ವಾರ್ತಾ ಮತ್ತು ಪ್ರಸಾರ ಸಚಿವಾಲಯ
2023 ರಲ್ಲಿ ಭಾರತದಲ್ಲಿ 35 ವಿದೇಶಿ ಚಲನಚಿತ್ರ ಯೋಜನೆಗಳಿಗೆ ಅನುಮತಿ: ಕೇಂದ್ರ ಸಚಿವ ಶ್ರೀ ಅನುರಾಗ್ ಠಾಕೂರ್
Posted On:
14 DEC 2023 8:16PM by PIB Bengaluru
ಈ ವರ್ಷದ ನವೆಂಬರ್ 2023ರವರೆಗೆ ಭಾರತದಲ್ಲಿ ಚಲನಚಿತ್ರ ನಿರ್ಮಾಣಕ್ಕಾಗಿ 35 ವಿದೇಶಿ ಚಲನಚಿತ್ರ ಯೋಜನೆಗಳಿಗೆ ಅನುಮತಿ ನೀಡಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಶ್ರೀ ಅನುರಾಗ್ ಠಾಕೂರ್ ಇಂದು ಸಂಸತ್ತಿಗೆ ಮಾಹಿತಿ ನೀಡಿದರು. 2022ರಲ್ಲಿ 28 ಹಾಗೂ 2021ರಲ್ಲಿ 11 ಸಿನಿಮಾಗಳಿಗೆ ಅನುಮೋದನೆ ನೀಡಲಾಗಿತ್ತು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಭಾರತವನ್ನು ಅಂತರರಾಷ್ಟ್ರೀಯ ಚಲನಚಿತ್ರ ನಿರ್ಮಾಣಕ್ಕೆ ಆದ್ಯತೆಯ ತಾಣವನ್ನಾಗಿ ಮಾಡಲು ಹಾಗೂ ಉದ್ಯೋಗ ಸೃಷ್ಟಿ ಮತ್ತು ವಿದೇಶಿ ವಿನಿಮಯದ ಒಳಹರಿವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಸಚಿವರು ಸಂಸತ್ತಿಗೆ ಮಾಹಿತಿ ನೀಡಿದರು. ಈ ನಿಟ್ಟಿನಲ್ಲಿ 01.04.2022 ರಿಂದ ಜಾರಿಗೆ ಬರುವಂತೆ ʻಆಡಿಯೋ-ವಿಶುವಲ್ ಕೋ-ಪ್ರೊಡಕ್ಷನ್ ಒಪ್ಪಂದʼದ ಅಡಿಯಲ್ಲಿ ಚಲನಚಿತ್ರಗಳ ಸಹ-ನಿರ್ಮಾಣ ಮತ್ತು ಭಾರತದಲ್ಲಿ ವಿದೇಶಿ ಚಲನಚಿತ್ರಗಳ ನಿರ್ಮಾಣಕ್ಕೆ ಉತ್ತೇಜನ ನೀಡಲು ಕೈಗೊಳ್ಳಲಾದ ಯೋಜನೆಗಳ ಬಗ್ಗೆ ಸಚಿವರು ತಿಳಿಸಿದರು.
ಹೆಚ್ಚಿನ ಅಂತರರಾಷ್ಟ್ರೀಯ ಯೋಜನೆಗಳನ್ನು ಆಕರ್ಷಿಸುವ ಸಲುವಾಗಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಪ್ರೋತ್ಸಾಹಕ ಯೋಜನೆಯನ್ನು ಹೆಚ್ಚಿಸಿದೆ ಜೊತೆಗೆ, ಮತ್ತಷ್ಟು ಸರಳೀಕರಿಸಿದೆ ಎಂದು ಅವರು ಮಾಹಿತಿ ನೀಡಿದರು. 20.11.2023ರಂದು ಘೋಷಿಸಲಾದ ಪರಿಷ್ಕೃತ ಪ್ರೋತ್ಸಾಹಕ ಯೋಜನೆಯ ಪ್ರಕಾರ, ವಿದೇಶಿ ಚಲನಚಿತ್ರ ನಿರ್ಮಾಣದ ಎಲ್ಲಾ ಅರ್ಹ ಯೋಜನೆಗಳು ಮತ್ತು ಆಡಿಯೋ ವಿಷುಯಲ್ ಸಹ-ನಿರ್ಮಾಣ ಒಪ್ಪಂದದ ಅಡಿಯಲ್ಲಿ ನಿರ್ಮಿಸಲಾಗುವ ಚಲನಚಿತ್ರಗಳು ಭಾರತದಲ್ಲಿ ಮಾಡಿದ ಅರ್ಹ ವೆಚ್ಚದ ಮೇಲೆ 30% ನಗದು ಪ್ರೋತ್ಸಾಹವನ್ನು ಪಡೆಯಬಹುದು. ವಿದೇಶಿ ಚಲನಚಿತ್ರಗಳ ಲೈವ್ ಶೂಟ್ ಸಂದರ್ಭದಲ್ಲಿ, 15% ಅಥವಾ ಅದಕ್ಕಿಂತ ಹೆಚ್ಚಿನ ಭಾರತೀಯ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು 5% ಬೋನಸ್ ಪಡೆಯಬಹುದು. ವಿದೇಶಿ ಚಲನಚಿತ್ರ ಚಿತ್ರೀಕರಣ ಮತ್ತು ಪೋಸ್ಟ್-ಪ್ರೊಡಕ್ಷನ್ ಕೆಲಸಗಳಿಗಾಗಿ, ಭಾರತೀಯ ಸಂಸ್ಕೃತಿ, ಪ್ರತಿಭೆ ಮತ್ತು ಪ್ರವಾಸಿ ತಾಣವನ್ನು ಉತ್ತೇಜಿಸಲು ಗಮನಾರ್ಹ ಭಾರತೀಯ ವಿಷಯವಸ್ತು (ಕಂಟೆಂಟ್) ಹೊಂದಿರುವ ಚಿತ್ರಕ್ಕೆ ಹೆಚ್ಚುವರಿ 5% ಸಹಾಯಧನ ಪಡೆಯಬಹುದು ಎಂದು ಅವರು ಹೇಳಿದರು.
ದೊಡ್ಡ ಬಜೆಟ್ ಅಂತರರಾಷ್ಟ್ರೀಯ ಚಲನಚಿತ್ರ ಯೋಜನೆಗಳನ್ನು ಆಕರ್ಷಿಸಲು ಪ್ರೋತ್ಸಾಹಧನದ ಗರಿಷ್ಠ ಮಿತಿಯನ್ನು ಹಿಂದಿನ 2.5 ಕೋಟಿ ರೂ.ಗಳಿಂದ 30 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ. ಜೊತೆಗೆ, ಗರಿಷ್ಠ ಶೇಕಡಾವಾರು ಪ್ರೋತ್ಸಾಹಧನವನ್ನು ಹಿಂದಿನ 35% ರಿಂದ 40% ಕ್ಕೆ ಹೆಚ್ಚಿಸಲಾಗಿದೆ ಎಂದು ಶ್ರೀ ಠಾಕೂರ್ ಅವರು ಸಂಸತ್ತಿಗೆ ಮಾಹಿತಿ ನೀಡಿದರು.
ಹಿನ್ನೆಲೆ
ವಿದೇಶದ ಚಲನಚಿತ್ರ ನಿರ್ಮಾಪಕರಿಗೆ ಆನ್‌ಲೈನ್ ಏಕಗವಾಕ್ಷಿ ಸೌಲಭ್ಯ ಒದಗಿಸಲು ಮತ್ತು ಅನುಮೋದನೆ ಕಾರ್ಯವಿಧಾನವನ್ನು ಸ್ಥಾಪಿಸಲು ʻಚಲನಚಿತ್ರ ಸೌಲಭ್ಯ ಕಚೇರಿʼಯು ನವೆಂಬರ್ 2018ರಲ್ಲಿ ತನ್ನ ವೆಬ್ ಪೋರ್ಟಲ್ www.ffo.gov.in ಪ್ರಾರಂಭಿಸಿತು. ಚಲನಚಿತ್ರ ನಿರ್ಮಾಪಕರು ತಮ್ಮ ವ್ಯಾಪ್ತಿಯಲ್ಲಿ ಭಾರತದ ಐತಿಹಾಸಿಕ ಮತ್ತು ಅಪ್ರತಿಮ ತಾಣಗಳಲ್ಲಿ ಚಿತ್ರೀಕರಣ ಮಾಡಲು ಅನುವು ಮಾಡಿಕೊಡಲು ʻಎಫ್ಎಫ್ಒʼ ವೆಬ್‌ಪೋರ್ಟಲ್ ಅನ್ನು ಭಾರತೀಯ ಪುರಾತತ್ವ ಸಮೀಕ್ಷೆ ಪೋರ್ಟಲ್ ಮತ್ತು ರೈಲ್ವೆ ಸಚಿವಾಲಯದೊಂದಿಗೆ ಸಂಯೋಜಿಸಲಾಗಿದೆ. ಚಿತ್ರೀಕರಣಕ್ಕೆ ಅನುಮತಿ ನೀಡಲು ಮತ್ತು ಆಯಾ ವ್ಯಾಪ್ತಿಯಲ್ಲಿ ಸುಗಮ ಚಿತ್ರೀಕರಣ ಖಾತರಿಪಡಿಸಲು ಕೇಂದ್ರ ಸರ್ಕಾರದ ಪ್ರಮುಖ ಸಚಿವಾಲಯಗಳು / ಇಲಾಖೆಗಳು ಮತ್ತು ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ನೋಡಲ್ ಅಧಿಕಾರಿಗಳ ಸಮಗ್ರ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ. ಅಂತರರಾಷ್ಟ್ರೀಯ ಚಲನಚಿತ್ರ ನಿರ್ಮಾಪಕರು, ಪಾತ್ರವರ್ಗ ಮತ್ತು ಸಿಬ್ಬಂದಿಗೆ, ಭಾರತದಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಒಂದು ವರ್ಷದವರೆಗೆ ಮಾನ್ಯವಾಗಿರುವ ಬಹು ಪ್ರವೇಶ ಸೌಲಭ್ಯ ಹೊಂದಿರುವ ʻಫಿಲ್ಮ್ ವೀಸಾʼವನ್ನು ಸಹ ಪರಿಚಯಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
******
(Release ID: 1986691)
Visitor Counter : 67