ಉಪರಾಷ್ಟ್ರಪತಿಗಳ ಕಾರ್ಯಾಲಯ
ತಿರುವನಂತಪುರದಲ್ಲಿರುವ ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ(ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೇಸ್ ಸೈನ್ಸ್ ಅಂಡ್ ಟೆಕ್ನಾಲಜಿ-ಐಐಎಸ್ಟಿ)ಯ 12ನೇ ಘಟಿಕೋತ್ಸವ ಉದ್ದೇಶಿಸಿ ಉಪರಾಷ್ಟ್ರಪತಿ ಭಾಷಣ
Posted On:
06 JUL 2024 3:40PM by PIB Bengaluru
ಇದು ಅತ್ಯಂತ ಸ್ಮರಣೀಯ ಕ್ಷಣ ಎಂದು ನನಗೆ ತಿಳಿದಿದೆ. ಅದಕ್ಕಾಗಿ ನಾನು ನಿಮ್ಮೆಲ್ಲರಿಗೂ ಆಭಾರಿಯಾಗಿದ್ದೇನೆ.
ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಸಾಧನೆ ಮತ್ತು ಕೊಡುಗೆಗಳನ್ನು ನೀಡುವ ಮೂಲಕ ಈ ಸಂಸ್ಥೆಗೆ ಗೌರವ ತಂದಿದ್ದಾರೆ, ಅವರೊಂದಿಗಿನ ನಮ್ಮ ತೊಡಗಿಸಿಕೊಳ್ಳುವಿಕೆಯು ಸಹ ಬೆಳೆಯುತ್ತಾ ಸಾಗಿದೆ.
ನಾನು ಹಳೆಯ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತೇನೆ. ಪ್ರತಿ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಚಿಂತಕರ ಚಾವಡಿಯನ್ನು ರೂಪಿಸುತ್ತಾರೆ. ಆ ಚಿಂತಕರ ಚಾವಡಿಯು ಅದ್ಭುತಗಳನ್ನು ರೂಪಿಸಬಹುದು. ಇತರೆ ಪ್ರತಿಷ್ಠಿತ ಸಂಸ್ಥೆಗಳ ಹಳೆಯ ವಿದ್ಯಾರ್ಥಿಗಳು ಇದನ್ನು ಉದಾಹರಣೆಯಾಗಿಸಬೇಕು ಮತ್ತು ಅನುಕರಿಸಬೇಕು.
ನಾವು ಹಳೆಯ ವಿದ್ಯಾರ್ಥಿಗಳ ಸಂಘ ಅಥವಾ ಒಕ್ಕೂಟ ಹೊಂದಿರಬೇಕು ಎಂಬ ಕಲ್ಪನೆಯನ್ನು ನಾನು ಬಹಳ ಹಿಂದಿನಿಂದಲೂ ನಂಬುತ್ತಾ ಬಂದಿದ್ದೇನೆ. ಪ್ರತಿಷ್ಠಿತ ಸಂಸ್ಥೆಗಳಾದ ನಿಮ್ಮ ಐಐಟಿ, ಐಐಎಂ, ಜೆಎನ್‌ಯು ಮತ್ತು ಇನ್ನೂ ಅನೇಕ ಹಳೆಯ ವಿದ್ಯಾರ್ಥಿಗಳ ಸಂಘಗಳಿದ್ದರೆ, ನನ್ನ ಮಾತನ್ನು ನಂಬಿ... ಅದು ಜಾಗತಿಕ ಚಿಂತಕರ ಚಾವಡಿಯಾಗುತ್ತದೆ, ಅದು ನಮ್ಮ ನೀತಿ ನಿರೂಪಣೆಗೆ ಕೊಡುಗೆ ನೀಡುತ್ತದೆ. ಎಲ್ಲೋ ಒಂದು ಆರಂಭ ಮಾಡಬೇಕಷ್ಟೆ, ಇದಕ್ಕಿಂತ ಉತ್ತಮವಾದ ಸ್ಥಳ ಇನ್ನೊಂದಿಲ್ಲ.
ಸಂಸ್ಥೆಯೊಂದರ ನಿಜವಾದ ನಿರ್ಮಾತೃಗಳಾಗಿ ಕಾರ್ಯ ನಿರ್ವಹಿಸುವವರು ಜನರೇ. ಅವರೇ ಇಂತಹ ಸಂಸ್ಥೆಯನ್ನು ಕಟ್ಟುತ್ತಾರೆ.
ಮೂಲಸೌಕರ್ಯ ಅತ್ಯಗತ್ಯ, ಆದರೆ ಅದೇ ಚೈತನ್ಯವಲ್ಲ, ಸಾರವೂ ಅಲ್ಲ. ಆದ್ದರಿಂದ, ಮಾನವ ಸಂಪನ್ಮೂಲವೇ ಅತಿಮುಖ್ಯ. ಬೋಧಕರು ಅಥವಾ ಅಧ್ಯಾಪಕರ ಬಲವೇ ಸಂಸ್ಥೆಯ ನಿಜವಾದ ಬೆನ್ನಲುಬಾಗಿದೆ. ಅದೇ ಸಂಸ್ಥೆಯ ನೈಜ ಬಲವನ್ನು ನಿಶ್ಚಯಿಸುತ್ತದೆ. ಅಂತಹ ನಿರ್ಣಾಯಕ, ಗಮನಾರ್ಹ ಮತ್ತು ಸಮರ್ಥ ಅಧ್ಯಾಪಕರನ್ನು ಹೊಂದಲು ನೀವೆಲ್ಲರೂ ಆಶೀರ್ವದಿಸಲ್ಪಟ್ಟಿದ್ದೀರಿ.
ಗೌರವಾನ್ವಿತ ರಾಷ್ಟ್ರಪತಿಗಳೆ, ಕುಲಪತಿಗಳೆ, ಗೌರವಾನ್ವಿತ ಅಧ್ಯಾಪಕರೆ, ಆತ್ಮೀಯ ವಿದ್ಯಾರ್ಥಿಗಳೆ, ಅವರ ಕುಟುಂಬ ಸದಸ್ಯರೆ, ಅವರ ಸ್ನೇಹಿತರೆ, ಸಿಬ್ಬಂದಿ ಮತ್ತು ಈ ಸಂಸ್ಥೆಗೆ ಸೇರಿದ ಮಾನವ ಸಂಪನ್ಮೂಲದ ಪ್ರತಿಯೊಂದು ವಿಭಾಗಕ್ಕೂ ನನ್ನ ಶುಭಾಶಯಗಳು, ನನ್ನ ವಂದನೆಗಳು.
ಇದು ನನಗೆ ಹೇಳಲಾಗದ ಸಂತೋಷವಾಗಿದೆ. ನಾನು ಘಟಿಕೋತ್ಸವ ಭಾಷಣಗಳನ್ನು ಮಾಡಿದ್ದೇನೆ, ಕೆಲವು ಸಂದರ್ಭಗಳಲ್ಲಿ ಮಾಡಿಲ್ಲ. ಪಶ್ಚಿಮ ಬಂಗಾಳ ರಾಜ್ಯದ ರಾಜ್ಯಪಾಲರಾಗಿ, ನಾನು ಸುಮಾರು 3 ಡಜನ್ ವಿಶ್ವವಿದ್ಯಾಲಯಗಳಿಗೆ ಕುಲಪತಿಯಾಗಿದ್ದೆ. ಅಲ್ಲಿ 11 ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿದ್ದೇನೆ. ಆದರೆ, ಇವತ್ತಿನ ಈ ಸಂದರ್ಭವು ತುಂಬಾ ವಿಶೇಷವಾಗಿದೆ. ಏಕೆಂದರೆ ಸಂಸ್ಥೆಯೇ ತುಂಬಾ ವಿಭಿನ್ನವಾಗಿದೆ. ಅದರ ಆದೇಶವು ಸಹ ವಿಭಿನ್ನವಾಗಿದೆ, ಅದರ ದೃಷ್ಟಿಕೋನವೂ ವಿಭಿನ್ನವಾಗಿದೆ. ಅದರ ದೂರದೃಷ್ಟಿಯು ನಮ್ಮ ಬೆಳವಣಿಗೆ ಅಥವಾ ಪ್ರಗತಿಯ ಸಂರಚನೆಯ ವಾಸ್ತವಕ್ಕೆ ಸಂಬಂಧಿಸಿದೆ. ಆದ್ದರಿಂದ, ಈ ರಾಷ್ಟ್ರದ ಭವಿಷ್ಯವನ್ನು ರೂಪಿಸುವ ಯುವ ಮನಸ್ಸುಗಳೊಂದಿಗೆ ಸಂವಹನ ನಡೆಸಲು ಈ ಅಮೂಲ್ಯವಾದ ಅವಕಾಶವನ್ನು ನನಗೆ ಒದಗಿಸಿದ್ದಕ್ಕಾಗಿ ನಾನು ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ(ಐಐಎಸ್ಟಿ)ಗೆ ಕೃತಜ್ಞನಾಗಿದ್ದೇನೆ.
ಬಾಹ್ಯಾಕಾಶ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ಅನೇಕ ವಿಷಯಗಳು ಅಮೂರ್ತವಾಗಿವೆ. ಅದರ ಆಯಾಮಗಳನ್ನು ತಿಳಿಯಲು ನಮಗೆ ಸಾಧ್ಯವಾಗುತ್ತಿಲ್ಲ, ಆದರೆ ಇತರರಿಗೆ ನಿಗೂಢ ಮತ್ತು ಅಮೂರ್ತವಾದದ್ದು ನಿಮ್ಮ ಹೃದಯ ಮತ್ತು ಮನಸ್ಸಿನಲ್ಲಿದೆ, ಅದನ್ನು ಸ್ಪಷ್ಟವಾಗಿಸುತ್ತದೆ ಮತ್ತು ಅದು ನಮ್ಮ ದೇಶದ ಅಥವಾ ಅದಕ್ಕಿಂತ ಹೆಚ್ಚಿನ ಜನರ ಜೀವನವನ್ನು ಸುಧಾರಿಸುತ್ತದೆ. ಈ ಸಂಸ್ಥೆಯು ಏಷ್ಯಾದ ಮೊದಲ ಬಾಹ್ಯಾಕಾಶ ವಿಶ್ವವಿದ್ಯಾಲಯ ಎಂದು ಹೆಮ್ಮೆಪಡಬಹುದು, ದಶಕಗಳ ನಂತರ ಇದು ಅತ್ಯಂತ ಪ್ರತಿಷ್ಠಿತ ಜಾಗತಿಕ ವಿಶ್ವವಿದ್ಯಾಲಯವಾಗುವುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ.
ಇದನ್ನು ಸಮಗ್ರ ದೃಷ್ಟಿಕೋನದಿಂದ ವಿನ್ಯಾಸಗೊಳಿಸಲಾಗಿದೆ. ಐಐಎಸ್ಟಿ ಅತ್ಯಂತ ವಿಶಿಷ್ಟವಾದ ಜ್ಞಾನ ಮತ್ತು ಕಲಿಕೆಯ ವಿಭಾಗದಲ್ಲಿ ಪದವಿಪೂರ್ವ, ಸ್ನಾತಕೋತ್ತರ, ಡಾಕ್ಟರೇಟ್ ಮತ್ತು ಪೋಸ್ಟ್-ಡಾಕ್ಟರೇಟ್ ಕಾರ್ಯಕ್ರಮಗಳನ್ನು ವ್ಯಾಪಿಸಿರುವ ಸಮಗ್ರ ಶೈಕ್ಷಣಿಕ ಅನುಭವ ಒದಗಿಸುತ್ತದೆ.
ಶಿಕ್ಷಣವು ಬದಲಾವಣೆಯ ಅತ್ಯಂತ ಪ್ರಭಾವಶಾಲಿ ಪರಿವರ್ತನೆಯ ಕಾರ್ಯ ವಿಧಾನವಾಗಿದೆ ಎಂಬ ನಮ್ಮ ನಂಬಿಕೆಗೆ ನಾನು ಅಚಲವಾಗಿ ಬದ್ಧನಾಗಿದ್ದೇನೆ. ಇದು ಸಮಾನತೆಯನ್ನು ಪೋಷಿಸುತ್ತದೆ, ಅಸಮಾನತೆಗಳನ್ನು ನಿವಾರಿಸುತ್ತದೆ. ಅದರ ಸಕಾರಾತ್ಮಕ ಬದಲಾವಣೆಯ ಕಾರ್ಯವಿಧಾನವು ನಮ್ಮ ಯುವಕರಿಗೆ ಸವಾಲುಗಳನ್ನು ಸ್ವೀಕರಿಸಲು ಮತ್ತು ನಮ್ಮ ಕಾಲದಲ್ಲಿ ಹೇರಳವಾಗಿರುವ ಅವಕಾಶಗಳನ್ನು ಪಡೆಯಲು ಶಕ್ತಗೊಳಿಸುತ್ತದೆ.
ಸ್ನೇಹಿತರೆ, ಈ ದಿನವು ಅನೇಕ ವರ್ಷಗಳ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಪರಿಶ್ರಮದ ಪರಾಕಾಷ್ಠೆಯನ್ನು ಸೂಚಿಸುತ್ತದೆ. ನಿಮ್ಮ ಶಿಕ್ಷಕರ ಕೋಪವನ್ನು ನೀವು ಪರೀಕ್ಷಿಸಿರಬೇಕು; ಅವರು ಕೆಲವು ಸಂದರ್ಭಗಳಲ್ಲಿ ಬಹಳ ಪ್ರಬಲರಾಗಿರುತ್ತಾರೆ, ಆದರೆ ಅಂತಹ ಪ್ರತಿ ಕೋಪವು ನಿಮಗೆ ಅಮೃತವಾಗಿಸುತ್ತದೆ. ನೀವು ಕಲಿತು ಹೊರಗೆ ಕಾಲಿಟ್ಟ ನಂತರ ನಿಮ್ಮ ಕಲಿಕೆಯ ಜೀವನದ ಪ್ರತಿ ಕ್ಷಣವೂ ನಿಮಗೆ ಅರಿವಾಗುತ್ತದೆ.
ಕುಲಪತಿಗಳು ಸರಿಯಾಗಿ ಸೂಚಿಸಿದಂತೆ, ಇದು ಕಲಿಕೆಯ ಅಂತ್ಯ ಎಂದು ಭಾವಿಸಬೇಡಿ. ಕಲಿಕೆ ಎಂದಿಗೂ ನಿಲ್ಲುವುದಿಲ್ಲ. ನೀವು ಬದುಕಿರುವವರೆಗೆ, ನೀವು ಕಲಿಯುವುದನ್ನು ಮುಂದುವರಿಸಬೇಕು. ಒಮ್ಮೆ ನೀವು ಕಲಿಯುವುದನ್ನು ನಿಲ್ಲಿಸಿದರೆ, ನಿಮ್ಮ ಅಧಃಪತನ ಆರಂಭವಾದಂತೆ.
ಸ್ಥಿರವಾದ ಸ್ಥಾನ ಕಾಪಾಡಿಕೊಳ್ಳಲು ಸಹ, ನೀವು ಕಲಿಯಬೇಕಾಗುತ್ತದೆ, ನೀವು ಏರುಗತಿಯಲ್ಲಿದ್ದಾಗಲೂ ಇನ್ನೂ ಹೆಚ್ಚಿನದನ್ನು ಕಲಿಯಬೇಕಾಗುತ್ತದೆ. ಹಾಗಾಗಿ, ಕಲಿಕೆಯು ನಮ್ಮ ಜೀವನದ ಒಂದು ಭಾಗವಾಗಿದೆ; ಅದು ಎಂದಿಗೂ ನಿಲ್ಲುವುದಿಲ್ಲ.
ಈ ಸಂಸ್ಥೆಯು ಜಾಗತಿಕವಾಗಿ ಗುರುತಿಸಲ್ಪಟ್ಟ ಮನಸ್ಸುಗಳಿಂದ ರೂಪುಗೊಂಡಿರುವುದು ನಿಜಕ್ಕೂ ವಿಶೇಷವಾಗಿದೆ. ಈ ಸಂಸ್ಥೆಯ ಆರಂಭ ಮತ್ತು ಬೆಳವಣಿಗೆಗೆ ಕಾರಣರಾದ ಪ್ರತಿಯೊಂದು ಮನಸ್ಸು ಸಹ ರಾಷ್ಟ್ರದ ಬೆಳವಣಿಗೆಗೆ ತನ್ನದೇ ಛಾಪು ಮೂಡಿಸಿವೆ.
ಈ ಸಂಸ್ಥೆಗೆ ಅದೆಂತಹ ವಿಶಿಷ್ಟತೆ ಇದೆ! ಭಾರತದ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಐಐಎಸ್‌ಟಿಯ ಮೊದಲ ಕುಲಪತಿಯಾಗಿದ್ದರು. ಈ ಸಂಸ್ಥೆಯು ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಮತ್ತು ಪ್ರೊ. ಯು.ಆರ್. ರಾವ್ ಅವರಂತಹ ಹಲವಾರು ಸಾಧಕ ತಜ್ಞರಿಂದ ಬೆಂಬಲ ಪಡೆದಿದೆ.
ಇದರಿಂದ ಈ ಸಂಸ್ಥೆಯ ಬೆಳವಣಿಗೆ ಏರುಗತಿಯಲ್ಲೇ ಸಾಗಿದೆ.
ನಂತರ ಹೊಂದಿಸಲಾದ ಸ್ವರವು ಹೆಚ್ಚುತ್ತಿರುವ ಪಥದಲ್ಲಿದೆ. ಇದು ಬಾಹ್ಯಾಕಾಶ ತಂತ್ರಜ್ಞಾನ ವಿಷಯದಲ್ಲಿ ಬಿ.ಟೆಕ್ ಪದವಿ ನೀಡುತ್ತಿರುವ ಭಾರತದ ಏಕೈಕ ಸಂಸ್ಥೆ ಇದಾಗಿದ್ದು, ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳ ಮೇಲೆ ವಿಶೇಷ ಗಮನ ಹರಿಸಲಾಗಿದೆ. ಇದು ನಮ್ಮ ವೈಜ್ಞಾನಿಕ ಬೆಳವಣಿಗೆಯಲ್ಲಿ ಸಾಕಷ್ಟು ಪ್ರತಿಫಲಿಸುತ್ತಿದೆ.
ಸ್ನೇಹಿತರೆ, ಕಳೆದ ದಶಕದಲ್ಲಿ ಭಾರತವು ಗಣನೀಯವಾಗಿ ಮುಂದೆ ಸಾಗಿತು. ಆದರೆ ಈ ದಶಕದಲ್ಲಿ ಜಾಗತಿಕ ಸವಾಲುಗಳು ಮತ್ತು ಸಾಂಕ್ರಾಮಿಕ ರೋಗವನ್ನು ಎದುರಿಸಿತು. ಈ ಎಲ್ಲಾ ಬೆಳವಣಿಗೆಗಳ ನಡುವೆಯೂ, ಭಾರತವು ಮಿನುಗು ತಾರೆಯಾಗಿ ಹೊರಹೊಮ್ಮಿದೆ. ಜಾಗತಿಕ ವೇದಿಕೆಯಲ್ಲಿ ಅವಕಾಶಗಳ ನೆಚ್ಚಿನ ತಾಣವಾಗಿ ಮತ್ತು ಜಾಗತಿಕ ವೇದಿಕೆಯ ಗಮ್ಯತಾಣವಾಗಿ ಮನ್ನಣೆ ಪಡೆದಿದೆ.
ಐಎಂಎಫ್, ವಿಶ್ವ ಬ್ಯಾಂಕ್ ಮತ್ತು ಇತರೆ ಪ್ರತಿಷ್ಠಿತ ಸಂಸ್ಥೆಗಳಿಂದ ಈ ಮಾನ್ಯತೆ ಬಂದಿದೆ. ಇದು ನಿಮಗಾಗಿ ಹಿತವಾದ ಪರಿಸರ ವ್ಯವಸ್ಥೆ ಸೃಷ್ಟಿಸುತ್ತದೆ, ಅಲ್ಲಿ ನೀವು ನಿಮ್ಮ ಪ್ರತಿಭೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಬಹುದು, ನಿಮ್ಮ ಆಕಾಂಕ್ಷೆಗಳು ಮತ್ತು ಕನಸುಗಳನ್ನು ಸಾಕಾರಗೊಳಿಸಬಹುದು.
ನಾನು ನಿಮಗೆ ಮನವಿ ಮಾಡುತ್ತೇನೆ... ನೀವು ಹೊಂದಿರುವ ವ್ಯಾಪ್ತಿ(ವಿಸ್ಟಾಸ್) ಮತ್ತು ಅವಕಾಶಗಳತ್ತ ನೋಡಿ. ಅಡೆತಡೆಗಳನ್ನು ಮೆಟ್ಟಿ ನಿಲ್ಲಿ. ನಿಸ್ಸಂದೇಹವಾಗಿ, ಜಾಗತಿಕ ಮಟ್ಟದಲ್ಲಿ, ಭಾರತವು ಭರವಸೆ, ಆಶಾವಾದ ಮತ್ತು ಅಪಾರ ಸಾಧ್ಯತೆಗಳ ದೇಶವಾಗಿದೆ. ಜಗತ್ತು ಅದನ್ನು ಗುರುತಿಸುತ್ತದೆ.
ನನ್ನ ಯುವ ಸ್ನೇಹಿತರೆ, ನೀವು ಆಡಳಿತದಲ್ಲಿ ಅತಿ ದೊಡ್ಡ ಪಾಲುದಾರರು. ನಾವು ‘ವಿಕಸಿತ ಭಾರತ’ ಕುರಿತು ಮಾತನಾಡುವಾಗ, 2047ರಲ್ಲಿ ನಿಮ್ಮ ಪಾಲ್ಗೊಳ್ಳುವಿಕೆಯ ಬಗ್ಗೆ ನಾವು ಮಾತನಾಡುತ್ತೇವೆ. ನಮ್ಮಲ್ಲಿ ಅನೇಕರು ಇಲ್ಲಿ ಇಲ್ಲದಿರಬಹುದು, ಆದರೆ ನೀವು ಡ್ರೈವರ್ ಸೀಟಿನಲ್ಲಿರುತ್ತೀರಿ, ನೀವು ಪೈಲಟ್ ಸೀಟಿನಲ್ಲಿರುತ್ತೀರಿ, ಆ ಮುಂಚೂಣಿ ಸ್ಥಾನಗಳಲ್ಲಿ ಯಾರು ಇರಬೇಕೆಂದು ನೀವೇ ನಿಯಂತ್ರಿಸುತ್ತೀರಿ. ನಿಮ್ಮ ಪಾತ್ರ ಬಹಳ ಮಹತ್ವದ್ದಾಗಿದೆ. ಆದ್ದರಿಂದ, ನೀವು ಬದಲಾವಣೆ ತರಬೇಕು. ಆ ಬದಲಾವಣೆಯು ದೇಶಕ್ಕೆ ಒಳ್ಳೆಯದು. ನೀವು ಕನಸು ಕಂಡಿರುವ ಬದಲಾವಣೆಯಿಂದ ರಾಷ್ಟ್ರಕ್ಕೆ ಒಳ್ಳೆಯದನ್ನು ತರಬೇಕು ಎಂಬುದನ್ನು ಯಾವಾಗಲೂ ನೆನಪಿನಲ್ಲಿಡಿ.
ಆದ್ದರಿಂದ ನೀವು ಕನಸು ಕಂಡಿರುವ ಬದಲಾವಣೆಯಿಂದ ರಾಷ್ಟ್ರಕ್ಕೆ ಒಳ್ಳೆಯದನ್ನು ತರಬೇಕು ಎಂಬುದನ್ನು ಸದಾ ನೆನಪಿನಲ್ಲಿಡಿ.
ನಾನು ನಿಮ್ಮ ಗಮನವನ್ನು ಹೆರಾಕ್ಲಿಟಸ್ ಕಡೆಗೆ ಎಳೆಯುತ್ತೇನೆ. ಅವನು ಪೂರ್ವ ಸಾಕ್ರಟೀಸ್ ಯುಗದ ತತ್ವಜ್ಞಾನಿ. "ಬದುಕಿನಲ್ಲಿ ಬದಲಾವಣೆಯೇ ನಿರಂತರ" ಎಂದು ಪ್ರತಿಪಾದಿಸಿದರು. ಅವರು ಅದನ್ನು ತಮ್ಮ ಜೀವನದುದ್ದಕ್ಕೂ ಬಹಳ ತರ್ಕಬದ್ಧವಾಗಿ ಅಳವಡಿಸಿಕೊಂಡು, ಪಾಲಿಸುತ್ತಿದ್ದರು. ಅವರು ಹೇಳಿದ್ದು ಹೀಗಿದೆ... "ಯಾವುದೇ ಮನುಷ್ಯ ಒಂದೇ ನದಿಯಲ್ಲಿ 2 ಬಾರಿ ಕಾಲಿಡಲ್ಲ, ಬದಲಿಗೆ ಮುಂದಿನ ನದಿಯಲ್ಲಿ ಸಾಗಿ ಹೊಸತನ್ನು ಬಯಸುತ್ತಾನೆ". ಅಂದರೆ, "ಮನುಷ್ಯ ತಾನು ಹೆಜ್ಜೆ ಇಟ್ಟ ಹಾದಿಯಲ್ಲೇ ಮತ್ತೆ ಹೆಜ್ಜೆ ಇಡಲಾರ. ಬದಲಿಗೆ ಮುಂದೆ ಸಾಗುತ್ತಾ ಹೊಸತನ್ನು ಬಯಸುತ್ತಾನೆ" ಎಂದರ್ಥ.
ಹಾಗಾಗಿ, ಪ್ರತಿ ಕ್ಷಣವೂ ಬದಲಾಗುತ್ತಿದೆ. ಆದರೆ ಆ ಬದಲಾವಣೆಯಿಂದ ನೀವು ತಲೆದೂಗಬಾರದು. ನೀವು ಬದಲಾವಣೆಯ ಹಿಡಿತ ಹೊಂದಿರಬೇಕು. ಇದಕ್ಕಾಗಿ ಇರುವ ಏಕೈಕ ಮಾರ್ಗವೆಂದರೆ ಅದು ತಂತ್ರಜ್ಞಾನದ ಮೇಲಿನ ಹಿಡಿತ ಸಾಧಿಸುವುದು, ಅದು ಹೊಸತನದಲ್ಲಿರಬೇಕು, ಸದಾ ಹೊಸತನ ಹುಡುಕುವ ಯೋಚನಾ ಲಹರಿ ಹೊಂದಿರಬೇಕು..
ಈ ಪ್ರಮುಖ ಸಂಸ್ಥೆಯು ಬಾಹ್ಯಾಕಾಶದಲ್ಲಿ ಭಾರತದ ಬೆಳೆಯುತ್ತಿರುವ ಪರಾಕ್ರಮವನ್ನು ಸಂಕೇತಿಸುತ್ತದೆ, ಈ ರೋಮಾಂಚಕಾರಿ ಪ್ರಯಾಣದ ಪ್ರಮುಖ ಭಾಗವಾಗಲು ನೀವು ಸಿದ್ಧರಾಗಿರುವಿರಿ. ದಹನ ವಿಶ್ಲೇಷಣೆ, ಹವಾಮಾನ ಅಧ್ಯಯನಗಳು, ಕೃತಕ ಬುದ್ಧಿಮತ್ತೆ ಅಪ್ಲಿಕೇಶನ್‌ಗಳು, ಉಪಗ್ರಹ ಚಿತ್ರಣ ಮತ್ತು ಬ್ಯಾಟರಿ ತಂತ್ರಜ್ಞಾನದಲ್ಲಿನ ನಿಮ್ಮ ಯೋಜನೆಗಳು ಭಾರತದ ನಾವೀನ್ಯತೆ ಪರಾಕ್ರಮಕ್ಕೆ ಉದಾಹರಣೆಯಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಹೊಸ ಮೈಲಿಗಲ್ಲುಗಳನ್ನು ಸಾಧಿಸುವಂತೆ ಮತ್ತು ಭವಿಷ್ಯದ ಪೀಳಿಗೆಯನ್ನು ಪ್ರೇರೇಪಿಸುವಂತೆ ನಾನು ನಿಮ್ಮನ್ನು ಒತ್ತಾಯಿಸುತ್ತೇನೆ.
ನಮ್ಮೊಂದಿಗೆ ನಾವು ಸ್ಪರ್ಧಿಸುವ ಮತ್ತು ಇತರರೊಂದಿಗೆ ನಾವು ಸ್ಪರ್ಧಿಸದ ಉತ್ತಮ ಸಮಯಕ್ಕಾಗಿ ಹಾತೊರೆಯೋಣ. ಭಾರತವು ಇತರರೊಂದಿಗೆ ಅಲ್ಲ, ತಾನೇ ಸ್ವಯಂಪೂರ್ಣತೆ ಸಾಧಿಸಬೇಕು ಎಂದು ನಾನು ಹೇಳಿದಾಗ, ನಾವು ಈ ಗ್ರಹದಲ್ಲಿ ಅತ್ಯುತ್ತಮರಾಗಿರಬೇಕು. ನಾವೇನು ಚಂದ್ರ ಬೇಕು ಅಂತಾ ಕೇಳುತ್ತಿಲ್ಲ, ಆದರೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಬೇಕು ಎಂಬುದು ನಮ್ಮ ಗುರಿಯಾಗಬೇಕು. ವಿಜ್ಞಾನ, ತಂತ್ರಜ್ಞಾನದಲ್ಲಿ ನಾವು ಸಾವಿರಾರು ವರ್ಷಗಳ ಹಿಂದೆ ಇಡೀ ಜಗತ್ತಿನಲ್ಲೇ ಈ ಸ್ಥಾನಮಾನದಲ್ಲಿ ಗುರುತಿಸಲ್ಪಟ್ಟಿದ್ದೇವೆ. ಅಂತಹ ಪರಾಕಾಷ್ಠೆ ತರಲು ಸಾಮರ್ಥ್ಯ, ಜ್ಞಾನ ಮತ್ತು ಬುದ್ಧಿವಂತಿಕೆಯ ಭಂಡಾರವು ಭಾರತದಲ್ಲಿದೆ. ಇದು ಇಡೀ ಜಗತ್ತಿಗೆ ಆಪ್ಯಾಯಮಾನವಾಗಿದೆ, ಏಕೆಂದರೆ ಈ ದೇಶವು ವಸುದೈವ ಕುಟುಂಬಕಮ್ ಅನ್ನು ನಂಬುತ್ತದೆ.
ಶೈಕ್ಷಣಿಕ ಮತ್ತು ಅನ್ವಯಿಕ ಸಂಶೋಧನೆಯ ವಿಶಿಷ್ಟ ಮಿಶ್ರಣವನ್ನು ನೀಡುತ್ತಿರುವ ಐಐಎಸ್ಟಿ, ಇಸ್ರೋ ಸಹಯೋಗದೊಂದಿಗೆ ವಿನ್ಯಾಸಗೊಳಿಸಿದ ಪಠ್ಯಕ್ರಮ ಹೊಂದಿದೆ. ಈ ಪಾಲುದಾರಿಕೆಯು 21ನೇ ಶತಮಾನದ ಬಾಹ್ಯಾಕಾಶ ಉದ್ಯಮಕ್ಕೆ ಪ್ರಾಯೋಗಿಕ ಕೌಶಲ್ಯಗಳೊಂದಿಗೆ ಬಾಹ್ಯಾಕಾಶ ಸಂಶೋಧನೆ ಮತ್ತು ಅಭಿವೃದ್ಧಿಯ ಅತ್ಯಾಧುನಿಕ ಜ್ಞಾನವನ್ನು ಖಾತ್ರಿಗೊಳಿಸುತ್ತದೆ. ಈ ಉದ್ಯಮವು ಮಹತ್ವದ ಹಣಕಾಸಿನ ಆಯಾಮ ಹೊಂದಿದೆ. ಐಐಎಸ್ಟಿ ಮತ್ತು ಇಸ್ರೋ ನಡುವಿನ ಈ ಸ್ನೇಹಬಂಧ ಹೇಗೆ ಅರಳುತ್ತದೆ ಎಂಬುದನ್ನು ನಾವು ನೋಡುತ್ತೇವೆ. ಇದರ ಪರಿಣಾಮ ಭಾರತ ಮಾತ್ರವಲ್ಲದೆ, ಭಾರತದ ಹೊರಗೂ ಆಗಲಿದ್ದು, ಈ ಸ್ನೇಹ ವಿಸ್ಮಯಕ್ಕೆ ವಿಶ್ವವೇ ಸಾಕ್ಷಿಯಾಗುತ್ತಿದೆ. ಬಾಹ್ಯಾಕಾಶ ಪರಿಶೋಧನೆಯ ಭಾರತದ ಪ್ರಯಾಣವನ್ನು ಅದರ ಮಹತ್ವಾಕಾಂಕ್ಷೆಯ ಕಾರ್ಯಾಚರಣೆಗಳು, ಅದ್ಭುತ ಆವಿಷ್ಕಾರಗಳು ಮತ್ತು ವೈಜ್ಞಾನಿಕ ಪ್ರಗತಿಯ ದೃಢವಾದ ಬದ್ಧತೆಯಿಂದ ವ್ಯಾಖ್ಯಾನಿಸಲಾಗಿದೆ.
ಬಾಹ್ಯಾಕಾಶ ಕ್ಷೇತ್ರದಲ್ಲಿ ನಮ್ಮ ಇತ್ತೀಚಿನ ಸಾಧನೆಗಳು ಜಾಗತಿಕ ಪುರಸ್ಕಾರಗಳನ್ನು ಗಳಿಸಿವೆ. 2023ರಲ್ಲಿ ಚಂದ್ರಯಾನ -3 ಮತ್ತು ಆದಿತ್ಯ ಎಲ್ -1 ಸೇರಿದಂತೆ ಇಸ್ರೋದ ಎಲ್ಲಾ 7 ಉಡಾವಣೆಗಳು ಯಶಸ್ವಿಯಾಗಿವೆ. ಒಟ್ಟು 5 ಭಾರತೀಯ ಉಪಗ್ರಹಗಳು, 46 ವಿದೇಶಿ ಉಪಗ್ರಹಗಳು ಮತ್ತು 8 ರಾಕೆಟ್ ಗಳನ್ನು (POEM-2 ಸೇರಿದಂತೆ) ಅವುಗಳ ಉದ್ದೇಶಿತ ಕಕ್ಷೆಗಳಲ್ಲಿ ಇರಿಸಲಾಯಿತು. ಇವೆಲ್ಲವನ್ನೂ ಕೇವಲ ಒಂದು ವರ್ಷದ ಅವಧಿಯಲ್ಲಿ ಸಾಧಿಸಲಾಯಿತು.
ಇಸ್ರೋದ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ 3 ಅನ್ನು ಯಶಸ್ವಿಯಾಗಿ ಇಳಿಸಿದ ವಿಶ್ವದ ಮೊದಲ ದೇಶ ಎಂಬ ಹೆಮ್ಮೆಯಿಂದ ಭಾರತ ಹೆಮ್ಮೆಪಡುತ್ತಿದೆ.
ಇಸ್ರೋ ಸಂಸ್ಥೆಯು ಚಂದ್ರನ ಮೇಲೆ ಶಿವಶಕ್ತಿ ಬಿಂದು ಮತ್ತು ತ್ರಿವರ್ಣ ಧ್ವಜವನ್ನು ಕೆತ್ತಿಸಿದೆ. ಈ ಕ್ಷಣವು ಭಾರತದ ಇತಿಹಾಸದಲ್ಲಿ ದಾಖಲಿಸಲ್ಪಿಟ್ಟಿದೆ ಮತ್ತು ನಮ್ಮ ಹೆಮ್ಮೆಯ ಆಹ್ಲಾದಕರ ಆಲೋಚನೆಗಳಲ್ಲಿ ಆಳವಾಗಿ ಬೇರೂರಿದೆ.
ಮಾರ್ಸ್ ಆರ್ಬಿಟರ್ ಮಿಷನ್(ಮಂಗಳಯಾನ)ನ ಭಾರತದ ಯಶಸ್ವಿ ಉಡಾವಣೆ ಗಮನಾರ್ಹ ಸಾಧನೆಗಳಲ್ಲಿ ಒಂದಾಗಿದೆ, ಇದು ಮಂಗಳದ ಕಕ್ಷೆಯನ್ನು ತಲುಪಿದ ಮೊದಲ ಏಷ್ಯಾ ರಾಷ್ಟ್ರವಾಗಿದೆ, ತನ್ನ ಚೊಚ್ಚಲ ಪ್ರಯತ್ನದಲ್ಲಿ ಹಾಗೆ ಮಾಡಿದ ವಿಶ್ವದ ಮೊದಲ ರಾಷ್ಟ್ರವಾಗಿದೆ. ನಮ್ಮ ವಿಜ್ಞಾನ, ತಂತ್ರಜ್ಞಾನ ಸಾಧನೆಗಳನ್ನು ಈ ಸುಂದರ ಪೃಥ್ವಿಯ ಮೇಲಿನ ಎಲ್ಲರೂ ಚಪ್ಪಾಳೆ ತಟ್ಟಿ ಶ್ಲಾಘಿಸುತ್ತಿದ್ದರೆ, ಕೆಲವೊಮ್ಮೆ ತಿಳುವಳಿಕೆಯುಳ್ಳ ಜನರೇ ರಾಜಕೀಯ ಕಾರಣಗಳಿಗಾಗಿ ಮತ್ತು ಉದ್ದೇಶಗಳಿಗಾಗಿ ನಮ್ಮ ಬೆಳವಣಿಗೆಯನ್ನು ಕಡಿಮೆಗೊಳಿಸಿದಾಗ ನನ್ನ ಹೃದಯ ಭಾರವಾಗುತ್ತದೆ. ನಿಮ್ಮ ರಾಜಕೀಯ ಆಟಗಳು ಏನೇ ಇರಲಿ, ಆದರೆ ಭಾರತದ ಪ್ರಗತಿ ವಿಷಯಕ್ಕೆ ಬಂದಾಗ, ದೇಶದ ಹಿತಾಸಕ್ತಿ ಅಥವಾ ಜನಪ್ರಿಯತೆ ವಿಷಯಕ್ಕೆ ಬಂದಾಗ ರಾಜಕೀಯ ತರಬೇಡಿ ಎಂದು ಹೇಳಲು ನಾನು ಬಯಸುತ್ತೇನೆ.
ಭಾರತವು ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಗಮನಾರ್ಹ ದಾಪುಗಾಲು ಹಾಕಿದೆ. ಜಾಗತಿಕ ರಂಗದಲ್ಲಿ ತನ್ನದೇ ಆದ ಸ್ಥಾನ ಭದ್ರಪಡಿಸಿಕೊಂಡಿದೆ.
ಇಸ್ರೋ ಸೌಲಭ್ಯಗಳಿಗೆ ಭೇಟಿ ನೀಡಲು ಮತ್ತು ಅಧ್ಯಕ್ಷರೊಂದಿಗೆ ಸಂವಾದ ನಡೆಸಲು ನನಗೆ ಅವಕಾಶವಿದೆ. ಅವರಿಂದ ಸ್ಫೂರ್ತಿ, ಪ್ರೇರಣೆ ಮತ್ತು ಶಕ್ತಿ ಪಡೆದಿದ್ದೇನೆ. ಜನರು ಇಲ್ಲಿ ಮಾಡುತ್ತಿರುವುದು ಅದ್ಭುತವಾಗಿದೆ. ಅವರು ಕಾರ್ಯಾಚರಣೆ ಮಾದರಿಯಲ್ಲಿ ತುಂಬಾ ಆಸಕ್ತರಾಗಿದ್ದಾರೆ. ಯಾರಿಗೋಸ್ಕರ? 141 ಕೋಟಿ ಜನರಿಗಾಗಿ. ಅವರೆಲ್ಲರಿಗೂ ನನ್ನ ನಮನಗಳು!
ಭಾರತದ ಮೊದಲ ಸೌರ ಮಿಷನ್ ಆದಿತ್ಯ-ಎಲ್1 ಅಥವಾ ಮುಂಬರುವ ಮಹತ್ವಾಕಾಂಕ್ಷೆಯ ಮಾನವ ಬಾಹ್ಯಾಕಾಶ ಯಾನ, ಗಗನಯಾನ, ಪ್ರತಿಯೊಂದು ಮೈಲಿಗಲ್ಲು ಸಹ ಭಾರತವನ್ನು ಬಾಹ್ಯಾಕಾಶ ಪರಿಶೋಧನೆಯ ಜಾಗತಿಕ ಹಂತಕ್ಕೆ ಕರೆದುತಂದಿದೆ.
ಹೆಚ್ಚುವರಿಯಾಗಿ, ಚಂದ್ರಯಾನ ಕಾರ್ಯಾಚರಣೆಗಳು ಚಂದ್ರನ ಅನ್ವೇಷಣೆಗೆ ಗಮನಾರ್ಹವಾಗಿ ಕೊಡುಗೆ ನೀಡಿವೆ, ಚಂದ್ರನ ಮೇಲ್ಮೈಯ ಹೊಸ ಅಂಶಗಳನ್ನು ಅನಾವರಣಗೊಳಿಸಿವೆ.
ಈ ಸಾಧನೆಗಳು ಭಾರತದ ತಾಂತ್ರಿಕ ಸಾಮರ್ಥ್ಯ ಮತ್ತು ಬಾಹ್ಯಾಕಾಶದ ಗುರುತು ಹಾಕದ ಪ್ರದೇಶಗಳನ್ನು ಅನ್ವೇಷಿಸುವ ನಿರ್ಣಯವನ್ನು ಒತ್ತಿಹೇಳುತ್ತಿವೆ.
ನಮ್ಮ ಬಾಹ್ಯಾಕಾಶ ಕಾರ್ಯಾಚರಣೆಗಳು ಮತ್ತು ಸಾಧನೆಗಳು "21ನೇ ಶತಮಾನದ ಜಗತ್ತಿನಲ್ಲಿ ಅತ್ಯಂತ ಶಕ್ತಿಶಾಲಿ ಮತ್ತು ಪ್ರಭಾವಶಾಲಿ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಒಂದನ್ನು ಮುನ್ನಡೆಸಲು ಶ್ರಮಿಸುತ್ತಿರುವ ತಂತ್ರಜ್ಞಾನವನ್ನು ರೂಪಿಸುವ ರಾಷ್ಟ್ರವಾಗಿ ನಮ್ಮ ಗುರುತನ್ನು ವ್ಯಾಖ್ಯಾನಿಸುತ್ತವೆ." ಇವು ನನ್ನ ಮಾತುಗಳಲ್ಲ. ಇದು ಇಸ್ರೋ ಅಧ್ಯಕ್ಷರ ಮಾತು. ನಾನು ಅವರ ಮಾತನ್ನು 100% ಸಮ್ಮತಿಸುತ್ತೇನೆ. ವಿಜ್ಞಾನದ ಜಗತ್ತಿನಲ್ಲಿ ಒಂದು ರಾಷ್ಟ್ರವಾಗಿ ಈ ಸಾಧನೆಗಳಿಂದ ಮಹತ್ವದ ಗುರುತನ್ನು ವ್ಯಾಖ್ಯಾನಿಸಲಾಗಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ನೇತೃತ್ವದ ಕಾರ್ಯಾಚರಣೆಗಳ ಯಶಸ್ಸು ಭಾರತದ ರಾಜತಾಂತ್ರಿಕತೆಯ ಮೃದು ಶಕ್ತಿಗೆ ಗಣನೀಯ ಕೊಡುಗೆ ನೀಡಿದೆ, ಲಕ್ಷಾಂತರ ಜನರ ಜೀವನದ ಗುಣಮಟ್ಟ ಹೆಚ್ಚಿಸಿದೆ.
ವೃತ್ತಿಪರ ಪ್ರಯಾಣವನ್ನು ನೀವು ಪ್ರಾರಂಭಿಸಿದಾಗ, ಬಾಹ್ಯಾಕಾಶ ಉದ್ಯಮವು ರೋಮಾಂಚಕ ಪರಿವರ್ತನೆಗೆ ಒಳಗಾಗುತ್ತಿದೆ ಎಂಬುದನ್ನು ನೆನಪಿಡಿ. ಮರುಬಳಕೆ ಮಾಡಬಹುದಾದ ಉಡಾವಣಾ ವಾಹನಗಳಂತಹ ಹೊಸ ಮಾದರಿಗಳು ಹಾರಾಟ ನಡೆಸುತ್ತಿವೆ, ಉಪಗ್ರಹಗಳ ವಿಶಾಲ ಜಾಲಗಳು ಭೂಗೋಳವನ್ನು ಆವರಿಸುತ್ತಿವೆ ಮತ್ತು ಮಾನವ ಬಾಹ್ಯಾಕಾಶ ಹಾರಾಟ ಭೂದೃಶ್ಯವನ್ನು ಮರು ವ್ಯಾಖ್ಯಾನಿಸುತ್ತಿದೆ.
ಬಾಹ್ಯಾಕಾಶದಂತಹ ಈ ವ್ಯಾಪ್ತಿಗಳು ಎಂದಿಗೂ ಕೊನೆಗೊಳ್ಳುವುದಿಲ್ಲ. ನನ್ನ ವಯಸ್ಸಿನ ಜನರ ಆಲೋಚನೆಗೆ ಮೀರಿದ್ದನ್ನು ಅರಿತುಕೊಳ್ಳಲು ನಿಮ್ಮ ಪ್ರತಿಭೆಯನ್ನು ನೀವು ಬಳಸಿಕೊಳ್ಳಬಹುದು. ನೀವು ಅದನ್ನು ವಾಸ್ತವಕ್ಕೆ ತರಬಹುದು.
ಮುಂಬರುವ ದಶಕಗಳು ಬಾಹ್ಯಾಕಾಶ ಪರಿಶೋಧನೆಯ ಅಭೂತಪೂರ್ವ ಏರುಗತಿಯ ಸಾಧನೆಗೆ ಸಾಕ್ಷಿಯಾಗಲಿವೆ. ಭಾರತವು ತನ್ನ ದೃಢವಾದ ಬಾಹ್ಯಾಕಾಶ ಕಾರ್ಯಕ್ರಮ ಮತ್ತು ನುರಿತ ವೃತ್ತಿಪರರ ಬೆಳೆಯುತ್ತಿರುವ ಸಂಖ್ಯೆಯೊಂದಿಗೆ, ಈ ರೋಮಾಂಚಕಾರಿ ಪ್ರಯಾಣದಲ್ಲಿ ಪ್ರಮುಖ ನಾಯಕನಾಗಲು ಉತ್ತಮ ಸ್ಥಾನದಲ್ಲಿದೆ.
ಸ್ನೇಹಿತರೆ, ನಾನು ಮಾತು ಕೊಡುತ್ತಿದ್ದೇನೆ... ಈ ಶತಮಾನವು ಭಾರತಕ್ಕೆ ಸೇರಿದೆ. ಅದರ ಬಗ್ಗೆ ನಮಗೆ ಯಾವುದೇ ಸಂದೇಹವಿಲ್ಲ, ಏಕೆಂದರೆ ಭಾರತವು ಹಿಂದೆಂದಿಗಿಂತಲೂ ಮೇಲೇರುತ್ತಿದೆ. ಈ ಪ್ರಗತಿಯನ್ನು ಯಾರೂ ತಡೆಯಲಾರರರು. ನಾವೆಲ್ಲಾ ಒಮ್ಮೆ ಹೊರಬಂದು 2047ರ ಕ್ಲೈಮ್ಯಾಕ್ಸ್ ಮ್ಯಾರಥಾನ್ ನಡೆಯ ಗುರಿಯತ್ತೆ ಪ್ರವೇಶಿಸಿದಾಗ ಏರುಗತಿ ನಿಮ್ಮಿಂದ ನಡೆಸಲ್ಪಡುತ್ತದೆ. ನೀವು ಪ್ರಮುಖ ಪಾಲುದಾರರಾಗಿರುತ್ತೀರಿ, ಆ ನಡಿಗೆಯ ಪ್ರೇರಕ ಶಕ್ತಿಯು ಯಶಸ್ಸನ್ನು ಹೊರತುಪಡಿಸಿ ಬೇರೇನೂ ಫಲ ನೀಡುವುದಿಲ್ಲ. ವೈಯಕ್ತಿಕವಾಗಿ ನನಗೆ ಭಾರತವು 2047ಕ್ಕಿಂತ ಮುಂಚಿತವಾಗಿ ವಿಕಸಿತ ಭಾರತ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ. ನನಗೆ ಅದರ ಬಗ್ಗೆ ಯಾವುದೇ ಸಂದೇಹವಿಲ್ಲ.
ಇಸ್ರೋ ಅಭಿವೃದ್ಧಿಪಡಿಸಿದ ಲಿಥಿಯಂ-ಐಯಾನ್ ಬ್ಯಾಟರಿ ತಂತ್ರಜ್ಞಾನವು ದೇಶದ ಎಲೆಕ್ಟ್ರಿಕ್ ವಾಹನ ಪರಿಸರ ವ್ಯವಸ್ಥೆಯ ಅಭಿವೃದ್ಧಿಯಲ್ಲಿ ಉಪಯುಕ್ತವಾಗಿದೆ ಎಂಬುದು ನನಗೆ ತಿಳುಬಂದಿದೆ. ಕೆಲವು ಖನಿಜಗಳನ್ನು ಖಾಸಗಿ ವಲಯದಲ್ಲಿ ಇರಿಸಲು ಮತ್ತು ನಾವು ಲಿಥಿಯಂನೊಂದಿಗೆ ಏಕೆ ತೊಡಗಿಸಿಕೊಂಡಿದ್ದೇವೆ ಎಂಬುದಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರವು ಉಪಕ್ರಮ ತೆಗೆದುಕೊಂಡಿದೆ. ನಮ್ಮ ಮುಂದಿನ ಪೀಳಿಗೆಯ ಪರಿಸ್ಥಿತಿಯೂ ಸೋಡಿಯಂನೊಂದಿಗೆ ಬರುತ್ತಿದೆ. ಆದ್ದರಿಂದ ನೀವು ಜಾಗತಿಕ ಮಟ್ಟದಲ್ಲಿ ಸೋಡಿಯಂನೊಂದಿಗೆ ಹೊಂದಿಕೆಯಾಗುತ್ತೀರಿ ಎಂಬುದರಲ್ಲಿ ನನಗೆ ಸಂದೇಹವಿಲ್ಲ.
ಆತ್ಮೀಯ ಸ್ನೇಹಿತರೆ, ನಮ್ಮ ಸ್ಥಾನಮಾನ ಮತ್ತು ಭೌಗೋಳಿಕ-ರಾಜಕೀಯ ಶಕ್ತಿಯು ದೈಹಿಕ ಸಾಮರ್ಥ್ಯದಿಂದ ಮಾತ್ರವಲ್ಲದೆ, ನಮ್ಮ ಪ್ರಯೋಗಾಲಯಗಳಿಂದ ಹೊರಹೊಮ್ಮುವ ಬೌದ್ಧಿಕ ಮತ್ತು ತಾಂತ್ರಿಕ ಆವಿಷ್ಕಾರಗಳಿಂದಲೂ ನಿರ್ಧರಿಸಲ್ಪಡುತ್ತದೆ. ತಾಂತ್ರಿಕ ಪ್ರಗತಿಯಲ್ಲಿ ಹೂಡಿಕೆ ಮಾಡುವ ದೇಶವು ಸುರಕ್ಷಿತ ಗಡಿಗಳನ್ನು ಖಾತ್ರಿಗೊಳಿಸುತ್ತದೆ. ಸಾಂಪ್ರದಾಯಿಕ ಯುದ್ಧದ ದಿನಗಳು ಕಳೆದುಹೋಗಿವೆ.
ಸ್ನೇಹಿತರೆ, ಮನಸ್ಥಿತಿಯು ಕಠೋರವಾಗಿದ್ದ, ಆರ್ಥಿಕ ಪರಿಸ್ಥಿತಿ ನೋವಿನಿಂದ ಕೂಡಿದ, ವಿದೇಶಿ ವಿನಿಮಯ ಕ್ಷೀಣಿಸುತ್ತಿರುವ ಮತ್ತು ಸ್ವಿಸ್ ಬ್ಯಾಂಕ್‌ಗಳಲ್ಲಿ ಚಿನ್ನವನ್ನು ಭೌತಿಕ ರೂಪದಲ್ಲಿ ಇರಿಸಬೇಕಾದ ಯುಗದಲ್ಲಿ ನಾವು ಬದುಕಿದ್ದೇವೆ. ನಾನು 1989ರಲ್ಲಿ ಸಂಸತ್ ಸದಸ್ಯನಾಗಿದ್ದ ಸಂದರ್ಭದ ಬಗ್ಗೆ ಮಾತನಾಡುತ್ತಿದ್ದೇನೆ. ನಾನು ಕೇಂದ್ರ ಸಚಿವನಾಗಿದ್ದೆ. ಭಾರತದ ಆರ್ಥಿಕತೆಯ ಗಾತ್ರವು ಲಂಡನ್ ಮತ್ತು ಪ್ಯಾರಿಸ್ ನಗರಕ್ಕಿಂತ ಚಿಕ್ಕದಾಗಿತ್ತು. ನಮ್ಮ ವಿದೇಶಿ ವಿನಿಮಯವು 1 ಶತಕೋಟಿ ಮತ್ತು 2 ಶತಕೋಟಿ ಡಾಲರ್‌ಗಳ ನಡುವೆ ಇತ್ತು. ಈಗ ನಾವು 660 ಶತಕೋಟಿ ಡಾಲರ್ ವಿದೇಶಿ ವಿನಿಮಯ ಹೊಂದಿದ್ದೇವೆ. ನಾವು ದುರ್ಬಲವಾದ 5 ಆರ್ಥಿಕತೆಗಳ ಪಟ್ಟಿಯಿಂದ ಪ್ರಬಲ 5 ಜಾಗತಿಕ ಆರ್ಥಿಕತೆ ಹೊಂದಿರುವ ರಾಷ್ಟ್ರಗಳ ಪಟ್ಟಿಗೆ ಜಿಗಿದಿದ್ದೇವೆ. 3ನೇ ಅತಿದೊಡ್ಡ ಜಾಗತಿಕ ಆರ್ಥಿಕತೆಯ ದೇಶವಾಗುವ ಹಾದಿಯಲ್ಲಿ ಪ್ರಯಾಣಿಸುತ್ತಿದ್ದೇವೆ. ದೂರದೃಷ್ಟಿಯ ನಾಯಕತ್ವ, ಈ ದೇಶಕ್ಕೆ ನೀತಿಯನ್ನು ದೃಢವಾಗಿ ನೀಡಿದ ನಾಯಕತ್ವದ ಕಾರಣದಿಂದಾಗಿ ನಾವು ಹಿಂಜರಿಯಬಾರದು. ನೀವು 1.4 ಶತಕೋಟಿ ಜನರಿರುವ ರಾಷ್ಟ್ರದ ರಾಜಕೀಯ ಪ್ರಯಾಣ ಹೊಂದಿರುವಾಗ ಅಲ್ಲಿ ಕೆಲವೊಂದು ಹಿನ್ನಡೆಗಳು ಆಗುತ್ತವೆ, ಆದರೆಮುಂದಿನ 5 ವರ್ಷಗಳಲ್ಲಿ ಈ ದೇಶದ ಆಡಳಿತವು ನಮ್ಮ ದೇಶವನ್ನು ಒಂದು ಪಥದಲ್ಲಿ ಇರಿಸುತ್ತದೆ ಎಂಬುದರಲ್ಲಿ ನನಗೆ ಸಂದೇಹವಿಲ್ಲ. ನಮ್ಮ ಹಿಂದೆ ಯಾರಿದ್ದಾರೆ ಎಂಬುದನ್ನು ಅರಿಯಬೇಕು. ಈ ಸಂಪೂರ್ಣ ಯೋಜನೆಯಲ್ಲಿ ನೀವು ಸಹ ಪ್ರಮುಖರಾಗಿರುತ್ತೀರಿ.
ಆತ್ಮೀಯ ಸ್ನೇಹಿತರೆ, ಇಂದು ನೀವು ಭ್ರಷ್ಟಾಚಾರ ಮುಕ್ತ ಪರಿಸರ ವ್ಯವಸ್ಥೆಯನ್ನು ಹೊಂದಿದ್ದೀರಿ. ಸಹಾಯಕ ನೀತಿಗಳು ರೋಮಾಂಚಕ ಬಾಹ್ಯಾಕಾಶ ಪರಿಸರ ವ್ಯವಸ್ಥೆಯ ಬೆಳವಣಿಗೆಯನ್ನು ಉತ್ತೇಜಿಸುತ್ತಿವೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವವನ್ನು ಉತ್ತೇಜಿಸುತ್ತದೆ. ಅದು ಬಾಹ್ಯಾಕಾಶ ರಂಗದಲ್ಲಿ ಭಾರತವನ್ನು ಇನ್ನಷ್ಟು ಮುನ್ನಡೆಸುತ್ತದೆ. ಸ್ನೇಹಿತರೆ, ನೀವು ಸಂಶೋಧನೆ ಮತ್ತು ಅಭಿವೃದ್ಧಿಯತ್ತ ಗಮನ ಹರಿಸದ ಹೊರತು ಏನೂ ಆಗುವುದಿಲ್ಲ. ತಂತ್ರಜ್ಞಾನಕ್ಕಾಗಿ ಕಾಯುತ್ತಿದ್ದ ಕಾಲವೊಂದಿತ್ತು. ಭಾರತ ಮತ್ತು ಅತ್ಯಂತ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ನಡುವೆ ಯಾವುದೇ ತಾಂತ್ರಿಕ ಅಂತರವಿಲ್ಲ ಎಂಬುದನ್ನು ಈಗ ಊಹಿಸಿಕೊಳ್ಳಿ. ನಮ್ಮ ವೈಜ್ಞಾನಿಕ ಸಮುದಾಯಕ್ಕೆ ಧನ್ಯವಾದಗಳು. ದೇಶದ ಕಾರ್ಪೊರೇಟ್ ವಲಯ ಅತ್ಯಂತ ಸೌಮ್ಯವಾಗಿರಬೇಕು, ಸಂಶೋಧನೆ ಮತ್ತು ಅಭಿವೃದ್ಧಿಗೆ ಸಂಪೂರ್ಣ ಬೆಂಬಲ ನೀಡಬೇಕೆಂದು ನಾನು ಈ ವೇದಿಕೆಯಲ್ಲಿ ಒತ್ತಾಯಿಸುತ್ತೇನೆ. ಸಂಶೋಧನೆ ಮತ್ತು ಅಭಿವೃದ್ಧಿಯು ಅಂತಿಮವಾಗಿ ಪ್ರಯೋಜನ ಒದಗಿಸುತ್ತದೆ ಎಂಬುದನ್ನು ಅವರು ಅರಿತುಕೊಳ್ಳಬೇಕು. ಹೆಚ್ಚಿನ ಸಂಖ್ಯೆಯ ಸಾರ್ವಜನಿಕ ಕಲ್ಯಾಣಕ್ಕಾಗಿ ಅದನ್ನು ಚಲಾವಣೆಗೆ ತಂದಾಗ, ಅವರೇ ಹೆಚ್ಚಿನ ಲಾಭ ಪಡೆಯುತ್ತಾರೆ. ಹಾಗಾಗಿ ನೀವು ಅದನ್ನು ಮಾಡಬೇಕೆಂದು ನಾನು ಮನವಿ ಮಾಡುತ್ತೇನೆ.
ಅಸ್ತವ್ಯಸ್ತಗೊಳಿಸುವ ತಂತ್ರಜ್ಞಾನಗಳು- ಕೃತಕ ಬುದ್ಧಿಮತ್ತೆ, ಐಒಟಿ, ಮೆಷಿನ ಲರ್ನಿಂಗ್, ಬ್ಲಾಕ್‌ಚೈನ್ ಮತ್ತು ಇತರೆ ತಂತ್ರಜ್ಞಾನಗಳು ಅವಕಾಶಗಳನ್ನು ರೂಪಿಸು ಜತೆಗೆ, ಸವಾಲುಗಳನ್ನು ಸಹ ಒಡ್ಡಿವೆ. ಇವು ನೀವು ಸಂಪೂರ್ಣವಾಗಿ ತಿಳಿದಿರಬೇಕಾದ ವಿಷಯಗಳಾಗಿವೆ.
ಕ್ವಾಂಟಮ್ ಕಂಪ್ಯೂಟಿಂಗ್ ಯಂತ್ರಗಳಿಗೆ 6000 ಕೋಟಿ ರೂ. ವಿನಿಯೋಗ ಮಾಡಿದ ವಿಶ್ವದ ಕೆಲವೇ ದೇಶಗಳಲ್ಲಿ ನಾವೂ ಸೇರಿದ್ದೇವೆ. ಬೇರೆಯವರಿಗಿಂತ ನಮಗೆ ಹೆಚ್ಚಿನ ಕ್ವಾಂಟಮ್ ಕಂಪ್ಯೂಟಿಂಗ್ ಬೇಕಿದೆ. 80000 ಕೋಟಿ ರೂ. ಬದ್ಧತೆಯೊಂದಿಗೆ ನಮ್ಮ ಹಸಿರು ಜಲಜನಕ ಮಿಷನ್ ಮತ್ತು ಇದು 8 ಲಕ್ಷ ಕೋಟಿ ರೂ. ಹೂಡಿಕೆಯಲ್ಲಿ 6 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿದೆ. ನಮಗೆ ಎಲ್ಲವೂ ಇದೆ, ಆದರೆ ನಾನು ನೋಡುವ ಒಂದು ಸಮಸ್ಯೆಯೆಂದರೆ, ನಮ್ಮ ಯುವ ಮನಸ್ಸುಗಳು ಸದಾ ಅಡ್ಡಿ ಆತಂಕಗಳನ್ನು ಮನಸ್ಸಿಗೆ ತುಂಬಿಕೊಂಡು ಅವಕಾಶಗಳ ವಿಷಯದಲ್ಲಿ ಕೆಲಸ ಮಾಡುತ್ತಾರೆ. ಅವಕಾಶವು ಕೆಲವು ಸ್ಪರ್ಧಾತ್ಮಕ ಪರೀಕ್ಷೆಯ ಫಲಿತಾಂಶಗಳಿಗೆ ಮಾತ್ರ ಸಂಬಂಧಿಸಿದಂತೆ ಇರುತ್ತದೆ, ಇನ್ನು ಮುಂದೆ ಇರಲ್ಲ ಎಂದು ಅವರು ಭಾವಿಸುತ್ತಾರೆ. ಆದರೆ ಉತ್ತಮವಾದದ್ದು ಎಲ್ಲ ಅಡೆತಡೆಗಳ ಹೊರಗಿದೆ ಎಂಬುದನ್ನು ಅವರಿಗೆ ತಿಳಿಸಬೇಕಾಗಿದೆ. ಉತ್ತಮ ಪ್ರಯೋಜನಗಳ ಬಗ್ಗೆ ನೀವು ಸಂಪೂರ್ಣವಾಗಿ ಅರಿವು ಹೊಂದಿರಬೇಕು. ಈ ಅವಕಾಶಗಳು ಸವಾಲಿನವು, ಆದರೆ ಲಾಭಗಳು ನಿಯಮಿತ ರೂಪದಲ್ಲಿರುತ್ತವೆ. ನೀವು ಅದನ್ನು ಗಮನಿಸುತ್ತೀರಿ ಎಂದು ನನಗೆ ಖಾತ್ರಿಯಿದೆ. ನಿಮ್ಮಂತಹ ಜನರಿಂದ ಮಾತ್ರ ಆಗುವ ಗತ ವೈಭವವನ್ನು ಮರಳಿ ಪಡೆಯುವ ಧ್ಯೇಯದಲ್ಲಿ ನಾವಿದ್ದೇವೆ.
ನನ್ನ ವಿದ್ಯಾರ್ಥಿ ದಿನಗಳನ್ನು ನೆನಪಿಸಿಕೊಳ್ಳುತ್ತೇನೆ. ಸ್ಕಾಲರ್‌ಶಿಪ್‌ನಿಂದ ಸೈನಿಕ ಶಾಲೆ ಸೇರಲು ನನಗೆ ಅವಕಾಶ ಸಿಕ್ಕಿತು. ನಾನು ಕೆಲವೊಂದು ರಾಜ್ಯಗಳಿಗೆ ಬರಲು ಇಷ್ಟಪಡುತ್ತೇನೆ. ಅದರಲ್ಲಿ ಕೇರಳ ಪ್ರಮುಖ. ನನ್ನ ನೆಚ್ಚಿನ ಶಿಕ್ಷಕಿ ವಾಸಿಸುತ್ತಿರುವ ಸ್ಥಳ., ನನಗೆ ದಾರಿ ತೋರಿದ ಮಿಸ್ ರತ್ನಾವಳಿ ನಯ್ಯರ್. ನಾನು ಈ ಸ್ಥಳಕ್ಕೆ ಬಂದಾಗಲೆಲ್ಲಾ ಯಾವ ತೀರ್ಥಯಾತ್ರೆಗೂ ಕಡಿಮೆಯಿಲ್ಲದಂತೆ ಭಾವಿಸುತ್ತಿದ್ದೆ. ನಾನು ಆಗಾಗ ಅವರ ಮನೆಗೆ ಭೇಟಿ ನೀಡಿ, ಸಂಪರ್ಕದಲ್ಲಿದ್ದೇನೆ. ನನ್ನ ಶಿಕ್ಷಕರನ್ನು ಹೊಸ ಸಂಸತ್ತಿನ ಕಟ್ಟಡಕ್ಕೆ ಕರೆ ತರುವಂತೆ ನಾನು ಸಂಸತ್ ಸದಸ್ಯೆ ಪಿಟಿ ಉಷಾ ಜೀ ಅವರನ್ನು ವಿನಂತಿಸಿದ್ದೇನೆ. ಅಲ್ಲೇ ಅವರ ಆಶೀರ್ವಾದ ಬಯಸುತ್ತೇನೆ. ಎಲ್ಲರೂ ಡಾಕ್ಟರ್ ಕಲಾಂ ಎಂದುಏಕೆ ಹೇಳುತ್ತಾರೆ? ಜನರು ಅವರಲ್ಲಿ ಒಬ್ಬ ಶಿಕ್ಷಕನನ್ನು ನೋಡುತ್ತಾರೆ. ಅದೇ ರೀತಿ ಡಾ. ಎಸ್ ರಾಧಾಕೃಷ್ಣನ್ ಅವರನ್ನು ತತ್ವಜ್ಞಾನಿ ಎಂದು ನೆನಪಿಸಿಕೊಳ್ಳುವುದಿಲ್ಲ, ಭಾರತದ ರಾಷ್ಟ್ರಪತಿಯಾಗಿ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆ ರೂಪದಲ್ಲಿ ಅವರನ್ನು ಶಿಕ್ಷಕರಾಗಿ ನೆನಪಿಸಿಕೊಳ್ಳುತ್ತಾರೆ. ಯಾವಾಗಲೂ ನಿಮ್ಮ ಶಿಕ್ಷಕರನ್ನು ಮನಸ್ಸಿನಲ್ಲಿಟ್ಟುಕೊಳ್ಳಿ, ನಿಮ್ಮ ಹೆತ್ತವರನ್ನು ಮನಸ್ಸಿನಲ್ಲಿಟ್ಟುಕೊಳ್ಳಿ, ಅವರು ನಿಮ್ಮನ್ನು ರೂಪಿಸಿದ್ದಾರೆ, ಆಶೀರ್ವದಿಸಿದ್ದಾರೆ. ಎಂದಿಗೂ ಅವರನ್ನು ನಿರಾಶೆಗೊಳಿಸಬೇಡಿ.
ಡಾ. ಕಲಾಂ ಅವರ ಮಾತುಗಳು ಐಐಎಸ್ಟಿಯ ನೀತಿಯೊಂದಿಗೆ ಆಳವಾಗಿ ಅನುರಣಿಸುತ್ತವೆ: "ಕನಸು ಕಾಣಿ, ಕನಸು ಕಾಣಿ, ಕನಸು ಕಾಣಿ. ಕನಸುಗಳು ಆಲೋಚನೆಗಳಾಗಿ ರೂಪಾಂತರಗೊಳ್ಳುತ್ತವೆ ಮತ್ತು ಆಲೋಚನೆಗಳು ಕ್ರಿಯೆಗೆ ಕಾರಣವಾಗುತ್ತವೆ." ಸ್ವಾಮಿ ವಿವೇಕಾನಂದರ ‘ಏಳಿ ಎದ್ದೇಳಿ, ಗುರಿ ಮುಟ್ಟುವ ನಿಲ್ಲದಿರಿ’ ಈ ಎರಡು ಸಂದೇಶಗಳನ್ನು ಪಾಲಿಸಿದರೆ, ಬಾಹ್ಯಾಕಾಶ ಹಾರಾಟವು ಸಹ ಯಾವುದೇ ಗಮ್ಯಸ್ಥಾನದಲ್ಲಿ ಇಳಿಯುವುದು ಅದ್ಭುತ ಕ್ಷಣವಾಗಿರುತ್ತದೆ.
ಇದು ಒಂದು ಸಂಸ್ಥೆಯಾಗಿದ್ದು, ಕನಸುಗಳು ಆಲೋಚನೆಗಳಾಗಿ ಮೊಳಕೆಯೊಡೆದಾಗ. ಎಲ್ಲೆ ಮೀರಿದ ಅದ್ಭುತ ಕ್ರಿಯೆ ಆಗುತ್ತದೆ. ಆಲೋಚನಾ ಲಹರಿಯನ್ನು ಹರಿಯಲು ಬಿಡಿ, ಎಂದಿಗೂ ಉದ್ವೇಗ, ಒತ್ತಡ, ವೈಫಲ್ಯದ ಭಯ ಬಿಡಿ. ಸೋಲೇ ಗೆಲುವಿನ ಮೆಟ್ಟಿಲು ಎಂಬುದನ್ನು ಅರಿಯಿರಿ. ಚಂದ್ರಯಾನ 2 ವಿಫಲವಾಗಿಲ್ಲ, ಅದು ಚಂದ್ರಯಾನ 3ರ ಯಶಸ್ಸಿನ ಮೆಟ್ಟಿಲು. ಚಂದ್ರಯಾನ 2 ಚಂದ್ರನ ಮೇಲೆ ಇಳಿದ ದಿನ, ನಾನು ಪಶ್ಚಿಮ ಬಂಗಾಳದ ರಾಜ್ಯಪಾಲನಾಗಿದ್ದೆ, ಮಧ್ಯರಾತ್ರಿಯಾಗಿತ್ತು. ನಾನು ಮತ್ತು ನನ್ನ ಪತ್ನಿ ಇಬ್ಬರೂ ಸೈನ್ಸ್ ಸಿಟಿಗೆ ಹೋಗಿದ್ದೆವು. ನಾವು 500 ಹುಡುಗರು ಮತ್ತು ಹುಡುಗಿಯರ ಜತೆ ಇದ್ದೆವು. ನಾವೆಲ್ಲರೂ ಚಂದ್ರಯಾನ 2 ನೋಡುತ್ತಿದ್ದೆವು. ಸಾಕಷ್ಟು ಹತ್ತಿರ ಬಂದಿದ್ದೆವು, ಆದರೆ ಲ್ಯಾಂಡಿಂಗ್ ಫಲಪ್ರದವಾಗಲಿಲ್ಲ, ಆಗ ನೀರವ ಮೌನ ಆವರಿಸಿತ್ತು. ಚಂದ್ರಯಾನ 3ರಲ್ಲಿ ನಾವು ಬಹುಮಟ್ಟಿಗೆ ಯಶಸ್ವಿಯಾಗಿದ್ದೇವೆ ಮತ್ತು ಲ್ಯಾಂಡಿಂಗ್ ಫಲಪ್ರದವಾಗಿದೆ ಎಂಬ ಸಂದೇಶವು ಪ್ರಧಾನ ಮಂತ್ರಿ ಅವರಿಂದ ಬಂತು. ಆದ್ದರಿಂದ ಎಂದಿಗೂ ವೈಫಲ್ಯದ ಭಯ ಬೇಡ. ವೈಫಲ್ಯದ ಭಯದ ಬದಲಿಗೆ, ನೀವು ನಿಮ್ಮ ಸಂಪೂರ್ಣ ಮನಸ್ಸನ್ನು ಒಂದು ದೊಡ್ಡ ಆಲೋಚನೆಗಾಗಿ ಪಾರ್ಕಿಂಗ್ ಸ್ಥಳವನ್ನಾಗಿ ಮಾಡಿದರೆ ನೀವು ನಿಮಗಾಗಿ ಮಾತ್ರವಲ್ಲದೆ, ಮಾನವತೆಗೆ ನ್ಯಾಯ ಒದಗಿಸುತ್ತೀರಿ ಎಂಬುದನ್ನು ಅರಿತು, ಎಂದಿಗೂ ಪ್ರಯತ್ನವನ್ನು ನಿಲ್ಲಿಸಬೇಡಿ.
ಗೆಳೆಯರೆ, ಮಾತು ಮುಗಿಸುವ ಮುನ್ನ ನಾನು ಇಂದು ಬೆಳಗ್ಗೆ ಗಮನಿಸಿದ ಒಂದು ವಿಚಾರವನ್ನು ಹಂಚಿಕೊಳ್ಳಲೇಬೇಕು. ಇದು ವಾಸ್ತವವಾಗಿ ನಡೆದಿಲ್ಲ ಎಂದು ನಾನು ಭಾವಿಸುತ್ತೇನೆ. ತಿಳುವಳಿಕೆಯುಳ್ಳ ಮನಸ್ಸುಗಳು ಉದ್ದೇಶಪೂರ್ವಕವಾಗಿ ದಾರಿ ತಪ್ಪಿದಾಗ, ನಾವು ಜಾಗರೂಕರಾಗಿರಬೇಕು. ನಾವು ವೇದಿಕೆಯ ಗಣ್ಯರಿಗೆ ಈ ವಿಷಯ ತಿಳಿಸಿದ್ದೇವೆ, ನಾವು ಅಧ್ಯಾಪಕ ವರ್ಗಕ್ಕೂ ತಿಳಿಸಿದ್ದೇವೆ. ಉನ್ನತ ಸ್ಥಾನ ಹೊಂದಿರುವ ವ್ಯಕ್ತಿಯೊಬ್ಬರು “ನಾನು ಯಾರನ್ನೂ ನಂಬುವುದಿಲ್ಲ” ಎಂದು ಹೇಳಿದರೆ ನಾವು ಅದನ್ನು ನಂಬುತ್ತೇವೆ. ಹಾಗಾಗಿ ಇಂದು ಬೆಳಗ್ಗೆ ನಾನು ಪೇಪರ್ ಓದಿದಾಗ ಈ ದೇಶದ ಹಣಕಾಸು ಸಚಿವ, ದೀರ್ಘಕಾಲದ ಸಂಸದ ಮತ್ತು ಪ್ರಸ್ತುತ ರಾಜ್ಯಸಭಾ ಸದಸ್ಯರಾಗಿರುವ ಒಬ್ಬರ ಹೇಳಿಕೆ ನನ್ನನ್ನು ದಿಗ್ಭ್ರಮೆಗೊಳಿಸಿತು. ಏಕೆಂದರೆ, ಈ ಸಂಸತ್ತು ಒಂದು ದೊಡ್ಡ ಕೆಲಸ ಮಾಡಿದೆ ಎಂದು ನಾನು ಹೆಮ್ಮೆಪಡುತ್ತೇನೆ. ಪ್ರಮುಖ 3 ಕಾನೂನುಗಳನ್ನು ನೀಡುವ ಮೂಲಕ ವಸಾಹತುಶಾಹಿ ಪರಂಪರೆಯಿಂದ ನಮ್ಮನ್ನು ಹೊರತಂದಿದೆ.
ನಾವು ದಂಡ ವಿಧಾನದಿಂದ ನ್ಯಾಯ ವಿಧಾನಕ್ಕೆ ಬಂದಿದ್ದೇವೆ. ಸಂಸತ್ತಿನ ಪ್ರತಿಯೊಬ್ಬ ಸದಸ್ಯರಿಗೂ ಸದನದ ಕಲಾಪದಲ್ಲಿ ಕೊಡುಗೆ ನೀಡಲು ಅವಕಾಶವಿದೆ. ಹಣಕಾಸು ಸಚಿವರಾಗಿ ಉತ್ತಮ ಹಿನ್ನೆಲೆ ಹೊಂದಿರುವ ಸಂಸತ್ತಿನ ಈ ಮಹನೀಯರು "ಹೊಸ ಕಾನೂನುಗಳು ಅರೆಕಾಲಿಕರಿಂದ ರಚನೆಯಾಗಿವೆ" ಎಂದು ಗೇಲಿ ಮಾಡಿದ್ದಾರೆ. ನಾವು ನಿಜವಾಗಿಯೂ ಅರೆಕಾಲಿಕ ಸಂಸದರಾ? ಸಂಸತ್ತಿನ ನಡವಳಿಕೆಗೆ ಕ್ಷಮಿಸಲಾಗದ ಅಸಂಬದ್ಧ ಹೇಳಿಕೆ ಇದಾಗಿದೆ. ಇದನ್ನು ಭಾರವಾದ ಹೃದಯದಿಂದ ನಾನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ, ಚರ್ಚೆ ನಡೆಯುತ್ತಿರುವಾಗ ಅವರು ಅರ್ಥಹೀನ ಹೇಳಿಕೆಗಳನ್ನು ಹರಿಬಿಟ್ಟರು. ಅವರು ಮಾತ್ರವಲ್ಲ, ಅವರ ಜತೆಗಿದ್ದ ಕಾನೂನು ತಜ್ಞರು ಮತ್ತು ಸಹೋದ್ಯೋಗಿಗಳು ಸಹ ಸಂಸತ್ತಿನಲ್ಲಿ ರಾಷ್ಟ್ರಕ್ಕೆ ಸಹಾಯ ಮಾಡಲು ಮುಂದೆ ಬರಲಿಲ್ಲ.
ಸಾಂವಿಧಾನಿಕ ಕರ್ತವ್ಯ ಮತ್ತು ಜವಾಬ್ದಾರಿ ನಿರ್ವಹಿಸುವಲ್ಲಿ ಅವರ ಕಡೆಯಿಂದ ವಿಫಲವಾಗಿದೆ. ಏರುದನಿಯಲ್ಲಿ ಮಾತನಾಡುವ ಅಂತಹ ವ್ಯಕ್ತಿಯನ್ನು ನಾವು ಹೇಗೆ ಎದುರಿಸಬಹುದು? ನಾನು ಪದಗಳಲ್ಲಿ ಹೇಳಲಾಗದಷ್ಟು ಆಘಾತಕ್ಕೆ ಒಳಗಾಗಿದ್ದೇನೆ. ಆದ್ದರಿಂದ ಉದ್ದೇಶಪೂರ್ವಕವಾಗಿ ಒಂದು ನಿರೂಪಣೆಯ ಮೂಲಕ ನಮ್ಮ ರಾಷ್ಟ್ರವನ್ನು ಕೆಳಗಿಳಿಸಲು ಪ್ರಯತ್ನಿಸುವ, ನಮ್ಮ ಸಂಸ್ಥೆಗಳನ್ನು, ನಮ್ಮ ಪ್ರಗತಿಯನ್ನು ಅವಮಾನಿಸಲು ಪ್ರಯತ್ನಿಸುವ, ಗೋಡೆಯ ಮೇಲಿನ ಬರಹ ನೋಡದ ಮನಸ್ಸುಗಳ ಬಗ್ಗೆ ದಯವಿಟ್ಟು ಜಾಗೃತರಾಗಿರಿ. ಟೀಕೆಗಾಗಿ ಟೀಕೆಯಂತಹ ನಿರೂಪಣೆಯನ್ನು ತೇಲಿ ಬಿಡುವಷ್ಟು ಬಲವಾದ ಪದಗಳು ನನ್ನಲ್ಲಿಲ್ಲ. ಸಂಸತ್ ಸದಸ್ಯನನ್ನು ಅರೆಕಾಲಿಕ(ಪಾರ್ಟ್ ಟೈಮರ್) ಎಂದು ಲೇಬಲ್ ಮಾಡಲಾಗಿದೆ. ಅಂತಿಮವಾಗಿ ಇದು ಸಂಸತ್ತು ಕಾನೂನು ರಚನೆಯ ಕೊನೆಯ ಮೂಲವಾಗಿದೆ. ಸಮಾಜದ ಪ್ರತಿಯೊಂದು ವರ್ಗಕ್ಕೂ ಅಲ್ಲಿ ಪ್ರಾತಿನಿಧ್ಯವಿದೆ. ಅಭಿವ್ಯಕ್ತಿಗೆ ಬಂದಾಗ ಇಡೀ ದೇಶವು ಒಂದು ಸ್ಥಾನವನ್ನು ಕಂಡುಕೊಳ್ಳುತ್ತದೆ. ನಿಮ್ಮ ಕಡೆಯಿಂದ ಕರ್ತವ್ಯದ ವೈಫಲ್ಯ ಮತ್ತು ಲೋಪ, ಕಮಿಷನ್, ಕರ್ತವ್ಯ ಲೋಪವನ್ನು ಎಂದಿಗೂ ವಿವರಿಸಲು ಸಾಧ್ಯವಿಲ್ಲ, ನೀವೇ ಜವಾಬ್ದಾರರಾಗಿರಬೇಕು. ಸಂಸತ್ತಿನ ಸದಸ್ಯರಿಗೆ ಈ ಅವಹೇಳನಕಾರಿ, ಮಾನಹಾನಿಕರ, ಅತ್ಯಂತ ಅವಮಾನಕರ ಅವಲೋಕನಗಳನ್ನು ಮಾಡದಂತೆ ಈ ವೇದಿಕೆಯಿಂದ ನಾನು ಅವರಿಗೆ ಮನವಿ ಮಾಡುತ್ತೇನೆ. ಅವರು ಅದನ್ನು ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ.
'ವಿಕಸಿತ ಭಾರತ@2047' ರೂಪಿಸುವಲ್ಲಿ ನೀವೆಲ್ಲರೂ ಪ್ರಮುಖ ಪಾತ್ರ ವಹಿಸುತ್ತೀರಿ ಎಂದು ನನಗೆ ವಿಶ್ವಾಸವಿದೆ. ಒಟ್ಟಾಗಿ, ಸಂಪೂರ್ಣ ವಿಶ್ವಾಸ ಮತ್ತು ನಿರ್ಣಯದೊಂದಿಗೆ, ನಾವು ಈ ಹಂಚಿತ ದೃಷ್ಟಿಕೋನದತ್ತ ದಾಪುಗಾಲು ಹಾಕುತ್ತೇವೆ. ನಿಮ್ಮೆಲ್ಲರಿಗೂ ಮುಂದಿನ ವೃತ್ತಿಜೀವನವನ್ನು ಯಶಸ್ವಿಯಾಗಿ ಪೂರೈಸಲು ನಾನು ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಹೇಳುತ್ತೇನೆ.
ಧನ್ಯವಾದ. ಜೈ ಹಿಂದ್!
*****
(Release ID: 2032282)
Visitor Counter : 48