ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಆಯುಷ್ ವಲಯದಲ್ಲಿ ಪ್ರಮಾಣೀಕರಣಕ್ಕಾಗಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ವಿಭಾಗ ಸ್ಥಾಪನೆ

Posted On: 09 AUG 2024 11:54AM by PIB Bengaluru

ಭಾರತದ ರಾಷ್ಟ್ರೀಯ ಮಾನದಂಡಗಳ ಸಂಸ್ಥೆಯಾದ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಆಯುಷ್ ವಲಯಕ್ಕೆ ಸುಧಾರಿತ ಪ್ರಮಾಣೀಕರಣವನ್ನು ತಂದಿದೆ. ಇದಕ್ಕಾಗಿಯೇ ಪ್ರತ್ಯೇಕ ಮೀಸಲಾದ ಪ್ರಮಾಣೀಕರಣ ವಿಭಾಗವನ್ನು ಸ್ಥಾಪಿಸುವುದರೊಂದಿಗೆ, ಬ್ಯೂರೋ ಡೊಮೇನ್ ನಲ್ಲಿ ಪ್ರಮಾಣೀಕರಣ ಚಟುವಟಿಕೆಯನ್ನು ಚುರುಕುಗೊಳಿಸಿದೆ. ಆಯುರ್ವೇದ, ಯೋಗ, ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ಧ, ಸೋವಾ-ರಿಗ್ಪಾ ಮತ್ತು ಹೋಮಿಯೋಪತಿಯಂತಹ ಸಾಂಪ್ರದಾಯಿಕ ಭಾರತೀಯ ವೈದ್ಯ ಪದ್ಧತಿಗಳನ್ನು ಒಳಗೊಂಡ ಆಯುಷ್ ಉತ್ಪನ್ನಗಳು ಮತ್ತು ಪದ್ಧತಿಗಳ ಸುರಕ್ಷತೆ, ಪರಿಣಾಮಕಾರಿತ್ವ ಮತ್ತು ಗುಣಮಟ್ಟವನ್ನು ಉತ್ತೇಜಿಸುವತ್ತ ಹೊಸ ವಿಭಾಗವು ಗಮನ ಹರಿಸಿದೆ.

ಆಯುಷ್ ಗಾಗಿ ಪ್ರಮಾಣೀಕರಣ ಚಟುವಟಿಕೆಯ ಪ್ರಕ್ರಿಯೆ ಮತ್ತು ರಚನೆಯನ್ನು ವಿವರಿಸಿರುವ, ಬಿಐಎಸ್ ಮಹಾನಿರ್ದೇಶಕ ಶ್ರೀ ಪ್ರಮೋದ್ ಕುಮಾರ್ ತಿವಾರಿ, "ಖ್ಯಾತ ತಜ್ಞರ ನೇತೃತ್ವದಲ್ಲಿ, ಬಿಐಎಸ್ ಆಯುಷ್ ಇಲಾಖೆ ಏಳು ವಿಭಾಗ ಸಮಿತಿಗಳನ್ನು ರಚಿಸಿದೆ. ಪ್ರತಿಯೊಂದೂ ನಿರ್ದಿಷ್ಟ ಆಯುಷ್ ವ್ಯವಸ್ಥೆಗೆ ಸಂಬಂಧಿಸಿ  ಇವುಗಳ  ರಚನೆಯಾಗಿದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾರ್ಗಸೂಚಿಗಳಿಗೆ ಅನುಗುಣವಾಗಿ ಸಮಗ್ರ, ಪುರಾವೆ ಆಧಾರಿತ ಮಾನದಂಡಗಳನ್ನು ಖಚಿತಪಡಿಸಿಕೊಳ್ಳಲು ಸಮಿತಿಗಳು ತಜ್ಞರು, ವೈಜ್ಞಾನಿಕ ಮತ್ತು ತಾಂತ್ರಿಕ ಸಂಸ್ಥೆಗಳು, ಉದ್ಯಮ ಪ್ರತಿನಿಧಿಗಳು ಮತ್ತು ನಿಯಂತ್ರಕ ಸಂಸ್ಥೆಗಳು ಸೇರಿದಂತೆ ವಿವಿಧ ಭಾಗೀದಾರರು/ಮಧ್ಯಸ್ಥಗಾರರೊಂದಿಗೆ ಸಹಯೋಗದಿಂದ ಕಾರ್ಯನಿರ್ವಹಿಸುತ್ತವೆ” ಎಂದು ತಿಳಿಸಿದ್ದಾರೆ.

ಇಲ್ಲಿಯವರೆಗೆ, ಬಿಐಎಸ್ ಏಕ ಗಿಡಮೂಲಿಕೆಗಳು, ಆಯುರ್ವೇದ ಮತ್ತು ಯೋಗ ಪರಿಭಾಷೆ, ಪಂಚಕರ್ಮ ಉಪಕರಣಗಳು, ಯೋಗ ಪರಿಕರಗಳು ಮತ್ತು ಗಿಡಮೂಲಿಕೆಗಳಲ್ಲಿ ಕೀಟನಾಶಕ ಉಳಿಕೆಗಳ ಪರೀಕ್ಷಾ ವಿಧಾನಗಳಂತಹ ವೈವಿಧ್ಯಮಯ ವಿಷಯಗಳನ್ನು ಒಳಗೊಂಡ 91 ಮಾನದಂಡಗಳನ್ನು ಪ್ರಕಟಿಸಿದೆ. ಗಮನಾರ್ಹವಾಗಿ, ಸಾಂಪ್ರದಾಯಿಕ ಔಷಧದಲ್ಲಿ ಬಳಸುವ ಗಿಡಮೂಲಿಕೆಗಳಿಗೆ 80 ಸ್ಥಳೀಯ ಭಾರತೀಯ ಮಾನದಂಡಗಳ ಪ್ರಕಟಣೆಯು ಅವುಗಳ ಸುರಕ್ಷಿತ ಮತ್ತು ಪರಿಣಾಮಕಾರಿ ಬಳಕೆಯನ್ನು ಉತ್ತೇಜಿಸುತ್ತದೆ, ಇದು ಗ್ರಾಹಕರು ಮತ್ತು ಉದ್ಯಮ ಎರಡಕ್ಕೂ ಪ್ರಯೋಜನವನ್ನು ನೀಡುತ್ತದೆ. ಮಾತ್ರವಲ್ಲದೆ  ಪಂಚಕರ್ಮ ಉಪಕರಣಗಳ ಪ್ರಪ್ರಥಮ ರಾಷ್ಟ್ರೀಯ ಮಾನದಂಡಗಳು ರೋಗನಿರೋಧಕ ಮತ್ತು ಚಿಕಿತ್ಸಕ ಕಾರ್ಯವಿಧಾನಗಳಲ್ಲಿ ಏಕರೂಪತೆಯನ್ನು ಖಚಿತಪಡಿಸುತ್ತವೆ, ಆಯುಷ್ ಆರೋಗ್ಯ ಆರೈಕೆ ಪದ್ಧತಿಗಳ ಗುಣಮಟ್ಟವನ್ನು ಹೆಚ್ಚಿಸುತ್ತವೆ.

ಪರಿಸರ ಸುಸ್ಥಿರತೆಯತ್ತ ಸಾಗುವ ನಿಟ್ಟಿನಲ್ಲಿ, ಬಿಐಎಸ್ ದೇಶೀಯ ತಯಾರಕರು ಮತ್ತು ರೈತರಿಗೆ ಬೆಂಬಲ ನೀಡುವ "ಹತ್ತಿ ಯೋಗ ಚಾಪೆ" ಗಾಗಿ ಸ್ಥಳೀಯ ಭಾರತೀಯ ಮಾನದಂಡವನ್ನು ರೂಪಿಸಿದೆ. ಪರಿಭಾಷೆ, ಏಕ ಗಿಡಮೂಲಿಕೆಗಳು, ಯೋಗ ವೇಷಭೂಷಣ, ಸಿದ್ಧ ರೋಗನಿರ್ಣಯ ಮತ್ತು ಹೋಮಿಯೋಪತಿ ಸಿದ್ಧತೆಗಳು ಸೇರಿದಂತೆ ಭವಿಷ್ಯದ ಪ್ರಮಾಣೀಕರಣ ಕ್ಷೇತ್ರಗಳನ್ನು ಇಲಾಖೆ ಗುರುತಿಸಿದೆ.

ಬಿಐಎಸ್ ಉಪಕ್ರಮಗಳನ್ನು ಶ್ಲಾಘಿಸಿದ ಆಯುಷ್ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೆಚಾ, "ಹೆಚ್ಚಿನ ಜನರು ಸಾಂಪ್ರದಾಯಿಕ ಆರೋಗ್ಯ ವ್ಯವಸ್ಥೆಗಳತ್ತ ತಿರುಗುತ್ತಿದ್ದಂತೆ, ಆಯುಷ್ ಉತ್ಪನ್ನಗಳು ಮತ್ತು ಸೇವೆಗಳಲ್ಲಿ ಸ್ಥಿರ ಗುಣಮಟ್ಟ, ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಅವಶ್ಯಕತೆ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಅದಕ್ಕಾಗಿಯೇ ಪ್ರತ್ಯೇಕ ಸಮರ್ಪಿತ ವಿಭಾಗವನ್ನು ಸ್ಥಾಪಿಸುವ ಮೂಲಕ ಮತ್ತು ಐಎಸ್: 17873 'ಕಾಟನ್ ಯೋಗ ಮ್ಯಾಟ್' ನಂತಹ ನಿರ್ಣಾಯಕ ಮಾನದಂಡಗಳನ್ನು ಅಭಿವೃದ್ಧಿಪಡಿಸುವ ಮೂಲಕ ಬಿಐಎಸ್ ಈ ಕ್ಷೇತ್ರದಲ್ಲಿ ತನ್ನ ಬದ್ಧತೆಯನ್ನು ಪ್ರತಿಬಿಂಬಿಸಿದೆ. ಸಾಂಪ್ರದಾಯಿಕ ಭಾರತೀಯ ಔಷಧವನ್ನು ಉತ್ತೇಜಿಸುವಲ್ಲಿ ಮತ್ತು ಅಭಿವೃದ್ಧಿಪಡಿಸುವಲ್ಲಿ ಇವು ನಿರ್ಣಾಯಕ ಮೈಲಿಗಲ್ಲುಗಳಾಗಿವೆ. ಕಠಿಣ ಮಾನದಂಡಗಳು ಮತ್ತು ನಾವೀನ್ಯತೆಗಳ ಮೂಲಕ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಯುಷ್ ವ್ಯವಸ್ಥೆಗಳ ಸ್ವೀಕಾರ ಮತ್ತು ಬೆಳವಣಿಗೆಯನ್ನು ಹೆಚ್ಚಿಸಲು ಬಿಐಎಸ್ ಬದ್ಧವಾಗಿದೆ” ಎಂದಿದ್ದಾರೆ.

 

*****



(Release ID: 2043676) Visitor Counter : 5