ಪ್ರಧಾನ ಮಂತ್ರಿಯವರ ಕಛೇರಿ

​​​​​​​ಸ್ವಾಮಿ ದಯಾನಂದ ಸರಸ್ವತಿ ಅವರ ಜನ್ಮದಿನ; ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನ ಮಂತ್ರಿ ಭಾಷಣ

Posted On: 11 FEB 2024 12:29PM by PIB Bengaluru

ನಮಸ್ತೆ!

ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಗೌರವಾನ್ವಿತ ಸಂತರೆ, ಗುಜರಾತ್ ರಾಜ್ಯಪಾಲರಾದ ಆಚಾರ್ಯ ದೇವವ್ರತ್ ಜೀ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಪಾರ್ಷೋತ್ತಮ ರೂಪಾಲಾ ಜಿ, ಆರ್ಯ ಸಮಾಜದ ವಿವಿಧ ಸಂಘಟನೆಗಳಿಗೆ ಸಂಬಂಧಿಸಿದ ಅಧಿಕಾರಿಗಳು, ಇತರೆ ಗಣ್ಯರೆ, ಮಹಿಳೆಯರು ಮತ್ತು ಮಹನೀಯರೆ!

ದೇಶವು ಸ್ವಾಮಿ ದಯಾನಂದ ಸರಸ್ವತಿ ಅವರ 200ನೇ ಜನ್ಮ ವಾರ್ಷಿಕೋತ್ಸವ ಆಚರಿಸುತ್ತಿದೆ. ಸ್ವಾಮಿಜಿ ಅವರ ಜನ್ಮಸ್ಥಳ ಟಂಕರಾವನ್ನು ಖುದ್ದಾಗಿ ತಲುಪುವುದು ನನ್ನ ಬಯಕೆಯಾಗಿತ್ತು, ಆದರೆ ಇದು ಸಾಧ್ಯವಾಗಲಿಲ್ಲ. ಅದೇನೇ ಇದ್ದರೂ, ನಾನು ಹೃದಯ ಮತ್ತು ಆತ್ಮದಿಂದ ನಿಮ್ಮೆಲ್ಲರ ನಡುವೆ ಇದ್ದೇನೆ. ಸ್ವಾಮೀಜಿ ಅವರ ಕೊಡುಗೆಗಳನ್ನು ಸ್ಮರಿಸಲು ಮತ್ತು ಅವರ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸಲು ಆರ್ಯ ಸಮಾಜವು ಈ ಹಬ್ಬವನ್ನು ಆಚರಿಸುತ್ತಿರುವುದು ನನಗೆ ಸಂತಸ ತಂದಿದೆ. ಕಳೆದ ವರ್ಷ ಈ ಉತ್ಸವದ ಉದ್ಘಾಟನೆಯಲ್ಲಿ ಭಾಗವಹಿಸುವ ಅವಕಾಶ ನನಗೆ ಸಿಕ್ಕಿತ್ತು. ಅಂತಹ ಅಗಾಧವಾದ ಆಚರಣೆಯು ಅಪ್ರತಿಮ ಕೊಡುಗೆಯನ್ನು ಹೊಂದಿರುವ ಮಹಾನ್ ಆತ್ಮದೊಂದಿಗೆ ಸಂಬಂಧ ಹೊಂದುವುದು ಸಹಜ. ಈ ಘಟನೆಯು ನಮ್ಮ ಹೊಸ ಪೀಳಿಗೆಗೆ ಮಹರ್ಷಿ ದಯಾನಂದರ ಜೀವನವನ್ನು ಪರಿಚಯಿಸಲು ಪರಿಣಾಮಕಾರಿ ಮಾಧ್ಯಮವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ನಾನು ನಂಬುತ್ತೇನೆ.

ಸ್ನೇಹಿತರೆ,

ನಾನು ಸ್ವಾಮೀಜಿ ಅವರ ಜನ್ಮಸ್ಥಳವಾದ ಗುಜರಾತ್‌ನಲ್ಲಿ ಹುಟ್ಟಿದ್ದು ನನ್ನ ಅದೃಷ್ಟ. ಅವರ ಕರ್ಮ ಸ್ಥಳವು ಹರಿಯಾಣದಲ್ಲಿದೆ. ದೀರ್ಘಕಾಲದವರೆಗೆ, ಹರಿಯಾಣದ ಜೀವನವನ್ನು ಹತ್ತಿರದಿಂದ ತಿಳಿದುಕೊಳ್ಳಲು ಮತ್ತು ಅರ್ಥ ಮಾಡಿಕೊಳ್ಳಲು ಮತ್ತು ಅಲ್ಲಿ ಕೆಲಸ ಮಾಡಲು ನನಗೆ ಅವಕಾಶವಿತ್ತು. ಆದ್ದರಿಂದ, ಸ್ವಾಭಾವಿಕವಾಗಿ, ಅವರು ನನ್ನ ಜೀವನದ ಮೇಲೆ ವಿಭಿನ್ನ ಪ್ರಭಾವ ಬೀರಿದ್ದಾರೆ. ಅವರು ತಮ್ಮದೇ ಆದ ಪಾತ್ರ ಹೊಂದಿದ್ದಾರೆ. ಇಂದು ಈ ಸಂದರ್ಭದಲ್ಲಿ ನಾನು ಮಹರ್ಷಿ ದಯಾನಂದ ಜೀ ಅವರ ಪಾದಗಳಿಗೆ ನಮಸ್ಕರಿಸುತ್ತೇನೆ, ನಾನು ಅವರಿಗೆ ನಮಸ್ಕರಿಸುತ್ತೇನೆ. ಅವರ ಜನ್ಮದಿನದಂದು ದೇಶ ಮತ್ತು ವಿದೇಶಗಳಲ್ಲಿ ವಾಸಿಸುವ ಅವರ ಲಕ್ಷಾಂತರ ಅನುಯಾಯಿಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೆ,

ಇತಿಹಾಸದಲ್ಲಿ ಕೆಲವು ದಿನಗಳು, ಕ್ಷಣಗಳು ಮತ್ತು ನಿದರ್ಶನಗಳು ಭವಿಷ್ಯದ ಹಾದಿಯನ್ನು ಸಂಪೂರ್ಣವಾಗಿ ಬದಲಾಯಿಸುತ್ತವೆ. 200 ವರ್ಷಗಳ ಹಿಂದೆ ದಯಾನಂದ್ ಜಿ ಅವರ ಜನನವು ಅಂತಹ ಒಂದು ಅಭೂತಪೂರ್ವ ಕ್ಷಣವಾಗಿದೆ. ಭಾರತದ ಜನರು ಗುಲಾಮಗಿರಿಯ ನಡುವೆ ತಮ್ಮ ಪ್ರಜ್ಞೆ ಕಳೆದುಕೊಳ್ಳುತ್ತಿದ್ದ ಸಮಯ. ನಮ್ಮ ಪದ್ಧತಿಗಳು ಮತ್ತು ಮೂಢನಂಬಿಕೆಗಳು ರಾಷ್ಟ್ರವನ್ನು ಹೇಗೆ ಸಿಲುಕಿಸಿವೆ ಎಂಬುದನ್ನು ಸ್ವಾಮಿ ದಯಾನಂದ ಜಿ ಅವರು ದೇಶಕ್ಕೆ ತಿಳಿಸಿದರು. ಈ ಪದ್ಧತಿಗಳು ನಮ್ಮ ವೈಜ್ಞಾನಿಕ ಚಿಂತನೆಯನ್ನು ದುರ್ಬಲಗೊಳಿಸಿದ್ದವು. ಈ ಸಾಮಾಜಿಕ ಅನಿಷ್ಟಗಳು ನಮ್ಮ ಒಗ್ಗಟ್ಟನ್ನು ಹೊಡೆದವು. ಸಮಾಜದ ಒಂದು ವರ್ಗ ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯಿಂದ ದೂರ ಸರಿಯುತ್ತಿತ್ತು. ಅಂತಹ ಸಮಯದಲ್ಲಿ, ಸ್ವಾಮಿ ದಯಾನಂದ ಜಿ ಅವರು 'ವೇದೋನ್ ಕಿ ಔರ್ ಲೌಟೋ' (ವೇದಗಳಿಗೆ ಹಿಂತಿರುಗಿ)ಗೆ ಕರೆ ನೀಡಿದರು. ಅವರು ವೇದಗಳ ಮೇಲೆ ವ್ಯಾಖ್ಯಾನಗಳನ್ನು ಬರೆದರು, ತಾರ್ಕಿಕ ವಿವರಣೆಗಳನ್ನು ನೀಡಿದರು. ಅವರು ಸಂಪ್ರದಾಯಗಳ ಮೇಲೆ ಬಹಿರಂಗ ಆಕ್ರಮಣ ಮಾಡಿದರು. ಭಾರತೀಯ ತತ್ವಶಾಸ್ತ್ರದ ನಿಜವಾದ ಸ್ವರೂಪವನ್ನು ಬಹಿರಂಗಪಡಿಸಿದರು. ಪರಿಣಾಮವಾಗಿ, ಸಮಾಜವು ತನ್ನ ಆತ್ಮವಿಶ್ವಾಸವನ್ನು ಮರಳಿ ಪಡೆಯಲಾರಂಭಿಸಿತು. ಜನರು ವೈದಿಕ ಧರ್ಮದ ಬಗ್ಗೆ ಕಲಿಯಲು ಪ್ರಾರಂಭಿಸಿದರು ಮತ್ತು ಅದರ ಬೇರುಗಳೊಂದಿಗೆ ಸಂಪರ್ಕಿಸಲು ಪ್ರಾರಂಭಿಸಿದರು.

ಸ್ನೇಹಿತರೆ,

ಬ್ರಿಟಿಷ್ ಸರ್ಕಾರವು ನಮ್ಮ ಸಾಮಾಜಿಕ ಪದ್ಧತಿಗಳನ್ನು ಗುರಿಯಾಗಿಸಿಕೊಂಡು ನಮ್ಮನ್ನು ಕೀಳಾಗಿ ಕಾಣಲು ಪ್ರಯತ್ನಿಸಿತು. ಸಾಮಾಜಿಕ ಬದಲಾವಣೆಗಳನ್ನು ಉಲ್ಲೇಖಿಸುವ ಮೂಲಕ, ಆ ಸಮಯದಲ್ಲಿ ಕೆಲವರು ಬ್ರಿಟಿಷ್ ಆಳ್ವಿಕೆಯನ್ನು ಸರಿ ಎಂದು ಬಿಂಬಿಸಿದರು. ಅಂತಹ ಕರಾಳ ಕಾಲದಲ್ಲಿ, ಸ್ವಾಮಿ ದಯಾನಂದ ಜಿಯವರ ಆಗಮನವು ಆ ಎಲ್ಲಾ ಪಿತೂರಿಗಳಿಗೆ ತೀವ್ರ ಹೊಡೆತ ನೀಡಿತು. ಆರ್ಯ ಸಮಾಜದಿಂದ ಪ್ರಭಾವಿತರಾದ ಲಾಲಾ ಲಜಪತ್ ರಾಯ್, ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಸ್ವಾಮಿ ಶ್ರದ್ಧಾನಂದರಂತಹ ಕ್ರಾಂತಿಕಾರಿಗಳ ಸರಣಿಯೇ ಹೊರಹೊಮ್ಮಿತು. ಆದ್ದರಿಂದ, ದಯಾನಂದ ಜಿ ಕೇವಲ ವೈದಿಕ ಋಷಿಯಾಗಿರಲಿಲ್ಲ; ಅವರು ರಾಷ್ಟ್ರೀಯ ಪ್ರಜ್ಞೆಯ ಋಷಿಯೂ ಆಗಿದ್ದರು.

ಸ್ನೇಹಿತರೆ,

ಭಾರತವು ತನ್ನ ‘ಅಮೃತ ಕಾಲ’ದ ಆರಂಭಿಕ ವರ್ಷಗಳಲ್ಲಿ ಸ್ವಾಮಿ ದಯಾನಂದ ಜಿ ಅವರ ಜನ್ಮದ 200ನೇ ಮೈಲಿಗಲ್ಲು ತಲುಪಿದೆ. ಸ್ವಾಮಿ ದಯಾನಂದ ಜಿ ಅವರು ಭಾರತಕ್ಕೆ ಉಜ್ವಲ ಭವಿಷ್ಯ ಕಲ್ಪಿಸಿದ ಸಂತ. ಸ್ವಾಮೀಜಿ ಅವರಿಗೆ ಭಾರತದಲ್ಲಿ ಯಾವ ನಂಬಿಕೆ ಇದೆಯೋ ಅದೇ ನಂಬಿಕೆಯನ್ನು ನಮ್ಮ ‘ಅಮೃತ ಕಾಲ’ದಲ್ಲಿ ನಮ್ಮ ಆತ್ಮ ವಿಶ್ವಾಸವನ್ನಾಗಿ ಪರಿವರ್ತಿಸಿಕೊಳ್ಳಬೇಕು. ಸ್ವಾಮಿ ದಯಾನಂದರು ಆಧುನಿಕತೆಯ ಮುನ್ನುಡಿ ಮತ್ತು ಮಾರ್ಗದರ್ಶಿಯಾಗಿದ್ದರು. ಅವರಿಂದ ಪ್ರೇರಿತರಾಗಿ, ನಾವೆಲ್ಲರೂ ಈ ‘ಅಮೃತ ಕಾಲ’ದಲ್ಲಿ ಭಾರತವನ್ನು ಆಧುನಿಕತೆಯತ್ತ ಕೊಂಡೊಯ್ಯಬೇಕಾಗಿದೆ, ನಮ್ಮ ದೇಶವನ್ನು ‘ವಿಕ್ಷಿತ ಭಾರತ’ (ಅಭಿವೃದ್ಧಿ ಹೊಂದಿದ ಭಾರತ) ಮಾಡಲು. ಇಂದು, ಆರ್ಯ ಸಮಾಜವು ಪ್ರಪಂಚದಾದ್ಯಂತ 2500ಕ್ಕೂ ಹೆಚ್ಚು ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಹೊಂದಿದೆ. ನೀವೆಲ್ಲರೂ 400ಕ್ಕೂ ಹೆಚ್ಚು ಗುರುಕುಲಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ತರಬೇತಿ ನೀಡುತ್ತಿದ್ದೀರಿ. 21ನೇ ಶತಮಾನದ ಈ ದಶಕದಲ್ಲಿ ಆರ್ಯ ಸಮಾಜವು ಹೊಸ ಶಕ್ತಿಯೊಂದಿಗೆ ರಾಷ್ಟ್ರ ನಿರ್ಮಾಣ ಅಭಿಯಾನದ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕೆಂದು ನಾನು ಬಯಸುತ್ತೇನೆ. ಡಿಎವಿ ಸಂಸ್ಥೆಯು ಮಹರ್ಷಿ ದಯಾನಂದ ಸರಸ್ವತಿ ಜಿ ಅವರ ಜೀವಂತ ಸ್ಮರಣೆ, ಸ್ಫೂರ್ತಿ ಮತ್ತು ರೋಮಾಂಚಕ ನೆಲವಾಗಿದೆ. ನಾವು ಅದನ್ನು ನಿರಂತರವಾಗಿ ಸಶಕ್ತಗೊಳಿಸುವುದನ್ನು ಮುಂದುವರಿಸಿದರೆ, ಅದು ಮಹರ್ಷಿ ದಯಾನಂದ ಜಿ ಅವರಿಗೆ ನಾವು ಸಲ್ಲಿಸುವ ಪುಣ್ಯದ ಗೌರವವಾಗುತ್ತದೆ.

ಭಾರತೀಯ ಮೌಲ್ಯಗಳಿಗೆ ಸಂಬಂಧಿಸಿದ ಶಿಕ್ಷಣ ವ್ಯವಸ್ಥೆ ಇಂದಿನ ಅಗತ್ಯವಾಗಿದೆ. ಆರ್ಯ ಸಮಾಜದ ಶಾಲೆಗಳು ಇದಕ್ಕೆ ಮಹತ್ವದ ಕೇಂದ್ರಗಳಾಗಿವೆ. ದೇಶವು ಈಗ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಅದನ್ನು ವಿಸ್ತರಿಸುತ್ತಿದೆ. ಈ ಪ್ರಯತ್ನಗಳೊಂದಿಗೆ ಸಮಾಜವನ್ನು ಸಂಪರ್ಕಿಸುವುದು ನಮ್ಮ ಜವಾಬ್ದಾರಿಯಾಗಿದೆ. ಇದು ಸ್ಥಳೀಯರಿಗೆ ಧ್ವನಿಯಾಗಿರಲಿ, 'ಆತ್ಮನಿರ್ಭರ ಭಾರತ್ ಅಭಿಯಾನ' (ಸ್ವಾವಲಂಬಿ ಭಾರತ ಅಭಿಯಾನ), ಪರಿಸರಕ್ಕಾಗಿ ದೇಶದ ಪ್ರಯತ್ನಗಳು, ಜಲ ಸಂರಕ್ಷಣೆ, ಸ್ವಚ್ಛ ಭಾರತ ಅಭಿಯಾನ, ಮಿಷನ್ ಲೈಫ್‌ನಂತಹ ಅಭಿಯಾನಗಳು - ಇಂದಿನ ಆಧುನಿಕ ಜೀವನಶೈಲಿಯಲ್ಲಿ ಪ್ರಕೃತಿಗೆ ನ್ಯಾಯವನ್ನು ಖಾತ್ರಿಪಡಿಸುವುದಾಗಿದೆ. ಪ್ರೋತ್ಸಾಹದಾಯಕವಾದ ನಮ್ಮ ಸಿರಿಧಾನ್ಯಗಳು - ಶ್ರೀ ಅನ್ನ, ಯೋಗ, ಫಿಟ್ನೆಸ್ ಮತ್ತು ಕ್ರೀಡೆಗಳಲ್ಲಿ ಹೆಚ್ಚಿನ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು ಅತ್ಯಗತ್ಯ. ಆರ್ಯ ಸಮಾಜದ ಶಿಕ್ಷಣ ಸಂಸ್ಥೆಗಳು ಮತ್ತು ಅವುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಒಟ್ಟಾಗಿ ಬಹಳ ಮಹತ್ವದ ಶಕ್ತಿಯನ್ನು ರೂಪಿಸುತ್ತಾರೆ. ಈ ಎಲ್ಲಾ ಪ್ರಯತ್ನಗಳಲ್ಲಿ ಅವರು ಬಹಳ ಮಹತ್ವದ ಪಾತ್ರವನ್ನು ವಹಿಸಬಹುದು.

ನಿಮ್ಮ ಸಂಸ್ಥೆಗಳಲ್ಲಿ 18 ವರ್ಷ ದಾಟಿದ ಗಮನಾರ್ಹ ಸಂಖ್ಯೆಯ ವಿದ್ಯಾರ್ಥಿಗಳಿದ್ದಾರೆ. ಅವರಿಗೆ ಮತದಾರರ ನೋಂದಣಿಯ ಮಹತ್ವ ಹಾಗೂ ಮತದಾನದ ಮಹತ್ವವನ್ನು ತಿಳಿಸಿಕೊಡುವ ಜವಾಬ್ದಾರಿ ನಿಮ್ಮೆಲ್ಲ ಹಿರಿಯರ ಮೇಲಿದೆ. ಈ ವರ್ಷ ಆರ್ಯ ಸಮಾಜದ ಸ್ಥಾಪನೆಯ 150ನೇ ವಾರ್ಷಿಕೋತ್ಸವ ಆಚರಿಸುತ್ತಿದೆ. ನಾವೆಲ್ಲರೂ ನಮ್ಮ ಪ್ರಯತ್ನಗಳು ಮತ್ತು ಸಾಧನೆಗಳೊಂದಿಗೆ ಅಂತಹ ಮಹತ್ವದ ಸಂದರ್ಭವನ್ನು ನಿಜವಾಗಿಯೂ ಸ್ಮರಣೀಯವಾಗಿಸಬೇಕೆಂದು ನಾನು ಬಯಸುತ್ತೇನೆ.

ಸ್ನೇಹಿತರೆ,

ನೈಸರ್ಗಿಕ ಕೃಷಿಯು ಎಲ್ಲಾ ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬಹುದಾದ ಬಹಳ ಮುಖ್ಯವಾದ ವಿಷಯವಾಗಿದೆ. ನಮ್ಮ ಆಚಾರ್ಯ ದೇವವ್ರತರು ಈ ದಿಸೆಯಲ್ಲಿ ಬಹಳ ಶ್ರಮಿಸುತ್ತಿದ್ದಾರೆ. ಮಹರ್ಷಿ ದಯಾನಂದ ಜಿ ಅವರ ಜನ್ಮಸ್ಥಳದಿಂದ ದೇಶಾದ್ಯಂತ ರೈತರಿಗೆ ನೈಸರ್ಗಿಕ ಕೃಷಿಯ ಸಂದೇಶ ಹರಡುವುದಕ್ಕಿಂತ ಉತ್ತಮವಾದದ್ದು ಬೇರೆ ಏನಿದೆ?

ಸ್ನೇಹಿತರೆ,

ಮಹರ್ಷಿ ದಯಾನಂದರು ತಮ್ಮ ಕಾಲದಲ್ಲಿ ಮಹಿಳೆಯರ ಹಕ್ಕುಗಳು ಮತ್ತು ಅವರ ಭಾಗವಹಿಸುವಿಕೆಯನ್ನು ಪ್ರತಿಪಾದಿಸಿದರು. ಇಂದು ದೇಶವು ಹೊಸ ನೀತಿಗಳು ಮತ್ತು ಪ್ರಾಮಾಣಿಕ ಪ್ರಯತ್ನಗಳ ಮೂಲಕ ತನ್ನ ಹೆಣ್ಣು ಮಕ್ಕಳನ್ನು ಸಬಲೀಕರಣಗೊಳಿಸುವ ಮೂಲಕ ಮುನ್ನಡೆಯುತ್ತಿದೆ. ಕೆಲವೇ ತಿಂಗಳುಗಳ ಹಿಂದೆ, ನಾರಿಶಕ್ತಿ ವಂದನ್ ಅಧಿನಿಯಮವನ್ನು ಅಂಗೀಕರಿಸುವ ಮೂಲಕ ದೇಶವು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿ ಖಾತ್ರಿಪಡಿಸಿತು. ಇಂದು ದೇಶದ ಈ ಎಲ್ಲಾ ಪ್ರಯತ್ನಗಳ ಮೂಲಕ ಜನರನ್ನು ಸಂಪರ್ಕಿಸುತ್ತಿರುವುದು ಮಹರ್ಷಿ ದಯಾನಂದರಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ.

ಮತ್ತು ಸ್ನೇಹಿತರೆ,

ಈ ಎಲ್ಲಾ ಸಾಮಾಜಿಕ ಉಪಕ್ರಮಗಳಿಗಾಗಿ, ನೀವು ಭಾರತ ಸರ್ಕಾರದ ಹೊಸದಾಗಿ ರೂಪುಗೊಂಡ ಯುವ ಸಂಘಟನೆಯ ಶಕ್ತಿಯನ್ನು ಸಹ ಹೊಂದಿದ್ದೀರಿ. ದೇಶದ ಈ ಅತಿ ದೊಡ್ಡ ಮತ್ತು ಕಿರಿಯ ಸಂಘಟನೆಯ ಹೆಸರು "ಮೇರಾ ಯುವ ಭಾರತ್ - ಮೈ ಭಾರತ್". ಡಿಎವಿಯ  ಶೈಕ್ಷಣಿಕ ಜಾಲದ ಎಲ್ಲಾ ವಿದ್ಯಾರ್ಥಿಗಳು ಮೈ ಭಾರತ್ ಗೆ ಸೇರುವಂತೆ ಪ್ರೋತ್ಸಾಹಿಸಬೇಕು ಎಂದು ನಾನು ದಯಾನಂದ ಸರಸ್ವತಿ ಜಿ ಅವರ ಎಲ್ಲಾ ಅನುಯಾಯಿಗಳನ್ನು ಕೋರುತ್ತೇನೆ. ಮತ್ತೊಮ್ಮೆ, ಮಹರ್ಷಿ ದಯಾನಂದರ 200ನೇ ಜನ್ಮ ವಾರ್ಷಿಕೋತ್ಸವ ಸಂದರ್ಭದಲ್ಲಿ ನಾನು ನಿಮಗೆಲ್ಲರಿಗೂ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಮಹರ್ಷಿ ದಯಾನಂದ ಜೀ ಮತ್ತು ಎಲ್ಲಾ ಸಂತರಿಗೆ ಮತ್ತೊಮ್ಮೆ ಗೌರವಪೂರ್ವಕವಾಗಿ ನಮಸ್ಕರಿಸುತ್ತೇನೆ!

ತುಂಬು ಧನ್ಯವಾದಗಳು!
 
ಹಕ್ಕು ನಿರಾಕರಣೆ: ಪ್ರಧಾನ ಮಂತ್ರಿ ಅವರ ಭಾಷಣದ ಅಂದಾಜು ಇಂಗ್ಲೀಷ್ ಅನುವಾದದ ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

*****



(Release ID: 2005844) Visitor Counter : 47