ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೇಂದ್ರ ಆರೋಗ್ಯ ಸಚಿವ ಶ್ರೀ ಜೆ.ಪಿ.ನಡ್ಡಾ ಅವರು ಆಯುಷ್ಮಾನ್ ಭಾರತ್ ಪಿಎಂಜೆಎವೈ ಮತ್ತು ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (ಎಬಿಡಿಎಂ)ನ ಪ್ರಗತಿ ಪರಿಶೀಲನೆ ನಡೆಸಿದರು


ಈ ಯೋಜನೆಯಡಿ 34.7 ಕೋಟಿ ಆಯುಷ್ಮಾನ್ ಕಾರ್ಡ್ ಗಳನ್ನು ರೂಪಿಸಲಾಗಿದೆ ಮತ್ತು 7.35 ಕೋಟಿಗೂ ಹೆಚ್ಚು ಆಸ್ಪತ್ರೆ ಪ್ರವೇಶಗಳನ್ನು ಈ ಯೋಜನೆಯಡಿ ಒದಗಿಸಲಾಗಿದೆ ಹಾಗು ಯೋಜನೆ ಅಡಿ ಒಂದು ಲಕ್ಷ ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗಿದೆ

ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಅಡ್ಡಿಯಾಗುವ ಸವಾಲುಗಳನ್ನು ರಾಜ್ಯಗಳ ಸಮನ್ವಯದೊಂದಿಗೆ ತ್ವರಿತವಾಗಿ ಪರಿಹರಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ

ಈ ದೂರದೃಷ್ಟಿಯ ಯೋಜನೆಗಳ ಪ್ರಯೋಜನಗಳು ಸಮಾಜದ ಅತ್ಯಂತ ಅಗತ್ಯವಿರುವ ಮತ್ತು ದುರ್ಬಲ ವರ್ಗಗಳನ್ನು ತಲುಪಬೇಕಾಗಿದೆ: ಶ್ರೀ ಜೆ.ಪಿ.ನಡ್ಡಾ

"ಎಬಿ-ಪಿಎಂಜೆಎವೈಗಾಗಿ ಆಯುಷ್ಮಾನ್ ಕಾರ್ಡ್ ಅನ್ನು ರಚಿಸಲು ಅರ್ಹ ಫಲಾನುಭವಿಗಳಿಗೆ ಅನುವು ಮಾಡಿಕೊಡುವ ಸುಲಭ ಮಾರ್ಗಗಳು ಮತ್ತು ಕಾರ್ಯವಿಧಾನಗಳನ್ನು ನಾವು ರಚಿಸೋಣ"

ಫಲಾನುಭವಿಗಳೊಂದಿಗೆ ನೇರವಾಗಿ ಸಂಪರ್ಕ ಸಾಧಿಸಲು ಮತ್ತು ಅವರ ರೋಗಿಯ ಆರೈಕೆಯ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಲು ಅನುವು ಮಾಡಿಕೊಡಲು ತಂತ್ರಜ್ಞಾನವನ್ನು ಬಳಸುವುದು ಮುಖ್ಯ: ಶ್ರೀ ಜೆ.ಪಿ.ನಡ್ಡಾ

Posted On: 12 JUL 2024 6:39PM by PIB Bengaluru

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀ ಜಗತ್ ಪ್ರಕಾಶ್ ನಡ್ಡಾ ಅವರು ಇಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ (ಎನ್ ಎಚ್ ಎ) ಹಿರಿಯ ಅಧಿಕಾರಿಗಳೊಂದಿಗೆ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂಜೆಎವೈ) ಮತ್ತು ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (ಎಬಿಡಿಎಂ)ಗಳ ಪ್ರಗತಿ ಪರಿಶೀಲನೆ ನಡೆಸಿದರು. 

ಎನ್ಎಚ್ಎ ಸಿಇಒ ಶ್ರೀಮತಿ ದೀಪ್ತಿ ಗೌರ್ ಮುಖರ್ಜಿ ಅವರು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಗೆ ಅವುಗಳ ಪ್ರಮುಖ ಅಂಶಗಳು, ಯೋಜನೆಗಳ ಪ್ರಸ್ತುತ ಸ್ಥಿತಿ ಮತ್ತು ಅವುಗಳ ಕಾರ್ಯಾಚರಣೆಯ ವಿವಿಧ ಅಂಶಗಳ ಬಗ್ಗೆ ವಿವರವಾದ ಪ್ರಸ್ತುತಿಯನ್ನು ನೀಡಿದರು. ಈ ಯೋಜನೆಯು 34.7 ಕೋಟಿ ಆಯುಷ್ಮಾನ್ ಕಾರ್ಡ್ಗಳು, 7.35 ಕೋಟಿ ಆಸ್ಪತ್ರೆ ಪ್ರವೇಶಗಳ ವಿಷಯದಲ್ಲಿ ಮಹತ್ವದ ಮೈಲಿಗಲ್ಲುಗಳನ್ನು ಸಾಧಿಸಿದೆ. ಎಂಪಾನೆಲ್ ಮಾಡಲಾದ ಆಸ್ಪತ್ರೆಗಳ ಜಾಲವನ್ನು ಬಲಪಡಿಸುವ ಮತ್ತು ಅವುಗಳೊಂದಿಗೆ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳುವ ಯೋಜನೆಯನ್ನು ಎನ್ಎಚ್ಎ ಪ್ರಸ್ತುತಪಡಿಸಿತು.

ಸಾರ್ವತ್ರಿಕ ಆರೋಗ್ಯ ರಕ್ಷಣೆ ಮತ್ತು ಎಬಿ ಪಿಎಂ-ಜೆಎವೈ ಮೂಲಕ ಸಮಾಜದ ಅತ್ಯಂತ ಅಗತ್ಯವಿರುವ ಮತ್ತು ದುರ್ಬಲ ವರ್ಗಗಳಿಗೆ ಪ್ರಯೋಜನವಾಗುವ ಗೌರವಾನ್ವಿತ ಪ್ರಧಾನ ಮಂತ್ರಿಯವರ ದೃಷ್ಟಿಕೋನವನ್ನು ಒತ್ತಿಹೇಳಿದ ಕೇಂದ್ರ ಆರೋಗ್ಯ ಸಚಿವರು, ಈ ದೂರದೃಷ್ಟಿಯ ಯೋಜನೆಗಳ ಪ್ರಯೋಜನಗಳು ಸಮಾಜದ ಅತ್ಯಂತ ಅಗತ್ಯವಿರುವ ಮತ್ತು ದುರ್ಬಲ ವರ್ಗಗಳಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಪಿಎಂ-ಜೆಎವೈ ಪರಿಣಾಮಕಾರಿ ಅನುಷ್ಠಾನಕ್ಕೆ ಅಡ್ಡಿಯಾಗುವ ಸವಾಲುಗಳು ಮತ್ತು ಯಾವುದೇ ಸಮಸ್ಯೆಗಳನ್ನು ರಾಜ್ಯಗಳ ಸಮನ್ವಯದೊಂದಿಗೆ ಶೀಘ್ರವಾಗಿ ಪರಿಹರಿಸಲಾಗುವುದನ್ನು  ನಾವು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಪ್ರಸ್ತುತ ಸಮಸ್ಯೆಗಳನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಮತ್ತು ಅವುಗಳನ್ನು ಒಗ್ಗಟ್ಟಿನಿಂದ ಪರಿಹರಿಸಲು ನಿಯಮಿತವಾಗಿ ರಾಜ್ಯಗಳೊಂದಿಗೆ ತೊಡಗಿಸಿಕೊಳ್ಳಲು ಹಾಗು ಸಮನ್ವಯಗೊಳಿಸಲು ಅವರು ಎನ್ಎಚ್ಎಗೆ ನಿರ್ದೇಶನ ನೀಡಿದರು.

ಅರ್ಹ ಫಲಾನುಭವಿಗಳ ಆಯುಷ್ಮಾನ್ ಕಾರ್ಡ್ ಸೃಷ್ಟಿಯನ್ನು ಬಲಪಡಿಸಲು ಮತ್ತು ವಿಸ್ತರಿಸಲು, ವಿಶೇಷವಾಗಿ ನಗರ ಪ್ರದೇಶಗಳು ಮತ್ತು ಮೆಟ್ರೋಪಾಲಿಟನ್ ನಗರಗಳಲ್ಲಿ, ತಳಮಟ್ಟದಿಂದ ಮೇಲೇರುವ  ವಿಧಾನವನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ, ಅಲ್ಲಿ ನಾವು ಮಾರ್ಗಗಳು ಮತ್ತು ಕಾರ್ಯವಿಧಾನಗಳನ್ನು ರಚಿಸಬೇಕು, ಆ ಮೂಲಕ ಅವರ ಆಯುಷ್ಮಾನ್ ಕಾರ್ಡ್ ರಚನೆಯನ್ನು  ಸುಲಭವಾಗಿ ಪರಿಶೀಲಿಸಬಹುದು ಎಂದು ಶ್ರೀ ನಡ್ಡಾ ಹೇಳಿದರು. "ದಾಖಲಾತಿ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಮ್ಮ ವ್ಯವಸ್ಥೆಗಳನ್ನು ಸ್ಥಿತಿಸ್ಥಾಪಕತ್ವವುಳ್ಳ ರೀತಿಯಲ್ಲಿ ಇರುವಂತೆ ಮತ್ತು ಚುರುಕಾಗಿರುವಂತೆ ನೋಡಿಕೊಳ್ಳೋಣ" ಎಂದು ಅವರು ಸಲಹೆ ನೀಡಿದರು.

ಫಲಾನುಭವಿಗಳ ಅನುಭವಗಳಿಂದ ಕಲಿಯುವುದು ಮುಖ್ಯ ಎಂದು ಹೇಳಿದ ಶ್ರೀ ನಡ್ಡಾ, ಫಲಾನುಭವಿಗಳೊಂದಿಗೆ ನೇರವಾಗಿ ಸಂಪರ್ಕ ಸಾಧಿಸಲು ಮತ್ತು ಅವರ ಆಸ್ಪತ್ರೆಗೆ ದಾಖಲಾಗುವಿಕೆ ಹಾಗು ಚಿಕಿತ್ಸೆಯ ಅನುಭವಗಳನ್ನು ಸಂಗ್ರಹಿಸಲು ಸ್ಮಾರ್ಟ್ ತಂತ್ರಜ್ಞಾನ ಸಾಧನಗಳನ್ನು ಬಳಸಬಹುದು ಎಂದೂ ಹೇಳಿದರು.  ಇದು ನಮ್ಮ ಆರೋಗ್ಯ ಸೇವೆಗಳ ವಿತರಣೆಯನ್ನು ಸುಧಾರಿಸಲು ನಮಗೆ ಸಹಾಯ ಮಾಡುತ್ತದೆ ಎಂಬುದನ್ನು ಅವರು ಒತ್ತಿ ಹೇಳಿದರು.

ಎನ್ಎಚ್ಎ ತೆಗೆದುಕೊಳ್ಳುತ್ತಿರುವ ವಂಚನೆ ಪತ್ತೆ ಮತ್ತು ತಡೆಗಟ್ಟುವ ಕ್ರಮಗಳ ಬಗ್ಗೆ ಕೇಂದ್ರ ಆರೋಗ್ಯ ಸಚಿವರಿಗೆ ವಿವರಿಸಲಾಯಿತು, ಇದು ಯೋಜನೆಯ ದಕ್ಷತೆಯನ್ನು ಹೆಚ್ಚಿಸಲು ಸಹಾಯ ಮಾಡಿದೆ.

ಶ್ರೀ. ಜೆ.ಪಿ.ನಡ್ಡಾ ಅವರು ರಾಷ್ಟ್ರೀಯ ಆರೋಗ್ಯ ಕ್ಲೈಮ್ ಎಕ್ಸ್ಚೇಂಜ್ (ಎನ್ಎಚ್ ಸಿ ಎಕ್ಸ್) ಕಾರ್ಯವೈಖರಿಯನ್ನು ಅವಲೋಕಿಸಿದರು.ಭಾರತೀಯ ವಿಮಾ ನಿಯಂತ್ರಣ ಅಭಿವೃದ್ಧಿ ಪ್ರಾಧಿಕಾರ (ಐಆರ್ಡಿಎಐ) ಸಹಯೋಗದೊಂದಿಗೆ ಎನ್ಎಚ್ ಸಿ ಎಕ್ಸ್  ಯನ್ನು ಎನ್ಎಚ್ಎ ಅಭಿವೃದ್ಧಿಪಡಿಸಿದೆ. ಆಸ್ಪತ್ರೆಗಳು ವಿಮಾ ಕಂಪನಿಗೆ ಸಲ್ಲಿಸಿದ ಕ್ಲೈಮ್ ಗಳನ್ನು ಕಾಗದರಹಿತವಾಗಿ ಇತ್ಯರ್ಥಪಡಿಸಲು ಎನ್ ಎಚ್ ಸಿಎಕ್ಸ್ ಅನುವು ಮಾಡಿಕೊಡುತ್ತದೆ. ಇದು ಐಆರ್ಡಿಎಐಗೆ ನೈಜ ಸಮಯದಲ್ಲಿ ಕ್ಲೈಮ್ ಇತ್ಯರ್ಥ ಸ್ಥಿತಿಯ ಡ್ಯಾಶ್ ಬೋರ್ಡ್ ವೀಕ್ಷಣೆಯನ್ನು ಹೊಂದಲು ಅನುವು ಮಾಡಿಕೊಡುತ್ತದೆ. 99% ವಿಮಾ ಮಾರುಕಟ್ಟೆಯನ್ನು ಒಳಗೊಂಡಿರುವ 33 ವಿಮಾ ಕಂಪನಿಗಳನ್ನು ಎನ್ ಎಚ್ ಸಿಎಕ್ಸ್ ಪ್ಲಾಟ್ ಫಾರ್ಮ್ ನಲ್ಲಿ ಸಂಯೋಜಿಸಲಾಗಿದೆ. ನಾಗರಿಕರು ತಮ್ಮ ವಿಮಾ ಕ್ಲೈಮ್ನ ಸ್ಥಿತಿಯನ್ನು ಮೊಬೈಲ್ ಮೂಲಕ ನೋಡಲು ಸಾಧ್ಯವಾಗುತ್ತದೆ.

ಎನ್ಎಚ್ಎ ಹೆಚ್ಚುವರಿ ಸಿಇಒ ಡಾ.ಬಸಂತ್ ಗರ್ಗ್ ಮತ್ತು ಎನ್ಎಚ್ಎ ಮತ್ತು ಕೇಂದ್ರ ಆರೋಗ್ಯ ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಪ್ರಗತಿ ಪರಿಶೀಲನಾ ಸಭೆಯಲ್ಲಿ ಉಪಸ್ಥಿತರಿದ್ದರು.

*****



(Release ID: 2033162) Visitor Counter : 8