ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಉತ್ತಮ ಚಿತ್ರಕಥೆ ಮತ್ತು ಬಲವಾದ /ನೈಜ-ಸಹಜ ನಟನೆ ಚಲನಚಿತ್ರಗಳನ್ನು ಅಮರವಾಗಿಸುತ್ತದೆ: 18 ನೇ ಎಂಐಎಫ್ಎಫ್ ನಲ್ಲಿ 'ಬೇಟೆಗಾರ' (ಪೋಚರ್)ನಿರ್ದೇಶಕ ರಿಚಿ ಮೆಹ್ತಾ

Posted On: 16 JUN 2024 7:54PM by PIB Bengaluru

ಸಾಕ್ಷ್ಯಚಿತ್ರ, ಕಿರು ಕಾದಂಬರಿ ಮತ್ತು ಅನಿಮೇಷನ್ ಚಲನಚಿತ್ರಗಳಿಗಾಗಿರುವ  18 ನೇ ಮುಂಬೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಇಂದು ಎಮ್ಮಿ ಪ್ರಶಸ್ತಿ ವಿಜೇತ ನಿರ್ದೇಶಕ, ಚಲನಚಿತ್ರ ನಿರ್ಮಾಣಕಾರ ಮತ್ತು ಬರಹಗಾರ ರಿಚಿ ಮೆಹ್ತಾ ಅವರೊಂದಿಗೆ ಒಳನೋಟದ ಸಂವಾದ ಅಧಿವೇಶನವನ್ನು ಆಯೋಜಿಸಲಾಗಿತ್ತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದ ರೇಡಿಯೋ ವ್ಯಕ್ತಿತ್ವವನ್ನು ಹೊಂದಿರುವ ರೋಹಿಣಿ ರಾಮನಾಥನ್ ನಿರ್ವಹಿಸಿದ ಈ ಅಧಿವೇಶನವು ಕ್ರೈಮ್ ಥ್ರಿಲ್ಲರ್ ಚಲನಚಿತ್ರ ನಿರ್ಮಾಣದ ಜಟಿಲತೆಗಳನ್ನು ಆಳವಾಗಿ ಅವಲೋಕಿಸಿತು.

ರಿಚಿ ಮೆಹ್ತಾ ಅವರು ಚಲನಚಿತ್ರ ನಿರ್ಮಾಣದ ಕರಕುಶಲತೆಯ ಬಗ್ಗೆ ತಮ್ಮ ಆಳವಾದ ಒಳನೋಟಗಳನ್ನು ಹಂಚಿಕೊಂಡರು ಮತ್ತು ಉತ್ತಮ ಚಿತ್ರಕಥೆ ಮತ್ತು ನೈಜವಾದ ಉತ್ತಮ ನಟನೆಯ ಕಾಲಾತೀತ ಮಹತ್ವವನ್ನು ಒತ್ತಿ ಹೇಳಿದರು. "ಚಲನಚಿತ್ರಗಳನ್ನು ಅಮರವಾಗಿಸುವ ಒಂದು ವಿಷಯವೆಂದರೆ ಉತ್ತಮ ಚಿತ್ರಕಥೆ ಮತ್ತು ನಟನೆ. ಕಾಸ್ಟಿಂಗ್ ಮತ್ತು ಸಂಶೋಧನೆ ಬಹಳ ಮುಖ್ಯ" ಎಂದು ಅವರು ಹೇಳಿದರು.  ಯಶಸ್ವಿ ಕಥೆ ಹೇಳುವಿಕೆಯ ಮೂಲ  ಅಂಶಗಳ ಮಹತ್ವವನ್ನೂ ಅವರು ಒತ್ತಿಹೇಳಿದರು.

(ಫೋಟೋದಲ್ಲಿ: ರಿಚಿ ಮೆಹ್ತಾ ಅವರು 18 ನೇ ಎಂಐಎಫ್ಎಫ್ ನಲ್ಲಿ ನಡೆದ ಸಂಭಾಷಣೆ ಅಧಿವೇಶನದಲ್ಲಿ ಮಾತನಾಡುತ್ತಿರುವುದು)

ಅಪರಾಧ ಕ್ಷೇತ್ರದಲ್ಲಿ ತಮ್ಮ ಗಮನಾರ್ಹ ಕೃತಿಗಳ ಹೊರತಾಗಿಯೂ ಅಪರಾಧ ಪ್ರಕಾರಕ್ಕೆ ವಿಶೇಷವಾಗಿ ಆಕರ್ಷಿತರಾಗದ ಈ  ಚಲನಚಿತ್ರ ನಿರ್ಮಾಪಕರು ತಮ್ಮ ವಿಶಿಷ್ಟ ಧೋರಣೆಯನ್ನೂ ಬಹಿರಂಗಪಡಿಸಿದರು. "ಸ್ಥಳೀಯ ಚಲನಚಿತ್ರ ನಿರ್ಮಾಪಕರು ಉತ್ತಮವಾಗಿ ಹೇಳಬಹುದಾದ ಸ್ಥಳೀಯ ಕಥೆಗಳನ್ನು ಹೇಳಲು ನನಗೆ ಆಸಕ್ತಿ ಇಲ್ಲ. ನನಗೆ ಆಸಕ್ತಿ ಇರುವುದು ಬಹಳ ದೊಡ್ಡ ಕಥೆಗಳು, ಒಂದು ಪ್ರಭೇದವಾಗಿ ನಾವು ಏನು ಸಾಮರ್ಥ್ಯ ಹೊಂದಿದ್ದೇವೆ ಎಂಬುದರ ಬಗ್ಗೆ ಹೃದಯವನ್ನು ತಲುಪುವ ಕಥೆಗಳು ನನ್ನ ಆಸಕ್ತಿ " ಎಂದು ಅವರು ಹೇಳಿದರು.

ವಿಭಿನ್ನ ಪ್ರೇಕ್ಷಕರನ್ನು ತೊಡಗಿಸಿಕೊಳ್ಳಲು ಮತ್ತು ವಿಶಾಲವಾದ, ಹಾಗು ಹೆಚ್ಚು ಸಂಕೀರ್ಣವಾದ ವಿಷಯಗಳನ್ನು ಹೇಳಲು ತಾವು ಅಪರಾಧ ಪ್ರಕಾರವನ್ನು ಒಂದು ಸಾಧನವಾಗಿ  ಬಳಸುವುದಾಗಿಯೂ ಅವರು ಹೇಳಿದರು. "ಮನರಂಜನೆಯು ಒಂದು ಉದ್ದೇಶ ಈಡೇರಿಕೆಗೆ ಸಂಬಂಧಿಸಿದ ಕೊನೆಯ ಸಾಧನವಾಗಿದೆ. ಆದರೆ ಇದುವೇ  ಅಂತ್ಯವಲ್ಲ " ಎಂದು ರಿಚಿ ಮೆಹ್ತಾ ನುಡಿದರು.

ತಮ್ಮ ಬಹು ಮೆಚ್ಚುಗೆ ಪಡೆದ ಕ್ರೈಮ್ ಥ್ರಿಲ್ಲರ್ ನ ಹುಟ್ಟನ್ನು ವಿವರಿಸಿದ ರಿಚಿ ಮೆಹ್ತಾ, ತಮ್ಮ ಸಾಕ್ಷ್ಯಚಿತ್ರ 'ಇಂಡಿಯಾ ಇನ್ ಎ ಡೇ' ಪ್ರಕ್ರಿಯೆಯಲ್ಲಿ ಒದಗಿ ಬಂದ ದಂತದ ಪ್ರತಿಮೆಯ ತುಣುಕು ಆನೆ ಬೇಟೆಯ ವಿಷಯದ ಬಗ್ಗೆ ತನ್ನಲ್ಲಿ ಆಸಕ್ತಿಯನ್ನು ಹುಟ್ಟುಹಾಕಿತು, ಇದು ' ಬೇಟೆಗಾರ' (ಪೋಚರ್) ಸೃಷ್ಟಿಗೆ ಕಾರಣವಾಯಿತು ಎಂದು ಹೇಳಿದರು.

(ಫೋಟೋದಲ್ಲಿ: ಅಪಾರ ಮೆಚ್ಚುಗೆ ಪಡೆದ ರೇಡಿಯೋ ವ್ಯಕ್ತಿತ್ವವನ್ನು ರೂಪಿಸಿಕೊಂಡಿರುವ ರೋಹಿಣಿ ರಾಮನಾಥನ್ ಅವರು ರಿಚಿ ಮೆಹ್ತಾ ಅವರೊಂದಿಗೆ ಸಂವಾದ ಅಧಿವೇಶನವನ್ನು ನಿರ್ವಹಿಸುತ್ತಿದ್ದಾರೆ)

ಅನಿವಾಸಿ ಭಾರತೀಯ (ಎನ್.ಆರ್.ಐ.)  ಚಲನಚಿತ್ರ ನಿರ್ಮಾಪಕರಾಗಿ, ರಿಚಿ ಮೆಹ್ತಾ ಅವರು ತಮ್ಮ ತಾಯ್ನಾಡಿಗೆ ಮರಳಿ ಕೊಡುಗೆ ನೀಡುವ ಬಗ್ಗೆ  ಆಳವಾದ ಜವಾಬ್ದಾರಿಯ ಭಾವನೆಯನ್ನು ವ್ಯಕ್ತಪಡಿಸುತ್ತಾರೆ. ಚಲನಚಿತ್ರ ನಿರ್ಮಾಣದಲ್ಲಿ ಸಂಶೋಧನೆಯ ನಿರ್ಣಾಯಕ ಪಾತ್ರವನ್ನು ಅವರು ಒತ್ತಿ ಹೇಳುತ್ತಾ, "ನಾವು ಜನರೊಂದಿಗೆ ಮಾತನಾಡುತ್ತೇವೆ ಮತ್ತು ಅವರನ್ನು ತಿಳಿದುಕೊಳ್ಳುತ್ತೇವೆ, ಮತ್ತು ಅಲ್ಲಿಯೇ ನಾವು ಎಲ್ಲವನ್ನೂ ಕಲಿಯುತ್ತೇವೆ. ಜನರಿಗೆ ಸಾಮಾನ್ಯವಾಗಿ  ನೋಡಲು ಸಾಧ್ಯವಾಗದ  ವಿಷಯಗಳನ್ನು ತೋರಿಸುವ ಬಗ್ಗೆ ನಾನು ಗಮನ ಹರಿಸುತ್ತೇನೆ. ಪ್ರಾಣಿಗಳನ್ನು ನಮ್ಮಂತೆ  ವ್ಯಕ್ತಿಗತಗೊಳಿಸಿದರೆ, ಆಗ ಮಾನವರ ಕುರಿತಂತೆ  ಅವುಗಳ ಪ್ರತಿಕ್ರಿಯೆ ಭಯ ಅಥವಾ ಅನಾದರ ಎಂದು ನಾನು ನಿಮಗೆ ಖಚಿತವಾಗಿ ಹೇಳಬಲ್ಲೆ" ಎಂದು ಅವರು ವಿವರಿಸಿದರು.

ಬಹು ಭಾಷೆಗಳಲ್ಲಿ ಸರಣಿಯನ್ನು ನಿರ್ದೇಶಿಸುವ ತಾಂತ್ರಿಕ ಮತ್ತು ಭಾಷಾ ಸವಾಲುಗಳ ಬಗ್ಗೆಯೂ ಅಧಿವೇಶನವು ಚರ್ಚಿಸಿತು. "ಇದು ಅದ್ಭುತ ಕಲಿಕೆಯ ಅನುಭವವಾಗಿತ್ತು. ನಾನು ಇಂಗ್ಲಿಷಿನಲ್ಲಿ ಏನು ಬರೆದಿದ್ದೇನೋ ಅದನ್ನು  ನಿಖರವಾಗಿ ದೃಶ್ಯೀಕರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕಾಗಿತ್ತು" ಎಂದು ರಿಚಿ ಮೆಹ್ತಾ ಹೇಳಿದರು.

ಮುಂದಿನ ದಿನಗಳಲ್ಲಿ ಹುಲಿಗಳು ಮತ್ತು ದೊಡ್ಡ ಬೆಕ್ಕುಗಳ ಬಗ್ಗೆ  ಸಂಶೋಧನೆ ನಡೆಸುವ  ದೀರ್ಘಕಾಲೀನ ಯೋಜನೆಯನ್ನು ಈ ಚಲನಚಿತ್ರ ನಿರ್ಮಾಪಕರು ಕೈಗೆತ್ತಿಕೊಳ್ಳಲಿದ್ದಾರೆ. ತಮ್ಮ ಬರವಣಿಗೆಯ ಪ್ರಕ್ರಿಯೆಯ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ರಿಚಿ ಮೆಹ್ತಾ, ಬರಹಗಾರರ ಕೊಠಡಿ ವಿಧಾನಕ್ಕಿಂತ ವೈಯಕ್ತಿಕ ಸಂಶೋಧನೆಗೆ ಆದ್ಯತೆ ನೀಡುವುದು ತಮ್ಮ ಕ್ರಮ ಎಂದರು. ಇದು ಗಮನವನ್ನು ಬೇರೆಡೆಗೆ ಸೆಳೆಯುತ್ತದೆ. "ಬರವಣಿಗೆಯಲ್ಲಿ ಸಂಶೋಧನೆಯನ್ನು ನಾನು ತುಂಬಾ ಪ್ರೀತಿಸುತ್ತೇನೆ" ಎಂದು ಅವರು ತಮ್ಮ ಮಾತುಗಳನ್ನು  ಕೊನೆಗೊಳಿಸಿದರು.

*****



(Release ID: 2025863) Visitor Counter : 16