ಗಣಿ ಸಚಿವಾಲಯ
azadi ka amrit mahotsav

​​​​​​​ನಿರ್ಣಾಯಕ ಮತ್ತು ತಂತ್ರಕೌಶಲ್ಯಯುತ ಖನಿಜಗಳ ಪ್ರಥಮ ಅವಧಿಯ ಹರಾಜನ್ನು ಪ್ರಾರಂಭಿಸಿದ ಗಣಿ ಸಚಿವಾಲಯ 


ದೇಶದಾದ್ಯಂತ ಹರಡಿರುವ ನಿರ್ಣಾಯಕ ಮತ್ತು ತಂತ್ರಕೌಶಲ್ಯಯುತ ಖನಿಜಗಳ ಇಪ್ಪತ್ತು ಬ್ಲಾಕ್‌ಗಳನ್ನು ಹರಾಜು ಮಾಡಲಾಗುವುದು

ನಿರ್ಣಾಯಕ ಖನಿಜಗಳು ಪ್ರಮುಖ ಕಾರ್ಯತಂತ್ರ ವಲಯಗಳ ಅಭಿವೃದ್ಧಿಗೆ ನಿರ್ಣಾಯಕವಾಗಿವೆ; ಭಾರತದ ಇಂಧನ ಪರಿವರ್ತನೆಯ ಪ್ರಯತ್ನಗಳೆಡೆ ಹರಾಜು ಪ್ರಕ್ರಿಯೆಯು ಒಂದು ಪ್ರಮುಖ ಉಪಕ್ರಮವಾಗಿದೆ

ಎರಡು ಹಂತದ ಆನ್‌ಲೈನ್ ಹರಾಜು ಪ್ರಕ್ರಿಯೆ ಪಾರದರ್ಶಕವಾಗಿ ಕೈಗೊಳ್ಳಲಾಗುತ್ತದೆ 

Posted On: 28 NOV 2023 12:31PM by PIB Bengaluru

ಗಣಿ ಸಚಿವಾಲಯವು ನವೆಂಬರ್ 29/2023 ರಂದು ನಿರ್ಣಾಯಕ ಮತ್ತು ತಂತ್ರಕೌಶಲ್ಯಯುತ ಖನಿಜಗಳ ಮೊದಲ ಕಂತಿನ ಹರಾಜನ್ನು ಪ್ರಾರಂಭಿಸಲಿದೆ. ಮುಖ್ಯ ಅತಿಥಿಯಾಗಿ, ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ, ಶ್ರೀ ಪ್ರಲ್ಹಾದ್ ಜೋಶಿಯವರು ನಿರ್ಣಾಯಕ ಖನಿಜಗಳ ಪ್ರಥಮ ಹರಾಜು ಪ್ರಕ್ರಿಯೆ ಪ್ರಕ್ರಿಯೆಯನ್ನು ಆರಂಭಿಸಲಿದ್ದಾರೆ. ಹರಾಜಾಗುತ್ತಿರುವ ನಿರ್ಣಾಯಕ ಮತ್ತು ತಂತ್ರಕೌಶಲ್ಯಯುತ ಖನಿಜಗಳ ಇಪ್ಪತ್ತು ಬ್ಲಾಕ್‌ಗಳು ದೇಶದಾದ್ಯಂತ ಹರಡಿವೆ. ಇದು ನಮ್ಮ ಆರ್ಥಿಕತೆಯನ್ನು ವೃದ್ಧಿಸುವ, ರಾಷ್ಟ್ರೀಯ ಭದ್ರತೆಯನ್ನು ವರ್ಧಿಸುವ ಮತ್ತು ಶುದ್ಧ ಇಂಧನದ ಭವಿಷ್ಯದೆಡೆ ನಮ್ಮ ಪರಿವರ್ತನೆಯನ್ನು ಬೆಂಬಲಿಸುವ ಪ್ರಮುಖ ಉಪಕ್ರಮವಾಗಿದೆ. 

ನಮ್ಮ ದೇಶದ ಆರ್ಥಿಕ ಅಭಿವೃದ್ಧಿ ಮತ್ತು ರಾಷ್ಟ್ರೀಯ ಭದ್ರತೆಗೆ ನಿರ್ಣಾಯಕ ಖನಿಜಗಳು ಅತ್ಯಗತ್ಯವಾಗಿವೆ. ಈ ಖನಿಜಗಳ ಲಭ್ಯತೆಯ ಕೊರತೆ ಅಥವಾ ಕೆಲವು ದೇಶಗಳಲ್ಲಿ ಅವುಗಳ ಹೊರತೆಗೆಯುವಿಕೆ ಅಥವಾ ಸಂಸ್ಕರಣೆಯ ಸಾಂದ್ರತೆಯು ಪೂರೈಕೆ ಸರಪಳಿಯಲ್ಲಿ ಅಡಚಣೆ ಉಂಟುಮಾಡಬಹುದು. ಲಿಥಿಯಂ, ಗ್ರ್ಯಾಫೈಟ್, ಕೋಬಾಲ್ಟ್, ಟೈಟಾನಿಯಂ ಮತ್ತು ಅಪರೂಪದ ಭೂಮಿಯ ಅಂಶಗಳ (REE) ನಂತಹ ಖನಿಜಗಳನ್ನು ಅವಲಂಬಿಸಿರುವ ತಂತ್ರಜ್ಞಾನಗಳ ಮೇಲೆ ಜಾಗತಿಕ ಆರ್ಥಿಕತೆ ಭವಿಷ್ಯ ಆಧರಿಸಿದೆ. 2030 ರ ವೇಳೆಗೆ ಪಳೆಯುಳಿಕೆ ರಹಿತ ಮೂಲಗಳಿಂದ 50% ಸಂಚಿತ ವಿದ್ಯುಚ್ಛಕ್ತಿ ಸ್ಥಾಪಿತ ಸಾಮರ್ಥ್ಯವನ್ನು ಸಾಧಿಸುವಲ್ಲಿ ಭಾರತವು ಬದ್ಧವಾಗಿದೆ. ಇಂಧನ ಪರಿವರ್ತನೆಯ ಇಂತಹ ಮಹತ್ವಾಕಾಂಕ್ಷೆಯ ಯೋಜನೆಯು ಎಲೆಕ್ಟ್ರಿಕ್ ಕಾರುಗಳು, ಪವನ ಮತ್ತು ಸೌರ ಶಕ್ತಿ ಯೋಜನೆಗಳು ಮತ್ತು ಬ್ಯಾಟರಿ ಶೇಖರಣಾ ವ್ಯವಸ್ಥೆಗಳ ಬೇಡಿಕೆಯನ್ನು ಪೂರೈಸುವ ಗುರಿ ಹೊಂದಿದ್ದು, ಈ ಮೂಲಕ ನಿರ್ಣಾಯಕ ಖನಿಜಗಳ ಬೇಡಿಕೆಯೂ ವೃದ್ಧಿಸಿದೆ. 

ನಿರ್ಣಾಯಕ ಮತ್ತು ತಂತ್ರಕೌಶಲ್ಯಯುತ ಖನಿಜಗಳು ಹೆಚ್ಚಿನ ಬೇಡಿಕೆಯಲ್ಲಿವೆ ಮತ್ತು ಸಾಮಾನ್ಯವಾಗಿ ಈ ಬೇಡಿಕೆಯನ್ನು ಆಮದಿನ ಮೂಲಕ ಪೂರೈಸಲಾಗುತ್ತದೆ. ನಿರ್ಣಾಯಕ ಖನಿಜಗಳು ನವೀಕರಿಸಬಹುದಾದ ಇಂಧನ, ರಕ್ಷಣೆ, ಕೃಷಿ, ಔಷಧೀಯ, ಹೈಟೆಕ್ ಎಲೆಕ್ಟ್ರಾನಿಕ್ಸ್, ದೂರಸಂಪರ್ಕ, ಸಾರಿಗೆ, ಗಿಗಾಫ್ಯಾಕ್ಟರಿಗಳ ರಚನೆ ಮುಂತಾದ ಕ್ಷೇತ್ರಗಳ ಅಗತ್ಯತೆಗಳನ್ನು ಪೂರೈಸುತ್ತವೆ.

ಇತ್ತೀಚೆಗೆ, 17 ಆಗಸ್ಟ್ 2023 ರಂದು MMDR ಕಾಯಿದೆಯಲ್ಲಿನ ತಿದ್ದುಪಡಿಯ ಮೂಲಕ, 24 ಖನಿಜಗಳನ್ನು ನಿರ್ಣಾಯಕ ಮತ್ತು ತಂತ್ರಕೌಶಲ್ಯಯುತ ಖನಿಜಗಳು ಎಂದು ಸೂಚಿಸಲಾಗಿದೆ. ಈ ತಿದ್ದುಪಡಿಯು ಕೇಂದ್ರ ಸರ್ಕಾರಕ್ಕೆ ಈ ಖನಿಜಗಳ ಮೇಲೆ ರಿಯಾಯಿತಿಯನ್ನು ನೀಡುವ ಅಧಿಕಾರವನ್ನು ಒದಗಿಸುತ್ತದೆ, ಈ ಮೂಲಕ ಕೇಂದ್ರ ಸರ್ಕಾರವು ದೇಶದ ಅವಶ್ಯಕತೆಗಳಿಗೆ ಅನುಸಾರ ಈ ಖನಿಜಗಳ ಹರಾಜಿಗೆ ಆದ್ಯತೆ ನೀಡಬಹುದಾಗಿದೆ. ಈ ಹರಾಜಿನಿಂದ ಬರುವ ಆದಾಯವು ರಾಜ್ಯ ಸರ್ಕಾರಗಳಿಗೆ ಸೇರುತ್ತದೆ. ತದನಂತರ, ಹರಾಜಿನಲ್ಲಿ ಹೆಚ್ಚು ಭಾಗವಹಿಸುವಿಕೆಯನ್ನು ಉತ್ತೇಜಿಸಲು ನಿರ್ಣಾಯಕ ಖನಿಜಗಳ ರಾಜಸ್ವ ಧನದ ದರದಲ್ಲಿ ಕೂಡ ಕಡಿತಗೊಳಿಸಲಾಗಿದೆ. ಪ್ಲಾಟಿನಂ ಗ್ರೂಪ್ ಆಫ್ ಮೆಟಲ್ಸ್ (PGM) ಗೆ 4%, ಮಾಲಿಬ್ಡಿನಮ್ 7.5%, ಗ್ಲಾಕೊನೈಟ್ ಮತ್ತು ಪೊಟ್ಯಾಶ್ 2.5% ರಂತೆ ಸರ್ಕಾರವು ಮಾರ್ಚ್, 2022 ರಲ್ಲಿ ರಾಜಸ್ವ ಧನದ ದರಗಳನ್ನು ನಿಗದಿಪಡಿಸಿದೆ. 12 ಅಕ್ಟೋಬರ್, 2023 ರಂದು ಸರ್ಕಾರವು ಲಿಥಿಯಂಗೆ 3%, ನಿಯೋಬಿಯಂ ಗೆ 3% ಮತ್ತು ಅಪರೂಪದ ಭೂಮಿಯ ಅಂಶಗಳಿಗೆ 1% ರಷ್ಟು ರಾಜಸ್ವ ಧನದ ದರಗಳನ್ನು ನಿಗದಿಪಡಿಸಿದೆ.  
ಟೆಂಡರ್ ಡಾಕ್ಯುಮೆಂಟ್‌ನ ಮಾರಾಟ ನವೆಂಬರ್ 29, 2023 ರಿಂದ ಪ್ರಾರಂಭವಾಗುತ್ತದೆ. ಖನಿಜ ಬ್ಲಾಕ್‌ಗಳು, ಹರಾಜು ನಿಯಮಗಳು, ಟೈಮ್‌ಲೈನ್‌ಗಳು ಇತ್ಯಾದಿಗಳ ವಿವರಗಳನ್ನು MSTC ಹರಾಜು ವೇದಿಕೆ http://www.mstcecommerce.com/auctionhome/mlcl/index.jsp ಯಲ್ಲಿ ನವೆಂಬರ್ 29, 2023 ರಂದು ಸಂಜೆ  6 ರಿಂದ ಪಡೆಯಬಹುದಾಗಿದೆ. ಹರಾಜನ್ನು ಆನ್‌ಲೈನ್‌ನಲ್ಲಿ ಎರಡು ಹಂತದ ಆರೋಹಣ ಪಾರದರ್ಶಕ ಹರಾಜು ಪ್ರಕ್ರಿಯೆಯ ಮೂಲಕ ನಡೆಸಲಾಗುತ್ತದೆ. ಉಲ್ಲೇಖಿಸಿದ ಖನಿಜದ ಮೌಲ್ಯದ ಅತ್ಯಧಿಕ ಶೇಕಡಾವಾರು ಆಧಾರದ ಮೇಲೆ ಅರ್ಹ ಹರಾಜುದಾರರನ್ನು ಆಯ್ಕೆ ಮಾಡಲಾಗುವುದು.

*****


(Release ID: 1980407) Visitor Counter : 103