ಆಯುಷ್

ಜನರ ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಆಯುರ್ವಿದ್ಯಾ, ಸುಪ್ರಜಾ, ವಯೋಮಿತ್ರ ಆಯುಷ್ ಕಾರ್ಯಕ್ರಮಗಳನ್ನು ಬಲಪಡಿಸಲು ಕೇಂದ್ರ ಆಯುಷ್ ಸಚಿವರ ಕರೆ


ರಾಷ್ಟ್ರೀಯ ಆಯುಷ್ ಮಿಷನ್ ಕುರಿತ ಪ್ರಾದೇಶಿಕ ಪರಿಶೀಲನಾ ಸಭೆ ಉದ್ಘಾಟಿಸಿದ ಶ್ರೀ ಸರ್ಬಾನಂದ ಸೋನೊವಾಲ್

Posted On: 06 SEP 2023 12:56PM by PIB Bengaluru

ರಾಷ್ಟ್ರೀಯ ಆಯುಷ್ ಮಿಷನ್ ನ ಪ್ರಾದೇಶಿಕ ಪರಿಶೀಲನಾ ಸಭೆಯನ್ನು ಕೇಂದ್ರ ಆಯುಷ್ ಮತ್ತು ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವ ಶ್ರೀ ಸರ್ಬಾನಂದ ಸೋನೊವಾಲ್ ಅವರು  ಕೇಂದ್ರ ಆಯುಷ್ ಹಾಗು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಹಾಯಕ  ಸಚಿವ ಡಾ. ಮುಂಜ್ಪಾರಾ ಮಹೇಂದ್ರಭಾಯ್ ಅವರೊಡಗೂಡಿ ವಿಧ್ಯುಕ್ತವಾಗಿ ಉದ್ಘಾಟಿಸಿದರು; ತಮಿಳುನಾಡು ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀ ಮಾ ಸುಬ್ರಮಣಿಯನ್, ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂ ರಾವ್,  ಆಯುಷ್ ಸಚಿವಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೆಚಾ ಮತ್ತು ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ಸರ್ಕಾರಗಳ ಇತರ ಹಿರಿಯ ಅಧಿಕಾರಿಗಳು, ಪುದುಚೇರಿ ಕೇಂದ್ರಾಡಳಿತ ಪ್ರದೇಶ, ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶ ಮತ್ತು ಭಾರತ ಸರ್ಕಾರದ ಆಯುಷ್ ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸಭೆಯಲ್ಲಿ, ಭಾಗವಹಿಸಿದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಆಯುಷ್ ಸ್ಥಿತಿ-ಗತಿ ಮತ್ತು ಅನುಷ್ಠಾನದಲ್ಲಿರುವ ಪ್ರಮುಖ ಆಯುಷ್ ಕಾರ್ಯಕ್ರಮಗಳ ಪ್ರಗತಿಯ ಬಗ್ಗೆ ವಿವರವಾದ ಪ್ರಸ್ತುತಿಗಳನ್ನು ಮಂಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಸರ್ಬಾನಂದ ಸೋನೊವಾಲ್, "ನಮ್ಮ ಶ್ರೀಮಂತ ಪರಂಪರೆ ಮತ್ತು ಸಾಂಪ್ರದಾಯಿಕ ವೈದ್ಯ ಪದ್ಧತಿಯ ಸಾಮರ್ಥ್ಯವು ಮಾನವಕುಲದ ಅನೇಕ ತಲೆಮಾರುಗಳಲ್ಲಿ ಆಯಾ ಕಾಲದ ಪರೀಕ್ಷೆಗಳನ್ನು ಎದುರಿಸಿ ಉತ್ತಮ, ಆರೋಗ್ಯಕರ ಮತ್ತು ಸಂತೋಷದ ಜೀವನವನ್ನು ನಡೆಸಲು ಅನುಕೂಲತೆಗಳನ್ನು ಮಾಡಿಕೊಟ್ಟಿದೆ. ಆಯುರ್ವೇದ, ಸಿದ್ಧ, ಯುನಾನಿ, ಯೋಗ, ಪ್ರಕೃತಿ ಚಿಕಿತ್ಸೆ, ಸೋವಾ ರಿಗ್ಪಾ ಅಥವಾ ಹೋಮಿಯೋಪತಿ -ಹೀಗೆ ಈ ಉದಾರವಾದಿ ವೈದ್ಯ ಪದ್ಧತಿಯ ಸಂಪೂರ್ಣ ಲಾಭವನ್ನು ನಾವು ಪಡೆದುಕೊಳ್ಳಬೇಕು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ನಾವು ಸಾಂಪ್ರದಾಯಿಕ ವೈದ್ಯ ಪದ್ಧತಿಗಳನ್ನು ಆಧುನಿಕ ಔಷಧದೊಂದಿಗೆ ವೈಜ್ಞಾನಿಕವಾಗಿ ಸಂಯೋಜಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ” ಎಂದು ಹೇಳಿದರು. 

ಆಯುಷ್ ವೈದ್ಯ ಪದ್ಧತಿಯ ಉಪಯುಕ್ತತೆಯನ್ನು ಪ್ರಮುಖವಾಗಿ ಉಲ್ಲೇಖಿಸಿದ  ಸಚಿವರು, "ಶಾಲಾ ಮಕ್ಕಳಿಗೆ ಆಯುಷ್ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸಲು ಆಯುರ್ವಿದ್ಯಾದಂತಹ ಕೆಲವು ದೃಢವಾದ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ; ಸುಪ್ರಜಾ: ತಾಯಿ ಮತ್ತು ನವಜಾತ ಶಿಶುವಿನ ಆರೈಕೆಗಾಗಿ ಆಯುಷ್,  ಮತ್ತು  ಆಯುಷ್ ಆಧಾರಿತ ವೃದ್ಧಾಪ್ಯ ಕಾರ್ಯಕ್ರಮವಾದ ವಯೋಮಿತ್ರ; ಅಸ್ಥಿಸಂಧಿವಾತ ಮತ್ತು ಇತರ ಎಲುಬು, ನರಗಳು ಹಾಗು ಸ್ನಾಯುಗಳನ್ನು ಒಳಗೊಂಡ ಮಸ್ಕ್ಯುಲೋಸ್ಕೆಲೆಟಲ್ ಅಸ್ವಸ್ಥತೆಗಳ ತಡೆಗಟ್ಟುವಿಕೆ ಮತ್ತು ನಿರ್ವಹಣೆಗಾಗಿರುವ ಕಾರ್ಯಕ್ರಮ, ಆಯುಷ್ ಸಂಚಾರಿ ವೈದ್ಯಕೀಯ ಘಟಕಗಳು ಇತ್ಯಾದಿಗಳು ಆಯುಷ್ ವ್ಯವಸ್ಥೆಯನ್ನು ಬಲಪಡಿಸುತ್ತವೆ ಎಂದವರು ಹೇಳಿದರು. 

ಆಯುಷ್ ಸಚಿವಾಲಯವು 2023-24ರ ವೇಳೆಗೆ ರಾಷ್ಟ್ರೀಯ ಆಯುಷ್ ಮಿಷನ್ (ಎನ್ಎಎಂ) ಅಡಿಯಲ್ಲಿ ರಾಜ್ಯ / ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳ ಬೆಂಬಲದೊಂದಿಗೆ 12,500 ಆಯುಷ್ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು (ಎಎಚ್ಡಬ್ಲ್ಯೂಸಿ) ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಆಯುಷ್ ತತ್ವಗಳು ಮತ್ತು ಅನುಷ್ಟಾನ ಪದ್ಧತಿಗಳ  ಆಧಾರದ ಮೇಲೆ ಸಮಗ್ರ ಸ್ವಾಸ್ಥ್ಯ ಮಾದರಿಯನ್ನು ರೂಪಿಸುವುದು,  ರೋಗದ ಹೊರೆಯನ್ನು ಕಡಿಮೆ ಮಾಡಲು, ಜೇಬಿನಿಂದ ಮಾಡಲಾಗುವ  ವೆಚ್ಚವನ್ನು ಕಡಿಮೆ ಮಾಡಲು ಮತ್ತು ಅಗತ್ಯವಿರುವ ಸಾರ್ವಜನಿಕರಿಗೆ ತಿಳುವಳಿಕೆಯುಳ್ಳ ಆಯ್ಕೆಯನ್ನು ಒದಗಿಸಲು "ಸ್ವಯಂ-ಆರೈಕೆ" ಗಾಗಿ ಜನಸಾಮಾನ್ಯರನ್ನು ಸಬಲೀಕರಣಗೊಳಿಸುವುದು ಇದರ ಮುಖ್ಯ ಉದ್ದೇಶಗಳಾಗಿವೆ. ಆಯುಷ್ ಸಚಿವಾಲಯವು 2014-15 ರಿಂದ ಇಲ್ಲಿಯವರೆಗೆ ದಕ್ಷಿಣದ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ (ಆಂಧ್ರಪ್ರದೇಶ, ಕರ್ನಾಟಕ, ಕೇರಳ, ಲಕ್ಷದ್ವೀಪ, ಪುದುಚೇರಿ, ತಮಿಳುನಾಡು ಮತ್ತು ತೆಲಂಗಾಣ) ರಾಷ್ಟ್ರೀಯ ಆಯುಷ್ ಮಿಷನ್ (ನಾಮ್)  ಅಡಿಯಲ್ಲಿ 719.70 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಸಚಿವಾಲಯವು ದಕ್ಷಿಣ ರಾಜ್ಯಗಳಲ್ಲಿ 17 ಸಮಗ್ರ ಆಯುಷ್ ಆಸ್ಪತ್ರೆಗಳನ್ನು ಬೆಂಬಲಿಸಿದೆ ಮತ್ತು ಅವುಗಳಲ್ಲಿ 06 ಕಾರ್ಯನಿರ್ವಹಿಸುತ್ತಿವೆ. 12,500 ಎಎಚ್ ಡಬ್ಲ್ಯೂಸಿಗಳಲ್ಲಿ, ಸಚಿವಾಲಯವು ದಕ್ಷಿಣ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಈಗಾಗಲೇ 2181 ಎಎಚ್ ಡಬ್ಲ್ಯೂಸಿಗಳನ್ನು ಬೆಂಬಲಿಸಿದೆ ಮತ್ತು ಅವುಗಳಲ್ಲಿ 1518 ಕಾರ್ಯನಿರ್ವಹಿಸುತ್ತಿವೆ ಎಂದು ವರದಿಯಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಮುಂಜಪರ ಮಹೇಂದ್ರಭಾಯಿ, " ನಾವು ಫಲಿತಾಂಶಕ್ಕಿಂತ ಕಾರ್ಯಕ್ರಮದ ಮೌಲ್ಯವನ್ನು  ಹೆಚ್ಚು ಅರ್ಥಪೂರ್ಣ ಅಳತೆಗೋಲಾಗಿ  ಬಳಸಿಕೊಳ್ಳಬೇಕು ಮತ್ತು ನಾವು ಆ ರೀತಿಯ ಫಲಶ್ರುತಿಗಳಿಗೆ  ಒತ್ತು ನೀಡಬೇಕು ಎಂಬುದು ನನ್ನ ನಂಬಿಕೆ. ಫಲಶ್ರುತಿಯ  ಅಳತೆಗೋಲಾಗಿ  ಪರಿಗಣಿಸಲು  ಅನುಕೂಲವಾಗುವಂತಹ ರೀತಿಯಲ್ಲಿ ನಮ್ಮ ಕಾರ್ಯತಂತ್ರವನ್ನು ಮತ್ತು ತಾಂತ್ರಿಕತೆಯನ್ನು  ಯೋಜಿಸಲು, ಕಾರ್ಯಗತಗೊಳಿಸಲು ಹಾಗು  ವರದಿ ಮಾಡಲು ಮರುಹೊಂದಾಣಿಕೆಗಳನ್ನು ಮಾಡಬೇಕಾಗುತ್ತದೆ. ಇಂತಹ ಚರ್ಚೆಗಳು ಪರಸ್ಪರ ಉತ್ತಮ ಅಭ್ಯಾಸಗಳನ್ನು ಕಲಿಯಲು, ಪದ್ಧತಿಗಳನ್ನು ಅನುಷ್ಟಾನಿಸಲು  ಮತ್ತು ನಮ್ಮೆಲ್ಲರ ನಡುವೆ ಬಲವಾದ ಬಂಧವನ್ನು ನಿರ್ಮಿಸಲು ನಮಗೆ ಅವಕಾಶವನ್ನು ಒದಗಿಸುತ್ತದೆ ಎಂಬ ಬಗ್ಗೆ  ನನಗೆ ವಿಶ್ವಾಸವಿದೆ” ಎಂದರು. 

2022-23ರವರೆಗೆ 315 ಆಯುಷ್ ಆಸ್ಪತ್ರೆಗಳು ಮತ್ತು 5,023 ಆಯುಷ್ ಡಿಸ್ಪೆನ್ಸರಿಗಳನ್ನು ಮೂಲಸೌಕರ್ಯ ಮತ್ತು ಇತರ ಸೌಲಭ್ಯಗಳನ್ನು  ಮೇಲ್ದರ್ಜೆಗೇರಿಸುವುದಕ್ಕಾಗಿ ಬೆಂಬಲಿಸಲಾಗಿದೆ. 13 ಹೊಸ ಆಯುಷ್ ಶಿಕ್ಷಣ ಸಂಸ್ಥೆಗಳು ಮತ್ತು 77 ಪದವಿ ಮತ್ತು 35 ಸ್ನಾತಕೋತ್ತರ ಆಯುಷ್ ಶಿಕ್ಷಣ ಸಂಸ್ಥೆಗಳಿಗೆ ಮೂಲಸೌಕರ್ಯ, ಗ್ರಂಥಾಲಯ ಮತ್ತು ಇತರ ವಿಷಯಗಳ ಉನ್ನತೀಕರಣಕ್ಕಾಗಿ ಆರ್ಥಿಕ ನೆರವು ನೀಡಲಾಗಿದೆ.

ನಾಮ್ (ಎನ್.ಎ.ಎಂ.)  ಅಡಿಯಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳು (ಪಿ.ಎಚ್.ಸಿ.ಗಳು), ಸಮುದಾಯ ಆರೋಗ್ಯ ಕೇಂದ್ರಗಳು (ಸಿ.ಎಚ್.ಸಿ.ಗಳು) ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ (ಡಿ.ಎಚ್.ಗಳು) ಆಯುಷ್ ಸೌಲಭ್ಯಗಳನ್ನುಒದಗಿಸಲು   ಸಚಿವಾಲಯವು ದಕ್ಷಿಣ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಬೆಂಬಲವನ್ನು ಒದಗಿಸುತ್ತಿದೆ, ಸಮಗ್ರ ಆಯುಷ್ ಆಸ್ಪತ್ರೆಗಳು, ಹೊಸ ಆಯುಷ್ ಡಿಸ್ಪೆನ್ಸರಿಗಳ ಸ್ಥಾಪನೆ, ಅಸ್ತಿತ್ವದಲ್ಲಿರುವ ಆಯುಷ್ ಡಿಸ್ಪೆನ್ಸರಿಗಳು ಮತ್ತು ಉಪ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವಿಕೆ ಹಾಗು ಆಯುಷ್ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಕಾರ್ಯಾಚರಣೆ, ಯುಜಿ ಮತ್ತು ಪಿಜಿ ಆಯುಷ್ ಶಿಕ್ಷಣ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸುವುದು ಇತ್ಯಾದಿ ಕ್ರಮಗಳಿಂದಾಗಿ ಜನರಿಗೆ  ಹೆಚ್ಚಿನ ಆಯುಷ್ ಆರೋಗ್ಯ ಸೌಲಭ್ಯಗಳ  ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ಸೌಲಭ್ಯಗಳನ್ನು ಬಲಪಡಿಸುವ ಮತ್ತು ಸುಧಾರಿಸುವ ಮೂಲಕ ದೇಶಾದ್ಯಂತ ಆಯುಷ್ ಆರೋಗ್ಯ ಸೇವೆಗಳನ್ನು ಒದಗಿಸುವ ಚಿಂತನೆ  ಮತ್ತು ಉದ್ದೇಶಗಳೊಂದಿಗೆ ನಾಮ್ (ಎನ್.ಎ.ಎಂ.) ಜಾರಿಗೆ ತರಲಾಗುತ್ತಿದೆ. ನಾಮ್ ಅಡಿಯಲ್ಲಿ, ಸಚಿವಾಲಯವು ಕರ್ನಾಟಕದಲ್ಲಿ 02 ಹೊಸ ಆಯುಷ್ ಶಿಕ್ಷಣ ಸಂಸ್ಥೆಗಳನ್ನು ಮತ್ತು ಆಂಧ್ರಪ್ರದೇಶ ಹಾಗು  ತಮಿಳುನಾಡಿನಲ್ಲಿ ತಲಾ 01 ಆಯುಷ್ ಶಿಕ್ಷಣ ಸಂಸ್ಥೆಗಳನ್ನು ಬೆಂಬಲಿಸಿದೆ ಮತ್ತು ಅವುಗಳಲ್ಲಿ ಕರ್ನಾಟಕದಲ್ಲಿ 02  ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. 2022-23ನೇ ಸಾಲಿನವರೆಗೆ, 137 ಸಮಗ್ರ ಆಯುಷ್ ಆಸ್ಪತ್ರೆಗಳಿಗೆ ಬೆಂಬಲ ನೀಡಲಾಗಿದೆ ಮತ್ತು ಅವುಗಳಲ್ಲಿ 37 ಕಾರ್ಯನಿರ್ವಹಿಸುತ್ತಿವೆ, 86 ನಿರ್ಮಾಣ ಹಂತದಲ್ಲಿವೆ ಮತ್ತು 14 ಪ್ರಕ್ರಿಯಾ ಪ್ರಗತಿಯಲ್ಲಿವೆ. 2022 ರಲ್ಲಿ ಎ.ಎಚ್.ಡಬ್ಲ್ಯು.ಸಿ ಮೂಲಕ ಆಯುಷ್ ವೈದ್ಯ ಪದ್ಧತಿಯಿಂದಾಗಿ  8.42 ಕೋಟಿಗೂ ಹೆಚ್ಚು ಜನರು ಪ್ರಯೋಜನ ಪಡೆದಿದ್ದಾರೆ.

****
 



(Release ID: 1955194) Visitor Counter : 118


Read this release in: English , Urdu , Hindi , Tamil , Telugu