ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಭಾರತದ ರಾಷ್ಟ್ರಪತಿಗಳು ಭುವನೇಶ್ವರದ ಬಳಿಯ ಹರಿದಮಾಡ ಗ್ರಾಮದಲ್ಲಿ ಬ್ರಹ್ಮ ಕುಮಾರಿಯರ ದೈವಿಕ ಧ್ಯಾನ ಕೇಂದ್ರವನ್ನು ಉದ್ಘಾಟಿಸಿದರು ಮತ್ತು ‘ಸುಸ್ಥಿರತೆಗಾಗಿ ಜೀವನಶೈಲಿʼ ರಾಷ್ಟ್ರೀಯ ಅಭಿಯಾನವನ್ನು ಪ್ರಾರಂಭಿಸಿದರು 

Posted On: 08 JUL 2024 7:39PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಜುಲೈ 8, 2024) ಒಡಿಶಾದ ಭುವನೇಶ್ವರದ ಬಳಿಯ ಹರಿದಮಾಡ ಗ್ರಾಮದಲ್ಲಿ ಬ್ರಹ್ಮ ಕುಮಾರಿಯರ ಡಿವೈನ್ ರಿಟ್ರೀಟ್ ಸೆಂಟರ್ (ದೈವಿಕ ಧ್ಯಾನ ಕೇಂದ್ರವನ್ನು) ಅನ್ನು ಉದ್ಘಾಟಿಸಿದರು. ಅವರು ಬ್ರಹ್ಮಾ ಕುಮಾರಿಯರ ‘ಸುಸ್ಥಿರತೆಗಾಗಿ ಜೀವನಶೈಲಿ’ ಎನ್ನುವ ರಾಷ್ಟ್ರೀಯ ಅಭಿಯಾನಕ್ಕೆ  ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡುತ್ತಾ ರಾಷ್ಟ್ರಪತಿಗಳು, ಪ್ರಕೃತಿ ಮಾತೆ ಹೇರಳವಾದ ವರದಾನದಿಂದ ಕೂಡಿದ್ದಾಳೆ. ಕಾಡುಗಳು, ಪರ್ವತಗಳು, ನದಿಗಳು, ಸರೋವರಗಳು, ಸಮುದ್ರಗಳು, ಮಳೆ, ಗಾಳಿ - ಎಲ್ಲವೂ ಜೀವಿಗಳ ಉಳಿವಿಗೆ ಅತ್ಯಗತ್ಯ. ಆದರೆ ಪ್ರಕೃತಿಯ ಸಂಪತ್ತು  ಮಾನವನ ಅಗತ್ಯಗಳಿಗಾಗಿ, ಹೊರತು ದುರಾಸೆಗಾಗಿ ಅಲ್ಲ ಎಂಬುದನ್ನು ಮಾನವರು ನೆನಪಿನಲ್ಲಿಡಬೇಕು. ಮನುಷ್ಯರು ತಮ್ಮ ಭೋಗಕ್ಕಾಗಿ ಪ್ರಕೃತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಮತ್ತು ಈ ಮೂಲಕ ಪ್ರಕೃತಿಯ ಕೋಪಕ್ಕೆ ಬಲಿಯಾಗುತ್ತಿದ್ದಾರೆ. ಪ್ರಕೃತಿಯೊಂದಿಗೆ ಸಾಮರಸ್ಯವನ್ನು ಸ್ಥಾಪಿಸುವುದು ಮತ್ತು ಪ್ರಕೃತಿ ಸ್ನೇಹಿ ಜೀವನವನ್ನು ನಡೆಸುವುದು ಇಂದಿನ ಅಗತ್ಯವಾಗಿದೆ ಎಂದು ಅವರು ಹೇಳಿದರು.

ಭಾರತೀಯ ಸಂಸ್ಕೃತಿಯು ಯಾವಾಗಲೂ ಪ್ರಕೃತಿಯೊಂದಿಗೆ ಸಾಮರಸ್ಯದ ಜೀವನಶೈಲಿಗೆ ಒತ್ತು ನೀಡಿದೆ ಎಂದು ರಾಷ್ಟ್ರಪತಿ ಹೇಳಿದರು. ನಮ್ಮ ತತ್ವಶಾಸ್ತ್ರದಲ್ಲಿ ಭೂಮಿಯನ್ನು ತಾಯಿ ಎಂದೂ, ಆಕಾಶವನ್ನು ತಂದೆ ಎಂದೂ ಕರೆಯುತ್ತಾರೆ.   ನದಿಗೆ ತಾಯಿ ಎಂಬ ಬಿರುದು ಕೂಡ ನೀಡಲಾಗಿದೆ.

ಮಳೆಯನ್ನು ಇಂದ್ರನೆಂದು, ಸಾಗರವನ್ನು ವರುಣನೆಂದು ಪೂಜಿಸುತ್ತೇವೆ. ನಮ್ಮ ಕಥೆಗಳಲ್ಲಿ ಪರ್ವತಗಳು ಮತ್ತು ಮರಗಳು ಚಲಿಸುತ್ತವೆ ಮತ್ತು ಪ್ರಾಣಿಗಳು ಸಹ ಪರಸ್ಪರ ಮಾತನಾಡುತ್ತವೆ. ಅಂದರೆ, ಪ್ರಕೃತಿ ಜಡವಲ್ಲ, ಆದರೆ ಅದರೊಳಗೆ ಪ್ರಜ್ಞೆಯ ಶಕ್ತಿಯನ್ನು ಹೊಂದಿದೆ. ಇವೆಲ್ಲವೂ ಪ್ರಕೃತಿಯನ್ನು ರಕ್ಷಿಸಲು ಭಾರತೀಯ ದಾರ್ಶನಿಕರು ಮಾಡಿದ ಸುಂದರ ಚಿಂತನೆಗಳು ಎಂದು ವಿವರಿಸಿದರು. 

ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಮತ್ತು ಹವಾಮಾನ ಅಸ್ಥಿರತೆಯು ಪ್ರಸ್ತುತ ಜಗತ್ತು ಎದುರಿಸುತ್ತಿರುವ ದೊಡ್ಡ ಸವಾಲುಗಳಾಗಿವೆ ಎಂದು ರಾಷ್ಟ್ರಪತಿಗಳು ಹೇಳಿದರು. ಪ್ರಕೃತಿ ವಿಕೋಪಗಳಾದ ಪ್ರವಾಹ, ಭೂಕುಸಿತ, ಹಿಮಕುಸಿತ, ಭೂಕಂಪ, ಕಾಡ್ಗಿಚ್ಚು ಮತ್ತು ಸುನಾಮಿಗಳು ಈಗ ಪದೇ ಪದೇ ಸಂಭವಿಸುತ್ತಿವೆ ಎಂದು ಅವರು ಹೇಳಿದರು.

ನಮ್ಮ ದಿನನಿತ್ಯದ ಜೀವನದಲ್ಲಿ ಆಗುವ ಸಣ್ಣ ಪುಟ್ಟ ಬದಲಾವಣೆಗಳು ಸಮಾಜದಲ್ಲಿ ದೊಡ್ಡ ಬದಲಾವಣೆಗಳಿಗೆ ನಾಂದಿ ಹಾಡುತ್ತವೆ ಎಂದು ರಾಷ್ಟ್ರಪತಿಗಳು ಹೇಳಿದರು. ನೈಸರ್ಗಿಕ ಸಂಪನ್ಮೂಲಗಳ ಕನಿಷ್ಠ ಬಳಕೆಯನ್ನು ಖಚಿತಪಡಿಸಿಕೊಳ್ಳಲು ನಾವು ನಮ್ಮ ಅಭ್ಯಾಸಗಳನ್ನು ಬದಲಾಯಿಸಬೇಕಾಗಿದೆ. ಆಗಾಗ್ಗೆ ನಲ್ಲಿಗಳನ್ನು ಅನವಶ್ಯಕವಾಗಿ ತೆರೆದಿರುವುದರಿಂದ ಕುಡಿಯುವ ನೀರು ವ್ಯರ್ಥವಾಗುತ್ತಿದೆ. ಹಗಲಿನಲ್ಲಿಯೂ ಲೈಟ್ ಗಳು  ಉರಿಯುತ್ತಿರುತ್ತವೆ. ಅದೇ ರೀತಿ, ಮನೆ ಅಥವಾ ಕಚೇರಿಯಲ್ಲಿ, ನಾವು ಫ್ಯಾನ್ ಅಥವಾ ದೀಪಗಳನ್ನು ಸ್ವಿಚ್ ಆಫ್ ಮಾಡಲು ಗಮನ ಕೊಡುವುದಿಲ್ಲ. ತಟ್ಟೆಗಳಲ್ಲಿ ಒಂದಿಷ್ಟು ಆಹಾರವನ್ನು ಬಿಡುವ ಅಭ್ಯಾಸವನ್ನು ನಮ್ಮಷ್ಟಕ್ಕೆ ನಾವೇ ಬಿಡುವುದು ಸಾಧ್ಯವಾಗಿಲ್ಲ. ಪ್ರಕೃತಿ ಸ್ನೇಹಿ ಜೀವನಶೈಲಿಯ ಬಗ್ಗೆ ಮಾತನಾಡಿದರೆ ಸಾಲದು, ಅದನ್ನು ನಾವು ನಮ್ಮ ದೈನಂದಿನ ಜೀವನದ ಭಾಗವಾಗಿಸಿಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು. ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸುವ ಅಭ್ಯಾಸವನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ರಾಷ್ಟ್ರೀಯ ಅಭಿಯಾನ 'ಸುಸ್ಥಿರತೆಗಾಗಿ ಜೀವನಶೈಲಿ'ಗೆ ಸಂಬಂಧಿಸಿದ ಎಲ್ಲರಿಗೂ ರಾಷ್ಟ್ರಪತಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಕೃತಿಯೊಂದಿಗೆ ಜನರನ್ನು ಬೆಸೆಯುವ ನಿಟ್ಟಿನಲ್ಲಿ ಇದೊಂದು ಶ್ಲಾಘನೀಯ ಹೆಜ್ಜೆ ಎಂದರು. ಈ ಅಭಿಯಾನವು ಸಭೆಗಳು, ಸಮಿತಿಗಳು ಅಥವಾ ಸಮ್ಮೇಳನಗಳಿಗೆ ಸೀಮಿತವಾಗಿರಬಾರದು ಎಂದು ಅವರು ಹೇಳಿದರು. ದೇಶದ ವಿವಿಧ ಭಾಗಗಳಿಗೆ ತೆರಳಿ ಜನರಿಗೆ ವಿಶೇಷವಾಗಿ ಗ್ರಾಮೀಣ ಜನರಿಗೆ ಪರಿಸರದ ಬಗ್ಗೆ ಅರಿವು ಮೂಡಿಸಲು ಅಭಿಯಾನದೊಂದಿಗೆ ಸಂಬಂಧ ಹೊಂದಿರುವ ಎಲ್ಲರಿಗೂ ಒತ್ತಾಯಿಸಿದರು.

 

*****


(Release ID: 2031662) Visitor Counter : 99