಮೋದಿ ಧನ್ಯವಾದ ಅರ್ಪಿಸಿದರು, ಭಾರತಕ್ಕೆ ಭೇಟಿ ನೀಡುವಂತೆ ಅವರು ಪ್ರಧಾನಿ ಟಸ್ಕ್ ಅವರನ್ನು ಆಹ್ವಾನಿಸಿದರು.
*****
(Release ID: 2048052)
Visitor Counter : 49
Read this release in:
Tamil
,
Telugu
,
Urdu
,
English
,
Marathi
,
Hindi
,
Bengali
,
Manipuri
,
Punjabi
,
Gujarati
,
Malayalam