ಪ್ರಧಾನ ಮಂತ್ರಿಯವರ ಕಛೇರಿ

ಸ್ಪೀಕರ್ ಆಯ್ಕೆ ಬಳಿಕ ಲೋಕಸಭೆಯನ್ನು ಉದ್ದೇಶಿಸಿ ಪ್ರಧಾನಿ ಭಾಷಣ


"17ನೇ ಲೋಕಸಭೆಯು ಅನೇಕ ಪರಿವರ್ತನಾತ್ಮಕ ಶಾಸಕಾಂಗ ಉಪಕ್ರಮಗಳಿಗೆ ಸಾಕ್ಷಿಯಾಗಿದೆ"

"ಸಂಸತ್ತು ಕೇವಲ ಗೋಡೆಗಳಲ್ಲ, ಅದು 140 ಕೋಟಿ ನಾಗರೀಕರ ಆಕಾಂಕ್ಷೆಯ ಕೇಂದ್ರ ಸ್ಥಾನ"

Posted On: 26 JUN 2024 12:11PM by PIB Bengaluru

ಶ್ರೀ ಓಂ ಬಿರ್ಲಾ ಅವರನ್ನು ಸದನದ ಸ್ಪೀಕರ್ ಆಗಿ ಆಯ್ಕೆ ಮಾಡಿದ ನಂತರ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲೋಕಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಸತತ ಎರಡನೇ ಅವಧಿಗೆ ಸ್ಪೀಕರ್ ಆಗಿ ಅಧಿಕಾರ ವಹಿಸಿಕೊಂಡ ಶ್ರೀ ಬಿರ್ಲಾ ಅವರನ್ನು ಪ್ರಧಾನಮಂತ್ರಿಯವರು ಸ್ವಾಗತಿಸಿದರು. ಸದನದ ಪರವಾಗಿ ನೂತನ ಸ್ಪೀಕರ್‌ಗೆ ಶುಭ ಹಾರೈಕೆಗಳನ್ನು ತಿಳಿಸಿದರು. ʻಅಮೃತಕಾಲʼದ ಸಂದರ್ಭದಲ್ಲಿ ಶ್ರೀ ಬಿರ್ಲಾ ಅವರು ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡ ಮಹತ್ವವನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು. ಬಿರ್ಲಾ ಅವರ ಐದು ವರ್ಷಗಳ ಅನುಭವ ಹಾಗೂ ಅವರೊಂದಿಗೆ ಕೆಲಸ ಮಾಡಿದ ಸಂಸದರ ಅನುಭವವು ಸದನಕ್ಕೆ ಉತ್ತಮ ಮಾರ್ಗದರ್ಶನ ನೀಡಲು ಮರು ಆಯ್ಕೆಯಾದ ಸ್ಪೀಕರ್ ಅವರಿಗೆ ಅನುವು ಮಾಡಿಕೊಡುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಸ್ಪೀಕರ್ ಅವರ ಸಭ್ಯ ಮತ್ತು ವಿನಮ್ರ ವ್ಯಕ್ತಿತ್ವ ಹಾಗೂ ಸದನವನ್ನು ನಡೆಸಲು ಸಹಾಯ ಮಾಡುವ ಅವರ ಗೆಲುವಿನ ನಗುವನ್ನು ಪ್ರಧಾನಿ ಉಲ್ಲೇಖಿಸಿದರು.

ಮರು ಆಯ್ಕೆಯಾದ ಸ್ಪೀಕರ್ ಅವರು ಹೊಸ ಯಶಸ್ಸಿನ ಸಾಧನೆಯನ್ನು ಮುಂದುವರಿಸುತ್ತಾರೆ ಎಂಬ ವಿಶ್ವಾಸವನ್ನು ಪ್ರಧಾನಿ ವ್ಯಕ್ತಪಡಿಸಿದರು. ಐದು ವರ್ಷಗಳ ನಂತರ ಸತತ ಎರಡನೇ ಬಾರಿಗೆ ಸ್ಪೀಕರ್‌ ಹುದ್ದೆಯನ್ನು ಅಲಂಕರಿಸಿದ ಹಿರಿಮೆ ಶ್ರೀ ಬಲರಾಮ್ ಝಾಕರ್ ಅವರ ಬಳಿಕ ಶ್ರೀ ಓಂ ಬಿರ್ಲಾ ಅವರಿಗೆ ಸಲ್ಲುತ್ತದೆ. 17ನೇ ಲೋಕಸಭೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಶ್ರೀ ಓಂ ಬಿರ್ಲಾ ಅವರು 18ನೇ ಲೋಕಸಭೆಯನ್ನು ದೊಡ್ಡ ಯಶಸ್ಸಿನತ್ತ ಮುನ್ನಡೆಸುವ ಜವಾಬ್ದಾರಿಯನ್ನು ಪಡೆದಿದ್ದಾರೆ ಎಂದು ಪ್ರಧಾನಿ ಹೇಳಿದರು. ಸ್ಪೀಕರ್ ಆಗಿ ಆಯ್ಕೆಯಾದವರು ಚುನಾವಣೆಯಲ್ಲಿ ಸ್ಪರ್ಧಿಸದಿರುವ ಅಥವಾ ಸ್ಪೀಕರ್‌ ಆಗಿ ನೇಮಕದ ನಂತರ ಚುನಾವಣೆಯಲ್ಲಿ ಗೆಲುವು ಕಾಣದಿರುವ 20 ವರ್ಷಗಳ ಪ್ರವೃತ್ತಿಯ ಬಗ್ಗೆ ಪ್ರಧಾನಿ ಗಮನಸೆಳೆದರು. ಆದರೆ ಶ್ರೀ ಓಂ ಬಿರ್ಲಾ ಅವರು ಸ್ಪೀಕರ್‌ ಆಗಿ ನೇಮಕಗೊಂಡ ಬಳಿಕವೂ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜಯಶಾಲಿಯಾಗಿ ಹೊರಹೊಮ್ಮುವ ಮೂಲಕ ಹಾಗೂ ಆ ನಂತರ ಸ್ಪೀಕರ್ ಆಗಿ ಮರು ಆಯ್ಕೆಗೊಳ್ಳುವ ಮೂಲಕ ಇತಿಹಾಸ ಬರೆದಿದ್ದಾರೆ ಎಂದು ಶ್ರೀ ಮೋದಿ ಅವರು ಬಣ್ಣಿಸಿದರು. ಸಂಸತ್ ಸದಸ್ಯರಾಗಿ ಸ್ಪೀಕರ್ ಅವರ ಕಾರ್ಯವೈಖರಿಯನ್ನು ಪ್ರಧಾನಿ ಪ್ರಸ್ತಾಪಿಸಿದರು. 

ಶ್ರೀ ಓಂ ಬಿರ್ಲಾ ಅವರ ಕ್ಷೇತ್ರದಲ್ಲಿ ಕೈಗೊಂಡ ಗಮನಾರ್ಹ ʻಆರೋಗ್ಯವಂತ ತಾಯಿ ಮತ್ತು ಆರೋಗ್ಯವಂತ ಮಗುʼ ಅಭಿಯಾನದ ಬಗ್ಗೆ ಪ್ರಧಾನಿ ಮೋದಿ ಉಲ್ಲೇಖಿಸಿದರು. ಶ್ರೀ ಬಿರ್ಲಾ ಅವರು ತಮ್ಮ ಕ್ಷೇತ್ರವಾದ ಕೋಟಾದ ಗ್ರಾಮೀಣ ಪ್ರದೇಶಗಳಿಗೆ ಆರೋಗ್ಯ ಸೇವೆಗಳನ್ನು ತಲುಪಿಸುವಲ್ಲಿ ಮಾಡಿದ ಉತ್ತಮ ಕೆಲಸದ ಬಗ್ಗೆಯೂ ಅವರು ಉಲ್ಲೇಖಿಸಿದರು. ಶ್ರೀ ಬಿರ್ಲಾ ಅವರು ತಮ್ಮ ಕ್ಷೇತ್ರದಲ್ಲಿ ಕ್ರೀಡೆಯನ್ನು ಉತ್ತೇಜಿಸುತ್ತಿರುವುದನ್ನು ಪ್ರಧಾನಿ ಶ್ಲಾಘಿಸಿದರು.

ಕಳೆದ ಲೋಕಸಭೆಯಲ್ಲಿ ಶ್ರೀ ಬಿರ್ಲಾ ಅವರ ನಾಯಕತ್ವವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಆ ಅವಧಿಯು ನಮ್ಮ ಸಂಸದೀಯ ಇತಿಹಾಸದಲ್ಲಿ ಸುವರ್ಣ ಯುಗ ಎಂದು ಬಣ್ಣಿಸಿದರು. 17ನೇ ಲೋಕಸಭೆಯ ಅವಧಿಯಲ್ಲಿ ಕೈಗೊಂಡ ಪರಿವರ್ತನಾತ್ಮಕ ನಿರ್ಧಾರಗಳನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಸ್ಪೀಕರ್ ನಾಯಕತ್ವವನ್ನು ಶ್ಲಾಘಿಸಿದರು. ʻನಾರಿ ಶಕ್ತಿ ವಂದನ ಅಧಿನಿಯಮʼ, ʻಜಮ್ಮು ಕಾಶ್ಮೀರ ಮರುಸಂಘಟನೆ ಕಾಯಿದೆʼ, ʻಭಾರತೀಯ ನ್ಯಾಯ ಸಂಹಿತೆʼ, ʻಭಾರತೀಯ ನಾಗರಿಕ ಸುರಕ್ಷಾ ಸಂಹಿತೆʼ, ʻಸಾಮಾಜಿಕ ಸುರಕ್ಷಾ ಸಂಹಿತೆʼ, ʻವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆʼ, ʻಮುಸ್ಲಿಂ ಮಹಿಳಾ ವಿವಾಹ ಅಧಿಕಾರ ಸಂರಕ್ಷಣಾ ವಿಧೇಯಕʼ, ʻತೃತೀಯ ಲಿಂಗಿಗಳ ಹಕ್ಕುಗಳ ರಕ್ಷಣೆ ಮಸೂದೆʼ, ʻಗ್ರಾಹಕ ಸಂರಕ್ಷಣಾ ಮಸೂದೆʼ, ʻನೇರ ತೆರಿಗೆ – ವಿವಾದದಿಂದ ವಿಶ್ವಾಸ ವಿಧೇಯಕʼ ಹೀಗೆ ಶ್ರೀ ಓಂ ಬಿರ್ಲಾ ಅವರ ಅಧ್ಯಕ್ಷತೆಯಲ್ಲಿ ಅಂಗೀಕರಿಸಲಾದ ಎಲ್ಲಾ ಹೆಗ್ಗುರುತಿನ ಕಾಯ್ದೆಗಳನ್ನು ಪ್ರಧಾನಿ ಉಲ್ಲೇಖಿಸಿದರು.

ಪ್ರಜಾಪ್ರಭುತ್ವದ ಸುದೀರ್ಘ ಪ್ರಯಾಣವು, ಹೊಸ ದಾಖಲೆಗಳನ್ನು ಸೃಷ್ಟಿಸುವ ಅವಕಾಶ ಒದಗಿಸುವ ವಿವಿಧ ನಿಲುಗಡೆಗಳಿಗೆ ಸಾಕ್ಷಿಯಾಗಿದೆ ಎಂದು ಪ್ರಧಾನಿ ಹೇಳಿದರು. ಭಾರತವನ್ನು ಆಧುನಿಕ ರಾಷ್ಟ್ರವನ್ನಾಗಿ ಮಾಡುವ ನಿಟ್ಟಿನಲ್ಲಿ 17ನೇ ಲೋಕಸಭೆಯಲ್ಲಿ ಸಾಧಿಸಿದ ಕೆಲಸವನ್ನು ಅವರು ಶ್ಲಾಘಿಸಿದರು. ಭವಿಷ್ಯದಲ್ಲಿ ಭಾರತದ ಜನರು 17ನೇ ಲೋಕಸಭೆಯನ್ನು ಅದರ ಸಾಧನೆಗಳ ಸಲುವಾಗಿ ಗೌರವಿಸುವುದನ್ನು ಮುಂದುವರಿಸುತ್ತಾರೆ ಎಂಬ ವಿಶ್ವಾಸವನ್ನು ಶ್ರೀ ಮೋದಿ ವ್ಯಕ್ತಪಡಿಸಿದರು. ಗೌರವಾನ್ವಿತ ಸ್ಪೀಕರ್ ಮಾರ್ಗದರ್ಶನದಲ್ಲಿ ಹೊಸ ಸಂಸತ್ ಕಟ್ಟಡವು ʻಅಮೃತ್ ಕಾಲʼದ ಭವಿಷ್ಯಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಅವರು ಸದನಕ್ಕೆ ಭರವಸೆ ನೀಡಿದರು. ಪ್ರಸ್ತುತ ಸ್ಪೀಕರ್ ಅವರ ಅಧ್ಯಕ್ಷತೆಯಲ್ಲಿ ಹೊಸ ಸಂಸತ್ ಭವನದ ಉದ್ಘಾಟನೆಯನ್ನು ಶ್ರೀ ಮೋದಿ ಸ್ಮರಿಸಿದರು ಮತ್ತು ಪ್ರಜಾಪ್ರಭುತ್ವದ ಕಾರ್ಯವಿಧಾನಗಳ ಅಡಿಪಾಯವನ್ನು ಬಲಪಡಿಸುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳನ್ನು ಶ್ಲಾಘಿಸಿದರು. ಕಾಗದರಹಿತ ಕಾರ್ಯನಿರ್ವಹಣೆ ಮತ್ತು ಸದನದಲ್ಲಿ ಚರ್ಚೆಗಳನ್ನು ಹೆಚ್ಚಿಸಲು ಸ್ಪೀಕರ್ ಪ್ರಾರಂಭಿಸಿದ ವ್ಯವಸ್ಥಿತ ಚುಟುಕು ವಿವರಣೆ ಪ್ರಕ್ರಿಯೆಯನ್ನು ಅವರು ಶ್ಲಾಘಿಸಿದರು.

ದಾಖಲೆ ಸಂಖ್ಯೆಯ ದೇಶಗಳು ಭಾಗವಹಿಸಿದ್ದ ʻಜಿ-20ʼ ರಾಷ್ಟ್ರಗಳ ಶಾಸಕಾಂಗ ಸಂಸ್ಥೆಗಳ ಮುಖ್ಯಸ್ಥರ ʻಪಿ-20ʼ ಸಮ್ಮೇಳನವು ಅತ್ಯಂತ ಯಶಸ್ವಿಯಾಗಿದ್ದಕ್ಕಾಗಿ ಪ್ರಧಾನಮಂತ್ರಿಯವರು ಸ್ಪೀಕರ್ ಅವರನ್ನು ಶ್ಲಾಘಿಸಿದರು.

ಸಂಸತ್ ಭವನವೆಂದರೆ ಕೇವಲ ಗೋಡೆಗಳಲ್ಲ, ಅದು 140 ಕೋಟಿ ನಾಗರಿಕರ ಆಕಾಂಕ್ಷೆಯ ಕೇಂದ್ರಸ್ಥಾನವಾಗಿದೆ ಎಂದು ಪ್ರಧಾನಿ ಹೇಳಿದರು. ಸದನದ ಕಾರ್ಯನಿರ್ವಹಣೆ, ನಡವಳಿಕೆ ಮತ್ತು ಉತ್ತರದಾಯಿತ್ವವು ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವದ ಅಡಿಪಾಯವನ್ನು ಬಲಿಷ್ಠವಾಗಿಸುತ್ತದೆ ಎಂದು ಅವರು ಒತ್ತಿ ಹೇಳಿದರು. 17ನೇ ಲೋಕಸಭೆಯ ಉತ್ಪಾದಕತೆಯು ದಾಖಲೆಯ ಶೇ.97ರಷ್ಟಿದೆ ಎಂದು ಪ್ರಧಾನಿ ಉಲ್ಲೇಖಿಸಿದರು. ಕರೋನಾ ಸಾಂಕ್ರಾಮಿಕ ಸಮಯದಲ್ಲಿ ಸದನದ ಸದಸ್ಯರ ವಿಚಾರವಾಗಿ ಸ್ಪೀಕರ್ ಅವರ ವೈಯಕ್ತಿಕ ಒಡನಾಟ ಮತ್ತು ಕಾಳಜಿಯನ್ನು ಶ್ರೀ ಮೋದಿ ಉಲ್ಲೇಖಿಸಿದರು. ಕೋವಿಡ್‌ ಸಾಂಕ್ರಾಮಿಕವು ಸದನದ ಕಾರ್ಯಚಟುವಟಿಕೆಗೆ ಅಡ್ಡಿಯಾಗದಂತೆ ತಡೆದಿದ್ದಕ್ಕಾಗಿ ಮತ್ತು ಉತ್ಪಾದಕತೆಯನ್ನು ಶೇಕಡಾ 170ಕ್ಕೆ ತಲುಪಿಸಿದ್ದಕ್ಕಾಗಿ ಪ್ರಧಾನಿಯವರು ಶ್ರೀ ಬಿರ್ಲಾ ಅವರನ್ನು ಶ್ಲಾಘಿಸಿದರು.

ಹಲವಾರು ಕಠಿಣ ನಿರ್ಧಾರಗಳನ್ನು ಕೈಗೊಂಡ ಸಮಯದಲ್ಲೂ ಸದನದ ಸೌಜನ್ಯವನ್ನು ಕಾಯ್ದುಕೊಳ್ಳುವಲ್ಲಿ ಸ್ಪೀಕರ್ ತೋರಿಸಿದ ಸಮತೋಲನವನ್ನು ಪ್ರಧಾನಿ ಮೋದಿ ಶ್ಲಾಘಿಸಿದರು. ಸಂಪ್ರದಾಯಗಳನ್ನು ಉಳಿಸಿಕೊಂಡು ಹೋಗುವುದರ ಜೊತೆಗೆ, ಸದನದ ಮೌಲ್ಯಗಳನ್ನು ಎತ್ತಿಹಿಡಿದಿದ್ದಕ್ಕಾಗಿ ಸ್ಪೀಕರ್ ಅವರಿಗೆ ಪ್ರಧಾನಿ ಕೃತಜ್ಞತೆ ಸಲ್ಲಿಸಿದರು.

ಜನರ ಸೇವೆ ಮಾಡುವ ಮೂಲಕ ಮತ್ತು ಅವರ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಸಾಕಾರಗೊಳಿಸುವ ಮೂಲಕ 18ನೇ ಲೋಕಸಭೆ ಯಶಸ್ವಿಯಾಗುತ್ತದೆ ಎಂಬ ಅಪಾರ ವಿಶ್ವಾಸವನ್ನು ಪ್ರಧಾನಿ ಮೋದಿ ವ್ಯಕ್ತಪಡಿಸಿದರು. ಮಹತ್ವದ ಜವಾಬ್ದಾರಿಯನ್ನು ವಹಿಸಿಕೊಂಡ ಶ್ರೀ ಓಂ ಬಿರ್ಲಾ ಅವರಿಗೆ ಶುಭ ಕೋರಿದ ಪ್ರಧಾನಿ, ರಾಷ್ಟ್ರವು ಯಶಸ್ಸಿನ ಹೊಸ ಎತ್ತರಕ್ಕೆ ತಲುಪಲೆಂದು ಆಶಿಸುವ ಮೂಲಕ ತಮ್ಮ ಮಾತು ಮುಗಿಸಿದರು. 

 

 

*****



(Release ID: 2028778) Visitor Counter : 21