ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು (MIFF) ವನ್ಯಜೀವಿ ಕುರಿತಾದ ಸಾಕ್ಷ್ಯಚಿತ್ರಗಳ ವಿಶೇಷ ಪ್ಯಾಕೇಜ್ ಅನ್ನು ಸಂಭ್ರಮಿಸಿತು
ಈ ಪ್ಯಾಕೇಜ್ ವನ್ಯ ಜೀವಿಗಳ ಸೌಂದರ್ಯ, ಅವುಗಳ ಸವಾಲುಗಳು ಮತ್ತು ತುರ್ತು ಸಂರಕ್ಷಣೆ ಅಗತ್ಯಗಳನ್ನು ಎತ್ತಿ ತೋರಿಸುತ್ತದೆ
Posted On:
16 JUN 2024 1:59PM by PIB Bengaluru
ಗಮನಾರ್ಹವಾದ ಜೀವವೈವಿಧ್ಯತೆ ಹೊಂದಿರುವ ಭಾರತವು, ವಿವಿಧ ಬಗೆಯ ವನ್ಯಜೀವಿಗಳು ಮತ್ತು ಪರಿಸರ ವೈವಿಧ್ಯತೆಯ ನೆಲೆಯಾಗಿದೆ. ಹಿಮದಿಂದ ಆವೃತವಾದ ಶಿಖರಗಳಿಂದ ಕೂಡಿದ ಹಿಮಾಲಯದಿಂದ ಹಿಡಿದು ಪಶ್ಚಿಮ ಘಟ್ಟಗಳ ದಟ್ಟವಾದ ಕಾಡುಗಳವರೆಗಿನ ಭಾರತದ ವೈವಿಧ್ಯಮಯ ಭೂಪ್ರದೇಶವು ಹುಲಿ, ಆನೆ, ಘೇಂಡಾಮೃಗ, ಚಿರತೆಗಳು ಮತ್ತು ವಿವಿಧ ಪಕ್ಷಿ ಪ್ರಭೇದಗಳನ್ನು ಒಳಗೊಂಡಂತೆ ಬಹುಸಂಖ್ಯೆಯ ಜೀವಿಗಳಿಗೆ ಆವಾಸ ಸ್ಥಾನವಾಗಿದೆ.
ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (MIFF) 18 ನೇ ಆವೃತ್ತಿಯು non-competition ವಿಭಾಗದಲ್ಲಿ ವನ್ಯಜೀವಿ ಸಾಕ್ಷ್ಯಚಿತ್ರಗಳ ಮೇಲೆ ವಿಶೇಷವಾಗಿ ರಚಿಸಲಾದ ಪ್ಯಾಕೇಜ್ ಅನ್ನು ಪ್ರಸ್ತುತಪಡಿಸುವ ಮೂಲಕ ಭಾರತವು ವನ್ಯಜೀವಿಗಳೊಂದಿಗಿನ ತನ್ನ ಆಳವಾದ ಬಾಂಧವ್ಯವನ್ನು ಸಂಭ್ರಮಿಸಿತು. ಸಾಕ್ಷ್ಯಚಿತ್ರಗಳ ಈ ವಿಶೇಷ ಸಂಗ್ರಹವು ವಿವಿಧ ವನ್ಯಜೀವಿಗಳ ಸೌಂದರ್ಯ, ಸವಾಲುಗಳು ಮತ್ತು ಅವುಗಳ ತುರ್ತು ಸಂರಕ್ಷಣೆಯ ಅಗತ್ಯಗಳನ್ನು ಎತ್ತಿ ತೋರಿಸಿತು.
ಈ ಸಾಕ್ಷ್ಯಚಿತ್ರಗಳು ಮತ್ತು ಅವುಗಳ ನಿರ್ದೇಶಕರು ತಮ್ಮ ಆಕರ್ಷಕ ಮತ್ತು ಶೈಕ್ಷಣಿಕ ನಿರೂಪಣೆಗಳ ಜೊತೆ ಜೊತೆಗೆ ಪರಿಸರ ಸಂರಕ್ಷಣೆಗಾಗಿ ಅಗತ್ಯ ಕ್ರಮ ತೆಗೆದುಕೊಳ್ಳಲು ಪ್ರೇಕ್ಷಕರನ್ನು ಪ್ರೇರೇಪಿಸುತ್ತಾರೆ. ವನ್ಯಜೀವಿ ಪ್ಯಾಕೇಜ್ ವಿಭಾಗದಡಿ ಪ್ರದರ್ಶಿಸಲಾದ ಸಾಕ್ಷ್ಯಚಿತ್ರಗಳನ್ನು ಬಗ್ಗೆ ಅರಿಯೋಣ ಬನ್ನಿ:
ಹಿಮಾಲಯದ ರೆಕ್ಕೆಗಳು
ಹವಾಮಾನ ಕುರಿತಾದ ಪ್ರಜ್ಞೆ ಜಾಗೃತವಾಗುತ್ತಿರುವ ಇಂದಿನ ಯುಗದಲ್ಲಿ, "ವಿಂಗ್ಸ್ ಆಫ್ ಹಿಮಾಲಯಸ್", ಗಡ್ಡದ ರಣಹದ್ದುಗಳ (ಬಿಯರ್ಡೆಡ್ ವಲ್ಚರ್ಸ್) ಆಕರ್ಷಕ ಜಗತ್ತನ್ನು ಪರಿಶೋಧಿಸುವ ಒಂದು ಅದ್ಭುತ ಸಾಕ್ಷ್ಯಚಿತ್ರವಾಗಿದೆ. ಈ ಚಿತ್ರವು ನೇಪಾಳಿ ಜೀವಶಾಸ್ತ್ರಜ್ಞರಾದ ಡಾ ತುಳಸಿ ಸುಬೇದಿ ಮತ್ತು ಅವರ ಮಾರ್ಗದರ್ಶಕ ಸಂದೇಶ್ ಅವರು ಗಡ್ಡದ ರಣಹದ್ದುಗಳನ್ನು ರಕ್ಷಿಸಲು ಬದಲಾಗುತ್ತಿರುವ ಹವಾಮಾನದ ಸವಾಲುಗಳ ಮಧ್ಯೆಯೂ ಹೋರಾಡುತ್ತಿರುವುದನ್ನು ದಾಖಲಿಸಿದೆ. ಇಂಗ್ಲಿಷ್ ಭಾಷೆಯಲ್ಲಿರುವ 31 ನಿಮಿಷಗಳ ಈ ಸಾಕ್ಷ್ಯಚಿತ್ರವು ಪರಿಸರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯದೊಂದಿಗೆ ಬದುಕಲು ಪ್ರೇಕ್ಷಕರನ್ನು ಪ್ರೇರೇಪಿಸುವ ಆಶಯ ಹೊಂದಿದೆ.
ಪ್ರದರ್ಶನದ ದಿನಾಂಕ, ಸಮಯ ಮತ್ತು ಸ್ಥಳ: ಜೂನ್ 20, 2024, ಜೆಬಿ ಹಾಲ್‌ನಲ್ಲಿ ರಾತ್ರಿ 8.30 ಗಂಟೆಗೆ...
ನಿರ್ದೇಶಕರ ಬಗ್ಗೆ:
ವನ್ಯಜೀವಿ ಚಲನಚಿತ್ರ ನಿರ್ಮಾಪಕ ಕಿರಣ್ ಘಾಡ್ಗೆ ಅವರು ಭಾರತ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಗೆ ನಡೆಯುತ್ತಿರುವ ಪ್ರಯತ್ನಗಳ ಮೇಲೆ ಬೆಳಕು ಚೆಲ್ಲುವ ಹಲವಾರು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ದಾರೆ. ತಮ್ಮ ಉಪನ್ಯಾಸ ಮತ್ತು ಬರಹಗಳ ಮೂಲಕ ಪ್ರಕೃತಿ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಕಿರಣ್ ಅವರು ಸುಸ್ಥಿರ ಪ್ರವಾಸೋದ್ಯಮ ಮತ್ತು ಸಂರಕ್ಷಣೆಯನ್ನು ಉತ್ತೇಜಿಸುತ್ತಿದ್ದಾರೆ.
ಮುನೀರ್ ವಿರಾನಿ ಒಬ್ಬ ಸಂರಕ್ಷಣಾ ಜೀವಶಾಸ್ತ್ರಜ್ಞ, ಛಾಯಾಗ್ರಾಹಕ, ಚಲನಚಿತ್ರ ನಿರ್ಮಾಪಕ ಮತ್ತು ಬರಹಗಾರರಾಗಿದ್ದು, ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ಯೋಜನೆಗಳ ವಿನ್ಯಾಸ, ಅವುಗಳ ಕಾರ್ಯಗತಗೊಳಿಸುವಿಕೆ, ನಿರ್ವಹಣೆ ಮತ್ತು ಪ್ರಸರಣದಲ್ಲಿ ಇಪ್ಪತ್ತು ವರ್ಷಗಳ ಅನುಭವವನ್ನು ಹೊಂದಿದ್ದಾರೆ.
ಹೋಂ ಕಮಿಂಗ್: ದಿ ಅಡ್ವೆಂಚರ್ಸ್ ಆಫ್ ಎ ಗ್ರೀನ್ ಸೀ ಟರ್ಟಲ್ (ಹಸಿರು ಸಮುದ್ರ ಆಮೆಯ ಸಾಹಸಗಳು)
"ಹೋಂ ಕಮಿಂಗ್" ಸಾಕ್ಷ್ಯಚಿತ್ರವು ಕುತೂಹಲ ಕೆರಳಿಸುವ ಹಸಿರು ಆಮೆಯ ಜೀವನ ಪ್ರಯಾಣವನ್ನು ಪ್ರಸ್ತುತಪಡಿಸುತ್ತದೆ. 30 ವರ್ಷಗಳ ಅವಧಿಯಲ್ಲಿ, ಈ ಆಮೆಗಳು ದೂರದ ಕಡಲತೀರದಲ್ಲಿ ಮೊಟ್ಟೆಯೊಡೆಯುವುದರಿಂದ ಸಾಗರದತ್ತ ಪ್ರಯಾಣಿಸುತ್ತವೆ. ಅಪಾಯಕಾರಿ ಕ್ರಾಲ್ ಅನ್ನು ನ್ಯಾವಿಗೇಟ್ ಮಾಡಿ, ತಮ್ಮ ಮೊದಲ ಈಜುವಿಕೆಯನ್ನು ಅನುಭವಿಸುತ್ತವೆ. ಅಂತಿಮವಾಗಿ ಸಾಗರದ ವಿಶಾಲವಾದ ವಿಸ್ತಾರದಲ್ಲಿ ನೆಲೆಸುತ್ತವೆ. ಆದಾಗ್ಯೂ, ಕಳೆದ ಹಲವು ವರ್ಷಗಳಿಂದೀಚೆಗೆ ಸಾಗರದ ನೀರಿನ ಅನಿಯಂತ್ರಿತ ಮಾಲಿನ್ಯದ ಕಾರಣದಿಂದಾಗಿ, ಈ ಆಮೆಗಳು ತಾವು ಜನಿಸಿದ ಕಡಲತೀರದ ಮನೆಗೆ ಹಿಂದಿರುಗುವ ಮಾರ್ಗವನ್ನು ಕಂಡುಕೊಳ್ಳುವಲ್ಲಿ ಸವಾಲುಗಳನ್ನು ಎದುರಿಸುತ್ತಿವೆ. ಇದರಿಂದಾಗಿ ಇವುಗಳ ಸಂತತಿಯ ಅಸ್ತಿತ್ವಕ್ಕೆಯೇ ಬೆದರಿಕೆ ಬಂದಿದೆ.
ಪ್ರದರ್ಶನದ ದಿನಾಂಕ, ಸಮಯ ಮತ್ತು ಸ್ಥಳ: ಜೂನ್ 18, 2024, ಜೆಬಿ ಹಾಲ್‌ನಲ್ಲಿ ಸಂಜೆ 6.45 ಗಂಟೆಗೆ.
ನಿರ್ದೇಶಕರ ಬಗ್ಗೆ:
ಜೆ ಎಸ್ ಅಮೋಘವರ್ಷ ಒಬ್ಬ ಭಾರತೀಯ ಚಲನಚಿತ್ರ ನಿರ್ಮಾತೃ ಮತ್ತು ವನ್ಯಜೀವಿ ಛಾಯಾಗ್ರಾಹಕ. 2021 ರಲ್ಲಿ ಅವರ "ವೈಲ್ಡ್ ಕರ್ನಾಟಕ" ಚಲನಚಿತ್ರಕ್ಕೆ ಅತ್ಯುತ್ತಮ ಪರಿಶೋಧನೆ / ವಾಯ್ಸ್ ಓವರ್ ವಿಭಾಗದಲ್ಲಿ 67 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಬಂದಿದೆ. ಈ ಚಿತ್ರಕ್ಕೆ ಸರ್ ಡೇವಿಡ್ ಅಟೆನ್‌ಬರೋ ಅವರ ನಿರೂಪಣೆ ಇದೆ.
ಬ್ಲಡ್ ಲೈನ್ (ರಕ್ತದ ರೇಖೆ)
"ಬ್ಲಡ್ ಲೈನ್" ತಡೋಬಾ ಅಂಧಾರಿ ಹುಲಿ ಸಂರಕ್ಷಿತ ಪ್ರದೇಶದ ಟೈಗರ್ (T10) ಎಂದೂ ಕರೆಯಲ್ಪಡುತ್ತಿದ್ದ ಮಾಧುರಿ ಎಂಬ ಹೆಣ್ಣು ಹುಲಿಯ ಕಥೆಯನ್ನು ಹೇಳುತ್ತದೆ. ಈ ಕಥೆಯು ನಮ್ಮನ್ನು ಭಾರತದ ಟೈಗರ್ ಕ್ಯಾಪಿಟಲ್‌ನ ಹೃದಯಭಾಗವಾದ ಮಧ್ಯ ಭಾರತದ ಕಾಡುಗಳಿಗೆ ಕರೆದೊಯ್ಯುತ್ತದೆ. ಹಲವು ವರದಿಗಳ ಪ್ರಕಾರ ಇತ್ತೀಚಿನ ವರ್ಷಗಳಲ್ಲಿ ಮಧ್ಯ ಭಾರತದಲ್ಲಿ ಹುಲಿಗಳ ಜನಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಆದರೆ ಅವುಗಳ ಮುಕ್ತ ಸಂಚಾರಕ್ಕೆ ಅಗತ್ಯವಾದ ಭೂಪ್ರದೇಶ ಕಿರಿದಾಗುತ್ತಿದೆ. ಆವಾಸಸ್ಥಾನದ ನಷ್ಟ, ವೇಗವಾಗಿ ಛಿದ್ರಗೊಳ್ಳುತ್ತಿರುವ ಕಾರಿಡಾರ್‌ಗಳು, ಬೇಟೆಯ ಕೊಳಗಳು ಮತ್ತು ಹೆಚ್ಚುತ್ತಿರುವ ಹುಲಿಗಳ ಜನಸಂಖ್ಯೆ ಅಲ್ಲಿ ಒಂದು ವ್ಯತಿರಿಕ್ತ ಸನ್ನಿವೇಶವನ್ನು ನಿರ್ಮಿಸಿವೆ. ಹುಲಿಗಳ ವಿಸ್ತರಿಸುತ್ತಿರುವ ವಂಶಾವಳಿಗೆ ವ್ಯತಿರಿಕ್ತವಾಗಿರುವ ಈ ಕಠಿಣ ವಾಸ್ತವತೆಯನ್ನು ಈ ಸಾಕ್ಷ್ಯಚಿತ್ರ ಪ್ರಸ್ತುತಪಡಿಸುತ್ತದೆ. ಈ ಚಿತ್ರವು ಮಾಧುರಿ ಎಂಬ ಹುಲಿಯು ತನ್ನ ಉಳಿವಿಗಾಗಿ ಮತ್ತು ಅವಳ ಮರಿಗಳ ಸಂರಕ್ಷಣೆಗಾಗಿ ನಡೆಸಿದ ಅಂತಿಮ ಹೋರಾಟವನ್ನು ದಾಖಲಿಸುವುದರ ಜೊತೆಗೆ ಅವಳ ಜೀವನ ಮತ್ತು ಅವಳ ಸಂತತಿಯ ಅಸಾಧಾರಣ ಪ್ರಯಾಣವನ್ನು ಪ್ರಸ್ತುತಪಡಿಸುತ್ತದೆ.
ಪ್ರದರ್ಶನದ ದಿನಾಂಕ, ಸಮಯ ಮತ್ತು ಸ್ಥಳ: ಜೂನ್ 17, 2024, JB ಹಾಲ್, NFDC ನಲ್ಲಿ ರಾತ್ರಿ 8.30 ಗಂಟೆಗೆ..
ನಿರ್ದೇಶಕರ ಬಗ್ಗೆ:
ಭಾರತದ ಹುಲಿಗಳ ರಾಜಧಾನಿಯಲ್ಲಿ ಹುಟ್ಟಿ ಬೆಳೆದ ವನ್ಯಜೀವಿ ಛಾಯಾಗ್ರಾಹಕ ಶ್ರೀಹರ್ಷ್ ಗಜ್ಭಿಯೆ ಅವರು ನೈಸರ್ಗಿಕ ಪ್ರಪಂಚದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದಾರೆ. ಈ ಆಸಕ್ತಿಗೆ ಕಾರಣವಾಗಿದ್ದು ಅವರು ಮೊದಲ ಬಾರಿಗೆ ಕಾಡಿನಲ್ಲಿ ಹುಲಿಯನ್ನು ಛಾಯಾಚಿತ್ರವೊಂದನ್ನು ತೆಗೆದಾಗ. ಕಳೆದ ಹಲವು ವರ್ಷಗಳಲ್ಲಿ, ತನ್ನ ಕಥೆ ಹೇಳುವಿಕೆ ಶೈಲಿ ಮತ್ತು ಛಾಯಾಗ್ರಹಣ ಕೌಶಲ್ಯಗಳನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿರುವ ಶ್ರೀಹರ್ಷ್ ಅವರು ಮಾಧುರಿಯ ಜೀವನವನ್ನು ಅರ್ಧ ದಶಕದ ಕಾಲ ಸೂಕ್ಷ್ಮವಾಗಿ ಗಮನಿಸಿ ಈ ಸಾಕ್ಷ್ಯಚಿತ್ರವನ್ನು ರಚಿಸಿದ್ದಾರೆ.
*****
(Release ID: 2025841)
Visitor Counter : 73