ಗೃಹ ವ್ಯವಹಾರಗಳ ಸಚಿವಾಲಯ

ಕರ್ನಾಟಕದ ಮೈಸೂರಿನಲ್ಲಿ ನಡೆದ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಇಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಮಾತನಾಡಿದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಜಾಗತಿಕವಾಗಿ ಹೆಮ್ಮೆಪಡುವಂತೆ ಮಾಡಿದ್ದಾರೆ

ಸುತ್ತೂರು ಮಠವು ದಿವ್ಯಾಂಗರಿಗೆ ಪಾಲಿಟೆಕ್ನಿಕ್‌  ಸಂಸ್ಥೆಯೊಂದಿಗೆ ಸಮಗ್ರ ಮತ್ತು ಶಕ್ತಿಯುತ ಸಮಾಜವನ್ನು ನಿರ್ಮಿಸುತ್ತಿದೆ

ಸುತ್ತೂರು ಮಹಾಸಂಸ್ಥಾನ ಮಠದ ಎಲ್ಲ 24 ಪೀಠಾಧಿಪತಿಗಳು ಶತಮಾನಗಳಿಂದಲೂ ದೇಶಸೇವೆ ಮತ್ತು ಕಾಯಕವನ್ನು ಅವಿರತವಾಗಿ ಮುಂದುವರೆಸಿಕೊಂಡು ಬಂದಿದ್ದಾರೆ

ಸುತ್ತೂರು ಮಠವು ನಿಸ್ವಾರ್ಥ ಸೇವೆ, ಕಾಯಕವೇ ಕೈಲಾಸ ಮತ್ತು ದಾಸೋಹ ಎಂಬ ಮೂರು ಸೂತ್ರಗಳ ಕೇಂದ್ರವಾಗಿದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದಾದ್ಯಂತ ದೇವಾಲಯಗಳನ್ನು ಪುನರುಜ್ಜೀವನಗೊಳಿಸುವ ಮೂಲಕ ಭಾರತದ ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗೃತಗೊಳಿಸಿದ್ದಾರೆ

ಸುತ್ತೂರು ಜಾತ್ರಾ ಮಹೋತ್ಸವವು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಪುನರುತ್ಥಾನಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ

ದೇಶವನ್ನು ಸುರಕ್ಷಿತ ಮತ್ತು ಸಮೃದ್ಧಗೊಳಿಸುವ ಜೊತೆಗೆ, ಮೋದಿಯವರು ನಮ್ಮ ಯೋಗ, ಆಯುರ್ವೇದ ಮತ್ತು ಭಾಷೆಗಳನ್ನು ಸಂರಕ್ಷಿಸಲು ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ.

Posted On: 11 FEB 2024 6:25PM by PIB Bengaluru

ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ಕರ್ನಾಟಕದ ಮೈಸೂರಿನಲ್ಲಿ ಸುತ್ತೂರು ಜಾತ್ರಾ ಮಹೋತ್ಸವವನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ ಜೋಶಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

https://static.pib.gov.in/WriteReadData/userfiles/image/image0019XW1.jpg

 

ಸುತ್ತೂರು ಮಠವು ನಿಸ್ವಾರ್ಥ ಸೇವೆ, ಕಾಯಕವೇ ಕೈಲಾಸ ಮತ್ತು ದಾಸೋಹ ಎಂಬ ಮೂರು ಸೂತ್ರಗಳ ಕೇಂದ್ರವಾಗಿದೆ ಎಂದು ಶ್ರೀ ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ ಹೇಳಿದರು. ಸುತ್ತೂರು ಮಹಾಸಂಸ್ಥಾನ ಮಠಸ ಎಲ್ಲ 24 ಪೂಜ್ಯ ಪೀಠಾಧಿಪತಿಗಳು ಶತಮಾನಗಳಿಂದಲೂ ಸೇವೆ, ಕಾಯಕ ಸಂಪ್ರದಾಯವನ್ನು ಅವಿರತವಾಗಿ ಮುಂದುವರಿಸಿಕೊಂಡು ಬಂದಿದ್ದು, ಈ ಮಠವು ಜಗತ್ತಿನಾದ್ಯಂತ ಲಕ್ಷಾಂತರ ಅನುಯಾಯಿಗಳನ್ನು ಹೊಂದಿದೆ, ಸುತ್ತೂರು ಮಠವು ಜನರ ಬಾಳಿಗೆ ಬೆಳಕು ನೀಡಿದೆ ಎಂದರು.

https://static.pib.gov.in/WriteReadData/userfiles/image/image002324H.jpg

ಫೆಬ್ರವರಿ 6 ರಿಂದ 11 ರವರೆಗೆ ಆಯೋಜಿಸಲಾಗಿರುವ ಈ ಉತ್ಸವವು ಒಂದು ರೀತಿಯಲ್ಲಿ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಪುನರುತ್ಥಾನಗೊಳಿಸುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಇಲ್ಲಿ ರಥೋತ್ಸವ, ತಪೋತ್ಸವ, ಸಾಮೂಹಿಕ ವಿವಾಹ ಸೇರಿದಂತೆ ಹಲವು ಉತ್ಸವಗಳು, ವಿಶೇಷ ಪೂಜೆಗಳು ನಡೆಯುತ್ತವೆ ಎಂದರು. ಹಬ್ಬದ ಸಂದರ್ಭದಲ್ಲಿ ಕೃಷಿ ಮೇಳ, ಕುಸ್ತಿ, ಸಾಂಪ್ರದಾಯಿಕ ಆಟಗಳೂ ನಡೆಯುತ್ತಿದ್ದು, ಒಂದು ರೀತಿಯಲ್ಲಿ ಸಾಮಾಜಿಕ ಬದುಕಿನ ಎಲ್ಲ ಅಂಶಗಳನ್ನು ಮೈಗೂಡಿಸಿಕೊಂಡು ಉತ್ಸವವನ್ನು ಆಚರಿಸಲಾಗುತ್ತಿದೆ ಎಂದರು.

https://static.pib.gov.in/WriteReadData/userfiles/image/image0033B65.jpg

ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಯವರು ಹಲವಾರು ಕೆಲಸಗಳನ್ನು ಮಾಡುವ  ಮೂಲಕ ತಮ್ಮ ಸಂಪ್ರದಾಯವನ್ನು ಮುಂದಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಈ ಮಠದ ಅಡಿಯಲ್ಲಿ ಸುಮಾರು 350 ಶಿಕ್ಷಣ ಸಂಸ್ಥೆಗಳಿದ್ದು, 20,000 ಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದಾರೆ ಮತ್ತು ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ ಎಂದು ಅವರು ಹೇಳಿದರು. ಈ ಮಠವು ದಿವ್ಯಾಂಗ ವಿದ್ಯಾರ್ಥಿಗಳಿಗಾಗಿ ಪಾಲಿಟೆಕ್ನಿಕ್ ಸಂಸ್ಥೆಯನ್ನು ಸ್ಥಾಪಿಸಿದೆ ಮತ್ತು ಈ ಪ್ರಯತ್ನವು ಇಡೀ ದೇಶದಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ ಮತ್ತು 900 ಕ್ಕೂ ಹೆಚ್ಚು ವಿಶೇಷ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ಕಲಿಯುತ್ತಿದ್ದಾರೆ ಎಂದು ಶ್ರೀ ಶಾ ಹೇಳಿದರು.

https://static.pib.gov.in/WriteReadData/userfiles/image/image004YUGK.jpg

ಜನವರಿ 22 ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಪ್ರಾಣಪ್ರತಿಷ್ಠಾಪನೆಯನ್ನು ಮಾಡಿದರು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಸುತ್ತೂರು ಮಠವು ಅಯೋಧ್ಯೆಯಲ್ಲಿ ತನ್ನ ಶಾಖೆಯನ್ನು ಸ್ಥಾಪಿಸಲು ನಿರ್ಧರಿಸಿದೆ ಎಂದು ಅವರು ಹೇಳಿದರು.

https://static.pib.gov.in/WriteReadData/userfiles/image/image005UBQU.jpg

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದ ಸಾಂಸ್ಕೃತಿಕ ಪರಂಪರೆಯನ್ನು ವಿಶ್ವ ವೇದಿಕೆಯಲ್ಲಿ ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಪ್ರಧಾನಿ ಮೋದಿಯವರು ಅಯೋಧ್ಯೆಯ ರಾಮಮಂದಿರ, ಕಾಶಿಯ ವಿಶ್ವನಾಥ ಕಾರಿಡಾರ್, ಮಹಾಕಾಲ ಕಾರಿಡಾರ್, ಬಾಬಾ ಕೇದಾರನಾಥ ಮತ್ತು ಬದರಿಧಾಮದ ಪುನರುಜ್ಜೀವನದಂತಹ ಅನೇಕ ಸಾಂಸ್ಕೃತಿಕ ಕೇಂದ್ರಗಳನ್ನು ಪುನರುಜ್ಜೀವನಗೊಳಿಸಿದ್ದಾರೆ ಎಂದು ಹೇಳಿದರು. ದೇಶವನ್ನು ಸುರಕ್ಷಿತ ಮತ್ತು ಸಮೃದ್ಧಗೊಳಿಸುವ ಜೊತೆಗೆ, ನಮ್ಮ ಯೋಗ, ಆಯುರ್ವೇದ ಮತ್ತು ಭಾಷೆಗಳನ್ನು ಸಂರಕ್ಷಿಸಲು ಮೋದಿಯವರು ಅನೇಕ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಶ್ರೀ ಅಮಿತ್‌ ಶಾ ಹೇಳಿದರು.

****



(Release ID: 2005068) Visitor Counter : 68


Read this release in: English , Urdu , Hindi , Tamil , Telugu