ಪ್ರಧಾನ ಮಂತ್ರಿಯವರ ಕಛೇರಿ

​​​​​​​ಮಧ್ಯಪ್ರದೇಶದ ಚಿತ್ರಕೂಟದಲ್ಲಿ ತುಳಸಿ ಪೀಠ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಪಠ್ಯಾಂತರ

Posted On: 27 OCT 2023 7:48PM by PIB Bengaluru

ನಮೋ ರಾಘವಾಯ!

ನಮೋ ರಾಘವಾಯ!

ಪೂಜ್ಯ ಜಗದ್ಗುರು ಶ್ರೀ ರಾಮಭದ್ರಾಚಾರ್ಯ ಅವರು ನಮ್ಮನ್ನು ಆಶೀರ್ವದಿಸಲು ಇಲ್ಲಿ ಉಪಸ್ಥಿತರಿದ್ದಾರೆ; ಇಲ್ಲಿ ಉಪಸ್ಥಿತರಿರುವ ಎಲ್ಲಾ ಹಿರಿಯ ಸಾಧುಗಳೇ, ಮಧ್ಯಪ್ರದೇಶದ ರಾಜ್ಯಪಾಲ ಶ್ರೀ ಮಂಗುಭಾಯಿ ಪಟೇಲ್ ಅವರೇ, ಮುಖ್ಯಮಂತ್ರಿ ಭಾಯಿ ಶಿವರಾಜ್ ಅವರೇ, ಇಲ್ಲಿ ಉಪಸ್ಥಿತರಿರುವ ಇತರ ಎಲ್ಲ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ!

ನಾನು ಮತ್ತೊಮ್ಮೆ ಚಿತ್ರಕೂಟದ ಪವಿತ್ರ ಭೂಮಿಗೆ ನಮಸ್ಕರಿಸುತ್ತೇನೆ. ಇಂದು ನನಗೆ ದಿನವಿಡೀ ವಿವಿಧ ದೇವಾಲಯಗಳಲ್ಲಿ ಭಗವಾನ್ ಶ್ರೀ ರಾಮನ ದರ್ಶನ ಪಡೆಯುವ ಸೌಭಾಗ್ಯ ದೊರೆತಿದೆ. ಋಷಿಮುನಿಗಳ ಆಶೀರ್ವಾದವನ್ನೂ ನಾನು ಪಡೆದಿದ್ದೇನೆ. ಜಗದ್ಗುರು ರಾಮಭದ್ರಾಚಾರ್ಯರಿಂದ ನಾನು ಪಡೆವ ಪ್ರೀತಿ ನನ್ನನ್ನು ಭಾವಪರವಶನನ್ನಾಗಿ ಮಾಡುತ್ತದೆ. ಎಲ್ಲಾ ಪೂಜ್ಯ ಸಾಧುಗಳೇ, ಇಂದು ಈ ಪವಿತ್ರ ಸ್ಥಳದಲ್ಲಿ ಜಗದ್ಗುರುಗಳ ಪುಸ್ತಕಗಳನ್ನು ಬಿಡುಗಡೆ ಮಾಡುವ ಅವಕಾಶ ನನಗೆ ದೊರೆತಿರುವುದು ನನಗೆ ಸಂತೋಷ ತಂದಿದೆ. ʻಅಷ್ಟಾಧ್ಯಾಯಿ ಭಾಷ್ಯʼ, ʻರಮಾನಂದಾಚಾರ್ಯ ಚರಿತಂʼ ಮತ್ತು 'ಭಗವಾನ್ ಶ್ರೀ ಕೃಷ್ಣ ಕಿ ರಾಷ್ಟ್ರಲೀಲಾ' - ಈ ಎಲ್ಲಾ ಗ್ರಂಥಗಳು ಭಾರತದ ಶ್ರೇಷ್ಠ ಜ್ಞಾನ ಪರಂಪರೆಯನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತವೆ. ನಾನು ಈ ಪುಸ್ತಕಗಳನ್ನು ಜಗದ್ಗುರುಗಳ ಆಶೀರ್ವಾದದ ಮತ್ತೊಂದು ರೂಪವೆಂದು ಪರಿಗಣಿಸುತ್ತೇನೆ. ಈ ಪುಸ್ತಕಗಳ ಲೋಕಾರ್ಪಣೆಗಾಗಿ ನಾನು ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ.

ನನ್ನ ಕುಟುಂಬ ಸದಸ್ಯರೇ,

ʻಅಷ್ಟಾಧ್ಯಾಯಿʼ - ಇದು ಭಾರತದ ಭಾಷಾಶಾಸ್ತ್ರ, ಭಾರತದ ಬುದ್ಧಿಶಕ್ತಿ ಮತ್ತು ನಮ್ಮ ಸಂಶೋಧನಾ ಸಂಸ್ಕೃತಿ ಕುರಿತಾದ ಸಾವಿರಾರು ವರ್ಷಗಳಷ್ಟು ಹಳೆಯ ಪಠ್ಯವಾಗಿದೆ.  ವ್ಯಾಕರಣದ ವಿಶಾಲ ವಿಷಯವನ್ನು ವಿವಿಧ ಸೂತ್ರಗಳು ಹೇಗೆ ಸೆರೆಹಿಡಿಯಬಹುದು, ಭಾಷೆಯನ್ನು 'ಸಂಸ್ಕೃತ ವಿಜ್ಞಾನ'ವಾಗಿ ಹೇಗೆ ಪರಿವರ್ತಿಸಬಹುದು ಎಂಬುದಕ್ಕೆ ಮಹರ್ಷಿ ಪಾಣಿನಿಯ ಸಾವಿರಾರು ವರ್ಷಗಳ ಹಳೆಯ ಈ ರಚನೆಯೇ ಸಾಕ್ಷಿಯಾಗಿದೆ. ಈ ಸಾವಿರಾರು ವರ್ಷಗಳಲ್ಲಿ ಜಗತ್ತಿನಲ್ಲಿ ಅನೇಕ ಭಾಷೆಗಳು ಅಳಿದುಹೋಗಿವೆ. ಹಳೆಯ ಭಾಷೆಗಳ ಬದಲಿಗೆ ಹೊಸ ಭಾಷೆಗಳು ಬಂದಿವೆ. ಆದರೆ, ಇಂದಿಗೂ ನಮ್ಮ ಸಂಸ್ಕೃತವು ಅಷ್ಟೇ ಅಖಂಡ ಮತ್ತು ಸ್ಥಿರವಾಗಿದೆ. ಸಂಸ್ಕೃತವು ಸಮಯಕ್ಕೆ ತಕ್ಕಂತೆ ಪರಿಷ್ಕರಣೆ ಒಳಗಾದರೂ ಅದರ ಸ್ವಂತಿಕೆಯನ್ನು ಕಳೆದುಕೊಳ್ಳಲಿಲ್ಲ. ಇದಕ್ಕೆ ಕಾರಣ ಸಂಸ್ಕೃತದ ಪ್ರಬುದ್ಧ ವ್ಯಾಕರಣ ವಿಜ್ಞಾನ. ಕೇವಲ 14 ಮಹೇಶ್ವರ ಸೂತ್ರಗಳನ್ನು ಆಧರಿಸಿದ ಈ ಭಾಷೆ ಸಾವಿರಾರು ವರ್ಷಗಳಿಂದ ʻಶಸ್ತ್ರʼ(ಆಯುಧಗಳು) ಮತ್ತು ʻಶಾಸ್ತ್ರʼ(ಧರ್ಮಗ್ರಂಥಗಳು) ಎರಡೂ ವಿಷಯಗಳ ತಾಯಿಯಾಗಿದೆ. ವೇದಗಳ ಶ್ಲೋಕಗಳನ್ನು ಋಷಿಮುನಿಗಳು ಸಂಸ್ಕೃತ ಭಾಷೆಯಲ್ಲಿ ಮಾತ್ರ ಪ್ರಸ್ತುತಪಡಿಸಿದ್ದಾರೆ. ಯೋಗ ವಿಜ್ಞಾನವನ್ನು ಪತಂಜಲಿ ಈ ಭಾಷೆಯಲ್ಲಿ ಪ್ರಸ್ತುತಪಡಿಸಿದ್ದಾರೆ. ಈ ಭಾಷೆಯಲ್ಲಿ, ಧನ್ವಂತರಿ ಮತ್ತು ಚರಕರಂತಹ ಋಷಿಗಳು ಆಯುರ್ವೇದದ ಸಾರವನ್ನು ಬರೆದಿದ್ದಾರೆ. ಈ ಭಾಷೆಯಲ್ಲಿ ರಚನೆಗೊಂಡ ʻಕೃಷಿ ಪರಾಶರ್ʼನಂತಹ ಗ್ರಂಥಗಳು ಕೃಷಿಯನ್ನು ಶ್ರಮ ಮತ್ತು ಸಂಶೋಧನೆಯೊಂದಿಗೆ ಸಂಪರ್ಕಿಸಿವೆ. ಈ ಭಾಷೆಯಲ್ಲಿ, ನಾವು ಭರತಮುನಿಯಿಂದ ನಾಟಕ ಮತ್ತು ಸಂಗೀತ ವಿಜ್ಞಾನದ ಉಡುಗೊರೆಯನ್ನು ಪಡೆದಿದ್ದೇವೆ. ಇದೇ ಭಾಷೆಯಲ್ಲಿ, ಕಾಳಿದಾಸರಂತಹ ವಿದ್ವಾಂಸರು ಸಾಹಿತ್ಯದ ಶಕ್ತಿಯ ಮೂಲಕ ಜಗತ್ತನ್ನು ಬೆರಗುಗೊಳಿಸಿದ್ದಾರೆ. ಬಾಹ್ಯಾಕಾಶ ವಿಜ್ಞಾನ, ಬಿಲ್ಲುಗಾರಿಕೆ ಮತ್ತು ಸಮರ ಕಲೆಗಳ ಪಠ್ಯಗಳನ್ನು ಸಹ ಈ ಭಾಷೆಯಲ್ಲಿ ಬರೆಯಲಾಗಿದೆ. ನಾನು ಕೆಲವು ಉದಾಹರಣೆಗಳನ್ನು ಮಾತ್ರ ನೀಡಿದ್ದೇನೆ. ಈ ಪಟ್ಟಿಯು ಹೀಗೆ ಬೆಳೆಯುತ್ತಾ ಹೋಗುತ್ತದೆ. ಒಂದು ರಾಷ್ಟ್ರವಾಗಿ ಭಾರತದ ಅಭಿವೃದ್ಧಿಯ ಯಾವುದೇ ಅಂಶವನ್ನು ನೀವು ನೋಡುತ್ತಿದ್ದರೆ, ಅದರಲ್ಲಿ ಸಂಸ್ಕೃತದ ಕೊಡುಗೆಯನ್ನು ನೀವು ನೋಡಬಹುದು. ಇಂದಿಗೂ, ವಿಶ್ವದ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತದ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಇತ್ತೀಚೆಗೆ ಲಿಥುವೇನಿಯಾದ ರಾಯಭಾರಿಯು ಭಾರತದ ಬಗ್ಗೆ ತಿಳಿದುಕೊಳ್ಳಲು ಸಂಸ್ಕೃತ ಭಾಷೆಯನ್ನು ಹೇಗೆ ಕಲಿತರು ಎಂಬುದನ್ನು ನಾವು ನೋಡಿದ್ದೇವೆ. ಅಂದರೆ ಸಂಸ್ಕೃತದ ಜನಪ್ರಿಯತೆ ಪ್ರಪಂಚದಾದ್ಯಂತ ಹೆಚ್ಚುತ್ತಿದೆ.

ಸ್ನೇಹಿತರೇ,

ಒಂದು ಸಾವಿರ ವರ್ಷಗಳ ವಸಾಹತುಶಾಹಿ ಆಳ್ವಿಕೆಯ ಅವಧಿಯಲ್ಲಿ, ಭಾರತವನ್ನು ಬೇರುಸಹಿತ ಕಿತ್ತೊಗೆಯಲು ಹಲವಾರು ಪ್ರಯತ್ನಗಳು ನಡೆದವು. ಈ ಪ್ರಯತ್ನಗಳಲ್ಲಿ ಒಂದು ಸಂಸ್ಕೃತ ಭಾಷೆಯ ಸಂಪೂರ್ಣ ನಾಶಪಡಿಸುವುದು. ನಾವು ಸ್ವತಂತ್ರರಾದೆವು, ಆದರೆ ಗುಲಾಮಗಿರಿಯ ಮನಸ್ಥಿತಿಯನ್ನು ಬಿಡದ ಜನರು ಸಂಸ್ಕೃತದ ಬಗ್ಗೆ ದ್ವೇಷವನ್ನು ಬೆಳೆಸಿಕೊಂಡರು. ಅಂತಹ ಜನರು ಬೇರೆಡೆ ಕಂಡುಬರುವ ಅಳಿದುಹೋದ ಭಾಷೆಯ ಶಾಸನಗಳನ್ನು ವೈಭವೀಕರಿಸುತ್ತಾರೆ, ಆದರೆ ಸಾವಿರಾರು ವರ್ಷಗಳಿಂದ ಅಸ್ತಿತ್ವದಲ್ಲಿರುವ ಸಂಸ್ಕೃತವನ್ನು ಗೌರವಿಸುವುದಿಲ್ಲ. ಈ ಜನರು ತಮ್ಮ ಮಾತೃಭಾಷೆಯನ್ನು ತಿಳಿದಿರುವ ಇತರ ದೇಶಗಳ ಜನರನ್ನು ಮೆಚ್ಚುತ್ತಾರೆ, ಆದರೆ ಸಂಸ್ಕೃತ ಭಾಷೆಯನ್ನು ತಿಳಿದಿರುವುದು ಹಿಂದುಳಿದಿರುವಿಕೆಯ ಸಂಕೇತವೆಂದು ಅವರು ಪರಿಗಣಿಸುತ್ತಾರೆ. ಈ ರೀತಿಯ ಮನಸ್ಥಿತಿಯ ಜನರು ಕಳೆದ ಒಂದು ಸಾವಿರ ವರ್ಷಗಳಿಂದ ಸೋಲುತ್ತಿದ್ದಾರೆ ಮತ್ತು ಭವಿಷ್ಯದಲ್ಲಿಯೂ ಯಶಸ್ವಿಯಾಗುವುದಿಲ್ಲ. ಸಂಸ್ಕೃತವು ಸಂಪ್ರದಾಯಗಳ ಭಾಷೆ ಮಾತ್ರವಲ್ಲ, ಅದು ನಮ್ಮ ಪ್ರಗತಿ ಮತ್ತು ಅಸ್ಮಿತೆಯ ಭಾಷೆಯಾಗಿದೆ. ಕಳೆದ 9 ವರ್ಷಗಳಲ್ಲಿ, ನಾವು ಸಂಸ್ಕೃತವನ್ನು ಉತ್ತೇಜಿಸಲು ವ್ಯಾಪಕ ಪ್ರಯತ್ನಗಳನ್ನು ಮಾಡಿದ್ದೇವೆ. ಆಧುನಿಕ ಸನ್ನಿವೇಶದಲ್ಲಿ, ʻಅಷ್ಟಾಧ್ಯಾಯಿ ಭಾಷ್ಯʼದಂತಹ ಪಠ್ಯಗಳು ಈ ಪ್ರಯತ್ನಗಳನ್ನು ಯಶಸ್ವಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.


ನನ್ನ ಕುಟುಂಬ ಸದಸ್ಯರೇ,

ರಾಮಭದ್ರಾಚಾರ್ಯರು ನಮ್ಮ ದೇಶದ ಸಂತರು, ಅವರ ಜ್ಞಾನದ ಆಧಾರದ ಮೇಲೆ ವಿಶ್ವದ ಅನೇಕ ವಿಶ್ವವಿದ್ಯಾಲಯಗಳು ತಮ್ಮ ಅಧ್ಯಯನ ಮತ್ತು ಸಂಶೋಧನೆಯನ್ನು ನಡೆಸಬಹುದು. ಬಾಲ್ಯದಿಂದಲೂ ಕಣ್ಣಿನ ದೃಷ್ಟಿ ಇಲ್ಲದಿದ್ದರೂ, ನಿಮ್ಮ ಜ್ಞಾನ ಚಕ್ಷುಗಳು ಅಭಿವೃದ್ಧಿಗೊಂಡಿವೆಯೆಂದರೆ ನೀವು ಎಲ್ಲಾ ವೇದಗಳನ್ನು ಕಂಠಪಾಠ ಮಾಡಿದ್ದೀರಿ. ನೀವು ನೂರಾರು ಪುಸ್ತಕಗಳನ್ನು ಬರೆದಿದ್ದೀರಿ. ಭಾರತೀಯ ಜ್ಞಾನ ಮತ್ತು ತತ್ತ್ವಶಾಸ್ತ್ರದ ಕುರಿತಾದ 'ಪ್ರಸ್ಥಾನತ್ರಯಿ' ಮಹಾನ್ ವಿದ್ವಾಂಸರಿಗೂ ಕಷ್ಟಕರವೆಂದು ಪರಿಗಣಿಸಲಾಗಿದೆ. ಜಗದ್ಗುರುಗಳು ತಮ್ಮ ವ್ಯಾಖ್ಯಾನವನ್ನು ಆಧುನಿಕ ಭಾಷೆಯಲ್ಲಿಯೂ ಬರೆದಿದ್ದಾರೆ. ಈ ಮಟ್ಟದ ಜ್ಞಾನ, ಈ ಮಟ್ಟದ ಬುದ್ಧಿವಂತಿಕೆ ವೈಯಕ್ತಿಕ ಮಟ್ಟಕ್ಕೆ ಸೀಮಿತವಾಗಿಲ್ಲ. ಈ ಬುದ್ಧಿವಂತಿಕೆ ಇಡೀ ರಾಷ್ಟ್ರದ ಪರಂಪರೆಯಾಗಿದೆ. ಅದಕ್ಕಾಗಿಯೇ ನಮ್ಮ ಸರ್ಕಾರ 2015ರಲ್ಲಿ ಸ್ವಾಮೀಜಿ ಅವರಿಗೆ  ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತು.

ಸ್ನೇಹಿತರೇ,

ಸ್ವಾಮಿಜಿಯವರು ಧರ್ಮ ಮತ್ತು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಎಷ್ಟು ಸಕ್ರಿಯರಾಗಿದ್ದಾರೋ, ಸಮಾಜ ಮತ್ತು ರಾಷ್ಟ್ರದ ಪರವಾಗಿ ಅವರು ಅಷ್ಟೇ ಸಮಾನವಾಗಿ ಧ್ವನಿ ಎತ್ತುತ್ತಾರೆ. ʻಸ್ವಚ್ಛ ಭಾರತ ಅಭಿಯಾನʼದ 9 ರತ್ನಗಳಲ್ಲಿ ನಿಮ್ಮನ್ನು ಒಬ್ಬರಾಗಿ ನಾನು ನಾಮನಿರ್ದೇಶನ ಮಾಡಿದಾಗ, ನೀವು ಆ ಜವಾಬ್ದಾರಿಯನ್ನು ಸಮಾನ ಭಕ್ತಿಯಿಂದ ವಹಿಸಿಕೊಂಡಿದ್ದೀರಿ. ದೇಶದ ಹೆಮ್ಮೆಗಾಗಿ ಸ್ವಾಮೀಜಿಯವರು ಮಾಡಿದ ನಿರ್ಣಯಗಳು ಈಗ ಈಡೇರುತ್ತಿರುವುದು ಎಂದು ಸಂತೋಷವಾಗಿದೆ. ನಮ್ಮ ಭಾರತವು ಈಗ ಸ್ವಚ್ಛ ಮತ್ತು ಆರೋಗ್ಯಕರವಾಗುತ್ತಿದೆ. ಗಂಗಾ ಮಾತೆಯ ನೀರೂ ಕೂಡ ಸ್ವಚ್ಛವಾಗುತ್ತಿದೆ. ಜಗದ್ಗುರು ರಾಮಭದ್ರಾಚಾರ್ಯರು ಪ್ರತಿಯೊಬ್ಬ ದೇಶವಾಸಿಯ ಮತ್ತೊಂದು ಕನಸನ್ನು ನನಸು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ- ಅದು ರಾಮ ಮಂದಿರ. ರಾಮ ಮಂದಿರದ ವಿಚಾರದಲ್ಲಿ ನ್ಯಾಯಾಲಯದಿಂದ ಹಿಡಿದು ಇತರ ಎಲ್ಲಾ ವಿಷಯಗಳವರೆಗೆ ನೀವು ಅಪಾರ ಕೊಡುಗೆ ನೀಡಿದ್ದೀರಿ. ಆ ರಾಮ ಮಂದಿರವೂ ಈಗ ಸಿದ್ಧವಾಗುತ್ತಿದೆ. ಕೇವಲ ಎರಡು ದಿನಗಳ ಹಿಂದಷ್ಟೇ ʻಪ್ರಾಣ ಪ್ರತಿಷ್ಠಾಪನಾʼ  ಸಮಾರಂಭದಲ್ಲಿ ಭಾಗವಹಿಸಲು ಅಯೋಧ್ಯೆಯ ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಿಂದ ನನಗೆ ಆಹ್ವಾನ ಬಂದಿದೆ. ನಾನು ಇದನ್ನು ನನ್ನ ಸೌಭಾಗ್ಯವೆಂದು ಪರಿಗಣಿಸುತ್ತೇನೆ.

ಪೂಜ್ಯ ಸಂತರೇ, ದೇಶವು ಸ್ವಾತಂತ್ರ್ಯದ 75ನೇ ವರ್ಷದಿಂದ ಸ್ವಾತಂತ್ರ್ಯದ 100ನೇ ವರ್ಷದವರೆಗೆ ಅತ್ಯಂತ ಪ್ರಮುಖ ಅವಧಿಯನ್ನು ಎದುರು ನೋಡುತ್ತಿದೆ, ಅಂದರೆ ಇಂದಿನಿಂದ ಈ 25 ವರ್ಷಗಳನ್ನು 'ಅಮೃತ ಕಾಲ'ವಾಗಿ ಪರಿಗಣಿಸಿದೆ. ಈ 'ಅಮೃತ ಕಾಲ'ದಲ್ಲಿ ದೇಶವು ಏಕಕಾಲದಲ್ಲಿ ಅಭಿವೃದ್ಧಿ ಮತ್ತು ಪರಂಪರೆಯೊಂದಿಗೆ ಮುನ್ನಡೆಯುತ್ತಿದೆ. ನಮ್ಮ ಯಾತ್ರಾ ಸ್ಥಳಗಳ ಅಭಿವೃದ್ಧಿಗೆ ನಾವು ಆದ್ಯತೆ ನೀಡುತ್ತಿದ್ದೇವೆ. ಚಿತ್ರಕೂಟವು ಆಧ್ಯಾತ್ಮಿಕ ಪರಿಸರ ಮತ್ತು ನೈಸರ್ಗಿಕ ಸೌಂದರ್ಯವನ್ನು ಹೊಂದಿರುವ ಸ್ಥಳವಾಗಿದೆ. 45 ಸಾವಿರ ಕೋಟಿ ರೂ.ಗಳ ಕೆನ್-ಬೆಟ್ವಾ ಲಿಂಕ್ ಯೋಜನೆಯಾಗಿರಲಿ, ʻಬಂದೇಲ್‌ಖಂಡ ಎಕ್ಸ್‌ಪ್ರೆಸ್‌ ವೇʼ ಆಗಿರಲೀ ಅಥವಾ ರಕ್ಷಣಾ ಕಾರಿಡಾರ್ ಆಗಿರಲಿ, ಈ ಎಲ್ಲಾ ಪ್ರಯತ್ನಗಳು ಈ ಪ್ರದೇಶದಲ್ಲಿ ಹೊಸ ಸಾಧ್ಯತೆಗಳನ್ನು ಸೃಷ್ಟಿಸುತ್ತವೆ. ಚಿತ್ರಕೂಟವು ಅಭಿವೃದ್ಧಿಯ ಹೊಸ ಎತ್ತರವನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳುವುದು ನನ್ನ ಬಯಕೆ ಮತ್ತು ಪ್ರಯತ್ನವಾಗಿದೆ. ಮತ್ತೊಮ್ಮೆ ನಾನು ಪೂಜ್ಯ ಜಗದ್ಗುರು ಶ್ರೀ ರಾಮಭದ್ರಾಚಾರ್ಯರಿಗೆ ಗೌರವಪೂರ್ವಕವಾಗಿ ನಮಸ್ಕರಿಸುತ್ತೇನೆ. ಅವರ ಆಶೀರ್ವಾದ ನಮ್ಮೆಲ್ಲರಿಗೂ ಸ್ಫೂರ್ತಿ ನೀಡಲಿ, ನಮಗೆ ಶಕ್ತಿಯನ್ನು ನೀಡಲಿ ಮತ್ತು ಅವರ ಜ್ಞಾನವು ನಮಗೆ ಮಾರ್ಗದರ್ಶನ ನೀಡುತ್ತಲೇ ಇರಲಿ. ಈ ಆಶಯವನ್ನು ವ್ಯಕ್ತಪಡಿಸುತ್ತಾ, ನಾನು ನಿಮ್ಮೆಲ್ಲರಿಗೂ ನನ್ನ ಹೃದಯಾಂತರಾಳದಿಂದ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಜೈ ಸಿಯಾ ರಾಮ್.

ಸೂಚನೆ: ಇದು ಪ್ರಧಾನಿಯವರ ಭಾಷಣದ ಭಾವಾನುವಾದ. ಮೂಲ ಭಾಷಣ ಹಿಂದಿಯಲ್ಲಿತ್ತು.

******



(Release ID: 1974025) Visitor Counter : 48