ಪ್ರಧಾನ ಮಂತ್ರಿಯವರ ಕಛೇರಿ
2023ರ ಸೆಪ್ಟೆಂಬರ್ 17ರಂದು ವಿಶ್ವಕರ್ಮ ಜಯಂತಿಯ ಸಂದರ್ಭದಲ್ಲಿ ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಕುಶಲಕರ್ಮಿಗಳಿಗಾಗಿ 'ಪಿಎಂ ವಿಶ್ವಕರ್ಮ' ಯೋಜನೆಗೆ ಪ್ರಧಾನಮಂತ್ರಿಯವರು ಚಾಲನೆ ನೀಡಲಿದ್ದಾರೆ
ಈ ಯೋಜನೆಯು ಸಾಂಪ್ರದಾಯಿಕ ಕರಕುಶಲತೆಯಲ್ಲಿ ತೊಡಗಿರುವ ಜನರನ್ನು ಬೆಂಬಲಿಸುವ ಮತ್ತು ಕೌಶಲ್ಯಗೊಳಿಸುವ ಪ್ರಧಾನ ಮಂತ್ರಿಯವರ ಆಶಯದಿಂದ ಸ್ಫೂರ್ತಿ ಪಡೆದಿದೆ
'ಪಿಎಂ ವಿಶ್ವಕರ್ಮ' ಯೋಜನೆಗೆ ಕೇಂದ್ರ ಸರ್ಕಾರ 13,000 ಕೋಟಿ ರೂ.ಗಳ ಸಂಪೂರ್ಣ ಧನಸಹಾಯ ನೀಡಲಿದೆ
'ಪಿಎಂ ವಿಶ್ವಕರ್ಮ' ಯೋಜನೆಯ ವಿಶಾಲ ವ್ಯಾಪ್ತಿಯು ಹದಿನೆಂಟು ಕರಕುಶಲ ವಸ್ತುಗಳನ್ನು ಒಳಗೊಂಡಿದೆ
ವಿಶ್ವಕರ್ಮರಿಗೆ ʻಪಿಎಂ ವಿಶ್ವಕರ್ಮʼ ಪ್ರಮಾಣಪತ್ರ ಮತ್ತು ಗುರುತಿನ ಚೀಟಿ ಮೂಲಕ ಮಾನ್ಯತೆ ನೀಡಲಾಗುವುದು
ವಿಶ್ವಕರ್ಮರಿಗೆ ಸಾಲದ ನೆರವು ಮತ್ತು ಕೌಶಲ್ಯ ಉನ್ನತೀಕರಣಕ್ಕಾಗಿ ತರಬೇತಿ ನೀಡಲಾಗುವುದು
Posted On:
15 SEP 2023 12:36PM by PIB Bengaluru
ವಿಶ್ವಕರ್ಮ ಜಯಂತಿಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಸೆಪ್ಟೆಂಬರ್ 17 ರಂದು ಬೆಳಗ್ಗೆ 11 ಗಂಟೆಗೆ ನವದೆಹಲಿಯ ದ್ವಾರಕಾದ `ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಷನ್ ಮತ್ತು ಎಕ್ಸ್‌ಪೋʼ ಕೇಂದ್ರದಲ್ಲಿ "ಪಿಎಂ ವಿಶ್ವಕರ್ಮ" ಎಂಬ ಹೊಸ ಯೋಜನೆಗೆ ಚಾಲನೆ ನೀಡಲಿದ್ದಾರೆ.
ಸಾಂಪ್ರದಾಯಿಕ ಕರಕುಶಲತೆಯಲ್ಲಿ ತೊಡಗಿರುವ ಜನರಿಗೆ ಬೆಂಬಲ ನೀಡುವತ್ತ ಪ್ರಧಾನ ಮಂತ್ರಿಯವರ ನಿರಂತರ ಗಮನ ಹರಿಸುತ್ತಿದ್ದಾರೆ. ಕುಶಲಕರ್ಮಿಗಳನ್ನು ಆರ್ಥಿಕವಾಗಿ ಬೆಂಬಲಿಸುವುದು ಮಾತ್ರವಲ್ಲದೆ ಸ್ಥಳೀಯ ಉತ್ಪನ್ನಗಳು, ಕಲೆ ಮತ್ತು ಕರಕುಶಲ ವಸ್ತುಗಳ ಮೂಲಕ ಪ್ರಾಚೀನ ಸಂಪ್ರದಾಯ, ಸಂಸ್ಕೃತಿ ಮತ್ತು ವೈವಿಧ್ಯಮಯ ಪರಂಪರೆಯನ್ನು ಜೀವಂತವಾಗಿರಿಸುವ ಹಾಗೂ ಪ್ರವರ್ಧಮಾನಕ್ಕೆ ತರುವ ಬಯಕೆಯೊಂದಿಗೆ ಈ ಉಪಕ್ರಮ ಕೈಗೊಳ್ಳಲಾಗಿದೆ.
ʻಪಿಎಂ ವಿಶ್ವಕರ್ಮʼ ಯೋಜನೆಗೆ ಕೇಂದ್ರ ಸರ್ಕಾರವು 13,000 ಕೋಟಿ ರೂ.ಗಳ ಸಂಪೂರ್ಣ ಧನಸಹಾಯ ನೀಡಲಿದೆ. ಈ ಯೋಜನೆಯಡಿ, ಬಯೋಮೆಟ್ರಿಕ್ ಆಧಾರಿತ ʻಪಿಎಂ ವಿಶ್ವಕರ್ಮ ಪೋರ್ಟಲ್ʼ ಬಳಸಿ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ವಿಶ್ವಕರ್ಮರು ಉಚಿತವಾಗಿ ನೋಂದಾಯಿಸಿಕೊಳ್ಳಬಹುದು. ಅವರಿಗೆ ʻಪಿಎಂ ವಿಶ್ವಕರ್ಮ ಪ್ರಮಾಣಪತ್ರʼ ಮತ್ತು ಗುರುತಿನ ಚೀಟಿ ನೀಡಲಾಗುವುದು. ಜೊತೆಗೆ, ಮೂಲ ಮತ್ತು ಸುಧಾರಿತ ತರಬೇತಿಯನ್ನು ಒಳಗೊಂಡ ಕೌಶಲ್ಯ ಉನ್ನತೀಕರಣ, 15,000 ರೂ.ಗಳ ಟೂಲ್‌ಕಿಟ್ ಪ್ರೋತ್ಸಾಹಧನ, ಮೊದಲ ಕಂತಿನಲ್ಲಿ 1 ಲಕ್ಷ ರೂ.ಗಳವರೆಗೆ ಮೇಲಾಧಾರ ರಹಿತ ಸಾಲ ಬೆಂಬಲ ಹಾಗೂ ಎರಡನೇ ಕಂತಿನಲ್ಲಿ 2 ಲಕ್ಷ ರೂ.ಗಳವರೆಗೆ 5% ರಿಯಾಯಿತಿ ಬಡ್ಡಿದರದಲ್ಲಿ ಸಾಲ, ಡಿಜಿಟಲ್ ವಹಿವಾಟುಗಳಿಗೆ ಪ್ರೋತ್ಸಾಹ ಮತ್ತು ಮಾರ್ಕೆಟಿಂಗ್ ಬೆಂಬಲವನ್ನು ನೀಡಲಾಗುವುದು.
ಕೈಯಿಂದ ಮತ್ತು ಉಪಕರಣಗಳೊಂದಿಗೆ ಕೆಲಸ ಮಾಡುವ ವಿಶ್ವಕರ್ಮರ ಸಾಂಪ್ರದಾಯಿಕ ಕೌಶಲ್ಯಗಳ ಗುರು-ಶಿಷ್ಯ ಪರಂಪರೆಯನ್ನು ಅಥವಾ ಕುಟುಂಬ ಆಧಾರಿತ ಅಭ್ಯಾಸವನ್ನು ಬಲಪಡಿಸುವ ಹಾಗೂ ಪೋಷಿಸುವ ಗುರಿಯನ್ನು ಈ ಯೋಜನೆಯು ಹೊಂದಿದೆ. ಕುಶಲಕರ್ಮಿಗಳ ಉತ್ಪನ್ನಗಳು ಮತ್ತು ಸೇವೆಗಳ ಗುಣಮಟ್ಟ ಹಾಗೂ ವ್ಯಾಪ್ತಿಯನ್ನು ಸುಧಾರಿಸುವುದು ಜೊತೆಗೆ ಅವುಗಳನ್ನು ದೇಶೀಯ ಮತ್ತು ಜಾಗತಿಕ ಮೌಲ್ಯ ಸರಪಳಿಗಳೊಂದಿಗೆ ಸಂಯೋಜಿಸುವಂತೆ ಖಚಿತಪಡಿಸಿಕೊಳ್ಳುವುದು ʻಪಿಎಂ ವಿಶ್ವಕರ್ಮʼ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಈ ಯೋಜನೆಯು ಭಾರತದಾದ್ಯಂತ ಗ್ರಾಮೀಣ ಮತ್ತು ನಗರ ಪ್ರದೇಶಗಳ ಕಲಾವಿದರು ಮತ್ತು ಕುಶಲಕರ್ಮಿಗಳಿಗೆ ಬೆಂಬಲವನ್ನು ಒದಗಿಸುತ್ತದೆ. ಹದಿನೆಂಟು ಸಾಂಪ್ರದಾಯಿಕ ಕರಕುಶಲ ವಸ್ತುಗಳು ʻಪಿಎಂ ವಿಶ್ವಕರ್ಮʼ ಯೋಜನೆ ಅಡಿಯಲ್ಲಿ ಬರಲಿವೆ. ಇವುಗಳಲ್ಲಿ (i) ಬಡಗಿ; (ii) ದೋಣಿ ತಯಾರಕ; (iii) ಶಸ್ತ್ರ ತಯಾರಕ; (iv) ಕಮ್ಮಾರ; (v) ಸುತ್ತಿಗೆ ಮತ್ತು ಟೂಲ್ ಕಿಟ್ ತಯಾರಕ; (vi) ಬೀಗಗಳ ತಯಾರಕ; (vii) ಅಕ್ಕಸಾಲಿಗ; (viii) ಕುಂಬಾರ; (ix) ಶಿಲ್ಪಿ, ಕಲ್ಲು ಒಡೆಯುವವನು; (x) ಚಮ್ಮಾರ (ಶೂಸ್ಮಿತ್ / ಪಾದರಕ್ಷೆ ಕುಶಲಕರ್ಮಿ); (xi) ಗಾರೆ ಕೆಲಸಗಾರ(ರಾಜ್ಮಿಸ್ತ್ರಿ); (xii) ಬುಟ್ಟಿ/ಚಾಪೆ/ಪೊರಕೆ ತಯಾರಕ/ನಾರು ನೇಕಾರ; (xiii) ಗೊಂಬೆ ಮತ್ತು ಆಟಿಕೆ ತಯಾರಕ (ಸಾಂಪ್ರದಾಯಿಕ); (xiv) ಕ್ಷೌರಿಕ; (xv) ಹೂಮಾಲೆ ತಯಾರಕ; (xvi) ಅಗಸ; (xvii) ದರ್ಜಿ; ಮತ್ತು (xviii) ಮೀನಿನ ಬಲೆ ತಯಾರಕ ಸೇರಿವೆ.
*****
(Release ID: 1957657)
Visitor Counter : 250
Read this release in:
English
,
Urdu
,
Hindi
,
Marathi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam