ಸಹಕಾರ ಸಚಿವಾಲಯ

ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ಮಹಾರಾಷ್ಟ್ರದ ಪುಣೆಯಲ್ಲಿ ʻಸಹಕಾರ ಸಂಘಗಳ ಕೇಂದ್ರ ರಿಜಿಸ್ಟ್ರಾರ್ʼ(ಸಿಆರ್ಸಿಎಸ್) ಕಚೇರಿಯ ಡಿಜಿಟಲ್ ಪೋರ್ಟಲ್ಗೆ ಚಾಲನೆ ನೀಡಿದರು


ಸಹಕಾರಿ ಸಂಘಗಳ ಸಂಸ್ಕೃತಿಯು ಮಹಾರಾಷ್ಟ್ರದಿಂದಲೇ ದೇಶಾದ್ಯಂತ ಹಬ್ಬಿದೆ, ಮಹಾರಾಷ್ಟ್ರದ ಸಹಕಾರಿ ಮಾದರಿಯು ದೇಶದಲ್ಲಿ ಸಹಕಾರಿ ಚಳವಳಿಯನ್ನು ಮುನ್ನಡೆಸುತ್ತಿದೆ

ಬಹು ರಾಜ್ಯ ಸಹಕಾರಿಗಳನ್ನು ನಿರ್ವಹಿಸುವ ʻಕೇಂದ್ರ ರಿಜಿಸ್ಟ್ರಾರ್ʼ (ಸಿಆರ್‌ಸಿಎಸ್) ಕಚೇರಿಯ ಕೆಲಸವು ಇಂದು ಸಂಪೂರ್ಣವಾಗಿ ಡಿಜಿಟಲ್ ಆಗುತ್ತಿದೆ, ಹೊಸ ಶಾಖೆಗಳನ್ನು ತೆರೆಯುವುದು, ಇತರ ರಾಜ್ಯಗಳಿಗೆ ವಿಸ್ತರಣೆ ಅಥವಾ ಲೆಕ್ಕಪರಿಶೋಧನೆಯಂತಹ ಸಹಕಾರಿ ಸಂಘಗಳ ಎಲ್ಲಾ ಕೆಲಸಗಳನ್ನೂ ಇನ್ನು ಆನ್‌ಲೈನ್‌ ಮೂಲಕ ಮಾಡಬಹುದು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಪಾರ ಚಿಂತನೆಯೊಂದಿಗೆ "ಸಹಕಾರ್ ಸೆ ಸಮೃದ್ಧಿ" ಕಲ್ಪನೆಯನ್ನು ಮುಂದಿಟ್ಟಿದ್ದಾರೆ, ಕಳೆದ 9 ವರ್ಷಗಳಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಕೋಟ್ಯಂತರ ಬಡ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕೆಲಸ ಮಾಡಿದ್ದಾರೆ

ದೇಶದ ಬಡ ಜನರಿಗೆ ಉದ್ಯಮವನ್ನು ಪ್ರಾರಂಭಿಸಲು ಬಂಡವಾಳದ ಕೊರತೆಯಿದ್ದರೆ, ಸಹಕಾರಿ ಆಂದೋಲನವು ಇದಕ್ಕೆ ಸರಿಯಾದ ಮಾರ್ಗವಾಗಿದೆ. ಇದರ ಮೂಲಕ ಸಣ್ಣ ಪ್ರಮಾಣದ ಬಂಡವಾಳ ಹೊಂದಿರುವ ಹಲವಾರು ಮಂದು ಒಟ್ಟಿಗೆ ಸೇರಿ ದೊಡ್ಡ ಉದ್ಯಮವನ್ನು ಸ್ಥಾಪಿಸಬಹುದು

ಹೆಚ್ಚಿದ ಆಧುನಿಕತೆ, ಉತ್ತರದಾಯಿತ್ವ ಮತ್ತು ಪಾರದರ್ಶಕತೆಯೊಂದಿಗೆ ದೇಶದಲ್ಲಿ ಸಹಕಾರಿ ವಲಯದ ಸ್ವೀಕಾರ ಹೆಚ್ಚಾಗುತ್ತಿದೆ

ಭಾರತವು ʻಅಮೂಲ್ʼ, ಇಫ್ಕೊʼ ಮತ್ತು ʻಕ್ರಿಬ್ಕೊʼದಂತಹ ಸಹಕಾರಿ ಸಂಸ್ಥೆಗಳ ಅನೇಕ ಯಶೋಗಾಥೆಗಳನ್ನು ಜಗತ್ತಿಗೆ ನೀಡಿದೆ, ಈಗ ನಾವು ಇವುಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಮೂಲಕ ಸಹಕಾರಿ ಚಳವಳಿಗೆ ಹೊಸ ವೇಗವನ್ನು ನೀಡಬೇಕಾಗಿದೆ

ʻಬಹು-ರಾಜ್ಯ ಸಹಕಾರಿ ಸಂಘಗಳ ಕಾಯ್ದೆ- 2022ʼ, ಸಹಕಾರಿ ಸಂಸ್ಥೆಗಳ ಉತ್ತರದಾಯಿತ್ವವನ್ನು ನಿಗದಿಪಡಿಸುತ್ತದೆ ಮತ್ತು ಸ್ವಜನಪಕ್ಷಪಾತವನ್ನು ಕೊನೆಗೊಳಿಸುತ್ತದೆ, ಇದರಿಂದ ಯುವ ಪ್ರತಿಭೆಗಳು ಸಹಕಾರಿ ಚಳವಳಿಗೆ ಸೇರಲು ಸಾಧ್ಯವಾಗುತ್ತದೆ

ಇಂದು ಪ್ರಾರಂಭಿಸಲಾದ ಪೋರ್ಟಲ್ನಿಂದ ದೇಶದ 1555 ಬಹು-ರಾಜ್ಯ ಸಹಕಾರಿ ಸಂಘಗಳು ಪ್ರಯೋಜನ ಪಡೆಯಲಿವೆ ಮತ್ತು ಈ 1555 ಸಂಘಗಳಲ್ಲಿ 42% ಮಹಾರಾಷ್ಟ್ರದಲ್ಲೇ ಇವೆ, ಇದು ಮಹಾರಾಷ್ಟ್ರದಲ್ಲಿ ಸಹಕಾರಿ ಚಳವಳಿಯ ಶಕ್ತಿಯನ್ನು ತೋರಿಸುತ್ತದೆ


Posted On: 06 AUG 2023 5:49PM by PIB Bengaluru

ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ಮಹಾರಾಷ್ಟ್ರದ ಪುಣೆಯಲ್ಲಿ ʻಸಹಕಾರ ಸಂಘಗಳ ಕೇಂದ್ರ ರಿಜಿಸ್ಟ್ರಾರ್’(ಸಿಆರ್‌ಸಿಎಸ್) ಕಚೇರಿಯ ಡಿಜಿಟಲ್ ಪೋರ್ಟಲ್‌ಗೆ ಚಾಲನೆ ನೀಡಿದರು. ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ಏಕನಾಥ್ ಶಿಂಧೆ ಮತ್ತು ಕೇಂದ್ರ ಸಹಕಾರ ಸಚಿವಾಲಯದ ಸಹಾಯಕ ಸಚಿವ ಶ್ರೀ ಬಿ.ಎಲ್. ವರ್ಮಾ ಸೇರಿದಂತೆ ಹಲವಾರು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶ್ರೀ ಅಮಿತ್ ಶಾ ಅವರು, ಸಹಕಾರಿ ಸಂಸ್ಕೃತಿಯು ಮಹಾರಾಷ್ಟ್ರದಿಂದಲೇ ದೇಶಾದ್ಯಂತ ಹಬ್ಬಿತು ಮತ್ತು ಮಹಾರಾಷ್ಟ್ರದ ಸಹಕಾರಿ ಮಾದರಿಯು ದೇಶದಲ್ಲಿ ಸಹಕಾರಿ ಚಳವಳಿಯನ್ನು ಮುನ್ನಡೆಸುತ್ತಿದೆ ಎಂದು ಹೇಳಿದರು. ಇಂದು ನಾವು ಸಹಕಾರಿ ಚಳುವಳಿಯ ಅಭಿವೃದ್ಧಿಯ ಪಥವನ್ನು ಅವಲೋಕಿಸಿದರೆ, ಸಹಕಾರಿ ಆಂದೋಲನವು ಗುಜರಾತ್, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ, ಅಂದರೆ ಹಿಂದಿನ ಮುಂಬೈ ರಾಜ್ಯದ ಭಾಗಗಳಲ್ಲಿ ಮಾತ್ರ ಪ್ರಗತಿ ಸಾಧಿಸಿರುವುದನ್ನು ಮತ್ತು ಪ್ರವರ್ಧಮಾನಕ್ಕೆ ಬಂದಿದ್ದನ್ನು ಕಾಣಬಹುದು ಎಂದು ಶ್ರೀ ಶಾ ಹೇಳಿದರು. ಮಹಾರಾಷ್ಟ್ರದ ಪುಣೆಯಲ್ಲಿ ʻಸಹಕಾರಿ ಸಂಘಗಳ ಕೇಂದ್ರ ರಿಜಿಸ್ಟ್ರಾರ್ʼನ ಸಂಪೂರ್ಣ ಡಿಜಿಟಲೀಕರಣದ ಕೆಲಸವನ್ನು ಪ್ರಾರಂಭಿಸುವುದು ಅತ್ಯಂತ ಪ್ರಸ್ತುತವಾಗಿದೆ ಎಂದು ಅವರು ಹೇಳಿದರು. ಬಹು ರಾಜ್ಯ ಸಹಕಾರಿ ಸಂಸ್ಥೆಗಳನ್ನು ನಿರ್ವಹಿಸುವ ʻಕೇಂದ್ರ ರಿಜಿಸ್ಟ್ರಾರ್ʼ(ಸಿಆರ್‌ಸಿಎಸ್) ಕಚೇರಿಯ ಕೆಲಸವು ಇಂದು ಸಂಪೂರ್ಣವಾಗಿ ಡಿಜಿಟಲ್ ಆಗುತ್ತಿದೆ. ಹೊಸ ಶಾಖೆಗಳನ್ನು ತೆರೆಯುವುದು, ಇತರ ರಾಜ್ಯಗಳಿಗೆ ವಿಸ್ತರಣೆ ಅಥವಾ ಲೆಕ್ಕಪರಿಶೋಧನೆಯಂತಹ ಸಹಕಾರಿ ಸಂಘಗಳ ಎಲ್ಲಾ ಕೆಲಸಗಳನ್ನು ಈಗ ಆನ್‌ಲೈನ್‌ನಲ್ಲಿ ಮಾಡಬಹುದು ಎಂದು ಶ್ರೀ ಶಾ ಹೇಳಿದರು. ನೋಂದಣಿ, ಬೈಲಾಗಳ ತಿದ್ದುಪಡಿ, ಲೆಕ್ಕಪರಿಶೋಧನೆ, ಕೇಂದ್ರ ರಿಜಿಸ್ಟ್ರಾರ್ ಅವರ ಲೆಕ್ಕಪರಿಶೋಧನೆಯ ಮೇಲ್ವಿಚಾರಣೆ, ಚುನಾವಣೆಯ ಸಂಪೂರ್ಣ ಪ್ರಕ್ರಿಯೆ, ಮಾನವ ಸಂಪನ್ಮೂಲ ಅಭಿವೃದ್ಧಿ, ಜಾಗೃತಿ ಮತ್ತು ತರಬೇತಿಯ ಎಲ್ಲಾ ಚಟುವಟಿಕೆಗಳನ್ನು ಒಳಗೊಂಡಂತೆ ಈ ಪೋರ್ಟಲ್ ಅನ್ನು ರಚಿಸಲಾಗಿದೆ. ಇದು ಒಂದು ರೀತಿಯ ಪರಿಪೂರ್ಣ ಪೋರ್ಟಲ್ ಆಗಿದೆ ಎಂದು ಅಮಿತ್‌ ಶಾ ಅವರು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಪಾರ ಚಿಂತನೆಯೊಂದಿಗೆ "ಸಹಕಾರದಿಂದ ಸಮೃದ್ಧಿ" ಪರಿಕಲ್ಪನೆಯನ್ನು ಮುಂದಿಟ್ಟಿದ್ದಾರೆ ಎಂದು ಕೇಂದ್ರ ಸಹಕಾರ ಸಚಿವರು ಹೇಳಿದರು. ಕಳೆದ 9 ವರ್ಷಗಳಲ್ಲಿ ಪ್ರಧಾನಿ ಮೋದಿ ಅವರು ದೇಶದ ಕೋಟ್ಯಂತರ ಬಡ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕೆಲಸ ಮಾಡಿದ್ದಾರೆ ಎಂದರು. ಶ್ರೀ ನರೇಂದ್ರ ಮೋದಿ ಅವರು ಬಡವರು ಮತ್ತು ದೀನದಲಿತರಿಗೆ ಮನೆಗಳು, ವಿದ್ಯುತ್, ಶುದ್ಧ ಕುಡಿಯುವ ನೀರು, ಗ್ಯಾಸ್ ಸಿಲಿಂಡರ್‌ಗಳು, ಶೌಚಾಲಯಗಳು, 5 ಲಕ್ಷ ರೂ.ಗಳವರೆಗೆ ಆರೋಗ್ಯ ವಿಮಾ ರಕ್ಷಣೆ ಹಾಗೂ ಪ್ರತಿ ವ್ಯಕ್ತಿಗೆ ತಿಂಗಳಿಗೆ 5 ಕೆಜಿ ಆಹಾರ ಧಾನ್ಯಗಳನ್ನು ಉಚಿತವಾಗಿ ಒದಗಿಸಿದ್ದಾರೆ ಎಂದು ಅವರು ಹೇಳಿದರು. ದೇಶದ ಕೋಟ್ಯಂತರ ಬಡವರು ದೇಶದ ಆರ್ಥಿಕತೆಯೊಂದಿಗೆ ಸಂಪರ್ಕ ಹೊಂದಿರಲಿಲ್ಲ. ಆದರೆ ಶ್ರೀ ಮೋದಿ ಅವರು ಅವರ ಮೂಲಭೂತ ಅಗತ್ಯಗಳನ್ನು ಪೂರೈಸುವ ಮೂಲಕ ಮತ್ತು ಅವರ ಬ್ಯಾಂಕ್ ಖಾತೆಗಳನ್ನು ತೆರೆಯುವ ಮೂಲಕ ಅವರನ್ನು ದೇಶದ ಆರ್ಥಿಕತೆಯೊಂದಿಗೆ ಸಂಪರ್ಕಿಸಿದ್ದಾರೆ ಎಂದು ಶ್ರೀ ಶಾ ಹೇಳಿದರು. ದೇಶದ ಬಡ ಜನರಿಗೆ ಉದ್ಯಮವನ್ನು ಪ್ರಾರಂಭಿಸಲು ಬಂಡವಾಳದ ಕೊರತೆಯಿದ್ದರೆ, ಸಹಕಾರಿ ಆಂದೋಲನವು ಇದಕ್ಕೆ ಸರಿಯಾದ ಮಾರ್ಗವಾಗಿದೆ, ಇದರ ಮೂಲಕ ಸಣ್ಣ ಬಂಡವಾಳವನ್ನು ಹೊಂದಿರುವ ಅನೇಕ ಜನರು ದೊಡ್ಡ ಉದ್ಯಮವನ್ನು ಸ್ಥಾಪಿಸಲು ಒಗ್ಗೂಡಬಹುದು ಎಂದು ಅವರು ಹೇಳಿದರು.

ಬಡ ಜನರ ಜೀವನವನ್ನು ಸುಧಾರಿಸುವುದು, ದೇಶದ ಆರ್ಥಿಕ ಪ್ರಗತಿಗೆ ಕೊಡುಗೆ ನೀಡಲು ಅವರಿಗೆ ವೇದಿಕೆಯನ್ನು ನೀಡುವುದು ಮತ್ತು ಸಹಕಾರಿ ಸಂಸ್ಥೆಗಳ ಮೂಲಕ ಅವರ ಜೀವನ ಮಟ್ಟವನ್ನು ಹೆಚ್ಚಿಸುವುದು "ಸಹಕಾರದಿಂದ ಸಮೃದ್ಧಿ"ಯ ಅರ್ಥವಾಗಿದೆ ಎಂದು ಶ್ರೀ ಅಮಿತ್ ಶಾ ವಿವರಿಸಿದರು. ಈ ಉದ್ದೇಶವನ್ನು ಸಾಧಿಸಲು ಶ್ರೀ ಮೋದಿ ಅವರು ಪ್ರತ್ಯೇಕ ಸಹಕಾರ ಸಚಿವಾಲಯವನ್ನು ಸ್ಥಾಪಿಸಿದರು ಎಂದು ಅವರು ಮಾಹಿತಿ ನೀಡಿದರು. ಇಂದು ಪ್ರಾರಂಭಿಸಲಾದ ಪೋರ್ಟಲ್‌ನಿಂದ ದೇಶದ 1555 ಬಹು-ರಾಜ್ಯ ಸಹಕಾರಿ ಸಂಘಗಳಿಗೆ ಪ್ರಯೋಜನವಾಗಲಿದೆ ಮತ್ತು ಈ 1555 ಸಂಘಗಳಲ್ಲಿ ಶೇ. 42ರಷ್ಟು ಮಹಾರಾಷ್ಟ್ರದಲ್ಲೇ ಇರುವುದು ಮಹಾರಾಷ್ಟ್ರದಲ್ಲಿ ಸಹಕಾರಿ ಚಳವಳಿಯ ಶಕ್ತಿಯನ್ನು ತೋರಿಸುತ್ತದೆ ಎಂದು ಶ್ರೀ ಶಾ ಹೇಳಿದರು. ಈ 1555 ಸಂಘಗಳ ಎಲ್ಲಾ ಕೆಲಸಗಳನ್ನು ಈಗ ಈ ಪೋರ್ಟಲ್ ಮೂಲಕ ಮಾಡಲಾಗುವುದು ಎಂದು ಅವರು ಹೇಳಿದರು. ಇದೇ ಮಾದರಿಯಲ್ಲಿ ಮೋದಿ ಸರ್ಕಾರವು ʻರಾಜ್ಯಗಳ ಸಹಕಾರ ಸಂಘಗಳ ರಿಜಿಸ್ಟ್ರಾರ್ʼ ಕಚೇರಿಗಳನ್ನು ಕಂಪ್ಯೂಟರೀಕರಣಗೊಳಿಸಲು ಹೊರಟಿದೆ. ಇದು ದೇಶಾದ್ಯಂತ 8 ಲಕ್ಷ ಸಹಕಾರಿ ಸಂಘಗಳೊಂದಿಗಿನ ಸಂವಹನವನ್ನು ಸುಲಭಗೊಳಿಸುತ್ತದೆ ಎಂದು ಅವರು ಮಾಹಿತಿ ನೀಡಿದರು.

ಆಧುನಿಕತೆ, ಪಾರದರ್ಶಕತೆ ಮತ್ತು ಉತ್ತರದಾಯಿತ್ವವಿಲ್ಲದೆ ಸಹಕಾರಿ ಚಳವಳಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ಅಭಿಪ್ರಾಯಪಟ್ಟರು. ಸಹಕಾರಿ ಚಳವಳಿಯ ಸ್ವೀಕಾರವನ್ನು ಹೆಚ್ಚಿಸಲು, ಪಾರದರ್ಶಕತೆಯನ್ನು ಹೆಚ್ಚಿಸಬೇಕು ಮತ್ತು ಉತ್ತರದಾಯಿತ್ವವನ್ನು ನಿಗದಿಪಡಿಸಬೇಕು ಎಂದು ಅವರು ತಿಳಿಸಿದರು. ಇಂತಹ ಪಾರದರ್ಶಕ ವ್ಯವಸ್ಥೆಯಿಂದ ಮಾತ್ರ ದೇಶದ ಕೋಟ್ಯಂತರ ಜನರ ನಡುವೆ ಸಂಪರ್ಕ ಕಲ್ಪಿಸಲು ಸಾಧ್ಯ ಎಂದರು. ʻಅಮೂಲ್ʼ, ʻಇಫ್ಕೊʼ ಮತ್ತು ʻಕ್ರಿಬ್ಕೊʼದಂತಹ ಸಹಕಾರಿ ಸಂಸ್ಥೆಗಳ ಅನೇಕ ಯಶೋಗಾಥೆಗಳನ್ನು ಭಾರತವು ಜಗತ್ತಿಗೆ ನೀಡಿದೆ. ಈಗ ನಾವು ಇವುಗಳನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗುವ ಮೂಲಕ ಸಹಕಾರ ಚಳವಳಿಗೆ ಹೊಸ ವೇಗವನ್ನು ನೀಡಬೇಕಾಗಿದೆ ಎಂದು ಶ್ರೀ ಶಾ ಹೇಳಿದರು.

ಇತ್ತೀಚೆಗೆ ಬಹು ರಾಜ್ಯ ಸಹಕಾರಿ ಸಂಘಗಳ ಕಾಯ್ದೆಯನ್ನೂ ತಿದ್ದುಪಡಿ ಮಾಡಲಾಗಿದೆ ಎಂದು ಶ್ರೀ ಅಮಿತ್ ಶಾ ತಿಳಿಸಿದರು. ಈ ಕಾನೂನಿನ ಅಡಿಯಲ್ಲಿ, ನಾವು ಚುನಾವಣಾ ಸುಧಾರಣೆಗಳನ್ನು ಮಾಡಿದ್ದೇವೆ, ಸಹಕಾರಿ ಆಡಳಿತಕ್ಕೆ ಅನೇಕ ಹೊಸ ಆಯಾಮಗಳನ್ನು ನಿಗದಿಪಡಿಸಿದ್ದೇವೆ. ಆರ್ಥಿಕ ಶಿಸ್ತು ಮತ್ತು ಹಣದ ಪೂರೈಕೆಗೆ ವ್ಯವಸ್ಥೆಗಳು, ವ್ಯವಹಾರವನ್ನು ಸುಲಭಗೊಳಿಸಲು ವ್ಯವಸ್ಥೆಗಳು, ಚುನಾವಣೆಗಾಗಿ ಚುನಾವಣಾ ಆಯೋಗದಂತಹ ಸ್ವತಂತ್ರ ಸಂಸ್ಥೆಯ ರಚನೆ, ಮಂಡಳಿಯನ್ನು ನಡೆಸುವ ನಿಯಮಗಳಲ್ಲಿ ಬದಲಾವಣೆಗಳು ಮತ್ತು ಪಾರದರ್ಶಕತೆಯನ್ನು ತರಲು ನಿರ್ದೇಶಕರ ಮಂಡಳಿ ಹಾಗೂ ನೌಕರರ ಜವಾಬ್ದಾರಿ ನಿಗದಿ ಮುಂತಾದ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು. ʻಬಹು ರಾಜ್ಯ ಸಹಕಾರಿ ಸಂಘಗಳ ಕಾಯ್ದೆ-2022ʼ, ಸಹಕಾರಿ ಸಂಸ್ಥೆಗಳ ಉತ್ತರದಾಯಿತ್ವವನ್ನು ನಿಗದಿಪಡಿಸುತ್ತದೆ ಮತ್ತು ಸ್ವಜನಪಕ್ಷಪಾತವನ್ನು ಕೊನೆಗೊಳಿಸುತ್ತದೆ, ಇದರಿಂದ ಯುವ ಪ್ರತಿಭೆಗಳು ಸಹಕಾರಿ ಚಳವಳಿಗೆ ಸೇರಲು ಸಾಧ್ಯವಾಗುತ್ತದೆ ಎಂದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ನಿರಂತರ ಮಾರ್ಗದರ್ಶನದಲ್ಲಿ ʻಪ್ರಾಥಮಿಕ ಕೃಷಿ ಸಾಲ ಸಂಘʼಗಳನ್ನು(ಪಿಎಸಿಎಸ್) ಕಾರ್ಯಸಾಧ್ಯವಾಗಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸಹಕಾರ ಸಚಿವರು ಹೇಳಿದರು. ಮುಂದಿನ 5 ವರ್ಷಗಳಲ್ಲಿ ದೇಶಾದ್ಯಂತ 3 ಲಕ್ಷ ಹೊಸ ʻಪಿಎಸಿಎಸ್ʼಗಳನ್ನು ರಚಿಸುವ ಮೂಲಕ ಸಹಕಾರಿ ಆಂದೋಲನವನ್ನು ಪ್ರತಿ ಹಳ್ಳಿಗೆ ಕೊಂಡೊಯ್ಯಲು ಮೋದಿ ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು. ಕಳೆದ 70 ವರ್ಷಗಳಲ್ಲಿ 93,000 ʻಪಿಎಸಿಎಸ್ʼಗಳನ್ನು ರಚಿಸಲಾಗಿದೆ. ಮುಂದಿನ 5 ವರ್ಷಗಳಲ್ಲಿ ದೇಶದಲ್ಲಿ 3 ಲಕ್ಷ ಹೊಸ ʻಪಿಎಸಿಎಸ್ʼಗಳನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು. ಮೋದಿ ಸರ್ಕಾರವು ದೇಶದ ಎಲ್ಲಾ ʻಪಿಎಸಿಎಸ್ʼಗಳ ಗಣಕೀಕರಣದ ಕೆಲಸವನ್ನು ಪೂರ್ಣಗೊಳಿಸಿದೆ ಎಂದು ಶ್ರೀ ಶಾ ಹೇಳಿದರು. ʻಪಿಎಸಿಎಸ್ʼ ಈಗ ಸಾಮಾನ್ಯ ಸೇವಾ ಕೇಂದ್ರಗಳಾಗಿಯೂ(ಸಿಎಸ್‌ಸಿ) ವ್ಯಾಪಕ ಶ್ರೇಣಿಯ ಚಟುವಟಿಕೆಗಳನ್ನು ನಿರ್ವಹಿಸಬಲ್ಲವು ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ವಿಶ್ವದ ಅತಿದೊಡ್ಡ ಮತ್ತು ಬಹು ಆಯಾಮದ ಶೇಖರಣಾ ಯೋಜನೆಗೆ ಅನುಮೋದನೆ ನೀಡಿದೆ ಎಂದು ಅವರು ಮಾಹಿತಿ ನೀಡಿದರು. ಮಹಾರಾಷ್ಟ್ರವು ಈ ಯೋಜನೆಯ ಗರಿಷ್ಠ ಲಾಭವನ್ನು ಪಡೆದುಕೊಳ್ಳಬೇಕು ಮತ್ತು ಸಹಕಾರಿ ಶೇಖರಣಾ ಸೌಲಭ್ಯದಿಂದ ಒಂದೇ ಒಂದು ತಹಸಿಲ್ ಸಹ ವಂಚಿತವಾಗಬಾರದು ಎಂದು ಶ್ರೀ ಶಾ ಹೇಳಿದರು. ಈಗ ಸಹಕಾರಿ ಸಂಸ್ಥೆಗಳು ಸಹ ʻಜಿಇಎಂʼ ವೇದಿಕೆಯ ಲಾಭವನ್ನು ಪಡೆಯುತ್ತಿವೆ ಎಂದರು.

ರಾಷ್ಟ್ರೀಯ ಸಹಕಾರಿ ಡೇಟಾಬೇಸ್ ರಚಿಸುವ ನಿಟ್ಟಿನಲ್ಲಿ ಶೇ. 95ರಷ್ಟ ಕೆಲಸ ಪೂರ್ಣಗೊಂಡಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ನಾವು ಹೊಸ ಸಹಕಾರಿ ನೀತಿಯನ್ನು ಸಹ ತರುತ್ತಿದ್ದೇವೆ. ನಾವು ಸಹಕಾರಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಿದ್ದೇವೆ. ಅದರ ಮೂಲಕ ಸಹಕಾರಿ ತಾಂತ್ರಿಕ ಶಿಕ್ಷಣದ ವ್ಯವಸ್ಥೆ ಮತ್ತು ಸಹಕಾರಿ ಕ್ಷೇತ್ರದ ಎಲ್ಲಾ ವಿಸ್ತರಣೆಗಳನ್ನು ಅದಕ್ಕೆ ಸಂಪರ್ಕಿಸಲಾಗುವುದು. ಶ್ರೀ ಮೋದಿ ಅವರು 3 ಹೊಸ ಬಹುರಾಜ್ಯ ಸಹಕಾರಿ ಸಂಘಗಳನ್ನು ಸ್ಥಾಪಿಸಿದ್ದಾರೆ. ಬಹುರಾಜ್ಯ ಸಾವಯವ ಉತ್ಪನ್ನಗಳ ಮಾರಾಟಕ್ಕಾಗಿ ಒಂದು ಸಂಘವನ್ನು ರಚಿಸಲಾಗಿದೆ. ಇದು ʻಭಾರತ್ʼ ಬ್ರಾಂಡ್‌ ಮೂಲಕ ನೈಸರ್ಗಿಕ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಖಾತರಿಪಡಿಸುತ್ತದೆ. ಅದರ ಸಂಪೂರ್ಣ ಲಾಭವನ್ನು ರೈತರ ಖಾತೆಗೆ ತಲುಪಿಸುತ್ತದೆ. ಅಂತೆಯೇ, ಮೊದಲು ಸಣ್ಣ ರೈತರು ಬೀಜಗಳನ್ನು ಉತ್ಪಾದಿಸಲು ಸಾಧ್ಯವಾಗುತ್ತಿರಲಿಲ್ಲ, ಆದರೆ ಈಗ ಸಣ್ಣ ಭೂಮಿಯನ್ನು ಹೊಂದಿರುವ ಸಣ್ಣ ರೈತರು ಸಹ ಬೀಜಗಳನ್ನು ಉತ್ಪಾದಿಸಲು ಸಾಧ್ಯವಾಗುತ್ತದೆ. ಈ ಸಂಘವು ರೈತರ ಬೀಜಗಳನ್ನು ತೆಗೆದುಕೊಂಡು, ಅವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ ಮತ್ತು ಅವುಗಳನ್ನು ಭಾರತ ಮತ್ತು ವಿಶ್ವ ಮಾರುಕಟ್ಟೆಯಲ್ಲಿ ತನ್ನದೇ ಬ್ರಾಂಡ್ ಅಡಿಯಲ್ಲಿ ಮಾರಾಟ ಮಾಡುತ್ತದೆ. ಈ ಮೂರು ಬಹುರಾಜ್ಯ ಸಹಕಾರಿ ಸಂಘಗಳ ಮೂಲಕ ದೇಶಾದ್ಯಂತ 10 ಕೋಟಿಗೂ ಹೆಚ್ಚು ರೈತರ ಜೀವನ ಮಟ್ಟ ಸುಧಾರಿಸುತ್ತದೆ ಮತ್ತು ಈ ಸಂಘಗಳು ಮುಂಬರುವ ದಿನಗಳಲ್ಲಿ ದೇಶದ ಕೋಟ್ಯಂತರ ರೈತರ ಸಮೃದ್ಧಿಗೆ ದಾರಿ ಮಾಡಿಕೊಡುತ್ತವೆ ಎಂದು ಅವರು ಆಶಯ ವ್ಯಕ್ತಪಡಿಸಿದರು.

ಈ ಹಿಂದೆ ಸಹಕಾರಿ ಸಂಸ್ಥೆಗಳತ್ತ ಮಲತಾಯಿ ಧೋರಣೆ ತೋರಲಾಗುತ್ತಿತ್ತು, ಆದರೆ ಇಂದು ಶ್ರೀ ಮೋದಿ ಅವರ ನಾಯಕತ್ವದಲ್ಲಿ ಸಹಕಾರಿ ಸಂಸ್ಥೆಗಳ ಕುರಿತಾದ ಈ ಮಲತಾಯಿ ಧೋರಣೆ ಅಂತ್ಯಗೊಂಡಿದೆ ಎಂದು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ತಿಳಿಸಿದರು. ಇಂದು, ಕಾರ್ಪೊರೇಟ್‌ ಸಂಸ್ಥೆಗಳಿಗೆ ಲಭ್ಯವಿರುವ ವ್ಯವಸ್ಥೆಗಳು ಎಲ್ಲಾ ಸಹಕಾರಿ ಸಂಸ್ಥೆಗಳಿಗೂ ಲಭ್ಯವಿದೆ ಎಂದು ಅವರು ಹೇಳಿದರು. ಅವಳಿ ಆದಾಯ ತೆರಿಗೆಯ ನೀತಿಯನ್ನು ಸಹ ರದ್ದುಪಡಿಸಲಾಗಿದೆ ಎಂದು ಶ್ರೀ ಶಾ ಮಾಹಿತಿ ನೀಡಿದರು. ಕಳೆದ ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಸಕ್ಕರೆ ಕಾರ್ಖಾನೆಗಳ ಸಮಸ್ಯೆಯನ್ನು ಮೋದಿ ಸರ್ಕಾರ ಪರಿಹರಿಸಿದೆ. ಸರ್ಕಾರವು ರೈತರ ಲಾಭದ ಮೇಲೆ ತೆರಿಗೆ ವಿಧಿಸಲು ಸಾಧ್ಯವಿಲ್ಲ ಎಂಬುದು ಸಹಕಾರದ ಪರಿಕಲ್ಪನೆಯಾಗಿದೆ. ಈ ತತ್ವವನ್ನು ಹಣಕಾಸು ಸಚಿವಾಲಯವು ಒಪ್ಪಿಕೊಂಡಿರುವುದು ಇಡೀ ಸಹಕಾರಿ ಆಂದೋಲನಕ್ಕೆ ಬಹಳ ಮಹತ್ವದ ವಿಚಾರ. ಇದು ಮುಂಬರುವ ದಿನಗಳಲ್ಲಿ ಈ ಕ್ಷೇತ್ರಕ್ಕೆ ದೊಡ್ಡ ಮಟ್ಟದಲ್ಲಿ ಪ್ರಯೋಜನಕಾರಿಯಾಗಲಿದೆ ಎಂದು ಅವರು ಹೇಳಿದರು. ಈ ಹಿಂದೆ ನಗರ ಸಹಕಾರಿ ಸಂಸ್ಥೆಗಳಿಗೆ ವಸತಿ ಹಣಕಾಸು ಪೂರೈಕೆಗೆ ಮಿತಿ ಇತ್ತು, ಅದನ್ನು ಈಗ ದುಪ್ಟಟ್ಟು ಮಾಡಲಾಗಿದೆ ಎಂದು ಶ್ರೀ ಶಾ ಹೇಳಿದರು. ಗ್ರಾಮೀಣ ಸಹಕಾರಿ ಬ್ಯಾಂಕುಗಳಿಗೆ ರಿಯಲ್ ಎಸ್ಟೇಟ್‌ಗೆ ಸಾಲ ನೀಡಲು ಅನುಮತಿ ನೀಡಲಾಗಿದೆ. ನಗರ ಸಹಕಾರಿ ಬ್ಯಾಂಕುಗಳಿಗೆ ಮನೆ ಬಾಗಿಲಿಗೆ ಬ್ಯಾಂಕಿಂಗ್ ಮಾಡಲು ಅನುಮತಿ ಇರಲಿಲ್ಲ, ಈಗ ಅದನ್ನೂ ನೀಡಲಾಗಿದೆ. ನಗರ ಸಹಕಾರಿ ಬ್ಯಾಂಕುಗಳು ಈಗ ಹೊಸ ಶಾಖೆಗಳನ್ನು ತೆರೆಯಬಹುದು, ನಗರ ಸಹಕಾರಿ ಬ್ಯಾಂಕುಗಳಿಗೆ ʻಒನ್ ಟೈಮ್ ಸೆಟಲ್ಮೆಂಟ್ʼ ಸೀಮಿತವಾಗಿತ್ತು. ಇದನ್ನು ಪರಿಹರಿಸಲು ನಾವು ನಗರ ಸಹಕಾರಿ ಬ್ಯಾಂಕುಗಳಿಗೆ ಅವುಗಳನ್ನು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸಮಾನವಾಗಿಸುವ ರೀತಿಯಲ್ಲಿ ಹಕ್ಕುಗಳನ್ನು ನೀಡಿದ್ದೇವೆ ಎಂದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿಸುವ ಮತ್ತು ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡುವ ಗುರಿಯನ್ನು ನಿಗದಿಪಡಿಸಿದ್ದಾರೆ. ಈ ಗುರಿಯನ್ನು ಸಾಧಿಸುವಲ್ಲಿ ಸಹಕಾರಿ ಕ್ಷೇತ್ರದ ಕೊಡುಗೆಗೆ ನಾವು ಗುರಿಯನ್ನು ನಿಗದಿಪಡಿಸಬೇಕು ಎಂದು ಶ್ರೀ ಅಮಿತ್ ಶಾ ಹೇಳಿದರು. ಶ್ರೀ ಮೋದಿ ಅವರ "ಸಹಕಾರದಿಂದ ಸಮೃದ್ಧಿ " ದೃಷ್ಟಿಕೋನದ ಅಡಿಯಲ್ಲಿ, ಸಹಕಾರ ಸಚಿವಾಲಯವು ಈ ಡಿಜಿಟಲ್ ಪೋರ್ಟಲ್ ಅನ್ನು ಪ್ರಾರಂಭಿಸುವ ಮೂಲಕ ಇಂದು ಹೊಸ ಆರಂಭವನ್ನು ಮಾಡಿದೆ ಎಂದು ಶ್ರೀ ಅಮಿತ್‌ ಶಾ ಅವರು ಹೇಳಿದರು.

****



(Release ID: 1946262) Visitor Counter : 164


Read this release in: English , Urdu , Marathi , Odia , Tamil