ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

​​​​​​​ಸೈಬರ್ ಸುರಕ್ಷಿತ ಭಾರತ್ ಉಪಕ್ರಮದ ಅಡಿಯಲ್ಲಿ ಎನ್ಇಜಿಡಿ, ಎಂಇಐಟಿವೈ ವತಿಯಿಂದ 40 ನೇ ಮುಖ್ಯ ಮಾಹಿತಿ ಭದ್ರತಾ ಅಧಿಕಾರಿಗಳ ಡೀಪ್ ಡೈವ್ ತರಬೇತಿ ಕಾರ್ಯಕ್ರಮ

Posted On: 05 DEC 2023 3:11PM by PIB Bengaluru

ಸೈಬರ್ ಅಪರಾಧದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಹೆಚ್ಚುತ್ತಿರುವ ಅಪಾಯವನ್ನು ಎದುರಿಸಲು ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಮುಖ್ಯ ಮಾಹಿತಿ ಭದ್ರತಾ ಅಧಿಕಾರಿಗಳು (ಸಿಐಎಸ್ಒಗಳು) ಮತ್ತು ಮುಂಚೂಣಿ ಮಾಹಿತಿ ತಂತ್ರಜ್ಞಾನ (ಐಟಿ) ಅಧಿಕಾರಿಗಳ ಸಾಮರ್ಥ್ಯವನ್ನು ಹೆಚ್ಚಿಸುವ ಧ್ಯೇಯದೊಂದಿಗೆ ಎಂಇಐಟಿವೈ ವತಿಯಿಂದ  ಸೈಬರ್ ಸುರಕ್ಷಿತ ಭಾರತ್ ಉಪಕ್ರಮವನ್ನು ರೂಪಿಸಲಾಗಿದೆ.  ಸಂಸ್ಥೆಗಳು ತಮ್ಮ ಡಿಜಿಟಲ್ ಮೂಲಸೌಕರ್ಯಗಳನ್ನು ರಕ್ಷಿಸಿಕೊಳ್ಳಬೇಕು ಮತ್ತು ಸೈಬರ್ ದಾಳಿಗಳನ್ನು ಎದುರಿಸಲು ಭವಿಷ್ಯಕ್ಕೆ ಸಿದ್ಧವಾಗಿರಬೇಕು ಎಂಬ ಪರಿಕಲ್ಪನೆಯನ್ನು ಇದು ಹೊಂದಿದೆ.

ರಾಷ್ಟ್ರೀಯ ಇ-ಆಡಳಿತ ವಿಭಾಗ (ಎನ್ಇಜಿಡಿ) ತನ್ನ ಸಾಮರ್ಥ್ಯ ವರ್ಧನೆ ಯೋಜನೆಯಡಿ 2023 ರ ಡಿಸೆಂಬರ್ 4 ರಿಂದ 8 ರವರೆಗೆ ಹೊಸದಿಲ್ಲಿಯ  ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಸಂಸ್ಥೆಯಲ್ಲಿ  ಬಿಹಾರ, ಹಿಮಾಚಲ ಪ್ರದೇಶ, ಕೇರಳ, ತೆಲಂಗಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಹೊಸದಿಲ್ಲಿಯ 31 ಪ್ರತಿನಿಧಿಗಳ ಪಾಲ್ಗೊಳ್ಳುವಿಕೆಯೊಂದಿಗೆ  40 ನೇ ಸಿಐಎಸ್ಒ ಡೀಪ್-ಡೈವ್ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದೆ.

ಕಾರ್ಯಕ್ರಮದ ಉದ್ಘಾಟನಾ ಅಧಿವೇಶನದಲ್ಲಿ ಅನೇಕ ಗಣ್ಯರು ಭಾಗವಹಿಸಿದ್ದರು ಎಂಇಐಟಿವೈಯ ಕಾರ್ಯದರ್ಶಿ ಶ್ರೀ ಎಸ್ ಕೃಷ್ಣನ್, ಡಿಜಿ-ಐಐಪಿಎ ಶ್ರೀ ಎಸ್.ಎನ್. ತ್ರಿಪಾಠಿ, ಮತ್ತು ಎಂಇಐಟಿವೈ, ಎನ್ಇಜಿಡಿ ಹಾಗು ಐಐಪಿಎಯ ಇತರ ಹಿರಿಯ ಅಧಿಕಾರಿಗಳು ಇವರಲ್ಲಿ ಸೇರಿದ್ದರು. ಹೆಚ್ಚುತ್ತಿರುವ ಸೈಬರ್ ದಾಳಿಗಳ ಪ್ರಸ್ತುತ ಸನ್ನಿವೇಶದಲ್ಲಿ ಸೈಬರ್ ಭದ್ರತೆಯ ಮಹತ್ವವನ್ನು ಒತ್ತಿ ಹೇಳಿದ ಶ್ರೀ ಎಸ್ ಕೃಷ್ಣನ್, ಡಿಜಿಟಲ್ ಯುಗದಲ್ಲಿನ ದೌರ್ಬಲ್ಯಗಳನ್ನು, ಸಂಭಾವ್ಯ ಅಪಾಯಗಳ ಸಾಧ್ಯತೆಯನ್ನು ಪ್ರಮುಖವಾಗಿ  ಪ್ರಸ್ತಾಪಿಸಿದರಲ್ಲದೆ ಯಾವುದೇ ಸಂಸ್ಥೆಯಲ್ಲಿ, ವಿಶೇಷವಾಗಿ ಮಾಹಿತಿ ಸುರಕ್ಷತೆಗಾಗಿ ಸೈಬರ್ ಭದ್ರತಾ ಕಾರ್ಯತಂತ್ರಗಳನ್ನು ಸಂಘಟಿಸುವಲ್ಲಿ ಸಿಐಎಸ್ಒ ಅಧಿಕಾರಿಗಳ ನಿರ್ಣಾಯಕ ಪಾತ್ರವನ್ನು ಒತ್ತಿ ಹೇಳಿದರು. ತಾಂತ್ರಿಕ ಪ್ರಗತಿಯ ಮುನ್ನಡೆಯಲ್ಲಿ ಸಿಐಎಸ್ಒಗಳ ಅನಿವಾರ್ಯ ಪಾತ್ರವನ್ನು ಅವರು ಉಲ್ಲೇಖಿಸಿದರು ಮತ್ತು ಸಿಐಎಸ್ಒ ಅಧಿಕಾರಿಗಳು ತಮ್ಮ ಸಂಸ್ಥೆಗಳ ಸೈಬರ್ ಭದ್ರತಾ ಪ್ರಯತ್ನಗಳನ್ನು ಬೆಂಬಲಿಸುವಾಗ ನವೀನವಾಗಿ ಮತ್ತು ಭವಿಷ್ಯಾತ್ಮಕವಾಗಿ ಯೋಚಿಸುವ ಅಗತ್ಯವಿದೆ ಎಂದರಲ್ಲದೆ ಈ ನಿಟ್ಟಿನಲಿ  ಮುಂದುವರಿಯುವಂತೆ ಅವರು ಅಧಿಕಾರಿಗಳನ್ನು ಪ್ರೋತ್ಸಾಹಿಸಿದರು. ತಮ್ಮ ಭಾಷಣದಲ್ಲಿ, 5 ಜಿ ಮತ್ತು 6 ಜಿ ಯಂತಹ ಉದಯೋನ್ಮುಖ ತಂತ್ರಜ್ಞಾನಗಳು ಒಡ್ಡುವ ಸವಾಲುಗಳನ್ನು ನಿಭಾಯಿಸುವಲ್ಲಿ  ದೂರಸಂಪರ್ಕ ಇಲಾಖೆಯ ಪಾತ್ರದ ಬಗ್ಗೆಯೂ  ಅವರು ಬೆಟ್ಟು ಮಾಡಿದರು.

ಸೈಬರ್ ಸ್ಥಿತಿಸ್ಥಾಪಕ ಪರಿಸರ ವ್ಯವಸ್ಥೆಯನ್ನು ನಿರ್ಮಾಣ ಮಾಡಲು  ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವುದು, ಸಾಮರ್ಥ್ಯವನ್ನು ನಿರ್ಮಾಣ ಮಾಡುವುದು ಮತ್ತು ಸರ್ಕಾರಿ ಇಲಾಖೆಗಳನ್ನು ಅದಕ್ಕೆ ಅನುಗುಣವಾಗಿ ಸಕ್ರಿಯಗೊಳಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ನಾಗರಿಕರಿಗೆ ವಿವಿಧ ಸರ್ಕಾರಿ ಸೇವೆಗಳ ಸಮಗ್ರ ವಿತರಣೆಗಾಗಿ ಡಿಜಿಟಲ್ ಇಂಡಿಯಾ ಕಾರ್ಯಕ್ರಮವನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಸೈಬರ್ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಭಾಗವಹಿಸುವವರಲ್ಲಿ  ಸೂಕ್ಷ್ಮತೆಯನ್ನು ಮೂಡಿಸಿ ಸಂವೇದನಾಶೀಲಗೊಳಿಸುವುದು ಮತ್ತು ಅವರನ್ನು ಆ ತಿಳುವಳಿಕೆಗೆ  ಸಜ್ಜುಗೊಳಿಸುವುದು, ಸೈಬರ್ ಭದ್ರತೆಯ ಬಗ್ಗೆ ಸಮಗ್ರ ಮಾಹಿತಿ ಮತ್ತು ಜ್ಞಾನ ಹಾಗು ತಿಳುವಳಿಕೆಯನ್ನು ಒದಗಿಸುವುದು, ಜಾಗೃತಿ ಮೂಡಿಸುವುದು, ಸಾಮರ್ಥ್ಯಗಳನ್ನು ನಿರ್ಮಿಸುವುದು ಮತ್ತು ಸರ್ಕಾರಿ ಇಲಾಖೆಗಳು ತಮ್ಮ ಸೈಬರ್ ನೈರ್ಮಲ್ಯ, ಸುರಕ್ಷತೆ ಮತ್ತು ಭದ್ರತೆಯನ್ನು ನೋಡಿಕೊಳ್ಳಲು ಅನುವು ಮಾಡಿಕೊಡುವುದು ಈ ಕಾರ್ಯಕ್ರಮದ ಉದ್ದೇಶಗಳಲ್ಲಿ ಸೇರಿದೆ.

2018ರ ಜೂನ್ ನಿಂದ  2023 ರ ಡಿಸೆಂಬರ್ ವರೆಗೆ, ಎನ್ಇಜಿಡಿ ಒಟ್ಟು 40  ತಂಡಗಳಲ್ಲಿ 1,523 ಕ್ಕೂ ಹೆಚ್ಚು ಸಿಐಎಸ್ಒಗಳು ಮತ್ತು ಮುಂಚೂಣಿ ಮಾಹಿತಿ ತಂತ್ರಜ್ಞಾನ (ಐಟಿ) ಅಧಿಕಾರಿಗಳಿಗೆ  ಸಿಐಎಸ್ಒ ಡೀಪ್-ಡೈವ್ (ಆಳವಾದ ಸಮಗ್ರ ತಿಳುವಳಿಕೆ ನೀಡುವ)  ತರಬೇತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾದ ಮಾದರಿಯಲ್ಲಿ ಆಯೋಜಿಸಿದೆ.

*****(Release ID: 1982973) Visitor Counter : 50


Read this release in: English , Urdu , Hindi , Telugu