ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮಹಾರಾಷ್ಟ್ರದ ನಾಸಿಕ್ ನಲ್ಲಿ 27ನೇ ʻರಾಷ್ಟ್ರೀಯ ಯುವ ಉತ್ಸವʼ ಉದ್ಘಾಟಿಸಿದ ಪ್ರಧಾನಿ


"ಸ್ವಾಮಿ ವಿವೇಕಾನಂದರು ಗುಲಾಮಗಿರಿಯ ಸಮಯದಲ್ಲಿ ದೇಶಕ್ಕೆ ಹೊಸ ಶಕ್ತಿ ಮತ್ತು ಉತ್ಸಾಹವನ್ನು ತುಂಬಿದರು"

"ರಾಮ ಮಂದಿರ ಪ್ರತಿಷ್ಠಾಪನೆಯ ಶುಭ ಸಂದರ್ಭದಲ್ಲಿ ದೇಶದ ಎಲ್ಲಾ ದೇವಾಲಯಗಳಲ್ಲಿ ಸ್ವಚ್ಛತಾ ಅಭಿಯಾನಗಳನ್ನು ನಡೆಸಿ"

"ಜಗತ್ತು ಭಾರತವನ್ನು ಹೊಸ ನುರಿತ ಶಕ್ತಿಯಾಗಿ ನೋಡುತ್ತಿದೆ"

"ಇಂದಿನ ಯುವಕರಿಗೆ ಇತಿಹಾಸವನ್ನು ಸೃಷ್ಟಿಸಲು, ಇತಿಹಾಸದಲ್ಲಿ ತಮ್ಮ ಹೆಸರನ್ನು ದಾಖಲಿಸಲು ಅವಕಾಶವಿದೆ"

"ಇಂದು, ದೇಶದ ಮನಸ್ಥಿತಿ ಮತ್ತು ಶೈಲಿಯು ಯೌವನದಿಂದ ತುಂಬಿದೆ"

ʻಅಮೃತ ಕಾಲʼದ ಆಗಮನವು ಭಾರತಕ್ಕೆ ಹೆಮ್ಮೆಯನ್ನು ತಂದಿದೆ. 'ವಿಕಸಿತ ಭಾರತ'ವನ್ನು ನಿರ್ಮಿಸುವ ನಿಟ್ಟಿನಲ್ಲಿ ಯುವಕರು ಈ ʻಅಮೃತ ಕಾಲʼದಲ್ಲಿ ಭಾರತವನ್ನು ಮುಂದೆ ಕೊಂಡೊಯ್ಯಬೇಕಾಗಿದೆ: ಪ್ರಧಾನಿ

"ಪ್ರಜಾಪ್ರಭುತ್ವದಲ್ಲಿ ಯುವಕರ ಹೆಚ್ಚಿನ ಭಾಗವಹಿಸುವಿಕೆಯಿಂದ ರಾಷ್ಟ್ರಕ್ಕೆ ಉತ್ತಮ ಭವಿಷ್ಯವನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ"

"ಮೊದಲ ಬಾರಿಗೆ ಮತ ಚಲಾಯಿಸುವವರು ಭಾರತದ ಪ್ರಜಾಪ್ರಭುತ್ವಕ್ಕೆ ಹೊಸ ಶಕ್ತಿ ಮತ್ತು ಬಲವನ್ನು ತರಬಹುದು"

"ಅಮೃತ ಕಾಲದ ಮುಂಬರುವ 25 ವರ್ಷಗಳ ಅವಧಿಯು ಯುವಕರ ಪಾಲಿಗೆ ಕರ್ತವ್ಯದ ಅವಧಿಯಾಗಿದೆ. ಯುವಕರು ತಮ್ಮ ಕರ್ತವ್ಯಗಳನ್ನು ಪರಮೋನ್ನತವಾಗಿ ಪರಿಗಣಿಸಿದಾಗ, ಸಮಾಜವು ಪ್ರಗತಿ ಹೊಂದುತ್ತದೆ ಮತ್ತು ದೇಶವೂ ಪ್ರಗತಿ ಹೊಂದುತ್ತದೆ

Posted On: 12 JAN 2024 2:44PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಹಾರಾಷ್ಟ್ರದ ನಾಸಿಕ್ ನಲ್ಲಿ 27ನೇ ʻರಾಷ್ಟ್ರೀಯ ಯುವ ಉತ್ಸವʼವನ್ನು ಉದ್ಘಾಟಿಸಿದರು. ಶ್ರೀ ಮೋದಿ ಅವರು ಸ್ವಾಮಿ ವಿವೇಕಾನಂದ ಮತ್ತು ರಾಜಮಾತಾ ಜಿಜಾವು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ರಾಜ್ಯ ತಂಡದಿಂದ ಪಥಸಂಚಲನ ಹಾಗೂ ಜಿಮ್ನಾಸ್ಟಿಕ್ಸ್, ಮಲ್ಲಕಂಬ, ಯೋಗಾಸನ ಮತ್ತು ರಾಷ್ಟ್ರೀಯ ಯುವ ಉತ್ಸವ ಗೀತೆಯನ್ನು ಒಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪ್ರಧಾನಿಯವರು ಸಾಕ್ಷಿಯಾದರು. 'ವಿಕಸಿತ ಭಾರತ@2047- ಯುವಕರಿಗಾಗಿ, ಯುವಕರಿಂದʼ ಎಂಬ ವಿಷಯಾಧಾರಿತವಾಗಿ ಈ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಇಂದು ಭಾರತದ ಯುವ ಶಕ್ತಿಯ ಸಮಯವಾಗಿದೆ. ಗುಲಾಮಗಿರಿಯ ಅವಧಿಯಲ್ಲಿ ದೇಶಕ್ಕೆ ಹೊಸ ಶಕ್ತಿ ಮತ್ತು ಉತ್ಸಾಹದಿಂದ ತುಂಬಿದ ಸ್ವಾಮಿ ವಿವೇಕಾನಂದರ ಮಹಾನ್ ವ್ಯಕ್ತಿತ್ವಕ್ಕೆ ಈ ಸಮಯವು ಸಮರ್ಪಿತವಾಗಿದೆ ಎಂದರು. ಸ್ವಾಮಿ ವಿವೇಕಾನಂದರ ಜನ್ಮ ಜಯಂತಿಯಂದು ಆಚರಿಸಲಾಗುವ ʻರಾಷ್ಟ್ರೀಯ ಯುವ ದಿನʼದ ಸಂದರ್ಭದಲ್ಲಿ ಶ್ರೀ ಮೋದಿ ಅವರು ಎಲ್ಲ ಯುವಕರಿಗೆ ಶುಭ ಕೋರಿದರು. ಭಾರತದ ಮಹಿಳಾ ಶಕ್ತಿಯ ಸಂಕೇತವಾದ ರಾಜಮಾತಾ ಜೀಜಾಬಾಯಿ ಅವರ ಜನ್ಮ ದಿನಾಚರಣೆಯನ್ನು ಅವರು ಉಲ್ಲೇಖಿಸಿದರು ಮತ್ತು ಈ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ ಉಪಸ್ಥಿತಿತರಿರಲು ತಮಗೆ ದೊರೆತ ಅವಕಾಶಕ್ಕಾಗಿ ಕೃತಜ್ಞತೆ ಸಲ್ಲಿಸಿದರು.

ಮಹಾರಾಷ್ಟ್ರದ ನೆಲವು ಅನೇಕ ಮಹಾನ್ ವ್ಯಕ್ತಿಗಳನ್ನು ಸೃಷ್ಟಿಸಿದೆ. ಇದು ಇಲ್ಲಿನ ಸದ್ಗುಣಶೀಲ ಮತ್ತು ಶ್ರೇಷ್ಠ ಮಣ್ಣಿನ ಪರಿಣಾಮ ಎಂದರೆ ಕಾಕತಾಳೀಯವಾಗಲಾರದು ಎಂದು ಪ್ರಧಾನಿ ಮೋದಿ ಹೇಳಿದರು. ರಾಜಮಾತಾ ಜೀಜಾಬಾಯಿಯಂತಹ ಮಹಾನ್ ವ್ಯಕ್ತಿಗಳ ಮೂಲಕ ಈ ನೆಲವು ಛತ್ರಪತಿ ಶಿವಾಜಿಗೆ ಜನ್ಮ ನೀಡಿತು, ದೇವಿ ಅಹಲ್ಯಾಬಾಯಿ ಹೋಳ್ಕರ್ ಮತ್ತು ರಮಾಬಾಯಿ ಅಂಬೇಡ್ಕರ್ ಅವರಂತಹ ಮಹಾನ್ ಮಹಿಳಾ ನಾಯಕರನ್ನು ಮತ್ತು ಲೋಕಮಾನ್ಯ ತಿಲಕ್, ವೀರ್ ಸಾವರ್ಕರ್, ಅನಂತ್ ಕನ್ಹೇರೆ, ದಾದಾಸಾಹೇಬ್ ಪೋಟ್ನಿಸ್ ಮತ್ತು ಚಾಪೇಕರ್ ಬಂಧು ಅವರಂತಹ ಮಹಾನ್ ನಾಯಕರನ್ನು ಸೃಷ್ಟಿಸಿತು ಎಂದು ಪ್ರಧಾನಿ ಹೇಳಿದರು. "ಭಗವಾನ್ ಶ್ರೀ ರಾಮನು ನಾಸಿಕ್ನ ಪಂಚವಟಿ ನೆಲದಲ್ಲಿ ಸಾಕಷ್ಟು ಸಮಯ  ನೆಲೆಸಿದ್ದನು," ಎಂದು ಮಹಾಪುರುಷರ ಭೂಮಿಗೆ ನಮಸ್ಕರಿಸುತ್ತಾ ಪ್ರಧಾನಿ ಹೇಳಿದರು. ಈ ವರ್ಷದ ಜನವರಿ 22ಕ್ಕೆ ಮೊದಲು ಸ್ವಚ್ಛತಾ ಅಭಿಯಾನವನ್ನು ನಡೆಸುವಂತೆ ಹಾಗೂ ದೇಶಾದ್ಯಂತ ದೇವಾಲಯಗಳನ್ನು ಶುದ್ಧೀಕರಿಸುವಮತೆ ತಾವು ನೀಡಿದ ಕರೆಯನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ನಾಸಿಕ್ನ ಶ್ರೀ ಕಲಾರಾಮ್ ದೇವಸ್ಥಾನದಲ್ಲಿ ದರ್ಶನ ಮತ್ತು ಪೂಜೆ ನೆರವೇರಿಸಿದ್ದನ್ನು ಉಲ್ಲೇಖಿಸಿದರು. ಶೀಘ್ರದಲ್ಲೇ ಉದ್ಘಾಟನೆಯಾಗಲಿರುವ ಶ್ರೀ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನಾ ಸಮಾರಂಭಕ್ಕೂ ಮುನ್ನ ದೇಶದ ಎಲ್ಲಾ ದೇವಾಲಯಗಳು ಮತ್ತು ಯಾತ್ರಾ ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನಗಳನ್ನು ನಡೆಸುವ ಅಗತ್ಯವನ್ನು ಅವರು ಪುನರುಚ್ಚರಿಸಿದರು.

ಯುವಶಕ್ತಿಗೆ ಪರಮೋನ್ನತ ಸ್ಥಾನ ನೀಡುವ ಭಾರತದ ಸಂಪ್ರದಾಯವನ್ನು ಒತ್ತಿ ಹೇಳಿದ ಪ್ರಧಾನಿ ಮೋದಿ ಅವರು, ಶ್ರೀ ಅರಬಿಂದೋ ಮತ್ತು ಸ್ವಾಮಿ ವಿವೇಕಾನಂದರನ್ನು ಉಲ್ಲೇಖಿಸಿ, ಭಾರತವು ವಿಶ್ವದ ಅಗ್ರ 5 ಆರ್ಥಿಕತೆಗಳಲ್ಲಿ ಪ್ರವೇಶಿಸಲು ಯುವ ಶಕ್ತಿಯೇ ಕಾರಣ ಎಂದು ಶ್ಲಾಘಿಸಿದರು. ಭಾರತವು ಅಗ್ರ 3 ನವೋದ್ಯಮ ಪರಿಸರ ವ್ಯವಸ್ಥೆಗಳಲ್ಲಿ ಒಂದಾಗಿದ್ದು, ದಾಖಲೆ ಸಂಖ್ಯೆಯ ಪೇಟೆಂಟ್ಗಳನ್ನು ಹೊಂದಿದೆ.  ರಾಷ್ಟ್ರದ ಯುವ ಶಕ್ತಿಯ ಅಭಿವ್ಯಕ್ತಿಯೆಂಬಂತೆ ಪ್ರಮುಖ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಅವರು ಉಲ್ಲೇಖಿಸಿದರು.

'ಅಮೃತ ಕಾಲ'ದ ಪ್ರಸ್ತುತ ಕ್ಷಣವು ಭಾರತದ ಯುವಕರಿಗೆ ಒಂದು ವಿಶಿಷ್ಟ ಕ್ಷಣವಾಗಿದೆ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು. ಸರ್. ಎಂ.ವಿಶ್ವೇಶ್ವರಯ್ಯ, ಮೇಜರ್ ಧ್ಯಾನ್ ಚಂದ್, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಬಟುಕೇಶ್ವರ್ ದತ್, ಮಹಾತ್ಮಾ ಫುಲೆ, ಸಾವಿತ್ರಿಬಾಯಿ ಫುಲೆ ಅವರಂತಹ ಮಹಾನ್ ವ್ಯಕ್ತಿಗಳ ಯುಗಪ್ರವರ್ತಕ ಕೊಡುಗೆಗಳನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, 'ಅಮೃತ ಕಾಲ'ದ ಸಂದರ್ಭದಲ್ಲಿ ಈಗಿನ ಯುವಕರು ಇದೇ ರೀತಿಯ ಜವಾಬ್ದಾರಿಗಳನ್ನು ಹೊಂದಿದ್ದಾರೆ ಎಂದು ನೆನಪಿಸಿದರು. ರಾಷ್ಟ್ರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಶ್ರಮಿಸುವಂತೆ ಅವರು ಮನವಿ ಮಾಡಿದರು. ನಿಮಗೆ ದೊರೆತಿರುವ ಈ ವಿಶಿಷ್ಟ ಅವಕಾಶದ ಹಿನ್ನೆಲೆಯಲ್ಲಿ, "ನಾನು ನಿಮ್ಮನ್ನು ಭಾರತದ ಇತಿಹಾಸದಲ್ಲೇ ಅತ್ಯಂತ ಅದೃಷ್ಟಶಾಲಿ ಪೀಳಿಗೆ ಎಂದು ಪರಿಗಣಿಸುತ್ತೇನೆ. ಭಾರತದ ಯುವಕರು ಈ ಗುರಿಯನ್ನು ಸಾಧಿಸಬಹುದು ಎಂದು ನನಗೆ ವಿಶ್ವಾಸವಿದೆ", ಎಂದು ಪ್ರಧಾನಿ ಹೇಳಿದರು. ʻಮೈ-ಭಾರತ್ʼ ಪೋರ್ಟಲ್ನಲ್ಲಿ ಯುವಕರ ನೋಂದಣಿಯ ವೇಗದ ಬಗ್ಗೆ ಪ್ರಧಾನಿ ತೃಪ್ತಿ ವ್ಯಕ್ತಪಡಿಸಿದರು. 75 ದಿನಗಳಿಗಿಂತ ಕಡಿಮೆ ಅವಧಿಯಲ್ಲಿ, 1.10 ಕೋಟಿ ಯುವಕರು ಪೋರ್ಟಲ್ನಲ್ಲಿ ನೋಂದಾಯಿಸಿಕೊಂಡಿದ್ದಾರೆ.

ಪ್ರಸ್ತುತ ಸರ್ಕಾರವು ಅವಕಾಶಗಳ ಮಹಾಪೂರವನ್ನೇ ಹರಿಸಿದ್ದು, 10 ವರ್ಷಗಳ ಅಧಿಕಾರಾವಧಿ ಪೂರೈಸುವ ಹೊತ್ತಿಗೆ ಭಾರತದ ಯುವಕರಿಗೆ ಇದ್ದ ಎಲ್ಲಾ ಅಡೆತಡೆಗಳನ್ನು ಅಳಿಸಿಹಾಕಿದೆ ಎಂದು ಪ್ರಧಾನಿಯವರು ಹೇಳಿದರು. ಶಿಕ್ಷಣ, ಉದ್ಯೋಗ, ಉದ್ಯಮಶೀಲತೆ, ಉದಯೋನ್ಮುಖ ಕ್ಷೇತ್ರಗಳು, ನವೋದ್ಯಮಗಳು, ಕೌಶಲ್ಯ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಆಧುನಿಕ ಮತ್ತು ಕ್ರಿಯಾತ್ಮಕ ಪರಿಸರ ವ್ಯವಸ್ಥೆಯ ಅಭಿವೃದ್ಧಿಯನ್ನು ಅವರು ಉಲ್ಲೇಖಿಸಿದರು. ʻಹೊಸ ಶಿಕ್ಷಣ ನೀತಿʼಯ ಅನುಷ್ಠಾನ, ಆಧುನಿಕ ಕೌಶಲ್ಯ ಪರಿಸರ ವ್ಯವಸ್ಥೆಯ ಅಭಿವೃದ್ಧಿ, ಕಲಾವಿದರು ಮತ್ತು ಕರಕುಶಲ ವಲಯಕ್ಕಾಗಿ ʻಪಿಎಂ ವಿಶ್ವಕರ್ಮ ಯೋಜನೆʼ ಅನುಷ್ಠಾನ, ʻಪಿಎಂ ಕೌಶಲ್ ವಿಕಾಸ್ ಯೋಜನೆʼ ಮೂಲಕ ಕೋಟ್ಯಂತರ ಯುವಕರ ಕೌಶಲ್ಯಾಭಿವೃದ್ಧಿ ಮತ್ತು ದೇಶದಲ್ಲಿ ಹೊಸ ʻಐಐಟಿʼ ಮತ್ತು ʻಎನ್ಐಟಿʼಗಳ ಸ್ಥಾಪನೆಯ ಬಗ್ಗೆಯೂ ಅವರು ಪ್ರಸ್ತಾಪಿಸಿದರು. ತಮ್ಮ ಕೌಶಲ್ಯಗಳನ್ನು ಜಗತ್ತಿಗೆ ಪ್ರದರ್ಶಿಸಲು ಬಯಸುವ ಯುವಕರಿಗೆ ತರಬೇತಿ ನೀಡುವ ಬಗ್ಗೆ ಮಾತನಾಡಿದ ಶ್ರೀ ಮೋದಿ, "ಜಗತ್ತು ಭಾರತವನ್ನು ಹೊಸ ನುರಿತ ಶಕ್ತಿಯಾಗಿ ನೋಡುತ್ತಿದೆ," ಎಂದು ಹೇಳಿದರು. ಫ್ರಾನ್ಸ್, ಜರ್ಮನಿ, ಬ್ರಿಟನ್, ಆಸ್ಟ್ರೇಲಿಯಾ, ಇಟಲಿ, ಆಸ್ಟ್ರಿಯಾ ಮುಂತಾದ ದೇಶಗಳೊಂದಿಗೆ ಸರ್ಕಾರ ಮಾಡಿಕೊಂಡ ಸಾರಿಗೆ ಸಂಬಂಧಿತ ಒಪ್ಪಂದಗಳು ದೇಶದ ಯುವಕರಿಗೆ ಭಾರಿ ಪ್ರಯೋಜನವನ್ನು ನೀಡುತ್ತಿವೆ ಎಂದು ಅವರು ಉಲ್ಲೇಖಿಸಿದರು.

"ಇಂದು, ಯುವಕರಿಗೆ ಅವಕಾಶಗಳ ಹೊಸ ದಿಗಂತವನ್ನು ತೆರೆಯಲಾಗುತ್ತಿದೆ ಮತ್ತು ಅದಕ್ಕಾಗಿ ಸರ್ಕಾರ ಪೂರ್ಣ ಶಕ್ತಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ" ಎಂದು ಪ್ರಧಾನಿ ಮೋದಿ ಮಾಹಿತಿ ನೀಡಿದರು. ಡ್ರೋನ್, ಅನಿಮೇಷನ್, ಗೇಮಿಂಗ್, ದೃಶ್ಯ ಪರಿಣಾಮಗಳು, ಪರಮಾಣು, ಬಾಹ್ಯಾಕಾಶ ಮತ್ತು ಮ್ಯಾಪಿಂಗ್ ಕ್ಷೇತ್ರಗಳಲ್ಲಿ ಸೃಷ್ಟಿಸಲಾಗುತ್ತಿರುವ ಸಕ್ರಿಯ ಪರಿಸರದ ಬಗ್ಗೆ ಅವರು ಉಲ್ಲೇಖಿಸಿದರು. ಪ್ರಸ್ತುತ ಸರ್ಕಾರದ ಅಡಿಯಲ್ಲಿ ಅದ್ಭುತ ವೇಗದಲ್ಲಿ ಸಾಗುತ್ತಿರುವ ಪ್ರಗತಿಯನ್ನು ಒತ್ತಿ ಹೇಳಿದ ಪ್ರಧಾನಿ, ಹೆದ್ದಾರಿಗಳು, ಆಧುನಿಕ ರೈಲುಗಳು, ವಿಶ್ವ ದರ್ಜೆಯ ವಿಮಾನ ನಿಲ್ದಾಣಗಳು, ಲಸಿಕೆ ಪ್ರಮಾಣಪತ್ರಗಳಂತಹ ಡಿಜಿಟಲ್ ಸೇವೆಗಳನ್ನು ಉಲ್ಲೇಖಿಸಿದರು. ಕೈಗೆಟುಕುವ ದರದಲ್ಲಿ ದೊರೆಯುತ್ತಿರುವ ಡೇಟಾ, ದೇಶದ ಯುವಕರಿಗೆ ಹೊಸ ಮಾರ್ಗಗಳನ್ನು ತೆರೆಯುತ್ತಿವೆ ಎಂದು ಹೇಳಿದರು.
"ಇಂದು, ದೇಶದ ಮನಸ್ಥಿತಿ ಮತ್ತು ಶೈಲಿಯುವ ಯೌವನದಿಂದ ತುಂಬಿದೆ," ಎಂದ ಪ್ರಧಾನಮಂತ್ರಿಯವರು, ಇಂದಿನ ಯುವಕರು ಹಿಂದೆ ಬೀಳುವುದಿಲ್ಲ ಬದಲಿಗೆ ಮುನ್ನುಗ್ಗುತ್ತಾರೆ ಎಂಬುದನ್ನು ಒತ್ತಿ ಹೇಳಿದರು. ಯಶಸ್ವಿ ʻಚಂದ್ರಯಾನ-3ʼ ಮತ್ತು ʻಆದಿತ್ಯ ಎಲ್-1ʼ ಕಾರ್ಯಾಚರಣೆಗಳ ಉದಾಹರಣೆಗಳನ್ನು ನೀಡುವ ಮೂಲಕ ಭಾರತವು ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದೆ ಎಂದು ಪ್ರಧಾನಿ ಹೇಳಿದರು. ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಯುದ್ಧನೌಕೆ ʻಐಎನ್ಎಸ್ ವಿಕ್ರಾಂತ್ʼ ಮತ್ತು ʻತೇಜಸ್ʼ ಯುದ್ಧವಿಮಾನಗಳು ಹಾಗೂ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಸಾಂಪ್ರದಾಯಿಕ ʻಕುಶಾಲತೋಪುʼ ಸಿಡಿಸಲು ಬಳಸಲಾಗುವ 'ಮೇಡ್ ಇನ್ ಇಂಡಿಯಾ' ಫಿರಂಗಿಗಳ ಬಗ್ಗೆ ಅವರು ಉಲ್ಲೇಖಿಸಿದರು. ಇವೆಲ್ಲವುಗಳ ನಡುವೆ, ಸಣ್ಣ ಅಂಗಡಿಗಳಿಂದ ಹಿಡಿದು ದೊಡ್ಡ ಶಾಪಿಂಗ್ ಮಾಲ್ಗಳವರೆಗೆ ʻಯುಪಿಐʼ ಅಥವಾ ಡಿಜಿಟಲ್ ಪಾವತಿಗಳ ವ್ಯಾಪಕ ಬಳಕೆಯನ್ನು ಶ್ರೀ ಮೋದಿ ಉಲ್ಲೇಖಿಸಿದರು. "ಅಮೃತ ಕಾಲದ ಆಗಮನವು ಭಾರತಕ್ಕೆ ಹೆಮ್ಮೆಯನ್ನು  ತಂದಿದೆ," ಎಂದು ಶ್ರೀ ಮೋದಿ ಹೇಳಿದರು. ಭಾರತವನ್ನು 'ವಿಕಸಿತ ಭಾರತ'ವನ್ನಾಗಿ ಮಾಡಲು ಈ ʻಅಮೃತ ಕಾಲʼದಲ್ಲಿ ಭಾರತವನ್ನು ಮುಂದೆ ಕೊಂಡೊಯ್ಯುವಂತೆ ಯುವಕರಿಗೆ ಕರೆ ನೀಡಿದರು.

ಇದು ಯುವ ಪೀಳಿಗೆಗೆ, ಅವರ ಕನಸುಗಳಿಗೆ ಹೊಸ ರೆಕ್ಕೆಗಳನ್ನು ನೀಡುವ ಸಮಯ ಎಂದು ಬಣ್ಣಿಸಿದ ಪ್ರಧಾನಿ, "ಈಗ ನಾವು ಸವಾಲುಗಳನ್ನು ಜಯಿಸಬೇಕಾಗಿಲ್ಲ. ಬದಲಿಗೆ ನಮಗೆ ನಾವೇ ಹೊಸ ಸವಾಲುಗಳನ್ನು ಒಡ್ಡಿಕೊಳ್ಳಬೇಕಿದೆ,ʼʼ ಎಂದು ಹೇಳಿದರು. ಈ ನಿಟ್ಟಿನಲ್ಲಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವುದು, ಜಗತ್ತಿನ 3ನೇ ಅತಿದೊಡ್ಡ ಆರ್ಥಿಕತೆಯಾಗುವುದು, ವಿಶ್ವದ ಪ್ರಮುಖ ಉತ್ಪಾದನಾ ಕೇಂದ್ರವಾಗುವುದು ಮುಂತಾದ ಸವಾಲುಗಳು ಹಾಗೂ ಹವಾಮಾನ ಬದಲಾವಣೆಯನ್ನು ತಡೆಗಟ್ಟಲು ಕೆಲಸ ಮಾಡುವುದು, ನೈಸರ್ಗಿಕ ಕೃಷಿಯನ್ನು ಉತ್ತೇಜಿಸುವುದು ಮುಂತಾದ ಜವಾಬ್ದಾರಿಗಳನ್ನು ಪ್ರಧಾನಿ ಪಟ್ಟಿ ಮಾಡಿದರು. 

ಯುವ ಪೀಳಿಗೆಯ ಮೇಲಿನ ತಮ್ಮ ನಂಬಿಕೆಗೆ ಕಾರಣವೇನು ಎಂಬುದನ್ನು ವಿವರಿಸಿದ ಶ್ರೀ ಮೋದಿ, "ಈ ಅವಧಿಯಲ್ಲಿ, ಗುಲಾಮಗಿರಿಯ ಒತ್ತಡ ಮತ್ತು ಪ್ರಭಾವದಿಂದ ಸಂಪೂರ್ಣವಾಗಿ ಮುಕ್ತವಾಗಿರುವ ದೇಶದಲ್ಲಿ ಯುವ ಪೀಳಿಗೆಯನ್ನು ಸಜ್ಜುಗೊಳಿಸಲಾಗುತ್ತಿದೆ. ಈ ಪೀಳಿಗೆಯ ಯುವಕರು ಆತ್ಮವಿಶ್ವಾಸದಿಂದ-ʻಅಭಿವೃದ್ಧಿಯ ಜೊತೆ ಜೊತೆಗೆ ಪರಂಪರೆʼ ಎಂದು ಹೇಳುತ್ತಿದ್ದಾರೆ,ʼʼ ಎಂದರು. ಯೋಗ ಮತ್ತು ಆಯುರ್ವೇದದ ಮೌಲ್ಯವನ್ನು ಜಗತ್ತು ಗುರುತಿಸುತ್ತಿದೆ. ಭಾರತೀಯ ಯುವಕರು ಯೋಗ ಮತ್ತು ಆಯುರ್ವೇದದ ಬ್ರಾಂಡ್ ಅಂಬಾಸಿಡರ್ ಗಳಾಗುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು. 

ತಮ್ಮ ಅಜ್ಜ-ಅಜ್ಜಿಯರು ಅವರ ಕಾಲದಲ್ಲಿ ಸೇವಿಸುತ್ತಿದ್ದ ಬಾಜ್ರಾ ರೊಟ್ಟಿ, ಕೊಡೋ-ಕುಟ್ಕಿ, ರಾಗಿ-ಜೋಳದ ಬಗ್ಗೆ ವಿಚಾರಿಸಿ ತಿಳಿಯುವಂತೆ ಯುವಕರನ್ನು ಒತ್ತಾಯಿಸಿದ ಪ್ರಧಾನಿ, “ಗುಲಾಮಗಿರಿಯ ಮನಸ್ಥಿತಿಯೇ ಈ ಆಹಾರವನ್ನು ಬಡತನದೊಂದಿಗೆ ನಂಟು ಮಾಡಲು ಮತ್ತು ಭಾರತೀಯ ಅಡುಗೆಮನೆಗಳಿಂದ ಈ ಆಹಾರ ಧಾನ್ಯಗಳು ಹೊರಬರಲು ಕಾರಣವಾಯಿತು,ʼʼ ಎಂದು ಗಮನಸೆಳೆದರು. ಸರ್ಕಾರವು ಸಿರಿಧಾನ್ಯಗಳು ಮತ್ತು ಒರಟು ಧಾನ್ಯಗಳಿಗೆ ʻಸೂಪರ್ಫುಡ್ʼ ಎಂಬ ಹೊಸ ಗುರುತನ್ನು ನೀಡಿದೆ, ಆ ಮೂಲಕ ಭಾರತೀಯ ಮನೆಗಳಲ್ಲಿ ʻಶ್ರೀಅನ್ನʼ(ಸಿರಿಧಾನ್ಯ) ಪುನರಾಗಮನ ಮಾಡಿದೆ ಎಂದು ಅವರು ಒತ್ತಿಹೇಳಿದರು. "ಈಗ ನೀವು ಈ ಧಾನ್ಯಗಳ ಪ್ರಚಾರ ರಾಯಭಾರಿಗಳಾಗಬೇಕು. ಆಹಾರ ಧಾನ್ಯಗಳಿಂದ ನಿಮ್ಮ ಆರೋಗ್ಯವೂ ಸುಧಾರಿಸುತ್ತದೆ ಮತ್ತು ದೇಶದ ಸಣ್ಣ ರೈತರೂ ಪ್ರಯೋಜನ ಪಡೆಯುತ್ತಾರೆ", ಎಂದು ಶ್ರೀ ಮೋದಿ ಹೇಳಿದರು.

ರಾಜಕೀಯದ ಮಾಧ್ಯಮದ ಮೂಲಕ ರಾಷ್ಟ್ರದ ಸೇವೆ ಮಾಡುವಂತೆ ಪ್ರಧಾನಿ ಯುವಕರಿಗೆ ಕರೆ ನೀಡಿದರು. ಇತ್ತೀಚಿನ ದಿನಗಳಲ್ಲಿ ವಿಶ್ವ ನಾಯಕರು ಭಾರತದ ಮೇಲೆ ಇಟ್ಟಿರುವ ಭರವಸೆಯನ್ನು ಅವರು ಉಲ್ಲೇಖಿಸಿದರು. "ಈ ಭರವಸೆ, ಆಕಾಂಕ್ಷೆಗೆ ಒಂದು ಕಾರಣವಿದೆ - ಭಾರತವು ಪ್ರಜಾಪ್ರಭುತ್ವದ ತಾಯಿ. ಪ್ರಜಾಪ್ರಭುತ್ವದಲ್ಲಿ ಯುವಕರ ಭಾಗವಹಿಸುವಿಕೆ ಹೆಚ್ಚಾದಷ್ಟೂ ರಾಷ್ಟ್ರದ ಭವಿಷ್ಯ ಉತ್ತಮವಾಗಿರುತ್ತದೆ," ಎಂದು ಹೇಳಿದರು. ಯುವಕರ ಭಾಗವಹಿಸುವಿಕೆಐಿಂದ ವಂಶಪಾರಂಪರ್ಯ ರಾಜಕೀಯವನ್ನು ದುರ್ಬಲಗೊಳಿಸಬಹುದು ಎಂದು ಪ್ರಧಾನಿ ಸಲಹೆ ನೀಡಿದರು. ಮತದಾನದ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವಂತೆ ಅವರು ಮನವಿ ಮಾಡಿದರು. ಮೊದಲ ಬಾರಿಯ ಮತದಾರರ ಬಗ್ಗೆ ಮಾತನಾಡಿದ ಅವರು, "ಮೊದಲ ಬಾರಿಗೆ ಮತ ಚಲಾಯಿಸುವವರು ನಮ್ಮ ಪ್ರಜಾಪ್ರಭುತ್ವಕ್ಕೆ ಹೊಸ ಶಕ್ತಿ ಮತ್ತು ಬಲವನ್ನು ತರಬಹುದು," ಎಂದು ಹೇಳಿದರು.

"ಮುಂಬರುವ 25 ವರ್ಷಗಳ ʻಅಮೃತ ಕಾಲʼದ ಅವಧಿಯು ನಿಮಗೆ ಕರ್ತವ್ಯದ ಅವಧಿಯಾಗಿದೆ," ಎಂದು ಪ್ರಧಾನಿ ಯುವಕರಿಗೆ ಹೇಳಿದರು. "ನೀವು ನಿಮ್ಮ ಕರ್ತವ್ಯಗಳನ್ನು ಪರಮೋನ್ನತವಾಗಿ ಪರಿಗಣಿಸಿದಾಗ, ಸಮಾಜವು ಪ್ರಗತಿ ಹೊಂದುತ್ತದೆ ಮತ್ತು ದೇಶವೂ ಪ್ರಗತಿ ಸಾಧಿಸುತ್ತದೆ," ಎಂದು ಪ್ರಧಾನಿ ಹೇಳಿದರು. ಕೆಂಪು ಕೋಟೆಯಿಂದ ತಾವು ಮಾಡಿದ ಮನವಿಯನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಸ್ಥಳೀಯ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸುವಂತೆ, ʻಮೇಡ್ ಇನ್ ಇಂಡಿಯಾʼ ಉತ್ಪನ್ನಗಳನ್ನು ಮಾತ್ರ ಬಳಸುವಂತೆ ಮನವಿ ಮಾಡಿದರು. ಇದೇ ವೇಳೆ, ಮಾದಕ ಪದಾರ್ಥಗಳು ಮತ್ತು ವ್ಯಸನಗಳಿಂದ ದೂರವಿರುವಂತೆ; ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳ ಹೆಸರಿನಲ್ಲಿ ನಿಂದನಾತ್ಮಕ ಪದಗಳನ್ನು ಬಳಸುವುದರ ವಿರುದ್ಧ ಧ್ವನಿ ಎತ್ತುವಂತೆ ಹಾಗೂ ಅಂತಹ ದುರ್ನಡತೆಗಳನ್ನು ಕೊನೆಗೊಳಿಸುವಂತೆ ಯುವಕರನ್ನು ಒತ್ತಾಯಿಸಿದರು.

ಭಾಷಣವನ್ನು ಮುಕ್ತಾಯಗೊಳಿಸುsವ ಮುನ್ನ ಪ್ರಧಾನಮಂತ್ರಿಯವರು, ಭಾರತದ ಯುವಕರು ತಮ್ಮ ಪಾಲಿನ ಪ್ರತಿಯೊಂದು ಜವಾಬ್ದಾರಿಯನ್ನೂ ಸಂಪೂರ್ಣ ಶ್ರದ್ಧೆ ಮತ್ತು ಸಾಮರ್ಥ್ಯದಿಂದ ನಿರ್ವಹಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. "ಬಲಿಷ್ಠ, ಸಮರ್ಥ ಮತ್ತು ಶಕ್ತಿಯುತ ಭಾರತದ ಕನಸನ್ನು ನನಸಾಗಿಸಲು ನಾವು ಬೆಳಗಿಸಿದ ದೀಪವು ʻಅಮರ ಜ್ಯೋತಿʼಯಾಗುತ್ತದೆ ಮತ್ತು ಈ ʻಅಮರ ಯುಗʼದಲ್ಲಿ ಜಗತ್ತನ್ನು ಬೆಳಗಿಸುತ್ತದೆ," ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಅವರು ತಮ್ಮ ಮಾತು ಮುಕ್ತಾಯಗೊಳಿಸಿದರು. 

ಮಹಾರಾಷ್ಟ್ರ ಮುಖ್ಯಮಂತ್ರಿ ಶ್ರೀ ಏಕನಾಥ್ ಶಿಂಧೆ, ಮಹಾರಾಷ್ಟ್ರದ ಉಪಮುಖ್ಯಮಂತ್ರಿಗಳಾದ ಶ್ರೀ ದೇವೇಂದ್ರ ಫಡ್ನವೀಸ್ ಮತ್ತು ಶ್ರೀ ಅಜಿತ್ ಪವಾರ್; ಕೇಂದ್ರ ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಹಾಗೂ ಕೇಂದ್ರ ಕ್ರೀಡಾ ಮತ್ತು ಯುವಜನ ವ್ಯವಹಾರಗಳ ಸಹಾಯಕ ಸಚಿವ ಶ್ರೀ ನಿಶಿತ್ ಪ್ರಾಮಾಣಿಕ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ದೇಶದ ಅಭಿವೃದ್ಧಿಯ ಪಯಣದಲ್ಲಿ ಯುವಕರನ್ನು ಪ್ರಮುಖ ಭಾಗವನ್ನಾಗಿ ಮಾಡಲು ಪ್ರಧಾನಿಯವರು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಮತ್ತೊಂದು ಪ್ರಯತ್ನದ ಅಂಗವಾಗಿ, ಪ್ರಧಾನ ಮಂತ್ರಿಯವರು ನಾಸಿಕ್ನಲ್ಲಿ 27ನೇ ʻರಾಷ್ಟ್ರೀಯ ಯುವ ಉತ್ಸವʼವನ್ನು (ಎನ್ವೈಎಫ್) ಉದ್ಘಾಟಿಸಿದರು.

ಪ್ರತಿವರ್ಷ ಜನವರಿ 12ರಿಂದ 16ರವರೆಗೆ ʻರಾಷ್ಟ್ರೀಯ ಯುವ ಉತ್ಸವʼವನ್ನು ಆಯೋಜಿಸಲಾಗುತ್ತದೆ. ಜನವರಿ 12 ಸ್ವಾಮಿ ವಿವೇಕಾನಂದರ ಜನ್ಮದಿನವಾದ ಅಂದು ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಈ ವರ್ಷ ಮಹಾರಾಷ್ಟ್ರ ರಾಜ್ಯವು ಈ ಉತ್ಸವದ ಆತಿಥ್ಯ ವಹಿಸಿದೆ. ಈ ಬಾರಿಯ ಕಾರ್ಯಕ್ರಮದ ವಿಷಯವಸ್ತು: ʻವಿಕಸಿತ ಭಾರತ@2047:ಯುವಕರಿಗಾಗಿ, ಯುವಕರಿಂದʼ. 

ʻಏಕ್ ಭಾರತ-ಶ್ರೇಷ್ಠ ಭಾರತʼದ ಆಶಯದಡಿ ಭಾರತದ ವಿವಿಧ ಪ್ರದೇಶಗಳ ಯುವಕರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಹಾಗೂ ಏಕೀಕೃತ ರಾಷ್ಟ್ರದ ಅಡಿಪಾಯವನ್ನು ಬಲಪಡಿಸಲು ಒಂದು ವೇದಿಕೆಯನ್ನು ರಚಿಸಲು ಈ ಯುವ ಉತ್ಸವವು ಪ್ರಯತ್ನಿಸುತ್ತದೆ. ನಾಸಿಕ್ನಲ್ಲಿ ನಡೆಯಲಿರುವ ಉತ್ಸವದಲ್ಲಿ ದೇಶದ ವಿವಿಧ ಭಾಗಗಳಿಂದ ಸುಮಾರು 7500 ಯುವ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಸಾಂಸ್ಕೃತಿಕ ಪ್ರದರ್ಶನಗಳು, ದೇಶೀಯ ಕ್ರೀಡೆಗಳು, ಡಿಕ್ಲಾಮೇಷನ್ ಮತ್ತು ವಿಷಯಾಧಾರಿತ ಪ್ರಸ್ತುತಿ, ಯುವ ಕಲಾವಿದರ ಶಿಬಿರ, ಪೋಸ್ಟರ್ ತಯಾರಿಕೆ, ಕಥೆ ಬರೆಯುವುದು, ಯುವ ಸಮಾವೇಶ, ಆಹಾರ ಮೇಳ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಇದರ ಭಾಗವಾಗಿ ಆಯೋಜಿಸಲಾಗಿದೆ.

 

***


(Release ID: 1995583) Visitor Counter : 147