ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸೆಪ್ಟೆಂಬರ್ 14ರಂದು ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢಕ್ಕೆ ಪ್ರಧಾನಿ ಭೇಟಿ 


ಮಧ್ಯಪ್ರದೇಶದಲ್ಲಿ 50,700 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ಯೋಜನೆಗಳಿಗೆ ಪ್ರಧಾನ ಮಂತ್ರಿ ಶಂಕುಸ್ಥಾಪನೆ 

ಬಿನಾ ರಿಫೈನರಿಯಲ್ಲಿ ಪೆಟ್ರೋಕೆಮಿಕಲ್ ಕಾಂಪ್ಲೆಕ್ಸ್‌ನ ಶಂಕುಸ್ಥಾಪನೆ ನೆರವೇರಿಸಲಿರುವ  ಪ್ರಧಾನ ಮಂತ್ರಿ

ನರ್ಮದಪುರಂನಲ್ಲಿ 'ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನ ಉತ್ಪಾದನಾ ವಲಯ' ಮತ್ತು ರತ್ಲಾಮ್‌ನಲ್ಲಿ ಮೆಗಾ ಇಂಡಸ್ಟ್ರಿಯಲ್ ಪಾರ್ಕ್‌ಗೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನ ಮಂತ್ರಿ 

ಇಂದೋರ್‌ನಲ್ಲಿ 2 ಐಟಿ ಪಾರ್ಕ್ ಮತ್ತು ರಾಜ್ಯಾದ್ಯಂತ 6 ಹೊಸ ಕೈಗಾರಿಕಾ ಪಾರ್ಕ್‌ಗಳಿಗೆ ಪ್ರಧಾನ  ಮಂತ್ರಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ

ಛತ್ತೀಸ್‌ಗಢದಲ್ಲಿ ಸುಮಾರು 6,350 ಕೋಟಿ ರೂ. ಮೌಲ್ಯದ ಹಲವಾರು ಪ್ರಮುಖ ರೈಲು ಯೋಜನೆಗಳನ್ನು ಪ್ರಧಾನ ಮಂತ್ರಿ  ಲೋಕಾರ್ಪಣೆ ಮಾಡುವರು 

ಛತ್ತೀಸ್‌ಗಢದ 9 ಜಿಲ್ಲೆಗಳಲ್ಲಿ 'ಕ್ರಿಟಿಕಲ್ ಕೇರ್ ಬ್ಲಾಕ್‌'ಗಳ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಿ

ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರು ಅನೀಮಿಯಾ ರೋಗದ ಕುಡಗೋಲು ಜೀವಕೋಶ(ಸಿಕಲ್ ಸೆಲ್) 1 ಲಕ್ಷ ಕೌನ್ಸೆಲಿಂಗ್ ಕಾರ್ಡ್‌ಗಳನ್ನು ವಿತರಿಸಲಿದ್ದಾರೆ

Posted On: 13 SEP 2023 10:41AM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ಸೆಪ್ಟೆಂಬರ್  14ರಂದು ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢಕ್ಕೆ ಭೇಟಿ ನೀಡಲಿದ್ದಾರೆ. ಅಂದು ಬೆಳಗ್ಗೆ ಸುಮಾರು 11:15ಕ್ಕೆ ಪ್ರಧಾನ ಮಂತ್ರಿ ಅವರು ಮಧ್ಯಪ್ರದೇಶದ ಬಿನಾ ತಲುಪುತ್ತಾರೆ. ಅಲ್ಲಿ ಅವರು ‘ಬಿನಾ ರಿಫೈನರಿಯಲ್ಲಿ ಪೆಟ್ರೋಕೆಮಿಕಲ್ ಕಾಂಪ್ಲೆಕ್ಸ್’ ಮತ್ತು ರಾಜ್ಯಾದ್ಯಂತ 10 ಹೊಸ ಕೈಗಾರಿಕಾ ಯೋಜನೆಗಳು ಸೇರಿದಂತೆ ಒಟ್ಟು 50,700 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಮಧ್ಯಾಹ್ನ 3:15 ರ ಸುಮಾರಿಗೆ ಅವರು ಛತ್ತೀಸ್‌ಗಢದ ರಾಯ್‌ಗಢ ತಲುಪುತ್ತಾರೆ, ಅಲ್ಲಿ ಅವರು ರಾಷ್ಟ್ರದ ಪ್ರಮುಖ ರೈಲು ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರು ಛತ್ತೀಸ್‌ಗಢದ 9 ಜಿಲ್ಲೆಗಳಲ್ಲಿ 'ಕ್ರಿಟಿಕಲ್ ಕೇರ್ ಬ್ಲಾಕ್‌'ಗಳ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಜತೆಗೆ, ಅವರು ಕುಡಗೋಲು ಜೀವಕೋಶಗಳಿರುವ ಅನೀಮಿಯಾ ರೋಗಕ್ಕೆ ತುತ್ತಾಗಿರುವ ರೋಗಿಗಳಿಗೆ 1 ಲಕ್ಷ ಸಿಕಲ್ ಸೆಲ್ ಕೌನ್ಸೆಲಿಂಗ್ ಕಾರ್ಡ್‌ಗಳನ್ನು ವಿತರಿಸಲಿದ್ದಾರೆ.

ಮಧ್ಯಪ್ರದೇಶದಲ್ಲಿ ಪ್ರಧಾನ ಮಂತ್ರಿ

ರಾಜ್ಯದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಪ್ರಮುಖ ಉತ್ತೇಜನ ನೀಡುವ ಹಂತವಾಗಿ, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್(ಬಿಪಿಸಿಎಲ್)ನ ಬಿನಾ ರಿಫೈನರಿಯಲ್ಲಿ ಪೆಟ್ರೋಕೆಮಿಕಲ್ ಕಾಂಪ್ಲೆಕ್ಸ್‌ಗೆ ಪ್ರಧಾನ ಮಂತ್ರಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಅತ್ಯಾಧುನಿಕ ಸಂಸ್ಕರಣಾಗಾರವನ್ನು ಸುಮಾರು 49,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಇದು ಸುಮಾರು 1200 ಕೆಟಿಪಿಎ (ವರ್ಷಕ್ಕೆ ಕಿಲೋ-ಟನ್) ಎಥಿಲೀನ್ ಮತ್ತು ಪ್ರೊಪಿಲೀನ್ ಉತ್ಪಾದಿಸುತ್ತದೆ. ಇದು ಜವಳಿ, ಪ್ಯಾಕೇಜಿಂಗ್, ಫಾರ್ಮಾ ಮುಂತಾದ ವಿವಿಧ ಕ್ಷೇತ್ರಗಳಿಗೆ ಪ್ರಮುಖ ಅಂಶವಾಗಿದೆ. ಇದು ದೇಶದ ಆಮದು ಅವಲಂಬನೆ ಕಡಿಮೆ ಮಾಡುತ್ತದೆ. ಜತೆಗೆ, ಪ್ರಧಾನ ಮಂತ್ರಿ ಅವರ 'ಆತ್ಮನಿರ್ಭರ ಭಾರತ'ದ ದೂರದೃಷ್ಟಿ ಈಡೇರಿಸುವತ್ತ ಒಂದು ದಿಟ್ಟ ಹೆಜ್ಜೆಯಾಗಿದೆ. ಈ ಮೆಗಾ ಯೋಜನೆಯು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಪೆಟ್ರೋಲಿಯಂ ವಲಯದಲ್ಲಿ ಕೆಳಮಟ್ಟದ ಕೈಗಾರಿಕೆಗಳ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ.

ಕಾರ್ಯಕ್ರಮ ಸಂದರ್ಭದಲ್ಲಿ, ಪ್ರಧಾನ ಮಂತ್ರಿ ಅವರು ನರ್ಮದಾಪುರಂ ಜಿಲ್ಲೆಯಲ್ಲಿ ‘ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನ ಉತ್ಪಾದನಾ ವಲಯದ 10 ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇಂದೋರ್‌ನಲ್ಲಿ 2 ಐಟಿ ಪಾರ್ಕ್‌ಗಳು, ರತ್ಲಂನಲ್ಲಿ ಒಂದು ಮೆಗಾ ಇಂಡಸ್ಟ್ರಿಯಲ್ ಪಾರ್ಕ್ ಮತ್ತು ಮಧ್ಯಪ್ರದೇಶದಾದ್ಯಂತ 6 ಹೊಸ ಕೈಗಾರಿಕಾ ಪ್ರದೇಶಗಳು ಇದರಲ್ಲಿ ಸೇರಿವೆ.

ನರ್ಮದಾಪುರಂನಲ್ಲಿ ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನ ಉತ್ಪಾದನಾ ವಲಯವನ್ನು 460 ಕೋಟಿ ರೂಪಾಯಿಗೂ ಹೆಚ್ಚಿನ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಈ ಪ್ರದೇಶದಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಇದು ದಿಟ್ಟ ಹೆಜ್ಜೆಯಾಗಿದೆ. ಇಂದೋರ್‌ನಲ್ಲಿರುವ ‘ಐಟಿ ಪಾರ್ಕ್ 3 ಮತ್ತು 4’ ಅನ್ನು ಸುಮಾರು 550 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗುವುದು, ಐಟಿ ಮತ್ತು ಐಟಿಇಎಸ್ ವಲಯಕ್ಕೆ ಉತ್ತೇಜನ ನೀಡುತ್ತದೆ. ಜತೆಗೆ, ಯುವ ಸಮುದಾಯಕ್ಕೆ ಹೊಸ ಉದ್ಯೋಗಾವಕಾಶಗಳನ್ನು ತೆರೆಯುತ್ತದೆ.

ರತ್ಲಾಮ್‌ನಲ್ಲಿ ಮೆಗಾ ಇಂಡಸ್ಟ್ರಿಯಲ್ ಪಾರ್ಕ್ ಅನ್ನು 460 ಕೋಟಿ ರೂ.ಗಿಂತ ಅಧಿಕ ವೆಚ್ಚದಲ್ಲಿ ನಿರ್ಮಿಸಲಾಗುವುದು. ಜವಳಿ, ಆಟೋಮೊಬೈಲ್, ಔಷಧದಂತಹ ಪ್ರಮುಖ ವಲಯಗಳಿಗೆ ಇದು ಪ್ರಮುಖ ಕೇಂದ್ರವಾಗಲಿದೆ. ಈ ಪಾರ್ಕ್ ದೆಹಲಿ ಮುಂಬೈ ಎಕ್ಸ್‌ಪ್ರೆಸ್‌ ವೇಗೆ ಉತ್ತಮ ಸಂಪರ್ಕ ಕಲ್ಪಿಸಲಿದೆ. ಇಡೀ ಈ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಉತ್ತೇಜನ ನೀಡುತ್ತದೆ, ಯುವಕರಿಗೆ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.

ರಾಜ್ಯದಲ್ಲಿ ಸಮತೋಲಿತ ಪ್ರಾದೇಶಿಕ ಅಭಿವೃದ್ಧಿ ಮತ್ತು ಏಕರೂಪದ ಉದ್ಯೋಗಾವಕಾಶಗಳನ್ನು ಉತ್ತೇಜಿಸುವ ಗುರಿಯೊಂದಿಗೆ, ಶಾಜಾಪುರ, ಗುನಾ, ಮೌಗಂಜ್, ಅಗರ್ ಮಾಲ್ವಾ, ನರ್ಮದಾಪುರಂ ಮತ್ತು ಮಕ್ಸಿಯಲ್ಲಿ 6 ಹೊಸ ಕೈಗಾರಿಕಾ ಪ್ರದೇಶಗಳನ್ನು ಸುಮಾರು 310 ಕೋಟಿ ರೂ. ಒಟ್ಟು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು.

ಛತ್ತೀಸ್‌ಗಢದಲ್ಲಿ ಪ್ರಧಾನ ಮಂತ್ರಿ

ಪ್ರಧಾನ ಮಂತ್ರಿ ಅವರು ಸುಮಾರು 6,350 ಕೋಟಿ ರೂ. ಮೌಲ್ಯದ ಪ್ರಮುಖ ರೈಲು ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಇದು ದೇಶಾದ್ಯಂತ ಸಂಪರ್ಕ ಸುಧಾರಿಸಲು ಒತ್ತು ನೀಡಲಿದೆ. ರಾಯಗಢದಲ್ಲಿ ಜರುಗುವ ಸಾರ್ವಜನಿಕ ಕಾರ್ಯಕ್ರಮದಲ್ಲಿ  ಛತ್ತೀಸ್‌ಗಢ ಪೂರ್ವ ರೈಲು ಯೋಜನೆ ಹಂತ-I, ಚಂಪಾದಿಂದ ಜಮ್ಗಾ ನಡುವಿನ 3ನೇ ರೈಲು ಮಾರ್ಗ, ಪೆಂಡ್ರಾ ರಸ್ತೆಯಿಂದ ಅನುಪ್ಪುರ್ ನಡುವಿನ 3ನೇ ರೈಲು ಮಾರ್ಗ ಮತ್ತು ತಲೈಪಲ್ಲಿ ಕಲ್ಲಿದ್ದಲು ಗಣಿಯಿಂದ ಎನ್ ಟಿಪಿಸಿ ಲಾರಾ ಸೂಪರ್ ಥರ್ಮಲ್ ಪವರ್ ಸ್ಟೇಷನ್ (ಎಸ್ ಟಿಪಿಎಸ್)ಗೆ ಸಂಪರ್ಕ ಕಲ್ಪಿಸುವ ಎಂಜಿಆರ್ (ಮೆರ್ರಿ-ಗೋ-ರೌಂಡ್) ವ್ಯವಸ್ಥೆ ಸೇರಿವೆ. ಈ ರೈಲು ಯೋಜನೆಗಳು ಈ ಪ್ರದೇಶದಲ್ಲಿ ಪ್ರಯಾಣಿಕರ ಚಲನೆ ಮತ್ತು ಸರಕು ಸಾಗಣೆಯನ್ನು ಸುಗಮಗೊಳಿಸುವ ಮೂಲಕ ಸಾಮಾಜಿಕ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡುತ್ತದೆ.

ಬಹುಮಾದರಿ ಸಂಪರ್ಕಕ್ಕಾಗಿ ಮಹತ್ವಾಕಾಂಕ್ಷೆಯ ಪಿಎಂ ಗತಿಶಕ್ತಿ - ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅಡಿ, ಛತ್ತೀಸ್‌ಗಢ ಪೂರ್ವ ರೈಲು ಯೋಜನೆ ಹಂತ-I ಅಭಿವೃದ್ಧಿಪಡಿಸಲಾಗುತ್ತಿದೆ. ಖಾರ್ಸಿಯಾದಿಂದ ಧರಮ್‌ಜಯಗಢ್‌ಗೆ 124.8 ಕಿಮೀ ರೈಲು ಮಾರ್ಗವನ್ನು ಒಳಗೊಂಡಿದೆ. ಗಾರೆ-ಪೆಲ್ಮಾಕ್ಕೆ ಸ್ಪರ್ ಲೈನ್(2ನೇ ರೈಲು ಮಾರ್ಗ ಅಥವಾ ಅಲ್ಪ ದೂರದ ವಿಭಾಗೀಯ ಮಾರ್ಗ) ಮತ್ತು ಛಲ್ ಅನ್ನು ಸಂಪರ್ಕಿಸುವ 3 ಫೀಡರ್ ಮಾರ್ಗಗಳನ್ನು ಒಳಗೊಂಡಿದೆ. ಇದು ಬರೌದ್, ದುರ್ಗಾಪುರ ಮತ್ತು ಇತರ ಕಲ್ಲಿದ್ದಲು ಗಣಿಗಳಿಗೆ ಸಂಪರ್ಕ ಕಲ್ಪಿಸಲಿದೆ.  3,055 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ರೈಲು ಮಾರ್ಗ, ವಿದ್ಯುದೀಕರಿಸಿದ ಬ್ರಾಡ್ ಗೇಜ್ ಲೆವೆಲ್ ಕ್ರಾಸಿಂಗ್‌ಗಳು ಮತ್ತು ಪ್ರಯಾಣಿಕರ ಸೌಕರ್ಯಗಳೊಂದಿಗೆ ಉಚಿತ ಡಬಲ್ ಲೈನ್ ಅಳವಡಿಸಲಾಗಿದೆ. ಇದು ಛತ್ತೀಸ್‌ಗಢದ ರಾಯ್‌ಗಢದಲ್ಲಿರುವ ಮಂಡ್-ರಾಯಗಢ ಕಲ್ಲಿದ್ದಲು ಕ್ಷೇತ್ರಗಳಿಂದ ಕಲ್ಲಿದ್ದಲು ಸಾಗಣೆಗೆ ರೈಲು ಸಂಪರ್ಕ ಒದಗಿಸುತ್ತದೆ.

ಪೆಂಡ್ರಾ ರಸ್ತೆಯಿಂದ ಅನುಪ್ಪುರ್ ನಡುವಿನ 3ನೇ ರೈಲು ಮಾರ್ಗವು 50 ಕಿಮೀ ಉದ್ದವಿದ್ದು, ಸುಮಾರು 516 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಚಂಪಾ ಮತ್ತು ಜಮ್ಗಾ ರೈಲು ವಿಭಾಗದ ನಡುವಿನ 98 ಕಿಲೋಮೀಟರ್ ಉದ್ದದ 3ನೇ ಮಾರ್ಗವನ್ನು ಸುಮಾರು 796 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಹೊಸ ರೈಲು ಮಾರ್ಗಗಳು ಈ ಪ್ರದೇಶದಲ್ಲಿ ಸಂಪರ್ಕ ಸುಧಾರಿಸುವ ಜತೆಗೆ, ಪ್ರವಾಸೋದ್ಯಮ ಮತ್ತು ಉದ್ಯೋಗಾವಕಾಶ ಹೆಚ್ಚಳಕ್ಕೆ ಕಾರಣವಾಗುತ್ತದೆ.

65-ಕಿಮೀ ಉದ್ದದ ವಿದ್ಯುದ್ದೀಕರಿಸಿದ ಎಂಜಿಆರ್ (ಮೆರ್ರಿ-ಗೋ-ರೌಂಡ್) ವ್ಯವಸ್ಥೆಯು ಎನ್ ಟಿಪಿಸಿಯ ತಲೈಪಲ್ಲಿ ಕಲ್ಲಿದ್ದಲು ಗಣಿಯಿಂದ ಛತ್ತೀಸ್‌ಗಢದ 1600 ಮೆಗಾವ್ಯಾಟ್ ಎನ್ ಟಿಪಿಸಿ ಲಾರಾ ಸೂಪರ್ ಥರ್ಮಲ್ ಪವರ್ ಸ್ಟೇಷನ್‌ಗೆ ಕಡಿಮೆ ವೆಚ್ಚದ, ಉನ್ನತ ದರ್ಜೆಯ ಕಲ್ಲಿದ್ದಲನ್ನು ಸಾಗಿಸುತ್ತದೆ. ಇದು ಎನ್ ಟಿಪಿಸಿ ಲಾರಾದಿಂದ ಕಡಿಮೆ ವೆಚ್ಚದ ಮತ್ತು ವಿಶ್ವಾಸಾರ್ಹ ವಿದ್ಯುತ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ, ಹೀಗಾಗಿ ದೇಶದ ಇಂಧನ ಭದ್ರತೆಯನ್ನು ಬಲಪಡಿಸುತ್ತದೆ. 2070 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾದ ಎಂಜಿಆರ್ ವ್ಯವಸ್ಥೆಯು ಕಲ್ಲಿದ್ದಲು ಗಣಿಗಳಿಂದ ವಿದ್ಯುತ್ ಕೇಂದ್ರಗಳಿಗೆ ಕಲ್ಲಿದ್ದಲು ಸಾಗಣೆಯನ್ನು ಸುಧಾರಿಸುವ ತಾಂತ್ರಿಕ ಅದ್ಭುತವಾಗಿದೆ.

ಕಾರ್ಯಕ್ರಮ ಸಂದರ್ಭದಲ್ಲಿ, ಛತ್ತೀಸ್‌ಗಢದ 9 ಜಿಲ್ಲೆಗಳಲ್ಲಿ 50 ಹಾಸಿಗೆಗಳ 'ಕ್ರಿಟಿಕಲ್ ಕೇರ್ ಬ್ಲಾಕ್‌'ಗಳಿಗೆ ಪ್ರಧಾನ ಮಂತ್ರಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 9 ಕ್ರಿಟಿಕಲ್ ಕೇರ್ ಬ್ಲಾಕ್‌ಗಳನ್ನು ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ (PM-ABHIM) ಅಡಿ, ದುರ್ಗ್, ಕೊಂಡಗಾಂವ್, ರಾಜ್‌ನಂದಗಾಂವ್, ಗರಿಯಾಬಂದ್, ಜಶ್‌ಪುರ್, ಸೂರಜ್‌ಪುರ, ಸುರ್ಗುಜಾ, ಬಸ್ತಾರ್ ಮತ್ತು ರಾಯಗಢ ಜಿಲ್ಲೆಗಳಲ್ಲಿ ಒಟ್ಟು ರೂ. 210 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು, 

ಕುಡಗೋಲು ಜೀವಕೋಶ(ಅನೀಮಿಯಾ) ಕಾಯಿಲೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುವ ಗುರಿಯೊಂದಿಗೆ, ಪ್ರಧಾನ ಮಂತ್ರಿ ಅವರು  ತಪಾಸಣೆಗೊಳಗಾದ ಜನರಿಗೆ ವಿಶೇಷವಾಗಿ ಬುಡಕಟ್ಟು ಜನರಿಗೆ 1 ಲಕ್ಷ ಸಿಕಲ್ ಸೆಲ್  ಕೌನ್ಸೆಲಿಂಗ್ ಕಾರ್ಡ್‌ಗಳನ್ನು ವಿತರಿಸುತ್ತಾರೆ. ರಾಷ್ಟ್ರೀಯ ಸಿಕಲ್ ಸೆಲ್ ಅನೀಮಿಯಾ ನಿರ್ಮೂಲನಾ ಕಾರ್ಯಕ್ರಮ(NSAEM)ದ ಅಡಿ,  ಸಿಕಲ್ ಸೆಲ್  ಕೌನ್ಸೆಲಿಂಗ್ ಕಾರ್ಡ್‌ಗಳ ವಿತರಣೆ ಮಾಡಲಾಗುತ್ತಿದೆ, ಇದನ್ನು 2023 ಜುಲೈನಲ್ಲಿ ಮಧ್ಯಪ್ರದೇಶದ ಶಾಹದೋಲ್‌ನಲ್ಲಿ ಪ್ರಧಾನ ಮಂತ್ರಿ ಪ್ರಾರಂಭಿಸಿದರು.

***


(Release ID: 1957010) Visitor Counter : 115