ಪ್ರಧಾನ ಮಂತ್ರಿಯವರ ಕಛೇರಿ

ಲಕ್ಷದ್ವೀಪದ ʻಅಗತ್ತಿ ವಿಮಾನ ನಿಲ್ದಾಣʼದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಪ್ರಧಾನಿ ಮೋದಿ ಅವರ ಭಾಷಣ


"ಲಕ್ಷದ್ವೀಪದ ಅಭಿವೃದ್ಧಿಗೆ ಭಾರತ ಸರ್ಕಾರ ಬದ್ಧವಾಗಿದೆ"

Posted On: 02 JAN 2024 5:25PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲಕ್ಷದ್ವೀಪದ ʻಅಗತ್ತಿ ವಿಮಾನ ನಿಲ್ದಾಣʼಕ್ಕೆ ಆಗಮಿಸಿದ ಬೆನ್ನಲ್ಲೇ, ಸಾರ್ವಜನಿಕ ಸಮಾರಂಭ ಉದ್ದೇಶಿಸಿ ಮಾತನಾಡಿದರು. ಪ್ರಧಾನಮಂತ್ರಿಯವರು ಲಕ್ಷದ್ವೀಪದಲ್ಲೇ ರಾತ್ರಿ ತಂಗಲಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಲಕ್ಷದ್ವೀಪವು ಒದಗಿಸುವ ಅಪಾರ ಸಾಧ್ಯತೆಗಳ ಬಗ್ಗೆ ಉಲ್ಲೇಖಿಸಿದರು. ಸ್ವಾತಂತ್ರ್ಯದ ನಂತರ ಲಕ್ಷದ್ವೀಪವು ಎದುರಿಸಿದ ದೀರ್ಘಕಾಲದ ನಿರ್ಲಕ್ಷ್ಯದ ಬಗ್ಗೆ ಗಮನಸೆಳೆದರು. ಹಡಗು ಈ ಪ್ರದೇಶದ ಜೀವನಾಡಿಯಾಗಿದ್ದರೂ ಇಲ್ಲಿರುವ ದುರ್ಬಲ ಬಂದರು ಮೂಲಸೌಕರ್ಯದ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದರು. ಇದು ಶಿಕ್ಷಣ, ಆರೋಗ್ಯ ಮತ್ತು ಪೆಟ್ರೋಲ್ ಮತ್ತು ಡೀಸೆಲ್‌ಗೂ ಅನ್ವಯಿಸುತ್ತದೆ ಎಂದು ಅವರು ಹೇಳಿದರು. ಈಗಿನ ಸರ್ಕಾರವು ಲಕ್ಷದ್ವೀಪದ ಅಭಿವೃದ್ಧಿಯ ಕಾರ್ಯವನ್ನು ಶ್ರದ್ಧೆಯಿಂದ ಕೈಗೆತ್ತಿಕೊಂಡಿದೆ ಎಂದು ಅವರು ಮಾಹಿತಿ ನೀಡಿದರು. "ಈ ಎಲ್ಲಾ ಸವಾಲುಗಳನ್ನು ನಮ್ಮ ಸರ್ಕಾರ ನಿರ್ಮೂಲನೆ ಮಾಡುತ್ತಿದೆ" ಎಂದು ಅವರು ಹೇಳಿದರು.

ಕಳೆದ 10 ವರ್ಷಗಳಲ್ಲಿ ಅಗತ್ತಿಯಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳು ಪೂರ್ಣಗೊಂಡಿವೆ ಎಂದು ಮಾಹಿತಿ ನೀಡಿದ ಪ್ರಧಾನಿ ಮೋದಿ, ವಿಶೇಷವಾಗಿ ಮೀನುಗಾರರಿಗೆ ಆಧುನಿಕ ಸೌಲಭ್ಯಗಳನ್ನು ಸೃಷ್ಟಿಸಿರುವುದನ್ನು ಉಲ್ಲೇಖಿಸಿದರು. ಈಗ ಅಗತ್ತಿಯಲ್ಲಿ ವಿಮಾನ ನಿಲ್ದಾಣ ಮತ್ತು ʻಐಸ್ ಪ್ಲಾಂಟ್ʼ ಇದೆ ಎಂಬ ಅಂಶವನ್ನೂ ಅವರು ಉಲ್ಲೇಖಿಸಿದರು. ಈ ಕಾರಣದಿಂದಾಗಿ, ಸಮುದ್ರಾಹಾರ ರಫ್ತು ಮತ್ತು ಸಮುದ್ರಾಹಾರ ಸಂಸ್ಕರಣೆಗೆ ಸಂಬಂಧಿಸಿದ ವಲಯಕ್ಕೆ ಹೊಸ ಸಾಧ್ಯತೆಗಳು ಸೃಷ್ಟಿಯಾಗುತ್ತಿವೆ ಎಂದು ಪ್ರಧಾನಿ ಹೇಳಿದರು. ಲಕ್ಷದ್ವೀಪದಿಂದ ʻಟ್ಯೂನಾʼ ಮೀನುಗಳ ರಫ್ತಿನ ಆರಂಭವನ್ನು ಪ್ರಸ್ತಾಪಿಸಿದ ಅವರು, ಇದು ಲಕ್ಷದ್ವೀಪದ ಮೀನುಗಾರರ ಆದಾಯವನ್ನು ಹೆಚ್ಚಿಸಲು ದಾರಿ ಮಾಡಿಕೊಟ್ಟಿದೆ ಎಂದರು.

ಇಂದಿನ ಅಭಿವೃದ್ಧಿ ಯೋಜನೆಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಲಕ್ಷದ್ವೀಪದ ವಿದ್ಯುತ್ ಮತ್ತು ಇತರ ಇಂಧನ ಅಗತ್ಯಗಳನ್ನು ಪೂರೈಸಲು ಸೌರ ವಿದ್ಯುತ್‌ ಸ್ಥಾವರ ಹಾಗೂ ವಾಯುಯಾನ ಇಂಧನ ಡಿಪೋ ಉದ್ಘಾಟನೆಯನ್ನು ಪ್ರಸ್ತಾಪಿಸಿದರು. ಅಗತ್ತಿ ದ್ವೀಪದ ಎಲ್ಲಾ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕದ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿರುವ ಬಗ್ಗೆ ಮಾಹಿತಿ ನೀಡಿದ ಪ್ರಧಾನಿ, ಬಡವರಿಗೆ ಮನೆಗಳು, ಶೌಚಾಲಯಗಳು, ವಿದ್ಯುತ್ ಮತ್ತು ಅಡುಗೆ ಅನಿಲವನ್ನು ಖಾತರಿಪಡಿಸುವ ಸರ್ಕಾರದ ಪ್ರಯತ್ನಗಳನ್ನು ಪುನರುಚ್ಚರಿಸಿದರು. ಲಕ್ಷದ್ವೀಪದ ಜನರಿಗಾಗಿ ಹೆಚ್ಚಿನ ಅಭಿವೃದ್ಧಿ ಯೋಜನೆಗಳನ್ನು ಒದಗಿಸುವ ನಿಟ್ಟಿನಲ್ಲಿ ಕವರತ್ತಿಯಲ್ಲಿ ನಾಳೆ ನಿಗದಿಯಾಗಿರುವ ಕಾರ್ಯಕ್ರಮದ ಬಗ್ಗೆ ಪರಸ್ತಾಪಿಸಿದರು. "ಅಗತ್ತಿ ಸೇರಿದಂತೆ ಇಡೀ ಲಕ್ಷದ್ವೀಪದ ಅಭಿವೃದ್ಧಿಗೆ ಭಾರತ ಸರ್ಕಾರ ಸಂಪೂರ್ಣ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದೆ" ಎಂದು ಹೇಳುವ ಮೂಲಕ ಪ್ರಧಾನಿ ಶ್ರೀ ಮೋದಿ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.  

ಹಿನ್ನೆಲೆ

ಲಕ್ಷದ್ವೀಪಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು 1150 ಕೋಟಿ ರೂ.ಗೂ ಅಧಿಕ ಮೌಲ್ಯದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ರಾಷ್ಟ್ರಕ್ಕೆ ಸಮರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಕ್ರಾಂತಿಕಾರಿ ಉಪಕ್ರಮದ ಭಾಗವಾಗಿ, ʻಕೊಚ್ಚಿ-ಲಕ್ಷದ್ವೀಪ ದ್ವೀಪಗಳ ನಡುವೆ ಜಲಾಂತರ್ಗಾಮಿ ಆಪ್ಟಿಕಲ್ ಫೈಬರ್ ಸಂಪರ್ಕʼ(ಕೆಎಲ್ಐ–ಎಸ್ಒಎಫ್‌ಸಿ) ಯೋಜನೆಯನ್ನು ಪ್ರಾರಂಭಿಸುವ ಮೂಲಕ ಲಕ್ಷದ್ವೀಪ ದ್ವೀಪ ಸಮೂಹದಲ್ಲಿ ನಿಧಾನಗತಿಯ ಇಂಟರ್ನೆಟ್ ವೇಗದ ಸಮಸ್ಯೆಯನ್ನು ನಿವಾರಿಸಲು ಪ್ರಧಾನಿ ನಿರ್ಧರಿಸಿದ್ದರು.  2020ರ ಆಗಸ್ಟ್‌ನಲ್ಲಿ ಕೆಂಪು ಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಇದನ್ನು ಘೋಷಿಸಿದ್ದರು. ಈ ಯೋಜನೆಯು ಈಗ ಪೂರ್ಣಗೊಂಡಿದೆ ಮತ್ತು ಇದನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ. ಇದು ಇಂಟರ್ನೆಟ್ ವೇಗವನ್ನು 100 ಪಟ್ಟು (1.7 ಜಿಬಿಪಿಎಸ್ ನಿಂದ 200 ಜಿಬಿಪಿಎಸ್‌ಗೆ)ಹೆಚ್ಚಿಸಲು ನೆರವಾಗುತ್ತದೆ. ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಲಕ್ಷದ್ವೀಪವನ್ನು ʻಜಲಾಂತರ್ಗಾಮಿ ಆಪ್ಟಿಕ್ ಫೈಬರ್ ಕೇಬಲ್ʼ ಮೂಲಕ ಸಂಪರ್ಕಿಸಲಾಗಿದೆ. ವಿಶೇಷ ಜಲಾಂತರ್ಗಾಮಿ ʻಒಎಫ್‌ಸಿʼಯು ಲಕ್ಷದ್ವೀಪ ದ್ವೀಪಗಳಲ್ಲಿ ಸಂವಹನ ಮೂಲಸೌಕರ್ಯದಲ್ಲಿ ಗಮನಾರ್ಹ ಬದಲಾವಣೆಯನ್ನು ಖಾತರಿಪಡಿಸುವುದರ ಜೊತೆಗೆ ವೇಗ ಮತ್ತು ಹೆಚ್ಚು ವಿಶ್ವಾಸಾರ್ಹ ಇಂಟರ್ನೆಟ್ ಸೇವೆಗಳು, ಟೆಲಿಮೆಡಿಸಿನ್, ಇ-ಆಡಳಿತ, ಶೈಕ್ಷಣಿಕ ಉಪಕ್ರಮಗಳು, ಡಿಜಿಟಲ್ ಬ್ಯಾಂಕಿಂಗ್, ಡಿಜಿಟಲ್ ಕರೆನ್ಸಿ ಬಳಕೆ, ಡಿಜಿಟಲ್ ಸಾಕ್ಷರತೆ ಇತ್ಯಾದಿಗಳನ್ನು ಸುಗಮಗೊಳಿಸುತ್ತದೆ.

ಪ್ರಧಾನಮಂತ್ರಿಯವರು ʻಕದ್ಮತ್‌ʼನಲ್ಲಿ ಕಡಿಮೆ ತಾಪಮಾನದ ಉಷ್ಣ ಉಪ್ಪುನೀರು ಶುದ್ಧೀಕರಣ (ಎಲ್‌ಟಿಟಿಡಿ) ಸ್ಥಾವರವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಇದು ಪ್ರತಿದಿನ 1.5 ಲಕ್ಷ ಲೀಟರ್ ಶುದ್ಧ ಕುಡಿಯುವ ನೀರನ್ನು ಉತ್ಪಾದಿಸುತ್ತದೆ. ಪ್ರಧಾನಮಂತ್ರಿಯವರು ʻಅಗತ್ತಿʼ ಮತ್ತು ʻಮಿನಿಕೋಯ್ʼ ದ್ವೀಪಗಳ ಎಲ್ಲ ಮನೆಗಳಿಗೆ ನಲ್ಲಿ ಸಂಪರ್ಕಗಳು ಯೋಜನೆಯನ್ನು (ಎಫ್‌ಎಚ್‌ಟಿಸಿ) ಉದ್ಘಾಟನೆ ಮಾಡಲಿದ್ದಾರೆ. ಲಕ್ಷದ್ವೀಪವು ಹವಳದ ದ್ವೀಪವಾಗಿರುವುದರಿಂದ, ಬಹಳ ಸೀಮಿತ ಅಂತರ್ಜಲ ಲಭ್ಯತೆಯನ್ನು ಹೊಂದಿದೆ. ಹೀಗಾಗಿ ಇಲ್ಲಿ ಕುಡಿಯುವ ನೀರಿನ ಲಭ್ಯತೆ ಸದಾ ಸವಾಲಾಗಿ ಉಳಿದಿತ್ತು. ಹೊಸ ಕುಡಿಯುವ ಯೋಜನೆಗಳು ದ್ವೀಪಗಳ ಪ್ರವಾಸೋದ್ಯಮ ಸಾಮರ್ಥ್ಯವನ್ನು ಬಲಪಡಿಸಲು ಸಹಾಯ ಮಾಡುತ್ತವೆ, ಇದು ಸ್ಥಳೀಯ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಸಹ ನೆರವಾಗುತ್ತದೆ.

ರಾಷ್ಟ್ರಕ್ಕೆ ಸಮರ್ಪಣೆ ಮಾಡಲಿರುವ ಇತರ ಯೋಜನೆಗಳಲ್ಲಿ ಕವರತ್ತಿಯಲ್ಲಿರುವ ಸೌರ ವಿದ್ಯುತ್ ಸ್ಥಾವರವೂ ಸೇರಿದೆ, ಇದು ಲಕ್ಷದ್ವೀಪದ ಮೊದಲ ಬ್ಯಾಟರಿ ಬೆಂಬಲಿತ ಸೌರ ವಿದ್ಯುತ್ ಯೋಜನೆಯಾಗಿದೆ. ಡೀಸೆಲ್ ಆಧಾರಿತ ವಿದ್ಯುತ್ ಉತ್ಪಾದನಾ ಸ್ಥಾವರದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸಹ ಇದು ಸಹಾಯ ಮಾಡುತ್ತದೆ. ಜೊತೆಗೆ, ಕವರತ್ತಿಯಲ್ಲಿರುವ ʻಇಂಡಿಯಾ ರಿಸರ್ವ್ ಬೆಟಾಲಿಯನ್ʼ(ಐಆರ್‌ಬಿಎನ್) ಸಂಕೀರ್ಣದಲ್ಲಿ ಹೊಸ ಆಡಳಿತಾತ್ಮಕ ಬ್ಲಾಕ್ ಮತ್ತು 80 ಪುರುಷರ ಬ್ಯಾರಕ್‌ಗಳನ್ನೂ ಶ್ರೀ ಮೋದಿ ಅವರು ಉದ್ಘಾಟಿಸಲಿದ್ದಾರೆ.

ಕಲಾಪನಿಯಲ್ಲಿರುವ ಪ್ರಾಥಮಿಕ ಆರೋಗ್ಯ ಸೇವಾ ಕೇಂದ್ರದ ನವೀಕರಣ ಮತ್ತು ಆಂಡ್ರೋತ್, ಚೆತ್ಲಾತ್‌, ಕದ್ಮತ್‌, ಅಗತ್ತಿ ಮತ್ತು ಮಿನಿಕೋಯ್ ದ್ವೀಪಗಳಲ್ಲಿ ಐದು ಮಾದರಿ ಅಂಗನವಾಡಿ ಕೇಂದ್ರಗಳ (ನಂದ್‌ ಘರ್) ನಿರ್ಮಾಣಕ್ಕೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

****



(Release ID: 1992708) Visitor Counter : 84