ನೀತಿ ಆಯೋಗ

ನೀತಿ ಆಯೋಗದ 9ನೇ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿದ ಪ್ರಧಾನಮಂತ್ರಿ


ಕೇಂದ್ರ ಮತ್ತು ರಾಜ್ಯಗಳ ಸಾಮೂಹಿಕ ಪ್ರಯತ್ನಗಳು ವಿಕಸಿತ ಭಾರತ @2047 ದೃಷ್ಟಿಕೋನವನ್ನು ಸಾಕಾರಗೊಳಿಸಲು ಕಾರಣವಾಗುತ್ತವೆ: ಪ್ರಧಾನಮಂತ್ರಿ

ವಿಕಸಿತ ಭಾರತದ ದೃಷ್ಟಿಕೋನವನ್ನು ವಿಕಸಿತ ರಾಜ್ಯಗಳ ಮೂಲಕ ಸಾಕಾರಗೊಳಿಸಬಹುದು ಎಂದು ಪ್ರಧಾನಮಂತ್ರಿ ಹೇಳಿದರು;ವಿಕಸಿತ ಭಾರತ @2047 ಸಾಕಾರಗೊಳಿಸಲು ಪ್ರತಿ ರಾಜ್ಯ ಮತ್ತು ಜಿಲ್ಲೆಗಳು 2047 ರ ದೃಷ್ಟಿಕೋನವನ್ನು ರೂಪಿಸಬೇಕು

ಹೂಡಿಕೆಗಳನ್ನು ಆಕರ್ಷಿಸಲು 'ಹೂಡಿಕೆ ಸ್ನೇಹಿ ಚಾರ್ಟರ್' ಸಿದ್ಧಪಡಿಸುವಂತೆ ನೀತಿ ಆಯೋಗಕ್ಕೆ ಪ್ರಧಾನಮಂತ್ರಿ ನಿರ್ದೇಶನ

ಜಲ ಸಂಪನ್ಮೂಲಗಳ ಪರಿಣಾಮಕಾರಿ ಬಳಕೆಗಾಗಿ ರಾಜ್ಯ ಮಟ್ಟದಲ್ಲಿ ನದಿ ಗ್ರಿಡ್ ಗಳ ರಚನೆಯನ್ನು ಪ್ರಧಾನಮಂತ್ರಿಯವರು ಪ್ರೋತ್ಸಾಹಿಸಿದರು

ಭವಿಷ್ಯದಲ್ಲಿ ಹೆಚ್ಚುವ ವೃದ್ಧಾಪ್ಯ ಜನತೆಯ ಸಮಸ್ಯೆಗಳನ್ನು ಪರಿಹರಿಸಲು ಜನಸಂಖ್ಯಾ ನಿರ್ವಹಣಾ ಯೋಜನೆಗಳನ್ನು ಪ್ರಾರಂಭಿಸಲು ರಾಜ್ಯಗಳನ್ನು ಪ್ರಧಾನಮಂತ್ರಿ ಪ್ರೋತ್ಸಾಹಿಸಿದರು

ಯುವಜನರನ್ನು ಉದ್ಯೋಗಕ್ಕೆ ಸಿದ್ಧಗೊಳಿಸಲು ಕೌಶಲ್ಯ ಮತ್ತು ತರಬೇತಿಗೆ ಪ್ರಧಾನಿ ಒತ್ತು ನೀಡಿದರು

ವಿಕಸಿತ ಭಾರತಕ್ಕಾಗಿ ನಾವು ಶೂನ್ಯ ಬಡತನವನ್ನು ಆದ್ಯತೆಯಾಗಿಸಬೇಕು: ಪ್ರಧಾನಮಂತ್ರಿ

ಸಭೆಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನೀಡಿದ ಸಲಹೆಗಳನ್ನು ಅಧ್ಯಯನ ಮಾಡುವಂತೆ ನೀತಿ ಆಯೋಗಕ್ಕೆ ಪ್ರಧಾನಮಂತ್ರಿ ನಿರ್ದೇಶನ

ಸಭೆಯಲ್ಲಿ 20 ರಾಜ್ಯಗಳು ಮತ್ತು 6 ಕೇಂದ್ರಾಡಳಿತ

Posted On: 27 JUL 2024 7:12PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನೀತಿ ಆಯೋಗದ 9ನೇ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹೊಸದಿಲ್ಲಿಯ ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ಸಭೆ ನಡೆಯಿತು.  ಇದರಲ್ಲಿ 20 ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶಗಳನ್ನು ಪ್ರತಿನಿಧಿಸುವ ಮುಖ್ಯಮಂತ್ರಿಗಳು / ಲೆಫ್ಟಿನೆಂಟ್ ಗವರ್ನರ್ ಗಳು ಭಾಗವಹಿಸಿದ್ದರು.

ವಿಕಸಿತ ಭಾರತ @2047ರ ದೃಷ್ಟಿಕೋನವನ್ನು ಸಾಧಿಸುವ ಸಲುವಾಗಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರವು ಒಟ್ಟಾಗಿ ಕೆಲಸ ಮಾಡಲು ಸಹಕಾರ ಮತ್ತು ಸಾಮೂಹಿಕ ಪ್ರಯತ್ನಗಳ ಅವಶ್ಯಕತೆಯನ್ನು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು.

ಕಳೆದ ಹತ್ತು ವರ್ಷಗಳಲ್ಲಿ ಭಾರತವು ಸ್ಥಿರವಾದ ಬೆಳವಣಿಗೆಯನ್ನು ಸಾಧಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು. 2014 ರಲ್ಲಿ ವಿಶ್ವದ 10 ನೇ ಅತಿದೊಡ್ಡ ಆರ್ಥಿಕತೆಯಾಗಿದ್ದ ಭಾರತೀಯ ಆರ್ಥಿಕತೆಯು 2024 ರ ವೇಳೆಗೆ 5 ನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಈಗ ಸರ್ಕಾರ ಮತ್ತು ಎಲ್ಲಾ ನಾಗರಿಕರ ಸಾಮೂಹಿಕ ಗುರಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವುದು ಎಂದು ಅವರು ಹೇಳಿದರು.

ಸಾಮಾಜಿಕ ಮತ್ತು ಆರ್ಥಿಕ ಮೂಲಸೌಕರ್ಯಗಳನ್ನು ಬಲಪಡಿಸುವ ಮೂಲಕ ಕಳೆದ ಹತ್ತು ವರ್ಷಗಳಲ್ಲಿ ನಮ್ಮ ದೇಶ ಈಗಾಗಲೇ ಸಾಕಷ್ಟು ಪ್ರಗತಿ ಸಾಧಿಸಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಪ್ರಧಾನವಾಗಿ ಆಮದು ಚಾಲಿತ ದೇಶವಾಗಿದ್ದ ಭಾರತವು ಈಗ ಅನೇಕ ಉತ್ಪನ್ನಗಳನ್ನು ಜಗತ್ತಿಗೆ ರಫ್ತು ಮಾಡುತ್ತದೆ. ರಕ್ಷಣಾ, ಬಾಹ್ಯಾಕಾಶ, ನವೋದ್ಯಮಗಳು ಮತ್ತು ಕ್ರೀಡೆಯಂತಹ ವ್ಯಾಪಕ ಕ್ಷೇತ್ರಗಳಲ್ಲಿ ದೇಶವು ವಿಶ್ವ ವೇದಿಕೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದೆ ಎಂದ ಅವರು ನಮ್ಮ ದೇಶದ ಪ್ರಗತಿಯ ಹಿಂದಿನ ಪ್ರೇರಕ ಶಕ್ತಿಯಾಗಿರುವ 140 ಕೋಟಿ ನಾಗರಿಕರ ವಿಶ್ವಾಸ ಮತ್ತು ಉತ್ಸಾಹವನ್ನು ಶ್ಲಾಘಿಸಿದರು.

ಇದು ಬದಲಾವಣೆಯ ದಶಕವಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಅವಕಾಶಗಳನ್ನು ತರುತ್ತದೆ ಎಂದು ಪ್ರಧಾನಿ ಹೇಳಿದರು. ಈ ಅವಕಾಶಗಳನ್ನು ಬಳಸಿಕೊಳ್ಳುವಂತೆ ಮತ್ತು ನೀತಿಗಳನ್ನು ರೂಪಿಸುವಂತೆ ಹಾಗು ನೀತಿ ನಿರೂಪಣೆ ಮತ್ತು ಅನುಷ್ಠಾನದಲ್ಲಿ ನವೀನ ವಿಧಾನಗಳ ಮೂಲಕ ಅಭಿವೃದ್ಧಿಗೆ ಅನುಕೂಲಕರವಾದ ಆಡಳಿತ ಕಾರ್ಯಕ್ರಮಗಳನ್ನು ಪ್ರಾರಂಭಿಸುವಂತೆ ಅವರು ರಾಜ್ಯಗಳನ್ನು ಪ್ರೋತ್ಸಾಹಿಸಿದರು.

ವಿಕಸಿತ ಭಾರತದ ದೃಷ್ಟಿಕೋನವನ್ನು ವಿಕಸಿತ ರಾಜ್ಯಗಳ ಮೂಲಕ ಸಾಕಾರಗೊಳಿಸಬಹುದು ಮತ್ತು ವಿಕಸಿತ ಭಾರತದ ಆಕಾಂಕ್ಷೆ ತಳಮಟ್ಟವನ್ನು ಅಂದರೆ ಪ್ರತಿ ಜಿಲ್ಲೆ, ಬ್ಲಾಕ್ ಮತ್ತು ಹಳ್ಳಿಯನ್ನು ತಲುಪಬೇಕು ಎಂದು ಅವರು ಅಭಿಪ್ರಾಯಪಟ್ಟರು.  ಇದಕ್ಕಾಗಿ, ಪ್ರತಿ ರಾಜ್ಯ ಮತ್ತು ಜಿಲ್ಲೆಗಳು 2047 ರ ದೃಷ್ಟಿಕೋನವನ್ನು ರಚಿಸಬೇಕು, ಇದರಿಂದ ವಿಕಸಿತ ಭಾರತ @ 2047 ಅನ್ನು ಸಾಕಾರಗೊಳಿಸಬಹುದು ಎಂದರು.

ನೀತಿ ಆಯೋಗವು ರೂಪಿಸಿರುವ ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮವನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ಅಳೆಯಬಹುದಾದ ನಿಯತಾಂಕಗಳ/ಮಾನದಂಡಗಳ ನಿರಂತರ ಮತ್ತು ಆನ್ ಲೈನ್ ಮೇಲ್ವಿಚಾರಣೆ ಇದರ ಯಶಸ್ಸಿನ ಕೀಲಿಕೈಯಾಗಿದೆ, ಇದು ವಿವಿಧ ಸರ್ಕಾರಿ ಯೋಜನೆಗಳಲ್ಲಿ ತಮ್ಮ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸಲು ಜಿಲ್ಲೆಗಳ ನಡುವೆ ಆರೋಗ್ಯಕರ ಸ್ಪರ್ಧೆಗೆ ಕಾರಣವಾಗಿದೆ ಎಂದರು.

ನುರಿತ ಕೌಶಲ್ಯಯುಕ್ತ ಮಾನವ ಸಂಪನ್ಮೂಲಕ್ಕಾಗಿ ಜಗತ್ತು ಭಾರತದತ್ತ ಒಲವು ತೋರುತ್ತಿರುವುದರಿಂದ ಯುವಜನರನ್ನು  ಉದ್ಯೋಗಕ್ಕೆ ಸಿದ್ಧಗೊಳಿಸಲು ಕೌಶಲ್ಯ ಮತ್ತು ತರಬೇತಿಯ ಅವಶ್ಯಕತೆಯನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು.

ಹೂಡಿಕೆದಾರ ಸ್ನೇಹಿ ವಾತಾವರಣವನ್ನು ಒದಗಿಸುವಂತೆ ಅವರು ರಾಜ್ಯಗಳನ್ನು ಪ್ರೋತ್ಸಾಹಿಸಿದರು. ಹೂಡಿಕೆಗಳನ್ನು ಆಕರ್ಷಿಸಲು ಅನುಸರಿಸಬೇಕಾದ ನೀತಿಗಳು, ಕಾರ್ಯಕ್ರಮಗಳು ಮತ್ತು ಪ್ರಕ್ರಿಯೆಗಳನ್ನು ಒಳಗೊಂಡಿರುವ ಮಾನದಂಡಗಳ 'ಹೂಡಿಕೆ ಸ್ನೇಹಿ ಚಾರ್ಟರ್' ಅನ್ನು ಸಿದ್ಧಪಡಿಸುವಂತೆ ಅವರು ನೀತಿ ಆಯೋಗಕ್ಕೆ ನಿರ್ದೇಶನ ನೀಡಿದರು. ಹೂಡಿಕೆಗಳನ್ನು ಆಕರ್ಷಿಸಲು ರಾಜ್ಯಗಳ ನಡುವೆ ಆರೋಗ್ಯಕರ ಸ್ಪರ್ಧೆಯನ್ನು ಉತ್ತೇಜಿಸಲು ಮಾನದಂಡಗಳಡಿಯಲ್ಲಿ ಮಾಡಲಾಗುವ ಸಾಧನೆಯ ಮೇಲೆ ನಿಗಾ ಇಡಬಹುದು. ಹೂಡಿಕೆಗಳನ್ನು ಆಕರ್ಷಿಸಲು ಕಾನೂನು ಮತ್ತು ಸುವ್ಯವಸ್ಥೆ, ಉತ್ತಮ ಆಡಳಿತ ಮತ್ತು ಮೂಲಸೌಕರ್ಯಗಳು ಪ್ರೋತ್ಸಾಹಕಗಳಿಗಿಂತ ಹೆಚ್ಚು ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದರು.

ಜಲ ಸಂಪನ್ಮೂಲಗಳ ಪರಿಣಾಮಕಾರಿ ಬಳಕೆಗಾಗಿ ರಾಜ್ಯ ಮಟ್ಟದಲ್ಲಿ ನದಿ ಜಾಲಗಳ (ಗ್ರಿಡ್ ಗಳ)  ರಚನೆಯನ್ನು ಪ್ರಧಾನಮಂತ್ರಿಯವರು ಪ್ರೋತ್ಸಾಹಿಸಿದರು.

ವಿಕಸಿತ ಭಾರತಕ್ಕಾಗಿ ನಾವು ಶೂನ್ಯ ಬಡತನವನ್ನು ಆದ್ಯತೆಯಾಗಿಸಬೇಕು ಎಂದು ಅವರು ಸಲಹೆ ನೀಡಿದರು. ನಾವು ಬಡತನವನ್ನು ಕೇವಲ ಕಾರ್ಯಕ್ರಮ ಮಟ್ಟದಲ್ಲಿ ನಿಭಾಯಿಸುವ ಬದಲು ವೈಯಕ್ತಿಕ ಆಧಾರದ ಮೇಲೆ ನಿಭಾಯಿಸಬೇಕಾಗಿದೆ ಎಂದು ಅವರು ಒತ್ತಿ ಹೇಳಿದರು.  ತಳಮಟ್ಟದಿಂದ ಬಡತನವನ್ನು ನಿವಾರಿಸುವುದರಿಂದ  ದೇಶದಲ್ಲಿ ಪರಿವರ್ತನಶೀಲ ಪರಿಣಾಮ ತರಲು ಸಾಧ್ಯವಾಗುತ್ತದೆ ಎಂದವರು ನುಡಿದರು.

ಕೃಷಿಯಲ್ಲಿ ಉತ್ಪಾದಕತೆ ಮತ್ತು ವೈವಿಧ್ಯತೆಯನ್ನು ಹೆಚ್ಚಿಸಲು ಮತ್ತು ರೈತರಿಗೆ ಮಾರುಕಟ್ಟೆ ಸಂಪರ್ಕವನ್ನು ಒದಗಿಸಲು ಎಲ್ಲಾ ರಾಜ್ಯಗಳನ್ನು ಪ್ರಧಾನಮಂತ್ರಿ ಪ್ರೋತ್ಸಾಹಿಸಿದರು. ಮಣ್ಣಿನ ಫಲವತ್ತತೆಯನ್ನು ಸುಧಾರಿಸುವ, ಕಡಿಮೆ ವೆಚ್ಚದಿಂದಾಗಿ ರೈತರಿಗೆ ಉತ್ತಮ ಮತ್ತು ತ್ವರಿತ ಆದಾಯವನ್ನು ಖಾತ್ರಿಪಡಿಸುವ ಹಾಗು ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯನ್ನು ಒದಗಿಸುವ ನೈಸರ್ಗಿಕ ಕೃಷಿ ಪದ್ಧತಿಗಳ ಅಳವಡಿಕೆಯನ್ನು ವಿಸ್ತರಿಸಲು  ಆದ್ಯತೆ ನೀಡಬೇಕು ಎಂದವರು ಹೇಳಿದರು.

ಭವಿಷ್ಯದಲ್ಲಿ ಜನಸಂಖ್ಯಾ ವೃದ್ಧಾಪ್ಯದ ಸಮಸ್ಯೆಗಳನ್ನು ಪರಿಹರಿಸಲು ಜನಸಂಖ್ಯಾ ನಿರ್ವಹಣಾ ಯೋಜನೆಗಳನ್ನು ಪ್ರಾರಂಭಿಸುವಂತೆ ಪ್ರಧಾನಮಂತ್ರಿಯವರು ರಾಜ್ಯಗಳನ್ನು ಪ್ರೋತ್ಸಾಹಿಸಿದರು. 

ಎಲ್ಲಾ ಹಂತಗಳಲ್ಲಿ ಸರ್ಕಾರಿ ಅಧಿಕಾರಿಗಳ ಸಾಮರ್ಥ್ಯ ವರ್ಧನೆಯನ್ನು ಕೈಗೊಳ್ಳುವಂತೆ ರಾಜ್ಯಗಳಿಗೆ ಪ್ರಧಾನಮಂತ್ರಿಯವರು ಮನವಿ ಮಾಡಿದರು ಮತ್ತು ಅದಕ್ಕಾಗಿ ಸಾಮರ್ಥ್ಯ ವರ್ಧನೆ ಆಯೋಗದೊಂದಿಗೆ ಸಹಯೋಗ ಮಾಡುವಂತೆಯೂ  ಪ್ರೋತ್ಸಾಹಿಸಿದರು.

ಮುಖ್ಯಮಂತ್ರಿ/ ಲೆಫ್ಟಿನೆಂಟ್ ಗವರ್ನರ್ ಗಳು ವಿಕಸಿತ ಭಾರತ @ 2047 ರ ದೃಷ್ಟಿಕೋನಕ್ಕಾಗಿ ವಿವಿಧ ಸಲಹೆಗಳನ್ನು ನೀಡಿದರು ಮತ್ತು ತಮ್ಮ ರಾಜ್ಯಗಳಲ್ಲಿ ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆಯೂ ಚರ್ಚಿಸಿದರು. ಕೃಷಿ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ, ಕುಡಿಯುವ ನೀರು, ಅನುಸರಣೆಯನ್ನು ಕಡಿಮೆ ಮಾಡುವುದು, ಆಡಳಿತ, ಡಿಜಿಟಲೀಕರಣ, ಮಹಿಳಾ ಸಬಲೀಕರಣ, ಸೈಬರ್ ಭದ್ರತೆ ಇತ್ಯಾದಿ ಕ್ಷೇತ್ರಗಳಲ್ಲಿ ಕೆಲವು ಪ್ರಮುಖ ಸಲಹೆಗಳು ಮತ್ತು ಉತ್ತಮ ಪದ್ಧತಿಗಳು ಇದರಲ್ಲಿ ಪ್ರಸ್ತಾಪವಾದವು.  ಹಲವಾರು ರಾಜ್ಯಗಳು 2047 ಕ್ಕೆ ರಾಜ್ಯ ದೃಷ್ಟಿಕೋನವನ್ನು ರಚಿಸುವ ತಮ್ಮ ಪ್ರಯತ್ನಗಳನ್ನು ಹಂಚಿಕೊಂಡವು.

ಸಭೆಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನೀಡಿದ ಸಲಹೆಗಳನ್ನು ಅಧ್ಯಯನ ಮಾಡುವಂತೆ ಪ್ರಧಾನಮಂತ್ರಿಯವರು ನೀತಿ ಆಯೋಗಕ್ಕೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಭಾಗವಹಿಸಿದ್ದಕ್ಕಾಗಿ ಮತ್ತು ತಮ್ಮ ಅಭಿಪ್ರಾಯಗಳು ಮತ್ತು ಅನುಭವಗಳನ್ನು ಹಂಚಿಕೊಂಡಿದ್ದಕ್ಕಾಗಿ ಅವರು ಎಲ್ಲಾ ಮುಖ್ಯಮಂತ್ರಿಗಳು ಮತ್ತು ಲೆಫ್ಟಿನೆಂಟ್ ಗವರ್ನರ್ ಗಳಿಗೆ ಕೃತಜ್ಞತೆ ಸಲ್ಲಿಸಿದರು ಮತ್ತು ಸಹಕಾರಿ ಒಕ್ಕೂಟ ವ್ಯವಸ್ಥೆಯ ಶಕ್ತಿಯ ಮೂಲಕ ವಿಕಸಿತ ಭಾರತ @ 2047ರ ದೃಷ್ಟಿಕೋನವನ್ನು ಈಡೇರಿಸುವ ಹಾದಿಯಲ್ಲಿ ಭಾರತ ಪ್ರಗತಿ ಸಾಧಿಸುವುದೆಂಬ  ವಿಶ್ವಾಸವನ್ನು ವ್ಯಕ್ತಪಡಿಸಿದರು.

 

*****



(Release ID: 2038180) Visitor Counter : 44