ರೈಲ್ವೇ ಸಚಿವಾಲಯ
ಅಪಾಯಕಾರಿ ರೈಲ್ವೆ ಟ್ರ್ಯಾಕ್ ಸ್ಟಂಟ್: ಯೂಟ್ಯೂಬರ್ ನನ್ನು ಬಂಧಿಸಿದ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್ ಪಿ ಎಫ್)
ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗದಂತೆ ಮತ್ತು ಅಂತಹ ಯಾವುದೇ ಕೃತ್ಯಗಳನ್ನು ವರದಿ ಮಾಡುವಂತೆ ನಾಗರಿಕರಿಗೆ ಆರ್ಪಿಎಫ್ ಮಹಾನಿರ್ದೇಶಕರ ಮನವಿ
Posted On:
02 AUG 2024 4:00PM by PIB Bengaluru
ಪ್ರಚಾರಕ್ಕಾಗಿ ರೈಲ್ವೆ ಹಳಿಗಳಲ್ಲಿ ಕ್ರಿಮಿನಲ್ ಹಸ್ತಕ್ಷೇಪ ಮೂಲಕ ಸಾರ್ವಜನಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡಿದ ಯೂಟ್ಯೂಬರ್ ನನ್ನು ರೈಲ್ವೆ ಸಂರಕ್ಷಣಾ ಪಡೆ (ಆರ್.ಪಿ.ಎಫ್) ಬಂಧಿಸಿದೆ. ಟ್ವಿಟರ್ ನಲ್ಲಿ ವೈರಲ್ ಆಗಿರುವ ವೀಡಿಯೊಗಳಲ್ಲಿ ವ್ಯಕ್ತಿಯೊಬ್ಬರು ರೈಲ್ವೆ ಹಳಿಗಳ ಮೇಲೆ ವಿವಿಧ ರೀತಿಯ ವಸ್ತುಗಳನ್ನು ಇಡುತ್ತಿರುವುದನ್ನು ತೋರಿಸಲಾಗಿದೆ, ಇದು ತುರ್ತು ತನಿಖೆಯನ್ನು ಕೈಗೊಳ್ಳುವಂತೆ ಪ್ರೇರೇಪಿಸಿದೆ. ದುಷ್ಕರ್ಮಿ ಗುಲ್ಜಾರ್ ಶೇಖ್ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ 250 ಕ್ಕೂ ಹೆಚ್ಚು ವೀಡಿಯೊಗಳನ್ನು ಅಪ್ಲೋಡ್ ಮಾಡಿದ್ದಾನೆ ಮತ್ತು 2 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದ್ದಾನೆ. ಅವರ ಆನ್-ಕ್ಯಾಮೆರಾ ಚಟುವಟಿಕೆಗಳು ರೈಲ್ವೆ ಸುರಕ್ಷತೆ ಮತ್ತು ಕಾರ್ಯಾಚರಣೆಗಳೆರಡಕ್ಕೂ ಗಮನಾರ್ಹ ಅಪಾಯವನ್ನುಂಟು ಮಾಡುವಂತಹವಾಗಿವೆ.
ಶೇಖ್ ಅವರ ಯೂಟ್ಯೂಬ್ ಪ್ರೊಫೈಲ್ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಅವರ ಹಾಜರಾತಿಯ ಬಗ್ಗೆ ವಿವರವಾದ ವಿಶ್ಲೇಷಣೆಯ ಬಳಿಕ, ಉತ್ತರ ರೈಲ್ವೆಯ ಆರ್ಪಿಎಫ್ ಉಂಚಹಾರ್ 01/08/2024 ರಂದು ರೈಲ್ವೆ ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದೆ. ಅದೇ ದಿನ, ಆರ್ಪಿಎಫ್ ಮತ್ತು ಸ್ಥಳೀಯ ಪೊಲೀಸರ ಜಂಟಿ ತಂಡವು ಸೈಯದ್ ಅಹ್ಮದ್ ಅವರ ಪುತ್ರ ಗುಲ್ಜಾರ್ ಶೇಖ್ ಅವರನ್ನು ಉತ್ತರ ಪ್ರದೇಶದ ಸೊರಾನ್ (ಅಲಹಾಬಾದ್) ನ ಖಂಡ್ರೌಲಿ ಗ್ರಾಮದ ಅವರ ನಿವಾಸದಲ್ಲಿ ಬಂಧಿಸಿತು.
ತ್ವರಿತ ಮತ್ತು ಪರಿಣಾಮಕಾರಿ ಕ್ರಮಕ್ಕಾಗಿ ಲಕ್ನೋ ವಿಭಾಗದ ಆರ್ಪಿಎಫ್ ಅನ್ನು ಶ್ಲಾಘಿಸಿದ ಆರ್ಪಿಎಫ್ ಡಿ.ಜಿ. ಅವರು ಗುಲ್ಜಾರ್ ಶೇಖ್ ವಿರುದ್ಧದ ಕಾನೂನು ಕ್ರಮವು ಭಾರತೀಯ ರೈಲ್ವೆಯ ಸುರಕ್ಷತೆಯೊಂದಿಗೆ ರಾಜಿ ಮಾಡಿಕೊಳ್ಳಲು ಪ್ರಯತ್ನಿಸುವ ವ್ಯಕ್ತಿಗಳಿಗೆ ಬಲವಾದ ನಿರ್ಬಂಧವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಒತ್ತಿ ಹೇಳಿದರು. ರೈಲ್ವೆ ಸುರಕ್ಷತೆಯ ಮಹತ್ವವನ್ನು ಪುನರುಚ್ಚರಿಸಿದ ಅವರು, ರೈಲ್ವೆ ಸುರಕ್ಷತೆಯನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನಗಳನ್ನು ದೃಢ ಸಂಕಲ್ಪ ಮತ್ತು ಕಠಿಣ ಕಾನೂನು ಕ್ರಮದೊಂದಿಗೆ ಎದುರಿಸಲಾಗುವುದು ಮತ್ತು ಅಂತಹ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಗರಿಷ್ಠ ಶಿಕ್ಷೆಯನ್ನು ಖಚಿತಪಡಿಸಲು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕರಿಗೆ ಭರವಸೆ ನೀಡಿದರು.
ಇಂತಹ ಚಟುವಟಿಕೆಗಳಲ್ಲಿ ತೊಡಗದಂತೆ ಮತ್ತು ರೈಲ್ವೆ ಭದ್ರತೆ ಮತ್ತು ಸುರಕ್ಷತೆಯೊಂದಿಗೆ ರಾಜಿ ಮಾಡಿಕೊಳ್ಳುವ ಯಾವುದೇ ಕೃತ್ಯಗಳನ್ನು ವರದಿ ಮಾಡುವಂತೆ ಆರ್ಪಿಎಫ್ ಡಿ.ಜಿ. ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಅಂತಹ ಮಾಹಿತಿಯನ್ನು ರೈಲ್ವೆ ಸಂರಕ್ಷಣಾ ಪಡೆ ಅಥವಾ ರೈಲ್ ಮದದ್ ನಲ್ಲಿ ಟೋಲ್ ಫ್ರೀ ಸಹಾಯವಾಣಿ ಸಂಖ್ಯೆ 139 ಮೂಲಕ ನೀಡಬಹುದು.
*****
(Release ID: 2041059)
Visitor Counter : 34