ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
azadi ka amrit mahotsav

ಮಹಿಳೆಯರ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಬಲೀಕರಣಕ್ಕೆ ಅಡ್ಡಿಯಾಗುವ ಬಹುಮುಖಿ ಸವಾಲುಗಳನ್ನು ನಿಭಾಯಿಸಲು ಸರ್ಕಾರವು ಜೀವನ ಚಕ್ರದ ಆಧಾರದ ಮೇಲೆ ಸಮಗ್ರ ವಿಧಾನವನ್ನು ಅಳವಡಿಸಿಕೊಂಡಿದೆ

Posted On: 09 AUG 2024 4:47PM by PIB Bengaluru

ಭಾರತವು ಮಹಿಳಾ ಅಭಿವೃದ್ಧಿಯಿಂದ ಮಹಿಳಾ ನೇತೃತ್ವದ ಅಭಿವೃದ್ಧಿಗೆ  ಕ್ಷಿಪ್ರ  ಸ್ಥಿತ್ಯಂತರಕ್ಕೆ ಸಾಕ್ಷಿಯಾಗುತ್ತಿದೆ. ನವ ಭಾರತದ ದೃಷ್ಟಿಯೊಂದಿಗೆ ಮಹಿಳೆಯರು ತ್ವರಿತ ಮತ್ತು ಸುಸ್ಥಿರ ರಾಷ್ಟ್ರೀಯ ಅಭಿವೃದ್ಧಿಗೆ ಪ್ರಮುಖ ಕೊಡುಗೆದಾರರಾಗಿದ್ದಾರೆ. ಮಹಿಳೆಯರ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಬಲೀಕರಣವನ್ನು ಸಾಧಿಸುವ ನಿಟ್ಟಿನಲ್ಲಿ ಸರ್ಕಾರವು ಜೀವನ ಚಕ್ರದ ಪ್ರತಿಯೊಂದು ಹಂತದಲ್ಲೂ ಸಮಗ್ರವಾದ ಕ್ರಮಗಳನ್ನು ಜಾರಿಗೊಳಿಸಿದೆ.

ಮಹಿಳಾ ಸಬಲೀಕರಣದ ದಿಕ್ಕಿನಲ್ಲಿ ದೇಶವು ಕೈಗೊಂಡ ಅತ್ಯಂತ ದೊಡ್ಡ ಹೆಜ್ಜೆಯೆಂದರೆ ರಾಷ್ಟ್ರೀಯ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯವನ್ನು ಒದಗಿಸಿದ್ದು. "ನಾರಿ ಶಕ್ತಿ ವಂದನ ಅಧಿನಿಯಮ, 2023" (ಸಂವಿಧಾನದ ನೂರು ಮತ್ತು ಆರನೇ ತಿದ್ದುಪಡಿ) ಕಾಯ್ದೆ, 2023ರ ಮೂಲಕ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ (ದೆಹಲಿ ವಿಧಾನಸಭೆ ಸೇರಿದಂತೆ) ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಕಾಯ್ದಿರಿಸುವ ಮೂಲಕ ಈ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇಡಲಾಗಿದೆ.

ಮಹಿಳೆಯರ ಉದ್ಯೋಗವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ, ವೇತನ ಸಂಹಿತೆ - 2019, ಕೈಗಾರಿಕಾ ಸಂಬಂಧ  ಸಂಹಿತೆ  2020, ವೃತ್ತಿಪರ ಸುರಕ್ಷತೆ, ಆರೋಗ್ಯ ಮತ್ತು ಕಾರ್ಮಿಕ ಪರಿಸ್ಥಿತಿ ಸಂಹಿತೆ 2020 ಮತ್ತು ಸಾಮಾಜಿಕ ಭದ್ರತೆಯ ಸಂಹಿತೆ 2020 ಸೇರಿದಂತೆ ಹಲವಾರು ನಿಬಂಧನೆಗಳನ್ನು ಕಾರ್ಮಿಕ ಸಂಹಿತೆಗಳಲ್ಲಿ ಸೇರಿಸಲಾಗಿದೆ. ಇದರಿಂದ ಮಹಿಳಾ ಕಾರ್ಮಿಕರಿಗೆ ಅನುಕೂಲಕರ ಕೆಲಸದ ವಾತಾವರಣ ನಿರ್ಮಾಣವಾಗಲಿದೆ.

ಮಹಿಳೆಯರನ್ನು ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತಶಾಸ್ತ್ರ (STEM) ಕ್ಷೇತ್ರಗಳಲ್ಲಿ ಹೆಚ್ಚು ಭಾಗವಹಿಸುವಂತೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಹಿಳಾ ವಿಜ್ಞಾನಿ ಯೋಜನೆ, ವಿಜ್ಞಾನ ಜ್ಯೋತಿ ಯೋಜನೆ, ವಿದೇಶಿ ಸಹೋದ್ಯೋಗಿ ಯೋಜನೆ ಮುಂತಾದ ಹಲವು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮಹಿಳೆಯರ ಸುರಕ್ಷತೆ, ಭದ್ರತೆ ಮತ್ತು ಸಬಲೀಕರಣಕ್ಕಾಗಿ "ಮಿಷನ್ ಶಕ್ತಿ" ಎಂಬ ಅಂಬ್ರೆಲಾ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿಯಲ್ಲಿ , ದೌರ್ಜನ್ಯವನ್ನು ಎದುರಿಸುತ್ತಿರುವ ಮಹಿಳೆಯರಿಗೆ ಅಥವಾ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಸಮಗ್ರ ಸಹಾಯ ಮತ್ತು ಬೆಂಬಲವನ್ನು ನೀಡಲು ಸರ್ಕಾರವು ದೇಶಾದ್ಯಂತ ಒನ್ ಸ್ಟಾಪ್ ಕೇಂದ್ರಗಳನ್ನು ಸ್ಥಾಪಿಸಿದೆ. ತುರ್ತು ಮತ್ತು ತುರ್ತಲ್ಲದ ಸಂದರ್ಭಗಳಲ್ಲಿ ಸಹಾಯದ ಅಗತ್ಯವಿರುವ ಮಹಿಳೆಯರಿಗೆ ಸೂಕ್ತ ಅಧಿಕಾರಿಗಳೊಂದಿಗೆ ಸಂಪರ್ಕ ಕಲ್ಪಿಸುವ 24x7 ಮಹಿಳಾ ಹೆಲ್ಪ್ಲೈನ್ಗೆ 181 ಸಂಕ್ಷಿಪ್ತ ಸಂಖ್ಯೆಯನ್ನು ನೀಡಲಾಗಿದೆ. ಅಲ್ಲದೆ ಇದು ವಿವಿಧ ಸರ್ಕಾರಿ ಯೋಜನೆಗಳು, ನೀತಿಗಳು ಮತ್ತು ಕಾರ್ಯಕ್ರಮಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸಹ ಒದಗಿಸುತ್ತದೆ.  ಇದರಿಂದ ಅವರು ಅವುಗಳ ಲಾಭವನ್ನು ಪಡೆಯಬಹುದು. ಈ ಯೋಜನೆಯ ಬೇಟಿ ಬಚಾವೋ ಬೇಟಿ ಪಡಾವೋ (BBBP) ಘಟಕವು ಲಿಂಗ ಆಧಾರಿತ ಭ್ರೂಣ ಆಯ್ಕೆಯನ್ನು ತಡೆಗಟ್ಟುವುದರ ಜೊತೆಗೆ ಲಿಂಗ ಸಮಾನತೆ ಮತ್ತು ಬಾಲ್ಯ ವಿವಾಹದ ವಿರುದ್ಧ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಶಕ್ತಿ ಸದನ್ ಘಟಕವು ತೊಂದರೆ, ನಿರಾಶ್ರಿತ ಮತ್ತು ಅನಾಹುತಗಳಿಗೆ ಒಳಗಾದ ಮಹಿಳೆಯರು, ವಿಶೇಷವಾಗಿ ಮಾನವ ಕಳ್ಳಸಾಗಾಣಿಕೆಗೆ ಬಲಿಪಶುಗಳಿಗೆ ಸಹಾಯ ಮತ್ತು ಬೆಂಬಲ ನೀಡುತ್ತದೆ. ಸಖಿ ನಿವಾಸ್ ಘಟಕವು, ಉದ್ಯೋಗ ಮತ್ತು ಸ್ವಯಂ ಉದ್ಯೋಗಕ್ಕಾಗಿ ಉನ್ನತ ಶಿಕ್ಷಣ ಮತ್ತು ತರಬೇತಿಯನ್ನು ಪಡೆಯುತ್ತಿರುವ ಕಾರ್ಮಿಕ ಮಹಿಳೆಯರು ಮತ್ತು ಹುಡುಗಿಯರಿಗೆ ಮಕ್ಕಳ ಆರೈಕೆ ಸೌಲಭ್ಯಗಳೊಂದಿಗೆ ಸುರಕ್ಷಿತ ಮತ್ತು ಕೈಗೆಟುಕುವ ವಸತಿ ಒದಗಿಸುವ ಗುರಿಯನ್ನು ಹೊಂದಿದೆ. ಪಾಲನಾ ಘಟಕವು ಅಂಗನವಾಡಿ ಶಿಶುವಿಹಾರಗಳಲ್ಲಿ ಮಹಿಳಾ ಉದ್ಯೋಗಿಗಳ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಶಿಶುಪಾಲನಾ ಸೌಲಭ್ಯಗಳನ್ನು ಒದಗಿಸುತ್ತದೆ. ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಮಹಿಳಾ ಸಬಲೀಕರಣ ಕೇಂದ್ರಗಳು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಮಹಿಳೆಯರಿಗೆ ಸಂಬಂಧಿಸಿದ ಸರ್ಕಾರದ ಯೋಜನೆಗಳ ಮಾಹಿತಿಯ ಸಮನ್ವಯದ ಸಮಸ್ಯೆಯನ್ನು ಪರಿಹರಿಸುತ್ತವೆ. ಪ್ರಧಾನ ಮಂತ್ರಿ ಮಂತ್ರಿ ವಂದನಾ ಯೋಜನೆ (PMMVY) ಅಡಿಯಲ್ಲಿ, ನೇರ ಲಾಭ ವರ್ಗಾವಣೆ (DBT) ಮೋಡ್ ಮೂಲಕ ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ ನಗದು ಪ್ರಯೋಜನಗಳನ್ನು ನೀಡಲಾಗುತ್ತದೆ.

ಸುಕನ್ಯಾ ಸಮೃದ್ಧಿ ಯೋಜನೆಯಂತಹ ಯೋಜನೆಗಳು ಹೆಣ್ಣು ಮಕ್ಕಳ ಭವಿಷ್ಯಕ್ಕೆ ಆರ್ಥಿಕ ಹೂಡಿಕೆಗೆ ಉತ್ತೇಜನ ನೀಡಿವೆ. ಸಮಗ್ರ ಶಿಕ್ಷಾ , ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ, ವಿವಿಧ ಸ್ಕಾಲರ್ಶಿಪ್ ಯೋಜನೆಗಳು, ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ ಅಡಿಯಲ್ಲಿ ಕೈಗೆಟುಕುವ ಮತ್ತು ಗುಣಮಟ್ಟದ ಸ್ಯಾನಿಟರಿ ನ್ಯಾಪ್ ಕಿನ್ ಗಳನ್ನು ಒದಗಿಸುವುದು ಇತ್ಯಾದಿ ಯೋಜನೆಗಳು ಶೈಕ್ಷಣಿಕ ಸಂಸ್ಥೆಗಳಲ್ಲಿ ಹೆಣ್ಣುಮಕ್ಕಳ ನೋಂದಣಿಯಲ್ಲಿ ಹೆಚ್ಚಳವಾಗುವುದಕ್ಕೆ ಕೊಡುಗೆ ನೀಡಿವೆ.

ಭಾರತ ಸರ್ಕಾರವು ಸಾರ್ವಜನಿಕ ಸಂಗ್ರಹಣೆ ನೀತಿಯ ಮೂಲಕ, ಎಲ್ಲಾ ಕೇಂದ್ರ ಸಚಿವಾಲಯಗಳು/ಇಲಾಖೆಗಳು/ಸಾರ್ವಜನಿಕ ವಲಯದ ಉದ್ಯಮಗಳು ತಮ್ಮ ವಾರ್ಷಿಕ ಸಂಗ್ರಹಣೆಯಲ್ಲಿ ಕನಿಷ್ಠ 3 ಪ್ರತಿಶತವನ್ನು ಮಹಿಳಾ ಸ್ವಾಮ್ಯದ ಅತಿ ಸಣ್ಣ  ಮತ್ತು ಸಣ್ಣ ಉದ್ಯಮಗಳಿಂದ ಸಂಗ್ರಹಿಸಬೇಕೆಂದು ಕಡ್ಡಾಯಗೊಳಿಸಿದೆ

ಕೌಶಲ್ಯ ಅಭಿವೃದ್ಧಿ ಮತ್ತು ವೃತ್ತಿಪರ ತರಬೇತಿಯ ಮೂಲಕ ಮಹಿಳೆಯರ ಆರ್ಥಿಕ ಸ್ವಾತಂತ್ರ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಸರ್ಕಾರವು ಸ್ಕಿಲ್ ಇಂಡಿಯಾ ಮಿಷನ್ ಅನ್ನು ಪ್ರಾರಂಭಿಸಿದೆ. ದೇಶಾದ್ಯಂತ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿ ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮಹಿಳೆಯರಿಗೆ ತರಬೇತಿ ಮತ್ತು ಅಪ್ರೆಂಟಿಸ್ ಶಿಪ್ ಗಾಗಿ ಹೆಚ್ಚುವರಿ ಮೂಲಸೌಕರ್ಯವನ್ನು ನಿರ್ಮಿಸುವುದರ ಮೇಲೆ ಒತ್ತು ನೀಡಲಾಗಿದೆ. ಅದೇ ರೀತಿ, ಗ್ರಾಮೀಣ ಜನಸಂಖ್ಯೆಗೆ ಡಿಜಿಟಲ್ ಸಾಕ್ಷರತೆ ಒದಗಿಸಲು ಸರ್ಕಾರವು ಪ್ರಧಾನ ಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನ (PMGDISHA) ಜಾರಿಗೊಳಿಸಿದೆ. ಈ ಯೋಜನೆಗಳು ಉದ್ಯೋಗ ಮತ್ತು ಉದ್ಯಮಶೀಲತೆಗೆ ಅಗತ್ಯವಾದ ಕೌಶಲ್ಯಗಳನ್ನು ಪಡೆಯಲು ಮಹಿಳೆಯರು ಮತ್ತು ಹುಡುಗಿಯರಿಗೆ ಸಹಾಯ ಮಾಡಿವೆ.

ಕೇಂದ್ರ ಸರ್ಕಾರದ ದೀನ್ ದಯಾಳ್ ಅಂತ್ಯೋದಯ ಯೋಜನೆ - ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (DAY-NRLM) ವಿಶೇಷವಾಗಿ ಯಶಸ್ವಿ ಯೋಜನೆಯಾಗಿದೆ. ಈ ಯೋಜನೆಯಡಿ, ಸುಮಾರು 90 ಲಕ್ಷ ಮಹಿಳಾ ಸ್ವಸಹಾಯ ಗುಂಪುಗಳು, ಸುಮಾರು 10 ಕೋಟಿ ಸದಸ್ಯರನ್ನು ಒಳಗೊಂಡಂತೆ, ಉದ್ಯೋಗ ಮತ್ತು ಸ್ವಯಂ ಉದ್ಯೋಗದ ಅವಕಾಶಗಳ ಮೂಲಕ ಗ್ರಾಮೀಣ ಆರ್ಥಿಕತೆಯನ್ನು ಬದಲಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಅದೇ ರೀತಿಯಲ್ಲಿ, ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್ (NULM) ನಗರ ಪ್ರದೇಶಗಳ ಅಗತ್ಯಗಳನ್ನು ಪೂರೈಸುತ್ತದೆ. ಇದರ ಜೊತೆಗೆ, ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY), ಸ್ಟ್ಯಾಂಡ್-ಅಪ್ ಇಂಡಿಯಾ, ಸ್ಟಾರ್ಟ್-ಅಪ್ ಇಂಡಿಯಾ, ಪ್ರಧಾನ ಮಂತ್ರಿ ಬೀದಿ ವ್ಯಾಪಾರಿ ಆತ್ಮನಿರ್ಭರ ನಿಧಿ (PM SVANidhi) ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGS) ಮುಂತಾದ ಯೋಜನೆಗಳು ಉದ್ಯೋಗ, ಸ್ವಯಂ ಉದ್ಯೋಗ ಮತ್ತು ಸಾಲ ಸೌಲಭ್ಯಗಳನ್ನು ಒದಗಿಸುತ್ತವೆ. ಈ ಯೋಜನೆಗಳಡಿ ಬಹುಪಾಲು ಫಲಾನುಭವಿಗಳು ಮಹಿಳೆಯರು.

ಭಾಷೆ ಸಕಾರಾತ್ಮಕ ಸಾಂಸ್ಕೃತಿಕ ಬದಲಾವಣೆಗೆ ಪ್ರಮುಖ ಶಕ್ತಿಯಾಗಿದ್ದು, ವೈವಿಧ್ಯಮಯ ದೃಷ್ಟಿಕೋನಗಳನ್ನು ಗುರುತಿಸುವ, ಮೌಲ್ಯೀಕರಿಸುವ ಮತ್ತು ಸಬಲಗೊಳಿಸುವ ಪರಿಸರವನ್ನು ನಿರ್ಮಿಸುವ ನಿಟ್ಟಿನಲ್ಲಿ, ಸರ್ಕಾರವು ನವೆಂಬರ್ 2023ರಲ್ಲಿ ಲಿಂಗ ಸಮಾನತೆಯ ಸಂವಹನ ಮಾರ್ಗದರ್ಶಿಯನ್ನು ಪ್ರಕಟಿಸಿತು. ಭಾಷೆಯಲ್ಲಿ ಬೇರೂರಿರುವ ಪಕ್ಷಪಾತಗಳನ್ನು ನಿವಾರಿಸಲು ಮತ್ತು ಪ್ರಾಯೋಗಿಕ ನೋಟಗಳು ಮತ್ತು ತಂತ್ರಗಳನ್ನು ಒದಗಿಸುವ ಉದ್ದೇಶದಿಂದ ನೆಲೆಗೊಂಡಿರುವ ಭಾಷಾ ಮಾನದಂಡಗಳನ್ನು ಬದಲಾಯಿಸುವ ಗುರಿಯನ್ನು ಇದು ಹೊಂದಿದೆ.

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶ್ರೀಮತಿ ಅನ್ನಪೂರ್ಣ ದೇವಿ ಅವರು ಇಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರವಾಗಿ ಈ ಮಾಹಿತಿ ನೀಡಿದರು.

 

*****




(Release ID: 2044040) Visitor Counter : 81


Read this release in: English , Urdu , Hindi , Tamil