ಕೃಷಿ ಸಚಿವಾಲಯ
ಪ್ರಧಾನಮಂತ್ರಿ ಕಿಸಾನ್ ಅಡಿಯಲ್ಲಿ ರೈತರಿಗೆ ವರ್ಗಾಯಿಸಲಾದ ಮೊತ್ತವು 3 ಲಕ್ಷ ಕೋಟಿ ರೂ. ದಾಟಿದೆ
ವಿಕಸಿತ ಭಾರತ ಸಂಕಲ್ಪ ಯಾತ್ತೆ ಅಭಿಯಾನದ ಸಮಯದಲ್ಲಿ 90 ಲಕ್ಷ ಹೊಸ ಫಲಾನುಭವಿಗಳನ್ನು ಸೇರಿಸಲಾಗಿದೆ
Posted On:
29 FEB 2024 4:46PM by PIB Bengaluru
ವಿಶ್ವದ ಅತಿದೊಡ್ಡ ನೇರ ಲಾಭ ವರ್ಗಾವಣೆ ಕಾರ್ಯಕ್ರಮಗಳಲ್ಲಿ ಒಂದಾದ ಪ್ರಧಾನಮಂತ್ರಿ ಕಿಸಾನ್ ಹೊಸ ಮೈಲಿಗಲ್ಲನ್ನು ದಾಟಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ಯವತ್ಮಾಲ್ ನಲ್ಲಿ 16 ನೇ ಕಂತನ್ನು ಬಿಡುಗಡೆ ಮಾಡುವುದರೊಂದಿಗೆ ಈ ಯೋಜನೆಯು 11 ಕೋಟಿಗೂ ಹೆಚ್ಚು ಅರ್ಹ ರೈತ ಕುಟುಂಬಗಳಿಗೆ ಪ್ರಯೋಜನವನ್ನು ನೀಡಿದೆ ಮತ್ತು ಇಲ್ಲಿಯವರೆಗೆ 3 ಲಕ್ಷ ಕೋಟಿ ರೂ.ಗಳನ್ನು ವಿತರಿಸಲಾಗಿದೆ. ಇದರಲ್ಲಿ 1.75 ಲಕ್ಷ ಕೋಟಿ ರೂ.ಗಳನ್ನು ನೇರ ನಗದು ಬೆ<ಬಲ ಹೆಚ್ಚು ಅಗತ್ಯವಿದ್ದ ಕೋವಿಡ್ ಅವಧಿಯಲ್ಲಿ ಅರ್ಹ ರೈತರಿಗೆ ವರ್ಗಾಯಿಸಲಾಗಿದೆ.
ದೇಶದ ರೈತ ಕುಟುಂಬಗಳಿಗೆ ಧನಾತ್ಮಕ ಪೂರಕ ಆದಾಯದ ಬೆಂಬಲದ ಅಗತ್ಯವನ್ನು ಪರಿಗಣಿಸಿ ಮತ್ತು ಉತ್ಪಾದಕತೆ, ಸ್ಪರ್ಧಾತ್ಮಕತೆ, ವೈವಿಧ್ಯಮಯ, ಅಂತರ್ಗತ ಮತ್ತು ಸುಸ್ಥಿರ ಕೃಷಿ ಕ್ಷೇತ್ರವನ್ನು ಉತ್ತೇಜಿಸಲು, ಭಾರತ ಸರ್ಕಾರವು ರೈತರ ಕಲ್ಯಾಣಕ್ಕಾಗಿ ಮಹತ್ವಾಕಾಂಕ್ಷೆಯ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯನ್ನು 2ನೇ ಫೆಬ್ರವರಿ 2019 ರಂದು ಪ್ರಾರಂಭಿಸಿತು. ಈ ಯೋಜನೆಯಡಿಯಲ್ಲಿ, ಅರ್ಹ ರೈತ ಕುಟುಂಬಗಳಿಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ತಲಾ ರೂ 2000/- ದಂತೆ ಮೂರು ಸಮಾನ ಕಂತುಗಳಲ್ಲಿ ವರ್ಷಕ್ಕೆ ರೂ 6000/- ನಗದನ್ನು ನೀಡಲಾಗುತ್ತದೆ. ಆಧುನಿಕ ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಂಡು ನೇರ ಲಾಭ ವರ್ಗಾವಣೆ ಮೂಲಕ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಪ್ರಯೋಜನವನ್ನು ನೇರವಾಗಿ ವರ್ಗಾಯಿಸಲಾಗುತ್ತದೆ.
90 ಲಕ್ಷ ಹೊಸ ಫಲಾನುಭವಿಗಳು ಸೇರ್ಪಡೆ
ಇತ್ತೀಚೆಗೆ, ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಭಾಗವಾಗಿ, 2.60 ಲಕ್ಷಕ್ಕೂ ಹೆಚ್ಚು ಗ್ರಾಮ ಪಂಚಾಯತಿಗಳಲ್ಲಿ ಸರ್ಕಾರದ ಕಲ್ಯಾಣ ಯೋಜನೆಗಳ ಪರಿಪೂರ್ಣತೆಯನ್ನು ಖಚಿತಪಡಿಸಿಕೊಳ್ಳಲು, 90 ಲಕ್ಷ ಅರ್ಹ ರೈತರನ್ನು ಪಿಎಂ ಕಿಸಾನ್ ಯೋಜನೆಗೆ ಸೇರಿಸಲಾಗಿದೆ.
ಕಳೆದ ಐದು ವರ್ಷಗಳಲ್ಲಿ, ಯೋಜನೆಯು ಅನೇಕ ಮೈಲಿಗಲ್ಲುಗಳನ್ನು ದಾಟಿದೆ ಮತ್ತು ಅದರ ಸಂಪೂರ್ಣ ದೃಷ್ಟಿಕೋನ, ಪ್ರಮಾಣ ಮತ್ತು ಅರ್ಹ ರೈತರ ಖಾತೆಗಳಿಗೆ ನೇರವಾಗಿ ಹಣದ ತಡೆರಹಿತ ವರ್ಗಾವಣೆಗಾಗಿ ವಿಶ್ವಬ್ಯಾಂಕ್ ಸೇರಿದಂತೆ ವಿವಿಧ ಸಂಸ್ಥೆಗಳಿಂದ ಪುರಸ್ಕಾರಗಳನ್ನು ಪಡೆದಿದೆ.
ಅಂತಾರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆ (ಐ ಎಫ್ ಪಿ ಆರ್ ಐ) ಉತ್ತರ ಪ್ರದೇಶದ ರೈತರ ಮೇಲೆ ನಡೆಸಿದ ಅಧ್ಯಯನವು ಪಿಎಂ-ಕಿಸಾನ್ ಅಡಿಯಲ್ಲಿನ ಪ್ರಯೋಜನಗಳು ಹೆಚ್ಚಿನ ರೈತರಿಗೆ ತಲುಪಿದೆ ಮತ್ತು ಅವರು ಯಾವುದೇ ಸೋರಿಕೆಯಿಲ್ಲದೆ ಪೂರ್ಣ ಮೊತ್ತವನ್ನು ಪಡೆದಿದ್ದಾರೆ ಎಂಬುದನ್ನು ಸೂಚಿಸುತ್ತದೆ. ಅದೇ ಅಧ್ಯಯನದ ಪ್ರಕಾರ, ಪಿಎಂ-ಕಿಸಾನ್ ಅಡಿಯಲ್ಲಿ ನಗದು ವರ್ಗಾವಣೆಯನ್ನು ಪಡೆಯುವ ರೈತರು ಕೃಷಿ ಉಪಕರಣಗಳು, ಬೀಜಗಳು, ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಖರೀದಿಸಲು ಹೂಡಿಕೆ ಮಾಡುವ ಸಾಧ್ಯತೆ ಹೆಚ್ಚಾಗಿದೆ.
ಪಾರದರ್ಶಕತೆಗಾಗಿ ತಂತ್ರಜ್ಞಾನ
ಯೋಜನೆಯನ್ನು ಹೆಚ್ಚು ದಕ್ಷ, ಪರಿಣಾಮಕಾರಿ ಮತ್ತು ಪಾರದರ್ಶಕವಾಗಿಸುವ ಉದ್ದೇಶದಿಂದ, ರೈತ ಕೇಂದ್ರಿತ ಡಿಜಿಟಲ್ ಮೂಲಸೌಕರ್ಯದಲ್ಲಿ ನಿರಂತರ ಸುಧಾರಣೆಗಳನ್ನು ಮಾಡಲಾಗಿದ್ದು, ಯೋಜನೆಯ ಪ್ರಯೋಜನಗಳು ಯಾವುದೇ ಮಧ್ಯವರ್ತಿ ಇಲ್ಲದೆ ದೇಶದಾದ್ಯಂತ ಎಲ್ಲಾ ರೈತರಿಗೆ ತಲುಪುವಂತೆ ಮಾಡಲಾಗಿದೆ. ಪಿಎಂ-ಕಿಸಾನ್ ಪೋರ್ಟಲ್ ಅನ್ನು UIDAI, PFMS, NPCI ಮತ್ತು ಆದಾಯ ತೆರಿಗೆ ಇಲಾಖೆಯ ಪೋರ್ಟಲ್‌ಗಳೊಂದಿಗೆ ಸಂಯೋಜಿಸಲಾಗಿದೆ. ರೈತರಿಗೆ ತ್ವರಿತ ಸೇವೆಗಳನ್ನು ಒದಗಿಸಲು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಮತ್ತು ಎಲ್ಲಾ ಇತರ ಭಾಗೀದಾರರು ಪಿಎಂ-ಕಿಸಾನ್ ವೇದಿಕೆಯಲ್ಲಿ ಸೇರಿದ್ದಾರೆ.
ರೈತರು ತಮ್ಮ ಕುಂದುಕೊರತೆಗಳನ್ನು ಪಿಎಂ-ಕಿಸಾನ್ ಪೋರ್ಟಲ್ ನಲ್ಲಿ ನೋಂದಾಯಿಸಿಕೊಳ್ಳಬಹುದು ಮತ್ತು ಪರಿಣಾಮಕಾರಿ ಮತ್ತು ಸಮಯೋಚಿತ ಪರಿಹಾರಕ್ಕಾಗಿ 24x7 ಕರೆ ಸೌಲಭ್ಯದ ಸಹಾಯವನ್ನು ಪಡೆಯಬಹುದು, ಭಾರತ ಸರ್ಕಾರವು 'ಕಿಸಾನ್ ಇ-ಮಿತ್ರ' (ಧ್ವನಿ ಆಧಾರಿತ ಎಐ ಚಾಟ್ ಬಾಟ್) ಅನ್ನು ಅಭಿವೃದ್ಧಿಪಡಿಸಿದೆ. ರೈತರಿಗೆ ಪ್ರಶ್ನೆಗಳನ್ನು ಕೇಳಲು ಮತ್ತು ನೈಜ ಸಮಯದಲ್ಲಿ ಅವರ ಸ್ವಂತ ಭಾಷೆಯಲ್ಲಿ ಪರಿಹಾರ ಕಂಡುಕೊಳ್ಳಲು ಅನುವು ಮಾಡಿಕೊಡುತ್ತದೆ. ಕಿಸಾನ್-ಇ ಮಿತ್ರ ಈಗ 10 ಭಾಷೆಗಳಲ್ಲಿ ಅಂದರೆ, ಇಂಗ್ಲಿಷ್, ಹಿಂದಿ, ಒಡಿಯಾ, ತಮಿಳು, ಬಾಂಗ್ಲಾ, ಮಲಯಾಳಂ, ಗುಜರಾತಿ, ಪಂಜಾಬಿ, ತೆಲುಗು ಮತ್ತು ಮರಾಠಿಯಲ್ಲಿ ಲಭ್ಯವಿದೆ.
ಭಾರತ ಸರ್ಕಾರವು ಯೋಜನೆಗೆ ಶೇ.100 ಧನಸಹಾಯವನ್ನು ನೀಡುತ್ತಿದ್ದು ರಾಜ್ಯಗಳು ರೈತರ ಅರ್ಹತೆಯನ್ನು ನೋಂದಾಯಿಸುವುದರಿಂದ ಮತ್ತು ಪರಿಶೀಲಿಸುವುದರಿಂದ ಈ ಯೋಜನೆಯು ಸಹಕಾರಿ ಒಕ್ಕೂಟ ವ್ಯವಸ್ಥೆಗೆ ಉಜ್ವಲ ಉದಾಹರಣೆಯಾಗಿದೆ. ಶೇ.85 ಕ್ಕಿಂತ ಹೆಚ್ಚು ಸಣ್ಣ ಮತ್ತು ಅತಿ ಸಣ್ಣ ರೈತರು ಯೋಜನೆಯಡಿಯಲ್ಲಿ ಫಲಾನುಭವಿಗಳಾಗಿರುವುದರ ಜೊತೆಗೆ 4 ಫಲಾನುಭವಿಗಳಲ್ಲಿ ಕನಿಷ್ಠ ಒಬ್ಬ ರೈತರು ಮಹಿಳೆಯಾಗಿರುವುದು ಯೋಜನೆಯ ಒಳಗೊಳ್ಳುವಿಕೆಯ ಸ್ವರೂಪವನ್ನು ಪ್ರತಿಬಿಂಬಿಸುತ್ತದೆ.
****
(Release ID: 2010270)
Visitor Counter : 218