ಗ್ರಾಮೀಣಾಭಿವೃದ್ಧಿ ಸಚಿವಾಲಯ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಶ್ರೀ ಗಿರಿರಾಜ್ ಸಿಂಗ್ ಅವರು ಇಂದು ನವದೆಹಲಿಯಲ್ಲಿ "ಭೂ ನಿರ್ವಹಣೆ ಆಧುನೀಕರಣದಲ್ಲಿ ಉತ್ತಮ ಕಾರ್ಯವಿಧಾನಗಳ ಹಂಚಿಕೊಳ್ಳುವಿಕೆ" ಕುರಿತಾದ ರಾಜ್ಯ ಕಂದಾಯ / ನೋಂದಣಿ ಕಾರ್ಯದರ್ಶಿಗಳು ಹಾಗೂ ನೋಂದಣಿ ಮಹಾನಿರೀಕ್ಷಕರ (ಐಜಿಆರ್) ಎರಡು ದಿನಗಳ ʻಭೂಮಿ ಸಂವಾದ್- 8: ರಾಷ್ಟ್ರೀಯ ಸಮ್ಮೇಳನʼವನ್ನು ಉದ್ಘಾಟಿಸಿದರು
ಭೂ ದಾಖಲೆಗಳ ಡಿಜಿಟಲೀಕರಣ ಪ್ರಕ್ರಿಯೆ ಮತ್ತು ನೋಂದಣಿಯ ಸಂಪೂರ್ಣತೆಯು ಸುಗಮ ವ್ಯಾಪಾರದ ದೃಷ್ಟಿಯಿಂದ ದೇಶದ ಆರ್ಥಿಕತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ: ಶ್ರೀ ಗಿರಿರಾಜ್ ಸಿಂಗ್
ಭೂ ದಾಖಲೆಗಳ ಡಿಜಿಟಲೀಕರಣ ಮತ್ತು ನೋಂದಣಿಯು ದೇಶದ ಜಿಡಿಪಿಯನ್ನು ಸುಮಾರು 1.5% ರಷ್ಟು ಸುಧಾರಿಸುವ ನಿರೀಕ್ಷೆಯಿದೆ: ಶ್ರೀ ಸಿಂಗ್
Posted On:
08 FEB 2024 4:54PM by PIB Bengaluru
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಶ್ರೀ ಗಿರಿರಾಜ್ ಸಿಂಗ್ ಅವರು ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ "ಭೂ ನಿರ್ವಹಣೆ ಆಧುನೀಕರಣದಲ್ಲಿ ಉತ್ತಮ ಕಾರ್ಯವಿಧಾನಗಳ ಹಂಚಿಕೊಳ್ಳುವಿಕೆ" ಕುರಿತು ರಾಜ್ಯ ಕಂದಾಯ / ನೋಂದಣಿ ಕಾರ್ಯದರ್ಶಿಗಳು ಹಾಗೂ ನೋಂದಣಿ ಮಹಾನಿರೀಕ್ಷಕರ(ಐಜಿಆರ್) ಎರಡು ದಿನಗಳ ʻಭೂಮಿ ಸಂವಾದ್-8: ರಾಷ್ಟ್ರೀಯ ಸಮ್ಮೇಳನ’ವನ್ನು ಉದ್ಘಾಟಿಸಿದರು. ಸಹಾಯಕ ಸಚಿವ ಶ್ರೀ ಫಗ್ಗನ್ ಸಿಂಗ್ ಕುಲಸ್ತೆ, ಸಹಾಯಕ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ, ಸಹಾಯಕ ಸಚಿವ ಶ್ರೀ ಕಪಿಲ್ ಮೊರೇಶ್ವರ್ ಪಾಟೀಲ್, ಕಾರ್ಯದರ್ಶಿ ಶ್ರೀಮತಿ ನಿಧಿ ಖರೆ ಮತ್ತು ಜಂಟಿ ಕಾರ್ಯದರ್ಶಿ ಶ್ರೀ ಸೋನ್ಮೋನಿ ಬೋರಾ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ ಶ್ರೀ ಗಿರಿರಾಜ್ ಸಿಂಗ್ ಅವರು, ಭೂ ದಾಖಲೆಗಳು ಮತ್ತು ನೋಂದಣಿಯ ಡಿಜಿಟಲೀಕರಣ ಪ್ರಕ್ರಿಯೆಯನ್ನು ಸಂಪೂರ್ಣಗೊಳಿಸುವುದರಿಂದ ಭೂ ವಿವಾದಗಳಿಗೆ ಸಂಬಂಧಿಸಿದ ನ್ಯಾಯಾಲಯ ಪ್ರಕರಣಗಳ ಬೃಹತ್ ಬಾಕಿಯನ್ನು ತಗ್ಗಿಸಲು ಸಹಾಯ ಮಾಡುತ್ತದೆ. ಜೊತೆಗೆ, ಸುಗಮ ವ್ಯಾಪಾರದ ದೃಷ್ಟಿಯಿಂದ ದೇಶದ ಪ್ರಗತಿಯನ್ನು ಸುಧಾರಿಸಲು ಮತ್ತಷ್ಟು ನೆರವಾಗುತ್ತದೆ ಎಂದು ಒತ್ತಿ ಹೇಳಿದರು. ಭೂ ದಾಖಲೆಗಳ ಡಿಜಿಟಲೀಕರಣ ಮತ್ತು ನೋಂದಣಿಯು ದೇಶದ ಜಿಡಿಪಿಯನ್ನು ಸುಮಾರು 1.5% ರಷ್ಟು ಸುಧಾರಿಸುವ ನಿರೀಕ್ಷೆಯಿದೆ ಎಂದು ಶ್ರೀ ಸಿಂಗ್ ಹೇಳಿದರು.

ಭೂ ನಿರ್ವಹಣೆಯ ಆಧುನೀಕರಣದಲ್ಲಿ ʻಬ್ಲಾಕ್ಚೈನ್ʼ, ʻಸಿಒಆರ್ಎಸ್ʼನಂತಹ ಉದಯೋನ್ಮುಖ ತಂತ್ರಜ್ಞಾನಗಳ ಮಹತ್ವವನ್ನು ಶ್ರೀ ಗಿರಿರಾಜ್ ಸಿಂಗ್ ಒತ್ತಿ ಹೇಳಿದರು. ಇವು ʻಗತಿ ಶಕ್ತಿʼ ಅಡಿಯಲ್ಲಿ ಸರ್ಕಾರದ ಉದ್ದೇಶಗಳನ್ನು ಸಾಧಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರು. ʻಯುಎಲ್ಪಿಐಎನ್ʼ(ULPIN)(ಭೂ-ಆಧಾರ್); ಸುಗಮವಾಗಿ ವಾಣಿಜ್ಯ ನಡೆಸಲು ಅನುಕೂಲವಾಗುವಂತೆ ಬಹು ಭಾಷೆಗಳಲ್ಲಿ ಭೂ ದಾಖಲೆಗಳನ್ನು ಒದಗಿಸಲು ʻಭೂ ದಾಖಲೆಗಳ ಲಿಪ್ಯಂತರʼ; ʻಒಂದು ದೇಶ-ಒಂದು ನೋಂದಣಿʼಗಾಗಿ ʻಎನ್‌ಜಿಡಿಆರ್‌ಎಸ್ʼ ಮುಂತಾದ ಸರ್ಕಾರದ ಹೊಸ ಉಪಕ್ರಮಗಳ ಮಹತ್ವವನ್ನು ಶ್ರೀ ಸಿಂಗ್ ಒತ್ತಿ ಹೇಳಿದರು. ಸರ್ಕಾರವು ರಾಜ್ಯಗಳಿಗೆ ಬೆಂಬಲ ಮತ್ತು ಪ್ರೋತ್ಸಾಹವನ್ನು ಮುಂದುವರಿಸುತ್ತದೆ. ಈ ಹಿಂದೆ ಮಾಡಿದಂತೆ ಉತ್ತಮವಾಗಿ ಕಾರ್ಯನಿರ್ವಹಿಸುವ ರಾಜ್ಯಗಳು ಮತ್ತು ಜಿಲ್ಲೆಗಳಿಗೆ ʻಭೂಮಿ ಸಮ್ಮಾನ್ʼ ಮೂಲಕ ಅವರ ಪ್ರಯತ್ನಗಳನ್ನು ಗುರುತಿಸುತ್ತದೆ ಎಂದು ಶ್ರೀ ಸಿಂಗ್ ಉಲ್ಲೇಖಿಸಿದರು.

ಉಕ್ಕು ಮತ್ತು ಗ್ರಾಮೀಣಾಭಿವೃದ್ಧಿ ಖಾತೆ ಸಹಾಯಕ ಸಚಿವ ಶ್ರೀ ಫಗ್ಗನ್ ಸಿಂಗ್ ಕುಲಸ್ತೆ ಅವರು ಮಾತನಾಡಿ, ಪ್ರಧಾನಮಂತ್ರಿಯವರ ಆಶಯದಂತೆ ಪಾರದರ್ಶಕ ಆಡಳಿತದೊಂದಿಗೆ ಯೋಜನೆಗಳ ಎಲ್ಲ ಪ್ರಯೋಜನಗಳು ಸಮಾಜದ ಕಟ್ಟಕಡೆಯಲ್ಲಿರುವ ನಾಗರಿಕರಿಗೆ ತಲುಪಬೇಕು ಎಂದು ಹೇಳಿದರು. ಭೂ ದಾಖಲೆಗಳು ಮತ್ತು ನೋಂದಣಿಯ ಡಿಜಿಟಲೀಕರಣ ಪ್ರಕ್ರಿಯೆಯು ಭೂ ವಿವಾದಗಳನ್ನು ಒಳಗೊಂಡಿರುವ ನ್ಯಾಯಾಲಯ ಪ್ರಕರಣಗಳ ಬೃಹತ್ ಬಾಕಿಯನ್ನು ತಗ್ಗಿಸಲು ಸಹಾಯ ಮಾಡುತ್ತದೆ. ಜೊತೆಗೆ, ಸರ್ಕಾರವು ಭೂಸ್ವಾಧೀನಕ್ಕೆ ಸರಿಯಾದ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಸರಿಯಾದ ಫಲಾನುಭವಿಗಳನ್ನು ಗುರುತಿಸುವಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಸಹಾಯಕವಾಗುತ್ತದೆ ಎಂದು ಅವರು ಒತ್ತಿ ಹೇಳಿದರು.

ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಮೀಣಾಭಿವೃದ್ಧಿ ಸಹಾಯಕ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಅವರು ಮಾತನಾಡಿ, ಸಾಮಾನ್ಯ ರೈತರು ಎದುರಿಸುತ್ತಿರುವ ಭೂಮಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಹಾಗೂ ಭೂ ದಾಖಲೆಗಳ ಡಿಜಿಟಲೀಕರಣ ಮತ್ತು ಭೂ ಸಂಬಂಧಿತ ವಿವಾದಗಳನ್ನು ಕಡಿಮೆ ಮಾಡುವ ಮೂಲಕ ಸಾಲದ ಲಭ್ಯತೆಯನ್ನು ಹೇಗೆ ಹೆಚ್ಚಿಸುವುದು ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ. ಇದಕ್ಕಾಗಿ ಜಿಲ್ಲಾ ಮಟ್ಟದಲ್ಲಿ ನಿಯಮಿತವಾಗಿ ಇದೇ ರೀತಿಯ ಸಂವಾದಗಳನ್ನು ನಡೆಸುವ ಅಗತ್ಯವಿದೆ ಎಂದರು. ಇದಕ್ಕಾಗಿ ರಾಜ್ಯಗಳಿಂದ ಸಹಕಾರ ಮತ್ತು ಬೆಂಬಲವನ್ನು ಸಚಿವರು ಕೋರಿದರು.

ಪಂಚಾಯತ್ ರಾಜ್ ಸಹಾಯಕ ಸಚಿವ ಶ್ರೀ ಕಪಿಲ್ ಮೊರೇಶ್ವರ್ ಪಾಟೀಲ್ ಅವರು ಮಾತನಾಡಿ, ಸಕಾರಾತ್ಮಕ ಕಾರ್ಯವಿಧಾನದೊಂದಿಗೆ ಪರಿಹಾರಗಳನ್ನು ಪಡೆಯಲು ಸಂಧಾನ-ಮಾತುಕತೆಯ ಮಹತ್ವವನ್ನು ಒತ್ತಿ ಹೇಳಿದರು. ಭೂ ನಿರ್ವಹಣೆಯ ಆಧುನೀಕರಣವು ʻವಿಕಸಿತ ಭಾರತʼ ಗುರಿಯನ್ನು ಸಾಧಿಸುವಲ್ಲಿ ಇಲಾಖೆಯ ದೊಡ್ಡ ಕೊಡುಗೆಯಾಗಿದೆ ಎಂದು ಅವರು ಒತ್ತಿ ಹೇಳಿದರು.

ಭೂ ಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ನಿಧಿ ಖರೆ ಅವರು ಮಾತನಾಡಿ, ಭೂ ಆಡಳಿತಕ್ಕೆ ಸಂಬಂಧಿಸಿದ 2ನೇ ತಲೆಮಾರಿನ ಸುಧಾರಣಾ ಪ್ರಯತ್ನಗಳು ಮತ್ತು ಉಪಕ್ರಮಗಳನ್ನು ಸಂಯೋಜಿಸುವ ನಿಟ್ಟಿನಲ್ಲಿ, ಉತ್ತಮ ಕಾರ್ಯವಿಧಾನಗಳನ್ನು ಪರಸ್ಪರ ಹಂಚಿಕೊಳ್ಳುವ ಇಂತಹ ರಾಷ್ಟ್ರೀಯ ಸಮ್ಮೇಳನವು ಅತ್ಯಂತ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು. ಎರಡು ದಿನಗಳ ಸಮ್ಮೇಳನದಲ್ಲಿ ನಡೆಯುವ ಚರ್ಚೆಗಳು, ವಿವಿಧ ಆವಿಷ್ಕಾರಗಳು ಹಾಗೂ ಉತ್ತಮ ಕಾರ್ಯವಿಧಾನಗಳ ಪರಿಣಾಮ ಮತ್ತು ಅಗಾಧತೆಯನ್ನು ನಿರ್ಣಯಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ ಎಂದು ಅವರು ಒತ್ತಿ ಹೇಳಿದರು.

ಎರಡು ದಿನಗಳ ಸಮ್ಮೇಳನವು ಭೂ ನಿರ್ವಹಣೆಯ ಆಧುನೀಕರಣದಲ್ಲಿ ಉತ್ತಮ ಕಾರ್ಯವಿಧಾನಗಳಿಗೆ ಸಂಬಂಧಿಸಿದ ಹಲವಾರು ವಿಷಯಗಳನ್ನು ಒಳಗೊಂಡಿರುತ್ತದೆ ಎಂದು ಅವರು ಮಾಹಿತಿ ನೀಡಿದರು. ʻಭೂ ದಾಖಲೆಗಳ ಡಿಜಿಟಲೀಕರಣʼ ಹಾಗೂ ಅದರ ಪರಿಣಾಮವಾಗಿ ಪ್ರಕ್ರಿಯೆ, ಸಮಯ, ವೆಚ್ಚ, ಕಚೇರಿಗಳಿಗೆ ಅಲೆದಾಟ, ಕಂದಾಯ ನ್ಯಾಯಾಲಯ ದಾವೆಗಳ ಸಂಖ್ಯೆಯಲ್ಲಿ ಇಳಿಕೆ; ಭೂ ಸಂಬಂಧಿತ ಸೇವೆಗಳಲ್ಲಿ ಜೀವನ ಸುಗಮತೆ; ʻಭೂ-ಆಧಾರ್ ಅಥವಾ ʻಯುಎಲ್‌ಪಿಐನ್ʼ ಸೃಷ್ಟಿ; ʻಭೂ-ಆಧಾರ್ʼ ಅಥವಾ ʻಯುಎಲ್‌ಪಿಐನ್ʼ ಡೇಟಾಬೇಸ್ ರಚಿಸಲು ಮತ್ತು ನಿರ್ವಹಿಸಲು ಉತ್ತಮ ಕಾರ್ಯವಿಧಾನಗಳು; ಭೂ ನಿರ್ವಹಣೆಯಲ್ಲಿ ಸ್ವಯಂ ರೂಪಾಂತರ- ಪ್ರಗತಿಗಳು ಮತ್ತು ಅನ್ವಯಗಳು; ದಾವೆಗಳನ್ನು ಕಡಿಮೆ ಮಾಡುವಲ್ಲಿ ಭೂ ದಾಖಲೆಗಳ ಡಿಜಿಟಲೀಕರಣ ಮತ್ತು ನೋಂದಣಿಯ ಗಣಕೀಕರಣದ ಪರಿಣಾಮ; ಸಾಲ ಸೌಲಭ್ಯಕ್ಕಾಗಿ ಭೂ ದಾಖಲೆಗಳ ಡಿಜಿಟಲೀಕರಣದ ಬಳಕೆ; ಭೂ ದಾಖಲೆಗಳು ಮತ್ತು ಆಸ್ತಿ ನೋಂದಣಿಯಲ್ಲಿ ನವೀನ ತಂತ್ರಜ್ಞಾನಗಳು ಮತ್ತು ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ನೋಂದಣಿಗಾಗಿ ಉತ್ತಮ ಅಭ್ಯಾಸಗಳು ಮುಂತಾದವು ಇದರಲ್ಲಿ ಸೇರಿವೆ ಎಂದು ಶ್ರೀಮತಿ ಖರೆ ವಿವರಿಸಿದರು. ʻಭೂ ನಿರ್ವಹಣೆಯಲ್ಲಿ ಸುಧಾರಣೆಗಳಿಗೆ ಸಂಬಂಧಿಸಿದಂತೆ ವ್ಯವಹಾರ ಸನ್ನದ್ಧ ನೀತಿʼ ಕುರಿತ ಅಧಿವೇಶನದೊಂದಿಗೆ ಸಮ್ಮೇಳನ ಅಂತ್ಯಗೊಳ್ಳಲಿದೆ. ಭೂ ನಿರ್ವಹಣೆ ಆಧುನೀಕರಣದಲ್ಲಿ ಉತ್ತಮ ಪದ್ಧತಿಗಳ ಹಂಚಿಕೆಯು ಪಾರದರ್ಶಕತೆ, ದಕ್ಷತೆ ಮತ್ತು ನಮ್ಮ ನಾಗರಿಕರಿಗೆ ಭೂಮಿಗೆ ಸಂಬಂಧಿಸಿದ ಸೇವೆಗಳ ತಡೆರಹಿತ ವಿತರಣೆಯಲ್ಲಿ ಏಕರೂಪತೆಯನ್ನು ತರಲು ನೆರವಾಗುತ್ತದೆ ಎಂದರು.

ಜಂಟಿ ಕಾರ್ಯದರ್ಶಿ ಶ್ರೀ ಸೋನ್ಮೋನಿ ಬೋರಾ ಅವರು ಮಾತನಾಡಿ, ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ ಭೂ ದಾಖಲೆಗಳ ಡಿಜಿಟಲೀಕರಣ ಕಾರ್ಯವು ಮುಕ್ತಾಯದ ಹಂತದಲ್ಲಿದ್ದು, ಅಲ್ಲಿಯೂ ಈಗ ಕೆಲಸ ಪ್ರಾರಂಭವಾಗಿದೆ ಎಂದು ಹೇಳಿದರು. ಭೂ ನಿರ್ವಹಣೆಯ ಆಧುನೀಕರಣದಲ್ಲಿ ಉತ್ತಮ ಕಾರ್ಯವಿಧಾನಗಳನ್ನು ಹಂಚಿಕೊಳ್ಳುವುದು ಈ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದ ಉದ್ದೇಶವಾಗಿದೆ. ಜೊತೆಗೆ, ನಿಯಮಗಳನ್ನು ಹೆಚ್ಚು ನಾಗರಿಕ ಕೇಂದ್ರಿತವಾಗಿಸುವುದು ಮತ್ತು ಸಾರ್ವಜನಿಕ ಸೇವೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುವುದು ಹೇಗೆ ಎಂಬುದರ ಕುರಿತು ಚರ್ಚೆಗಳು ನಡೆಯಲಿವೆ ಎಂದು ಅವರು ಒತ್ತಿ ಹೇಳಿದರು.

ಕೇಂದ್ರ ಮತ್ತು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು, ವಿವಿಧ ಸಂಸ್ಥೆಗಳಿಗೆ ಸೇರಿದ ಭಾಷಣಕಾರರು, ಮಧ್ಯಸ್ಥಗಾರರನ್ನು ಒಳಗೊಂಡಂತೆ ವೈವಿಧ್ಯಮಯ ಭಾಗಿದಾರರನ್ನು ಎರಡು ದಿನಗಳ ಈ ಸಮ್ಮೇಳನವು ಒಟ್ಟುಗೂಡಿಸುತ್ತದೆ. ಇದು ಜ್ಞಾನ ಮತ್ತು ಆಲೋಚನೆಗಳ ವಿನಿಮಯಕ್ಕೆ, ನಾವೀನ್ಯತೆಗಳ ಪ್ರದರ್ಶನಕ್ಕೆ, ಯಶಸ್ವಿ ಅಧ್ಯಯನಗಳನ್ನು ಹಂಚಿಕೊಳ್ಳಲು, ಪರಿಹಾರಗಳನ್ನು ಗುರುತಿಸಲು, ಭವಿಷ್ಯದ ಕಾರ್ಯತಂತ್ರಗಳನ್ನು ಚರ್ಚಿಸಲು ಹಾಗೂ ವಿವಿಧ ವಿಷಯಗಳ ಬಗ್ಗೆ ಪರಸ್ಪರ ಕಲಿಯಲು ಅವಕಾಶಗಳನ್ನು ಒದಗಿಸುತ್ತದೆ. ಕಂದಾಯ ಮತ್ತು ನೋಂದಣಿ ಇಲಾಖೆಗಳು ಹಾಗೂ ಐಜಿಆರ್ ಅಧಿಕಾರಿಗಳನ್ನು ಒಳಗೊಂಡ ರಾಜ್ಯ ನಿಯೋಗಗಳು, ಪ್ರಮುಖ ಕೇಂದ್ರ ಸಚಿವಾಲಯಗಳು / ಇಲಾಖೆಗಳು ಮತ್ತು ಇತರ ಮಧ್ಯಸ್ಥಗಾರರು ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ.
*******
(Release ID: 2004403)
Visitor Counter : 76