ಪ್ರಧಾನ ಮಂತ್ರಿಯವರ ಕಛೇರಿ

ಜಿ-20 ಡಿಜಿಟಲ್ ಆರ್ಥಿಕ ಸಚಿವರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ 


“ಡಿಜಿಟಲ್ ಆರ್ಥಿಕತೆ ಬಗ್ಗೆ ಚರ್ಚಿಸಲು ಬೆಂಗಳೂರಿಗಿಂತ ಉತ್ತಮ ಸ್ಥಳವಿಲ್ಲ’’

“ಭಾರತದ ಡಿಜಿಟಲ್ ಪರಿವರ್ತನೆಯು ನಾವೀನ್ಯತೆಯ ಮೇಲಿನ ಅಚಲ ನಂಬಿಕೆ ಮತ್ತು ತ್ವರಿತ ಅನುಷ್ಠಾನಕ್ಕೆ ಅದರ ಬದ್ಧತೆ ಶಕ್ತಿ ಹೊಂದಿದೆ’’ 

“ಆಡಳಿತವನ್ನು ಪರಿವರ್ತಿಸಲು ಮತ್ತು ಅದನ್ನು ಹೆಚ್ಚು ಪರಿಣಾಮಕಾರಿ, ಅಂತರ್ಗತ, ತ್ವರಿತ ಮತ್ತು ಪಾರದರ್ಶಕಗೊಳಿಸಲು ರಾಷ್ಟ್ರವು ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದೆ’’ 

“ಭಾರತದ ಡಿಜಿಟಲ್ ಮೂಲಸೌಕರ್ಯವು ಜಾಗತಿಕ ಸವಾಲುಗಳಿಗೆ ಸುಲಭ, ಸುರಕ್ಷಿತ ಮತ್ತು ಅಂತರ್ಗತ ಪರಿಹಾರಗಳನ್ನು ಒದಗಿಸುತ್ತದೆ’’ 

“ವೈವಿಧ್ಯತೆಯ ಕಾರಣದಿಂದ ಭಾರತ ಪರಿಹಾರಗಳಿಗೆ ಸೂಕ್ತ ಪ್ರಯೋಗಾಲಯ. ಭಾರತದಲ್ಲಿ ಯಶಸ್ವಿಯಾಗುವ ಪರಿಹಾರಗಳನ್ನು ಜಗತ್ತಿನೆಲ್ಲೆಡೆ ಸುಲಭವಾಗಿ ಅನುಷ್ಠಾನಗೊಳಿಸಬಹುದು’’ 

“ಸುರಕ್ಷಿತ, ವಿಶ್ವಾಸಾರ್ಹ ಮತ್ತು ಚೇತರಿಸಿಕೊಳ್ಳುವ ಡಿಜಿಟಲ್ ಆರ್ಥಿಕತೆಗಾಗಿ ಜಿ-20 ಉನ್ನತ ಮಟ್ಟದ ತತ್ವಗಳ ಮೇಲೆ ಸಹಮತ ಮೂಡಿಸುವುದು ಮುಖ್ಯ’’ 

“ಮನುಕುಲ ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸಲು ತಂತ್ರಜ್ಞಾನ ಅಧಾರಿತ ಪರಿಹಾರಗಳ ಸಂಪೂರ್ಣ ಪೂರಕ ವ್ಯವಸ್ಥೆಗಳನ್ನು ನಿರ್ಮಿಸಬಹುದು. ಅದಕ್ಕೆ ನಮ್ಮಿಂದ ಬೇಕಾಗಿರುವುದು ನಾಲ್ಕು “ಸಿ’ ಅಂದರೆ- ಕನ್ವಿಕ್ಷನ್ (ನಿರ್ಣಯ) , ಕಮಿಟ್‌ ಮೆಂಟ್ (ಬದ್ಧತೆ) , ಕೋ ಆರ್ಡಿನೇಷನ್ (ಸಮನ್ವಯ) ಮತ್ತು ಕೊಲಾಬರೇಷನ್ (ಸಹಭಾಗಿತ್ವ)’’ 

Posted On: 19 AUG 2023 9:48AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ನಡೆಯುತ್ತಿರುವ ಜಿ-20 ಡಿಜಿಟಲ್ ಆರ್ಥಿಕತೆ ಕುರಿತ ಸಚಿವರ ಸಭೆಯನ್ನು ಉದ್ದೇಶಿಸಿ ವಿಡಿಯೋ ಸಂದೇಶ ನೀಡಿದರು. 

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ವಿಜ್ಞಾನ, ತಂತ್ರಜ್ಞಾನ ಮತ್ತು ಉದ್ಯಮಶೀಲತೆಯ ಸ್ಫೂರ್ತಿಯ ತವರೂರು ಬೆಂಗಳೂರಿಗೆ ಗಣ್ಯರನ್ನು ಸ್ವಾಗತಿಸಿದರು ಮತ್ತು ಡಿಜಿಟಲ್ ಆರ್ಥಿಕತೆ ಬಗ್ಗೆ ಚರ್ಚಿಸಲು ಇದಕ್ಕಿಂತ ಬೇರೆ ಸ್ಥಳವಿಲ್ಲ ಎಂದು ಹೇಳಿದರು. 

ಕಳೆದ 9 ವರ್ಷಗಳಲ್ಲಿ ಭಾರತದಲ್ಲಿ ಆಗಿರುವ ಅದ್ಭುತ ಡಿಜಿಟಲ್ ಪರಿವರ್ತನೆಗೆ 2015ರಲ್ಲಿ ಡಿಟಜಿಲ್ ಇಂಡಿಯಾ ಉಪಕ್ರಮ ಆರಂಭಿಸಿದ್ದೆ ಕಾರಣ ಎಂದು ಪ್ರಧಾನಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು. ಭಾರತದ ಡಿಜಿಟಲ್ ಪರಿವರ್ತನೆಗೆ ನಾವೀನ್ಯತೆ ಕುರಿತ ಅಚಲ ವಿಶ್ವಾಸ ಮತ್ತು ಅದರ ವೇಗದ ಅನುಷ್ಠಾನದ ಬದ್ಧತೆ ಕಾರಣ. ಜತೆಗೆ ಯಾರಬ್ಬರನ್ನೂ ಬಿಡದೆ ಎಲ್ಲರನ್ನೂ ಒಳಗೊಳ್ಳಬೇಕೆಂಬ ಸ್ಫೂರ್ತಿಯು ಉತ್ತೇಜನ ನೀಡಿತು ಎಂದು ಅವರು ಬಲವಾಗಿ ಪ್ರತಿಪಾದಿಸಿದರು.  ಪರಿವರ್ತನೆಯ ವ್ಯಾಪ್ತಿ, ವೇಗ ಮತ್ತು ವಿಸ್ತಾರವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಪ್ರಧಾನಮಂತ್ರಿ, ಭಾರತದ 850 ಮಿಲಿಯನ್ ಅಂತರ್ಜಾಲ ಬಳಕೆದಾರರು ವಿಶ್ವದಲ್ಲಿಯೇ ಅತಿ ಕಡಿಮೆ ದರದಲ್ಲಿ ದತ್ತಾಂಶವನ್ನು ಅನುಭವಿಸುತ್ತಿದ್ದಾರೆ ಎಂದು ಉಲ್ಲೇಖಿಸಿದರು. ಭಾರತದ 1.3 ಬಿಲಿಯನ್ ಗೂ ಅಧಿಕ ಜನರನ್ನು ಒಳಗೊಂಡಿರುವ ಭಾರತ ವಿಶಿಷ್ಟ ಗುರುತಿನ ಡಿಜಿಟಲ್ ಗುರುತು ವೇದಿಕೆ- ಆಧಾರ್‌ ಅನ್ನು ಉದಾಹರಣೆ ನೀಡಿದ ಅವರು, ತಂತ್ರಜ್ಞಾನ ಬಳಸಿಕೊಂಡು ಆಡಳಿತವನ್ನು ಪರಿವರ್ತಿಸಲಾಗಿದೆ ಮತ್ತು ಅದನ್ನು ಹೆಚ್ಚು ಪರಿಣಾಮಕಾರಿ, ಅಂತರ್ಗತ, ತ್ವರಿತ ಮತ್ತು ಪಾರದರ್ಶಕಗೊಳಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.  ಅವರು ಜಾಮ್ ಅಂದರೆ ಜನಧನ್ ಬ್ಯಾಂಕ್ ಖಾತೆ, ಆಧಾರ್‌ ಮತ್ತು ಮೊಬೈಲ್ ಅನ್ನು ಉಲ್ಲೇಖಿಸಿ ಇವು ಆರ್ಥಿಕ ಸೇರ್ಪಡೆಯಲ್ಲಿ ಕ್ರಾಂತಿಯನ್ನು ಮಾಡಿವೆ ಮತ್ತು ಯುಪಿಐ ಪಾವತಿ ವ್ಯವಸ್ಥೆಯಲ್ಲಿ ಪ್ರತಿ ತಿಂಗಳು ಸುಮಾರು 10 ಬಿಲಿಯನ್ ವಹಿವಾಟುಗಳು ನಡೆಯುತ್ತಿವೆ ಹಾಗೂ ಶೇ. 45 ರಷ್ಟು ಜಾಗತಿಕ ರಿಯಲ್ ಟೈಮ್ ಪಾವತಿ ಭಾರತದಲ್ಲಿ ಆಗುತ್ತಿದೆ ಎಂದರು. ವ್ಯವಸ್ಥೆಯಲ್ಲಿ ಸೋರಿಕೆ ತಡೆಗಟ್ಟುವಲ್ಲಿ ಯಶಸ್ವಿಯಾಗಿರುವ ನೇರ ನಗದು ವರ್ಗಾವಣೆಯ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಿ ಅವರು, ಇದರಿಂದ ವಾರ್ಷಿಕ ಸುಮಾರು 33  ಬಿಲಿಯನ್ ಡಾಲರ್ ಹಣ ಉಳಿತಾಯವಾಗಿದೆ ಎಂದರು. 

ಭಾರತದ ಕೋವಿಡ್ ಲಸಿಕೆ ಆಂದೋಲನವನ್ನು ಬೆಂಬಲಿಸಿದ ಕೋವಿನ್ ಪೋರ್ಟಲ್ ಅನ್ನು ಉಲ್ಲೇಖಿಸಿದ ಅವರು, ಡಿಜಿಟಲ್ ವಿಧಾನದಲ್ಲಿ ಪರಿಶೀಲಿಸಬಹುದಾದ ಪ್ರಮಾಣಪತ್ರಗಳೊಂದಿಗೆ 2 ಬಿಲಿಯನ್ ಲಸಿಕೆ ಡೋಸ್‌ಗಳನ್ನು ತಲುಪಿಸಲು ಇದು ಸಹಾಯ ಮಾಡಿದೆ ಎಂದು ಪ್ರಧಾನಿ ತಿಳಿಸಿದರು. ಮೂಲಸೌಕರ್ಯ ಮತ್ತು ಸರಕು ಸಾಗಾಣೆಯನ್ನು ಗುರುತಿಸಲು ತಂತ್ರಜ್ಞಾನ ಮತ್ತು ಪ್ರಾದೇಶಿಕ ಯೋಜನೆಯನ್ನು ಬಳಸುವ ಪಿಎಂ ಗತಿ-ಶಕ್ತಿ ವೇದಿಕೆಯ ಕುರಿತು ಶ್ರೀ ನರೇಂದ್ರ ಮೋದಿ ಅವರು ಪ್ರಸ್ತಾಪಿಸಿದರು. ಇದರಿಂದಾಗಿ ಯೋಜನಾ ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ವಿತರಣೆಯ ವೇಗವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ ಎಂದರು. ಪ್ರಧಾನಮಂತ್ರಿ ಅವರು ಸರ್ಕಾರದ ಇ-ಮಾರುಕಟ್ಟೆ ತಾಣ, ಆನ್‌ಲೈನ್ ಸಾರ್ವಜನಿಕ ಸಂಗ್ರಹಣೆ ವೇದಿಕೆಯಾಗಿದ್ದು, ಇದು ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯನ್ನು ತಂದಿದೆ ಮತ್ತು ಇ-ಕಾಮರ್ಸ್ ಅನ್ನು ಉತ್ತೇಜಿಸುವ ಡಿಜಿಟಲ್ ವಾಣಿಜ್ಯಕ್ಕಾಗಿ ಮುಕ್ತ ನೆಟ್‌ವರ್ಕ್ ಸ್ಥಾಪಿಸಲಾಗಿದೆ ಎಂದು ಪ್ರಮುಖವಾಗಿ ಪ್ರಸ್ತಾಪಿಸಿದರು. "ಸಂಪೂರ್ಣ ಡಿಜಿಟಲೀಕೃತ ತೆರಿಗೆ ವ್ಯವಸ್ಥೆಗಳು, ಪಾರದರ್ಶಕತೆ ಮತ್ತು ಇ-ಆಡಳಿತವನ್ನು ಉತ್ತೇಜಿಸುತ್ತಿವೆ" ಎಂದು ಪ್ರಧಾನಿ ಹೇಳಿದರು. ಭಾರತದ ಎಲ್ಲಾ ವೈವಿಧ್ಯಮಯ ಭಾಷೆಗಳಲ್ಲಿ ಡಿಜಿಟಲ್ ಸೇರ್ಪಡೆಯನ್ನು ಬೆಂಬಲಿಸುವ ಕೃತಕ ಬುದ್ಧಿಮತ್ತೆ ಆಧಾರಿತ ಭಾಷಾ ಅನುವಾದ ವೇದಿಕೆ, ಭಾಷಿನಿಯ ಅಭಿವೃದ್ಧಿಯ ಬಗ್ಗೆಯೂ ಪ್ರಧಾನಿ ಪ್ರಸ್ತಾಪಿಸಿದರು.

“ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಜಾಗತಿಕ ಸವಾಲುಗಳಿಗೆ ಸುಲಭ, ಸುರಕ್ಷಿತ ಮತ್ತು ಅಂತರ್ಗತ ಪರಿಹಾರಗಳನ್ನು ಒದಗಿಸುತ್ತಿದೆ’’ ಎಂದು ಪ್ರಧಾನಮಂತ್ರಿ ಹೇಳಿದರು. ದೇಶದ ವೈವಿಧ್ಯತೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ, ಭಾರತದಲ್ಲಿ ಡಜನ್ ಗಟ್ಟಲೆ ಭಾಷೆಗಳು ಮತ್ತು ನೂರಾರು ಉಪಭಾಷೆಗಳಿವೆ ಎಂದರು. ಇದು ಪ್ರತಿಯೊಂದು ಧರ್ಮದ ತವರೂರು ಮತ್ತು ಜಗತ್ತಿನಾದ್ಯಂತ ಇರುವ ಅಸಂಖ್ಯಾತ ಸಾಂಸ್ಕೃತಿಕ ಆಚರಣೆಗಳ ನೆಲೆಯಾಗಿದೆ ಎಂದು ಅವರು ಹೇಳಿದರು. “ಪ್ರಾಚೀನ ಪರಂಪರೆಗಳಿಂದ ಹಿಡಿದು ಇತ್ತೀಚಿನ ಆಧುನಿಕ ತಂತ್ರಜ್ಞಾನದವರೆಗೆ, ಭಾರತ ಎಲ್ಲರಿಗೂ ಒಂದಲ್ಲಾ ಒಂದು ರೀತಿ ಬೇಕಾಗಿದೆ’’ ಎಂದು ಪ್ರಧಾನಮಂತ್ರಿ ಸಮರ್ಥಿಸಿಕೊಂಡರು. ಇಂತಹ ವೈವಿಧ್ಯತೆಯೊಂದಿಗೆ ಭಾರತ ಪರಿಹಾರಗಳಿಗೆ ಉತ್ತಮ ಪರೀಕ್ಷಾ ಪ್ರಯೋಗಾಲಯ ಎಂದು ಅವರು ಮಾತು ಮುಂದುವರಿಸಿದರು. ಭಾರತದಲ್ಲಿ ಯಶಸ್ವಿಯಾಗುವ ಪರಿಹಾರಗಳನ್ನು ವಿಶ್ವದಲ್ಲಿ ಎಲ್ಲೇ ಬೇಕಾದರೂ ಸುಲಭವಾಗಿ ಅನುಷ್ಠಾನಗೊಳಿಸಬಹುದು ಎಂದು ಅವರು ಬಲವಾಗಿ ಪ್ರತಿಪಾದಿಸಿದರು. ಜಗತ್ತಿನೊಂದಿಗೆ ಭಾರತ ತನ್ನ ಅನುಭವಗಳನ್ನು ಹಂಚಿಕೊಳ್ಳಲು ಸಿದ್ಧವಿದೆ ಎಂದ ಪ್ರಧಾನಮಂತ್ರಿ ಅವರು ಕೋವಿನ್ ಉದಾಹರಣೆಯನ್ನು ನೀಡಿ, ಕೋವಿಡ್ ಸಾಂಕ್ರಾಮಿಕದ ವೇಳೆ ಜಾಗತಿಕ ಒಳಿತಿಗಾಗಿ ಅದನ್ನು ಕೊಡುಗೆ ನೀಡಲಾಗಿದೆ ಎಂದರು. ಭಾರತ ಆನ್ ಲೈನ್ ಜಾಗತಿಕ ಸಾರ್ವಜನಿಕ ಡಿಜಿಟಲ್ ಸರಕುಗಳ ಭಂಡಾರವನ್ನು ಸೃಷ್ಟಿಸಿದೆ, ಭಾರತ ಯಾವೊಂದು ರಾಷ್ಟ್ರವು ವಿಶೇಷವಾಗಿ ದಕ್ಷಿಣದ ದೇಶಗಳು ಹಿಂದೆ ಉಳಿಯಬಾರದು ಎಂಬ ಬಯಕೆಯನ್ನು ಹೊಂದಿದೆ ಎಂದರು. 

ಜಿ-20 ವರ್ಚುವಲ್ ಜಾಗತಿಕ ಡಿಜಿಟಲ್ ಮೂಲಸೌಕರ್ಯ ಭಂಡಾರವನ್ನು ಸೃಷ್ಟಿಸಲು ಕಾರ್ಯಕಾರಿ ಗುಂಪನ್ನು ರಚನೆ ಮಾಡಿರುವುದಕ್ಕೆ ತೃಪ್ತಿ ವ್ಯಕ್ತಪಡಿಸಿದ ಪ್ರಧಾನಮಂತ್ರಿ ಅವರು, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಕ್ಕಾಗಿ ಸಾಮಾನ್ಯ ನೀತಿ ರೂಪಿಸುವ ಪ್ರಯತ್ನದಿಂದ ಸರ್ವರಿಗೂ ಪಾರದರ್ಶಕ, ಜವಾಬ್ದಾರಿಯುತ ಮತ್ತು ನ್ಯಾಯಯುತ ಪೂರಕ ವ್ಯವಸ್ಥೆ ಒದಗಿಸಲು ಸಹಕಾರಿ ಎಂದು ಪ್ರತಿಪಾದಿಸಿದರು. ದೇಶ ದೇಶಗಳ ನಡುವೆ ಡಿಜಿಟಲ್ ಕೌಶಲ್ಯಗಳ ಹೋಲಿಕೆ ಸೌಕರ್ಯಕ್ಕೆ ನೀಲನಕ್ಷೆ ಅಭಿವೃದ್ಧಿ ಪ್ರಯತ್ನಗಳನ್ನು ಮತ್ತು ಡಿಜಿಟಲ್ ಕೌಶಲ್ಯಕ್ಕಾಗಿ ವರ್ಚುವಲ್ ಸೆಂಟರ್ ಆಕ್ಸ್ ಎಕ್ಸಲೆನ್ಸ್ ಸ್ಥಾಪನೆಯನ್ನು ಅವರು ಸ್ವಾಗತಿಸಿದರು. 

ಭವಿಷ್ಯಕ್ಕೆ ಸಿದ್ಧವಾಗಿ ದುಡಿಯುವ ಕಾರ್ಯಪಡೆಯನ್ನು ಸೃಷ್ಟಿಸಲು ಇವು ಅತ್ಯಂತ ಪ್ರಮುಖ ಪ್ರಯತ್ನಗಳಾಗಿವೆ ಎಂದು ಅವರು ಹೇಳಿದರು. ಡಿಜಿಟಲ್ ಆರ್ಥಿಕತೆ ಭದ್ರತೆಯ ಅಪಾಯಗಳನ್ನು ಎದುರಿಸುತ್ತಿವೆ ಎಂದು ಉಲ್ಲೇಖಿಸಿದ ಅವರು, ಆ ಸವಾಲುಗಳು ಜಾಗತಿಕವಾಗಿ ಹರಡಿವೆ, ಹಾಗಾಗಿ ಜಿ-20 ಉನ್ನತ ಮಟ್ಟದ ತತ್ವಗಳ ಮೇಲೆ ಸುರಕ್ಷಿತ, ವಿಶ್ವಾಸಾರ್ಹ ಮತ್ತು ಚೇತರಿಸಿಕೊಳ್ಳಬಹುದಾದ ಡಿಜಿಟಲ್ ಆರ್ಥಿಕತೆಗೆ ಎಲ್ಲರ ನಡುವೆ ಸಹಮತ ಮೂಡಿಸುವುದು ಅತ್ಯಂತ ಪ್ರಮುಖವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.  “ತಂತ್ರಜ್ಞಾನ ಹಿಂದೆಂದಿಗಿಂತಲೂ ನಮ್ಮ ಹೆಚ್ಚು ಬೆಸೆದಿದೆ. ಇದು ಸರ್ವರಿಗೂ ಅಂತರ್ಗತ ಮತ್ತು ಸುಸ್ಥಿರ ಅಭಿವೃದ್ಧಿಯ ಭರವಸೆಯನ್ನು ಹೊಂದಿದೆ’’ ಎಂದ ಪ್ರಧಾನಮಂತ್ರಿ ಅವರು, ಜಿ-20 ರಾಷ್ಟ್ರಗಳಿಗೆ ಭವಿಷ್ಯದ ಅಂತರ್ಗತ, ಸಂಮೃದ್ಧ ಮತ್ತು ಸುರಕ್ಷಿತ ಜಾಗತಿಕ ಡಿಜಿಟಲ್ ಸೌಕರ್ಯಕ್ಕೆ ಭದ್ರ ಬುನಾದಿ ಹಾಕುವ ವಿಶಿಷ್ಟ ಅವಕಾಶ ದೊರೆತಿದೆ ಎಂದು ಬಲವಾಗಿ ಪ್ರತಿಪಾದಿಸಿದರು. ಹಣಕಾಸು ಸೇರ್ಪಡೆ ಮತ್ತು ಉತ್ಪನ್ನವನ್ನು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಮೂಲಕ ಮುಂದುವರಿಸಬಹುದು ಎಂದು ಪ್ರಧಾನಿ ಹೇಳಿದರು.  

ಡಿಜಿಟಲ್ ತಂತ್ರಜ್ಞಾನವನ್ನು ರೈತರು ಮತ್ತು ಸಣ್ಣ ವ್ಯಾಪಾರಿಗಳು ಬಳಕೆ ಮಾಡಲು ಉತ್ತೇಜಿಸಬೇಕು ಎಂದು ಸಲಹೆ ನೀಡಿದ ಅವರು, ಜಾಗತಿಕ ಡಿಜಿಟಲ್ ಆರೋಗ್ಯ ಪೂರಕ ವ್ಯವಸ್ಥೆ ನಿರ್ಮಾಣಕ್ಕೆ ನೀತಿಯನ್ನು ರೂಪಿಸಬೇಕು ಮತ್ತು ಕೃತಕ ಬುದ್ಧಿಮತ್ತೆಯನ್ನು ಸುರಕ್ಷಿತ ಮತ್ತು ಜವಾಬ್ದಾರಿಯುತವಾಗಿ ಬಳಸಲು ನೀತಿಯನ್ನು ರೂಪಿಸಬೇಕು ಎಂದರು.“ಮನುಕುಲ ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸಲು ತಂತ್ರಜ್ಞಾನ ಅಧಾರಿತ ಪರಿಹಾರಗಳ ಸಂಪೂರ್ಣ ಪೂರಕ ವ್ಯವಸ್ಥೆಗಳನ್ನು ನಿರ್ಮಿಸಬಹುದು. ಅದಕ್ಕೆ ನಮ್ಮಿಂದ ಬೇಕಾಗಿರುವುದು ನಾಲ್ಕು “ಸಿ’ ಅಂದರೆ- ಕನ್ವಿಕ್ಷನ್ (ನಿರ್ಣಯ) , ಕಮಿಟ್‌ ಮೆಂಟ್ (ಬದ್ಧತೆ) , ಕೋ ಆರ್ಡಿನೇಷನ್ (ಸಮನ್ವಯ) ಮತ್ತು ಕೊಲಾಬರೇಷನ್ (ಸಹಭಾಗಿತ್ವ)’’ ಎಂದು ಹೇಳಿದ ಪ್ರಧಾನಮಂತ್ರಿ ಆ ನಿಟ್ಟಿನಲ್ಲಿ ಕಾರ್ಯಕಾರಿ ಗುಂಪು ಮುಂದೆ ಕೊಂಡೊಯ್ಯಲಿದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು. 

***



(Release ID: 1950446) Visitor Counter : 268