ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಮಾನವ ಘನತೆಯನ್ನು ಗೌರವಿಸಿದರೆ ಜಗತ್ತಿನಲ್ಲಿ ಯಾವುದೇ ಅಸಮಾನತೆ ಇರುವುದಿಲ್ಲ: ‘ಆರಾರಿರಾರೋʼನಿರ್ದೇಶಕ ಸಂದೀಪ್ ಕುಮಾರ್

Posted On: 26 NOV 2023 8:33PM by PIB Bengaluru

ಗೋವಾದಲ್ಲಿ ನಡೆಯುತ್ತಿರುವ 54 ನೇ ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರೋತ್ಸವದಲ್ಲಿ (IFFI54) ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಚಲನಚಿತ್ರ ‘ಆರಾರಿರಾರೋʼನಿರ್ದೇಶಕ ಸಂದೀಪ್ ಕುಮಾರ್ ವಿ ಮಾತನಾಡಿ, ತಮ್ಮ ಚಿತ್ರವು ಆಶಾವಾದ ಮತ್ತು ಭಾವನಾತ್ಮಕವಾಗಿ ತನ್ನ ಪ್ರೇಕ್ಷಕರನ್ನು ಮುಟ್ಟಲು ಆಶಿಸುತ್ತದೆ ಎಂದು ಹೇಳಿದರು. “ಒಬ್ಬ ವ್ಯಕ್ತಿಯು ಮೂಲಭೂತ ಮಾನವ ಘನತೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಗೌರವಿಸಲು ಸಾಧ್ಯವಾದರೆ, ಜಗತ್ತಿನಲ್ಲಿ ಅಸಮಾನತೆ ಅಸ್ತಿತ್ವದಲ್ಲಿರುವುದಿಲ್ಲ. ಈ ಚಿತ್ರವು ಸಮಾಜದಿಂದ ಯಾವುದೇ ಕಾಳಜಿ ಕಾಣದ ಆದರೆ ಸಂಕಟದ ಸಮಯದಲ್ಲಿ ಭಾವನಾತ್ಮಕವಾಗಿ ಹೆಣೆದುಕೊಂಡಿರುವ ಇಬ್ಬರು ಸಾಮಾನ್ಯ ವ್ಯಕ್ತಿಗಳ ಕುರಿತಾಗಿದೆ.” ಎಂದು ಅವರು ಹೇಳಿದರು. 16 ದಿನಗಳ ಕಾಲ ಚಿತ್ರೀಕರಿಸಿದ ಚಲನಚಿತ್ರವು ಅದೃಷ್ಟದಿಂದ ಒಂದಾದ ಇಬ್ಬರು ವಿರುದ್ಧ ದಿಕ್ಕಿನ ವ್ಯಕ್ತಿಗಳ ಕುರಿತಾಗಿದೆ. ತಪ್ಪಿಸಿಕೊಳ್ಳಲಾಗದ ಭಾವನಾತ್ಮಕ ಗೋಜಲು ಈ ಸುಂದರವಾಗಿ ಹೆಣೆದ ಕಥೆಯ ಸಾರವನ್ನು ಹೇಳುತ್ತದೆ.

https://static.pib.gov.in/WriteReadData/userfiles/image/26-6-1D6U0.jpg

ನಟನಾಗಿ ತಮ್ಮ ಬದ್ಧತೆ ಮತ್ತು ಚಿತ್ರಕ್ಕಾಗಿ ಅವರು ಮಾಡಿಕೊಂಡಿರುವ ತಯಾರಿಯ ಬಗ್ಗೆ ಮಾತನಾಡಿದ ನಾಯಕ ನಟ ಪ್ರಸನ್ನ ಶೆಟ್ಟಿ, ಅನವಶ್ಯಕ ಗೊಂದಲವನ್ನು ತಪ್ಪಿಸಲು, ಎರಡು ವರ್ಷಗಳವರೆಗೆ ಈ ಚಿತ್ರಕ್ಕೆ ಮಾತ್ರ ಗಮನ ನೀಡಿದ್ದೆ ಎಂದು ಒತ್ತಿ ಹೇಳಿದರು. “ನಿರ್ದೇಶಕರು ಮೊದಲ ಸಾಲನ್ನು ವಿವರಿಸಿದಾಗಲೇ ಈ ಚಿತ್ರದ ಬಗ್ಗೆ ನನಗೆ ಮನವರಿಕೆಯಾಯಿತು. ಸಿನಿಮಾದ ಮೊದಲ ಸಾಲು ಬರೆಯುವ ಪ್ರಕ್ರಿಯೆಯಿಂದ ಹಿಡಿದು ಸಿನಿಮಾ ಬಿಡುಗಡೆಯಾಗುವವರೆಗೂ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದೆ. ನಾನು ಪಾತ್ರಕ್ಕೆ ನ್ಯಾಯ ಸಲ್ಲಿಸುವುದನ್ನು ಖಚಿತಪಡಿಸಿಕೊಳ್ಳಲು, ಪ್ರತಿಯೊಂದು ಸಂಭಾಷಣೆಯನ್ನು ಬರೆಯುವಾಗಲೂ ನಾನು ನಿರ್ದೇಶಕರು ಮತ್ತು ಚಿತ್ರಕಥೆಗಾರರೊಂದಿಗೆ ಇದ್ದೆ, ”ಎಂದು ಅವರು ಹೇಳಿದರು.

https://static.pib.gov.in/WriteReadData/userfiles/image/26-6-2KZHQ.jpg

ತಮ್ಮ ಚಲನಚಿತ್ರಗಳಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬಳಕೆಗೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಸಂದೀಪ್ ಕುಮಾರ್, “ಕೆಲವು ಸೃಜನಶೀಲ ಅಂಶಗಳನ್ನು ಕೃತಕ ಬುದ್ಧಿಮತ್ತೆಯಿಂದ ಮಾತ್ರ ಸಾಧಿಸಲು ಅಥವಾ ಸೃಷ್ಟಿಸಲು ಸಾಧ್ಯವಿಲ್ಲ. ಆದಾಗ್ಯೂ, ಲಭ್ಯವಿರುವ ಅತ್ಯುತ್ತಮ ತಂತ್ರಜ್ಞಾನದ ಬಳಕೆಗೆ ಸಂಬಂಧಿಸಿದಂತೆ ನನ್ನ ಚಲನಚಿತ್ರಗಳಲ್ಲಿ ಯಾವುದೇ ರಾಜಿ ಇರುವುದಿಲ್ಲ” ಎಂದು ಹೇಳಿದರು.

ಸಸ್ಪೆನ್ಸ್ ಮತ್ತು ಲಘು ಕ್ಷಣಗಳಿರುವ 'ಆರಾರಿರಾರೋ' ಚಿತ್ರವು ತನ್ನ ಕಥಾಹಂದರ ಮತ್ತು ಭಾವನಾತ್ಮಕ ಅಂಶದಿಂದ ಪ್ರೇಕ್ಷಕರನ್ನು ಆಕರ್ಷಿಸುವ ಭರವಸೆ ನೀಡುತ್ತದೆ. ಚಲನಚಿತ್ರವು ಉಪದೇಶಕ್ಕಿಂತ ಹೆಚ್ಚಾಗಿ, ತನ್ನ ವೀಕ್ಷಕರಿಗೆ ಅದು ತಿಳಿಸುವ ಸಂದೇಶದ ಬಗ್ಗೆ ವಿಶಾಲ ಅರ್ಥವನ್ನು ಅರ್ಥೈಸಿಕೊಳ್ಳಲು ಅವಕಾಶ ನೀಡುತ್ತದೆ.

ಪ್ರಾದೇಶಿಕ ಸಿನಿಮಾಗಳ ಶ್ರೀಮಂತಿಕೆಯನ್ನು ಪ್ರದರ್ಶಿಸಲು ಚಲನಚಿತ್ರೋತ್ಸವದಲ್ಲಿ ಭಾರತದ ವಿವಿಧ ಭಾಗಗಳಿಂದ ಚಲನಚಿತ್ರಗಳನ್ನು ಪ್ರದರ್ಶಿಸಲು ಮೀಸಲಾದ ದಿನಗಳನ್ನು ನಿಗದಿಪಡಿಸಲಾಗಿದೆ. 125 ನಿಮಿಷಗಳ ಅವಧಿಯ 'ಆರಾರಿರಾರೋ' ಚಿತ್ರವನ್ನು 54 ನೇ IFFI ನಲ್ಲಿ ಇಂಡಿಯನ್ ಪನೋರಮಾ, ಫೀಚರ್ ಫಿಲ್ಮ್ಸ್ ವಿಭಾಗದಲ್ಲಿ ಪ್ರದರ್ಶಿಸಲಾಗುತ್ತಿದೆ.

https://static.pib.gov.in/WriteReadData/userfiles/image/26-6-3KRM1.jpg

 

ಪಾತ್ರವರ್ಗ ಮತ್ತು ಸಿಬ್ಬಂದಿ

ನಿರ್ದೇಶಕ: ಸಂದೀಪ್ ಕುಮಾರ್ ವಿ

ನಿರ್ಮಾಪಕ: ಟಿಎಂಟಿ ಪ್ರೊಡಕ್ಷನ್ಸ್

ಕಥೆ: ದೇವಿಪ್ರಸಾದ್ ರೈ

ಛಾಯಾಗ್ರಹಣ: ಮಯೂರ್ ಶೆಟ್ಟಿ

ಸಂಕಲನ: ಮಹೇಶ್ ಯೆನಮೂರ್

ತಾರಾಗಣ: ಪ್ರಸನ್ನ ಶೆಟ್ಟಿ, ಜೀವಾ, ನಿರೀಕ್ಷಾ ಶೆಟ್ಟಿ

 

ನಿರ್ದೇಶಕರ ಬಗ್ಗೆ ಮತ್ತಷ್ಟು ಮಾಹಿತಿ:

ಸಂದೀಪ್ ಕುಮಾರ್ ಅವರು ಚಲನಚಿತ್ರ ನಿರ್ದೇಶಕ, ಕಥೆಗಾರ ಮತ್ತು ಪ್ರಾಥಮಿಕವಾಗಿ ಕನ್ನಡ ಚಲನಚಿತ್ರ ರಂಗದಲ್ಲಿ ದೃಶ್ಯ ಸೃಷ್ಟಿಕರ್ತರಾಗಿದ್ದಾರೆ. ಅವರ ಚೊಚ್ಚಲ ಚಿತ್ರ 'ನಂದನವನದೊಳ್' (2019). ಈಗ 'ಆರಾರಿರಾರೋ' (2023) ನಿರ್ದೇಶಿಸಿದ್ದಾರೆ. ಒಂದೆರಡು ಕಿರುಚಿತ್ರಗಳನ್ನೂ ಅವರು ನಿರ್ದೇಶಿಸಿದ್ದಾರೆ.

 

ನಿರ್ದೇಶಕರೊಂದಿಗಿನ ಸಂವಾದವನ್ನು ಇಲ್ಲಿ ವೀಕ್ಷಿಸಿ: https://www.facebook.com/pibindia/videos/862745168725025/?mibextid=YxdKMJ

****



(Release ID: 1980051) Visitor Counter : 123