ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ರಾಷ್ಟ್ರೀಯ ಏಕತಾ ದಿನದಂದು ಪ್ರಧಾನಮಂತ್ರಿಯವರು 'ಮೇರಾ ಯುವ ಭಾರತ (MY Bharat)' ಪ್ಲಾಟ್‌ ಫಾರ್ಮ್ ಗೆ ಚಾಲನೆ ನೀಡಿದರು


ಈ ಪ್ಲಾಟ್‌ ಫಾರ್ಮ್ ಯುವಜನ ನೇತೃತ್ವದ ಅಭಿವೃದ್ಧಿಗೆ ಸಹಾಯಕ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ

Posted On: 31 OCT 2023 7:37PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಕ್ಟೋಬರ್ 31 ರಂದು ರಾಷ್ಟ್ರೀಯ ಏಕತಾ ದಿನದಂದು ಕರ್ತವ್ಯ ಪಥದಲ್ಲಿ ದೇಶದ ಯುವಜನರಿಗಾಗಿ 'ಮೇರಾ ಯುವ ಭಾರತ (MY Bharat)' ಪ್ಲಾಟ್‌ ಫಾರ್ಮ್ ಗೆ ಚಾಲನೆ ನೀಡಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 11, 2023 ರಂದು ನಡೆದ ಕೇಂದ್ರ ಸಚಿವ ಸಂಪುಟವು ಮಹತ್ವದ ನಿರ್ಧಾರದಲ್ಲಿ,  "ಮೇರಾ ಯುವ ಭಾರತ (MY Bharat)" ಎಂದು ಕರೆಯಲಾಗುವ ಸ್ವಾಯತ್ತ ಸಂಸ್ಥೆಯ ಸ್ಥಾಪನೆಗೆ ಅನುಮೋದನೆಯನ್ನು ನೀಡಿತ್ತು.

ದೃಷ್ಟಿಕೋನ:

'ಮೇರಾ ಯುವ ಭಾರತ (MY Bharat)' ಅನ್ನು ಯುವಜನರ ಅಭಿವೃದ್ಧಿ ಮತ್ತು ಯುವ-ನೇತೃತ್ವದ ಅಭಿವೃದ್ಧಿಗೆ ಪ್ರಮುಖವಾದ, ತಂತ್ರಜ್ಞಾನ-ಚಾಲಿತ ಸಹಾಯಕ ವ್ಯವಸ್ಥೆಯಾಗಿ ರೂಪಿಸಲಾಗಿದೆ, ಯುವಜನರ ಆಕಾಂಕ್ಷೆಗಳನ್ನು ಸಾಕಾರಗೊಳಿಸುವಲ್ಲಿ ಸಮಾನ ಅವಕಾಶಗಳನ್ನು ಒದಗಿಸುವ ಮತ್ತು ಸರ್ಕಾರದ ಸಂಪೂರ್ಣ ವ್ಯಾಪ್ತಿಯಾದ್ಯಂತ "ವಿಕಸಿತ ಭಾರತ" (ಅಭಿವೃದ್ಧಿ ಹೊಂದಿದ ಭಾರತ) ನಿರ್ಮಾಣಕ್ಕೆ ಕೊಡುಗೆ ನೀಡುವ ಪ್ರಮುಖ ಗುರಿಯೊಂದಿಗೆ ಇದನ್ನು ರಚಿಸಲಾಗಿದೆ. ನಮ್ಮ ದೇಶದ ಯುವಜನರು ಕಾರ್ಯಕ್ರಮಗಳು, ಮಾರ್ಗದರ್ಶಕರು ಮತ್ತು ಅವರ ಸ್ಥಳೀಯ ಸಮುದಾಯಗಳೊಂದಿಗೆ ಯಾವುದೇ ಅಡೆತಡೆಯಿಲ್ಲದೆ ಸಂಪರ್ಕಿಸಬಹುದಾದ ಚೌಕಟ್ಟನ್ನು ಇದು ರೂಪಿಸುತ್ತದೆ. ಸ್ಥಳೀಯ ಸಮಸ್ಯೆಗಳ ಬಗ್ಗೆ ಯುವಜನರ ತಿಳುವಳಿಕೆಯನ್ನು ಗಾಢವಾಗಿಸಲು ಮತ್ತು ರಚನಾತ್ಮಕ ಪರಿಹಾರಗಳಿಗೆ ಕೊಡುಗೆ ನೀಡಲು ಅವರನ್ನು ಸಶಕ್ತಗೊಳಿಸಲು ಈ ವೇದಿಕೆಯನ್ನು ವಿನ್ಯಾಸಗೊಳಿಸಲಾಗಿದೆ.

ಮೇರಾ ಯುವ ಭಾರತ (MY Bharat) ಕುರಿತು:

ಮೇರಾ ಯುವ ಭಾರತ (MY Bharat), ಸ್ವಾಯತ್ತ ಸಂಸ್ಥೆಯಾಗಿದ್ದು, 15-29 ವರ್ಷ ವಯಸ್ಸಿನ ಯುವಜನರಿಗೆ ರಾಷ್ಟ್ರೀಯ ಯುವ ನೀತಿಯಲ್ಲಿನ 'ಯುವ' ವ್ಯಾಖ್ಯಾನಕ್ಕೆ ಅನುಗುಣವಾಗಿ ಪ್ರಯೋಜನವನ್ನು ನೀಡುತ್ತದೆ. ಫಲಾನುಭವಿಗಳು 10-19 ವರ್ಷಗಳ ವಯೋಮಾನದವರಾಗಿರುತ್ತಾರೆ.

ಮೇರಾ ಯುವ ಭಾರತ (MY Bharat) 'ಫಿಜಿಟಲ್ ಪ್ಲಾಟ್‌ ಫಾರ್ಮ್' (ಭೌತಿಕ + ಡಿಜಿಟಲ್) ಆಗಿದ್ದು, ಇದು ಡಿಜಿಟಲ್ ಸಂಪರ್ಕಕ್ಕೆ ಅವಕಾಶದ ಜೊತೆಗೆ ದೈಹಿಕ ಚಟುವಟಿಕೆಯನ್ನು ಒಳಗೊಂಡಿರುತ್ತದೆ.

ಇಂತಹ ಸಂಸ್ಥೆಯ ಅಗತ್ಯ:

  • ಅಮೃತ ಕಾಲದಲ್ಲಿ ಯುವಕರ ಪಾತ್ರ: ರಾಷ್ಟ್ರದ ಭವಿಷ್ಯವನ್ನು ರೂಪಿಸುವಲ್ಲಿ ಭಾರತದ ಯುವಜನರು ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ - ವಿಶೇಷವಾಗಿ ಭಾರತ ಸ್ವಾತಂತ್ರ್ಯದ 75 ವರ್ಷಗಳ ಪ್ರಮುಖ ಘಟ್ಟದಲ್ಲಿ, 2047 ರ ವೇಳೆಗೆ ಅಮೃತ ಭಾರತವನ್ನು ನಿರ್ಮಿಸಲು ಮುಂದಿನ 25 ವರ್ಷಗಳಲ್ಲಿ ದೇಶವು ಮಾದರಿ-ಬದಲಾವಣೆಗಾಗಿ ಅಭಿವೃದ್ಧಿ ಪ್ರಯಾಣವನ್ನು ಪ್ರಾರಂಭಿಸಿದೆ.
  • ವಿವಿಧ ಪ್ರದೇಶಗಳ ಯುವಜನರನ್ನು ಒಂದೇ ವೇದಿಕೆಯಡಿಗೆ ತರಲು ಚೌಕಟ್ಟನ್ನು ಸ್ಥಾಪಿಸುವುದು: ವಿಷನ್ 2047 ಕ್ಕೆ ಗ್ರಾಮೀಣ ಯುವಜನರು, ನಗರ ಯುವಜನರು ಮತ್ತು ಪಟ್ಟಣ ಯುವಜನರನ್ನು ಒಂದೇ ವೇದಿಕೆಯಲ್ಲಿ ತರಬಲ್ಲ ಚೌಕಟ್ಟು ಅಗತ್ಯವಿದೆ. ಸರ್ಕಾರದ ಅಸ್ತಿತ್ವದಲ್ಲಿರುವ ಯೋಜನೆಗಳನ್ನು ನಮ್ಮ ಸಮಾಜದ ಗ್ರಾಮೀಣ ಯುವಜನರ ಅಗತ್ಯತೆಗಳ ಬಗ್ಗೆ ಆಗ ಚಾಲ್ತಿಯಲ್ಲಿದ್ದ ತಿಳುವಳಿಕೆಯೊಂದಿಗೆ ಕಳೆದ 50 ವರ್ಷಗಳಲ್ಲಿ ವಿವಿಧ ಹಂತಗಳಲ್ಲಿ ವಿನ್ಯಾಸಗೊಳಿಸಲಾಗಿದೆ ಮತ್ತು ಆರಂಭಿಸಲಾಗಿದೆ. ನಗರ-ಗ್ರಾಮೀಣ ಚಿತ್ರಣದಲ್ಲಿನ ಪಲ್ಲಟಗಳು ಈ ವಿಧಾನಗಳ ಮರು-ಮೌಲ್ಯಮಾಪನದ ಅಗತ್ಯವನ್ನು ಒತ್ತಿ ಹೇಳಿವೆ. ಗ್ರಾಮೀಣ, ನಗರ ಮತ್ತು ಪಟ್ಟಣದ ಯುವಜನರನ್ನು ಸಾಮಾನ್ಯ ವೇದಿಕೆಯಲ್ಲಿ ಒಂದುಗೂಡಿಸುವ ಚೌಕಟ್ಟನ್ನು ರಚಿಸುವುದು ಅನಿವಾರ್ಯವಾಗಿದೆ. ಅಂತಹ ಚೌಕಟ್ಟನ್ನು ರಚಿಸಲು ಮೇರಾ ಯುವ ಭಾರತ್ ಸಹಾಯ ಮಾಡುತ್ತದೆ.
  • ಇಂದಿನ ಯುವಜನತೆಯನ್ನು ತೊಡಗಿಸಿಕೊಳ್ಳಲು ಹೊಸ ಸಮಕಾಲೀನ ತಂತ್ರಜ್ಞಾನ-ನೇತೃತ್ವದ ವೇದಿಕೆಯನ್ನು ಸ್ಥಾಪಿಸುವುದು: ಇಂದಿನ ವೇಗದ ಜಗತ್ತು ಕ್ಷಿಪ್ರ ಸಂವಹನ, ಸಾಮಾಜಿಕ ಮಾಧ್ಯಮದ ವ್ಯಾಪಕತೆ ಮತ್ತು ಹೊಸ ಡಿಜಿಟಲ್ ಉಪಕರಣಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳ ಹೊರಹೊಮ್ಮುವಿಕೆಯಿಂದ ನಿರೂಪಿಸಲ್ಪಟ್ಟಿದೆ, ತಂತ್ರಜ್ಞಾನ-ಚಾಲಿತ ವೇದಿಕೆಯು ಯುವಜನರನ್ನು ಅವರ ಸಾಮರ್ಥ್ಯಗಳನ್ನು ಸುಧಾರಿಸಲು ಸಹಾಯ ಮಾಡುವ ಕಾರ್ಯಕ್ರಮಗಳೊಂದಿಗೆ ಮತ್ತು ಸಮುದಾಯ ಚಟುವಟಿಕೆಗಳೊಂದಿಗೆ ಸಂಪರ್ಕಿಸುತ್ತದೆ.
  • ಫಿಜಿಟಲ್ ಪೂರಕ ವ್ಯವಸ್ಥೆಯನ್ನು ರಚಿಸುವ ಮೂಲಕ ಪ್ರವೇಶವನ್ನು ಖಚಿತಪಡಿಸಿಕೊಳ್ಳುವುದು: ಮೇರಾ ಯುವ ಭಾರತ್ ವೇದಿಕೆಯು ಫಿಜಿಟಲ್ ಪೂರಕ ವ್ಯವಸ್ಥೆಯನ್ನು ರಚಿಸುತ್ತದೆ ಮತ್ತು ಸಮುದಾಯ ಪರಿವರ್ತನೆಗೆ ವೇಗವರ್ಧಕಗಳಾಗಲು ಯುವಜನರನ್ನು ಸಶಕ್ತಗೊಳಿಸುತ್ತದೆ. ಅವರು "ಯುವ ಸೇತು" ಆಗಿ ಕಾರ್ಯನಿರ್ವಹಿಸುತ್ತಾರೆ, ಸರ್ಕಾರವನ್ನು ನಾಗರಿಕರೊಂದಿಗೆ ಸಂಪರ್ಕಿಸುತ್ತಾರೆ. ಇತ್ತೀಚೆಗೆ, ಯುವ ವ್ಯವಹಾರಗಳ ಇಲಾಖೆಯ ವೆಬ್ ಪೋರ್ಟಲ್ yuva.gov.in, “ನನ್ನ ಮಣ್ಣು, ನನ್ನ ದೇಶ” ಎಂಬ ರಾಷ್ಟ್ರವ್ಯಾಪಿ ಕಾರ್ಯಕ್ರಮವನ್ನು ಆಯೋಜಿಸಿತು, ಇದರಲ್ಲಿ 50 ಮಿಲಿಯನ್ ಯುವಜನರು ಭಾಗವಹಿಸಿದರು ಮತ್ತು ಭಾರತದಾದ್ಯಂತ ಅಮೃತ ವಾಟಿಕಾ ನಿರ್ಮಿಸಲು 23 ಮಿಲಿಯನ್ ಸಸಿಗಳನ್ನು ನೆಡಲು ಸಹಾಯ ಮಾಡಿದರು. ಲಕ್ಷಾಂತರ ಯುವಜನರನ್ನು ನೆಟ್‌ವರ್ಕ್‌ ನಲ್ಲಿ ಅಡೆತಡೆಯಿಲ್ಲದೆ ಸಂಪರ್ಕಿಸುವ ಇಂತಹ ಫಿಜಿಟಲ್ ಪೂರಕ ವ್ಯವಸ್ಥೆಯನ್ನು ರಚಿಸಲು ಮತ್ತು ಉಳಿಸಿಕೊಳ್ಳಲು ಮೇರಾ ಯುವ ಭಾರತ್ ಸಹಾಯ ಮಾಡುತ್ತದೆ.

ಉದ್ದೇಶಗಳು:

ಮೇರಾ ಯುವ ಭಾರತ (MY Bharat) ದ ಪ್ರಾಥಮಿಕ ಉದ್ದೇಶವು ಯುವಜನರ ಪ್ರಗತಿಗೆ ಮೀಸಲಾದ ಸಂಪೂರ್ಣ ಸರ್ಕಾರಿ ವೇದಿಕೆಯಾಗಿದೆ. ಇದರ ಉದ್ದೇಶಗಳು ಹೀಗಿವೆ:

  • ಯುವಜನರಲ್ಲಿ ನಾಯಕತ್ವ ಅಭಿವೃದ್ಧಿ
  • ಪ್ರತ್ಯೇಕವಾದ ದೈಹಿಕ ಸಂವಹನದಿಂದ ಪ್ರೋಗ್ರಾಮ್ಯಾಟಿಕ್ ಕೌಶಲ್ಯಗಳಿಗೆ ಬದಲಾಯಿಸುವ ಮೂಲಕ ಅನುಭವದ ಕಲಿಕೆಯ ಮೂಲಕ ನಾಯಕತ್ವ ಕೌಶಲ್ಯಗಳನ್ನು ಸುಧಾರಿಸುವುದು.
  • ಯುವಜನರನ್ನು ಸಾಮಾಜಿಕ ನವೋದ್ಯಮಿಗಳು ಮತ್ತು ಸಮುದಾಯಗಳ ನಾಯಕರನ್ನಾಗಿಸಲು ಹೂಡಿಕೆ ಮಾಡುವುದು.
  • ಯುವಕರ ಆಕಾಂಕ್ಷೆಗಳು ಮತ್ತು ಸಮುದಾಯದ ಅಗತ್ಯಗಳ ನಡುವೆ ಉತ್ತಮ ಹೊಂದಾಣಿಕೆ.
  • ಅಸ್ತಿತ್ವದಲ್ಲಿರುವ ಕಾರ್ಯಕ್ರಮಗಳ ಸಮನ್ವಯದ ಮೂಲಕ ಹೆಚ್ಚಿನ ದಕ್ಷತೆ.
  • ಯುವಜನರಿಗೆ ಮತ್ತು ಸಚಿವಾಲಯಗಳಿಗೆ ಒಂದು-ನಿಲುಗಡೆ ಕೇಂದ್ರವಾಗಿ ಕಾರ್ಯನಿರ್ವಹಿಸುವುದು.
  • ಕೇಂದ್ರೀಕೃತ ಯುವ ಡೇಟಾಬೇಸ್ ರಚಿಸುವುದು.
  • ಸರ್ಕಾರದ ಯುವಜನ ಉಪಕ್ರಮಗಳು ಮತ್ತು ಯುವಕರೊಂದಿಗೆ ತೊಡಗಿಸಿಕೊಳ್ಳುವ ಇತರ ಪಾಲುದಾರರ ಚಟುವಟಿಕೆಗಳನ್ನು ಸಂಪರ್ಕಿಸಲು ಸುಧಾರಿತ ದ್ವಿಮುಖ ಸಂವಹನ.
  • ಫಿಜಿಟಲ್‌ - ಭೌತಿಕ ಮತ್ತು ಡಿಜಿಟಲ್ ಅನುಭವಗಳ ಸಂಯೋಜನೆ- ಪೂರಕ ವ್ಯವಸ್ಥೆಯನ್ನು ರಚಿಸುವ ಮೂಲಕ ಪ್ರವೇಶವನ್ನು ಖಚಿತಪಡಿಸಿಕೊಳ್ಳುವುದು.

****

 



(Release ID: 1973497) Visitor Counter : 237