ನಾಗರೀಕ ವಿಮಾನಯಾನ ಸಚಿವಾಲಯ
"ರದ್ದಾದ ವಿಮಾನಗಳ ಸಂಪೂರ್ಣ ಮರುಪಾವತಿಯನ್ನು ಖಚಿತಪಡಿಸಿಕೊಳ್ಳಲು ಅಥವಾ ಪರ್ಯಾಯ ಪ್ರಯಾಣ ಮಾರ್ಗ ಟಿಕೆಟ್ ಗಳನ್ನು ಒದಗಿಸಲು 24 / 7 ವಾರ್ ರೂಮ್ ಸ್ಥಾಪಿಸಲಾಗುವುದು"
“ಪ್ರಸ್ತುತ ಪರಿಸ್ಥಿತಿಯಲ್ಲಿ ಪ್ರಯಾಣಿಕರಿಗೆ ಅನಾನುಕೂಲತೆ ಆಗುವುದನ್ನು ತಪ್ಪಿಸಲು ಎಲ್ಲಾ ವಿಮಾನಯಾನ ಸಂಸ್ಥೆಗಳು ಶುಲ್ಕ ಸ್ಥಿರತೆ (ಪ್ರಯಾಣ ದರ) ಯನ್ನು ಕಾಪಾಡಿಕೊಳ್ಳಬೇಕು”
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಎಲ್ಲಾ ಸಣ್ಣ ಮತ್ತು ಪ್ರಮುಖ ವಿಮಾನ ನಿಲ್ದಾಣಗಳಿಗೆ ರಾಚನಿಕ ಸಾಮರ್ಥ್ಯದ ಸಮಗ್ರ ತಪಾಸಣೆ/ಪರಿಶೀಲನೆ ನಡೆಸಲು ಸುತ್ತೋಲೆ ಹೊರಡಿಸಲಿದೆ.
ದಿಲ್ಲಿ ಟಿ 1 ಮತ್ತು ಜಬಲ್ಪುರ ವಿಮಾನ ನಿಲ್ದಾಣಗಳಲ್ಲಿನ ಘಟನೆಗಳನ್ನು ತಕ್ಷಣ ಮೌಲ್ಯಮಾಪನ ಮಾಡಲು ಐಐಟಿ ದಿಲ್ಲಿಯ ರಾಚನಿಕ ಎಂಜಿನಿಯರ್ ಗಳಿಗೆ ಹೊಣೆ.- ಶ್ರೀ ರಾಮ್ ಮೋಹನ್ ನಾಯ್ಡು
Posted On:
28 JUN 2024 8:53PM by PIB Bengaluru
ಕೇಂದ್ರ ನಾಗರಿಕ ವಿಮಾನಯಾನ ಸಚಿವ ಶ್ರೀ ರಾಮ್ ಮೋಹನ್ ನಾಯ್ಡು ಅವರು ಇಂದು ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ, ನಾಗರಿಕ ವಿಮಾನಯಾನ ಮಹಾನಿರ್ದೇಶಕರು, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧ್ಯಕ್ಷರು, ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋದ ಮಹಾನಿರ್ದೇಶಕರು ಮತ್ತು ನಾಗರಿಕ ವಿಮಾನಯಾನ ಸಚಿವಾಲಯದ ಜಂಟಿ ಕಾರ್ಯದರ್ಶಿಗಳು ಸೇರಿದಂತೆ ಪ್ರಮುಖ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದರು. ಪ್ರಸ್ತುತ ಎದುರಾಗಿರುವ ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ಪ್ರಯಾಣಿಕರ ಸುರಕ್ಷತೆ ಮತ್ತು ಅನುಕೂಲವನ್ನು ಖಚಿತಪಡಿಸಿಕೊಳ್ಳಲು ಕೆಲವು ಪ್ರಮುಖ ನಿರ್ಧಾರಗಳನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು:
1. 24/7 ವಾರ್ ರೂಮ್ ಸ್ಥಾಪನೆ ಮತ್ತು ಟಿ 2 ಮತ್ತು ಟಿ 3 ನ ಸಮರ್ಪಕ ನಿರ್ವಹಣೆ - ನಾಗರಿಕ ವಿಮಾನಯಾನ ಸಚಿವಾಲಯದ ನಿಕಟ ಮೇಲ್ವಿಚಾರಣೆಯಲ್ಲಿ 24/7 ವಾರ್ ರೂಮ್ ಸ್ಥಾಪಿಸಲಾಗುವುದು. ಈ ವಾರ್ ರೂಮ್ ರದ್ದಾದ ವಿಮಾನಗಳ ಸಂಪೂರ್ಣ ಮರುಪಾವತಿಯನ್ನು ಖಚಿತಪಡಿಸುತ್ತದೆ ಅಥವಾ ಲಭ್ಯತೆಗೆ ಅನುಗುಣವಾಗಿ ಪರ್ಯಾಯ ಪ್ರಯಾಣ ಮಾರ್ಗಗಳ ಟಿಕೆಟ್ ಗಳನ್ನು ಒದಗಿಸುತ್ತದೆ. ಎಲ್ಲಾ ಮರುಪಾವತಿಗಳನ್ನು 7 ದಿನಗಳ ನಿಗದಿತ ಸಮಯದೊಳಗೆ ಪ್ರಕ್ರಿಯೆಗೊಳಿಸಲಾಗುತ್ತದೆ. ತಕ್ಷಣದ ಸಹಾಯಕ್ಕಾಗಿ ಫೋನ್ ಸಂಖ್ಯೆಗಳು ಸೇರಿದಂತೆ ಸಂಪರ್ಕ ವಿವರಗಳನ್ನು ಪ್ರಯಾಣಿಕರಿಗೆ ಒದಗಿಸಲಾಗುವುದು.
o ವಾರ್ ರೂಮ್ ಸಹಾಯವಾಣಿ ಸಂಖ್ಯೆಗಳು:
* ಇಂಡಿಗೊ ವಿಮಾನಯಾನ ಸಂಸ್ಥೆ
1. ಟಿ 2 ಟರ್ಮಿನಲ್: 7428748308
2. ಟಿ 3 ಟರ್ಮಿನಲ್: 7428748310
* ಸ್ಪೈಸ್ ಜೆಟ್
1. ಟಿ 3 ಟರ್ಮಿನಲ್: 0124-4983410/0124-7101600
2. 9711209864 (ಶ್ರೀ ರೋಹಿತ್)
ಪ್ರಯಾಣಿಕರ ಸೌಕರ್ಯವನ್ನು ಪ್ರಥಮಾದ್ಯತೆಯಾಗಿ ಮಾಡಲು ಮತ್ತು ಟಿ 1 ಅನ್ನು ತಾತ್ಕಾಲಿಕವಾಗಿ ಮುಚ್ಚುವುದರಿಂದ ಟಿ 2 ಮತ್ತು ಟಿ 3 ಟರ್ಮಿನಲ್ ಗಳ ಮೇಲೆ ಉಂಟಾಗುವ ಹೆಚ್ಚುವರಿ ಒತ್ತಡವನ್ನು ನಿಭಾಯಿಸಲು ಕ್ರಮಗಳನ್ನು ಜಾರಿಗೆ ತರಲು ಸಭೆಯಲ್ಲಿ ಒತ್ತು ನೀಡಲಾಯಿತು.
2. ವಿಮಾನಯಾನ ದರಗಳಿಗೆ ಸಂಬಂಧಿಸಿದ ಸಲಹೆ: ಈ ಪರಿಸ್ಥಿತಿಯಲ್ಲಿ ವಿಮಾನಯಾನ ದರದಲ್ಲಿ ತೀವ್ರ ಹೆಚ್ಚಳಕ್ಕೆ ಕಾರಣವಾಗದಂತೆ ನೋಡಿಕೊಳ್ಳಲು ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಸಲಹೆಯನ್ನು ಬಿಡುಗಡೆ ಮಾಡಲಾಗಿದೆ. ಪ್ರಯಾಣಿಕರ ಅನಾನುಕೂಲತೆಯನ್ನು ತಪ್ಪಿಸಲು ವಿಮಾನಯಾನ ಸಂಸ್ಥೆಗಳು ಶುಲ್ಕ ಸ್ಥಿರತೆಯನ್ನು ಕಾಪಾಡಿಕೊಳ್ಳಬೇಕು.
3. ರಾಚನಿಕ ಸಾಮರ್ಥ್ಯ ತಪಾಸಣೆ/ಪರಿಶೀಲನೆ: ರಾಚನಿಕ ಸಾಮರ್ಥ್ಯದ ಸಮಗ್ರ ತಪಾಸಣೆ ನಡೆಸಲು ಎಲ್ಲಾ ಸಣ್ಣ ಮತ್ತು ಪ್ರಮುಖ ವಿಮಾನ ನಿಲ್ದಾಣಗಳಿಗೆ ಸುತ್ತೋಲೆ ಹೊರಡಿಸುವಂತೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ (ಎಎಐ) ನಿರ್ದೇಶಿಸಲಾಗಿದೆ. ಈ ತಪಾಸಣೆಗಳನ್ನು ಮುಂದಿನ 2-5 ದಿನಗಳಲ್ಲಿ ಪೂರ್ಣಗೊಳಿಸಬೇಕು ಮತ್ತು ವರದಿಗಳನ್ನು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಸಲ್ಲಿಸಬೇಕು. ಇದರಲ್ಲಿ ಕಂಡು ಬಂದ ಸಂಗತಿಗಳ ಆಧಾರದ ಮೇಲೆ, ಇಂತಹ ದುರದೃಷ್ಟಕರ ಘಟನೆಗಳು ಪುನರಾವರ್ತನೆಯಾಗದಂತೆ ತಡೆಯಲು ಹೆಚ್ಚಿನ ಸುರಕ್ಷತಾ ಕ್ರಮಗಳ ಅಗತ್ಯ ಮತ್ತು ದೀರ್ಘಕಾಲೀನ ನೀತಿಗಳ ಅಭಿವೃದ್ಧಿಯನ್ನು ಆದ್ಯತೆಯ ಮೇರೆಗೆ ರೂಪಿಸಲಾಗುವುದು.
4. ಆರಂಭಿಕ ತನಿಖಾ ತಂಡದ ನಿಯೋಜನೆ: ದಿಲ್ಲಿ ಟಿ 1 ನಲ್ಲಿ ನಡೆದ ಘಟನೆಯನ್ನು ತಕ್ಷಣ ಮೌಲ್ಯಮಾಪನ ಮಾಡಲು ಐಐಟಿ ದಿಲ್ಲಿಯ ರಾಚನಿಕ ಎಂಜಿನಿಯರ್ ಗಳಿಗೆ ಸೂಚಿಸಲಾಗಿದೆ. ಅವರ ಆರಂಭಿಕ ತನಿಖಾ/ಶೋಧನಾ ವರದಿಯ ಆಧಾರದ ಮೇಲೆ ಹೆಚ್ಚಿನ ಪರಿಶೀಲನೆಯ ಬಗ್ಗೆ ನಿರ್ಧರಿಸಲಾಗುವುದು. ಅದೇ ರೀತಿ ಎಎಐ ಜಬಲ್ಪುರದ ಘಟನೆಯನ್ನು ಪರಿಶೀಲಿಸಲಾಗುವುದು.
ಪ್ರಯಾಣಿಕರ ಸುರಕ್ಷತೆ ಮತ್ತು ಅನುಕೂಲತೆ ಅತ್ಯಂತ ಪ್ರಮುಖ ಆದ್ಯತೆಯಾಗಿದೆ ಎಂದು ಕೇಂದ್ರ ಸಚಿವ ಶ್ರೀ ರಾಮ್ ಮೋಹನ್ ನಾಯ್ಡು ಒತ್ತಿ ಹೇಳಿದರು. ಪ್ರಸ್ತುತ ಎದುರಾಗಿರುವ ಸವಾಲುಗಳಿಗೆ ತ್ವರಿತ ಪರಿಹಾರವನ್ನು ಖಚಿತಪಡಿಸಿಕೊಳ್ಳಲು ಮತ್ತು ನಮ್ಮ ವಿಮಾನ ನಿಲ್ದಾಣಗಳ ಒಟ್ಟಾರೆ ಸುರಕ್ಷತಾ ಮಾನದಂಡಗಳನ್ನು ಹೆಚ್ಚಿಸಲು ಸಚಿವಾಲಯವು ಎಲ್ಲಾ ಸಂಬಂಧಿತ ಏಜೆನ್ಸಿಗಳೊಂದಿಗೆ ನಿರಂತರ ಕೆಲಸ ಮಾಡುತ್ತಿದೆ ಎಂದವರು ಹೇಳಿದರು.
*****
(Release ID: 2029433)
Visitor Counter : 67