ಪ್ರಧಾನ ಮಂತ್ರಿಯವರ ಕಛೇರಿ

ಆಗಸ್ಟ್ 7 ರಂದು ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಲ್ಲಿ ಪ್ರಧಾನಮಂತ್ರಿ ಭಾಗಿ


​​​​​​​3,000 ಕ್ಕೂ ಹೆಚ್ಚು ಕೈಮಗ್ಗ ಮತ್ತು ಖಾದಿ ನೇಕಾರರು, ಕುಶಲಕರ್ಮಿಗಳು ಮತ್ತು ಜವಳಿ ಮತ್ತು ಎಂಎಸ್ ಎಂಇ ವಲಯಗಳ ಸಂಬಂಧಪಟ್ಟವರು ಭಾಗಿ 

Posted On: 05 AUG 2023 8:01PM by PIB Bengaluru

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಳೆ ಆಗಸ್ಟ್ 7ರಂದು ಮಧ್ಯಾಹ್ನ 12 ಗಂಟೆಗೆ ದೆಹಲಿಯ ಪ್ರಗತಿ ಮೈದಾನದ ಭಾರತ ಮಂಟಪದಲ್ಲಿ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಲ್ಲಿ ಭಾಗವಹಿಸಲಿದ್ದಾರೆ.

ದೇಶದ ಶ್ರೀಮಂತ ಸಂಪ್ರದಾಯವಾದ ಕಲಾತ್ಮಕತೆ ಮತ್ತು ಕರಕುಶಲತೆಯನ್ನು ಜೀವಂತವಾಗಿರಿಸುತ್ತಿರುವ ಕುಶಲಕರ್ಮಿಗಳಿಗೆ ಉತ್ತೇಜನ ಮತ್ತು ಸರ್ಕಾರದ ನೀತಿಗಳಿಗೆ ಬೆಂಬಲ ನೀಡುವ ಮನೋಭಾವನೆಯನ್ನು ಪ್ರಧಾನ ಮಂತ್ರಿಗಳು ಹೊಂದಿದ್ದಾರೆ.

ಈ ದೃಷ್ಟಿಕೋನದಿಂದ ಸರ್ಕಾರವು ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲು ಪ್ರಾರಂಭಿಸಿದ್ದು, ಅಂತಹ ಮೊದಲ ಆಚರಣೆಯನ್ನು ಆಗಸ್ಟ್ 7, 2015 ರಂದು ನಡೆಸಲಾಯಿತು. 1905ರ ಆಗಸ್ಟ್ 7ರಂದು ಪ್ರಾರಂಭಿಸಲಾದ ಸ್ವದೇಶಿ ಆಂದೋಲನದ ಸಂಕೇತವಾಗಿ ಈ ದಿನವನ್ನು ಆಯ್ಕೆಮಾಡಿ ಪ್ರೋತ್ಸಾಹಿಸಲಾಯಿತು. ಸ್ಥಳೀಯ ಕೈಗಾರಿಕೆಗಳು ಮತ್ತು ನಿರ್ದಿಷ್ಟವಾಗಿ ಕೈಮಗ್ಗ ನೇಕಾರರಿಗೆ ಇದರಿಂದ ಸಹಾಯವಾಗಲಿದೆ. 

ಈ ವರ್ಷ 9ನೇ ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು "ಭಾರತೀಯ ವಸ್ತ್ರ ಮತ್ತು ಶಿಲ್ಪ ಕೋಶ" - ರಾಷ್ಟ್ರೀಯ ಫ್ಯಾಷನ್ ತಂತ್ರಜ್ಞಾನ ಸಂಸ್ಥೆ (NIFT) ಅಭಿವೃದ್ಧಿಪಡಿಸಿದ ಜವಳಿ ಮತ್ತು ಕರಕುಶಲಗಳ ಭಂಡಾರವನ್ನು ಉದ್ಘಾಟಿಸಲಿದ್ದಾರೆ. 

ಕಾರ್ಯಕ್ರಮದಲ್ಲಿ ಸುಮಾರು 3,000 ಕೈಮಗ್ಗ ಮತ್ತು ಖಾದಿ ನೇಕಾರರು, ಕುಶಲಕರ್ಮಿಗಳು, ಜವಳಿ ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ(MSME) ವಲಯಗಳ ಸಂಬಂಧಪಟ್ಟವರು ಭಾಗವಹಿಸುತ್ತಾರೆ. ಇದು ಭಾರತದಾದ್ಯಂತ ಕೈಮಗ್ಗ ಕ್ಲಸ್ಟರ್‌ಗಳು, ಎನ್ ಐಎಫ್ ಟಿ ಕ್ಯಾಂಪಸ್‌ಗಳು, ನೇಕಾರ ಸೇವಾ ಕೇಂದ್ರಗಳು, ಭಾರತೀಯ ಕೈಮಗ್ಗ ತಂತ್ರಜ್ಞಾನ ಕ್ಯಾಂಪಸ್‌ಗಳು, ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ನಿಗಮ, ಕೈಮಗ್ಗ ರಫ್ತು ಉತ್ತೇಜನಾ ಮಂಡಳಿ, ಕೆವಿಐಸಿ ಸಂಸ್ಥೆಗಳು ಮತ್ತು ವಿವಿಧ ರಾಜ್ಯ ಕೈಮಗ್ಗ ಇಲಾಖೆಗಳು ಕಾರ್ಯಕ್ರಮದಲ್ಲಿ ಒಟ್ಟಾಗಿ ಭಾಗವಹಿಸಲಿವೆ.
 

****



(Release ID: 1946280) Visitor Counter : 76