ರಾಷ್ಟ್ರಪತಿಗಳ ಕಾರ್ಯಾಲಯ
ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರದಾನ ಮಾಡಿದ ರಾಷ್ಟ್ರಪತಿ
Posted On:
22 JAN 2024 10:03PM by PIB Bengaluru
ನವದೆಹಲಿಯಲ್ಲಿ ಇಂದು (ಜನವರಿ 22, 2024) ನಡೆದ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು 19 ಮಕ್ಕಳಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು ಪ್ರದಾನ ಮಾಡಿದರು. ಶೌರ್ಯ, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ನಾವೀನ್ಯತೆ ವಿಭಾಗಗಳಲ್ಲಿ ತಲಾ ಒಂದು ಮಗು; ಸಮಾಜ ಸೇವೆ ವಿಭಾಗದಲ್ಲಿ ನಾಲ್ಕು ಮಕ್ಕಳು; ಕ್ರೀಡಾ ವಿಭಾಗದಲ್ಲಿ ಐದು ಮಕ್ಕಳು ಮತ್ತು ಕಲೆ ಮತ್ತು ಸಂಸ್ಕೃತಿ ವಿಭಾಗದಲ್ಲಿ ಏಳು ಮಕ್ಕಳು ಪ್ರಶಸ್ತಿಯನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿ ಅವರು, ಈ ಪ್ರಶಸ್ತಿ ಪ್ರದಾನ ಸಮಾರಂಭವು ಯುವ ಸಾಧಕರ ಅದ್ಭುತ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಪ್ರೋತ್ಸಾಹಿಸಲು ಒಂದು ಅವಕಾಶವಾಗಿದೆ ಮತ್ತು ಮಕ್ಕಳ ಸಾಧನೆಗಳನ್ನು ಗುರುತಿಸುವ ಒಂದು ಅವಕಾಶವೂ ಆಗಿದೆ ಎಂದು ಹೇಳಿದ ಅವರು ಎಲ್ಲಾ ಮಕ್ಕಳ ಅತ್ಯುತ್ತಮ ಕೆಲಸವನ್ನು ಶ್ಲಾಘಿಸಿದರು.
ನಮ್ಮ ಮಕ್ಕಳಲ್ಲಿ ಬಹುಮುಖ ಪ್ರತಿಭೆ ಇದೆ ಎಂದು ರಾಷ್ಟ್ರಪತಿ ಹೇಳಿದರು. ಸಮರ್ಪಣೆ ಮತ್ತು ಕಠಿಣ ಪರಿಶ್ರಮದ ಮೂಲಕ ತಮ್ಮದೇ ಆದ ಗುರುತನ್ನು ರಚಿಸುವ ಅಪಾರ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ. ಅವರಿಗೆ ಸರಿಯಾದ ದಿಕ್ಕನ್ನು ತೋರಿಸುವುದು ನಮ್ಮ ಕರ್ತವ್ಯ, ಇದರಿಂದ ಅವರು ತಮ್ಮ ಪ್ರತಿಭೆ ಮತ್ತು ಶಕ್ತಿಯನ್ನು ಸರಿಯಾಗಿ ಬಳಸಿಕೊಳ್ಳಬಹುದು.
ಇಂದು ಭಾರತವು ಹೆಚ್ಚಿನ ಸಂಖ್ಯೆಯ ಯುವಕರ ರೂಪದಲ್ಲಿ ಅಮೂಲ್ಯವಾದ ಸಂಪನ್ಮೂಲವನ್ನು ಹೊಂದಿದೆ. ಈ ಸಂಪನ್ಮೂಲವು ಭಾರತದ ಪ್ರಗತಿಯಲ್ಲಿ ಮಾತ್ರವಲ್ಲದೆ ಇಡೀ ವಿಶ್ವದ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಬಹುದು. ನಾವು ನಮ್ಮ ಯುವಕರನ್ನು ತಂತ್ರಜ್ಞಾನವನ್ನು ಬಳಸಲು ಸಮರ್ಥರನ್ನಾಗಿ ಮಾಡಬೇಕಾಗಿದೆ. ನಾವೀನ್ಯತೆ ಮತ್ತು ಉದ್ಯಮಶೀಲತೆಗಾಗಿ ಅವರನ್ನು ಪ್ರೋತ್ಸಾಹಿಸಬೇಕಾಗಿದೆ. ಆಗ ಮಾತ್ರ ಅವರು ವೇಗವಾಗಿ ಬದಲಾಗುತ್ತಿರುವ ಈ ಜಗತ್ತಿನಲ್ಲಿ ತಮ್ಮ ಸರಿಯಾದ ಸ್ಥಾನವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ರಾಷ್ಟ್ರಪತಿ ಹೇಳಿದರು.
ಇತ್ತೀಚಿನ ದಿನಗಳಲ್ಲಿ ಮಕ್ಕಳು ತಂತ್ರಜ್ಞಾನದ ಬಗ್ಗೆ ಆಸಕ್ತಿ ಹೊಂದಿದ್ದಾರೆ ಎಂದು ಹೇಳಿದ ರಾಷ್ಟ್ರಪತಿ , ಮಕ್ಕಳು ತಮ್ಮ ಶಿಕ್ಷಣಕ್ಕಾಗಿ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ. ಆದರೆ ತಂತ್ರಜ್ಞಾನವನ್ನು ಹೆಚ್ಚಾಗಿ ದುರುಪಯೋಗಪಡಿಸಿಕೊಳ್ಳಲಾಗುತ್ತದೆ. ಡೀಪ್ ಫೇಕ್ , ಆರ್ಥಿಕ ವಂಚನೆ, ಮಕ್ಕಳ ಶೋಷಣೆಯಂತಹ ಅನೇಕ ಅಪರಾಧಗಳು ತಂತ್ರಜ್ಞಾನದ ಮೂಲಕ ನಡೆಯುತ್ತಿವೆ. ಯಾವುದೇ ವಿಷಯದ ಬಗ್ಗೆ ಒಬ್ಬರ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ಸಾಮಾಜಿಕ ಮಾಧ್ಯಮವು ಪ್ರಬಲ ಮಾಧ್ಯಮವಾಗಿದೆ, ಆದರೆ ವದಂತಿಗಳನ್ನು ಹರಡಲು ಅದನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಒಂದು ತಪ್ಪು ಹೆಜ್ಜೆಯು ಅವರ ಭವಿಷ್ಯವನ್ನು ಅಪಾಯಕ್ಕೆ ತಳ್ಳುವುದರಿಂದ ಮಕ್ಕಳು ಜಾಗರೂಕರಾಗಿರಬೇಕು ಮತ್ತು ತಪ್ಪುಗಳಿಂದ ದೂರವಿರಬೇಕು ಎಂದು ಅವರು ಸಲಹೆ ನೀಡಿದರು.
ಯುವ ಪೀಳಿಗೆಯಲ್ಲಿ ದೈಹಿಕ ಚಟುವಟಿಕೆಗಳು ಕಡಿಮೆಯಾಗುತ್ತಿವೆ ಎಂದು ರಾಷ್ಟಪ್ರತಿ ಅವರು ಗಮನಿಸಿದರು. ಕಡಿಮೆ ದೈಹಿಕ ಚಟುವಟಿಕೆಗಳಿಂದಾಗಿ ಮಕ್ಕಳು ಮತ್ತು ಯುವಕರಲ್ಲಿ ಬಹಳ ಅಪರೂಪವಾಗಿದ್ದ ಅನೇಕ ರೋಗಗಳು ಇಂದು ಹೆಚ್ಚುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಯುವಕರು ಕನಿಷ್ಠ ಒಂದು ಕ್ರೀಡೆಯನ್ನು ಕಲಿಯಬೇಕು ಮತ್ತು ಅದರಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು. ಅವರು ಕ್ರೀಡೆಯನ್ನು ವೃತ್ತಿಯಾಗಿ ತೆಗೆದುಕೊಳ್ಳದಿರಬಹುದು, ಆದರೆ ಕ್ರೀಡೆಗಳು ಅವರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯಕರವಾಗಿರಿಸುತ್ತವೆ ಎಂದು ಅವರು ಹೇಳಿದರು. ಇದು ಅವರಲ್ಲಿ ತಂಡದ ಮನೋಭಾವವನ್ನು ಬೆಳೆಸುತ್ತದೆ.
ಮಕ್ಕಳು ಮತ್ತು ಯುವಕರು ನಮ್ಮ ದೇಶದ ಭವಿಷ್ಯದ ನಾಯಕರು ಎಂದು ರಾಷ್ಟ್ರಪತಿ ಅಭಿಪ್ರಾಯಪಟ್ಟರು. ಅವರಿಗೆ ಆಧುನಿಕ ಶಿಕ್ಷಣವನ್ನು ನೀಡುವುದರ ಜೊತೆಗೆ ಭಾರತೀಯ ಸಂಸ್ಕೃತಿ ಮತ್ತು ಜೀವನ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವುದು ನಮ್ಮ ಕರ್ತವ್ಯ. ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮನ ವಿಗ್ರಹದ ಪ್ರತಿಷ್ಠಾಪನೆಯನ್ನು ಉಲ್ಲೇಖಿಸಿದ ಅವರು, ಈ ಸಂದರ್ಭದಲ್ಲಿ, ಭಗವಾನ್ ರಾಮನ ಆದರ್ಶಗಳನ್ನು ಮತ್ತು ರಾಮಾಯಣದಲ್ಲಿ ವಿವರಿಸಿದ ಜೀವನ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ನಾವು ಸಂಕಲ್ಪ ಮಾಡಬೇಕು ಎಂದು ಹೇಳಿದರು.
ರಾಷ್ಟ್ರಪತಿಗಳ ಭಾಷಣವನ್ನು ನೋಡಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ
****
(Release ID: 1998848)
Visitor Counter : 145