ಕೃಷಿ ಸಚಿವಾಲಯ
azadi ka amrit mahotsav

ಹವಾಮಾನ ಬದಲಾವಣೆಯ ಪರಿಣಾಮವನ್ನು ತಗ್ಗಿಸಲು ನೀತಿಗಳು ಮತ್ತು ತಾಂತ್ರಿಕ ಆವಿಷ್ಕಾರಗಳು

Posted On: 02 AUG 2024 5:33PM by PIB Bengaluru

ನೀರು ಮತ್ತು ಆಹಾರ ಭದ್ರತೆಯ ಮೇಲೆ ಹವಾಮಾನ ಬದಲಾವಣೆಯ ಪರಿಣಾಮವನ್ನು ತಗ್ಗಿಸಲು ಸರ್ಕಾರವು ಸುಸ್ಥಿರ ಕೃಷಿಗಾಗಿ ರಾಷ್ಟ್ರೀಯ ಮಿಷನ್ (ಎನ್ಎಂಎಸ್ಎ) ಯನ್ನು ಜಾರಿಗೆ ತರುತ್ತಿದೆ. ಬದಲಾಗುತ್ತಿರುವ ಹವಾಮಾನಕ್ಕೆ ಭಾರತೀಯ ಕೃಷಿಯನ್ನು ಹೆಚ್ಚು ಸ್ಥಿತಿಸ್ಥಾಪಕವಾಗಿಸಲು ಕಾರ್ಯತಂತ್ರಗಳನ್ನು ರೂಪಿಸುವ ಮತ್ತು ಕಾರ್ಯಗತಗೊಳಿಸುವ ಗುರಿಯನ್ನು ಹೊಂದಿರುವ ಹವಾಮಾನ ಬದಲಾವಣೆಯ ರಾಷ್ಟ್ರೀಯ ಕ್ರಿಯಾ ಯೋಜನೆ (ಎನ್ಎಪಿಸಿಸಿ) ಯೊಳಗಿನ ಮಿಷನ್ ಗಳಲ್ಲಿ ಎನ್ಎಂಎಸ್ಎ ಒಂದಾಗಿದೆ. ಎನ್ಎಂಎಸ್ಎ ಅಡಿಯಲ್ಲಿ, ಪ್ರತಿ ಹನಿಗೆ ಹೆಚ್ಚು ಬೆಳೆ ಎಂಬ ಯೋಜನೆಯು  ಕೃಷಿಯಲ್ಲಿ ನೀರಿನ ಬಳಕೆಯ ದಕ್ಷತೆಯನ್ನು ಸುಧಾರಿಸುವುದು, ನಿಖರ ನೀರಾವರಿ ಮತ್ತು ಇತರ ನೀರು ಉಳಿಸುವ ತಂತ್ರಜ್ಞಾನಗಳ ಅಳವಡಿಕೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ, ಇದಕ್ಕಾಗಿ ಸೂಕ್ಷ್ಮ ನೀರಾವರಿ ಅಡಿಯಲ್ಲಿ ಕೃಷಿ ಪ್ರದೇಶವನ್ನು ಹೆಚ್ಚಿಸಲು ಫಲಾನುಭವಿಗೆ ಸಬ್ಸಿಡಿ ನೀಡಲಾಗುತ್ತಿದೆ. ಇದಲ್ಲದೆ, ಸರ್ಕಾರವು 2015-16 ರಿಂದ ಪರಂಪರಾಗತ ಕೃಷಿ ವಿಕಾಸ ಯೋಜನೆ (ಪಿಕೆವಿವೈ) ಮತ್ತು ಈಶಾನ್ಯ ವಲಯಕ್ಕಾಗಿ ಮಿಷನ್ ಸಾವಯವ ಮೌಲ್ಯ ಸರಪಳಿ ಅಭಿವೃದ್ಧಿ (ಎಂಒವಿಸಿಡಿಎನ್ಇಆರ್) ಯೋಜನೆಗಳ ಮೂಲಕ ದೇಶದಲ್ಲಿ ಸಾವಯವ ಕೃಷಿಯನ್ನು ಉತ್ತೇಜಿಸುತ್ತಿದೆ. ಎರಡೂ ಯೋಜನೆಗಳು ಸಾವಯವ ಕೃಷಿಯಲ್ಲಿ ತೊಡಗಿರುವ ರೈತರಿಗೆ ಅಂದರೆ ಉತ್ಪಾದನೆಯಿಂದ ಸಂಸ್ಕರಣೆ, ಪ್ರಮಾಣೀಕರಣ ಮತ್ತು ಮಾರುಕಟ್ಟೆ ಹಾಗು ಕೊಯಿಲೋತ್ತರ ನಿರ್ವಹಣೆಯವರೆಗೆ ಬೆಂಬಲವನ್ನು ನೀಡುತ್ತವೆ.ತರಬೇತಿ ಮತ್ತು ಸಾಮರ್ಥ್ಯ ವರ್ಧನೆ  ಯೋಜನೆಯ ಭಾಗಗಳಾಗಿವೆ. ಕೃಷಿ ಭೂಮಿಯಲ್ಲಿ ಮತ್ತು ಕೃಷಿ ಭೂಮಿಯ ಹೊರಗೆ ಸಾವಯವ ರಸಗೊಬ್ಬರ/ ಗೊಬ್ಬರ ಬಳಕೆಗೆ   ಉತ್ತೇಜನ ನೀಡುವುದಕ್ಕಾಗಿ ರೈತರಿಗೆ ಪ್ರೋತ್ಸಾಹಧನ ಒದಗಿಸುವುದು ಈ ಯೋಜನೆಗಳ ಅಂತರ್ಗತ ಅಂಶಗಳಾಗಿವೆ. ಸಾವಯವ ಗೊಬ್ಬರಗಳು ಸೇರಿದಂತೆ ಸಾವಯವ ಒಳಹರಿವುಗಳನ್ನು ಬಳಸಲು ರೈತರಿಗೆ ನೇರ ಲಾಭ ವರ್ಗಾವಣೆ (ನೇರ ನಗದು ವರ್ಗಾವಣೆ-ಡಿಬಿಟಿ) ಒದಗಿಸಲಾಗುತ್ತದೆ. ಪಿಕೆವಿವೈ ಯನ್ನು ಈಶಾನ್ಯ (ಎನ್ಇ) ರಾಜ್ಯಗಳನ್ನು ಹೊರತುಪಡಿಸಿ ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲಿ ಜಾರಿಗೆ ತರಲಾಗುತ್ತಿದೆ, ಆದರೆ ಎಂಒವಿಸಿಡಿಎನ್ಇಆರ್ ಯೋಜನೆಯನ್ನು ಈಶಾನ್ಯ ರಾಜ್ಯಗಳಲ್ಲಿ ಪ್ರತ್ಯೇಕವಾಗಿ ಜಾರಿಗೆ ತರಲಾಗುತ್ತಿದೆ. ಭಾರತೀಯ ಪ್ರಾಕೃತಿಕ್ ಕೃಷಿ ಪದ್ದತಿ ಕಾರ್ಯಕ್ರಮ (ಬಿಪಿಕೆಪಿ) ಯೋಜನೆಯು ಸಾಂಪ್ರದಾಯಿಕ ಸ್ಥಳೀಯ ಪದ್ಧತಿಗಳನ್ನು ಉತ್ತೇಜಿಸುವ ಮತ್ತು ರೈತರಲ್ಲಿ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಮಿಷನ್ ಫಾರ್ ಇಂಟಿಗ್ರೇಟೆಡ್ ಡೆವಲಪ್ಮೆಂಟ್ ಆಫ್ ಹಾರ್ಟಿಕಲ್ಚರ್ (ಎಂಐಡಿಎಚ್), ಕೃಷಿ ಅರಣ್ಯೀಕರಣ ಮತ್ತು ರಾಷ್ಟ್ರೀಯ ಬಿದಿರು ಮಿಷನ್ ಸಹ ಹವಾಮಾನ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ (ಪಿಎಂಎಫ್ಬಿವೈ) ನೈಸರ್ಗಿಕ ವಿಪತ್ತುಗಳಿಂದ ಉಂಟಾಗುವ ಬೆಳೆ ನಷ್ಟಕ್ಕೆ ಸಂಪೂರ್ಣ ವಿಮಾ ಮೊತ್ತವನ್ನು ಒದಗಿಸುತ್ತದೆ.

ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ (ಡಿಎ&ಎಫ್ಡಬ್ಲ್ಯೂ) ರಾಷ್ಟ್ರೀಯ ಆಹಾರ ಭದ್ರತಾ ಮಿಷನ್ (ಎನ್ಎಫ್ಎಸ್ಎಂ) ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಹಾಗು ಲಡಾಖ್ ನಂತಹ ಕೇಂದ್ರಾಡಳಿತ ಪ್ರದೇಶಗಳು ಸಹಿತ 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತ್ತು  28 ರಾಜ್ಯಗಳ ಎಲ್ಲಾ  ಜಿಲ್ಲೆಗಳಲ್ಲಿ ಪೌಷ್ಟಿಕ-ಧಾನ್ಯಗಳ (ಸಿರಿಧಾನ್ಯಗಳು) ಉಪ ಯೋಜನೆಯನ್ನು (ಉಪ ಮಿಷನ್ ) ಜಾರಿಗೆ ತರುತ್ತಿದೆ. ಬೆಳೆ ಉತ್ಪಾದನೆ ಮತ್ತು ಸಂರಕ್ಷಣಾ ತಂತ್ರಜ್ಞಾನಗಳು, ಬೆಳೆ ಪದ್ಧತಿ ಆಧಾರಿತ ಪ್ರಾತ್ಯಕ್ಷಿಕೆಗಳು, ಹೊಸದಾಗಿ ಬಿಡುಗಡೆಯಾದ ಪ್ರಭೇದಗಳು / ಮಿಶ್ರತಳಿಗಳ ಪ್ರಮಾಣೀಕೃತ ಬೀಜಗಳ ಉತ್ಪಾದನೆ ಮತ್ತು ವಿತರಣೆ, ಸಮಗ್ರ ಪೋಷಕಾಂಶ ಮತ್ತು ಕೀಟ ನಿರ್ವಹಣಾ ತಂತ್ರಗಳು, ಸುಧಾರಿತ ಕೃಷಿ ಉಪಕರಣಗಳು / ಸಲಕರಣೆಗಳು / ಸಂಪನ್ಮೂಲ ಸಂರಕ್ಷಣಾ ಯಂತ್ರೋಪಕರಣಗಳು, ನೀರು ಉಳಿಸುವ ಸಾಧನಗಳು, ಮತ್ತು ಬೆಳೆ ಋತುವಿನಲ್ಲಿ ತರಬೇತಿಗಳ ಮೂಲಕ ರೈತರ ಸಾಮರ್ಥ್ಯ ವರ್ಧನೆ, ಇತ್ಯಾದಿಗಳಿಗೆ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಮೂಲಕ ರೈತರಿಗೆ ಪ್ರೋತ್ಸಾಹಕಗಳನ್ನು ನೀಡಲಾಗುತ್ತದೆ.  ಕಾರ್ಯಕ್ರಮಗಳು / ಕಾರ್ಯಾಗಾರಗಳನ್ನು ಆಯೋಜಿಸುವುದು, ಬೀಜ ಮಿನಿಕಿಟ್ ಗಳ ವಿತರಣೆ, ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಪ್ರಚಾರ ಇತ್ಯಾದಿಗಳನ್ನೂ ಕೈಗೊಳ್ಳಲಾಗುತ್ತದೆ.

ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಬರುವ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಹವಾಮಾನ ಸ್ಥಿತಿಸ್ಥಾಪಕ ಕೃಷಿಯಲ್ಲಿ ರಾಷ್ಟ್ರೀಯ ನಾವೀನ್ಯತೆಗಳು (ಎನ್.ಐ.ಸಿ.ಆರ್.ಎ) ಎಂಬ ಪ್ರಮುಖ ನೆಟ್ವರ್ಕ್ ಯೋಜನೆಯನ್ನು ಪ್ರಾರಂಭಿಸಿದೆ. ಬೆಳೆಗಳು, ಜಾನುವಾರುಗಳು, ತೋಟಗಾರಿಕೆ ಮತ್ತು ಮೀನುಗಾರಿಕೆ ಸೇರಿದಂತೆ ಕೃಷಿಯ ಮೇಲೆ ಹವಾಮಾನ ಬದಲಾವಣೆಯ ಪರಿಣಾಮವನ್ನು ಅಧ್ಯಯನ ಮಾಡುವುದು ಮತ್ತು ಕೃಷಿಯಲ್ಲಿ ಹವಾಮಾನ ಸ್ಥಿತಿಸ್ಥಾಪಕ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಉತ್ತೇಜಿಸುವುದು ಯೋಜನೆಯ ಉದ್ದೇಶವಾಗಿದೆ. ಇದು ದೇಶದ ದುರ್ಬಲ ಪ್ರದೇಶಗಳ ಸಮಸ್ಯೆಗಳಿಗೆ ಸ್ಪಂದಿಸುತ್ತದೆ ಮತ್ತು ಯೋಜನೆಯ ಫಲಿತಾಂಶಗಳು ಬರ, ಪ್ರವಾಹ, ಹಿಮ, ಉಷ್ಣದ ಅಲೆಗಳಂತಹ  (ಶಾಖದ ಅಲೆಗಳು) ತೀವ್ರ ಹವಾಮಾನ ಪರಿಸ್ಥಿತಿಗಳಿಗೆ ಗುರಿಯಾಗುವ ಜಿಲ್ಲೆಗಳು ಮತ್ತು ಪ್ರದೇಶಗಳಿಗೆ ಅಂತಹ ವೈಪರೀತ್ಯಗಳನ್ನು ನಿಭಾಯಿಸಲು ಅನುವು ಮಾಡಿಕೊಡುತ್ತವೆ. ಐಸಿಎಆರ್ ಪ್ರಮುಖ ಸಾಧನೆಗಳು ಕೆಳಗಿನಂತಿವೆ:

    •  ಕಳೆದ 10 ವರ್ಷಗಳಲ್ಲಿ (2014-2024), ಐಸಿಎಆರ್ ಒಟ್ಟು 2593 ಪ್ರಭೇದಗಳನ್ನು ಬಿಡುಗಡೆ ಮಾಡಿದೆ, ಈ ಪೈಕಿ 2177 ಪ್ರಭೇದಗಳು ಒಂದು ಅಥವಾ ಹೆಚ್ಚು ಜೈವಿಕ ಮತ್ತು / ಅಥವಾ ಅಜೈವಿಕ ಒತ್ತಡಗಳಿಗೆ ಸಹಿಷ್ಣು ಎಂದು ಕಂಡುಬಂದಿವೆ.
    •  ಹವಾಮಾನ ಬದಲಾವಣೆಯ ಅಂತರ ಸರ್ಕಾರೀಯ ಸಮಿತಿ (ಐಪಿಸಿಸಿ) ಪ್ರೋಟೋಕಾಲ್ (ಶಿಷ್ಟಾಚಾರ)ಗಳ ಪ್ರಕಾರ 651 ಪ್ರಮುಖ ಕೃಷಿ ಜಿಲ್ಲೆಗಳಿಗೆ ಜಿಲ್ಲಾ ಮಟ್ಟದಲ್ಲಿ ಹವಾಮಾನ ಬದಲಾವಣೆಯಿಂದ ಕೃಷಿಗೆ ಸಂಭವಿಸುತ್ತಿರುವ ಅಪಾಯ ಮತ್ತು ದುರ್ಬಲತೆಯ ಮೌಲ್ಯಮಾಪನವನ್ನು ನಡೆಸಲಾಗುತ್ತದೆ. ಒಟ್ಟು 109 ಜಿಲ್ಲೆಗಳನ್ನು 'ಅತಿ ಹೆಚ್ಚು' ಮತ್ತು 201 ಜಿಲ್ಲೆಗಳನ್ನು 'ಹೆಚ್ಚು' ದುರ್ಬಲ ಎಂದು ವರ್ಗೀಕರಿಸಲಾಗಿದೆ.
    •  ಈ 651 ಜಿಲ್ಲೆಗಳಿಗೆ ಜಿಲ್ಲಾ ಕೃಷಿ ಆಕಸ್ಮಿಕ/ತುರ್ತು ಯೋಜನೆಗಳನ್ನು (ಡಿಎಸಿಪಿ) ಬರ, ಪ್ರವಾಹ, ಅಕಾಲಿಕ ಮಳೆ ಮತ್ತು ಶಾಖದ ಅಲೆ, ಶೀತ ಅಲೆ, ಹಿಮ, ಆಲಿಕಲ್ಲು ಬಿರುಗಾಳಿ, ಚಂಡಮಾರುತ ಮುಂತಾದ ತೀವ್ರ ಹವಾಮಾನ ಘಟನೆಗಳಿಗೆ ಸಂಬಂಧಿಸಿದಂತೆ ಸಿದ್ಧಪಡಿಸಲಾಗಿದೆ ಮತ್ತು ರಾಜ್ಯ ಕೃಷಿ ಇಲಾಖೆಗಳು ಹಾಗು ರೈತರ ಬಳಕೆಗಾಗಿ ಸ್ಥಳ ನಿರ್ದಿಷ್ಟ ಹವಾಮಾನ ಸ್ಥಿತಿಸ್ಥಾಪಕ ಬೆಳೆಗಳು ಮತ್ತು ಪ್ರಭೇದಗಳು ಮತ್ತು ನಿರ್ವಹಣಾ ಪದ್ಧತಿ/ ಅಭ್ಯಾಸಗಳನ್ನು ಶಿಫಾರಸು ಮಾಡಲಾಗಿದೆ.
    • ಹವಾಮಾನ ವೈಪರೀತ್ಯಕ್ಕೆ ರೈತರ ಸ್ಥಿತಿಸ್ಥಾಪಕತ್ವ ಮತ್ತು ಹೊಂದಾಣಿಕೆಯ ಸಾಮರ್ಥ್ಯವನ್ನು ಹೆಚ್ಚಿಸಲು, ಎನ್ಐಸಿಆರ್ಎ ಅಡಿಯಲ್ಲಿ "ಹವಾಮಾನ ಸ್ಥಿತಿಸ್ಥಾಪಕ ಗ್ರಾಮಗಳು" (ಸಿಆರ್ವಿ) ಪರಿಕಲ್ಪನೆಯನ್ನು ಪ್ರಾರಂಭಿಸಲಾಗಿದೆ.
    •  ಹವಾಮಾನ ವೈಪರಿತ್ಯಕ್ಕೆ ಸುಲಭವಾಗಿ ತುತ್ತಾಗುವ ಅಪಾಯ ಇರುವ 151 ಜಿಲ್ಲೆಗಳ 448 ಸಿಆರ್ ವಿಗಳಲ್ಲಿ ಸ್ಥಳ-ನಿರ್ದಿಷ್ಟ ಹವಾಮಾನ ಸ್ಥಿತಿಸ್ಥಾಪಕ ತಂತ್ರಜ್ಞಾನಗಳನ್ನು ರೈತರು ಅಳವಡಿಸಿಕೊಳ್ಳುವುದಕ್ಕಾಗಿ  ಪ್ರದರ್ಶಿಸಲಾಗಿದೆ.
    •  ಐಸಿಎಆರ್ ತನ್ನ ಎನ್.ಐ.ಸಿ.ಆರ್.ಎ ಯೋಜನೆಯ ಮೂಲಕ, ಕೃಷಿಯಲ್ಲಿ ಹವಾಮಾನ ಬದಲಾವಣೆಯ ಪರಿಣಾಮದ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುತ್ತದೆ. ಹವಾಮಾನ ಸ್ಥಿತಿಸ್ಥಾಪಕ ತಂತ್ರಜ್ಞಾನಗಳನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳಲು ಹವಾಮಾನ ಬದಲಾವಣೆಯ ವಿವಿಧ ಅಂಶಗಳ ಬಗ್ಗೆ ರೈತರಿಗೆ ಶಿಕ್ಷಣ ನೀಡಲು ಸಾಮರ್ಥ್ಯ ವರ್ಧನೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.

ಹವಾಮಾನ ಸ್ಥಿತಿಸ್ಥಾಪಕ ತಂತ್ರಜ್ಞಾನಗಳಾದ ಸ್ಥಿತಿಸ್ಥಾಪಕ ಅಂತರ ಬೆಳೆ ಪದ್ಧತಿಗಳು, ಸಂರಕ್ಷಣಾ ಕೃಷಿ, ಭತ್ತದಿಂದ ಇತರ ಪರ್ಯಾಯ ಬೆಳೆಗಳಾದ ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು, ಕೃಷಿ ಅರಣ್ಯ ವ್ಯವಸ್ಥೆಗಳು, ಭತ್ತದ ಕೃಷಿಯ ಪರ್ಯಾಯ ವಿಧಾನಗಳು (ಭತ್ತದ ತೀವ್ರತೆಯ ವ್ಯವಸ್ಥೆ, ಏರೋಬಿಕ್ ಅಕ್ಕಿ, ನೇರ ಬಿತ್ತನೆ ಅಕ್ಕಿ), ಹಸಿರು ಗೊಬ್ಬರ, ಸಮಗ್ರ ಅಂತರ್ಗತ ಕೃಷಿ ವ್ಯವಸ್ಥೆಗಳು, ಸಮಗ್ರ ಪೋಷಕಾಂಶ ನಿರ್ವಹಣೆ, ಸಮಗ್ರ ಕೀಟ ನಿರ್ವಹಣೆ, ಸಾವಯವ ಕೃಷಿ, ಸ್ಥಳ ನಿರ್ದಿಷ್ಟ ಪೋಷಕಾಂಶ ನಿರ್ವಹಣೆ, ಸ್ಥಳದ ತೇವಾಂಶ ಸಂರಕ್ಷಣೆ,  ಕೃಷಿ ಹೊಂಡದಲ್ಲಿ ಕೊಯ್ಲು ಮಾಡಿದ ಮಳೆನೀರಿನಿಂದ ರಕ್ಷಣಾತ್ಮಕ ನೀರಾವರಿ, ಸೂಕ್ಷ್ಮ ನೀರಾವರಿ ವಿಧಾನ (ಹನಿ ಮತ್ತು ಸ್ಪ್ರಿಂಕ್ಲರ್) ಇತ್ಯಾದಿಗಳನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ರೈತರ ಹೊಲಗಳಲ್ಲಿ ಪ್ರದರ್ಶಿಸಲಾಗಿದೆ. ಅಲ್ಲದೆ, ಶಾಖದ ಒತ್ತಡದಿಂದ ಪಾರಾಗಲು ಗೋಧಿಯ ಡ್ರಿಲ್ ಬಿತ್ತನೆ, ಚಾಪೆ ನಾಟಿ ವಿಧಾನ, ಮಳೆ ಕೊಯ್ಲು ಮಾಡಿದ ನೀರಿನೊಂದಿಗೆ ಬೆಳೆ ತೀವ್ರಗೊಳಿಸುವುದು ಮುಂತಾದ ವಿಧಾನಗಳನ್ನು ಈಶಾನ್ಯ ರಾಜ್ಯಗಳಲ್ಲಿ ಪ್ರದರ್ಶಿಸಲಾಗಿದೆ.

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಹಾಯಕ ಸಚಿವ ಶ್ರೀ ರಾಮನಾಥ್ ಠಾಕೂರ್ ಅವರು ಇಂದು ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ಮಾಹಿತಿಯನ್ನು ನೀಡಿದರು.

 

*****


(Release ID: 2041347) Visitor Counter : 52