ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ಜುಲೈ 3, 2024 ರಂದು ನವದೆಹಲಿಯಲ್ಲಿ ನಡೆದ GPAI  ಮಂತ್ರಿ ಮಂಡಳಿಯ 6 ನೇ ಸಭೆ


GPAI ನ ಭವಿಷ್ಯದ ದೃಷ್ಟಿಯ ಕುರಿತು ಸದಸ್ಯರಲ್ಲಿ ಒಮ್ಮತ... ಎಲ್ಲರ ಒಳಿತಿಗಾಗಿ  AI ನ ಸಾಮರ್ಥ್ಯವನ್ನು ಬಳಸಿಕೊಳ್ಳಲು ಸಮಗ್ರ ಪಾಲುದಾರಿಕೆಗೆ ನಿರ್ಧಾರ

Posted On: 03 JUL 2024 8:32PM by PIB Bengaluru

ಜಿಪಿಎಐ ಮಂತ್ರಿಮಂಡಲದ 6 ನೇ ಸಭೆಯು ಜುಲೈ 3, 2024 ರಂದು ನವದೆಹಲಿಯ ಭಾರತ ಮಂಟಪದಲ್ಲಿ ನಡೆಯಿತು. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ವಾಣಿಜ್ಯ ಮತ್ತು ಕೈಗಾರಿಕಾ ಖಾತೆಯ ರಾಜ್ಯ ಸಚಿವರಾದ ಶ್ರೀ ಜಿತಿನ್ ಪ್ರಸಾದ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಪಿಎಐ ನ  ನಿರ್ಗಮಿಸುತ್ತಿರುವ ಅಧ್ಯಕ್ಷರಾದ  ಜಪಾನ್‌ನ ಗೌರವಾನ್ವಿತ ಉಪ ಮಂತ್ರಿ ಶ್ರೀ ಹಿರೋಶಿ ಯೋಶಿದಾ ಮತ್ತು ನಿಯೋಜಿತ ಅಧ್ಯಕ್ಷ ಸರ್ಬಿಯಾದ  ಗೌರವಾನ್ವಿತ ಮಂತ್ರಿ ಜೆಲೆನಾ ಬೆಗೊವಿಕ್ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. OECD ಯ ವಿಜ್ಞಾನ ತಂತ್ರಜ್ಞಾನ ಮತ್ತು ಆವಿಷ್ಕಾರದ ನಿರ್ದೇಶಕ ಜೆರ್ರಿ ಶೀಹನ್ ಮತ್ತು ಯುನೆಸ್ಕೋದ ಸಹಾಯಕ ಮಹಾನಿರ್ದೇಶಕ ಡಾ ತೌಫಿಕ್ ಜೆಲಾಸ್ಸಿ ಅವರು ಸಭೆಯಲ್ಲಿ ಭಾಗವಹಿಸಿದ್ದರು.

ವ್ಯಾಪಕವಾದ ಚರ್ಚೆ ಮತ್ತು ವಿಚಾರ ವಿನಿಮಯಗಳ  ನಂತರ, ಕೃತಕ ಬುದ್ಧಿಮತ್ತೆಯ ಜಾಗತಿಕ ಪಾಲುದಾರಿಕೆ (ಜಿಪಿಎಐ) ಯ ಭವಿಷ್ಯದ ದೃಷ್ಟಿಕೋನದ ಬಗ್ಗೆ ಸದಸ್ಯರು ಒಮ್ಮತ ಕಂಡುಕೊಂಡರು. ಎಐನ ಭವಿಷ್ಯದ ದೃಷ್ಟಿ ಕುರಿತಂತೆ ನಿರ್ಧರಿಸಲಾದ ಕೆಲವು ಪ್ರಮುಖ ಅಂಶಗಳು ಈ ಕೆಳಗಿನಂತಿವೆ:

1. ನಮ್ಮ ಸಮಾಜ ಮತ್ತು ಆರ್ಥಿಕತೆಗಳ ಭವಿಷ್ಯವನ್ನು ರೂಪಿಸುವ ಕೃತಕ ಬುದ್ಧಿಮತ್ತೆಯ (AI) ಸಾಮರ್ಥ್ಯ, ಸುರಕ್ಷಿತ ಮತ್ತು ವಿಶ್ವಾಸಾರ್ಹವಾದ AI ಸಲಕರಣೆಗಳು ಸುಸ್ಥಿರ ಅಭಿವೃದ್ಧಿಯೆಡೆಗೆ ನಮ್ಮ ಪ್ರಗತಿಯನ್ನು ವೇಗಗೊಳಿಸಲು ಮತ್ತು ಸಕ್ರಿಯಗೊಳಿಸಲು ಇರುವ ಅವಕಾಶ ಮತ್ತು ಎಐಯನ್ನು ನಮ್ಮೆಲ್ಲರ ಒಳಿತಿಗೆ ಬಳಸಿಕೊಳ್ಳಲು ಅಂತಾರಾಷ್ಟ್ರೀಯ ಮಟ್ಟದ ಸಮನ್ವಯದ ಪ್ರಾಮುಖ್ಯತೆಯನ್ನು ಗುರುತಿಸುವುದು. 

2. ಸುರಕ್ಷತೆ, ಭದ್ರತೆ ಮತ್ತು ದುರುಪಯೋಗಕ್ಕೆ ಸಂಬಂಧಿಸಿದಂತೆ  AI ಸಿಸ್ಟಮ್ಸ್ ಅದರಲ್ಲೂ ವಿಶೇಷವಾಗಿ ಸುಧಾರಿತ AI ಸಿಸ್ಟಮ್ಸ್ ಗಳಿಂದ ಉಂಟಾಗುವ ಅಪಾಯಗಳು ಮತ್ತು ಸವಾಲುಗಳನ್ನು ಒಪ್ಪಿಕೊಳ್ಳುವುದು. ತಪ್ಪು ಮಾಹಿತಿ; ತಾರತಮ್ಯಕ್ಕೆ ಕಾರಣವಾಗುವ ಪಕ್ಷಪಾತಗಳು; ಪಾರದರ್ಶಕತೆ ಮತ್ತು ನ್ಯಾಯದ ಕೊರತೆ; ಸಮಾನ ಅವಕಾಶಗಳ ಕೊರತೆ, ಬೌದ್ಧಿಕ ಆಸ್ತಿ ಮತ್ತು ವೈಯಕ್ತಿಕ ಡೇಟಾ ರಕ್ಷಣೆಗೆ ಸಂಬಂಧಿಸಿದ ಅಪಾಯಗಳು; ಮಾನವ ಹಕ್ಕುಗಳು ಮತ್ತು ಮಕ್ಕಳ ಯೋಗಕ್ಷೇಮಕ್ಕೆ ಬೆದರಿಕೆಗಳು; ಪರಿಸರ ಸುಸ್ಥಿರತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿರುವ ಅಪಾಯಗಳು; ದೇಶಗಳ ನಡುವೆ ಮತ್ತು ಒಳಗೆ ಡಿಜಿಟಲ್ ವಿಭಜನೆ  ಹೆಚ್ಚಾಗುವುದು; ಮತ್ತು ಕೆಲಸದ ಭವಿಷ್ಯವನ್ನು ಪರಿವರ್ತಿಸುವುದು ಎಐ ಒಡ್ಡುವ ಸವಾಲುಗಳಾಗಿವೆ. 

3.  ಬಲವಾದ ವೈಜ್ಞಾನಿಕ ತಳಹದಿ ಮತ್ತು ಏಕರೀತಿಯ ಮಾನದಂಡಗಳ ಮೇಲೆ ಅವಲಂಬಿತವಾದ ಮತ್ತು ಸರ್ಕಾರಗಳು, ಅಕಾಡೆಮಿಗಳು, ಸಂಶೋಧಕರು, ತಾಂತ್ರಿಕ ಸಮುದಾಯ, ಖಾಸಗಿ ವಲಯ ಮತ್ತು ನಾಗರಿಕ ಸಮಾಜಗಳ ನಡುವೆ  ಸಹಕಾರವನ್ನು ಬಲಪಡಿಸುವ ಎಲ್ಲರನ್ನೂ ಒಳಗೊಳ್ಳುವ ವಿಶ್ವಾಸಾರ್ಹ ಮತ್ತು ಮಾನವ-ಕೇಂದ್ರಿತ AI ಅನ್ನು ಬೆಳೆಸುವ ಬದ್ಧತೆಯನ್ನು ಹಂಚಿಕೊಳ್ಳುವುದು. 

4. ಕೃತಕ ಬುದ್ಧಿಮತ್ತೆ ಕುರಿತು OECD ಯ  ಶಿಫಾರಸ್ಸು ಮತ್ತು AI ಬಳಕೆಯಲ್ಲಿ ಮೌಲ್ಯಗಳ ಕುರಿತಂತೆ  UNESCO ಮಾಡಿರುವ ಶಿಫಾರಸ್ಸುಗಳಿಗೆ ನಮ್ಮ ಸಾಮೂಹಿಕ ಬದ್ಧತೆಯನ್ನು ಪುನರುಚ್ಚರಿಸುವುದು. 

5. ಪ್ರಾರಂಭವಾದಾಗಿನಿಂದ ಜಿಪಿಎಐ AI ಕುರಿತಂತೆ ಬಹು ಪಾಲುದಾರರ ಸಹಕಾರಕ್ಕಾಗಿರುವ ಒಂದು ಜಾಗತಿಕ ಉಪಕ್ರಮವಾಗಿದೆ ಎಂಬುದನ್ನು ನೆನಪಿಸಿಕೊಳ್ಳುವುದು. 

6.  AI ನಲ್ಲಿ ಆವಿಷ್ಕಾರ  ಮತ್ತು ಆಡಳಿತ ಕುರಿತಂತೆ GPAI ಅನ್ನು ಒಂದು ನೋಡಲ್ ಏಜನ್ಸಿಯಾಗಿ ಬಲಪಡಿಸುವ ಬಗ್ಗೆ ನಮ್ಮ ಬದ್ಧತೆ ಮತ್ತು ಸಮರ್ಪಣೆಯನ್ನು ಹೊಸದಿಲ್ಲಿಯಲ್ಲಿ 2023 ರಲ್ಲಿ ನಡೆದ GPAI ಸಚಿವರ ಘೋಷಣೆಯಂತೆ  ಗುರುತಿಸುವುದು. ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳ ಮೇಲೆ ನಿರ್ದಿಷ್ಟ ಗಮನವನ್ನು ನೀಡುವ ಮೂಲಕ ಸದಸ್ಯತ್ವ ಅಭಿಯಾನವನ್ನು ಮುಂದುವರಿಸುವುದು, ಆ ಮೂಲಕ ನಮ್ಮ ವಿಶಾಲ ವ್ಯಾಪ್ತಿಯ ಪರಿಣತಿ, ರಾಷ್ಟ್ರೀಯ ಮತ್ತು ಪ್ರಾದೇಶಿಕ ದೃಷ್ಟಿಕೋನಗಳು ಮತ್ತು ಅನುಭವಗಳನ್ನು ಹಂಚಿಕೊಳ್ಳುವುದನ್ನು ಪುನರುಚ್ಚರಿಸುವುದು. 

7. ಜಿಪಿಎಐ ಮತ್ತು ಅದರ ಆಡಳಿತ ಮತ್ತು ಕಾರ್ಯಾಚರಣೆಯ ವಿಧಾನಗಳ ಭವಿಷ್ಯವನ್ನು ಪರಿಕಲ್ಪಿಸುವ ನಿಟ್ಟಿನಲ್ಲಿ  ಸ್ಮಾಲ್ ವರ್ಕಿಂಗ್ ಗ್ರೂಪ್ ಫಾರ್ ಫ್ಯೂಚರ್ ಜಿಪಿಎಐ, ಜಿಪಿಎಐ ಸೆಕ್ರೆಟರಿಯೇಟ್ ಮತ್ತು ಎಕ್ಸಿಕ್ಯೂಟಿವ್ ಕೌನ್ಸಿಲ್ ನ  ಸಾಮೂಹಿಕ ಕೊಡುಗೆಯನ್ನು ಸ್ಮರಿಸುವುದು. 

8. ಆರಂಭದಿಂದಲೂ GPAI ಗೆ OECD ನೀಡುತ್ತಿರುವ ನಿರಂತರ ಬೆಂಬಲವನ್ನು ಗೌರವಿಸುವುದು ಮತ್ತು  ಮಾನವ-ಕೇಂದ್ರಿತ, ಸುರಕ್ಷಿತ, ಮತ್ತು ವಿಶ್ವಾಸಾರ್ಹ AI ಯ ಪ್ರಗತಿಗಾಗಿ GPAI ಮತ್ತು OECD ನಡುವಿನ ಸಂಬಂಧವನ್ನು ಬಲಪಡಿಸಲು ನಮ್ಮ ಬದ್ಧತೆಯನ್ನು ಪುನರುಚ್ಚರಿಸುವುದು;

9. GPAI ಬ್ರಾಂಡ್‌ನಡಿಯಲ್ಲಿ ಮತ್ತು ಕೃತಕ ಬುದ್ಧಿಮತ್ತೆ ಕುರಿತಂತೆ OECD ಮಾಡಿರುವ ಶಿಫಾರಸ್ಸುಗಳ ಆಧಾರದ ಮೇಲೆ OECD ಯೊಂದಿಗಿನ ಸಮಗ್ರ ಪಾಲುದಾರಿಕೆಯ ಮೂಲಕ GPAI ಗೆ ಒಂದು ನವೀಕೃತ ದೃಷ್ಟಿಕೋನವನ್ನು ಸಿದ್ದಪಡಿಸುವುದು. 

10. GPAI ಅಥವಾ OECD ಯಲ್ಲಿ  ತಮ್ಮ ಪ್ರಸ್ತುತ ಸದಸ್ಯತ್ವದ ಸ್ಥಿತಿಯನ್ನು ಲೆಕ್ಕಿಸದೆಯೇ, ಮಾನವ-ಕೇಂದ್ರಿತ, ಸುರಕ್ಷಿತ, ಮತ್ತು ವಿಶ್ವಾಸಾರ್ಹ AI ಯ ಸಾಮರ್ಥ್ಯವನ್ನು ಎಲ್ಲರ ಒಳಿತಿಗಾಗಿ ಬಳಸಿಕೊಳ್ಳುವ ಈ ಸಹಯೋಗದ ಪ್ರಯತ್ನದಲ್ಲಿ ನಮ್ಮೊಂದಿಗೆ ಸೇರಲು ಎಲ್ಲ ದೇಶಗಳಿಗೆ ಕರೆ ನೀಡುವುದು. 

11. ಸಂಬಂಧಿತ ಅಂತರಾಷ್ಟ್ರೀಯ ಸಂಸ್ಥೆಗಳು ಮತ್ತು ವಿಶ್ವಸಂಸ್ಥೆಯ ವಿಶೇಷ ಏಜೆನ್ಸಿಗಳೊಂದಿಗೆ ಮತ್ತು ಇತರ ಪಾಲುದಾರರೊಂದಿಗೆ ಅಂತರ್ಗತ ಸಂವಾದದ ಮೂಲಕ ತಾತ್ಕಾಲಿಕ ಆಧಾರದ ಮೇಲೆ ಕೆಲಸ ಮಾಡಲು ಎದುರುನೋಡವುದು 

12.ಸಮಗ್ರ ಪಾಲುದಾರಿಕೆಯ ಸದಸ್ಯರು ಹೊಸ ಸದಸ್ಯರು ಮತ್ತು ವೀಕ್ಷಕರನ್ನು ಓಎಸಿಡ್ ಅಂಡ್ ಜಿಪಿಎಐ ಕಾರ್ಯಕ್ರಮಗಳು  ಮತ್ತು ನಿರ್ಧಾರಗಳಲ್ಲಿ ಮುಕ್ತವಾಗಿ ಸ್ವಾಗತಿಸುವುದು 

13. ಸಂಯೋಜಿತ ಪಾಲುದಾರಿಕೆಯ ಎಲ್ಲಾ ಸದಸ್ಯರು ಯಾವುದೇ ವ್ಯತ್ಯಾಸ ಅಥವಾ ತಾರತಮ್ಯಗಳಿಲ್ಲದೆ ಪಾಲುದಾರಿಕೆಯ ಚಟುವಟಿಕೆಗಳಲ್ಲಿ ಮತ್ತು ಅದರ ನಿರ್ಧಾರಗಳಲ್ಲಿ ಭಾಗವಹಿಸುವುದು

14. ಕೌನ್ಸಿಲ್, ಪ್ಲೇನರಿ ಮತ್ತು ಸ್ಟೀರಿಂಗ್ ಗ್ರೂಪ್ ಗಳ ರೂಪದಲ್ಲಿ ಪಾಲುದಾರಿಕೆಯ ಆಡಳಿತ ಮಂಡಳಿಗಳಾಗಿ ಸಮಗ್ರ ಪಾಲುದಾರಿಕೆಯ ಎಲ್ಲಾ ಹಂತಗಳಲ್ಲಿ ಎಲ್ಲರನ್ನೊಳಗೊಂಡ ಆಡಳಿತವನ್ನು ಖಚಿತಪಡಿಸಿಕೊಳ್ಳಲು ನಮ್ಮ ಬದ್ಧತೆಯನ್ನು ದೃಢೀಕರಿಸುವುದು. 

15. GPAIನ ಬಹು- ಪಾಲುದಾರಿಕೆ ಸ್ವರೂಪವನ್ನು ಬಲಪಡಿಸಲು ಮತ್ತು GPAI ಎಕ್ಸ್‌ಪರ್ಟ್ ಸಪೋರ್ಟ್ ಸೆಂಟರ್‌ಗಳ (ESCs) ಸಕ್ರಿಯ ಪಾತ್ರದ ಮೂಲಕ ಮತ್ತು GPAI ಮಲ್ಟಿಸ್ಟೇಕ್‌ಹೋಲ್ಡರ್ ಎಕ್ಸ್‌ಪರ್ಟ್ ಗ್ರೂಪ್ (MEG) ಮತ್ತು OECD ನೆಟ್‌ವರ್ಕ್ ಆಫ್ ಎಕ್ಸ್‌ಪರ್ಟ್‌ಗಳನ್ನು ವಿಲೀನಗೊಳಿಸುವ ಮೂಲಕ ಸದಸ್ಯ-ತಜ್ಞರ ಸಹಯೋಗವನ್ನು ವರ್ಧಿಸಲು ಬದ್ಧರಾಗಿರುವುದು.  

16. ಸದಸ್ಯರ ಒಇಸಿಡಿ ಸದಸ್ಯತ್ವ ಸ್ಥಿತಿಯನ್ನು ಲೆಕ್ಕಿಸದೆ ಎಲ್ಲಾ ಸದಸ್ಯರು ಸಮಾನ ಸ್ತರದಲ್ಲಿ ಮತ್ತು ಒಮ್ಮತದ ಮೂಲಕ ಸಮಗ್ರ ಪಾಲುದಾರಿಕೆಯು ನಿರ್ದಿಷ್ಟ ಕಾರ್ಯ ವಿಧಾನಗಳನ್ನು ಅಭಿವೃದ್ಧಿಪಡಿಸುವುದು. 

17. ದೇಶಗಳ ಒಳಗೆ ಮತ್ತು ಅವುಗಳ ನಡುವೆ ಡಿಜಿಟಲ್ ವಿಭಜನೆಯನ್ನು ಕಡಿಮೆ ಮಾಡಲು, ಸುರಕ್ಷಿತ ಮತ್ತು ವಿಶ್ವಾಸಾರ್ಹ AI ಅನ್ನು ಮತ್ತು ಹಿರೋಷಿಮಾ AI ಪ್ರಕ್ರಿಯೆ, ಕೌನ್ಸಿಲ್ ಆಫ್ ಯುರೋಪ್, 2023 ರ ಬ್ಲೆಚ್ಲೆ ಪಾರ್ಕ್ AI ಸುರಕ್ಷತಾ ಶೃಂಗಸಭೆ, 2024ರ AI ಸಿಯೋಲ್ ಶೃಂಗಸಭೆ ಮತ್ತು ಮುಂಬರುವ 2025 ಫ್ರಾನ್ಸ್ AI ಆಕ್ಷನ್ ಶೃಂಗಸಭೆಗಳನ್ನೊಳಗೊಂಡಂತೆ G20 ಮತ್ತು G7 ನಂತಹ ಇತರೇ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಾರಂಭಿಸಲಾದ AI ಉಪಕ್ರಮಗಳೊಂದಿಗೆ ಸಿನರ್ಜಿಗಳನ್ನು ಉತ್ತೇಜಿಸುವಲ್ಲಿ ಸಮಗ್ರ ಪಾಲುದಾರಿಕೆ ಮತ್ತು ಅಂತರರಾಷ್ಟ್ರೀಯ ಸಹಕಾರದ ಪ್ರಮುಖ ಪಾತ್ರವನ್ನು ಪರಿಗಣಿಸಿಸುವುದು. 

18. AI ಅನ್ನು ಎಲ್ಲರ ಒಳಿತಿಗಾಗಿ ಬಳಸುವ ಬಗ್ಗೆ ನಮ್ಮ ಭವಿಷ್ಯದ ದೃಷ್ಟಿಯನ್ನು ಸಾಧಿಸಲು  ಎಲ್ಲರನ್ನು ಒಳಗೊಂಡು, ಶಾಂತಿ, ಸಮೃದ್ಧಿ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವ ಸಮಗ್ರ ಪಾಲುದಾರಿಕೆಯ ಮೂಲಕ ರಚನಾತ್ಮಕ ಸಂವಾದದಲ್ಲಿ ತೊಡಗಿಸಿಕೊಳ್ಳುವುದನ್ನು ಮುಂದುವರಿಸುವುದು. 

19. 2024-25ನೇ ಸಾಲಿಗಾಗಿ GPAI ನ ಪ್ರಮುಖ ಅಧ್ಯಕ್ಷರಾಗಿ ಸೆರ್ಬಿಯಾದ GPAI ಸದಸ್ಯರ ಆಯ್ಕೆಯನ್ನು ಸ್ವಾಗತಿಸುವುದು ಮತ್ತು ಈ ವರ್ಷದಲ್ಲಿ ಸೆರ್ಬಿಯಾದಲ್ಲಿ ನಡೆಯಲಿರುವ GPAI ಶೃಂಗಸಭೆಯನ್ನು ಎದುರುನೋಡುವುದು. 

2024 ರ ಜಿಪಿಎಐ ನ ನವದೆಹಲಿಯ ಸಭೆ ಮತ್ತು ಜಿಪಿಎಐ ಭವಿಷ್ಯದ ಕುರಿತು ಬರಲಾಗಿರುವ ಒಮ್ಮತವು ಜಾಗತಿಕ AI ಸಂವಾದದಲ್ಲಿ ಭಾರತದ ನಾಯಕತ್ವವನ್ನು ಒತ್ತಿಹೇಳುವುದರ ಜೊತೆಗೆ AI ಯ ನೈತಿಕ ಮತ್ತು ಎಲ್ಲರನ್ನೊಳಗೊಂಡ ಅಭಿವೃದ್ಧಿಯನ್ನು ದೃಢೀಕರಿಸುವಲ್ಲಿ ಅದರ ಪ್ರಮುಖ ಪಾತ್ರವನ್ನು ದೃಢಪಡಿಸುತ್ತದೆ.  AI ಯ ಸಾಮರ್ಥ್ಯವನ್ನು ಎಲ್ಲರ ಒಳಿತಿಗಾಗಿ ಬಳಸಿಕೊಳ್ಳುವ ತನ್ನ ಉದ್ದೇಶಗಳನ್ನು ಸಾಧಿಸಲು ನವೀಕೃತ ಸಮಗ್ರ ಪಾಲುದಾರಿಕೆಗೆ ಇದು ದಾರಿ ಮಾಡಿಕೊಡುತ್ತದೆ.


*****



(Release ID: 2030668) Visitor Counter : 68