ಹಣಕಾಸು ಸಚಿವಾಲಯ
ಜಿ20 ಎಫ್.ಡಬ್ಲ್ಯು.ಜಿ.ಯ ನಾಲ್ಕನೇ ಮತ್ತು ಅಂತಿಮ ಸಭೆಯಿಂದು ಛತ್ತೀಸ್ ಗಢದ ರಾಯ್ ಪುರದಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ
ಸಭೆಯಲ್ಲಿ ಜಾಗತಿಕ ಆರ್ಥಿಕ ದೃಷ್ಟಿಕೋನದ ಕುರಿತು ಆಳವಾದ ಚರ್ಚೆಗಳು ನಡೆದವು
ಜಿ20 ಚರ್ಚೆಗಳನ್ನು ಒಳಗೊಳ್ಳುವ ಮತ್ತು ಮಾನವ ಕೇಂದ್ರಿತವಾಗಿಸುವ ಜನಭಾಗಿದಾರಿ ಕಾರ್ಯಕ್ರಮನ್ನಾಗಿ ಈ ಸಭೆಯನ್ನು ಆರ್.ಬಿ.ಐ. ಆಯೋಜಿಸಿದೆ
ಛತ್ತೀಸ್ ಗಢದ ರುಚಿಕರವಾದ ತಿನಿಸುಗಳೊಂದಿಗೆ ಸಾಂಸ್ಕೃತಿಕ ರಸಸಂಜೆಯನ್ನು ಪ್ರತಿನಿಧಿಗಳು ಆನಂದಿಸಿದರು
Posted On:
19 SEP 2023 3:25PM by PIB Bengaluru
ಭಾರತೀಯ ಜಿ20 ಅಧ್ಯಕ್ಷತೆಯಡಿಯಲ್ಲಿ “ಜಿ20 ಫ್ರೇಮ್ವರ್ಕ್ ವರ್ಕಿಂಗ್ ಗ್ರೂಪ್” (ಎಫ್.ಡಬ್ಲ್ಯು.ಜಿ.) ಇದರ ನಾಲ್ಕನೇ ಮತ್ತು ಅಂತಿಮ ಸಭೆಯು ಇಂದು ಛತ್ತೀಸ್ಗಢದ ರಾಯ್ ಪುರದಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಎಫ್.ಡಬ್ಲ್ಯು.ಜಿ. ಅಧ್ಯಕ್ಷತೆಯನ್ನು ಭಾರತ ಮತ್ತು ಯುಕೆ ಜಂಟಿಯಾಗಿ ಹೊಂದಿದೆ. ಸೆಪ್ಟೆಂಬರ್ 18-19, 2023 ರ ಅವಧಿಯಲ್ಲಿ ಎರಡು ದಿನಗಳ ಸಭೆಯು ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಸಲಹೆಗಾರರಾದ ಶ್ರೀಮತಿ ಚಾಂದಿನಿ ರೈನಾ ಮತ್ತು ಯು.ಕೆ.ಯ ಹೆಚ್.ಎಂ. ಖಜಾನೆಯ ಮುಖ್ಯ ಆರ್ಥಿಕ ಸಲಹೆಗಾರರಾದ ಶ್ರೀಮತಿ ಸ್ಯಾಮ್ ಬೆಕೆಟ್ ಇವರುಗಳ ಜಂಟಿ ಅಧ್ಯಕ್ಷತೆಯಲ್ಲಿ ನಡೆಯಿತು. ಜಿ20 ಸದಸ್ಯರು ಮತ್ತು ಆಹ್ವಾನಿತ ದೇಶಗಳು ಮತ್ತು ಅಂತರರಾಷ್ಟ್ರೀಯ ಮತ್ತು ಪ್ರಾದೇಶಿಕ ಸಂಸ್ಥೆಗಳಿಂದ ಸುಮಾರು 65 ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.
(ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಸಲಹೆಗಾರರಾದ ಶ್ರೀಮತಿ ಚಾಂದಿನಿ ರೈನಾ ಮತ್ತು ಯು.ಕೆ. ಹೆಚ್.ಎಂ. ಖಜಾನೆ, ಮುಖ್ಯ ಆರ್ಥಿಕ ಸಲಹೆಗಾರರಾದ ಶ್ರೀಮತಿ ಸ್ಯಾಮ್ ಬೆಕೆಟ್ ಇವರುಗಳ ಜಂಟಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.)
ಭಾರತದ ಜಿ20 ಅಧ್ಯಕ್ಷತೆಯ ಸಮಯದಲ್ಲಿ ಎಫ್.ಡಬ್ಲ್ಯು.ಜಿ. ಮಾಡಿದ ಕೆಲಸದ ಉತ್ತಮತೆಯನ್ನು ಈ ಸಭೆಯು ಗುರುತಿಸಿತು. ಇದು 2023 ರಲ್ಲಿ ಎಫ್.ಡಬ್ಲ್ಯು.ಜಿ. ಸಾಧಿಸಿದ ಗಣನೀಯ ಪ್ರಗತಿಯನ್ನು ಪ್ರತಿಬಿಂಬಿಸಲು ಮತ್ತು ಇದನ್ನು ಮುಂದಕ್ಕೆ ಸಾಗಿಸುವ ಆಯ್ಕೆಗಳನ್ನು ಅನ್ವೇಷಿಸಲು ಅವಕಾಶವನ್ನು ಒದಗಿಸಿದೆ.
(ಜಿ20 ನ ವಿವಿಧ ಪಾಲುದಾರ ದೇಶಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರು)
ಗುಂಪು, ಈ ವರ್ಷ ಎರಡು ಜಿ20 ವರದಿಗಳನ್ನು ತಯಾರಿಸಿ ಯಶಸ್ವಿಯಾಗಿ ವಿತರಿಸಿದೆ, ಇವುಗಳನ್ನು ದೆಹಲಿ ನಾಯಕರ ಹೊಸ ಘೋಷಣೆಯಲ್ಲಿ ಉಲ್ಲೇಖಿಸಲಾಗಿದೆ: ಆಹಾರ ಮತ್ತು ಇಂಧನ ಅಭದ್ರತೆಯ ಸ್ಥೂಲ ಆರ್ಥಿಕ ಪರಿಣಾಮಗಳ ಕುರಿತು ಜಿ20 ವರದಿ ಮತ್ತು ಹವಾಮಾನ ಬದಲಾವಣೆ ಮತ್ತು ಪರಿವರ್ತನೆಯ ಹಾದಿಗಳಿಂದ ಉಂಟಾಗುವ ಸ್ಥೂಲ ಆರ್ಥಿಕ ಅಪಾಯಗಳ ಕುರಿತು ಜಿ20 ವರದಿ. ಈ ಜಾಗತಿಕ ಸವಾಲುಗಳಿಗೆ ಸಂಬಂಧಿಸಿದ ಸ್ಥೂಲ ಆರ್ಥಿಕ ಪರಿಣಾಮಗಳನ್ನು ನಿರ್ಣಯಿಸುವ ಮೂಲಕ ಜಾಗತಿಕ ಸಂಭಾಷಣೆಯನ್ನು ಮುಂದುವರಿಸುವ ಅಗತ್ಯವನ್ನು ಸದಸ್ಯರು ಗುರುತಿಸಿದ್ದಾರೆ ಮತ್ತು ಅವುಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು ನೀತಿ ಆಯ್ಕೆಗಳನ್ನು ಅನ್ವೇಷಿಸಿ, ಶಿಫಾರಸು ಮಾಡಿದ್ದಾರೆ.
(ಸಸಿ ನೆಡುವ ಕಾರ್ಯಕ್ರಮದ ನಂತರ ಜಿ20 ಪಾರ್ಕ್ನಲ್ಲಿ ಪ್ರತಿನಿಧಿಗಳು.)
ಸಭೆಯಲ್ಲಿ ಜಾಗತಿಕ ಆರ್ಥಿಕ ದೃಷ್ಟಿಕೋನ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳ ಪ್ರಸ್ತುತಿಗಳ ಆಧಾರದ ಮೇಲೆ ಪ್ರಮುಖ ಅಪಾಯಗಳ ಕುರಿತು ಆಳವಾದ ಚರ್ಚೆಗಳು ನಡೆದವು. ಐ.ಎಂ.ಎಫ್. ಒದಗಿಸಿದ ನವೀಕರಣದ ಆಧಾರದ ಮೇಲೆ ಕರಡು ಜಿ20/ ಐ.ಎಂ.ಎಫ್. ಬಲಿಷ್ಟ ಸುಸ್ಥಿರ(ಸ್ಟ್ರಾಂಗ್ ಸಸ್ಟೈನಬಲ್), ಸಮತೋಲಿತ ಮತ್ತು ಅಂತರ್ಗತ ಬೆಳವಣಿಗೆಯ ವರದಿಯ ಆರಂಭಿಕ ಸಂಶೋಧನೆಗಳ ಕುರಿತು ಸಭೆಯಲ್ಲಿ ಚರ್ಚೆಗಳನ್ನು ನಡೆಸಲಾಯಿತು.
ಜಿ20 ಚರ್ಚೆಗಳನ್ನು ಹೆಚ್ಚು ಅಂತರ್ಗತ ಮತ್ತು ಮಾನವ ಕೇಂದ್ರಿತವಾಗಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಹಲವಾರು ಜನಭಾಗಿದರಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಇದು ಆರ್ಥಿಕ ಸಾಕ್ಷರತಾ ಕಾರ್ಯಕ್ರಮಗಳ ಸರಣಿ, ಜಿ20 ಜಾಗೃತಿ ಕಾರ್ಯಕ್ರಮ, ಚಿತ್ರಕಲೆ ಸ್ಪರ್ಧೆ, ಘೋಷಣೆ-ಬರವಣಿಗೆ ಸ್ಪರ್ಧೆ ಮತ್ತು ರಸಪ್ರಶ್ನೆ ಸ್ಪರ್ಧೆಯನ್ನು ಒಳಗೊಂಡಂತೆ ಸಾರ್ವಜನಿಕರು, ವಿದ್ಯಾರ್ಥಿಗಳು ಮತ್ತು ಸ್ವ-ಸಹಾಯ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಹಮ್ಮಿಕೊಂಡ ವಿವಿಧ ಕಾರ್ಯಕ್ರಮಗಳನ್ನು ಒಳಗೊಂಡಿತ್ತು.
(ಪುರ್ಖೌತಿ ಮುಕತಂಗನ್ ಗೆ ಭೇಟಿ ನೀಡುತ್ತಿರುವ ಪ್ರತಿನಿಧಿಗಳು.)
ಪ್ರತಿನಿಧಿಗಳು ನಂದನವನ ಝೂಲಾಜಿಕಲ್ ಗಾರ್ಡನ್ ಗೆ ವಿಹಾರಯಾತ್ರೆ ಮಾಡಿ, ಪ್ರಕೃತಿ ಸೊಬಗನ್ನು ಆನಂದಿಸಿದರು, ಇದು ಜಂಗಲ್ ಸಫಾರಿ, ಝೂಲಾಜಿಕಲ್ ಪಾರ್ಕ್, ಪಾರುಗಾಣಿಕಾ ಮತ್ತು ಪುನರ್ವಸತಿ ಕೇಂದ್ರ ಮತ್ತು ಹೆಚ್ಚಿನ ಸಂಖ್ಯೆಯ ವಲಸೆ ಹಕ್ಕಿಗಳನ್ನು ಸೆಳೆಯುವ ಮತ್ತು ಛತ್ತೀಸ್ಗಢದ ಸೊಂಪಾದ ಮತ್ತು ಸುಂದರವಾದ ಭೂದೃಶ್ಯಗಳನ್ನು ಪ್ರದರ್ಶಿಸುವ ಖಾಂಡ್ವಾ ಜಲಾಶಯ ಸೇರಿದಂತೆ ಇತರ ಆಕರ್ಷಣೆಗಳನ್ನು ಹೊಂದಿದೆ.
ಪ್ರತಿನಿಧಿಗಳಿಗಾಗಿ ವಿಶೇಷ 'ರಾತ್ರಿ ಭೋಜನದ ಜೊತೆಗೆ ಸಂವಾದ (ರಾತ್ರಿ ಭೋಜ್ ಪರ್ ಸಂವಾದ್)' ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಯಿತು, ಇದು ಛತ್ತೀಸ್ಗಢದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ರುಚಿಕರವಾದ ಪಾಕಪದ್ಧತಿಯನ್ನು ಸವಿದು ಅನುಭವಿಸಲು ಪ್ರತಿನಿಧಿಗಳಿಗೆ ವಿಶೇಷ ಅವಕಾಶವನ್ನು ನೀಡಿತು.
('ರಾತ್ರಿ ಭೋಜನದ (ರಾತ್ರಿ ಭೋಜ್ ಪರ್ ಸಂವಾದ್)' ಮತ್ತು ಸಂವಾದದಲ್ಲಿ ಪ್ರತಿನಿಧಿಗಳು ಜಾನಪದ ಛತ್ತೀಸ್ಗಢಿ ನೃತ್ಯವನ್ನು ಆನಂದಿಸಿದರು)
ಭಾರತೀಯ ಅಧ್ಯಕ್ಷತೆಯ "ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ" ಎಂಬ ಸಂಕಲ್ಪ ವಿಷಯದ ಚೌಕಟ್ಟು ಮತ್ತು ಉತ್ಸಾಹದಲ್ಲಿ, ಸ್ಥೂಲ ಆರ್ಥಿಕ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಮತ್ತು ಎಲ್ಲರ ಅನುಕೂಲಕ್ಕಾಗಿ ಹೆಚ್ಚು ಚೇತರಿಸಿಕೊಳ್ಳುವ ಮತ್ತು ಸಮೃದ್ಧ ಜಾಗತಿಕ ಆರ್ಥಿಕತೆಯನ್ನು ನಿರ್ಮಿಸಲು, ಹಾಗೂ ಅಂತರರಾಷ್ಟ್ರೀಯ ಸಹಕಾರವನ್ನು ಹೆಚ್ಚಿಸಲು, ಒಟ್ಟಾಗಿ ಕೆಲಸ ಮಾಡಲು ಈ ಎಫ್.ಡಬ್ಲ್ಯು.ಜಿ. ಗುಂಪು ಒಪ್ಪಿಕೊಂಡಿತು.
****
(Release ID: 1958888)
Visitor Counter : 72